Tuesday, May 12, 2026
Tuesday, May 12, 2026

ಬ್ರಹ್ಮಲೋಕಕ್ಕೆ ಪ್ರಯಾಣ ಮತ್ತು ಗಂಧರ್ವ ಗಾನ

ಕಕುದ್ಮಿ ಎಂಬ ರಾಜ ಒಂದು ಊರು ಬಿಟ್ಟು ಇನ್ನೊಂದು ಲೋಕಕ್ಕೆ ಹೋಗಿ ಮರಳುವಾಗ ಯುಗಗಳೇ ಕಳೆದಿರುತ್ತವೆ. ಜಾಗಗಳು ಬದಲಾಗಿರುತ್ತವೆ. ಎಲ್ಲವೂ ಬದಲಾಗುವ ಮುನ್ನ, ಕಾಲ ಸರಿದುಹೋಗುವ ಮುನ್ನ ಅಂದುಕೊಂಡಜಾಗಕ್ಕೊಂದು ಪ್ರವಾಸ ಹೋಗಬೇಕು.

ಪುರಾಣ ಪ್ರಯಾಣ

ಪ್ರಯಾಣ ಮಾಡುವಾಗ ಯಾವಾಗಲು ಸಮಯ ಬಹಳ ಮುಖ್ಯವಾಗುತ್ತದೆ. ಎಷ್ಟೋ ಬಾರಿ ಒಂದು ಜಾಗಕ್ಕೆ ಹೋಗಬೇಕು ಎಂದು ಬಹಳ ಕಾಲ ಯೋಚನೆ ಮಾಡುತ್ತಿರುತ್ತೇವೆ. ಆದರೆ, ಅದೇನೋ ಕಾಲ ಕೂಡಿ ಬಂದಿಲ್ಲ ಎಂಬ ಸಮಾಧಾನದ ಮಾತುಗಳನ್ನು ನಮಗೆ ನಾವೇ ಹೇಳಿಕೊಂಡು ಸುಮ್ಮನಾಗುತ್ತಿರುತ್ತೇವೆ. ಯಾವುದೋ ಒಂದು ಜಾಗಕ್ಕೆ ಹೋಗುವ ಮನಸಾದರೆ ತಡ ಮಾಡದೆಯೇ ಹೊರಡಬೇಕು. ಇಲ್ಲದಿದ್ದರೆ ಪುರಾಣದಲ್ಲಿ ಬರುವ ಕಕುದ್ಮಿ ಮತ್ತು ರೇವತಿಯ ಕಥೆಯಂತಾಗುತ್ತದೆ.

ಕುಶಸ್ಥಲಿ ರಾಜ್ಯದ ಅರಸನಾದ ಕಕುದ್ಮಿ, ತನ್ನ ಮಗಳಾದ ರೇವತಿಗೆ ಯೋಗ್ಯನಾದ ವರನನ್ನು ಹುಡುಕಲು ಸೃಷ್ಟಿಕರ್ತನಾದ ಬ್ರಹ್ಮದೇವನ ಬಳಿಗೆ ಹೋಗುತ್ತಾನೆ. ಅವರು ಬ್ರಹ್ಮಲೋಕಕ್ಕೆ ತಲುಪಿದಾಗ, ಅಲ್ಲಿ ಬ್ರಹ್ಮನ ಸನ್ನಿಧಿಯಲ್ಲಿ 'ಹಾಹಾ' ಮತ್ತು 'ಹೂಹೂ' ಎಂಬ ಗಂಧರ್ವರು ದಿವ್ಯವಾದ ಸಂಗೀತವನ್ನು ಹಾಡುತ್ತಿರುತ್ತಾರೆ. ಆ ಗಾನದ ಸುಧೆಯಲ್ಲಿ ಮಿಂದೆದ್ದ ಕಕುದ್ಮಿ ಕೇವಲ ಒಂದು ಮುಹೂರ್ತ ಕಾಲ ಕಳೆದಿದೆ ಎಂದು ಭಾವಿಸಿ, ಸಂಗೀತ ಮುಗಿಯುವವರೆಗೆ ಕಾಯುತ್ತಾನೆ.

ಸಂಗೀತ ಮುಗಿದ ನಂತರ ಕಕುದ್ಮಿ ಬ್ರಹ್ಮನಿಗೆ ನಮಸ್ಕರಿಸಿ, ತಾನು ಮನಸ್ಸಿನಲ್ಲಿ ಅಂದುಕೊಂಡಿರುವ ವರಗಳ ಪಟ್ಟಿಯನ್ನು ಹೇಳಿ ಯಾರಿಗೆ ಮಗಳನ್ನು ನೀಡಲಿ ಎಂದು ಕೇಳುತ್ತಾನೆ. ಆಗ ಬ್ರಹ್ಮನು ಮಂದಹಾಸ ಬೀರುತ್ತಾ, ʼಕಕುದ್ಮಿ, ನೀನು ಇಲ್ಲಿ ಸಂಗೀತ ಕೇಳುತ್ತಿರುವಾಗಲೇ ಭೂಲೋಕದಲ್ಲಿ ಅನೇಕ ಚತುರ್ಯುಗಗಳು ಕಳೆದುಹೋಗಿವೆ. ನೀನು ಹೆಸರಿಸಿದ ವರರು ಮಾತ್ರವಲ್ಲದೆ, ಅವರ ಮೊಮ್ಮಕ್ಕಳ ಸಂತತಿಯೂ ಈಗ ಭೂಮಿಯ ಮೇಲೆ ಉಳಿದಿಲ್ಲ! ಈಗ ಇಪ್ಪತ್ತೆಂಟನೆಯ ಮಹಾಯುಗ ನಡೆಯುತ್ತಿದೆ, ಕಲಿಯುಗವು ಸಮೀಪಿಸಿದೆʼ ಎಂದು ಕಾಲದ ಗತಿಯನ್ನು ವಿವರಿಸುತ್ತಾನೆ.

ಇದನ್ನೂ ಓದಿ :ಮೊಗೆದಷ್ಟೂ ಪುರಾಣ.. ಬಗೆದಷ್ಟೂ ಇತಿಹಾಸ

ತನ್ನ ಪತ್ನಿ, ಮಕ್ಕಳು, ಮಂತ್ರಿಗಳು ಮತ್ತು ಸೈನ್ಯ ಎಲ್ಲವೂ ಕಾಲಗರ್ಭದಲ್ಲಿ ಲೀನವಾಗಿರುವುದನ್ನು ಕೇಳಿ ಕಕುದ್ಮಿ ಕಳವಳಗೊಳ್ಳುತ್ತಾನೆ. ಆಗ ಬ್ರಹ್ಮನು ಸರ್ವವ್ಯಾಪಿಯಾದ ವಿಷ್ಣುವನ್ನು ಸ್ತುತಿಸುತ್ತಾ, ಪರಮಾತ್ಮನೇ ಈಗ ಭೂಮಿಯಲ್ಲಿ ಕೃಷ್ಣ ಮತ್ತು ಬಲರಾಮರಾಗಿ ಅವತರಿಸಿದ್ದಾನೆಂದು ತಿಳಿಸುತ್ತಾನೆ. ಕಕುದ್ಮಿ ಹಳೆಯ ರಾಜಧಾನಿಯಾದ ಕುಶಸ್ಥಲಿಯೇ ಈಗ 'ದ್ವಾರಕಾಪುರಿ'ಯಾಗಿ ಬದಲಾಗಿದೆ ಎಂದು ಹೇಳಿ, ಸಾಕ್ಷಾತ್ ವಿಷ್ಣುವಿನ ಅಂಶವಾದ ಬಲದೇವನಿಗೆ (ಬಲರಾಮ) ರೇವತಿಯನ್ನು ವಿವಾಹ ಮಾಡಿಕೊಡಲು ಸೂಚಿಸುತ್ತಾನೆ.

New Project (29)

ಬ್ರಹ್ಮನ ಆಜ್ಞೆಯಂತೆ ಕಕುದ್ಮಿ ಭೂಲೋಕಕ್ಕೆ ಮರಳಿದಾಗ, ಅಲ್ಲಿನ ಮನುಷ್ಯರು ಕುಳ್ಳರಾಗಿ, ಶಕ್ತಿಹೀನರಾಗಿ ಮತ್ತು ವಿವೇಕಹೀನರಾಗಿ ಕಂಡುಬರುತ್ತಾರೆ. ಹಿಂದಿನ ಯುಗದವಳಾದ ರೇವತಿಯು ಬಹಳ ಎತ್ತರವಾಗಿರುತ್ತಾಳೆ. ದ್ವಾರಕೆಯಲ್ಲಿ ಬಲರಾಮನನ್ನು ಭೇಟಿಯಾದಾಗ, ಬಲರಾಮನು ತನ್ನ 'ಹಲ'ದ ತುದಿಯಿಂದ ರೇವತಿಯನ್ನು ಕೆಳಕ್ಕೆ ಜಗ್ಗುತ್ತಾನೆ. ಇದರಿಂದ ಅವಳು ಆ ಕಾಲದ ಸ್ತ್ರೀಯರ ಎತ್ತರಕ್ಕೆ ಸರಿಯಾಗುತ್ತಾಳೆ.

ನಂತರ ವಿಧಿಪೂರ್ವಕವಾಗಿ ಬಲರಾಮ ಮತ್ತು ರೇವತಿಯ ವಿವಾಹವು ಸಂಪನ್ನವಾಗುತ್ತದೆ. ತನ್ನ ಮಗಳಿಗೆ ಶ್ರೇಷ್ಠನಾದ ವರನು ದೊರೆತನೆಂಬ ತೃಪ್ತಿಯಿಂದ, ರೈವತ ಮಹಾರಾಜನು ರಾಜ್ಯದ ವ್ಯಾಮೋಹವನ್ನು ತೊರೆದು ತಪಸ್ಸು ಮಾಡಲು ಹಿಮಾಲಯಕ್ಕೆ ತೆರಳುತ್ತಾನೆ.

ಕಥೆ ಕಲಿಸುವ ಪಾಠಗಳು

ಒಂದು: ಎಲ್ಲೋ ಕೇಳಿಸುತ್ತಿರುವ ಸಂಗೀತ ಚೆನ್ನಾಗಿದೆ ಎಂದು ಹೋಗಬೇಕಾದ ಜಾಗದ ಬಗ್ಗೆ ಮರೆತರೆ ನಷ್ಟವಾಗುವುದು ನಮಗೆ ಹೊರತು ಇನ್ಯಾರಿಗೂ ಅಲ್ಲ. ಸಂಗೀತದ ಸುಖ ಸಿಗುತ್ತದೆ. ಅದರೆ, ಪ್ರವಾಸಕ್ಕೆ ಮೀಸಲಿಟ್ಟ ಸಮಯ ಕಳೆದುಹೋಗಿರುತ್ತದೆ. ಕಕುದ್ಮಿ ರಾಜನು ಬ್ರಹ್ಮಲೋಕಕ್ಕೆ ಹೋದಾಗ ಅದು ಕೇವಲ ಒಂದು ಸಣ್ಣ ವಿಹಾರ ಎಂದು ಭಾವಿಸಿದ್ದನು. ಆದರೆ ಅವನು ಮರಳಿ ಬರುವಷ್ಟರಲ್ಲಿ ಭೂಮಿಯ ಮೇಲೆ ಯುಗಗಳೇ ಉರುಳಿದ್ದವು.

ಎರಡು: ಕೇವಲ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಹೋಗುವುದಲ್ಲ. ಅದು ನಮಗೆ ಅರಿವಿಲ್ಲದಂತೆ ನಮ್ಮ ಕಾಲಮಾನ ಮತ್ತು ದೃಷ್ಟಿಕೋನವನ್ನೇ ಬದಲಿಸುತ್ತದೆ. ನಾವು ಒಂದು ಸುದೀರ್ಘ ಪ್ರಯಾಣ ಮುಗಿಸಿ ಬಂದಾಗ ನಾವು ಬಿಟ್ಟು ಹೋದ ಜಗತ್ತು ನಮಗಾಗಿ ಕಾಯುತ್ತಾ ಸ್ಥಿರವಾಗಿರುವುದಿಲ್ಲ, ಅದು ಬದಲಾಗಿರುತ್ತದೆ. ಕಕುದ್ಮಿ ತನ್ನ ರಾಜ್ಯವಾದ ಕುಶಸ್ಥಲಿಗೆ ಮರಳಿದಾಗ ಅದು ದ್ವಾರಕೆಯಾಗಿ ಬದಲಾಗಿತ್ತು. ಅಲ್ಲಿನ ಜನರ ರೂಪ, ಸ್ವಭಾವಗಳೆಲ್ಲವೂ ಬದಲಾಗಿದ್ದವು. ನಾವು ಹಳೆಯ ನೆನಪುಗಳನ್ನು ಇಟ್ಟುಕೊಂಡು ಒಂದು ಸ್ಥಳಕ್ಕೆ ಮತ್ತೆ ಹೋದಾಗ, ಆ ಸ್ಥಳವು ನಮಗೆ ಅಪರಿಚಿತವಾಗಿ ಕಾಣಬಹುದು. "ಹಳೆಯ ಜಗತ್ತು" ಈಗ ಉಳಿದಿಲ್ಲ ಎಂಬುದನ್ನು ಒಪ್ಪಿಕೊಳ್ಳುವುದೇ ಒಬ್ಬ ನಿಜವಾದ ಪ್ರವಾಸಿಗನ ಲಕ್ಷಣ. ಬದಲಾವಣೆಯನ್ನು ಮುಕ್ತ ಮನಸ್ಸಿನಿಂದ ಸ್ವಾಗತಿಸಬೇಕು.

ಮೂರು: ಹಿಂದಿನ ಯುಗದ ಎತ್ತರದ ಮನುಷ್ಯಳಾದ ರೇವತಿಯು ಬದಲಾದ ಕಾಲಕ್ಕೆ ಹೊಂದುವಂತೆ ಬಲರಾಮನ ಸಹಾಯದಿಂದ ತನ್ನ ಎತ್ತರವನ್ನು ಕುಗ್ಗಿಸಿಕೊಳ್ಳಬೇಕಾಯಿತು. ಹೊಸ ದೇಶ ಅಥವಾ ಹೊಸ ಕಾಲಕ್ಕೆ ಪ್ರಯಾಣಿಸಿದಾಗ ನಮ್ಮ ಹಳೆಯ ಅಹಂಕಾರ ಅಥವಾ ಹಳೆಯ ಸಂಪ್ರದಾಯಗಳು ಅಲ್ಲಿಗೆ ಹೊಂದಿಕೆಯಾಗದಿರಬಹುದು. ಹೊಸ ಪರಿಸರಕ್ಕೆ ತಕ್ಕಂತೆ ನಮ್ಮನ್ನು ನಾವು ಬದಲಾಯಿಸಿಕೊಳ್ಳುವುದು ಅಥವಾ ಹೊಂದಿಸಿಕೊಳ್ಳುವುದು ಅನಿವಾರ್ಯವಾಗುತ್ತದೆ.

ನಾಲ್ಕು: ಬ್ರಹ್ಮನು ಕಕುದ್ಮಿಗೆ ಅವನ ಸೈನ್ಯ, ಸೌಕರ್ಯ ಮತ್ತು ಬಂಧುಗಳೆಲ್ಲವೂ ಗತಿಸಿಹೋಗಿವೆ ಎಂದು ನೆನಪಿಸುತ್ತಾನೆ. ರಾಜನು ಏಕಾಂಗಿಯಾಗುತ್ತಾನೆ. ಅಂತಿಮವಾಗಿ ಪ್ರತಿಯೊಂದು ಮಹತ್ತರ ಪ್ರಯಾಣವೂ ಒಬ್ಬ ವ್ಯಕ್ತಿಯ ಒಂಟಿ ಪಯಣವಾಗಿರುತ್ತದೆ. ನಾವು ಎಷ್ಟೇ ಐಶ್ವರ್ಯ ಅಥವಾ ಅಧಿಕಾರ ಹೊಂದಿದ್ದರೂ, ಕಾಲದ ಪ್ರಯಾಣದಲ್ಲಿ ಅವೆಲ್ಲವನ್ನೂ ಬಿಟ್ಟು ಮುಂದೆ ಸಾಗಬೇಕಾಗುತ್ತದೆ. ಪ್ರಯಾಣವು ನಮಗೆ 'ವೈರಾಗ್ಯ' ಮತ್ತು 'ವರ್ತಮಾನದಲ್ಲಿ ಬದುಕುವುದನ್ನು' ಕಲಿಸುತ್ತದೆ.

ಐದು: ಕಕುದ್ಮಿ ರಾಜನು ತನ್ನ ಮಗಳ ಹಿತಕ್ಕಾಗಿ ಬ್ರಹ್ಮಲೋಕಕ್ಕೆ ಹೋದವನು. ಅಂತಿಮವಾಗಿ ದೇವನ ದರ್ಶನ ಪಡೆದು ತಪಸ್ಸಿಗೆ ತೆರಳುತ್ತಾನೆ. ಒಂದು ಸಣ್ಣ ಕಾರಣಕ್ಕಾಗಿ ಪ್ರಯಾಣವನ್ನು ಆರಂಭಿಸಬಹುದು. ಆದರೆ ಆ ಪ್ರಯಾಣವು ನಮ್ಮನ್ನು ಯಾವುದೋ ಒಂದು ಉನ್ನತ ಸತ್ಯದ ಕಡೆಗೆ ಅಥವಾ ಆಧ್ಯಾತ್ಮಿಕ ಬದಲಾವಣೆಯ ಕಡೆಗೆ ಕರೆದೊಯ್ಯಬಹುದು. ಪ್ರಯಾಣ ಎಂದರೆ ಕೇವಲ ಹೊಸ ಜಾಗಗಳನ್ನು ನೋಡುವುದಲ್ಲ, ನಮ್ಮನ್ನು ನಾವು ಹೊಸದಾಗಿ ಕಂಡುಕೊಳ್ಳುವುದು. ಕಕುದ್ಮಿಯ ಕಥೆಯು ನಮಗೆ ಕಾಲ ಯಾರಿಗಾಗಿಯೂ ಕಾಯುವುದಿಲ್ಲ, ಬದಲಾವಣೆಯೇ ಜಗದ ನಿಯಮ ಎಂಬ ಸಾರ್ವಕಾಲಿಕ ಸತ್ಯವನ್ನು ಸಾರುತ್ತದೆ.

Pramod Mohan Hegde

Pramod Mohan Hegde

A media professional with four years of experience in journalism, having worked with leading Kannada publications such as Vistara, Vijayavani, and Vijaya Karnataka as a cinema journalist. Also an author with a keen interest in travel and cinema. Currently serving as Senior Sub Editor at Pravasi Prapancha, contributing editorial expertise and engaging storytelling to the media industry.

ಕೃಷ್ಣ-ಸುಧಾಮರ ಸ್ನೇಹದ ಗುರುತು ಬೇಟ್ ದ್ವಾರಕಾ

Read Previous

ಕೃಷ್ಣ-ಸುಧಾಮರ ಸ್ನೇಹದ ಗುರುತು ಬೇಟ್ ದ್ವಾರಕಾ

ವಿಹಂಗಮ ಸಂಗಮ

Read Next

ವಿಹಂಗಮ ಸಂಗಮ