‘ಇನ್‌ಕ್ರೆಡಿಬಲ್ ಇಂಡಿಯಾ’ ಮತ್ತು ವಿದೇಶೀಯನ ಎದೆಯೊಳಗಿನ ತಳಮಳ!
‘ಅತಿಥಿ ದೇವೋಭವ’ ಎಂದು ಬಾಯಿಮಾತಿನಲ್ಲಿ ಹೇಳುವ ನಾವು, ನಿಜಕ್ಕೂ ಅತಿಥಿಗಳನ್ನು ದೇವರಂತೆ ಕಾಣುತ್ತಿದ್ದೇವಾ? ಅಥವಾ ಅವರನ್ನು ಡಾಲರ್, ಪೌಂಡ್, ಯುರೋಗಳಂತೆ ಮಾತ್ರ ನೋಡುತ್ತಿದ್ದೇವಾ? ಭಾರತದ ಪರಿಸ್ಥಿತಿ ಗಣನೀಯವಾಗಿ ಬದಲಾಗಿದೆ, ವಿದೇಶಗಳಲ್ಲಿ ಭಾರತದ ಇಮೇಜ್ ಸುಧಾರಿಸಿದೆ, ನಿಜ. ಆದರೆ ಈಗಲೂ ಭಾರತಕ್ಕೆ ಬರಲು ವಿದೇಶೀಯರು ಹಿಂಜರಿಯುತ್ತಾರೆ, ಹೆದರುತ್ತಾರೆ ಎನ್ನುವುದು ಅಷ್ಟೇ ಸತ್ಯ. ‘ಭಾರತ ಹಾವಾಡಿಗರ ದೇಶ’ವಾಗಿ ಉಳಿದಿಲ್ಲ. ಭಾರತದ ಅಭಿವೃದ್ಧಿಯ ನಕ್ಷೆ ಇಡೀ ಜಗತ್ತಿನ ಮುಂದಿದೆ. ಆದರೂ ಭಾರತಕ್ಕೆ ಬ್ಯಾಗ್ ಹಿಡಿದು ಪ್ರವಾಸಕ್ಕೆ ಹೊರಟ ಪ್ರವಾಸಿಗನ ಮನಸ್ಸಿನಲ್ಲಿ ಸಣ್ಣ ತಳಮಳ ಇದ್ದೇ ಇದೆ.
ನಮ್ಮ ದೇಶದ ಪ್ರವಾಸೋದ್ಯಮ ಇಲಾಖೆಯವರು ಕೋಟಿ ಕೋಟಿ ಸುರಿದು ವಿದೇಶಗಳಲ್ಲಿ ‘ಇನ್ ಕ್ರೆಡಿಬಲ್ ಇಂಡಿಯಾ’ ಅಂತ ಬೋರ್ಡು ಹಾಕಿಸುತ್ತಾರೆ. ಲಂಡನ್‌ನ ಬಿಗ್ ಬಸ್, ಅಲ್ಲಿನ ಮೆಟ್ರೋ ನಿಲ್ದಾಣದಲ್ಲೆಲ್ಲ ಪೋಸ್ಟರ್ ಅಂಟಿಸುತ್ತಾರೆ. ಪತ್ರಿಕೆ - ಮಾಧ್ಯಮಗಳಲ್ಲಿ ಭಾರಿ ಪ್ರಚಾರ, ಅಭಿಯಾನ ಮಾಡುತ್ತಾರೆ. ಟಿವಿಯಲ್ಲಿ ಬರುವ ಆ ಜಾಹೀರಾತು ನೋಡಿದರೆ ಎಂಥವರಿಗಾದರೂ ರೋಮಾಂಚನವಾಗುತ್ತದೆ. ಬಿಳಿ ಬರ್ಫ ಹೊದ್ದ ಹಿಮಾಲಯ, ರಾಜಸ್ಥಾನದ ಮರಳುಗಾಡಿನ ಒಂಟೆಗಳ ಸಾಲು, ಕೇರಳದ ಹಿನ್ನೀರಿನಲ್ಲಿ ತೇಲುವ ದೋಣಿ, ತಾಜ್ ಮಹಲಿನ ಅಮೃತಶಿಲೆಯ ಸೌಂದರ್ಯ... ಅಬ್ಬಬ್ಬಾ! ನಮ್ಮ ದೇಶ ಎಷ್ಟೊಂದು ಸುಂದರ! ಇದನ್ನು ನೋಡಿದ ಯಾವ ವಿದೇಶಿಗನಿಗೆ ತಾನೇ ಒಮ್ಮೆಯಾದರೂ ಭಾರತಕ್ಕೆ ಬಂದು ಹೋಗಬೇಕು ಎಂದು ಅನಿಸುವುದಿಲ್ಲ ಹೇಳಿ?
ಆದರೆ, ವಿಪರ್ಯಾಸವೆಂದರೆ, ಆ ಜಾಹೀರಾತಿನ ಮಟಮಟ ಮಧ್ಯಾಹ್ನದ ಸೂರ್ಯನ ಬೆಳಕಿನ ಹಿಂದೆಯೇ, ಕಟು ವಾಸ್ತವದ ದಟ್ಟವಾದ ನೆರಳು ಕೂಡ ಚಾಚಿಕೊಂಡಿದೆ. ವಿಮಾನ ನಿಲ್ದಾಣದಲ್ಲಿ ಇಳಿದು, ನಮ್ಮ ನೆಲದ ಮೇಲೆ ಮೊದಲ ಹೆಜ್ಜೆ ಇಡುತ್ತಿದ್ದಂತೆಯೇ ಆ ವಿದೇಶಿ ಪ್ರವಾಸಿಗನ ಎದೆಯೊಳಗೆ ಒಂದು ಸಣ್ಣ 'ಢವಢವ' ಶುರುವಾಗುತ್ತದೆ. ಆತ ತನ್ನ ಬೆನ್ನಿಗಂಟಿಕೊಂಡಿರುವ ಬ್ಯಾಗನ್ನು ಗಟ್ಟಿಯಾಗಿ ಹಿಡಿದುಕೊಳ್ಳುತ್ತಾನೆ, ಪ್ಯಾಂಟಿನ ಜೇಬಿನ ಮೇಲೆಯೇ ಅವನ ಗಮನ ನೆಟ್ಟಿರುತ್ತದೆ, ಹೆಂಡತಿಯ ಕೈಯನ್ನು ಭದ್ರವಾಗಿ ಹಿಡಿಯುತ್ತಾನೆ. ಅವನ ಕಣ್ಣುಗಳಲ್ಲಿ ಕುತೂಹಲದ ಜತೆಜತೆಗೆ ಒಂದು ಅಳುಕು, ಆತಂಕ, ಒಂದು ಬಗೆಯ ಅನಿಶ್ಚಿತತೆಯ ಭಯ ನೆಲೆಸಿರುತ್ತದೆ.

‘ಅತಿಥಿ ದೇವೋಭವ’ ಎಂದು ಬಾಯಿಮಾತಿನಲ್ಲಿ ಹೇಳುವ ನಾವು, ನಿಜಕ್ಕೂ ಅತಿಥಿಗಳನ್ನು ದೇವರಂತೆ ಕಾಣುತ್ತಿದ್ದೇವಾ? ಅಥವಾ ಅವರನ್ನು ಡಾಲರ್, ಪೌಂಡ್, ಯುರೋಗಳಂತೆ ಮಾತ್ರ ನೋಡುತ್ತಿದ್ದೇವಾ? ಭಾರತದ ಪರಿಸ್ಥಿತಿ ಗಣನೀಯವಾಗಿ ಬದಲಾಗಿದೆ, ವಿದೇಶಗಳಲ್ಲಿ ಭಾರತದ ಇಮೇಜ್ ಸುಧಾರಿಸಿದೆ, ನಿಜ. ಆದರೆ ಈಗಲೂ ಭಾರತಕ್ಕೆ ಬರಲು ವಿದೇಶೀಯರು ಹಿಂಜರಿಯುತ್ತಾರೆ, ಹೆದರುತ್ತಾರೆ ಎನ್ನುವುದು ಅಷ್ಟೇ ಸತ್ಯ. ‘ಭಾರತ ಹಾವಾಡಿಗರ ದೇಶ’ವಾಗಿ ಉಳಿದಿಲ್ಲ. ಭಾರತದ ಅಭಿವೃದ್ಧಿಯ ನಕ್ಷೆ ಇಡೀ ಜಗತ್ತಿನ ಮುಂದಿದೆ. ಆದರೂ ಭಾರತಕ್ಕೆ ಬ್ಯಾಗ್ ಹಿಡಿದು ಪ್ರವಾಸಕ್ಕೆ ಹೊರಟ ಪ್ರವಾಸಿಗನ ಮನಸ್ಸಿನಲ್ಲಿ ಸಣ್ಣ ತಳಮಳ ಇದ್ದೇ ಇದೆ. ನೂರಕ್ಕೆ ನೂರು ಭಾರತ ‘ಪ್ರವಾಸೋದ್ಯಮ ಸ್ನೇಹಿ’ಯಾಗಿ ಉಳಿದಿಲ್ಲ. ಈ ಭಯಕ್ಕೆ ಕಾರಣಗಳೇನು? ಸ್ವಲ್ಪ ಕನ್ನಡಿ ಹಿಡಿದುಕೊಂಡು ನಮ್ಮ ಮುಖ ನಾವೇ ನೋಡಿಕೊಳ್ಳೋಣ.
ಮೊದಲನೆಯದಾಗಿ ಮತ್ತು ಅತಿ ಮುಖ್ಯವಾದದ್ದು ಸುರಕ್ಷತೆಯ ಪ್ರಶ್ನೆ. ನಮ್ಮ ದೇಶದ ಸಂಸ್ಕೃತಿ, ಪರಂಪರೆ, ವೇದ-ಉಪನಿಷತ್ತುಗಳ ಬಗ್ಗೆ ನಾವು ಗಂಟೆಗಟ್ಟಲೆ ಭಾಷಣ ಬಿಗಿಯಬಹುದು. ನಮ್ಮ ಸಂಸ್ಕೃತಿ, ಪರಂಪರೆ, ಸಂಸ್ಕಾರ, ವೈಭವದ ಇತಿಹಾಸದ ಬಗ್ಗೆ ಹೆಮ್ಮೆಪಟ್ಟುಕೊಳ್ಳಬಹುದು. ನಮ್ಮ ದೇಶದ ಗತಕಾಲದ ಬಗ್ಗೆ ಅಭಿಮಾನಪಟ್ಟುಕೊಳ್ಳಬಹುದು. ನಮ್ಮ ಸಂಸ್ಕೃತಿಯ ಮುಂದೆ ಬೇರೆ ಯಾವುದೂ ನಿಲ್ಲಲಾರದು ಎಂದು ವಾದಿಸಬಹುದು. ಆದರೆ, ಒಬ್ಬ ಒಂಟಿ ವಿದೇಶಿ ಮಹಿಳೆ ರಾತ್ರಿ ಎಂಟು ಗಂಟೆಯ ನಂತರ ನಮ್ಮ ದೇಶದ ಯಾವುದೇ ಪ್ರಮುಖ ನಗರದ ರಸ್ತೆಯಲ್ಲಿ ನಿರ್ಭಯವಾಗಿ ನಡೆದಾಡಬಲ್ಲಳೇ? ಇಡೀ ದೇಶದಲ್ಲಿ ಯಾವ ನಗರ ಸುರಕ್ಷಿತವಾಗಿದೆ? ಇಂದಿಗೂ ಮಹಾನಗರಗಳಲ್ಲಿ ಆಗಾಗ ಅತ್ಯಾಚಾರ ನಡೆಯುವುದನ್ನು, ಮಹಿಳೆಯರನ್ನು ಚುಡಾಯಿಸುವುದನ್ನು ಪತ್ರಿಕೆಗಳಲ್ಲಿ ಓದುತ್ತೇವೆ. ಭಾರತ ಸಂಪೂರ್ಣ ಸುರಕ್ಷಿತವಾಗಿದೆಯಾ? ಈ ಪ್ರಶ್ನೆಗೆ ನಮ್ಮಲ್ಲಿ ಉತ್ತರವಿದೆಯಾ?
ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಮಾನ ಹರಾಜಾಗುವ ಅತ್ಯಾಚಾರದ ಘಟನೆಗಳು, ಲೈಂಗಿಕ ದೌರ್ಜನ್ಯದ ಘಟನೆಗಳು ದಿನಬೆಳಗಾದರೆ ಪತ್ರಿಕೆಗಳ ಮುಖಪುಟದಲ್ಲಿ ರಾರಾಜಿಸುತ್ತವೆ. ದೆಹಲಿಯ ನಿರ್ಭಯಾ ಪ್ರಕರಣದಿಂದ ಹಿಡಿದು, ಪ್ರವಾಸಿ ತಾಣಗಳಲ್ಲಿ ವಿದೇಶಿ ಮಹಿಳೆಯರ ಮೇಲಾದ ಹಲ್ಲೆಗಳವರೆಗೆ ಪ್ರತಿಯೊಂದು ಸುದ್ದಿಯೂ ಜಗತ್ತಿನಾದ್ಯಂತ ಸಾಮಾಜಿಕ ಜಾಲತಾಣಗಳಲ್ಲಿ ಬಿತ್ತರವಾಗುತ್ತದೆ. ಒಂದು ಮಾನಭಂಗ ಘಟನೆ, ವಿದೇಶಿ ಮಹಿಳೆಯೊಬ್ಬಳನ್ನು ದೋಚಿದ ಪ್ರಸಂಗ, ಜಗತ್ತಿನ ಮುಂದೆ ಭಾರತದ ಮರ್ಯಾದೆ ಮೂರಾಬಟ್ಟೆಯಾಗಲು ಸಾಕು. ‘ಭಾರತ ಮಹಿಳಾ ಪ್ರವಾಸಿಗಳಿಗೆ ಸುರಕ್ಷಿತವಲ್ಲ’ ಎಂಬ ಹಣೆಪಟ್ಟಿ ಅಂಟಿಕೊಂಡುಬಿಡುತ್ತದೆ. ಈಗಾಗಲೇ ನಮಗೆ ಅಂಟಿಕೊಂಡ ಈ ಹಣೆಪಟ್ಟಿಯನ್ನು ಕಿತ್ತುಹಾಕಲು ನಮಗಿನ್ನೂ ಸಾಧ್ಯವಾಗಿಲ್ಲ ಎಂಬುದು ದುರ್ದೈವ. ಎಲ್ಲವೂ ಸರಿ ಇದೆ ಎಂದು ನಾವು ಅಂದುಕೊಂಡು ಬೀಗುವಾಗಲೇ ದೇಶದ ಯಾವುದೋ ಒಂದು ಕಡೆ ಇಂಥ ಪ್ರಸಂಗ ನಡೆದು, ಅಲ್ಲಿ ತನಕ ಮಾಡಿದ್ದೆಲ್ಲವನ್ನೂ ಹಾಳು ಮಾಡಿಬಿಡುತ್ತದೆ.
ಬಿಳಿಯ ಚರ್ಮದ ಹೆಣ್ಣುಮಗಳನ್ನು ಕಂಡರೆ ಸಾಕು, ನಮ್ಮಲ್ಲಿನ ಕೆಲವರ ಕಣ್ಣುಗಳು ಹಸಿದ ತೋಳಗಳಂತೆ ವರ್ತಿಸುತ್ತವೆ. ಬರೀ ದೃಷ್ಟಿಯಲ್ಲೇ ಅವರನ್ನು ಭೋಗಿಸುವ ವಿಕೃತ ಮನಸ್ಥಿತಿ ನಮ್ಮ ರಸ್ತೆಗಳಲ್ಲಿ ಎದ್ದು ಕಾಣುತ್ತದೆ. ಸೆಲ್ಫಿ ತೆಗೆದುಕೊಳ್ಳುವ ನೆಪದಲ್ಲಿ ಮೈಮೇಲೆ ಬೀಳುವುದು, ಗುಂಪುಗೂಡಿ ಚುಡಾಯಿಸುವುದು, ದೃಷ್ಟಿ ಯುದ್ಧ ನಡೆಸುತ್ತಿದ್ದೇವೇನೋ ಎಂಬಂತೆ ಅವರನ್ನು ದುರುಗುಟ್ಟಿ ನೋಡುವುದು, ಹೇಗಿದ್ದರೂ ಇವರು ವಿದೇಶಿಯರು ಇವರನ್ನು ಸುಲಭವಾಗಿ ಯಾಮಾರಿಸಬಹುದು - ಇವೆಲ್ಲವೂ ಸಾಮಾನ್ಯ ಎಂಬಂತಾಗಿದೆ. ಅವರು ಟ್ಯಾಕ್ಸಿ ಅಥವಾ ಆಟೋ ಹತ್ತಿದರೆ, ಮೀಟರ್ ಆಸೆಗಾಗಿ ಹಣ ಪೀಕಲು ಅವರನ್ನು ಸುತ್ತು ಹೊಡೆಸಿ, ಇಡೀ ನಗರದಲ್ಲಿ ಪ್ರದಕ್ಷಿಣೆ ಹಾಕಿಸುವುದು ಈಗಲೂ ಸಹಜ. ತನ್ನ ದೇಶದಲ್ಲಿ ಅರ್ಧರಾತ್ರಿಯಲ್ಲೂ ಜಾಗಿಂಗ್ ಹೋಗುವ ವಿದೇಶಿ ಮಹಿಳೆ, ಇಲ್ಲಿ ಸಂಜೆಯಾಗುತ್ತಿದ್ದಂತೆಯೇ ಹೊಟೇಲ್ ರೂಮಿನೊಳಗೆ ಸೇರಿಕೊಳ್ಳುವ ಪರಿಸ್ಥಿತಿ ಇದೆ. ನಮ್ಮ ಮನೆಯ ಹೆಣ್ಣುಮಕ್ಕಳಿಗೇ ಸುರಕ್ಷತೆ ಇಲ್ಲದಿರುವಾಗ, ಇನ್ನು ಹೊರಗಿನಿಂದ ಬಂದವರಿಗೆ ಭದ್ರತೆ ಒದಗಿಸುವುದು ಹೇಗೆ? ಈ ಕಳಂಕ ತೊಳೆದುಕೊಳ್ಳದ ಹೊರತು, ‘ವೆಲ್ಕಮ್ ಟು ಇಂಡಿಯಾ’, ‘ಅತಿಥಿ ದೇವೋಭವ’ ಎಂಬ ಬೋರ್ಡಿಗೆ ಯಾವ ಬೆಲೆಯೂ ಇಲ್ಲ. ಜಪಾನಿನಲ್ಲಿ ಟ್ಯಾಕ್ಸಿ ಡ್ರೈವರ್ ಒಂದು ಕಿಮೀ ಸುತ್ತು ಹೊಡೆಸಿದರೆ, ಹೆಚ್ಚುವರಿ ಪಯಣದ ಹಣವನ್ನು ಪ್ರವಾಸಿಗರಿಂದ ತೆಗೆದುಕೊಳ್ಳುವುದಿಲ್ಲ!

ಎರಡನೆಯದು, ‘ಸ್ವಚ್ಛತೆ’ ಮತ್ತು ನೈರ್ಮಲ್ಯದ ಸಮಸ್ಯೆ. ನಮ್ಮ ಭಾರತೀಯರ ರೋಗ ನಿರೋಧಕ ಶಕ್ತಿ ಅದ್ಭುತವಾದದ್ದು! ನಾವು ರಸ್ತೆಯ ಬದಿಯಲ್ಲಿ ಧೂಳು ತಿನ್ನುತ್ತಾ ಮಾರುವ ಪಾನಿಪುರಿ ತಿಂದು ಆರಾಮಾಗಿರುತ್ತೇವೆ. ಚರಂಡಿ ಪಕ್ಕದ ಹೊಟೇಲಿನಲ್ಲಿ ಊಟ ಮಾಡಿ ತೇಗುತ್ತೇವೆ. ನಮಗೆ ಏನೂ ಆಗುವುದಿಲ್ಲ. ಆದರೆ, ಅಮೆರಿಕದವನೋ, ಯುರೋಪಿನವನೋ ಇಲ್ಲಿನ ನಲ್ಲಿ ನೀರು ಕುಡಿದರೆ ಸಾಕು, ಮಾರನೇ ದಿನ ಆಸ್ಪತ್ರೆ ಸೇರುವುದು ಗ್ಯಾರಂಟಿ! ವಿದೇಶಿ ಪ್ರವಾಸಿಗರ ವಲಯದಲ್ಲಿ ‘ಡೆಲ್ಲಿ ಬೆಲ್ಲಿ’ (Delhi Belly) ಎಂಬ ಪದ ಬಹಳ ಫೇಮಸ್. ಭಾರತಕ್ಕೆ ಹೋದರೆ ಹೊಟ್ಟೆ ಕೆಡುವುದು ಖಚಿತ ಎಂಬ ನಂಬಿಕೆ ಅವರಲ್ಲಿದೆ. ನಮ್ಮ ಪ್ರವಾಸಿ ತಾಣಗಳ ಸುತ್ತಮುತ್ತಲಿನ ನೈರ್ಮಲ್ಯದ ಬಗ್ಗೆ ಕಡಿಮೆ ಮಾತನಾಡಿದಷ್ಟೂ ಒಳ್ಳೆಯದು. ವಿಶ್ವವಿಖ್ಯಾತ ಸ್ಮಾರಕದ ಪಕ್ಕದಲ್ಲೇ ಮೂಗು ಮುಚ್ಚಿಕೊಂಡು ಓಡಾಡಬೇಕಾದ ಸ್ಥಿತಿ ಇರುತ್ತದೆ. ಸ್ವಚ್ಛ ಭಾರತ ಅಭಿಯಾನದ ನಂತರವೂ ಸಾರ್ವಜನಿಕ ಶೌಚಾಲಯಗಳ ಸ್ಥಿತಿ ಹೇಳತೀರದು. ಐಷಾರಾಮಿ ಪಂಚತಾರಾ ಹೊಟೇಲಿನಿಂದ ಹೊರಬಂದರೆ ಸಾಕು, ಕಸದ ರಾಶಿ, ಹರಿಯುವ ಚರಂಡಿ, ಎಲ್ಲೆಂದರಲ್ಲಿ ಉಗುಳಿದ ಕೆಂಪು ಕಲೆಗಳು ಸ್ವಾಗತಿಸುತ್ತವೆ. ಸೊಳ್ಳೆಗಳು, ನೊಣಗಳು, ಬೀದಿ ನಾಯಿಗಳ ಕಾಟ ಬೇರೆ. ಆರೋಗ್ಯದ ಬಗ್ಗೆ ಅತಿಯಾದ ಕಾಳಜಿ ವಹಿಸುವ ಪಾಶ್ಚಿಮಾತ್ಯರಿಗೆ ನಮ್ಮ ಈ ‘ಹೇಗಿದ್ದರೂ ನಡೆಯುತ್ತೆ’ ಎಂಬ ಧೋರಣೆಯನ್ನು ಜೀರ್ಣಿಸಿಕೊಳ್ಳಲು ಸಾಧ್ಯವೇ ಇಲ್ಲ. ಬೆಂಗಳೂರಿನಲ್ಲಿ ವಿಧಾನಸೌಧದ ಒಂದು ಕಿಮೀ ಸುತ್ತಮುತ್ತ ಒಂದು ಸ್ವಚ್ಛವಾದ ಶೌಚಾಲಯ ಇಲ್ಲ. ಅದೇಕೆ, ವಿಮಾನ ನಿಲ್ದಾಣದಿಂದ ರಾಜಭವನದ ತನಕ ಒಂದು ಸಾರ್ವಜನಿಕ ಶೌಚಾಲಯ ಇಲ್ಲ. ಒಂದು ವೇಳೆ ಇದ್ದಿದ್ದರೂ ಅದರ ಅವಸ್ಥೆ ಹೇಗಿರುತ್ತಿತ್ತೋ ?
ಮೂರನೆಯದು, ವಿಪರೀತ ಜನಸಂದಣಿ, ಅಸಹನೀಯ ಗದ್ದಲ, ಗೊಂದಲ. ಶಾಂತಿಯನ್ನು ಅರಸಿ ಭಾರತಕ್ಕೆ ಬರುವವನಿಗೆ ಮೊದಲ ದಿನವೇ ಶಾಕ್ ಕಾದಿರುತ್ತದೆ. ನಮ್ಮಲ್ಲಿ ‘ಪರ್ಸನಲ್ ಸ್ಪೇಸ್’ (ವೈಯಕ್ತಿಕ ಜಾಗ, ಅಂತರ) ಎಂಬ ಪರಿಕಲ್ಪನೆಯೇ ಇಲ್ಲ. ಬಸ್ಸಿನಲ್ಲಿ, ರೈಲಿನಲ್ಲಿ, ಕ್ಯೂನಲ್ಲಿ ನಿಂತಾಗ ಒಬ್ಬರ ಮೇಲೊಬ್ಬರು ಬೀಳುವಂತೆ ನಿಲ್ಲುವುದು, ಮೈ ಹೊಸೆಯುವುದು, ಅಂಟಿಕೊಂಡು ಕುಳಿತುಕೊಳ್ಳುವುದು ನಮಗೆ ಅಭ್ಯಾಸವಾಗಿಬಿಟ್ಟಿದೆ. ಆದರೆ, ಜನನಿಬಿಡವಲ್ಲದ ದೇಶಗಳಿಂದ ಬಂದವರಿಗೆ ಈ ನೂಕುನುಗ್ಗಲು ಉಸಿರುಗಟ್ಟಿಸುತ್ತದೆ. ಇದು ಅವರಿಗೆ ಕರುಳು ಕಿತ್ತುಬರುವಂತಾಗುತ್ತದೆ. ಕೆಮ್ಮುವುದು, ಉಗುಳುವುದು, ಸೀನುವುದು, ತುಪ್ಪುವುದು, ಸಾರ್ವಜನಿಕವಾಗಿ ಕಿರುಚುವುದು ನಮಗೆ ತೀರಾ ತೀರ ಸಹಜ. ಇವನ್ನು ನೋಡಿದ ವಿದೇಶೀಯರಿಗೆ ತೀವ್ರ ಸಾಂಸ್ಕೃತಿಕ ಆಘಾತವಾಗುವುದು ಸಹ ಅಷ್ಟೇ ಸಹಜ.
ಇನ್ನು ನಮ್ಮ ಟ್ರಾಫಿಕ್ ಸೆನ್ಸ್! ಅಬ್ಬಾ, ಅದೊಂದು ಯುದ್ಧಭೂಮಿಯಿದ್ದಂತೆ. ನಮ್ಮಲ್ಲಿ ಹಾರ್ನ್ ಮಾಡುವುದು ಅಗತ್ಯಕ್ಕೆ ಅಲ್ಲ, ಅದೊಂದು ಚಟ. ವಾಹನ ಚಲಾಯಿಸುವವರು ಹಾರ್ನ್ ಮಾಡಲೇಬೇಕೆಂಬ ನಿಯಮ ಜಾರಿಯಲ್ಲಿರಬಹುದು ಎಂಬ ಸಂದೇಹ ಮೂಡುವಂತೆ, ಎಲ್ಲರೂ ಹಾರ್ನ್ ಮಾಡುತ್ತಾರೆ. ಅತ್ಯಂತ ಸಹಜ ಸಿಗ್ನಲ್‌ನಲ್ಲಿ ಕೆಂಪು ದೀಪವಿದ್ದರೂ, ಮುಂದಿನ ವಾಹನ ಚಲಿಸಲು ಜಾಗವಿಲ್ಲದಿದ್ದರೂ, ನಿರಂತರ ಹಾರ್ನ್ ಬಾರಿಸುತ್ತಲೇ ಇರುತ್ತಾರೆ. ಈ ನಿರಂತರ ಕರ್ಕಶ ಶಬ್ದ, ವಾಹನಗಳ ಹೊಗೆ, ಎಲ್ಲೆಲ್ಲೂ ಕಿಕ್ಕಿರಿದು ತುಂಬಿರುವ ಜನಸಾಗರ - ಇವೆಲ್ಲವೂ ಮೊದಲ ಬಾರಿಗೆ ಬರುವ ಪ್ರವಾಸಿಗನಿಗೆ ಮಾನಸಿಕವಾಗಿ ಕುಸಿಯುವಂತೆ ಮಾಡಿಬಿಡುತ್ತದೆ. ನಮ್ಮ ಗದ್ದಲ ಅವರಿಗೆ ಕಿರಿಕಿರಿಯಲ್ಲ, ಒಂದು ರೀತಿಯ ಪರಮ ಹಿಂಸೆಯಂತೆ ಭಾಸವಾಗುತ್ತದೆ.
ನಾಲ್ಕನೆಯದು, ‘ಟೋಪಿ’ ಹಾಕುವ ಕಲೆ ಮತ್ತು ವಂಚನೆ. ವಿಮಾನ ನಿಲ್ದಾಣದಿಂದ ಹೊರಬಂದು ಟ್ಯಾಕ್ಸಿ ಹತ್ತಿದ ಕ್ಷಣದಿಂದಲೇ ಪ್ರವಾಸಿಗನಿಗೆ ‘ಟೋಪಿ’ ಹಾಕುವ ಪ್ರಕ್ರಿಯೆ ಶುರುವಾಗುತ್ತದೆ. ಬಿಳಿ ಚರ್ಮ ಕಂಡರೆ ಸಾಕು, ಆಟೋ ಮೀಟರ್ ಡಬಲ್ ವೇಗದಲ್ಲಿ ಓಡುತ್ತದೆ. ನೂರು ರುಪಾಯಿ ಆಗುವಲ್ಲಿ ಐದುನೂರು ಕೇಳುತ್ತಾರೆ. ಹೊಟೇಲ್ ರೂಮ್ ಬಾಡಿಗೆಯಿಂದ ಹಿಡಿದು, ರಸ್ತೆ ಬದಿಯ ಸಣ್ಣ ಸಾಮಗ್ರಿ ಕೊಳ್ಳುವವರೆಗೂ ಅವರಿಗೆ ಪ್ರತಿಯೊಂದಕ್ಕೂ ಹತ್ತು ಪಟ್ಟು ಹೆಚ್ಚು ಬೆಲೆ ಹೇಳಲಾಗುತ್ತದೆ. ವಿದೇಶೀಯರನ್ನು ಕಂಡರೆ ಸಾಕು, ಅವರನ್ನು ವಂಚಿಸುವುದು ಹೇಗೆ, ಹಣ ಕೀಳುವುದು ಹೇಗೆ ಎಂದೇ ಎಲ್ಲರೂ ಯೋಚಿಸುತ್ತಾರೆ. ಒಂದಕ್ಕೆ ನಾಲ್ಕು ಪಟ್ಟು ಹಣವನ್ನು ಪೀಕದೇ ಬಿಡುವುದಿಲ್ಲ. ಹೀಗಿರುವಾಗ ಅವರಿಗೆ ನಮ್ಮ ದೇಶದ ಬಗ್ಗೆ ಎಂಥ ಭಾವನೆ ಮೂಡಬಹುದು?
ನಕಲಿ ಗೈಡ್‌ಗಳು, ನಕಲಿ ಪ್ರಾಚೀನ ವಸ್ತುಗಳನ್ನು ಮಾರುವ ದಲ್ಲಾಳಿಗಳು, ದೇವಸ್ಥಾನಗಳಲ್ಲಿ ದುಡ್ಡಿಗಾಗಿ ಪೀಡಿಸುವ ಅರ್ಚಕರು - ಹೀಗೆ ಹೆಜ್ಜೆಹೆಜ್ಜೆಗೂ ಅವರನ್ನು ವಂಚಿಸಲು ಒಂದು ಜಾಲವೇ ಹೊಂಚು ಹಾಕುತ್ತಾ ಕಾದಿರುತ್ತದೆ. ಪ್ರವಾಸಿಗ ಎಂದರೆ ‘ನಡೆದಾಡುವ ಎಟಿಎಂ ಮಷಿನ್’ ಎಂದೇ ನಮ್ಮವರು ಭಾವಿಸಿದಂತಿದೆ. ‘ಭಾರತದಲ್ಲಿ ನಿಮ್ಮ ಜೇಬಿನ ಬಗ್ಗೆ ಎಚ್ಚರವಿರಲಿ, ಅಲ್ಲಿ ಎಲ್ಲರೂ ನಿಮ್ಮನ್ನು ಮೋಸ ಮಾಡಲು ಕಾಯುತ್ತಿರುತ್ತಾರೆ’ ಎಂಬ ಎಚ್ಚರಿಕೆಯ ಮಾತುಗಳು ಅವರ ಪ್ರವಾಸಿ ಬ್ಲಾಗ್‌ಗಳಲ್ಲಿ ರಾರಾಜಿಸುತ್ತಿರುತ್ತವೆ. ಒಂದು ಪ್ರಾಚೀನ ಸಂಸ್ಕೃತಿಯ ವಾರಸುದಾರರು ಎಂದು ಹೇಳಿಕೊಳ್ಳುವ ನಮಗೆ ಇದು ನಾಚಿಕೆಗೇಡಿನ ಸಂಗತಿಯಲ್ಲವೇ? ಇತ್ತೀಚಿನ ದಿನಗಳಲ್ಲಿ ಪ್ಯಾರಿಸಿನಲ್ಲಿ ಕಳ್ಳತನ ಹೆಚ್ಚಾಗಿದೆ, ಅಲ್ಲಿನ ಹೊಟೇಲುಗಳಲ್ಲಿ ತಿಗಣೆಗಳ ಕಾಟ ಎಂಬ ಸುದ್ದಿ ಓದಿ ನನಗೇ ಆ ದೇಶದ ಬಗ್ಗೆ ಇದ್ದ ಒಳ್ಳೆಯ ಭಾವನೆ ಹೊರಟು ಹೋಗಿತ್ತು. ಇನ್ನು ನಮ್ಮ ದೇಶದ ನಗರಗಳಲ್ಲಿ ಇದು ಸರ್ವೇ ಸಾಮಾನ್ಯ. ಹೀಗಿರುವಾಗ ವಿದೇಶೀಯರ ಮನಸಿನಲ್ಲಿ ನಮ್ಮ ದೇಶದ ಬಗ್ಗೆ ಯಾವ ಚಿತ್ರಣವಿದ್ದಿರಬಹುದು?

ಐದನೆಯದು, ಸಾಂಸ್ಕೃತಿಕ ಆಘಾತ. ಇವೆಲ್ಲದರ ಜತೆಗೆ, ಸಾಂಸ್ಕೃತಿಕ ವ್ಯತ್ಯಾಸಗಳೂ ಅವರಿಗೆ ದೊಡ್ಡ ಸವಾಲಾಗುತ್ತದೆ. ನಮ್ಮ ಆಹಾರ ಪದ್ಧತಿ - ಆ ಖಾರ, ಮಸಾಲೆ ಅವರ ಬಾಯಿಗೆ ಬೆಂಕಿ ಇಟ್ಟಂತೆ ಆಗುತ್ತದೆ. ನಮ್ಮ ಆಚಾರ-ವಿಚಾರಗಳು, ಭಾಷೆಯ ಸಮಸ್ಯೆ, ತಲೆ ಆಡಿಸುವ ಶೈಲಿ (ಹೌದೋ, ಅಲ್ಲವೋ ತಿಳಿಯದ ಗೊಂದಲ!), ಕೈಸನ್ನೆ, ಕಿರುಚಾಟ, ಅಬ್ಬರ, ಜನಜಂಗುಳಿ, ಜಾತ್ರೆ...ಎಲ್ಲವೂ ಅವರಿಗೆ ಹೊಸದು. ಈ ಸಾಂಸ್ಕೃತಿಕ ಆಘಾತವನ್ನು (Cultural Shock) ಅರಗಿಸಿಕೊಳ್ಳಲು ಅವರಿಗೆ ಸಮಯ ಬೇಕಾಗುತ್ತದೆ. ಕೆಲವರು ಹೊಂದಿಕೊಳ್ಳುತ್ತಾರೆ, ಹಲವರು ಬೆದರುತ್ತಾರೆ. ಎಷ್ಟೇ ದಿನವಿದ್ದರೂ ಭಾರತವನ್ನು ಅರಗಿಸಿಕೊಳ್ಳುವುದು ಅವರಿಗೆ ಕೊನೆಗೂ ಸಾಧ್ಯವೇ ಆಗುವುದಿಲ್ಲ.
ಇಷ್ಟೆಲ್ಲ ಸಮಸ್ಯೆಗಳಿದ್ದರೂ, ಇಂದಿಗೂ ಲಕ್ಷಾಂತರ ವಿದೇಶೀಯರು ಭಾರತಕ್ಕೆ ಬರುತ್ತಾರೆ. ಯಾಕೆ? ಯಾಕೆಂದರೆ, ಭಾರತ ಎಂಬುದು ಒಂದು ಮಾದಕ ದ್ರವ್ಯವಿದ್ದಂತೆ. ಅದರ ಗೊಂದಲಗಳ ನಡುವೆಯೂ ಒಂದು ಸೆಳೆತವಿದೆ. ತಾಜ್ ಮಹಲಿನ ಪ್ರೇಮಕಾವ್ಯ, ಕಾಶಿಯ ಗಂಗೆಯ ಆರತಿ, ಹಿಮಾಲಯದ ಮೌನ, ದಕ್ಷಿಣದ ದೇವಾಲಯಗಳ ಭವ್ಯತೆ, ಪ್ರತಿ ಊರಿನಲ್ಲಿ ಕಾಣುವ ವೈವಿಧ್ಯಮಯ ಸಂಗತಿ - ಇವುಗಳಿಗೆ ಜಗತ್ತಿನ ಬೇರಾವ ಮೂಲೆಯಲ್ಲೂ ಪರ್ಯಾಯವಿಲ್ಲ. ಇಲ್ಲಿನ ಬಣ್ಣಗಳು, ಇಲ್ಲಿನ ವೈವಿಧ್ಯ, ಇಲ್ಲಿನ ಅಧ್ಯಾತ್ಮ ಅವರನ್ನು ಸೂಜಿಗಲ್ಲಿನಂತೆ ಸೆಳೆಯುತ್ತದೆ. ಆದರೆ, ನಮ್ಮ ದೇಶದ ಘನತೆಯನ್ನು ಕೇವಲ ಹಳೆಯ ಸ್ಮಾರಕಗಳು ಅಥವಾ ಪ್ರಕೃತಿ ಸೌಂದರ್ಯದ ಮೇಲೆ ನಿಲ್ಲಿಸಲು ಸಾಧ್ಯವಿಲ್ಲ. ವರ್ತಮಾನದ ವಾಸ್ತವಗಳೂ ಅಷ್ಟೇ ಮುಖ್ಯ. ಬರುವ ಅತಿಥಿಗಳಿಗೆ ಕನಿಷ್ಠ ಸುರಕ್ಷತೆ, ನೈರ್ಮಲ್ಯ ಮತ್ತು ಪ್ರಾಮಾಣಿಕತೆಯ ಭರವಸೆ ನೀಡಲು ನಮಗೆ ಸಾಧ್ಯವಾಗದಿದ್ದರೆ, ‘Incredible India’, ‘ಅತಿಥಿ ದೇವೋಭವ’ ಮತ್ತು ‘ವಿಶ್ವ ಗುರು’ ಆಗುವ ಕನಸು ಬರೀ ಹಗಲುಗನಸಾಗಿಯೇ ಉಳಿಯುತ್ತದೆ.
ಭಾರತಕ್ಕೆ ಬರಲು ಹೆದರುವ ವಿದೇಶೀಯರನ್ನು ಕಂಡು ನಾವು ನಗಬಹುದು, "ಅವರಿಗೆ ನಮ್ಮ ದೇಶದ ಮಹತ್ವ ಗೊತ್ತಿಲ್ಲ" ಎಂದು ಮೂಗು ಮುರಿಯಬಹುದು. ಆದರೆ, ಅವರ ಭಯದಲ್ಲಿ ಹುರುಳಿದೆ, ಅವರ ದೂರುಗಳಲ್ಲಿ ಸತ್ಯವಿದೆ. ಆ ಸತ್ಯವನ್ನು ಒಪ್ಪಿಕೊಂಡು, ತಿದ್ದಿಕೊಳ್ಳುವ ಮನಸ್ಸು ನಮಗಿರಬೇಕು. ಇಲ್ಲದಿದ್ದರೆ, 'ಇನ್ ಕ್ರೆಡಿಬಲ್ ಇಂಡಿಯಾ' ಕೇವಲ ಪೋಸ್ಟರ್‌ಗಳಿಗೆ ಸೀಮಿತವಾಗುತ್ತದೆ, ವಾಸ್ತವದಲ್ಲಿ ‘Scary India’ (ಭಯಾನಕ ಭಾರತ) ಆಗಿ ಉಳಿದುಬಿಡಬಹುದು. ಏನಂತೀರಿ?