ಟೆಲ್ ಅವಿವ್: ಅಲೆಗಳ ದಡದಲ್ಲಿ ಅರಳಿದ ಮಾಯಾ ಲೋಕ
ಯಾಕೆ ಈ ನಗರ ನನ್ನನ್ನು ಹೀಗೆ ಕಾಡುತ್ತದೆ? ಹನ್ನೆರಡು ಬಾರಿ ಹೋದರೂ, ಹದಿಮೂರನೇ ಬಾರಿ ಹೋಗಲು ಲಗೇಜ್ ಪ್ಯಾಕ್ ಮಾಡುವಂತೆ ನನ್ನನ್ನು ಪ್ರೇರೇಪಿಸುವುದಾದರೂ ಯಾಕೆ? ಉತ್ತರ ಸರಳ. ಟೆಲ್ ಅವಿವ್ ಸುಮ್ಮನೆ ಉಸಿರಾಡುವುದಿಲ್ಲ, ಅದು ಪ್ರತಿ ಕ್ಷಣವನ್ನೂ ‘ಬದುಕುತ್ತದೆ’. ಅಲ್ಲಿನ ಚರಿತ್ರೆ, ಅಲ್ಲಿನ ಜನರ ಆ ಧೈರ್ಯ, ಆ ಬಿಂದಾಸ್ ಮನೋಭಾವ... ಎಲ್ಲವೂ ವಿಚಿತ್ರ, ಎಲ್ಲವೂ ವಿಸ್ಮಯ. ಬನ್ನಿ, ನನ್ನ ಕಣ್ಣಲ್ಲಿ ಆ ಚೇತೋಹಾರಿ ನಗರವನ್ನೊಮ್ಮೆ ಸುತ್ತಾಡಿಕೊಂಡು ಬರೋಣ. ಅಲ್ಲಿನ ಒಂದಿಷ್ಟು ಅಚ್ಚರಿಯ, ರೋಚಕ ಕಥೆಗಳನ್ನು ನಿಮ್ಮ ಮುಂದಿಡುತ್ತೇನೆ. ಇದನ್ನು ಸಂಕ್ಷಿಪ್ತವಾಗಿಯೂ ಒಮ್ಮೆಗೆ ಹೇಳಿ ಮುಗಿಯುವುದಿಲ್ಲ. ಹೀಗಾಗಿ ಎರಡು ಕಂತುಗಳಲ್ಲಿ ಹೇಳುತ್ತೇನೆ.
ಇಸ್ರೇಲಿನ ಟೆಲ್ ಅವಿವ್ ಅನ್ನೋದು ಕೇವಲ ಒಂದು ಸಿಟಿಯಲ್ಲ, ಅದೊಂದು ನಶೆ. ಒಮ್ಮೆ ಅದರ ಮಡಿಲಿಗೆ ಬಿದ್ದ ಮೇಲೆ, ಆ ಮೆಡಿಟರೇನಿಯನ್ ಸಮುದ್ರದ ಉಪ್ಪುಗಾಳಿ ಮೈಗೊಮ್ಮೆ ಸೋಕಿದ ಮೇಲೆ ಮುಗಿಯಿತು; ಮತ್ತೆ ಮತ್ತೆ ಅಲ್ಲಿಗೇ ಎಳೆದುಕೊಂಡು ಹೋಗುವ ಕಾಣದ ಸೆಳೆತವೊಂದು ಎದೆಯೊಳಗೆ ಹುಟ್ಟಿಕೊಂಡು ಬಿಡುತ್ತದೆ. ಅಲ್ಲಿನ ರಸ್ತೆಗಳು, ಅಲ್ಲಿನ ಆಕಾಶ, ರಾತ್ರಿಯಾಗುತ್ತಲೇ ಮೈಚಳಿ ಬಿಟ್ಟು ಕುಣಿಯುವ ಆ ನಗರಿಯ ಕ್ರಿಯಾಶೀಲತೆ... ಅಬ್ಬಬ್ಬಾ! ಅದೊಂದು ಮಾಯಾಲೋಕ. ಮರಳುಗಾಡಿನ ನಡುವೆ ಅರಳಿದ ಈ ಹೂವಿಗೆ ಎಂಥದೋ ಒಂದು ಕಾಡುವ ಗುಣವಿದೆ.
ಸುತ್ತಲೂ ಕದನ ಕುತೂಹಲ, ಯಾವ ಕ್ಷಣದಲ್ಲಿ ಎಲ್ಲಿಂದ ಸೈರನ್ ಕೂಗುತ್ತದೋ ಎಂಬ ಅನಿಶ್ಚಿತತೆ ಇಡೀ ದೇಶಕ್ಕಿರಬಹುದು. ಆದರೆ ಟೆಲ್ ಅವಿವ್ ಮಂದಿಗೆ ಇದ್ಯಾವುದರ ಪರಿವೆಯೇ ಇಲ್ಲ. 'ನಾಳೆ ಅನ್ನೋದು ಇದೆಯೋ ಇಲ್ಲವೋ, ಇವತ್ತಿನ ಸಂಜೆ ಮಾತ್ರ ನಮ್ಮದು' ಎಂದು ಬದುಕುವ ಜಾಯಮಾನ ಅವರದ್ದು. ಅಲ್ಲಿನ ಬೀಚ್‌ಗಳಲ್ಲಿ ಅಪ್ಪಳಿಸುವ ಅಲೆಗಳಿಗೆ ಎಂಥದ್ದೇ ನೋವನ್ನು ತೊಳೆದು ಹಾಕುವ ಶಕ್ತಿಯಿದೆ. ಕಣ್ಣು ಹಾಯಿಸಿದಷ್ಟು ದೂರಕ್ಕೂ ಹರಡಿರುವ ನೀಲಿ ನೀರು, ಅದರಾಚೆಗೆ ರಕ್ತಗೆಂಪು ಬಣ್ಣದಲ್ಲಿ ಮುಳುಗುವ ಸೂರ್ಯ... ಆ ದೃಶ್ಯ ನೋಡುತ್ತಿದ್ದರೆ ಎದೆಯೊಳಗಿನ ಭಾರವೆಲ್ಲ ಇಳಿದು ಹಗುರಾದಂತೆ... ಕಾಂಕ್ರೀಟಿನ ಕಾನನದಲ್ಲಿ ಕಲರವ ಮೂಡಿದಂತೆ... ಎದೆಗೂಡೊಳಗೆ ಬೆಚ್ಚನೆಯ ಭಾವನೆಯನ್ನು ಸಾಕಿ ಮೈದಡವಿದಂತೆ. ನಿಜ... ಬದುಕು ಅಂದರೆ ಹೀಗೆಯೇ ಇರಬೇಕೇನೋ ಅನ್ನಿಸುವಷ್ಟು ನಿರಾಳತೆ ಅಲ್ಲಿನ ಗಾಳಿಯಲ್ಲಿದೆ.

ಸಂಜೆಯಾಗುತ್ತಿದ್ದಂತೆ ಈ ನಗರದ ಬಣ್ಣವೇ ಬದಲಾಗಿಬಿಡುತ್ತದೆ. ದೀಪಗಳು ಕಣ್ತೆರೆಯುತ್ತವೆ, ಪಬ್‌ಗಳು ಬೆಳಗುತ್ತವೆ, ರಸ್ತೆ ಬದಿಯ ಕೆಫೆಗಳಲ್ಲಿ ಕುಳಿತು ಒಂದು ಸ್ಟ್ರಾಂಗ್ ಕಾಫಿ ಹೀರುತ್ತಾ ಅಥವಾ ಕೈಯಲ್ಲೊಂದು ವೈನ್ ಗ್ಲಾಸ್ ಹಿಡಿದು ಕುಳಿತರೆ, ಜಗತ್ತಿನ ಅಷ್ಟೂ ರಂಗು ಅಲ್ಲೇ ಬಂದು ಸೇರಿದೆಯೇನೋ ಅನ್ನಿಸುತ್ತದೆ. ಅಲ್ಲಿನ ಗಾಳಿಯಲ್ಲೇ ಒಂದು ಥರದ ‘madness’ ಇದೆ. ಹಳೆಯ ಜಾಫಾದ ಕಲ್ಲಿನ ಗೋಡೆಗಳು ಸಾವಿರ ವರ್ಷದ ಕಥೆ ಹೇಳಿದರೆ, ಆ ಕಡೆ ತಲೆ ಎತ್ತಿ ನಿಂತಿರುವ ಗಗನಚುಂಬಿ ಕಟ್ಟಡಗಳು ಭವಿಷ್ಯದ ಕನಸು ಬಿತ್ತುತ್ತವೆ. ಹಳೆಯದು ಮತ್ತು ಹೊಸದು ಎದುರು ಬದುರಾಗಿ ನಿಂತು ಕಣ್ಣು ಮಿಟುಕಿಸುವ ಜಾಗವಿದು. ಇಲ್ಲಿನ ರಾತ್ರಿಗಳಿಗೆ ನಿದ್ದೆಯೆಂದರೆ ಅಲರ್ಜಿ!
ಯಾಕೆ ಈ ನಗರ ನನ್ನನ್ನು ಹೀಗೆ ಕಾಡುತ್ತದೆ? ಹನ್ನೆರಡು ಬಾರಿ ಹೋದರೂ, ಹದಿಮೂರನೇ ಬಾರಿ ಹೋಗಲು ಲಗೇಜ್ ಪ್ಯಾಕ್ ಮಾಡುವಂತೆ ನನ್ನನ್ನು ಪ್ರೇರೇಪಿಸುವುದಾದರೂ ಯಾಕೆ? ಉತ್ತರ ಸರಳ. ಟೆಲ್ ಅವಿವ್ ಸುಮ್ಮನೆ ಉಸಿರಾಡುವುದಿಲ್ಲ, ಅದು ಪ್ರತಿ ಕ್ಷಣವನ್ನೂ ‘ಬದುಕುತ್ತದೆ’. ಅಲ್ಲಿನ ಚರಿತ್ರೆ, ಅಲ್ಲಿನ ಜನರ ಆ ಧೈರ್ಯ, ಆ ಬಿಂದಾಸ್ ಮನೋಭಾವ... ಎಲ್ಲವೂ ವಿಚಿತ್ರ, ಎಲ್ಲವೂ ವಿಸ್ಮಯ. ಬನ್ನಿ, ನನ್ನ ಕಣ್ಣಲ್ಲಿ ಆ ಚೇತೋಹಾರಿ ನಗರವನ್ನೊಮ್ಮೆ ಸುತ್ತಾಡಿಕೊಂಡು ಬರೋಣ. ಅಲ್ಲಿನ ಒಂದಿಷ್ಟು ಅಚ್ಚರಿಯ, ರೋಚಕ ಕಥೆಗಳನ್ನು ನಿಮ್ಮ ಮುಂದಿಡುತ್ತೇನೆ. ಇದನ್ನು ಸಂಕ್ಷಿಪ್ತವಾಗಿಯೂ ಒಮ್ಮೆಗೆ ಹೇಳಿ ಮುಗಿಯುವುದಿಲ್ಲ. ಹೀಗಾಗಿ ಎರಡು ಕಂತುಗಳಲ್ಲಿ ಹೇಳುತ್ತೇನೆ.
ಕೆಲವು ನಗರಗಳು ನಿರ್ಮಾಣವಾಗುತ್ತವೆ. ಇನ್ನು ಕೆಲವನ್ನು ನಾವೇ ಕಟ್ಟಬೇಕು. ಆದರೆ ಟೆಲ್ ಅವಿವ್ ಮಾತ್ರ ಜನಿಸಿತು. ಇಸ್ರೇಲಿನ ಹೃದಯಭಾಗದಲ್ಲಿ, ಮೆಡಿಟರೇನಿಯನ್ ಸಮುದ್ರದ ನೀಲಿ ಅಲೆಗಳು ತಬ್ಬಿಕೊಳ್ಳುವ ಜಾಗದಲ್ಲಿ, ಹಗಲಿರುಳೆನ್ನದೆ ಜೀವಂತಿಕೆಯಿಂದ ತುಡಿಯುವ ಟೆಲ್ ಅವಿವ್ ನ್ನು ಕೇವಲ ಇಸ್ರೇಲಿನ ಆರ್ಥಿಕ ರಾಜಧಾನಿ ಎಂದು ಕರೆದರೆ ಅದು ಅಪೂರ್ಣವಾದೀತು, ಅನ್ಯಾಯವಾದೀತು. ಇದು ಕನಸುಗಾರರ, ಕಲಾವಿದರು, ಉದ್ಯಮಿಗಳು ಮತ್ತು ಜೀವನಪ್ರೀತಿಯುಳ್ಳವರು ಕೂಡುವ ಸಂಗಮ.
ಈ ನಗರದ ಹುಟ್ಟು ಹೇಗಾಯ್ತು ಗೊತ್ತಾ?
ಅದೊಂದು ಅಪ್ಪಟ ಲಾಟರಿ ಕಥೆ! 1909 ರ ಸಮಯ. ಅಂದಿನ ಜಗತ್ತು ಇಂದಿನಂತಿರಲಿಲ್ಲ. ಸಮುದ್ರ ದಂಡೆಯ ಮೇಲೊಂದು ಬರೀ ಮರಳಿನ ದಿಬ್ಬ. ಅಲ್ಲಿ ಯಾವುದೇ ರಸ್ತೆಗಳಿರಲಿಲ್ಲ, ನೀರಿರಲಿಲ್ಲ, ಕೇವಲ ಮರಳು ಮತ್ತು ಸಮುದ್ರವಿತ್ತು. ಅಂಥ ಜಾಗದಲ್ಲಿ 66 ಯಹೂದಿ ಕುಟುಂಬಗಳು ಬಂದು ನಿಂತವು. ಜಾಗ ಹಂಚಿಕೊಳ್ಳೋದು ಹೇಗೆ? ಆಗ ನಡೆದಿದ್ದೇ ಆ ವಿಚಿತ್ರ 'ಚಿಪ್ಪುಗಳ ಲಾಟರಿ'. ಸಮುದ್ರ ದಂಡೆಯಿಂದ ಆರಿಸಿ ತಂದ ಬೂದು ಮತ್ತು ಬಿಳಿ ಬಣ್ಣದ ಚಿಪ್ಪುಗಳ ಮೇಲೆ ಕುಟುಂಬದ ಹೆಸರು ಮತ್ತು ಪ್ಲಾಟ್ ನಂಬರ್ ಬರೆದು ಅದೃಷ್ಟ ಪರೀಕ್ಷೆಗೆ ಇಳಿದರು. ಆ ಚಿಪ್ಪುಗಳನ್ನು ಜೋಡಿಸುವ ಮೂಲಕ ಈ ನಗರದ ಭೂ ಹಂಚಿಕೆ ನಡೆಯಿತು. ಅಂದು ಆ ಮರಳಿನ ರಾಶಿಯ ಮೇಲೆ ಬಿದ್ದ ಅಡಿಪಾಯವೇ ಇಂದು ಗಗನಚುಂಬಿ ಕಟ್ಟಡಗಳಾಗಿ ತಲೆ ಎತ್ತಿ ನಿಂತಿದೆ. ಇದನ್ನು 'ಅಹುಜತ್ ಬಯಿತ್' ಎಂದು ಕರೆದರು. ನಂತರ ಅದು 'ಟೆಲ್ ಅವಿವ್' ಆಯಿತು. ಶೂನ್ಯದಿಂದ ಸೃಷ್ಟಿ ಮಾಡುವುದು ಅಂದರೆ ಇದೇ ಇರಬೇಕು. ಆ ಛಲ, ಆ ಹಠ ಇಂದಿಗೂ ಅಲ್ಲಿನ ಮಣ್ಣಿನ ಗುಣದಲ್ಲೇ ಬೆರೆತು ಹೋಗಿದೆ.

ಇನ್ನು ಇಲ್ಲಿನ ರಸ್ತೆಗಳಲ್ಲಿ ಅಡ್ಡಾಡುವಾಗ ನಿಮ್ಮ ಕಣ್ಣಿಗೆ ಅತಿ ಹೆಚ್ಚು ಬೀಳುವ ಬಣ್ಣ ಯಾವುದು ಗೊತ್ತೇ? ಹಾಲು ಬಿಳಿ! ಸುಮ್ಮನೆ ಕಣ್ಣು ಕೋರೈಸುವ ಬಿಳಿ ಬಣ್ಣದ ಕಟ್ಟಡಗಳ ಸಾಲು ಸಾಲು. ಹಿಟ್ಲರ್‌ನ ಕಾಟ ತಾಳಲಾರದೇ ಜರ್ಮನಿಯಿಂದ ಓಡಿ ಬಂದ ವಾಸ್ತುಶಿಲ್ಪಿಗಳು ಇಲ್ಲಿ ಕಟ್ಟಿದ ಸಾಮ್ರಾಜ್ಯವಿದು. ಇದಕ್ಕೆ 'ವೈಟ್ ಸಿಟಿ' ಅಂತ ಸುಮ್ಮನೆ ಕರೆಯಲ್ಲ. ಬಿಸಿಲು ಝಳಕ್ಕೆ ಮೈ ಸುಡಬಾರದು ಅಂತ ಬಿಳಿ ಬಣ್ಣ ಬಳಿದು, ಗಾಳಿ ಆಡಲಿ ಅಂತ ವಿಚಿತ್ರ ಆಕಾರದ ಬಾಲ್ಕನಿಗಳನ್ನು ಕಟ್ಟಿದರು. ಎಂಥ ದುರಂತದ ಕಥೆಯ ಹಿಂದೆಯೂ ಒಂದು ಸೌಂದರ್ಯ ಅಡಗಿರುತ್ತದೆ ಅನ್ನೋದಕ್ಕೆ ಈ ನಗರವೇ ಸಾಕ್ಷಿ. ಯುನೆಸ್ಕೋದವರೇ ಬಂದು 'ಇದು ವಿಶ್ವ ಪಾರಂಪರಿಕ ತಾಣ ಕಣ್ರಯ್ಯಾ' ಅಂತ ಸರ್ಟಿಫಿಕೇಟ್ ಕೊಟ್ಟು ಹೋಗಿದ್ದಾರೆಂದರೆ ಅದರ ಖದರ್ ಎಷ್ಟಿರಬೇಡ?
ಹೊಟ್ಟೆ ಪಾಡಿನ ವಿಷಯಕ್ಕೆ ಬರೋಣ. ಟೆಲ್ ಅವಿವ್ ಅಂದರೆ ಬರೀ ಕಾಂಕ್ರೀಟ್ ಕಾಡಲ್ಲ, ಅದೊಂದು ಘಮಘಮಿಸುವ ಅಡುಗೆ ಮನೆ. ಕಾರ್ಮೆಲ್ ಮಾರ್ಕೆಟ್ಟಿನ ಕಿರಿದಾದ ಗಲ್ಲಿಗಳಲ್ಲಿ ನುಗ್ಗಿದರೆ ಸಾಕು, ಮೂಗಿಗೆ ಬಡಿಯುವ ಆ ಮಸಾಲೆ ಪದಾರ್ಥಗಳ ಪರಿಮಳಕ್ಕೆ ಅರ್ಧ ಹೊಟ್ಟೆ ತುಂಬಿ ಬಿಡುತ್ತದೆ. ಇಲ್ಲಿನ ಜನರಿಗೆ ಮಾಂಸಕ್ಕಿಂತ ತರಕಾರಿಗಳ ಮೇಲೆ ಪ್ರೀತಿ ಜಾಸ್ತಿ. ಜಗತ್ತಿನ 'ವೀಗನ್ ಕ್ಯಾಪಿಟಲ್' ಇದು! ಒಂದು ಬಿಸಿ ಬಿಸಿ ಪಿಟಾ ಬ್ರೆಡ್‌ಗೆ ಆಲಿವ್ ಎಣ್ಣೆ ಸುರಿದ ಹಮ್ಮಸ್ ಹಚ್ಚಿಕೊಂಡು ಬಾಯಿಗಿಟ್ಟರೆ... ಆಹಾ! ಸ್ವರ್ಗಕ್ಕೆ ಮೂರೇ ಗೇಣು. ರಾಜಕೀಯ, ಯುದ್ಧ, ಗಡಿ ಸಮಸ್ಯೆಗಳೆಲ್ಲವನ್ನೂ ಮರೆಸಿಬಿಡುವ ಶಕ್ತಿ ಅಲ್ಲಿನ ಆ ಒಂದು ತುತ್ತು ಅನ್ನಕ್ಕಿದೆ. ತಿನ್ನಬೇಕು, ಕುಡಿಯಬೇಕು, ಮೈಮರೆತು ಬದುಕಬೇಕು ಅನ್ನೋ ಫಿಲಾಸಫಿ ಇಲ್ಲಿನ ರಕ್ತದಲ್ಲೇ ಇದೆ.
ಆದರೆ ಇವರು ಬರೀ ಮೋಜು ಮಸ್ತಿ ಮಾಡುವವರಲ್ಲ, ತಲೆಗೆ ಹುಳ ಬಿಟ್ಟುಕೊಳ್ಳುವ ವಿಷಯದಲ್ಲೂ ಇವರೇ ನಂಬರ್ ಒನ್. ಹಗಲಿನಲ್ಲಿ ಬೀಚ್‌ನಲ್ಲಿ ಮೈ ಒಡ್ಡಿ ಮಲಗುವ ಇದೇ ಮಂದಿ, ರಾತ್ರಿಯಾಗುತ್ತಲೇ ಲ್ಯಾಪ್‌ಟಾಪ್ ತೆರೆದು ಜಗತ್ತನ್ನೇ ಬದಲಾಯಿಸುವ ಸಾಫ್ಟ್‌ವೇರ್ ಕೋಡ್ ಗಳನ್ನು ಬರೆಯುತ್ತಾರೆ. ಸಿಲಿಕಾನ್ ವ್ಯಾಲಿ ಬಿಟ್ಟರೆ ಜಗತ್ತಿನಲ್ಲಿ ಅತಿ ಹೆಚ್ಚು ಸ್ಟಾರ್ಟ್-ಅಪ್‌ಗಳು ಹುಟ್ಟೋದು ಈ ಟೆಲ್ ಅವಿವ್‌ನಲ್ಲೇ. ಗೂಗಲ್, ಮೈಕ್ರೋಸಾಫ್ಟ್ ನಂಥ ದೈತ್ಯ ಕಂಪನಿಗಳು ಇಲ್ಲಿ ಬಂದು ಅಂಗಡಿ ಬಾಗಿಲು ತೆರೆದು ಕೂತಿವೆ. ಇಲ್ಲಿನ ಕೆಫೆಗಳಲ್ಲಿ ಕುಳಿತರೆ ಪಕ್ಕದ ಟೇಬಲ್‌ನವನು ಕೋಟ್ಯಂತರ ಡಾಲರ್ ಬ್ಯುಸಿನೆಸ್ ಬಗ್ಗೆ ಮಾತನಾಡುತ್ತಿರುತ್ತಾನೆ. ಮೋಜು ಮತ್ತು ಬುದ್ಧಿವಂತಿಕೆ ಎರಡನ್ನೂ ಸಮವಾಗಿ ತೂಗಿಸಿಕೊಂಡು ಹೋಗುವ ಕಲೆ ಇವರಿಗೆ ಸಿದ್ಧಿಸಿದೆ. ಇದೇ ಅಲ್ವಾ 'ಜೀವಂತಿಕೆ' ಅಂದರೆ?
'ಟೆಲ್ ಅವಿವ್' ಎಂಬ ಹೆಸರು ಅತ್ಯಂತ ಕಾವ್ಯಾತ್ಮಕವಾದುದು. ಟೆಲ್ (Tel) ಎಂದರೆ ಪುರಾತನವಾದ ದಿಬ್ಬ ಅಥವಾ ಇತಿಹಾಸದ ಪದರಗಳನ್ನು ಹೊಂದಿರುವ ಸ್ಥಳ. ಇದು ಹಳೆಯದನ್ನು ಪ್ರತಿನಿಧಿಸುತ್ತದೆ. ಅವಿವ್ ಅಂದ್ರೆ ಹೀಬ್ರೂ ಭಾಷೆಯಲ್ಲಿ 'ವಸಂತಕಾಲ'. ಇದು ಹೊಸತನ, ಪುನರುಜ್ಜೀವನ ಮತ್ತು ಭವಿಷ್ಯದ ಸಂಕೇತ. ಥಿಯೋಡರ್ ಹರ್ಜಲ್ ಅವರ 'ಆಲ್ಟ್ ನ್ಯೂಲ್ಯಾಂಡ್'' (ಹಳೆಯ ಹೊಸ ಭೂಮಿ) ಎಂಬ ಕಾದಂಬರಿಯ ಹೀಬ್ರೂ ಅನುವಾದದ ಶೀರ್ಷಿಕೆಯಿಂದ ಈ ಹೆಸರನ್ನು ಆಯ್ಕೆ ಮಾಡಲಾಯಿತು. ಹಳೆಯ ಬೇರುಗಳ ಮೇಲೆ ಹೊಸ ವಸಂತವನ್ನು ಸೃಷ್ಟಿಸುವುದು ಈ ನಗರದ ಮೂಲ ಆಶಯ.
ಟೆಲ್ ಅವಿವ್‌ನ ರಸ್ತೆಗಳಲ್ಲಿ ನಡೆಯುವಾಗ ನೀವು ಗಮನಿಸಿರಬಹುದು, ಇಲ್ಲಿನ ಅನೇಕ ಕಟ್ಟಡಗಳು ಬಿಳಿ ಬಣ್ಣದಲ್ಲಿವೆ ಮತ್ತು ವಿಶಿಷ್ಟವಾದ ವಕ್ರರೇಖೆಗಳನ್ನು (Curves) ಹೊಂದಿವೆ. ಇದಕ್ಕೆ ಕಾರಣ 'ಬಾಹೌಸ್' ವಾಸ್ತುಶಿಲ್ಪ. 1930ರ ದಶಕದಲ್ಲಿ ನಾಜಿ ಜರ್ಮನಿಯಿಂದ ತಪ್ಪಿಸಿಕೊಂಡು ಬಂದ ಅನೇಕ ಯಹೂದಿ ವಾಸ್ತುಶಿಲ್ಪಿಗಳು ಟೆಲ್ ಅವಿವ್ ಸೇರಿಕೊಂಡರು. ಅವರು ಅಲ್ಲಿನ ಬಾಹೌಸ್ ಶೈಲಿಯನ್ನು ಇಸ್ರೇಲಿನ ಹವಾಮಾನಕ್ಕೆ ತಕ್ಕಂತೆ ಬದಲಾಯಿಸಿದರು. ಬಿಸಿಲನ್ನು ತಡೆಯಲು ದೊಡ್ಡ ಕಿಟಕಿಗಳ ಬದಲಿಗೆ ಚಿಕ್ಕದಾದ, ಆಳವಾದ ಬಾಲ್ಕನಿಗಳನ್ನು ನಿರ್ಮಿಸಿದರು
ಶಾಖವನ್ನು ಪ್ರತಿಫಲಿಸಲು ಬಿಳಿ ಬಣ್ಣವನ್ನು ಬಳಸಿದರು. ಇಂದು ಟೆಲ್ ಅವಿವ್‌ನಲ್ಲಿ ನಾಲ್ಕು ಸಾವಿರಕ್ಕೂ ಹೆಚ್ಚು ಬಾಹೌಸ್ ಶೈಲಿಯ ಕಟ್ಟಡಗಳಿವೆ. ಇದಕ್ಕಾಗಿಯೇ ಯುನೆಸ್ಕೋ ಇದನ್ನು ವಿಶ್ವ ಪಾರಂಪರಿಕ ತಾಣವೆಂದು ಘೋಷಿಸಿದೆ ಮತ್ತು ಇದನ್ನು 'ವೈಟ್ ಸಿಟಿ' ಎಂದು ಕರೆದಿದೆ.

ಸಸ್ಯಾಹಾರಿಗಳ ಪಾಲಿನ ಸ್ವರ್ಗ
ಜಗತ್ತಿನ ಬೇರೆ ಯಾವುದೇ ಮೂಲೆಗೆ ಹೋದರೂ 'ಮಾಂಸ ಇಲ್ಲದೇ ಊಟವೇ ಇಲ್ಲ' ಎನ್ನುವವರೇ ಹೆಚ್ಚು. ಆದರೆ ಟೆಲ್ ಅವಿವ್ ಕಥೆ ಬೇರೆ. ಇದೊಂದು ವಿಚಿತ್ರ ಊರು. ಇಲ್ಲಿನ ಜನರಿಗೆ 'ವೀಗನ್' (Vegan) ಅಥವಾ ಅಪ್ಪಟ ಸಸ್ಯಾಹಾರ ಎನ್ನುವುದು ಕೇವಲ ಒಂದು ಫ್ಯಾಷನ್ ಅಲ್ಲ, ಅದೊಂದು ಜೀವನಶೈಲಿ, ಒಂದು ಧರ್ಮ! ಜಗತ್ತಿನ ಭೂಪಟದಲ್ಲಿ ಇಸ್ರೇಲ್ ಒಂದು ಪುಟ್ಟ ಚುಕ್ಕೆ ಇರಬಹುದು, ಆದರೆ ಟೆಲ್ ಅವಿವ್ ಮಾತ್ರ 'ಜಗತ್ತಿನ ವೀಗನ್ ರಾಜಧಾನಿ'. ನಂಬಲಸಾಧ್ಯವಾದರೂ ಇದು ಸತ್ಯ. ಇಲ್ಲಿ ಪ್ರತಿ ನಾಲ್ಕು ನೂರು ಜನರಿಗೆ ಒಂದು ಸಸ್ಯಾಹಾರಿ ರೆಸ್ಟೋರೆಂಟ್ ಇದೆ ಅಂದ್ರೆ ಲೆಕ್ಕ ಹಾಕಿಕೊಳ್ಳಿ, ಇಲ್ಲಿನ ಮಂದಿಗೆ ಸೊಪ್ಪು-ತರಕಾರಿಗಳ ಮೇಲೆ ಅದೆಷ್ಟು ಪ್ರೀತಿ ಅಂತ!
ಇಲ್ಲಿನ ಹಣ್ಣು ಮತ್ತು ತರಕಾರಿಗಳಲ್ಲಿ ಅಂಥದ್ದೇನಿದೆ? ಆ ಮೆಡಿಟರೇನಿಯನ್ ಸೂರ್ಯನ ಪ್ರಖರ ಬಿಸಿಲು ಮತ್ತು ಅಲ್ಲಿನ ಮಣ್ಣಿನ ಗುಣವೋ ಏನೋ, ಇಲ್ಲಿ ಬೆಳೆಯುವ ಟೊಮ್ಯಾಟೊ, ಸೌತೆಕಾಯಿ, ದ್ರಾಕ್ಷಿ ಮತ್ತು ದಾಳಿಂಬೆ ಹಣ್ಣುಗಳಲ್ಲಿ ಇರುವ ರುಚಿ ಜಗತ್ತಿನ ಮತ್ಯಾವ ಭಾಗದಲ್ಲೂ ಸಿಗಲಾರದು. ಇಲ್ಲಿನ ಜನರಿಗೆ ಫ್ರಿಡ್ಜ್‌ನಲ್ಲಿಟ್ಟ ಹಳಸಲು ತರಕಾರಿ ಕಂಡರೆ ಆಗುವುದಿಲ್ಲ. ಬೆಳಗ್ಗೆ ತೋಟದಿಂದ ಕಿತ್ತಿದ್ದು ಮಧ್ಯಾಹ್ನ ತಟ್ಟೆಯಲ್ಲಿರಬೇಕು; ಅಷ್ಟು ತಾಜಾತನ ಇವರಿಗೆ ಬೇಕು. ಇಲ್ಲಿನ ಪ್ರತಿಯೊಂದು ಊಟವೂ ಬಣ್ಣ ಬಣ್ಣದ ತರಕಾರಿಗಳ ಒಂದು ಉತ್ಸವದಂತೆ ಕಾಣುತ್ತದೆ. ಕೆಂಪು ಟೊಮ್ಯಾಟೊ, ಹಸಿರು ಕ್ಯಾಪ್ಸಿಕಮ್, ನೇರಳೆ ಬದನೆಕಾಯಿ... ನೋಡುವಾಗಲೇ ಅರ್ಧ ಹೊಟ್ಟೆ ತುಂಬಿಬಿಡುತ್ತದೆ.
ನೀವೊಮ್ಮೆ ಅಲ್ಲಿನ ಪ್ರಸಿದ್ಧ 'ಶುಕ್ ಹಕಾರ್ಮೆಲ್' ಮಾರುಕಟ್ಟೆಯ ಗಲ್ಲಿಯಲ್ಲಿ ಕಾಲಿಟ್ಟರೆ ಸಾಕು, ನಿಮ್ಮ ಮೂಗಿಗೆ ಅಡರುವ ಆ ಘಮ ಮತ್ತು ಕಣ್ಣಿಗೆ ರಾಚುವ ಆ ಬಣ್ಣಗಳು ನಿಮ್ಮನ್ನು ಬೇರೆಯದೇ ಲೋಕಕ್ಕೆ ಕರೆದೊಯ್ಯುತ್ತವೆ. ವ್ಯಾಪಾರಿಗಳು ಗಟ್ಟಿಯಾಗಿ ಕೂಗುತ್ತಾ ತಾಜಾ ಹಣ್ಣುಗಳನ್ನು ಮಾರುವ ಪರಿ, ರಾಶಿ ರಾಶಿ ಬಿದ್ದಿರುವ ದಾಳಿಂಬೆ ಹಣ್ಣುಗಳು, ಫ್ರೆಶ್ ಆಗಿ ಹಿಂಡಿದ ಕಿತ್ತಳೆ ಹಣ್ಣಿನ ರಸ... ಅಲ್ಲಿನ ಜೀವಂತಿಕೆಯೇ ಬೇರೆ. ಮಾಂಸಾಹಾರಿಗಳೂ ಕೂಡ ಇಲ್ಲಿನ ಸಸ್ಯಾಹಾರಿ ಅಡುಗೆಯ ರುಚಿಗೆ ಮರುಳಾಗಿ ಶರಣಾಗಿಬಿಡುತ್ತಾರೆ.
ಅದರಲ್ಲೂ ಇಲ್ಲಿನ 'ಹಮ್ಮಸ್' ಮತ್ತು 'ಫಲಾಫಲ್' ಬಗ್ಗೆ ಹೇಳಲೇಬೇಕು. ಕಡಲೆಕಾಳನ್ನು ರುಬ್ಬಿ, ಅದಕ್ಕೆ ನಯವಾದ ಎಳ್ಳಿನ ಪೇಸ್ಟ್, ನಿಂಬೆರಸ ಮತ್ತು ಬೆಳ್ಳುಳ್ಳಿ ಸೇರಿಸಿ ಮಾಡುವ ಹಮ್ಮಸ್ ಇದೆಯಲ್ಲ, ಅದೊಂದು ದೈವಿಕ ರುಚಿ! ಬಿಸಿ ಬಿಸಿ ಪಿಟಾ ಬ್ರೆಡ್ ಅನ್ನು ಆಲಿವ್ ಎಣ್ಣೆ ತೇಲುತ್ತಿರುವ ಹಮ್ಮಸ್‌ನಲ್ಲಿ ಅದ್ದಿ ಬಾಯಿಗಿಟ್ಟರೆ ಸ್ವರ್ಗಕ್ಕೆ ಮೂರೇ ಗೇಣು. ಇನ್ನು ಎಣ್ಣೆಯಲ್ಲಿ ಕರಿಯುವ ಗರಿಗರಿಯಾದ ಫಲಾಫಲ್ ವಡೆಗಳು ಇಲ್ಲಿನ ರಾಷ್ಟ್ರೀಯ ತಿಂಡಿ. ಇದರ ಜತೆಗೆ ಸುಟ್ಟ ಬದನೆಕಾಯಿಯಿಂದ ಮಾಡುವ 'ಸಾಬಿಚ್' ತಿಂದರೆ, ತರಕಾರಿಯಲ್ಲೂ ಇಷ್ಟೊಂದು ಮ್ಯಾಜಿಕ್ ಮಾಡಬಹುದಾ ಎಂದು ಆಶ್ಚರ್ಯವಾಗುತ್ತದೆ.
ಇಲ್ಲಿ ವೀಗನ್ ಎಂದರೆ ಕೇವಲ ಸಲಾಡ್ ತಿಂದು ಬದುಕುವುದಲ್ಲ. ಟೆಲ್ ಅವಿವ್‌ನ ಬಾಣಸಿಗರು ತರಕಾರಿಗಳನ್ನು ಬಳಸಿಕೊಂಡು ಮಾಡುವ ಪ್ರಯೋಗಗಳು ಅದ್ಭುತ. ಹೂಕೋಸನ್ನು ಸುಟ್ಟು ಸ್ಟೀಕ್ ನಂತೆ ಮಾಡುತ್ತಾರೆ, ಗೋಧಿ ಹಿಟ್ಟಿನಿಂದ ಮಾಂಸದ ರುಚಿ ಕೊಡುವ ಪದಾರ್ಥಗಳನ್ನು ಸೃಷ್ಟಿಸುತ್ತಾರೆ. ಪ್ರಾಣಿಗಳನ್ನು ಕೊಲ್ಲದೇ, ಪರಿಸರಕ್ಕೆ ಹಾನಿ ಮಾಡದೇ, ರುಚಿಕರವಾದ ಊಟ ಮಾಡಬಹುದು ಎಂದು ಜಗತ್ತಿಗೆ ತೋರಿಸಿಕೊಟ್ಟ ನಗರವಿದು. ಟೆಲ್ ಅವಿವ್‌ನಲ್ಲಿ ಸಸ್ಯಾಹಾರ ಎನ್ನುವುದು ಒಂದು ಕ್ರಾಂತಿ. ಅಲ್ಲಿನ ತಟ್ಟೆಯಲ್ಲಿ ಬಡಿಸುವ ಪ್ರತಿಯೊಂದು ತುತ್ತಿನಲ್ಲೂ ಆರೋಗ್ಯ, ರುಚಿ ಮತ್ತು ಪ್ರಕೃತಿಯ ಮೇಲಿನ ಪ್ರೀತಿ ಎದ್ದು ಕಾಣುತ್ತದೆ.
ಇಸ್ರೇಲಿ ಬ್ರೇಕ್‌ಫಾಸ್ಟ್ ಎನ್ನುವ ರಾಜಾತಿಥ್ಯ
ಬೆಳಗಿನ ಜಾವ ಎದ್ದು, ಏನೋ ಗಡಿಬಿಡಿಯಲ್ಲಿ ಒಂದು ಬ್ರೆಡ್ ತುಂಡು ಬಾಯಿಗೆ ತುರುಕಿಕೊಂಡು ಆಫೀಸಿಗೆ ಓಡುವ ಜಾಯಮಾನ ಇಸ್ರೇಲಿಗರದ್ದಲ್ಲ. ಅವರ ಪಾಲಿಗೆ ಬ್ರೇಕ್‌ಫಾಸ್ಟ್ ಅಂದರೆ ಅದೊಂದು ರಾಜಾತಿಥ್ಯ!
ಟೇಬಲ್ ಮೇಲೆ ಜಾಗವೇ ಇಲ್ಲದಷ್ಟು ತರಹೇವಾರಿ ತಿನಿಸುಗಳು ಬಂದು ಕುಳಿತುಕೊಳ್ಳುತ್ತವೆ. ಇದರಲ್ಲಿ ಹೈಲೈಟ್ ಅಂದರೆ 'ಶಕ್ಷುಕಾ'. ಕೆಂಪಗೆ ಕುದಿಯುವ ಟೊಮ್ಯಾಟೊ, ಈರುಳ್ಳಿ ಮತ್ತು ಮಸಾಲೆಭರಿತ ಗ್ರೇವಿಯ ನಡುವೆ, ಕಣ್ಣು ಬಿಟ್ಟು ನೋಡುವಂತೆ ಹದವಾಗಿ ಬೇಯಿಸಿದ ಮೊಟ್ಟೆಗಳು! ಆ ಬಿಸಿ ಬಿಸಿ ಕಬ್ಬಿಣದ ಪ್ಯಾನ್ ಅನ್ನು ಹಾಗೆಯೇ ತಂದು ನಿಮ್ಮ ಮುಂದಿಟ್ಟರೆ, ಅದರ ಘಮಕ್ಕೆ ಅರ್ಧ ನಿದ್ದೆ ಹಾರಿಹೋಗುತ್ತದೆ. ಗರಿಗರಿಯಾದ ಬ್ರೆಡ್ ತುಂಡನ್ನು (ಚಲ್ಲಾ ಬ್ರೆಡ್) ಆ ಕೆಂಪು ಗ್ರೇವಿಯಲ್ಲಿ ಅದ್ದಿ ಬಾಯಿಗಿಟ್ಟರೆ, ನಾಲಿಗೆಯ ಮೇಲೆ ರುಚಿಯ ಸ್ಫೋಟವೇ ಆದೀತು.
ಆದರೆ ಕಥೆ ಅಲ್ಲಿಗೆ ಮುಗಿಯಲ್ಲ. ಪಕ್ಕದಲ್ಲೇ ಬೆಣ್ಣೆಯಂತಿರುವ ಹಮ್ಮಸ್, ನಾಲಿಗೆ ಚಪ್ಪರಿಸುವಂತೆ ಮಾಡುವ ಉಪ್ಪುಪ್ಪಾದ ಫೆಟಾ ಚೀಸ್, ಲ್ಯಾಬ್ನೆ ಎಂಬ ಮೊಸರಿನ ಡಿಪ್, ಮತ್ತು ಆಲಿವ್ ಎಣ್ಣೆಯಲ್ಲಿ ಮಿಂದೆದ್ದ ಅತಿ ಸಣ್ಣದಾಗಿ ಹೆಚ್ಚಿದ ತಾಜಾ ಸೌತೆಕಾಯಿ-ಟೊಮೆಟೊ ಸಲಾಡ್‌ಗಳು. ಇಸ್ರೇಲೀ ಬ್ರೇಕ್‌ಫಾಸ್ಟ್‌ನಲ್ಲಿ ಬಣ್ಣಗಳಿಗೆ ಬರವಿಲ್ಲ, ರುಚಿಗೆ ಮಿತಿಯಿಲ್ಲ. ಹೊಟ್ಟೆ ತುಂಬಿಸುವುದು ಮಾತ್ರವಲ್ಲ, ಮನಸ್ಸನ್ನು ತುಂಬಿ, ದಿನವಿಡೀ ಲವಲವಿಕೆಯಿಂದ ಇರಲು ಬೇಕಾದ ಎನರ್ಜಿ ಕೊಡುವುದು ಈ ತಿಂಡಿಯ ತಾಕತ್ತು. ಇದೊಂದು ಕೇವಲ ಊಟವಲ್ಲ, ಇದೊಂದು ಸಂಭ್ರಮ!

ಕಸದ ಬೆಟ್ಟವೇ ಪಾರ್ಕ್ ಆಯ್ತು
ಟೆಲ್ ಅವಿವ್ ಹೊರವಲಯದಲ್ಲಿ 'ಹಿರಿಯಾ' ಎಂಬ ಜಾಗವಿತ್ತು. ಅದು ದಶಕಗಳ ಕಾಲ ನಗರದ ಕಸ ಸುರಿಯುವ ದೊಡ್ಡ ಬೆಟ್ಟವಾಗಿತ್ತು. ದುರ್ವಾಸನೆ ತಡೆಯಲಾರದೆ ಜನ ಪರದಾಡುತ್ತಿದ್ದರು. ಆದರೆ ಇಸ್ರೇಲಿಗಳು ಅದ್ಭುತ ಮಾಡಿಬಿಟ್ಟರು. ಆ ಕಸದ ಬೆಟ್ಟವನ್ನೇ ಸಂಸ್ಕರಿಸಿ, ಈಗ ಅಲ್ಲಿ ಏರಿಯಲ್ ಶರೋನ್ ಪಾರ್ಕ್ ನಿರ್ಮಿಸಿದ್ದಾರೆ. ಕಸದ ರಾಶಿ ಇದ್ದ ಜಾಗ ಈಗ ಹಚ್ಚ ಹಸಿರಿನ ಪ್ರವಾಸಿ ತಾಣ! ತ್ಯಾಜ್ಯದಿಂದ ಸಂಪತ್ತು (Waste to Wealth) ಅನ್ನೋದಕ್ಕೆ ಇದೇ ಸಾಕ್ಷಿ.
ಸೈಕಲ್ ಕಳ್ಳರ ಕಾಟ
ಟೆಲ್ ಅವಿವ್ ಸೇಫ್ ಸಿಟಿ ಹೌದು, ಆದರೆ ಇಲ್ಲಿ ನಿಮ್ಮ ಸೈಕಲ್ ಸೇಫ್ ಅಲ್ಲ! ಇಲ್ಲಿ ಅತಿ ಹೆಚ್ಚು ಕಳ್ಳತನವಾಗುವ ವಸ್ತು ಎಂದರೆ ಬೈಸಿಕಲ್. ನೀವು ಎಷ್ಟೇ ದಪ್ಪ ಸರಪಳಿ ಹಾಕಿ ಬೀಗ ಹಾಕಿದರೂ, ಕಳ್ಳರು ಅದನ್ನು ಎಗರಿಸಿಕೊಂಡು ಹೋಗುತ್ತಾರೆ. ಹೀಗಾಗಿಯೇ ಇಲ್ಲಿನ ಜನ ಹಳೆ ಮತ್ತು ತುಕ್ಕು ಹಿಡಿದ ಸೈಕಲ್ ಬಳಸಲು ಇಷ್ಟಪಡುತ್ತಾರೆ (ಕಳ್ಳರಿಗೆ ಬೇಡವಾಗಲಿ ಎಂದು!).
ರಾತ್ರಿ ಮ್ಯಾರಥಾನ್
ಜಗತ್ತಿನೆಲ್ಲೆಡೆ ಮ್ಯಾರಥಾನ್ ಓಟ ಬೆಳಿಗ್ಗೆ ನಡೆಯುತ್ತದೆ. ಆದರೆ ಟೆಲ್ ಅವಿವ್‌ನಲ್ಲಿ ಅಕ್ಟೋಬರ್ ಅಥವಾ ನವೆಂಬರ್ ತಿಂಗಳಲ್ಲಿ "ನೈಟ್ ರನ್" ನಡೆಯುತ್ತದೆ. ರಾತ್ರಿ ಹೊತ್ತು ಸುಮಾರು ಇಪ್ಪತ್ತೈದು ಸಾವಿರಕ್ಕೂ ಹೆಚ್ಚು ಜನ ನಿಯಾನ್ ಲೈಟ್ ಹಾಕಿಕೊಂಡು, ಪಾರ್ಟಿ ಮಾಡುತ್ತಾ ಓಡುತ್ತಾರೆ. ಇದು ಓಟದ ಸ್ಪರ್ಧೆಗಿಂತ ಒಂದು ಕಾರ್ನಿವಲ್ ಥರ ಇರುತ್ತದೆ.
ಡೊಮಿನೋಸ್ ಪಿಜ್ಜಾದ ಮೊದಲ ಪ್ರಯೋಗಶಾಲೆ
ನಾವು ಆಗಲೇ ಟೆಲ್ ಅವಿವ್ 'ವೀಗನ್ ಕ್ಯಾಪಿಟಲ್' ಎಂದು ಮಾತನಾಡಿದೆವು. ಅದರ ಪ್ರಭಾವ ಎಷ್ಟಿದೆ ಗೊತ್ತಾ? ಜಗತ್ತಿನ ದೈತ್ಯ ಪಿಜ್ಜಾ ಕಂಪನಿ 'ಡೊಮಿನೋಸ್', ತನ್ನ ಇತಿಹಾಸದಲ್ಲೇ ಮೊದಲ ಬಾರಿಗೆ 'ವೀಗನ್ ಪಿಜ್ಜಾ' (ಚೀಸ್ ಬಳಸದ ಪಿಜ್ಜಾ) ಪರಿಚಯಿಸಿದ್ದು ಟೆಲ್ ಅವಿವ್‌ನಲ್ಲಿ! ಇಲ್ಲಿನ ಡಿಮ್ಯಾಂಡ್ ನೋಡಿ ನಂತರ ಬೇರೆ ದೇಶಗಳಿಗೆ ವಿಸ್ತರಿಸಿದರು.
ಆಪರೇಷನ್ ಇಲ್ಲದ ಸುಂದರಿಯರಿಲ್ಲ!
ಇದು ಸ್ವಲ್ಪ ತಮಾಷೆಯ ಸಂಗತಿ. ಟೆಲ್ ಅವಿವ್‌ನಲ್ಲಿ ಪ್ಲಾಸ್ಟಿಕ್ ಸರ್ಜರಿ ಅಥವಾ ಮೂಗಿನ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳುವುದು, ನಾವು ಹೇರ್ ಕಟ್ ಮಾಡಿಸಿದಷ್ಟೇ ಸಹಜ! ಹದಿಹರೆಯದ ಹುಡುಗಿಯರು ತಮ್ಮ ಬರ್ತ್‌ಡೇ ಗಿಫ್ಟ್ ಆಗಿ ಪೋಷಕರ ಬಳಿ 'ನನಗೆ ಮೂಗು ಸರಿಪಡಿಸುವ ಸರ್ಜರಿ ಬೇಕು' ಎಂದು ಕೇಳುವುದು ಇಲ್ಲಿ ಸಾಮಾನ್ಯ. ಸೌಂದರ್ಯದ ಬಗ್ಗೆ ಇವರಿಗೆ ಸಿಕ್ಕಾಪಟ್ಟೆ ಕಾಳಜಿ.
(ಭಾಗ -2 ಮುಂದಿನ ವಾರ)