Monday, August 18, 2025
Monday, August 18, 2025

ಉಳಿದ ದ್ವೀಪ ರಾಷ್ಟ್ರಗಳಿಗಿಂತ ಹೆಚ್ಚಿನ ಸೊಬಗಿದ್ದರೂ, ಅದು 'ಮಡಗಿದಂಗೆ ಇರು'ವುದೇಕೆ?

ಸೀಶೆಲ್ಸ್ ಅಂದ್ರೆ ಅನೇಕರು ಹನಿಮೂನ್ ಸ್ಥಳ ಎಂದು ಭಾವಿಸಿದಂತಿದೆ. ಆದರೆ ಸೆಶೆಲ್ಸ್ ತನ್ನ ನೈಸರ್ಗಿಕ ಸೌಂದರ್ಯ, ಚಿಟ್ಟೆ ನೀಲಿ ಸಮುದ್ರ ಮತ್ತು ವಿಶಿಷ್ಟ ದ್ವೀಪ ಸಮೂಹ ಮತ್ತು ನೈಸರ್ಗಿಕ ಸೌಂದರ್ಯದಿಂದಾಗಿ ಹಲವಾರು ಅಂತಾರಾಷ್ಟ್ರೀಯ ಈವೆಂಟ್‌ಗಳಿಗೆ, ಸಿನಿಮಾ ಶೂಟಿಂಗ್‌ಗಳಿಗೆ ಮತ್ತು ವಿಶ್ವ ಸುಂದರಿಯರ ಸ್ಪರ್ಧೆಗಳಿಗೆ ಹೊಂದಾಣಿಕೆಯ ವೇದಿಕೆಯಾಗಿ ಪ್ರಸಿದ್ಧವಾಗಿದೆ.

ಸೀಶೆಲ್ಸ್ (Seychelles) ಎಂಬ ಪುಟ್ಟ ಮತ್ತು ಅತ್ಯಂತ ಸುಂದರ, ನಯನಮನೋಹರ ದ್ವೀಪ ರಾಷ್ಟ್ರಕ್ಕೆ ಭೇಟಿ ನೀಡಬೇಕು ಎಂಬುದು ನನ್ನ ಬಹುದಿನಗಳ ಕನಸಾಗಿತ್ತು. ಕಳೆದ ಐದು ವರ್ಷಗಳಿಂದ ಅದು ನನ್ನ ‘ಬಕೆಟ್ ಲಿಸ್ಟ್’ನಲ್ಲಿತ್ತು. 1996 ರಲ್ಲಿ ಕನ್ನಡ ಪತ್ರಿಕೆಗಳು ಈ ದೇಶದ ಹೆಸರನ್ನು ಮುಖಪುಟದಲ್ಲಿ ಒಂದು ವಾರ ಕಾಲ ಬರೆದಿದ್ದವು. ಕಾರಣ ಇಷ್ಟೇ, ಅಮಿತಾಬ್ ಬಚ್ಚನ್ ಅವರು ಬೆಂಗಳೂರಿನಲ್ಲಿ ಮಿಸ್ ವರ್ಲ್ಡ್ ಸ್ಪರ್ಧೆಯನ್ನು ಏರ್ಪಡಿಸಿದಾಗ ಭಾರಿ ಪ್ರತಿಭಟನೆ ವ್ಯಕ್ತವಾದ ಹಿನ್ನೆಲೆಯಲ್ಲಿ, ನಂತರ ಬೇರೆ ದಾರಿಯಿಲ್ಲದೇ, ಆ ಸ್ಪರ್ಧೆಯನ್ನು ಸೀಶೆಲ್ಸ್ ಗೆ ವರ್ಗಾಯಿಸಿದ್ದರು. ನಾನು ಆ ದೇಶದ ಹೆಸರನ್ನು ಮೊದಲು ಕೇಳಿದ್ದು ಆಗಲೇ.

ಜಗತ್ತಿನ ಭೂಪಟದಲ್ಲಿ ಸೀಶೆಲ್ಸ್ ನ್ನು ಗುರುತಿಸುವುದು ಸಹ ಕಷ್ಟ. ಆ ದೇಶದ ಹೆಸರನ್ನು ಕೇಳಿದವರು ಸಹ ಕಮ್ಮಿಯೇ. ನನ್ನ ಆತ್ಮೀಯ ಸ್ನೇಹಿತರೊಬ್ಬರಿಗೆ ನಾನು ಸೀಶೆಲ್ಸ್ ಗೆ ಹೋಗುತ್ತಿದ್ದೇನೆ ಎಂದಾಗ, ‘ಏನು ಸೆಷನ್ಸ್ ಕೋರ್ಟ್ ಗೆ ಹೋಗುತ್ತಿದ್ದೀರಾ?’ ಎಂದು ಕೇಳಿದ್ದರು. ‘ಇದೇನು ಸರ್, ಇಂಥದ್ದೊಂದು ದೇಶ ಇದೆ ಎಂಬುದೇ ಗೊತ್ತಿರಲಿಲ್ಲ’ ಎಂದು ಅವರು ಉದ್ಗರಿಸಿದರು. ಬೆಂಗಳೂರಿನಿಂದ ನೇರ ವಿಮಾನ ಸಂಚಾರ ಇಲ್ಲ. ಮುಂಬೈಯಿಂದ ನಾಲ್ಕೂವರೆ ಗಂಟೆ ಪಯಾಣ. ಸಮುದ್ರವನ್ನು ನೋಡಬೇಕೆಂದರೆ ಸೀಶೆಲ್ಸ್ ಗೆ ಬರಬೇಕು ಎಂಬ ಮಾತಿದೆ. ಇಂಗ್ಲೀಷಿನಲ್ಲಿ ಶಬ್ದಾಲಂಕಾರಕ್ಕೆ ಉದಾಹರಣೆಯಾಗಿ, She sells seashells on the sandy seashore of Seychelles ಎಂದು ಹೇಳುವುದನ್ನು ಕೇಳಿರಬಹುದು.

Seychelles 5

ಸೀಶೆಲ್ಸ್ ಅಂದ್ರೆ ಅನೇಕರು ಹನಿಮೂನ್ ಸ್ಥಳ ಎಂದು ಭಾವಿಸಿದಂತಿದೆ. ಆದರೆ ಸೆಶೆಲ್ಸ್ ತನ್ನ ನೈಸರ್ಗಿಕ ಸೌಂದರ್ಯ, ಚಿಟ್ಟೆ ನೀಲಿ ಸಮುದ್ರ ಮತ್ತು ವಿಶಿಷ್ಟ ದ್ವೀಪ ಸಮೂಹ ಮತ್ತು ನೈಸರ್ಗಿಕ ಸೌಂದರ್ಯದಿಂದಾಗಿ ಹಲವಾರು ಅಂತಾರಾಷ್ಟ್ರೀಯ ಈವೆಂಟ್‌ಗಳಿಗೆ, ಸಿನಿಮಾ ಶೂಟಿಂಗ್‌ಗಳಿಗೆ ಮತ್ತು ವಿಶ್ವ ಸುಂದರಿಯರ ಸ್ಪರ್ಧೆಗಳಿಗೆ ಹೊಂದಾಣಿಕೆಯ ವೇದಿಕೆಯಾಗಿ ಪ್ರಸಿದ್ಧವಾಗಿದೆ. Miss World, Miss Tourism, Miss Intercontinental, Miss Earth ಮೊದಲಾದ ಸ್ಪರ್ಧೆಗಳ ಭಾಗವಾಗಿ ಅಥವಾ ಸಂಬಂಧಿತ ಕಾರ್ಯಕ್ರಮಗಳಿಗೆ ಸೀಶೆಲ್ಸ್ ಪ್ರಧಾನ ರಂಗಸ್ಥಳ. ಸುಮಾರು ಒಂದು ಲಕ್ಷ ಇಪ್ಪತ್ತು ಸಾವಿರ ಜನಸಂಖ್ಯೆಯನ್ನು ಹೊಂದಿರುವ ಸೀಶೇಲ್ಸ್, ಇಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರವಾಸೋದ್ಯಮದ Hot Destination!

ಉಪ್ಪಿಟ್ಟು ರವೆಯಂತಿರುವ ಬಿಳಿ ಮರಳ ಕಣಗಳ ಕಡಲ ಕಿನಾರೆ, ನೀಲಿ ನೀರಿನ ಸಮದ್ರ ಹಾಗೂ ತೆಂಗಿನಮರಗಳ ಹುಯ್ದಾಟಗಳ ಹಿನ್ನೆಲೆಯಲ್ಲಿ ಸಿದ್ಧಗೊಂಡ ಕ್ಯಾನ್ವಾಸ್ ನಂತೆ ತೋರುವ ಸೀಶೇಲ್ಸ್, ಅಗಣಿತ ಅಚ್ಚರಿಗಳ ಸಾಗರ!

ಗೂಗಲ್ ಮ್ಯಾಪಿನಲ್ಲಿ ಸೀಶೆಲ್ಸ್ ಎಂದು ಟೈಪು ಮಾಡಿದರೆ, ಸೀಶೆಲ್ಸ್ ನ್ನು ಅಗಲಿಸಿ ಅಗಲಿಸಿ, ಪಿಂಚ್ ಮಾಡಿ ಮಾಡಿ ನೋಡಬೇಕು. ಅಷ್ಟು ಪುಟ್ಟ ದೇಶವಿದು. ಹಿಂದೂ ಮಹಾಸಾಗರದ ಮಧ್ಯದಲ್ಲಿ, ಮಡಗಾಸ್ಕರ್‌ನ ವಾಯುವ್ಯಕ್ಕೆ 400 ಕಿ.ಮೀ ಮತ್ತು ಪೂರ್ವ ಆಫ್ರಿಕಾದ ಕರಾವಳಿಯಿಂದ 1000 ಕಿ.ಮೀ ದೂರದಲ್ಲಿರುವ ಸೀಶೆಲ್ಸ್, 115 ದ್ವೀಪಗಳ ಪ್ರಾಚೀನ ದ್ವೀಪಸಮೂಹ. ಸೀಶೆಲ್ಸ್ ಬೀಚುಗಳು ಪ್ರಕೃತಿಯ ಕಲಾತ್ಮಕತೆಯ ಶ್ರೇಷ್ಠ ನಿದರ್ಶನ ಎಂಬುದರಲ್ಲಿ ಎರಡು ಮಾತಿಲ್ಲ. ಅಚ್ಚ ಬಿಳಿ ಮತ್ತು ಗುಲಾಬಿ ಬಣ್ಣದ ಮರಳು ಮತ್ತು ಸ್ಫಟಿಕ ಸ್ಪಷ್ಟ ನೀರು ಮತ್ತು ನೀಲಿ ನೀರಿನ ಕಡಲು ಎಂಥವರನ್ನೂ ಮೋಡಿ ಮಾಡುತ್ತದೆ. ಸೀಶೆಲ್ಸ್ ನ್ನು ಅದ್ಯಾವನು ಭೂಮಿ ಮೇಲಿನ ಸ್ವರ್ಗ, ಸಾಗರದ ನಂದನವನ, ಜಗತ್ತಿನ ಸರ್ವಸುಂದರ ಕಡಲ ಕಿನಾರೆ … ಎಂದೆಲ್ಲ ಕರೆದನೋ, ಆ ಎಲ್ಲ ವಿಶೇಷಣಗಳೂ ನಿಜವೇ. ಕೆಲವು ಬೀಚುಗಳನ್ನು ನೋಡಿದಾಗ ಈ ಉಪಮೆಗಳೆಲ್ಲ under statement ಎಂದು ಅನಿಸುವಷ್ಟು ಸುಂದರವಾಗಿವೆ.

Seychelles 4

ಸೀಶೆಲ್ಸ್‌ನ ಹಲವು ಬೀಚುಗಳು ಪ್ರಪಂಚದಲ್ಲಿಯೇ ಅಪರೂಪವಾದ ಗ್ರಾನೈಟ್ ಬಂಡೆಗಳ ತಟಗಳಿಂದ ಕೂಡಿವೆ. ಈ ಬಂಡೆಗಳು ಲಕ್ಷಾಂತರ ವರ್ಷಗಳಷ್ಟು ಹಳೆಯವು ಮತ್ತು ನೀರಿಂದ ನಿತ್ಯವೂ ತೊಳೆಸಿಕೊಂಡು ವಿಶಿಷ್ಟ ಆಕೃತಿಗಳನ್ನು ಪಡೆದುಕೊಂಡಿವೆ. ಅವು ತಮ್ಮ ಅನನ್ಯ ರೂಪದಿಂದ ನೈಸರ್ಗಿಕ ಶಿಲ್ಪಗಳಂತೆ, ಅನನ್ಯ ಕಲಾಕೃತಿಗಳಂತೆ ಕಾಣುತ್ತವೆ. ಸೀಶೆಲ್ಸ್ ನ ಹಲವು ಬೀಚುಗಳು, ಕಡಲ ಕಪ್ಪೆ ಮತ್ತು ಆಮೆಗಳ ಮೊಟ್ಟೆ ಇಡುವ ಅಪರೂಪದ ಸ್ಥಳಗಳಾಗಿವೆ. ಮುನ್ನೂರು - ನಾನೂರು ವರ್ಷ ಜೀವಿಸುವ ಅಲ್ದಬ್ರಾ ಜೈಂಟ್ ಕಡಲಾಮೆ ಇಲ್ಲಿನ ಬೀಚುಗಳಲ್ಲಿ ಆರಾಮವಾಗಿ ಅಲೆದಾಡುವುದನ್ನು ಕಣ್ತುಂಬಿಕೊಳ್ಳಬಹುದು.

ಸೀಶೆಲ್ಸ್ ಬಗ್ಗೆ living dream, a paradise on Earth, and a place where time stands still ಎಂದು ವರ್ಣಿಸುವುದನ್ನು ಕೇಳಿದ್ದೆ. ಇವೆಲ್ಲ ಟ್ರಾವೆಲ್ ಬ್ರೋಷರ್ ಪದಪುಂಜಗಳು ಎಂದು ನನ್ನಷ್ಟಕ್ಕೆ ಉಪೇಕ್ಷೆ ಮಾಡಿದ್ದೆ. ಆದರೆ ಸೀಶೆಲ್ಸ್ ನ್ನು ಮೇಲಿಂದ ನೋಡಿದಾಗ ಆದ ಅನುಭವ ವರ್ಣನಾತೀತ. ಸೀಶೆಲ್ಸ್‌ನ ನೂರಕ್ಕೂ ಹೆಚ್ಚು ಬೀಚ್‌ಗಳನ್ನು ನೋಡಿದರೆ, ಒಂದೊಂದು ಬೀಚ್‌ ತನ್ನದೇ ಆದ ಛಾಯೆ, ಆಕೃತಿ, ನೀರಿನ ಬಣ್ಣದಿಂದ ಗಮನ ಸೆಳೆಯುತ್ತದೆ. ಸೀಶೆಲ್ಸ್‌ನ ಸಮುದ್ರಕ್ಕೆ ನೀಲಿಗಾಜಿನ್ನು ಹೊದಿಸಿದಂತೆ ಕಾಣುತ್ತದೆ. ಮೇಲಿಂದ ನೋಡಿದಾಗ ಸಮುದ್ರದ ತಳ ಭಾಗದಲ್ಲಿ ಹವಳದ ಬಂಡೆಗಳು, ಕಡಲ್ಮೀನುಗಳ ಆವಾಸ ಸ್ಥಳಗಳು, ಮರಳು ಬಿಳಿಯ ಪ್ರದೇಶ ಸ್ಪಷ್ಟವಾಗಿ ಗೋಚರಿಸುತ್ತವೆ. ಸೀಶೆಲ್ಸ್ ನೋಡುವುದೆಂದರೆ, ಕಣ್ಣಿಗೆ ಹಬ್ಬದ ಹೂವಿನ ಬಣ್ಣದ ಓಕುಳಿ, ಪ್ರಕೃತಿಯ ಸಮರ್ಪಿತ ನಕ್ಷೆಯ ತೋರಣ, ಕಡಲ ಚಿತ್ತಾರದ ಜಲಮಣಿದರ್ಪಣ, ಸಮುದ್ರದ ಮಧ್ಯದಲ್ಲಿ ಅಲ್ಲಲ್ಲಿ ಅವತರಿಸಿದ ಪುಟ್ಟ ಹಸಿರು ದ್ವೀಪಗಳೆಂಬ ಧರೆಯ ನಕ್ಷತ್ರ... ಸೀಶೆಲ್ಸ್ ಕೇವಲ ಭೌಗೋಳಿಕ ದೃಶ್ಯವಲ್ಲ. ಅದು ಪ್ರಕೃತಿಯ ಅತ್ಯುನ್ನತ ಕಲಾಕೃತಿಯ ಅನುಭವ. ಅದು ಪರಿಪೂರ್ಣ ನೈಸರ್ಗಿಕ ಕಲಾಲೋಕ..!

ಇವೆಲ್ಲ ಸರಿಯೇ. ಇಷ್ಟಾಗಿಯೂ ಸೀಶೆಲ್ಸ್ ಶಾಂತ. ಅಲ್ಲಿನ ಮೀನು ಮಾರುಕಟ್ಟೆಯೂ ಶಾಂತ. ಎಲ್ಲೂ ಜನಜಂಗುಳಿ ಇಲ್ಲ. ಸಾಮಾನ್ಯವಾಗಿ ವಿಶ್ವದ ಯಾವುದೇ ಬೀಚಿಗೆ ಹೋದರೂ ಗೌಜು-ಗದ್ದಲ ಮತ್ತು ಕಣ್ಣಿಗೆ ರಾಚುವ ಜನಜಂಗುಳಿಯಿಂದ ಪಾರಾಗುವುದು ಕಷ್ಟ. ಜತೆಗೆ ವಿಚಿತ್ರ ವಾಸನೆ. ಆದರೆ ಸೀಶೆಲ್ಸ್ ಬೀಚು ವಿಶೇಷ ಅನಿಸುವುದು ಇವೆಲ್ಲವುಗಳಿಂದ ಮುಕ್ತವಾಗಿರುವುದಕ್ಕೆ. ಅಲ್ಲಿನ ಎಂಥ ಮೋಹಕ ಮತ್ತು ಪ್ರಸಿದ್ಧ ಬೀಚಿಗೆ ಹೋದರೂ ನೂರು-ಇನ್ನೂರು ಮಂದಿಗಿಂತ ಹೆಚ್ಚು ಜನ ಇರುವುದಿಲ್ಲ. ಎಲ್ಲೂ ಕೆಟ್ಟ ವಾಸನೆ ಇಲ್ಲ. ಬಿಯರು ಬಾಟಲಿ ವೀರರ ವಿಜೃಂಭಣೆ ಇಲ್ಲ. ಎಲ್ಲೆಡೆ ನಿರ್ಮಲ, ಪ್ರಶಾಂತ ವಾತಾವರಣ. ಜಗತ್ತಿನ ಉಳಿದೆಲ್ಲ ಬೀಚುಗಳಿಗಿಂತ ಸೀಶೆಲ್ಸ್ ಬೀಚುಗಳು ಭಿನ್ನವಾಗಿರುವುದು ಇದೊಂದೇ ಕಾರಣಕ್ಕೆ.

Seychelles 1

ಸೀಶೆಲ್ಸ್ ನ ಅನೇಕ ಬೀಚುಗಳು 'ನಿಮಗಾಗಿ ಮಾತ್ರ' ಎನಿಸುವ ಅನುಭವವನ್ನು ನೀಡುತ್ತವೆ. ಅಂಥ ಬೀಚುಗಳು ಹತ್ತು - ಹದಿನೈದು ಜನರಿಗೆ ಸೀಮಿತ. ಇಡೀ ಬೀಚು ನಮಗಾಗಿ ಕಾಯ್ದಿರಿಸಿದ್ದಾರೇನೋ ಅಂತ ಅನಿಸುವುದುಂಟು. ಇನ್ನು ಕೆಲವು ಬೀಚುಗಳಲ್ಲಿ ಜನರೇ ಇರುವುದಿಲ್ಲ. ಅದು ನಮ್ಮನ್ನು ಎದುರು ನೋಡುತ್ತಿರುವಂತೆ ಅನಿಸುವುದುಂಟು. ಯಾವ ಬೀಚಿಗೆ ಹೋದರೂ ಸಮುದ್ರದ ಅಲೆಗಳ ಅಬ್ಬರವಿಲ್ಲ. 'ಇಡೀ ಊರಿಗೆ ನಾನೇ ರಾಜ' ಎನಿಸುವಂತೆ, ಇಡೀ ದ್ವೀಪವೇ ನನ್ನದು ಎಂಬ ಭಾವನೆ ಬರುವುದುಂಟು. ಕಾರಣ ಕೆಲವೊಂದು ದ್ವೀಪಕ್ಕೆ ಹೋದರೆ ನಮ್ಮ ಹೊರತಾಗಿ ಬೇರೆ ಯಾರೂ ಇರುವುದಿಲ್ಲ. ಹಾಗಂತ ಅವು ಪಾಳು ಬಿದ್ದ ದ್ವೀಪಗಳೇನೂ ಅಲ್ಲ. ಅವು ಪ್ರಕೃತಿಯ ಸರ್ವ ಸೊಬಗನ್ನು ಹೊತ್ತ ಅತಿ ಸುಂದರ ದ್ವೀಪಗಳು. ನಿತ್ಯಾನಂದ ನೋಡಿದ್ದರೆ ಅವುಗಳನ್ನು ಖರೀದಿಸದೇ ಬಿಡುತ್ತಿರಲಿಲ್ಲ. 'ಎರಡನೇ ಕೈಲಾಸ'ವನ್ನು ಸೃಷ್ಟಿಸಿಬಿಡುತ್ತಿದ್ದ!

ಇಂಥ ಅದ್ಭುತ ದೇಶವನ್ನು ಇಟ್ಟುಕೊಂಡು ಸೀಶೆಲ್ಸ್ ಟೂರಿಸಂ ತನ್ನ ದೇಶವನ್ನು ಸರಿಯಾಗಿ ಮಾರ್ಕೆಟ್ ಮಾಡುತ್ತಿಲ್ಲವಾ? ಹೊರ ಜಗತ್ತಿಗೆ ಶೋಕೇಸ್ ಮಾಡಲು ಸೋತಿದೆಯಾ? ಜಗತ್ತಿನ ಒಂದು ಅದ್ಭುತ ಮತ್ತು ಅನೂಹ್ಯ ಪ್ರವಾಸಿ ತಾಣ ಎಂದು ಕರೆಯಿಸಿಕೊಂಡ ಸೀಶೆಲ್ಸ್ ಎಡವಿರುವುದಾದರೂ ಎಲ್ಲಿ? ಪಕ್ಕದ ಮಾಲ್ಡೀವ್ಸ್, ಮಾರಿಷಸ್ ದೇಶಗಳು ಪ್ರವಾಸೋದ್ಯಮದಲ್ಲಿ ಈಗಾಗಲೇ ಪ್ರವಾಸೋದ್ಯಮದ ಗೌರಿಶಂಕರವನ್ನು ಏರಿದ್ದರೆ, ಸೀಶೆಲ್ಸ್ ಇನ್ನೂ ಏಕೆ ಬೇಸ್ ಕ್ಯಾಂಪ್ ನಲ್ಲಿದೆ? ಇದಕ್ಕೆ ಸೀಶೆಲ್ಸ್ ನ ರಾಜಕೀಯ ಇಚ್ಛಾಶಕ್ತಿಯ ಕೊರತೆಯಾ? ಹಣಕಾಸಿನ ಕೊರತೆಯಾ? ಎಲ್ಲ ಇದ್ದೂ ಸೀಶೆಲ್ಸ್ ತನ್ನನ್ನು ಪ್ರಮೋಟ್ ಮಾಡಿಕೊಳ್ಳಲು ಸೋತಿರುವುದಾದರೂ ಹೇಗೆ? ದುಬೈಯಂಥ ಪುಟ್ಟ ನಗರ (ಅದು ಪ್ರತ್ಯೇಕ ದೇಶ ಕೂಡ ಅಲ್ಲ) ಇಂದು ವಿಶ್ವದ ಗಮನವನ್ನು ಸೆಳೆಯುತ್ತಿದೆ. ಆದರೆ ಅದ್ಭುತವೆನಿಸುವ ಪ್ರಾಕೃತಿಕ ವೈಭವ ಮತ್ತು ಸಂಪತ್ತನ್ನು ಇಟ್ಟುಕೊಂಡು ಸೀಶೆಲ್ಸ್ ತೆಪ್ಪಗಿರಲು ಕಾರಣವೇನು? 'ಸೀಶೆಲ್ಸ್ ನಲ್ಲಿ ಸಮುದ್ರಕ್ಕೆ ಮುಖ ಮಾಡಿರುವ ವಿಲ್ಲಾಗಳು ಮಾರಾಟಕ್ಕಿವೆ' ಎಂಬ ಸಣ್ಣ ಜಾಹೀರಾತನ್ನು ದುಬೈ, ಮುಂಬೈ ಪತ್ರಿಕೆಗಳಲ್ಲಿ ಕೊಟ್ಟರೂ ಸಾಕು, ನಾಳೆಯೇ ಸೀಶೆಲ್ಸ್ ಭರ್ತಿ. ಆದರೂ ಅಲ್ಲಿನ ಸರಕಾರ ಹಾಗೇಕೆ ಮಾಡುತ್ತಿಲ್ಲ? ತನ್ನ ದೇಶವನ್ನು ಜಗತ್ತಿಗೆ ಪರಿಚಯಿಸುವ ಇರಾದೆ ಅಲ್ಲಿನ ಸರಕಾರಕ್ಕಿಲ್ಲವಾ?

Seychelles 2

ಈ ಪ್ರಶ್ನೆಗಳಿಗೆ ಉತ್ತರವನ್ನು ಹುಡುಕುತ್ತಾ ಹೊರಟಾಗ ನನಗೆ ಆಶ್ಚರ್ಯ ಕಾದಿತ್ತು. ಈ ಪ್ರಶ್ನೆಗಳಿಗೆ ಉತ್ತರವನ್ನು ಹುಡುಕುತ್ತಾ ಹೊರಟಾಗ ನನಗೆ ಆಶ್ಚರ್ಯ ಕಾದಿತ್ತು. ಸೀಶೆಲ್ಸ್ ಬಗ್ಗೆ ಮತ್ತಷ್ಟು ಗರ್ವ, ಹೆಮ್ಮೆ ಮೂಡಿತು. ಈ ಮಾರುಕಟ್ಟೆ ಯುಗದಲ್ಲಿ ಒಂದು ದೇಶ ಎಲ್ಲಕ್ಕಿಂತ ಭಿನ್ನವಾಗಿ ಯೋಚಿಸುತ್ತಿರುವ ರೀತಿ ಕಂಡು ಅಭಿಮಾನ ಮೂಡಿತು. ಅದನ್ನು ನಿಮಗೆ ಮುಂದೆ ಹೇಳುತ್ತೇನೆ.

Vishweshwar Bhat

Vishweshwar Bhat

Editor in Chief

ಕೈ ಸವೆಯುವವರೆಗೂ ನಿರಂತರ ಬರೆಯಲು ಸೈ !

Read Previous

ಕೈ ಸವೆಯುವವರೆಗೂ ನಿರಂತರ ಬರೆಯಲು ಸೈ !

ವಿಮಾನದಲ್ಲಿ ಮುಂಭಾಗದ ಆಸನಗಳು ಸುರಕ್ಷಿತವೇ ?

Read Next

ವಿಮಾನದಲ್ಲಿ ಮುಂಭಾಗದ ಆಸನಗಳು ಸುರಕ್ಷಿತವೇ ?