ಮೈಸೂರು ಅರಮನೆಯ ಸುತ್ತಮುತ್ತಲಿನ ದೇವಾಲಯಗಳು...
ಮುಂಜಾನೆ ಮಹಾರಾಜರು ದೇವಾಲಯಕ್ಕೆ ತೆರಳಿ ಸ್ವೀಕರಿಸುತ್ತಿದ್ದ ತೀರ್ಥ-ಪ್ರಸಾದದಲ್ಲಿ ವಿಷ ಬೆರೆಸುವಂತೆ ದೇವಾಲಯದ ಅರ್ಚಕರಿಗೆ ತಿಳಿಸಿದ. ಹಾಗೆಯೇ ಮಾಡಿದ ಅರ್ಚಕರು ತೀರ್ಥದಲ್ಲಿ ವಿಷ ಬೆರೆಸಿ ಮಹಾರಾಜರಿಗೆ ನೀಡಿದನು. ಬಳಿಕ ಮಹಾರಾಜರ ಮುಂದೆ ಬೆವರುತ್ತಾ ನಿಂತ. ನೀವೇಕೆ ಬೆವರುತಿದ್ದೀರಿ ಎಂದು ರಾಜ ಒಡೆಯರ್ ಕೇಳಿದರು. ಭಯಬೀತನಾದ ಅರ್ಚಕ ನಡೆದದ್ದೆಲ್ಲವನ್ನು ವಿವರಿಸಿದ.
- ನಂಜನಗೂಡು ಪ್ರದ್ಯುಮ್ನ
ಭಾರತ ದೇಶದ ಸನಾತನ ಸಂಸ್ಕೃತಿ ಹಾಗೂ ಧಾರ್ಮಿಕ ಅಸ್ತಿತ್ವದ ಕೇಂದ್ರಬಿಂದು ನಮ್ಮ ದೇಶದಲ್ಲಿರುವ ಪುರಾಣಪ್ರಸಿದ್ಧ ದೇವಾಲಯಗಳು. ಇತಿಹಾಸದ ಪುಟಗಳಲ್ಲಿ ಉಲ್ಲೇಖಿಸಿರುವ ಅನೇಕ ದಾಳಿಗಳನ್ನು ಎದುರಿಸಿ ಇಂದಿಗೂ ತಮ್ಮ ಅಸ್ತಿತ್ವವನ್ನು ಉಳಿಸಿಕೊಂಡು ಬಂದಿರುವ ಅನೇಕ ದೇವಾಲಯಗಳು ನಮ್ಮ ದೇಶದೆಲ್ಲೆಡೆ ಕಾಣಬಹುದು.
ಅಂದಿನ ಅಖಂಡ ʼಭರತʼ ಭೂಮಿಯ ಉತ್ತರದಿಂದ-ದಕ್ಷಿಣ, ಪೂರ್ವದಿಂದ-ಪಶ್ಚಿಮದವರೆಗೆ ಆಳುತ್ತಿದ್ದ ರಾಜಮಹಾರಾಜರು ದೇವಾಲಯಗಳ ನಿರ್ಮಾಣ ಹಾಗೂ ದಾಳಿಕೋರರಿಂದ ದೇವಾಲಯಗಳನ್ನು ಸಂರಕ್ಷಣೆ ಮಾಡುವುದರಲ್ಲಿ ಮಹತ್ತರವಾದ ಪಾತ್ರವಹಿಸಿದ್ದಾರೆ. ಅಷ್ಟೇ ಅಲ್ಲದೇ ದಾಳಿಗೊಳಗಾಗಿ ನಾಶವಾದ ದೇವಾಲಯಗಳ ಜೀರ್ಣೋದ್ದಾರ ಮಾಡುವಲ್ಲಿಯೂ ಅಂದಿನ ಮಾಹಾರಾಜರು ವಿಶೇಷ ಆಸಕ್ತಿ ಹೊಂದಿದ್ದರು. ಅಂತೆಯೇ ಸಾಂಸ್ಕೃತಿಕ ರಾಜಧಾನಿ ಮೈಸೂರಿನ ಒಡೆಯರ್ ರಾಜಮನೆತನಕ್ಕೆ ಶ್ರದ್ಧಾ-ಭಕ್ತಿ ಹಾಗೂ ನಂಬಿಕೆಗಳ ಪ್ರತೀಕವಾದ ದೇವಾಲಯಗಳ ನಿರ್ಮಾಣ ಹಾಗೂ ಜೀರ್ಣೋದ್ಧಾರದೆಡೆಗೆ ವಿಶೇಷ ಕಾಳಜಿಯಿತ್ತು . ಅದಕ್ಕೆ ಸಾಕ್ಷಿಯಾಗಿ ಮೈಸೂರು ಅರಮನೆಯಲ್ಲಿರುವ 8 ಪ್ರಸಿದ್ಧ ಹಾಗೂ ಪುರಾತನ ದೇವಾಲಯಗಳೇ ಉದಾಹರಣೆ.
ವಿವಿಧ ರಾಜ್ಯ ಹಾಗೂ ವಿವಿಧ ದೇಶಗಳ ಮೂಲೆ ಮೂಲೆಗಳಿಂದ ಮೈಸೂರಿಗೆ ಆಗಮಿಸುವ ಪ್ರವಾಸಿಗರು ವಿಶ್ವವಿಖ್ಯಾತ ಮೈಸೂರು ಅರಮನೆಗೆ ಭೇಟಿ ನೀಡದೆ ಹಿಂದಿರುಗುವುದಿಲ್ಲ. ಆದರೆ ಅರಮನೆ ಆವರಣದಲ್ಲೇ ಇರುವ ಈ ದೇವಾಲಯಗಳ ಬಗ್ಗೆ ತಿಳಿದಿರುವುದು ತೀರಾ ವಿರಳ. ನಾಡಹಬ್ಬ ದಸರಾ ಆಚರಣೆಗೆ ಮೈಸೂರು ನಗರ ಸಿದ್ಧವಾಗುತ್ತಿದೆ. ಅನೇಕರು ಈ ಸಂದರ್ಭದಲ್ಲಿ ಮೈಸೂರಿಗೆ ಆಗಮಿಸಿ ಅರಮನೆಗೆ ಭೇಟಿ ನೀಡಲು ಹಾಗೂ ದಸರಾ ಉತ್ಸವದಲ್ಲಿ ಭಾಗಿಯಾಗಲು ಇಚ್ಛಿಸಿರುತ್ತೀರಿ. ಸಾಂಸ್ಕೃತಿಕ ನಗರಿಗೆ ಹೋಗುವ ಮುನ್ನ ಅಲ್ಲಿಯ ವಿಶ್ವವಿಖ್ಯಾತ ಅರಮನೆಯ ದೇವಾಲಯಗಳನ್ನು ಸುತ್ತಿ ಬರೋಣ..
ಇಂದಿನ ಜಗತ್ಪ್ರಸಿದ್ಧ ಅಂಬಾವಿಲಾಸ ಅರಮನೆಯ ಆವರಣದಲ್ಲಿ 8 ಪುರಾತನ ದೇವಾಲಯಗಳಿವೆ. ಇಂದಿಗೂ ಎಲ್ಲ ದೇವಾಲಯಗಳಲ್ಲಿ ಪ್ರತಿನಿತ್ಯ ಪೂಜಾ ಕೈಂಕರ್ಯಗಳು ನೆರವೇರುತ್ತಿವೆ. ಅರಮನೆಯಲ್ಲಿರುವ ಈ ದೇವಾಲಯಗಳನ್ನು ನೋಡಿದರೆ ಮೈಸೂರಿನ ಯದುವಂಶದ ಮಹಾರಾಜರಿಗೆ ನಮ್ಮ ಧರ್ಮ, ಸಂಸ್ಕೃತಿ ಹಾಗೂ ಆಚಾರ-ವಿಚಾರಗಳ ಬಗ್ಗೆ ಇದ್ದ ಶ್ರದ್ಧೆ ಎಂಥದ್ದು ಎಂದು ತಿಳಿಯುತ್ತದೆ.
ಕೋಡಿಭೈರವೇಶ್ವರ ಸ್ವಾಮಿ ದೇವಾಲಯ
ಇದು ಅರಮನೆಯಲ್ಲಿರುವ ಸಣ್ಣ ಹಾಗೂ ಪುರಾತನ ದೇವಾಲಯ. ಆದರೆ ಇದರ ಇತಿಹಾಸ ಮೈಸೂರಿನ ಅರಮನೆಯ ಒಡೆಯರ್ ರಾಜಮನೆತನದ ಉಗಮಕ್ಕೆ ಕಾರಣ ಎಂದು ಇತಿಹಾಸದಲ್ಲಿ ದಾಖಲಾಗಿದೆ. ಈ ಸಣ್ಣ ಗುಡಿ ಅರಮನೆಯ ಈಶಾನ್ಯ ದಿಕ್ಕಿನಲ್ಲಿದ್ದು, ಅಂದಿನ ಮೈಸೂರು ರಾಜ್ಯದ ಯದುವಂಶಾವಳಿಯ ಪ್ರಾರಂಭದ ಮೂಲಘಟನೆ ಇದೇ ದೇವಾಲಯದ ಆವರಣದಲ್ಲಿ ಸಂಭವಿಸಿದ್ದು ಎಂದು ಹೇಳಲಾಗುತ್ತದೆ. ದ್ವಾರಕಾಪಟ್ಟಣದಿಂದ ಬಂದ ಯದುವಂಶದ ಮೂಲ ಪುರುಷ ಯದುರಾಯರಿಗೂ ಸ್ಥಳೀಯ ರಾಜಕುಮಾರಿಯಾಗಿದ್ದ ದೇವಾಜಮ್ಮಣ್ಣಿಗೂ ವಿವಾಹ ಮಾತ್ರವಲ್ಲದೇ ಮೈಸೂರಿನಲ್ಲಿ ಯದುವಂಶದ ಬೇರು ಕುಡಿ ಒಡೆಯಲಿಕ್ಕೆ ಇದೇ ದೇವಾಲಯ ಸಾಕ್ಷಿ ಎಂದು ಇತಿಹಾಸದ ಪುಟಗಳು ತಿಳಿಸುತ್ತವೆ.
ಅಂದಿನ ಕೋಟೆಯ ಹೊರವಲಯ (ಇಂದು ಅರಮನೆ ಒಳಗಿದೆ) ದೇವರಾಯ ಸಾಗರದ ದಂಡೆಯಲ್ಲಿದ್ದ ಈ ದೇವಾಲಯದಲ್ಲಿ ಇರುವುದು ಈಶ್ವರನ ಅಪರಾವತಾರವಾದ ಭೈರವಮೂರ್ತಿ. ಸುಮಾರು ಮೂರು ಅಡಿ ಎತ್ತರದ ಭೈರವನ ನಾಲ್ಕು ಕೈಗಳಲ್ಲಿ ತ್ರಿಶೂಲ, ಡೋಲು, ತಲೆಬುರುಡೆ ಹಾಗೂ ಕತ್ತಿಯನ್ನು ಹಿಡಿದಿರುವ ರೌದ್ರಾವತಾರ ಮೂರ್ತಿ. ಇದರ ಎಡಬಲಕ್ಕೆ ಭದ್ರಕಾಳಿ ಹಾಗೂ ಮತ್ತೊಂದು ಸ್ತ್ರೀ ದೇವರ ಪ್ರತಿಮೆ.

ಶ್ವೇತವರಾಹಸ್ವಾಮಿ ದೇವಾಲಯ
ಅರಮನೆಯ ದಕ್ಷಿಣದ್ವಾರ ದಿಡ್ಡಿ ಬಾಗಿಲಿನ ಬಳಿ ಇರುವ ಹೊಯ್ಸಳರ ಶೈಲಿಯಲ್ಲಿ ನಿರ್ಮಿಸಿರುವ ಸುಂದರ ದೇವಾಲಯ. ಹೆಸರಿನಲ್ಲೇ ಇರುವಂತೆ ಇಲ್ಲಿರುವುದು ಶ್ರೀ ವರಾಹಸ್ವಾಮಿ. ತಮಿಳುನಾಡಿನ ಶ್ರೀಮೂಷದಲ್ಲಿದ್ದ ಈ ವಿಗ್ರಹವನ್ನು ಅಂದಿನ ಮೈಸೂರು ಮಹಾರಾಜರಾಗಿದ್ದ ಚಿಕ್ಕದೇವರಾಜ ಒಡೆಯರ್(1673-1704) ತಂದು ಅಂದಿನ ರಾಜಧಾನಿಯಾಗಿದ್ದ ಶ್ರೀರಂಗಪಟ್ಟಣದಲ್ಲಿ ನೂತನ ದೇವಾಲಯವೊಂದನ್ನು ನಿರ್ಮಿಸಿ ಪ್ರತಿಷ್ಠಾಪಿಸಿದ್ದರು. ನಂತರ ಟಿಪ್ಪುವಿನ ಕಾಲದಲ್ಲಿ ನಾಶವಾದ ದೇವಾಲಯಗಳಲ್ಲಿ ಈ ದೇವಾಲಯವೂ ಒಂದು. ಟಿಪ್ಪು ಕಾಲಾನಂತರ 1809ರ ಸುಮಾರಿಗೆ ಮುಮ್ಮಡಿ ಕೃಷ್ಣರಾಜ ಒಡೆಯರ್ ಕಾಲದಲ್ಲಿ ಅಂದಿನ ದಿವಾನರಾಗಿದ್ದ ಪೂರ್ಣಯ್ಯ ಅವರ ನೇತೃತ್ವದಲ್ಲಿ ಮೈಸೂರು ಅರಮನೆಯ ಆವರಣದಲ್ಲಿ ನೂತನ ದೇವಾಲಯ ನಿರ್ಮಾಣ ಮಾಡಿ ಈ ವಿಗ್ರಹವನ್ನು ಪ್ರತಿಷ್ಠಾಪನೆ ಮಾಡಲಾಯಿತು ಎಂದು ತಿಳಿದುಬರುತ್ತದೆ. ಬಳಿಕ ಚಿಕ್ಕದೇವರಾಜ ಒಡೆಯರ್ ಈ ದೇವಾಲಯಕ್ಕೆ ಉತ್ಸವ ಮೂರ್ತಿಯನ್ನು ನೀಡಿದರು ಎಂದು ದೇವಸ್ಥಾನದ ಶಾಸನಗಳು ತಿಳಿಸುತ್ತವೆ.
ಶ್ರೀ ಲಕ್ಷ್ಮೀರಮಣ ಸ್ವಾಮಿ ದೇವಸ್ಥಾನ
ಕ್ರಿ.ಶ. 1499ರ ಶಿಲಾಶಾಸನದ ಪ್ರಕಾರ ವಿಜಯನಗರದ ಕೃಷ್ಣ ದೇವರಾಯರ ಆಜ್ಞೆ ಮೇರೆಗೆ ಈ ದೇವಸ್ಥಾನಕ್ಕೆ ಸಹಾಯದ್ರವ್ಯ ಒದಗಿಸಿದರೆಂದು ತಿಳಿದುಬರುತ್ತದೆ. ಎರಡು ಕೈಗಳನ್ನೂ ಜೋಡಿಸಿ ನಮಸ್ಕರಿಸುತ್ತಿರುವ ಎರಡು ಅಡಿ ಎತ್ತರದ ರಾಜ ಒಡೆಯರ ಶಿಲಾಮೂರ್ತಿ ದೇವರ ಎದುರಿನಲ್ಲಿ ನಿಂತಿದೆ. ಒಂದು ಶಾಸನದ ಪ್ರಕಾರ ಹೊರವಲಯದ ಮಹಾದ್ವಾರದಲ್ಲಿ ದೇವರು ವಿಷವನ್ನು ಅಮೃತವಾಗಿ ಬದಲಿಸಿದ ಜ್ಞಾಪಕಾರ್ಥವಾಗಿ ನಿರ್ಮಿಸಿದ ಸ್ಮಾರಕವೆಂದು ಬರೆಯಲ್ಪಟ್ಟಿದೆ. ಈ ಪವಾಡದ ಚರಿತ್ರೆ ರಾಜವಂಶಾವಳಿಯ ಕತೆಯಲ್ಲಿ ನಿರೂಪಿಸಲಾಗಿದೆ.
ವಿಷವೂ ಅಮೃತವಾದ ಸ್ಥಳ
ಒಮ್ಮೆ ಗರಳಪುರಿ ಎಂದೇ ಖ್ಯಾತಿಯಾಗಿರುವ ದಕ್ಷಿಣಕಾಶಿ ನಂಜನಗೂಡಿನಲ್ಲಿ ನಡೆಯುತ್ತಿದ್ದ ಜಾತ್ರಾ ಮಹೋತ್ಸವಕ್ಕೆಂದು ಮೈಸೂರಿನಿಂದ ಮಹಾರಾಜರಾಗಿದ್ದ ರಾಜ ಒಡೆಯರ್ ತೆರಳುತ್ತಿದ್ದರು. ಮಾರ್ಗ ಮಧ್ಯೆ ಕಾರುಗಹಳ್ಳಿಯ ದಳವಾಯಿ ವೀರರಾಜಯ್ಯ ಮಹಾರಾಜರ ಎದುರು ಅಹಂಕಾರದಿಂದ ವಾದ್ಯ ಸಮೇತ ಮೆರವಣಿಗೆ ಮೂಲಕ ಎದುರಾಗುತ್ತಾನೆ. ಮಹಾರಾಜರಿಗೆ ಮುಂದೆ ಹೋಗಲು ಅವಕಾಶ ನೀಡದೆ ದರ್ಪ ಮೆರೆಯುತ್ತಾನೆ. ಮಹಾರಾಜರ ಸೇನೆ ಆತನನ್ನು ಹಿಡಿದು ಅಟ್ಟುತ್ತಾರೆ. ಅಲ್ಲಿ ಆದ ಅವಮಾನಕ್ಕೆ ಪ್ರತೀಕಾರ ತೀರಿಸಿಕೊಳ್ಳಲೆಂದು ವೀರರಾಜಯ್ಯ ತೀರ್ಮಾನಿಸುತ್ತಾನೆ.
ಪ್ರತಿನಿತ್ಯ ಮುಂಜಾನೆ ಮಹಾರಾಜರು ಅರಮನೆ ಆವರಣದಲ್ಲಿರುವ ಲಕ್ಷ್ಮೀರಮಣ ದೇವಾಲಯಕ್ಕೆ ತೆರಳುವ ವಿಚಾರ ತಿಳಿದ ಆತ ಕುತಂತ್ರವನ್ನು ರೂಪಿಸಿದನು. ಮುಂಜಾನೆ ಮಹಾರಾಜರು ದೇವಾಲಯಕ್ಕೆ ತೆರಳಿ ಸ್ವೀಕರಿಸುತ್ತಿದ್ದ ತೀರ್ಥ-ಪ್ರಸಾದದಲ್ಲಿ ವಿಷ ಬೆರೆಸುವಂತೆ ದೇವಾಲಯದ ಅರ್ಚಕರಿಗೆ ತಿಳಿಸಿದ. ಹಾಗೆಯೇ ಮಾಡಿದ ಅರ್ಚಕರು ತೀರ್ಥದಲ್ಲಿ ವಿಷ ಬೆರೆಸಿ ಮಹಾರಾಜರಿಗೆ ನೀಡಿದನು. ಬಳಿಕ ಮಹಾರಾಜರ ಮುಂದೆ ಬೆವರುತ್ತಾ ನಿಂತ. ನೀವೇಕೆ ಬೆವರುತಿದ್ದೀರಿ ಎಂದು ರಾಜ ಒಡೆಯರ್ ಕೇಳಿದರು. ಭಯಬೀತನಾದ ಅರ್ಚಕ ನಡೆದದ್ದೆಲ್ಲವನ್ನು ವಿವರಿಸಿದ. ದೈವಭಕ್ತರಾಗಿದ್ದ ಮಹಾರಾಜರು ನೀವು ನೀಡಿರುವ ಈ ತೀರ್ಥವನ್ನು ವಿಷವೆಂದು ಭಾವಿಸಿ ಅಥವಾ ತೀರ್ಥವೆಂದು ಭಾವಿಸಿ ನೀಡಿದಿರೋ ಎಂದು ಕೇಳಿದಾಗ ತೀರ್ಥವೆಂದು ಭಾವಿಸಿ ನೀಡಿದ್ದೇನೆ ಎಂದು ಹೇಳುತ್ತಾನೆ. ಕೈಲಿದ್ದ ತೀರ್ಥವನ್ನು ಕಣ್ಣಿಗೆ ಒತ್ತಿದವರೇ ಅದನ್ನು ಕುಡಿಯುತ್ತಾರೆ. ಆದರೆ ಅದರಲ್ಲಿದ್ದ ವಿಷ ಅಂಗೈನಲ್ಲಿ ಕಪ್ಪಾಗಿ ನಿಂತಿತ್ತು. ತೀರ್ಥ ಮಾತ್ರ ಮಹಾರಾಜರ ಗಂಟಲಿಗೆ ಇಳಿದಿತ್ತು. ಇದು ನಡೆದ ಘಟನೆ. ತಮ್ಮ ಪ್ರಾಣ ಕಾಪಾಡಿದ ಲಕ್ಷ್ಮೀರಮಣ ದೇವಾಲಯಕ್ಕೆ ಬಂಗಾರದ ಕಳಶದಿಂದ ಕೂಡಿದ ಗೋಪುರ ಮತ್ತು ಮಹಾದ್ವಾರವನ್ನು ನಿರ್ಮಿಸಿದರು. ಇದು ಲಕ್ಷ್ಮೀರಮಣ ದೇವಾಲಯ ಹಾಗೂ ರಾಜ ಒಡೆಯರ್‌ಗೆ ಸಂಬಂಧಿಸಿದ ಐತಿಹ್ಯ.

ತ್ರಿನಯನೇಶ್ವರಸ್ವಾಮಿ ದೇವಸ್ಥಾನ
ಈ ದೇವಾಲಯ ಅರಮನೆಯ ಎದುರು ಭಾಗದಲ್ಲಿ ಪಶ್ಚಿಮಾಭಿಮುಖವಾಗಿದೆ. ರಾಜ ಒಡೆಯರ ಕಾಲದಲ್ಲಿ ಕೋಟೆಯ ಹೊರ ಭಾಗದಲ್ಲಿತ್ತು. ಆ ಕಾಲದಲ್ಲಿ ದೇವರಾಯ ಸಾಗರದ (ದೊಡ್ಡ ಕೆರೆ) ಅಲೆಗಳ ಹೊಡೆತದಿಂದ ಅದರ ಹಂತಗಳು ಕೊಚ್ಚಿ ಹೋದವು. ಕಂಠೀರವ ನರಸರಾಜ ಒಡೆಯರು ಮತ್ತು ಅವರ ನಂತರ ದೇವರಾಜ ಒಡೆಯರು ದೇವಸ್ಥಾನದ ಸುತ್ತಲೂ ಭರ್ತಿಯನ್ನು ಹಾಕಿಸಿ ದೇವಸ್ಥಾನಕ್ಕೂ ಕೆರೆಗೂ ಮಧ್ಯೆ ಕೋಟೆಯನ್ನು ಕಟ್ಟಿ ಕೋಟೆಯನ್ನು ಮತ್ತು ದೇವಸ್ಥಾನವನ್ನೂ ಅಭಿವೃದ್ಧಿ ಪಡಿಸಿದರು. ಕಂಠೀರವ ನರಸರಾಜ ಒಡೆಯರು ಪಡಸಾಲೆಯನ್ನು ಕಟ್ಟಿಸಿ ಪಂಚಲಿಂಗ ಸ್ಥಾಪನೆ ಮಾಡಿದರು. ದಕ್ಷಿಣಾಮೂರ್ತಿ, ಕ್ಷೇತ್ರಪಾಲ, ಕುಮಾರಸ್ವಾಮಿ ಸೂರೈ ನಾರಾಯಣ ಮತ್ತು ಎರಡು ಕೈಜೋಡಿಸಿ ನಮಸ್ಕರಿಸುತ್ತಿರುವ ತಮ್ಮ ಸ್ವಂತ ವಿಗ್ರಹವನ್ನು ನಿರ್ಮಿಸಿದರು. ಇದರ ಪಕ್ಕದಲ್ಲೇ ಇದೇ ರೀತಿಯ ದೊಡ್ಡ ದೇವರಾಜ ಒಡೆಯರ ಮೂರ್ತಿಯೂ ಸಹ ನಿಂತಿದೆ. ಅಷ್ಟೇ ಅಲ್ಲದೇ ಅಮೃತಶಿಲೆಯಿಂದ ಕೆತ್ತಿದ ಶ್ರೀ ಶಂಕರಾಚಾರರ ವಿಗ್ರಹವಿದೆ. ದೊಡ್ಡ ಅರಳೀಮರದ ಕೆಳಗೆ ನಾಗರಕಲ್ಲುಗಳಿವೆ.
ಪ್ರಸನ್ನ ವೆಂಕಟರಮಣಸ್ವಾಮಿ ದೇವಸ್ಥಾನ
ಮುಮ್ಮಡಿ ಕೃಷ್ಣರಾಜ ಒಡೆಯರು 1825ನೇ ಇಸವಿಯಲ್ಲಿ ವೆಂಕಟರಮಣನನ್ನು ಸ್ಥಾಪಿಸಿದರು. ಇದು ಅರಮನೆಯ ಪಶ್ಚಿಮ ಮಹಾದ್ವಾರದ ಹತ್ತಿರವಿದೆ. ಧರ್ಮನಿಷ್ಠೆಯ ಸುಬ್ಬರಾಯದಾಸ ಅಲಿಯಾಸ್ ಗೋಪಾಲದಾಸ ಎಂಬ ಹೆಸರಿನ ಮಾಧ್ವ ಧರ್ಮ ಸಿದ್ಧಾಂತಕ್ಕೆ ಸೇರಿದವರು ಇದನ್ನು ಕಟ್ಟಿಸಿದರು. ಮುಮ್ಮುಡಿ ಕೃಷ್ಣರಾಜ ಒಡೆಯರು ಈತನಿಗೆ ಆಶ್ರಯದಾತರಾಗಿದ್ದರು. ಈತನ ಮೂರು ಅಡಿ ಎತ್ತರದ ವಿಗ್ರಹವಿದೆ. ಈತನ ಒಂದು ಕೈಲಿ ತಂಬೂರಿ, ಎಡಗೈನಲ್ಲಿ ಪಾತ್ರೆ ಹಿಡಿಯಲಾಗಿದೆ.
ಪ್ರಸನ್ನ ಕೃಷ್ಣ ಸ್ವಾಮಿ ದೇವಸ್ಥಾನ
ಮುಮ್ಮಡಿ ಕೃಷ್ಣರಾಜ ಒಡೆಯರು 1825ರಲ್ಲಿ ಇದನ್ನು ಸ್ಥಾಪಿಸಿದರು. ದೇವರುಗಳ ದೇವಿಯರುಗಳ ಯೋಗಿಗಳ ಮತ್ತು ಋಷಿಗಳ ಲೋಹದ ಮೂರ್ತಿಗಳನ್ನು ಸ್ಥಾಪಿಸಲಾಗಿದೆ. ಪ್ರತಿಯೊಂದರ ಪೀಠಗಳ ಮೇಲೆ ಅವರುಗಳ ಹೆಸರನ್ನು ಬರೆಯಲಾಗಿದೆ. ಇದೇ ರೀತಿಯ ರಾಜರ ಮತ್ತು ಅವರ ಸಂಸಾರಗಳ ಹೆಸರುಗಳನ್ನು ಬರೆದಿರುವ ಏಳು ವಿಗ್ರಹಗಳನ್ನೂ ಸಹ ನಿಲ್ಲಿಸಲಾಗಿದೆ. ಈ ವಿಗ್ರಹಗಳೆಲ್ಲವೂ ಮುಮ್ಮಡಿ ಕೃಷ್ಣರಾಜ ಒಡೆಯರಿಂದ ಕೊಡಲ್ಪಟ್ಟಿದೆ. ಈ ದೇವಸ್ಥಾನದ ಲಿಪಿಯಲ್ಲಿ ಮುಮ್ಮಡಿ ಕೃಷ್ಣರಾಜ ಒಡೆಯರು ಚಾಮುಂಡೇಶ್ವರಿಗೆ ನೀಡಿದ ಎಂಟು ದತ್ತಿಗಳ ಬಗ್ಗೆ ವಿವರ ಇದೆ.
ಭುವನೇಶ್ವರಿ ದೇವಸ್ಥಾನ
ಈ ದೇವಸ್ಥಾನ ಅರಮನೆ ಕೋಟೆಯ ಉತ್ತರದ್ವಾರದ ಹತ್ತಿರವಿದೆ. 1951ನೇ ಇಸವಿಯಲ್ಲಿ ಶ್ರೀ ಜಯಚಾಮರಾಜ ಒಡೆಯರವರು ಈ ಕೋಟೆಯನ್ನು ಕಟ್ಟಿದರು. ಶ್ವೇತ ವರಾಹಸ್ವಾಮಿ ದೇವಸ್ಥಾನದ ನಂತರ 1809ನೇ ಇಸವಿಯ ನಂತರ, ಸುಮಾರು 142 ವರ್ಷಗಳ ನಂತರ ಮೈಸೂರು ನಗರದಲ್ಲಿ ಕಟ್ಟಲ್ಪಟ್ಟ ದೊಡ್ಡ ದೇವಸ್ಥಾನ ಇದು. ಈ ದೇವಸ್ಥಾನದ ಹೆಬ್ಬಾಗಿಲಿನ ಗೋಪುರ ತುಂಬಾ ಎತ್ತರವಾಗಿದೆ. ಮೇಲ್ಬಾಗದಲ್ಲಿ 5 ಕಳಶವನ್ನು ಹೊಂದಿದ್ದು, ಕೆತ್ತನೆಯ ಕೆಲಸದಿಂದ ಮಾಡಲ್ಪಟ್ಟಿರುವ ಹೆಬ್ಬಾಗಿಲಿಗೆ ತಗಡನ್ನು ಹೊದ್ದಿಸಿ ಅದಕ್ಕೆ ಚಿನ್ನದ ಲೇಪನ ಮಾಡ ಲಾಗಿದೆ. ಕಳಸಗಳು ಚಿನ್ನದ ಲೇಪನ ಮಾಡಲ್ಪಟ್ಟಿದೆ.
ಗಾಯತ್ರಿದೇವಿ ದೇವಾಲಯ
1953ರಲ್ಲಿ ಜಯಚಾಮರಾಜರಿಂದ ನಿರ್ಮಾಣಗೊಂಡ ದೇವಾಲಯವಿದು. ಎತ್ತರದ ಗೋಪುರವುಳ್ಳ ಈ ದೇವಾಲಯದಲ್ಲಿ ಸಾವಿತ್ರಿ-ಗಾಯತ್ರಿ-ಲಕ್ಷ್ಮಿಯರ ವಿಗ್ರಹಗಳಿವೆ. ಇಡೀ ಆಲಯ ಕಟ್ಟಿದ್ದು ಶಿಲ್ಪಿ ಸಿದ್ಧಲಿಂಗಸ್ವಾಮಿ. ನವರಂಗದಲ್ಲಿರುವ ಗಣೇಶ, ಶಿವ, ಸೂರ್ಯ ಮತ್ತು ಮಹಾವಿಷ್ಣುಗಳ ವಿಗ್ರಹಗಳನ್ನು ಅತಿ ಸುಂದರವಾಗಿ ಕೆತ್ತಿದ್ದಾರೆ. ಈ ದೇವಾಲಯವನ್ನು ತ್ರಿನೇಶ್ವರಾಲಯಕ್ಕೆ ಹೊಂದಿಕೆಯಾಗುವಂತೆ ಕಟ್ಟಲಾಗಿದೆ. ಜಗಲಿಯ ಮೇಲಿರುವ ಆಲಯ, ಹೊಯ್ಸಳ ಪದ್ಧತಿ ನೆನಪಿಸುತ್ತದೆ. ಜಯಚಾಮರಾಜರು ತಮ್ಮ ಪ್ರೀತಿಯ ಮೊದಲ ಮಗಳಾದ ಗಾಯತ್ರಿದೇವಿ ಅವರ ನೆನಪಿನಾರ್ಥವಾಗಿ ಈ ದೇವಾಲಯವನ್ನು ನಿರ್ಮಿಸಿದರು ಎಂಬುದು ದಾಖಲೆಗಳಲ್ಲಿ ಉಲ್ಲೇಖಿಸಲಾಗಿದೆ.
ಇವನ್ನು ಹೊರತುಪಡಿಸಿ ಮೈಸೂರಿನಾದ್ಯಂತ ಅನೇಕ ಪ್ರಸಿದ್ಧ ಪುರಾತನ ದೇವಾಲಯಗಳಿವೆ. ಅಂದಿನ ಮಹಾರಾಜರು ದೇವಾಲಯಗಳು, ಗುಡಿ-ಗೋಪುರಗಳನ್ನು ನಿರ್ಮಿಸಿದ್ದಾರೆ. ನಮ್ಮ ನಂಬಿಕೆ, ಆಚರಣೆಗಳನ್ನು ಉಳಿಸಿಕೊಂಡು ಬಂದಿದ್ದಾರೆ. ಮೈಸುರು ಅರಮನೆಗೆ ಬಂದಾಗ ಈ ಎಲ್ಲಾ ದೇವಾಲಯಗಳಿಗೆ ಭೇಟಿ ನೀಡುವುದನ್ನು ಮರೆಯಬೇಡಿ.