ದೇಶದ ಚರಿತ್ರೆಯನ್ನು ತೆರೆದಿಡುವ ಸ್ಲೋಗನ್ಸ್...
ಈಗಂತೂ ಪ್ರತಿ ದೇಶವೂ ತನ್ನ ಗುಣಲಕ್ಷಣವನ್ನು ಸ್ಲೋಗನ್ ಮೂಲಕವೇ ಸಾರಲು ಉತ್ಸುಕವಾಗಿದೆ. ಪ್ರವಾಸೋದ್ಯಮದ ಜಾಹೀರಾತಾಗಿದೆ ಸ್ಲೋಗನ್ಗಳು. ಯಾವುದೇ ದೇಶವನ್ನು ಅರಿಯಬೇಕಾದರೆ ಮೊದಲು ಅದರ ಪರಿಮಳವನ್ನು ಆಘ್ರಾಣಿಸಬೇಕು ಎನ್ನುವ ಮಾತು ಈಗ ಹಳತಾಗಿದೆ. ʼಕಚ್ ನಹೀ ದೇಖಾ ತೊ ಕುಚ್ ನಹೀ ದೇಖಾʼ ಎನ್ನುತ್ತಾ ಗಟ್ಟಿ ದನಿಯಲ್ಲಿ ಅಮಿತಾಬ್ ಹೇಳುವಾಗಲೇ ಒಂದು ಕಾಲು ಗುಜರಾತಿನ ಕಡೆಗೆ ಹೊಸ್ತಿಲು ದಾಟಿರುತ್ತದೆ. ಗುಣ ನೋಡಿ ಹೆಣ್ಣು ಕೊಡು ಎನ್ನುವುದು ಇನ್ನು ಮುಂದೆ ಸ್ಲೋಗನ್ ಕೇಳಿ ದೇಶ ಸುತ್ತು ಎಂದೂ ಆಗಬಹುದು.
- ಅಂಜಲಿ ರಾಮಣ್ಣ
ದಶಕದ ಜತೆಗೊಂದಿಷ್ಟು ವರ್ಷಗಳ ಹಿಂದೆ ಲಂಡನ್‌ಗೆ ಮೊದಲ ಬಾರಿ ಹೋದಾಗ ರಸ್ತೆರಸ್ತೆಗಳಲ್ಲೂ ಕಾಣುತ್ತಿದ್ದ ಸೂಚನಾ ಫಲಕ ʼKeep calm and carry onʼ ವಾಹ್ ಎಷ್ಟು ಚಂದದ ಉಪದೇಶ ಎಂದು ಮೆಚ್ಚಿದ್ದೆ. ಅಲ್ಲಿನ ಟ್ಯೂಬ್ ಸ್ಟೇಷನ್ ಗಳಲ್ಲಿ (ಮೆಟ್ರೋ ರೈಲು ನಿಲ್ದಾಣ) ವಿಪರೀತವಾಗಿ ಆಕರ್ಷಿಸಿದ್ದು ಎಡೆಬಿಡದೆ ಬರುವ ಅನೌನ್ಸ್ ಮೆಂಟ್ ʼMind the gapʼ. ರೈಲು ನಿಂತಾಗ ಅದರ ಬಾಗಿಲಿಗೂ ಪ್ಲಾಟ್ ಫಾರ್ಮಿಗೂ ನಡುವೆ ಇರುವ ಅಂತರದ ಬಗ್ಗೆ ಪ್ರಯಾಣಿಕರ ಗಮನ ಸೆಳೆಯಲು ಇಂಥ ಎಚ್ಚರಿಕೆ ಧ್ವನಿ ಬರುತ್ತಲೇ ಇರುತ್ತದೆ. ಹಳದಿ ಬಣ್ಣದ ಗೋಡೆಗಳ ಮೇಲೆ ಈ ವಾಕ್ಯವನ್ನು ಬರೆಯಲಾಗಿದೆ. ಮುಂದಿನ ಎಷ್ಟೋ ಭೇಟಿಗಳಲ್ಲಿ ಮಾಡಲು ಕೂಡಲೇ ಏನೂ ತೋಚದಿದ್ದಾಗ ರೈಲು ನಿಲ್ದಾಣಗಳ ಈ ಘೋಷಣೆ ಕೇಳಲೆಂದೇ ರೈಲಿನಲ್ಲಿ ಅತ್ತಿಂದಿತ್ತ ಓಡಾಡಿದ್ದೀನಿ.

ಮುಂದೆ ಯಾವುದೇ ದೇಶಕ್ಕೆ ಹೋದರೂ ಅಲ್ಲಿನ ಸ್ಲೋಗನ್ ಅನ್ನು ಗಮನಿಸಲು ಶುರುವಿಟ್ಟೆ. ಆದರೆ ಅದಕ್ಕೂ ಮೊದಲು ಈ ಸ್ಲೋಗನ್ ಗಳು ಹುಟ್ಟುವುದಾದರೂ ಯಾಕೆ, ಹೇಗೆ, ಎಲ್ಲಿಂದ, ಯಾರಿಂದ ಎನ್ನುವ ಕುತೂಹಲ ತಣಿಸಿಕೊಳ್ಳಬೇಕಿತ್ತು. ಎರಡನೆಯ ಮಹಾಯುದ್ಧದ ಸಮಯದಲ್ಲಿ ಪ್ರಜೆಗಳಲ್ಲಿ ಧೈರ್ಯ ತುಂಬಲು ಮತ್ತು ಅವರುಗಳು ಖಿನ್ನತೆಗೆ ಜಾರದಂತೆ ಗಟ್ಟಿಯಾಗಿ ನಿಲ್ಲಲು 27 ಜುಲೈ 1939ರಂದು ಬ್ರಿಟಿಷ್ ಸರ್ಕಾರದ ವಾರ್ತಾ ಮತ್ತು ಪ್ರಸಾರ ಇಲಾಖೆ ಮೊದಲ ಬಾರಿಗೆ ʼKeep calm and carry onʼಎನ್ನುವ ಸ್ಲೋಗನ್ ಅನ್ನು ಜನರ ಮಧ್ಯೆ ಹರಿಯಬಿಟ್ಟಿತು. ಮೊದಮೊದಲು ಕರಪತ್ರ, ಭಿತ್ತಿಚಿತ್ರ, ಜಾಹೀರಾತು ಯಾವುದೂ ಇಲ್ಲದೆ ಕೇವಲ ಬಾಯಿಂದ ಕಿವಿಗೆ ಬೀಳುತ್ತಿದ್ದ ಈ ಮಾತನ್ನು 2001ನೆಯ ಇಸವಿಯಲ್ಲಿ ಸರಕಾರ ತನ್ನ ಅಧಿಕೃತ ಹೇಳಿಕೆಯನ್ನಾಗಿ ಘೋಷಿಸಿತು.
ʼMind the Gapʼ ರೈಲ್ವೇ ಎಚ್ಚರಿಕೆ ಘೋಷಣೆಯದ್ದು ಮತ್ತೊಂದು ರೋಚಕ ಕಥೆ. ರೈಲು ಹತ್ತುವಾಗ ಮತ್ತು ಇಳಿಯುವಾಗ ಪ್ರಯಾಣಿಕರ ಸುರಕ್ಷತೆಗಾಗಿ ಹೆಚ್ಚುವರಿ ಕ್ರಮದ ಅಗತ್ಯ ಇದೆ ಎಂದು ಮನಗೊಂಡ TfL (Transport for London) ಕೆಲವು ವರ್ಷಗಳ ಕಾಲ ಅಭಿಪ್ರಾಯ ಸಂಗ್ರಹಣೆ, ಚರ್ಚೆ ವಿನಿಮಯಗಳ ನಂತರ 1968ರಲ್ಲಿ ಮೊದಲ ಬಾರಿಗೆ ಈ ಎಚ್ಚರಿಕೆ ಹೇಳಿಕೆಯನ್ನು ಧ್ವನಿಮುದ್ರಣ ಮಾಡಿಕೊಂಡು ಬಿತ್ತರಿಸಲು ಆರಂಭಿಸಿತು. ಪ್ರಖ್ಯಾತ ಕಲಾವಿದರ ಧ್ವನಿಯಲ್ಲಿ ಮುದ್ರಿಸಿಕೊಂಡು ಪ್ರಸಾರ ಮಾಡಲಾಗುತ್ತಿತ್ತು. ಅದರಲ್ಲಿ ಬಹಳವೇ ಪ್ರಸಿದ್ಧಿಗೆ ಬಂದು ಜನರ ಕಿವಿಯಲ್ಲಿ ಅಚ್ಚೊತ್ತಿ ನಿಂತ ಧ್ವನಿ ಎಂದರೆ ಓಸ್ವಾಲ್ಡ್ ಲಾರೆನ್ಸ್ ಎನ್ನುವ ನಟನದ್ದು. 2007ರಲ್ಲಿ ಆತ ತೀರಿಕೊಂಡ ನಂತರ ಆತನ ಹೆಂಡತಿ ಮೆಕ್ ಕೊಲಂ ತನ್ನ ಗಂಡನ ಧ್ವನಿ ಕೇಳಲೆಂದೇ ಟ್ಯೂಬ್ ಸ್ಟೇಷನ್‌ಗಳಿಗೆ ಬರುತ್ತಿದ್ದಳಂತೆ. 2012 ರಲ್ಲಿ ಅಲ್ಲಿನ ಸರಕಾರ ಲಾರೆನ್ಸ್ ಧ್ವನಿಯನ್ನು ಪ್ರಸಾರ ಮಾಡುವುದು ನಿಲ್ಲಿಸಿಬಿಟ್ಟಾಗ ಆಕೆಯು ಮಾನಸಿಕ ತೊಳಲಾಟಕ್ಕೆ ಸಿಲುಕಿ TfLಗೆ ತನ್ನ ಗಂಡನ ಧ್ವನಿಯನ್ನು ಮುಂದುವರಿಸಲು ಮನವಿ ಮಾಡಿಕೊಳ್ಳುತ್ತಾಳೆ. ಹದಿನೈದು ದಿನಗಳಲ್ಲಿ ಸಾರಿಗೆ ನಿಗಮ ಅದೇ ಧ್ವನಿಯನ್ನು ಪುನರಾರಂಭಿಸಿ ಮಾನವ ಸಂಬಂಧಗಳೆಡೆಗೆ ತನ್ನ ಗೌರವ ತೋರಿಸುತ್ತದೆ. ಹೀಗೆ ಸ್ಲೋಗನ್‌ಗಳು ಒಂದು ದೇಶದ ಕ್ಯಾರೆಕ್ಟರ್ ಅನ್ನು ತೋರಿಸುವ ಅಧ್ಯಾಯವಾಗಿ ಬೆಳೆಯುತ್ತಾ ಹೋಗಲು ಲಂಡನ್ ಕಾರಣವಾಯಿತು.
ಈಗಂತೂ ಪ್ರತಿ ದೇಶವೂ ತನ್ನ ಗುಣಲಕ್ಷಣವನ್ನು ಸ್ಲೋಗನ್ ಮೂಲಕವೇ ಸಾರಲು ಉತ್ಸುಕವಾಗಿದೆ. ಪ್ರವಾಸೋದ್ಯಮದ ಜಾಹೀರಾತಾಗಿದೆ ಸ್ಲೋಗನ್ಗಳು. ಯಾವುದೇ ದೇಶವನ್ನು ಅರಿಯಬೇಕಾದರೆ ಮೊದಲು ಅದರ ಪರಿಮಳವನ್ನು ಆಘ್ರಾಣಿಸಬೇಕು ಎನ್ನುವ ಮಾತು ಈಗ ಹಳತಾಗಿದೆ. ʼಕಚ್ ನಹೀ ದೇಖಾ ತೊ ಕುಚ್ ನಹೀ ದೇಖಾʼ ಎನ್ನುತ್ತಾ ಗಟ್ಟಿ ದನಿಯಲ್ಲಿ ಅಮಿತಾಬ್ ಹೇಳುವಾಗಲೇ ಒಂದು ಕಾಲು ಗುಜರಾತಿನ ಕಡೆಗೆ ಹೊಸ್ತಿಲು ದಾಟಿರುತ್ತದೆ. ಗುಣ ನೋಡಿ ಹೆಣ್ಣು ಕೊಡು ಎನ್ನುವುದು ಇನ್ನು ಮುಂದೆ ಸ್ಲೋಗನ್ ಕೇಳಿ ದೇಶ ಸುತ್ತು ಎಂದೂ ಆಗಬಹುದು.

ಅಥೆನ್ಸ್ ನೆಲಕ್ಕೆ ಕಾಲಿಟ್ಟೊಡನೆ ಕಣ್ಣು ಕುಕ್ಕುತ್ತೆ ʼGreece where roads are like canvasʼ ಎನ್ನುವ ಫಲಕ. ಜಪಾನ್ ಹೇಳುತ್ತೆ ʼJapan Endless Discoveryʼ ಅಂತ. ಈಜಿಪ್ಟಿನವರು ಹೆಜ್ಜೆಹೆಜ್ಜೆಗೂ ಹೇಳುತ್ತಾರೆ ʼEgypt where it all beginsʼ. ʼIncredible Indiaʼ ಎನ್ನುತ್ತಾ ಭಾರತೀಯರು ಇಸ್ರೇಲಿಗೆ ಹೋದರೆ ಕಾಣುತ್ತಾರೆ ʼIsreal Land of Creationʼ ಎನ್ನುವವರನ್ನು. ಸ್ವತಃ ದೇವರ ನಾಡು ಎಂದುಕೊಳ್ಳುವ ಕೇರಳಿಗರು ಕೂಡ ಹೇಳಲೇ ಬೇಕು ʼOman Beauty has an addressʼ ಅಂತ. ಪೋರ್ಚುಗೀಸರು ʼCan’t skip tomorrowʼ ಎಂದು ತುರ್ತು ಆಕರ್ಷಣೆ ತೋರುತ್ತಾರೆ. ದುಬೈ ಜನರೋ ʼOnly in Dubaiʼ ಎಂದು ಖಡಾಖಂಡಿತವಾಗಿ ಹೇಳಿಬಿಟ್ಟರೆ, ಮಲೇಷಿಯಾದವರು ʼTruly Asiaʼಎಂದು ಬೀಗುತ್ತಾರೆ.
ಪ್ರಪಂಚದ ಎಲ್ಲ ದೇಶಗಳೂ ಈಗ ಟ್ಯಾಗ್ ಲೈನುಗಳನ್ನು ಹೊಂದಿವೆ. ಕೇಳಿದ ಕೂಡಲೇ ಆಹಾ ಎನಿಸಿದರಷ್ಟೇ ಸಾಲದು ಅದು ಆಯಾ ದೇಶದ ಸಾರವನ್ನು ಸಾರುವಂತಿರಬೇಕು ಎನ್ನುವುದು ಪ್ರತಿ ದೇಶದ ಸರಕಾರದ, ಇತಿಹಾಸತಜ್ಞರ ಉದ್ದೇಶ. ಅದಕ್ಕಾಗಿಯೇ ವರ್ಷಗಟ್ಟಲೆ ಸಂಶೋಧನೆ ಮಾಡಲಾಗುತ್ತದೆ. ಆಯವ್ಯಯದಲ್ಲಿ ಇಂತಿಷ್ಟು ಹಣ ನಿಗದಿ ಪಡಿಸಲಾಗುತ್ತದೆ. ದೇಶವೊಂದರ ಮುಖವಾಣಿಯಲ್ಲಿರುವ ಕೆಲವೇ ಪದಗಳು ಅಲ್ಲಿನ ಜನರ ಸಾಮಾಜಿಕ, ಸಾಂಸ್ಕೃತಿಕ, ಆರ್ಥಿಕ ಹಿನ್ನೆಲೆಯನ್ನು ಕಟ್ಟಿಕೊಡಬೇಕು. ಸಾತ್ತ್ವಿಕ ವಿಧಾನದಲ್ಲಿ ಅಲ್ಲಿನ ಧಾರ್ಮಿಕತೆಯನ್ನೂ ಸಾರಬೇಕು. ಆ ದೇಶದ ಪ್ರಗತಿಪರತೆ ಮತ್ತು ಒಗ್ಗಟ್ಟನ್ನು ಆ ಪದಗಳು ಬಿಚ್ಚಿಡಬೇಕು. ಜನರ ಸೂಕ್ಷ್ಮತೆ ಮತ್ತು ಬುದ್ಧಿಮತ್ತೆಯನ್ನು ಎತ್ತಿ ತೋರಬೇಕು, ಆ ದೇಶದ ಜನರು ನಂಬುವ ಅಧ್ಯಾತ್ಮದ ಝಲಕ್ ತುಳುಕಬೇಕು ಆ ಪದಗಳಿಂದ, ಹಾಗಿರಬೇಕು ಸ್ಲೋಗನ್!

ಕೇವಲ ಘೋಷವಾಕ್ಯವನ್ನು ಇಟ್ಟುಕೊಂಡು ಹಲವಾರು ಸಿನೆಮಾಗಳು ಬಂದಿವೆ. ಪುಸ್ತಕಗಳು ಪ್ರಕಟಗೊಂಡಿವೆ. ಸ್ಲೋಗನ್‌ನಿಂದ ಇಡೀ ಜಗತ್ತಿನ ಎಲ್ಲ ದೇಶಗಳಲ್ಲೂ ಸಮಾನ ಪರಂಪರೆಯನ್ನು ಹುಟ್ಟುಹಾಕಿದ್ದು ಲಂಡನ್. ʼMind the Gapʼ ಎನ್ನುವ ಶೀರ್ಷಿಕೆಯನ್ನಿಟ್ಟುಕೊಂಡು ಹದಿನೇಳು ಸಿನೆಮಾಗಳು, ಒಂಭತ್ತು ಪುಸ್ತಕಗಳು ಬಂದಿವೆ. ಸ್ವಾಮಿ ಸೂಕ್ಷ್ಮಾನಂದ ಅವರು ದೈನಂದಿನ ಬದುಕಿಗೆ ಬೇಕಾದ ಸರಳವಾದ ಅಧ್ಯಾತ್ಮದ ಸೂತ್ರಗಳನ್ನು ʼMind the Gapʼ ಎನ್ನುವ ಪುಸ್ತಕದಲ್ಲಿ ಅಡಗಿಸಿಟ್ಟು 2003ರಲ್ಲಿ ಪ್ರಕಟಿಸಿದ್ದಾರೆ. ಅದರಲ್ಲಿ ಅವರೇ ಹೇಳಿದ್ದಾರೆ, ತಾವು ಮೊದಲ ಬಾರಿಗೆ ಲಂಡನ್ ಗೆ ಹೋದಾಗ ಅಲ್ಲಿನ ರೈಲು ತಾಣಗಳಲ್ಲಿ ಈ ವಾಕ್ಯವನ್ನು ಕೇಳಿ, ನೋಡಿ ಮನುಷ್ಯನ ಸ್ವಭಾವಕ್ಕೆ ಅದೆಷ್ಟು ಹೊಂದಾಣಿಕೆ ಆಗುತ್ತದೆ ಎನಿಸಿ ಈ ಶೀರ್ಷಿಕೆ ಆಯ್ದುಕೊಂಡರಂತೆ. ಕೇವಲ ಸ್ಲೋಗನ್‌ಗಳಲ್ಲಿ ಮಾತ್ರವಲ್ಲ ಜನರು ನಡವಳಿಕೆಯಲ್ಲೂ ಹೀಗೆ ಸ್ಫೂರ್ತಿ ತುಂಬುವಂತೆ ಇರಬೇಕು ಎನ್ನುವ ಉದ್ದೇಶವೂ ಇದೆ ಈ ಸ್ಲೋಗನ್ ಸಂಪ್ರದಾಯಕ್ಕೆ. ನಾವೇ ಒಪ್ಪಿಕೊಂಡು, ಇಟ್ಟುಕೊಂಡಿರುವ ʼOne state, many worldsʼ ವಾಕ್ಯವು ಜಗತ್ ಪರ್ಯಟರಿಗೆ ಕರ್ನಾಟಕ ತೋರಲಿ ಎನ್ನುವ ಆಶಯ ಕಲಿಸಿದ್ದು ಕೂಡ ಎಚ್ಚರಿಕೆಯ ಸುತ್ತಾಟವೇ.