Monday, August 18, 2025
Monday, August 18, 2025

ಕಾರ್ ಇಲ್ಲದ, ಕರೆಂಟ್ ಇಲ್ಲದ ರನ್ ದ್ವೀಪ!

ಇಲ್ಲಿ ಎಲ್ಲರೂ ಕೋಟ್ಯಧಿಪತಿಗಳೇ! ಹೆದರಬೇಡಿ ಭಾರತದ ಒಂದು ರುಪಾಯಿ ಇಲ್ಲಿನ 200 ರುಪಯ್ಯಗೆ ಸಮ. 25 ಸಾವಿರ 200 ರಿಂದ ಭಾಗಿಸಿ ಎರಡು ಗಂಟೆ ಹಡಗು ವಿಹಾರಕ್ಕೆ ನೀವು ಕೊಟ್ಟದ್ದು 125 ಭಾರತೀಯ ರುಪಾಯಿ ಮಾತ್ರ!

  • ರಂಗಸ್ವಾಮಿ ಮೂಕನಹಳ್ಳಿ

ಇಂಡೋನೇಷ್ಯಾ ಎಂದೊಡನೆ ಬಾಲಿ ಎನ್ನುವುದು ಅತಿ ಸಹಜ. ಪಾಶ್ಚಾತ್ಯರ ಪಾಲಿಗೆ ಬಾಲಿ ಸ್ವರ್ಗ! ಇಲ್ಲಿ ಸ್ಥಳೀಯರಂತೆ ಬದುಕುವ ಯೂರೋಪಿಯನ್ನರಿಗೆ ಕೊರತೆ ಇಲ್ಲ. ನಾನಿಲ್ಲಿ ಹೇಳ ಹೊರಟದ್ದು ಬಾಲಿ ಬಗ್ಗೆ ಅಲ್ಲ. ರನ್ ಎನ್ನುವ ದ್ವೀಪದ ಬಗ್ಗೆ. ನೆನಪಿರಲಿ, ಇಂಡೋನೇಷ್ಯಾ ಅಂದರೆ ಕೇವಲ ಬಾಲಿ ಮಾತ್ರವಲ್ಲ. ಇಲ್ಲಿ ನೋಡಲು, ಅನುಭವಿಸಲು ಬಹಳಷ್ಟಿದೆ. ನೀವು ಪ್ರವಾಸವನ್ನು ಜೀವನ ಎನ್ನುವಂತೆ ಪ್ರೀತಿಸುವಿರಾದರೆ ನಿಮಗೆ ಹೆಚ್ಚು ಪ್ರಸಿದ್ಧವಲ್ಲದ, ಹೆಚ್ಚು ಜನರು ಹೋಗದ ಇಂಥ ಸಣ್ಣ ಪುಟ್ಟ ಜಾಗಗಳೂ ಕಣ್ಣಿಗೆ ಬೀಳುತ್ತವೆ. ಮಾನವನ ಪ್ರವೇಶದಿಂದ ಹಾಳಾಗದ ಇಂಥ ಒಂದು ಮುತ್ತುಗಳಲ್ಲಿ (Banda) ದ್ವೀಪ ಸಮೂಹದಲ್ಲಿರುವ ರನ್ ದ್ವೀಪವೂ ಒಂದು.

ಮೂರು ಕಿಲೋಮೀಟರ್ ಉದ್ದ, ಒಂದು ಕಿಲೋಮೀಟರ್ ಅಗಲ ವಿಸ್ತೀರ್ಣ ಹೊಂದಿರುವ ಈ ದ್ವೀಪ 17ನೆಯ ಶತಮಾನದಲ್ಲಿ ಪ್ರಾಮುಖ್ಯ ಪಡೆದಿತ್ತು. ಇಂದು ಕಾರು ಕರೆಂಟು ಇಲ್ಲದ ಒಂದು ಕಳೆದು ಹೋದ ದ್ವೀಪವಾಗಿ ಮಾರ್ಪಟ್ಟಿದೆ. ಇಂಥ ಕಳೆದು ಹೋಗಿದ್ದ ದ್ವೀಪವನ್ನು ಜಗತ್ತಿಗೆ ಮರು ಪರಿಚಯಿಸಿದ ಕೀರ್ತಿ ಮಹಮದ್ ಫಾಡ್ಲಿಗೆ ಸೇರಬೇಕು. ಈತ ಇಂಡೋನೇಷ್ಯಾದ ಪ್ರಸಿದ್ಧ ಛಾಯಾಗ್ರಾಹಕ, ರನ್ ದ್ವೀಪದ ಉಸಿರು ಹಿಡಿದಿಡುವ ಸ್ನಿಗ್ಧ ಸೌಂದರ್ಯ ಕ್ಯಾಮೆರಾದಲ್ಲಿ ಸೆರೆಹಿಡಿಯುವ ಸಾಹಸಕ್ಕೆ ಮುಂದಾದವನಿಗೆ ಮೊದಲ ದಿನಗಳು ಶಾಕ್! ಜನನಿಬಿಡ ಜಕಾರ್ತಾದಿಂದ ವಿದ್ಯುತ್ ಒಳಗೊಂಡಂತೆ ಯಾವುದೇ ಮೂಲ ಸೌಕರ್ಯವಿಲ್ಲದ ರನ್ ದ್ವೀಪದಲ್ಲಿ ಬದುಕುವುದಾದರೂ ಹೇಗೆ? ಎನ್ನುವ ಪ್ರಶ್ನೆ ಉದ್ಭವಿಸಿತಂತೆ. ನಂತರದ ದಿನಗಳಲ್ಲಿ ರನ್ ದ್ವೀಪದ ಸಹಜ ಸೌಂದರ್ಯ, ಪ್ರವಾಸಿಗಳಿಂದ ಹಾನಿಗೊಳಗಾಗದ ಪರಿಸರ ಇಷ್ಟವಾಗುತ್ತೆ.

run island 5

ಪುಲೌ ರನ್ (ರ್ಹುನ್ ) (Pulau Run (Rhun) ) ಎಂದು ಸ್ಥಳೀಯರು ಉಚ್ಚರಿಸುತ್ತಾರೆ. ಪುಲೌ ಎಂದರೆ ಐಲ್ಯಾಂಡ್, ದ್ವೀಪ ಎನ್ನುವ ಅರ್ಥ ಮಲಯ್ ಭಾಷೆಯಲ್ಲಿ. ಇಲ್ಲಿನ ಜನ ಮೆಜಾರಿಟಿ ಮುಸ್ಲಿಮರು, ನೋಡಿದ ತಕ್ಷಣ ನಮ್ಮ ನಾರ್ಥ್ ಈಸ್ಟ್ ಜನರನ್ನು ನೋಡಿದ ಹಾಗೆ ಆಗುತ್ತೆ. ಹೆಚ್ಚು ಎತ್ತರವೂ ಅಲ್ಲದ ತೀರಾ ಗಿಡ್ಡವೂ ಅಲ್ಲದ, ದಪ್ಪವೂ ಅಲ್ಲದ, ಸಣ್ಣವೂ ಅಲ್ಲದ ಮೈಕಟ್ಟು, ಹಳದಿ, ಬಿಳಿ ಮಿಶ್ರಿತ ಚರ್ಮ ಬಣ್ಣ . ಮಾತುಮಾತಿಗೂ ಹೂಂ ಹೂಂ ಎನ್ನುವ ಈ ಜನ ಶಾಂತಿಪ್ರಿಯರು. ಹೆಚ್ಚು ಪ್ರವಾಸಿಗರು ಬರದ ಕಾರಣ ಇನ್ನೂ ಮೋಸ, ಬೇಗ ಹಣ ಮಾಡಬೇಕೆಂಬ ಧಾವಂತದಿಂದ ಇವರು ಬಹು ದೂರ. ಉಸಿರು ಬಿಗಿಹಿಡಿದಿಡಿಸುವ ಇಲ್ಲಿನ ಸೌಂದರ್ಯ ನೋಡಲು ಪ್ರವಾಸಿಗಳೇಕೆ ಬರುತ್ತಿಲ್ಲ? ಉತ್ತರ ಬಹು ಸುಲಭ. ವಿಮಾನ ವಾರದಲ್ಲಿ ಮೂರು ದಿನ ಮಾತ್ರ. ಅದು ಪ್ರಕೃತಿ ದೇವಿಯ ಕೃಪೆ ಇದ್ದರೆ ಮಾತ್ರ. ಬಂಡ ದ್ವೀಪ ಸಮೂಹದಲ್ಲಿ ಎಲ್ಲಿ ಬೇಕಾದರೂ ಇಳಿಸುತ್ತಾರೆ. ನಂತರ ರನ್ ದ್ವೀಪ ಹೋಗಲು ಹಡಗು ಆಶ್ರಯಿಸಬೇಕಾಗುತ್ತೆ. ಇಲ್ಲಿ ಇನ್ನೊಂದು ಸಮಸ್ಯೆ ಹಡಗಿನ ವೇಳಾಪಟ್ಟಿಯದು. ಹೌದು ನಿಖರ ಸಮಯವಿಲ್ಲ. ಒಮ್ಮೆ ನಿಮ್ಮ ರನ್ ದ್ವೀಪದಲ್ಲಿ ಇಳಿಸಿದರೆ ಬೇಕೋ ಬೇಡವೋ ಕನಿಷ್ಠ ಐದು ದಿನ ನೀವು ಅಲ್ಲಿ ಬಂಧಿ! ಮತ್ತೆ ನಿಮ್ಮನ್ನು ಕರೆದು ಹೋಗಲು ಬರುವ ಸಮಯವೂ ಖೊಟ್ಟಿ!

ಪೂರ್ಣ ರನ್ ದ್ವೀಪದಲ್ಲಿ ಇರುವುದು ಎರಡೋ ಅಥವಾ ಮೂರೋ ಹೋಂ ಸ್ಟೇ, ಮ್ಯಾನ್ಹಟನ್ ಹೆಸರಿನ ಒಂದು ಹೊಟೇಲ್. ಎಲ್ಲಿಯೂ ಇದರ ಬಗ್ಗೆ ಭಿತ್ತಿ ಪತ್ರವಾಗಲೀ ಮತ್ತೇನೇ ಆಗಲಿ ಇಲ್ಲ. ಅಲ್ಲಿ ಇಳಿದ ಬಳಿಕ ಯಾರನ್ನಾದರೂ ಕೇಳಿದರೆ ಅವರು ತೋರಿಸುತ್ತಾರೆ. ಮೊದಲೇ ಕಾದಿರಿಸುವ ಅಭ್ಯಾಸ ಹೊಂದಿರುವ ಜನಕ್ಕೆ ಕಿರಿಕಿರಿ ಅನ್ನಿಸಿದರೆ ಅದು ಸಹಜ. ಇಲ್ಲಿ ಗತಕಾಲದಲ್ಲಿ ಯೂರೋಪಿಯನ್ನರು ಇದ್ದರು ಎನ್ನುವುದನ್ನು ನೆನಪಿಸಲು ಯುರೋಪಿಯನ್ ಶೈಲಿಯ ಹಲವು ಕಟ್ಟಡಗಳು ಇಂದಿಗೂ ಧೀಮಂತವಾಗಿ ನಿಂತಿವೆ.

ರನ್ ದ್ವೀಪಕ್ಕೆ ಬರುವವರು ಸಾಮಾನ್ಯರಲ್ಲ. ಅವರು ಸಾಹಸಿಗಳು. ಏಕೆಂದರೆ ದ್ವೀಪಕ್ಕೆ ಅಂಟಿಕೊಂಡು ಸಮುದ್ರಕ್ಕೆ ಮುಖಮಾಡಿ ಇರುವ 150 ಮೀಟರ್ ಎತ್ತರದ ಗೋಡೆ, 70 ಮೀಟರ್ ಎತ್ತರದ ಗೋಡೆಗಳಿವೆ. ಈ ಗೋಡೆಗಳ ಹತ್ತಿ ಸೊಂಟಕ್ಕೆ ದಾರ ಕಟ್ಟಿಕೊಂಡು ಸಮುದ್ರಕ್ಕೆ ಹಾರುವುದು ಇಲ್ಲಿ ಬಹು ಪ್ರಸಿದ್ಧ.

Depan Kampung ಅಂದರೆ ಹಳ್ಳಿಯ ಹತ್ತಿರ ಎನ್ನುವ ಅರ್ಥ ಮಲಯ್ ಭಾಷೆಯಲ್ಲಿ. ಹಳ್ಳಿಯ ಹತ್ತಿರದ ಈ ಗೋಡೆಗಳ ತಲುಪಲು ಕೂಡ ಹಡಗನ್ನೇ ಅವಲಂಬಿಸಬೇಕು. ಬೆಳಿಗ್ಗೆ ಬರುವ ಈ ಹಡಗು ಪ್ರವಾಸಿಗರನ್ನು ತುಂಬಿಕೊಂಡು ಹೋಗಿ ಎರಡು ಗಂಟೆಯಲ್ಲಿ ವಾಪಸ್ ಕರೆತರುತ್ತದೆ. ಪ್ರತಿ ಪ್ರವಾಸಿಗೆ 25000 ರುಪಯ್ಯ. ಪೂರ್ತಿ ದಿನ ಅಕ್ಕ ಪಕ್ಕದ ದ್ವೀಪ ತೋರಿಸಿ ಕರೆತರಲು 6 ಲಕ್ಷ ರುಪಯ್ಯ ಪ್ರತಿ ಪ್ರವಾಸಿಗೆ. ಇಲ್ಲಿ ಎಲ್ಲರೂ ಕೋಟ್ಯಧಿಪತಿಗಳೇ! ಹೆದರಬೇಡಿ ಭಾರತದ ಒಂದು ರುಪಾಯಿ ಇಲ್ಲಿನ 200 ರುಪಯ್ಯಗೆ ಸಮ. 25 ಸಾವಿರ 200 ರಿಂದ ಭಾಗಿಸಿ ಎರಡು ಗಂಟೆ ಹಡಗು ವಿಹಾರಕ್ಕೆ ನೀವು ಕೊಟ್ಟದ್ದು 125 ಭಾರತೀಯ ರುಪಾಯಿ ಮಾತ್ರ!

ಇಂದಿಗೆ ಜನಕ್ಕೆ ಗೊತ್ತಿಲ್ಲದ ರನ್ ದ್ವೀಪ ಹಾಗೂ ಅಮೆರಿಕದ ವಿಶ್ವವಿಖ್ಯಾತ ಮ್ಯಾನ್ಹಟನ್ ದ್ವೀಪ ( Manhattan island)ಚರಿತ್ರೆಯ ಒಂದೇ ಭಾಗವನ್ನು ಹಂಚಿಕೊಂಡಿತ್ತು ಎಂದರೆ ನಂಬುವಿರಾ? ಬನ್ನಿ ಇದರ ಒಂದಷ್ಟು ಇತಿಹಾಸ ಕೂಡ ತಿಳಿದುಕೊಳ್ಳೋಣ. . ಜಾಕಾಯಿ (nutmeg ) ಹಾಗು ಇತರೆ ಮಸಾಲಾ ಪದಾರ್ಥಗಳಿಗಾಗಿ ಡಚ್ಚರು ಇಲ್ಲಿ ರಕ್ತದ ಓಕುಳಿ ಹರಿಸಿದ್ದರು. ಸಾಂಬಾರು ಪದಾರ್ಥದ ಅನ್ವೇಷಣೆ ಮಾಡುತ್ತಾ ಬಂದವರಲ್ಲಿ ಪೋರ್ಚುಗೀಸರು ಮೊದಲಿಗರು. ಇಂಗ್ಲಿಷರು, ಡಚ್ಚರು ಹಿಂಬಾಲಿಸಿದರು. ಇಂಡೋನೇಷ್ಯಾ ದೇಶದಲ್ಲಿ ಹೇರಳವಾಗಿ ಬೆಳೆಯುವ ಜಾಕಾಯಿ 17ನೇ ಶತಮಾನದಲ್ಲಿ ಪ್ರಮುಖ ವಾಣಿಜ್ಯ ವಸ್ತುವಾಗಿತ್ತು. ಹಾಗಾಗಿ ಜಾಕಾಯಿ ಮೇಲಿನ ಹಿಡಿತ ಪ್ರತಿಷ್ಠೆ ಹಾಗು ಶಕ್ತಿಯ ಪ್ರದರ್ಶನದ ವಸ್ತುವೂ ಆಯಿತು.

run irland

ಬಂಡ ದ್ವೀಪ ಸಮೂಹದಲ್ಲಿ ಹೇರಳವಾಗಿ ಬೆಳೆಯುತ್ತಿದ್ದ ಜಾಕಾಯಿ, ಬಂಡ ದ್ವೀಪ ಸಮೂಹದ ಮೇಲಿನ ಹಿಡಿತಕ್ಕೆ ಬ್ರಿಟಿಷರು ಹಾಗೂ ಡಚ್ಚರ ನಡುವಿನ ಕದನಕ್ಕೆ ಕಾರಣವು ಆಯಿತು. ಬಂಡ ದ್ವೀಪ ಸಮೂಹದ ಬಹುತೇಕ ದ್ವೀಪಗಳ ಮೇಲೆ ಡಚ್ಚರ ಪ್ರಾಬಲ್ಯವಿತ್ತು. ರನ್ ದ್ವೀಪವೊಂದನ್ನು ಬಿಟ್ಟು. ಡಚ್ಚರು ಜಾಕಾಯಿ ಮೇಲಿನ ಹಿಡಿತಕ್ಕೆ ತಮ್ಮ ತೆಕ್ಕೆಯಲ್ಲಿ ಇದ್ದ ಅಮೆರಿಕದ Manhattan ದ್ವೀಪವನ್ನು ಬ್ರಿಟಿಷರಿಗೆ ಕೊಟ್ಟು ರನ್ ದ್ವೀಪವನ್ನು ಪಡೆದು ಕೊಳ್ಳುತ್ತಾರೆ. ಬಂಡ ದ್ವೀಪ ಸಮೂಹದಲ್ಲಿ ಪೂರ್ಣ ಹಿಡಿತ ಸಾಧಿಸಲು ಇದು ನೆರವಾಯಿತು. ಜಾಕಾಯಿ ಮೇಲೆ ತಮ್ಮ ಏಕಾಧಿಪತ್ಯ ಸಾಧಿಸಲು ಡಚ್ಚರು ಪಣ ತೊಟ್ಟಿದರು. ಜಾಕಾಯಿ ಮರವನ್ನು ತಾವು ಬಿಟ್ಟು ಇನ್ನ್ಯಾರೂ ಬೆಳೆಯಲೇ ಬಾರದು ಎನ್ನುವುದು ಅವರ ಉದ್ದೇಶವಾಗಿತ್ತು. ಡಚ್ಚರಿಗೆ ರನ್ ದ್ವೀಪದಲ್ಲಿ ಇದ್ದ ಸ್ಥಳೀಯರು ಅಡಚಣೆಯಾಗಿ ಕಂಡರು. ಹೀಗಾಗಿ ಹೆಚ್ಚು ಸದ್ದಿಲ್ಲದೇ ಸಹಸ್ರಾರು ಮೂಲನಿವಾಸಿಗಳ ಮಾರಣಹೋಮ ನಡೆದು ಹೋಯಿತು.

17ನೆಯ ಶತಮಾನದಲ್ಲಿ ಜಾಕಾಯಿ ಡಚ್ಚರು ಮಾತ್ರ ಬೆಳೆಯುತಿದ್ದರು. ಅದನ್ನು ಯೂರೋಪಿನ ದೇಶಗಳಿಗೆ ರಪ್ತು ಮಾಡುತಿದ್ದರು. ಎಲ್ಲರೂ ಇವರು ಹೇಳಿದ ಬೆಲೆಗೆ ಕೊಳ್ಳಬೇಕಾಗಿತ್ತು. ಡಚ್ಚರು ತಮ್ಮ ವಶದಲ್ಲಿ ಇದ್ದ ಮ್ಯಾನ್ಹಟನ್ ದ್ವೀಪವನ್ನು ಜಾಕಾಯಿ ಮೇಲಿನ ಹಿಡಿತಕ್ಕೆ ಬ್ರಿಟಿಷರಿಗೆ ಬಿಟ್ಟು ಕೊಟ್ಟರು ಎನ್ನುವುದು ಇಂದಿಗೆ ಹಾಸ್ಯಾಸ್ಪದ ಅನ್ನಿಸುತ್ತೆ. ನ್ಯೂಯಾರ್ಕ್ ಸಿಟಿಗೆ ಅಂಟಿಕೊಂಡಿರುವ ಮ್ಯಾನ್ಹಟನ್ ಹೆಸರು ಇಂದು ಜಗತ್ತಿನಲ್ಲಿ ಕೇಳದವರು ವಿರಳ. ರನ್ ದ್ವೀಪದ ಹೆಸರು ಕೇಳಿದವರು ವಿರಳ. ಇವೆರಡು ಒಂದು ಕಾಲಘಟ್ಟದಲ್ಲಿ ಒಂದು ಪಡೆಯಲು ಇನ್ನೊಂದು ಬಿಕರಿಯಾಗಿದ್ದವು. ಆ ಅಷ್ಟೇ ಅಲ್ಲ. ಆ ಕಾಲಘಟ್ಟದಲ್ಲಿ ರನ್ ದ್ವೀಪ ಎಂಬುದು ಮ್ಯಾನ್ಹಟನ್ (ನ್ಯೂ ಆಂಸ್ಟರ್ಡ್ಯಾಮ್ , ಡಚ್ಚರು ಮ್ಯಾನ್ಹಟನ್ ಗೆ ಇಟ್ಟಿದ್ದ ಡಚ್ ಹೆಸರು) ದ್ವೀಪಕ್ಕಿಂತ ಹೆಚ್ಚು ಪ್ರಸಿದ್ಧಿ ಹಾಗೂ ಪ್ರಾಮುಖ್ಯ ಪಡೆದಿತ್ತು.

ನೀವು ಸಾಹಸ ಪ್ರಿಯರು , ಪ್ರಕೃತಿ ಪ್ರಿಯರು , ಶಾಂತಿ ಪ್ರಿಯರು ಆಗಿದ್ದರೆ ರನ್ ದ್ವೀಪಕ್ಕೆ ಹೋಗಿ ಬನ್ನಿ ನೀವು ಕಳೆಯುವ ಹಣಕ್ಕಿಂತ ಹೆಚ್ಚು ಅನುಭವ ಗಳಿಸಿ ಬರುತ್ತೀರಿ ಖಂಡಿತ!

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ಕೈ ಸವೆಯುವವರೆಗೂ ನಿರಂತರ ಬರೆಯಲು ಸೈ !

Read Previous

ಕೈ ಸವೆಯುವವರೆಗೂ ನಿರಂತರ ಬರೆಯಲು ಸೈ !

ವಿಮಾನದಲ್ಲಿ ಮುಂಭಾಗದ ಆಸನಗಳು ಸುರಕ್ಷಿತವೇ ?

Read Next

ವಿಮಾನದಲ್ಲಿ ಮುಂಭಾಗದ ಆಸನಗಳು ಸುರಕ್ಷಿತವೇ ?