Friday, July 10, 2026
Friday, July 10, 2026

ಮೈಸೂರು ಟ್ರಾವೆಲ್ ಮಾರ್ಟ್ 2026

ಅರಮನೆ ನಗರವೆಂದು ಖ್ಯಾತಿ ಪಡೆದಿರುವ ಮೈಸೂರು, ಕೇವಲ ಒಂದು ಪ್ರವಾಸಿ ತಾಣವಲ್ಲ. ಇದು ಊಟಿ, ಮಡಿಕೇರಿ, ನಾಗರಹೊಳೆ, ಬಂಡೀಪುರ, ವಯನಾಡು, ಕಣ್ಣೂರು ಹಾಗೂ ಚಾಮರಾಜನಗರ ಸೇರಿದಂತೆ ದಕ್ಷಿಣ ಭಾರತದ ಅನೇಕ ಪ್ರಸಿದ್ಧ ಪ್ರವಾಸಿ ತಾಣಗಳಿಗೆ ಸಂಪರ್ಕ ಕಲ್ಪಿಸುವ ಕೇಂದ್ರಬಿಂದುವಾಗಿದೆ. ಪ್ರಾಕೃತಿಕ ಸೌಂದರ್ಯ, ವನ್ಯಜೀವಿ ಪ್ರವಾಸೋದ್ಯಮ, ಪಾರಂಪರಿಕ ತಾಣಗಳು, ಬೆಟ್ಟಗುಡ್ಡಗಳು ಮತ್ತು ಸಾಂಸ್ಕೃತಿಕ ಅನುಭವಗಳನ್ನು ಒಂದೇ ಪ್ರವಾಸ ವಲಯದಲ್ಲಿ ಜೋಡಿಸುವ ಶಕ್ತಿಯನ್ನು ಮೈಸೂರು ಹೊಂದಿದೆ. ಈ ಕಾರಣದಿಂದಲೇ ದಕ್ಷಿಣ ಭಾರತದ ಪ್ರವಾಸೋದ್ಯಮದ ಹೆಬ್ಬಾಗಿಲು ಎಂಬ ಹೆಗ್ಗಳಿಕೆಗೆ ಮೈಸೂರು ಪಾತ್ರವಾಗಿದೆ.

  • ಕೆ. ರಾಧಾಕೃಷ್ಣ ಹೊಳ್ಳ

ಅಧ್ಯಕ್ಷರು, ಕರ್ನಾಟಕ ರಾಜ್ಯ ಟ್ರಾವೆಲ್ಸ್ ಮಾಲೀಕರ ಸಂಘ

ನಿರ್ದೇಶಕರು, ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ (FKCCI)

ಬೆಂಗಳೂರಿನಿಂದ ಸುಮಾರು 135 ಕಿಲೋಮೀಟರ್ ದೂರದಲ್ಲಿರುವ ಮೈಸೂರು, ಕರ್ನಾಟಕದ ಸಾಂಸ್ಕೃತಿಕ ರಾಜಧಾನಿ ಮಾತ್ರವಲ್ಲದೆ ದಕ್ಷಿಣ ಭಾರತದ ಪ್ರಮುಖ ಪ್ರವಾಸೋದ್ಯಮ ಕೇಂದ್ರಗಳಲ್ಲಿ ಒಂದಾಗಿದೆ. ಯದುವಂಶದ ಆಡಳಿತದ ವೈಭವ, ರಾಜಮನೆತನದ ಶ್ರೀಮಂತ ಪರಂಪರೆ, ಅರಮನೆಗಳ ವೈಶಿಷ್ಟ್ಯ, ಕಲೆ, ಸಾಹಿತ್ಯ ಮತ್ತು ಸಂಸ್ಕೃತಿಯ ಮೂಲಕ ಮೈಸೂರು ದೇಶ-ವಿದೇಶಗಳ ಪ್ರವಾಸಿಗರನ್ನು ತನ್ನತ್ತ ಸೆಳೆಯುವ ವಿಶಿಷ್ಟ ಸಾಮರ್ಥ್ಯವನ್ನು ಹೊಂದಿದೆ.

ಇದನ್ನೂ ಓದಿ:ಮೈಸೂರು ಅರಮನೆಯ ಸುತ್ತಮುತ್ತಲಿನ ದೇವಾಲಯಗಳು...

ಅರಮನೆ ನಗರವೆಂದು ಖ್ಯಾತಿ ಪಡೆದಿರುವ ಮೈಸೂರು, ಕೇವಲ ಒಂದು ಪ್ರವಾಸಿ ತಾಣವಲ್ಲ. ಇದು ಊಟಿ, ಮಡಿಕೇರಿ, ನಾಗರಹೊಳೆ, ಬಂಡೀಪುರ, ವಯನಾಡು, ಕಣ್ಣೂರು ಹಾಗೂ ಚಾಮರಾಜನಗರ ಸೇರಿದಂತೆ ದಕ್ಷಿಣ ಭಾರತದ ಅನೇಕ ಪ್ರಸಿದ್ಧ ಪ್ರವಾಸಿ ತಾಣಗಳಿಗೆ ಸಂಪರ್ಕ ಕಲ್ಪಿಸುವ ಕೇಂದ್ರಬಿಂದುವಾಗಿದೆ. ಪ್ರಾಕೃತಿಕ ಸೌಂದರ್ಯ, ವನ್ಯಜೀವಿ ಪ್ರವಾಸೋದ್ಯಮ, ಪಾರಂಪರಿಕ ತಾಣಗಳು, ಬೆಟ್ಟಗುಡ್ಡಗಳು ಮತ್ತು ಸಾಂಸ್ಕೃತಿಕ ಅನುಭವಗಳನ್ನು ಒಂದೇ ಪ್ರವಾಸ ವಲಯದಲ್ಲಿ ಜೋಡಿಸುವ ಶಕ್ತಿಯನ್ನು ಮೈಸೂರು ಹೊಂದಿದೆ. ಈ ಕಾರಣದಿಂದಲೇ ದಕ್ಷಿಣ ಭಾರತದ ಪ್ರವಾಸೋದ್ಯಮದ ಹೆಬ್ಬಾಗಿಲು ಎಂಬ ಹೆಗ್ಗಳಿಕೆಗೆ ಮೈಸೂರು ಪಾತ್ರವಾಗಿದೆ.

ಈ ಹಿನ್ನೆಲೆಯಲ್ಲಿ ಆಯೋಜಿಸಲಾದ ಮೈಸೂರು ಟ್ರಾವೆಲ್ ಮಾರ್ಟ್ 2026 ಕೇವಲ ಒಂದು ಪ್ರದರ್ಶನ ಅಥವ ವ್ಯಾಪಾರ ಮೇಳವಲ್ಲ; ಇದು ಕರ್ನಾಟಕ ಮತ್ತು ದಕ್ಷಿಣ ಭಾರತದ ಪ್ರವಾಸೋದ್ಯಮದ ಭವಿಷ್ಯವನ್ನು ರೂಪಿಸುವ ಮಹತ್ವದ ವೇದಿಕೆಯಾಗಿದೆ. ಕಾರ್ಯಕ್ರಮವನ್ನು ಭಾರತದ ಕೇಂದ್ರ ಪ್ರವಾಸೋದ್ಯಮ ಸಚಿವರಾದ ಗಜೇಂದ್ರಸಿಂಗ್‌ ಶೆಖಾವತ್‌ ಅವರು ಉದ್ಘಾಟಿಸಿದ್ದು, ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಸಂಸದರಾದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರ ಉಪಸ್ಥಿತಿ ಕಾರ್ಯಕ್ರಮದ ಮಹತ್ವವನ್ನು ಹೆಚ್ಚಿಸಿತು.

ಇಂದಿನ ಮೈಸೂರು ಟ್ರಾವೆಲ್ ಮಾರ್ಟ್ 2026 ಕಾರ್ಯಕ್ರಮವು ಪ್ರವಾಸೋದ್ಯಮ ಕ್ಷೇತ್ರದ ಪ್ರಮುಖ ವ್ಯಕ್ತಿಗಳು, ಉದ್ಯಮಿಗಳು, ಹೊಟೇಲ್ ಮತ್ತು ಆತಿಥ್ಯ ವಲಯದ ಪ್ರತಿನಿಧಿಗಳು, ಪ್ರವಾಸ ವ್ಯವಸ್ಥಾಪಕರು ಹಾಗೂ ಹೂಡಿಕೆದಾರರನ್ನು ಒಂದೇ ವೇದಿಕೆಗೆ ತರಲು ಯಶಸ್ವಿಯಾಯಿತು. ಪ್ರವಾಸೋದ್ಯಮ ಕ್ಷೇತ್ರದ ಸವಾಲುಗಳು, ಅವಕಾಶಗಳು, ಮಾರುಕಟ್ಟೆ ವಿಸ್ತರಣೆ, ಹೊಸ ಹೂಡಿಕೆಗಳ ಆಕರ್ಷಣೆ ಹಾಗೂ ಸುಸ್ಥಿರ ಪ್ರವಾಸೋದ್ಯಮ ಅಭಿವೃದ್ಧಿಯ ಕುರಿತು ಅರ್ಥಪೂರ್ಣ ಚರ್ಚೆಗಳು ನಡೆದವು. ಸರಕಾರ, ಖಾಸಗಿ ವಲಯ ಮತ್ತು ಉದ್ಯಮ ಸಂಘಟನೆಗಳ ನಡುವಿನ ಸಹಕಾರವನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಈ ಸಮ್ಮೇಳನ ಮಹತ್ವದ ಪಾತ್ರ ವಹಿಸಿತು.

ಎರಡನೇ ದಿನದ ಚರ್ಚಾ ಕಾರ್ಯಕ್ರಮದಲ್ಲಿ ಮಾಜಿ ಸಂಸದ ಪ್ರತಾಪ್‌ ಸಿಂಹ, ಮೈಸೂರು ವಾಣಿಜ್ಯ ಮತ್ತು ಕೈಗಾರಿಕಾ ಕ್ಷೇತ್ರದ ಪ್ರಮುಖ ಮುಖಂಡರಾದ ಕೆ.ಬಿ.ಲಿಂಗರಾಜು, ಕರ್ನಾಟಕ ರಾಜ್ಯ ಪ್ರವಾಸ ವ್ಯವಸ್ಥಾಪಕರ ಸಂಘ ಪ್ರತಿನಿಧಿಗಳು ಹಾಗೂ ಪ್ರವಾಸೋದ್ಯಮ ಕ್ಷೇತ್ರದ ತಜ್ಞರು ಭಾಗವಹಿಸಿ, ಪ್ರವಾಸೋದ್ಯಮದ ಭವಿಷ್ಯ, ಅವಕಾಶಗಳು ಮತ್ತು ಸವಾಲುಗಳ ಕುರಿತು ವಿಚಾರ ವಿನಿಮಯ ನಡೆಸಿದರು.

Untitled design (22)

ಕಾರ್ಯಕ್ರಮದಲ್ಲಿ ಮೈಸೂರಿನ ಅಭಿವೃದ್ಧಿ ಮತ್ತು ಪ್ರವಾಸೋದ್ಯಮ ವಿಸ್ತರಣೆಯ ಕುರಿತು ಮಹತ್ವದ ಚರ್ಚೆಗಳು ನಡೆದವು. ಚಾಮುಂಡಿ ಬೆಟ್ಟದ ನೈಸರ್ಗಿಕ ಸೌಂದರ್ಯ, ಅರಮನೆ ನಗರಿಯ ಐತಿಹಾಸಿಕ ವೈಭವ, ಪಾರಂಪರಿಕ ತಾಣಗಳು ಹಾಗೂ ನಗರದ ವಿಶಿಷ್ಟ ಸಾಂಸ್ಕೃತಿಕ ಗುರುತಿಗೆ ಯಾವುದೇ ಧಕ್ಕೆಯಾಗದಂತೆ ಅಭಿವೃದ್ಧಿ ಯೋಜನೆಗಳನ್ನು ರೂಪಿಸುವ ಅಗತ್ಯವನ್ನು ಅನೇಕರು ಪ್ರತಿಪಾದಿಸಿದರು. ಮೈಸೂರು ನಗರವು ತನ್ನ ಪರಂಪರೆ ಮತ್ತು ಪರಿಸರವನ್ನು ಉಳಿಸಿಕೊಂಡೇ ಆಧುನಿಕ ಅಭಿವೃದ್ಧಿಯತ್ತ ಸಾಗಬೇಕೆಂಬ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಯಿತು.

ವಿಶೇಷವಾಗಿ, ಔಟರ್ ರಿಂಗ್ ರೋಡ್, ರಸ್ತೆ ವಿಸ್ತರಣೆ, ಮೇಲುಸೇತುವೆಗಳ ನಿರ್ಮಾಣ ಹಾಗೂ ಇತರೆ ಮೂಲಸೌಕರ್ಯ ಯೋಜನೆಗಳನ್ನು ಕೈಗೊಳ್ಳುವಾಗ ನಗರದ ಸೌಂದರ್ಯ, ಹವಾಮಾನ ಮತ್ತು ಪಾರಂಪರಿಕ ಕಟ್ಟಡಗಳ ಸಂರಕ್ಷಣೆಗೆ ಆದ್ಯತೆ ನೀಡಬೇಕು ಎಂಬ ಅಭಿಪ್ರಾಯ ವ್ಯಕ್ತವಾಯಿತು. ಪ್ರವಾಸಿಗರು ಮೈಸೂರಿಗೆ ಬರುವುದು ಕೇವಲ ಸೌಲಭ್ಯಗಳಿಗಾಗಿ ಅಲ್ಲ; ನಗರದ ವಿಶಿಷ್ಟ ಸಾಂಸ್ಕೃತಿಕ ವಾತಾವರಣ, ಹಸಿರು ಪರಿಸರ ಮತ್ತು ಐತಿಹಾಸಿಕ ಪರಂಪರೆಯನ್ನು ಅನುಭವಿಸಲು ಎಂಬುದನ್ನು ನೆನಪಿನಲ್ಲಿ ಇಟ್ಟುಕೊಂಡು ಅಭಿವೃದ್ಧಿಯ ದಾರಿಯನ್ನು ನಿರ್ಧರಿಸಬೇಕಾಗಿದೆ.

ಮೈಸೂರಿನಲ್ಲಿ ಹೆಚ್ಚಿನ ಹೂಡಿಕೆಗಳನ್ನು ಆಕರ್ಷಿಸುವುದು, ಹೊಸ ಉದ್ಯಮಗಳಿಗೆ ಅವಕಾಶ ಕಲ್ಪಿಸುವುದು, ಆತಿಥ್ಯ ಕ್ಷೇತ್ರವನ್ನು ಬಲಪಡಿಸುವುದು ಹಾಗೂ ಪ್ರವಾಸೋದ್ಯಮ ಆಧಾರಿತ ಆರ್ಥಿಕ ಚಟುವಟಿಕೆಗಳನ್ನು ಉತ್ತೇಜಿಸುವ ಅಗತ್ಯವನ್ನು ಸಭೆಯಲ್ಲಿ ಒತ್ತಿ ಹೇಳಲಾಯಿತು. ಒಟೇಲ್, ರೆಸಾರ್ಟ್, ಪ್ರವಾಸ ವ್ಯವಸ್ಥಾಪನೆ, ಸಾರಿಗೆ, ಸ್ಥಳೀಯ ಕಲೆ ಮತ್ತು ಕರಕುಶಲ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಹೆಚ್ಚಿನ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಮೂಲಕ ಮೈಸೂರಿನ ಆರ್ಥಿಕ ಚಿತ್ರಣವನ್ನು ಮತ್ತಷ್ಟು ಬಲಪಡಿಸಬಹುದು ಎಂಬ ಅಭಿಪ್ರಾಯ ವ್ಯಕ್ತವಾಯಿತು.

ಪ್ರವಾಸೋದ್ಯಮವು ಕೇವಲ ಮನರಂಜನೆ ಅಥವಾ ವಿಹಾರದ ಚಟುವಟಿಕೆಯಲ್ಲ. ಅದು ಉದ್ಯೋಗ ಸೃಷ್ಟಿ, ಸ್ಥಳೀಯ ವ್ಯಾಪಾರದ ಬೆಳವಣಿಗೆ, ಹೂಡಿಕೆ ಆಕರ್ಷಣೆ, ಸಾಂಸ್ಕೃತಿಕ ವಿನಿಮಯ ಹಾಗೂ ಆರ್ಥಿಕ ಅಭಿವೃದ್ಧಿಯ ಪ್ರಮುಖ ಸಾಧನವಾಗಿದೆ. ಕರ್ನಾಟಕವು ಹೊಂದಿರುವ ಪ್ರಕೃತಿ, ಪರಂಪರೆ, ಧಾರ್ಮಿಕ ತಾಣಗಳು, ವನ್ಯಜೀವಿ ಸಂಪತ್ತು ಹಾಗೂ ಸಾಂಸ್ಕೃತಿಕ ವೈವಿಧ್ಯತೆಯನ್ನು ಜಾಗತಿಕ ಮಟ್ಟದಲ್ಲಿ ಪರಿಣಾಮಕಾರಿಯಾಗಿ ಪ್ರಚಾರ ಮಾಡುವ ಅಗತ್ಯವಿದೆ. ಆ ನಿಟ್ಟಿನಲ್ಲಿ ಮೈಸೂರು ಟ್ರಾವೆಲ್ ಮಾರ್ಟ್ 2026 ಅತ್ಯಂತ ಪರಿಣಾಮಕಾರಿ ಮಾರುಕಟ್ಟೆ ವೇದಿಕೆಯಾಗಿದ್ದು, ರಾಜ್ಯದ ಪ್ರವಾಸೋದ್ಯಮ ಸಾಮರ್ಥ್ಯವನ್ನು ವಿಶ್ವದ ಮುಂದೆ ಪರಿಚಯಿಸುವ ಕಾರ್ಯ ಮಾಡುತ್ತಿದೆ.

ಮೈಸೂರು ನಗರವು ಭವಿಷ್ಯದಲ್ಲಿ ಇನ್ನಷ್ಟು ದೊಡ್ಡ ಪ್ರವಾಸೋದ್ಯಮ ಕೇಂದ್ರವಾಗಿ ಬೆಳೆಯುವ ಎಲ್ಲ ಅವಕಾಶಗಳನ್ನು ಹೊಂದಿದೆ. ಉತ್ತಮ ರಸ್ತೆ, ರೈಲು ಮತ್ತು ಹೆಚ್ಚಿನ ವಿಮಾನ ಸಂಪರ್ಕ, ವಿಶ್ವಪ್ರಸಿದ್ಧ ದಸರಾ ಉತ್ಸವ, ಐತಿಹಾಸಿಕ ತಾಣಗಳು, ಚಾಮುಂಡಿ ಬೆಟ್ಟದ ನೈಸರ್ಗಿಕ ಸೌಂದರ್ಯ ಮತ್ತು ಆತಿಥ್ಯಪರ ಸಂಸ್ಕೃತಿ ಮೈಸೂರಿನ ದೊಡ್ಡ ಬಲವಾಗಿದೆ. ಈ ಸಾಮರ್ಥ್ಯವನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಬಳಸಿಕೊಳ್ಳಲು ಸರಕಾರ, ಖಾಸಗಿ ವಲಯ, ಪ್ರವಾಸೋದ್ಯಮ ಸಂಘಟನೆಗಳು ಮತ್ತು ಸ್ಥಳೀಯ ಸಮುದಾಯಗಳು ಕೈಜೋಡಿಸುವ ಅಗತ್ಯವಿದೆ.

ಒಟ್ಟಾರೆ, ಅಭಿವೃದ್ಧಿ ಮತ್ತು ಪರಂಪರೆ ಸಂರಕ್ಷಣೆ ಎರಡನ್ನೂ ಸಮತೋಲನದಲ್ಲಿ ಕೊಂಡೊಯ್ಯುವ ಮೂಲಕ ಮೈಸೂರನ್ನು ವಿಶ್ವಮಟ್ಟದ ಪ್ರವಾಸೋದ್ಯಮ ನಗರವನ್ನಾಗಿ ರೂಪಿಸಬೇಕು ಎಂಬುದು ಮೈಸೂರು ಟ್ರಾವೆಲ್ ಮಾರ್ಟ್ 2026ರಲ್ಲಿ ವ್ಯಕ್ತವಾದ ಒಕ್ಕೊರಲ ಆಶಯವಾಗಿತ್ತು. ಮೈಸೂರಿನ ಸೌಂದರ್ಯ, ಸಂಸ್ಕೃತಿ ಮತ್ತು ಐತಿಹಾಸಿಕ ಪರಂಪರೆಯನ್ನು ಉಳಿಸಿಕೊಂಡು, ಆಧುನಿಕ ಮೂಲಸೌಕರ್ಯ ಮತ್ತು ಉದ್ಯಮ ಸ್ನೇಹಿ ವಾತಾವರಣವನ್ನು ನಿರ್ಮಿಸುವ ಮೂಲಕ ನಗರವನ್ನು ಇನ್ನಷ್ಟು ಸಮೃದ್ಧಗೊಳಿಸಬೇಕೆಂಬ ಸಂದೇಶ ಈ ಸಮ್ಮೇಳನದಿಂದ ಹೊರಹೊಮ್ಮಿರುವುದಂತೂ ನಿಜ.

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ಕೈ ಸವೆಯುವವರೆಗೂ ನಿರಂತರ ಬರೆಯಲು ಸೈ !

Read Previous

ಕೈ ಸವೆಯುವವರೆಗೂ ನಿರಂತರ ಬರೆಯಲು ಸೈ !

ವಿಮಾನದಲ್ಲಿ ಮುಂಭಾಗದ ಆಸನಗಳು ಸುರಕ್ಷಿತವೇ ?

Read Next

ವಿಮಾನದಲ್ಲಿ ಮುಂಭಾಗದ ಆಸನಗಳು ಸುರಕ್ಷಿತವೇ ?