ದೇಶಕ್ಕಾಗಿ ಬದುಕನ್ನೇ ಬಲಿದಾನ ಮಾಡಿದ ವೀರರ ಅನನ್ಯ ಗಾಥೆ
ಈ ಕೃತಿಯನ್ನು ಓದುವಾಗಿ ಓದುಗರಿಗೆ ತಿಳಿಯುವ ಮೊದಲ ಸಂಗತಿಯೆಂದರೆ, ಗುಪ್ತಚರರ ಜೀವನವು ಸಿನಿಮಾಗಳಲ್ಲಿ ತೋರಿಸುವ ಹಾಗೆ ರೋಚಕ ಸಾಹಸಗಳಿಂದಷ್ಟೇ ಕೂಡಿರುವುದಿಲ್ಲ. ಅದು ನಿರಂತರ ಭಯ, ಅನುಮಾನ, ಏಕಾಂತ, ನೋವು ಮತ್ತು ತ್ಯಾಗಗಳಿಂದ ಕೂಡಿರುತ್ತದೆ. ಪ್ರತಿಯೊಂದು ಹೆಜ್ಜೆಯಲ್ಲೂ ಸಾವಿನ ನೆರಳು ಹಿಂಬಾಲಿಸುವ ಜಗತ್ತಿನಲ್ಲಿ ಅವರು ಬದುಕಬೇಕಾಗುತ್ತದೆ.
- ಚಂದ್ರು
ಸಾಹಿತ್ಯವು ಕೇವಲ ಮನೋನರಂಜೆನಯ ಸಾಧನವಲ್ಲ. ಅದು ಸಮಾಜಕ್ಕೆ ಅರಿವು ಮೂಡಿಸುವ, ಇತಿಹಾಸದಲ್ಲಿ ಮರೆಯಾದ ಪುಟಗಳನ್ನು ತರೆದಿಡುವ ಮತ್ತು ದೇಶದ ಬಗ್ಗೆ ಹೆಮ್ಮೆ ಮೂಡಿಸುವ ಶಕ್ತಿಯುತ ಮಾಧ್ಯವವೂ ಆಗಿದೆ. ಈ ದೃಷ್ಟಿಯಲ್ಲಿ ನೋಡಿದಾಗ ಡಾ. ಡಿ.ವಿ ಗುರುಪ್ರಸಾದ್ ಅವರ ಇತ್ತೀಚಿನ ಕೃತಿ, ʼಪಾಕ್‌ನಲ್ಲಿ ನಮ್ಮ ಧುರಂಧರರುʼ ವಿಶೇಷ ಮಹತ್ವವನ್ನು ಪಡೆದುಕೊಳ್ಳುತ್ತದೆ.
ಸಾಮಾನ್ಯವಾಗಿ ನಾವು ಸೈನಿಕರ ಸಾಹಸಗಳ ಬಗ್ಗೆ ಕೇಳುತ್ತೇವೆ, ಆದರೆ ದೇಶದ ಭದ್ರತೆಗಾಗಿ ತಮ್ಮ ಗುರುತನ್ನೇ ತ್ಯಜಿಸಿ ಶತ್ರುರಾಷ್ಟ್ರದ ನೆಲದಲ್ಲಿ ಗೂಢರ‍್ಯೆಯನ್ನು ಮಾಡುವ ಬೇಹುಗಾರರ ಬದುಕಿನ ಕಥೆಗಳು ಸಾರ್ವಜನಿಕ ವಲಯಕ್ಕೆ ಹೆಚ್ಚು ತಲುಪುವುದಿಲ್ಲ. ಈ ಕೃತಿ ಅಂಥ ಅನಾಮಧೇಯ ವೀರರ ತ್ಯಾಗ, ನೋವು, ಸಾಹಸ ಮತ್ತು ದೇಶಭಕ್ತಿಯನ್ನು ಹೃದಯಸ್ಪರ್ಶಿಯಾಗಿ ಚಿತ್ರಿಸುತ್ತದೆ.
ಈ ಕೃತಿಯನ್ನು ಓದುವಾಗಿ ಓದುಗರಿಗೆ ತಿಳಿಯುವ ಮೊದಲ ಸಂಗತಿಯೆಂದರೆ, ಗುಪ್ತಚರರ ಜೀವನವು ಸಿನಿಮಾಗಳಲ್ಲಿ ತೋರಿಸುವ ಹಾಗೆ ರೋಚಕ ಸಾಹಸಗಳಿಂದಷ್ಟೇ ಕೂಡಿರುವುದಿಲ್ಲ. ಅದು ನಿರಂತರ ಭಯ, ಅನುಮಾನ, ಏಕಾಂತ, ನೋವು ಮತ್ತು ತ್ಯಾಗಗಳಿಂದ ಕೂಡಿರುತ್ತದೆ. ಪ್ರತಿಯೊಂದು ಹೆಜ್ಜೆಯಲ್ಲೂ ಸಾವಿನ ನೆರಳು ಹಿಂಬಾಲಿಸುವ ಜಗತ್ತಿನಲ್ಲಿ ಅವರು ಬದುಕಬೇಕಾಗುತ್ತದೆ. ದೇಶಕ್ಕಾಗಿ ಅವರು ನಡೆಸುವ ಹೋರಾಟವು ಯುದ್ಧಭೂಮಿಯಲ್ಲಿರುವುದಿಲ್ಲ. ಶತ್ರು ರಾಷ್ಟ್ರದ ಬೀದಿಗಳಲ್ಲಿ, ಕಚೇರಿಗಳಲ್ಲಿ ಮತ್ತು ನಿಗೂಢ ಸ್ಥಳಗಳಲ್ಲಿ ನಡೆಯುತ್ತದೆ.
ಇದನ್ನೂ ಓದಿ: ಈ ಲೈಬ್ರರಿಯಲ್ಲಿ ಪುಸ್ತಕಗಳ ಬದಲಿಗೆ ‘ಮನುಷ್ಯರೇ ಪುಸ್ತಕ’ಗಳಾಗಿರುತ್ತಾರೆ!
ಈ ಪುಸ್ತಕದ ಅತ್ಯಂತ ಮನಕಲಕುವ ಅಂಶಗಳಲ್ಲಿ ಅಮ್ರಿಕ್ ಸಿಂಗ್‌ರಂಥ ಡಬಲ್ ಏಜೆಂಟ್‌ಗಳ ಪಾತ್ರ ಮುಖ್ಯವಾಗಿದೆ. ಯಾವುದೇ ಗುಪ್ತಚರ ವ್ಯವಸ್ಥೆಗೆ ಹೊರಗಿನ ಶತ್ರುಗಳಿಗಿಂತ ಒಳಗಿನ ದ್ರೋಹವೇ ಹೆಚ್ಚು ಅಪಾಯಕಾರಿ ಎಂಬ ಸತ್ಯವನ್ನು ಲೇಖಕರು ಪರಿಣಾಮಕಾರಿಯಾಗಿ ತೋರಿಸಿದ್ದಾರೆ. ದೇಶಕ್ಕಾಗಿ ಕಾರ್ಯನಿರ್ವಹಿಸುತ್ತಿದ್ದ ಭಾರತೀಯ ಗುಪ್ತಚರರ ಮತ್ತು ಹ್ಯಾಂಡ್ಲರ್‌ಗಳ ಮಾಹಿತಿಯನ್ನು ಡಬಲ್ ಏಜೆಂಟ್ ನೀಡಿದ್ದರ ಪರಿಣಾಮವಾಗಿ ಕೆಲವು ಗುಪ್ತಚರರು ಜೈಲಿಗೆ ಸೇರಿದ್ದು ತುಂಬಾ ದುಃಖಕರವಾಗಿದೆ.
ಈ ಹಿನ್ನೆಲೆಯಲ್ಲಿ ʼಮೋಹನ್ ಲಾಲ್ʼ ಅವರ ಕಥೆ ಓದುಗರ ಮನಸನ್ನು ತೀವ್ರವಾಗಿ ಕಾಡುತ್ತದೆ. ಅಮ್ರಿಕ್ ಸಿಂಗ್‌ನ ಮಾಹಿತಿಯಿಂದಾಗಿ ಪಾಕಿಸ್ತಾನಿ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದ ಅವರು ಸುಮಾರು 6 ವರ್ಷಗಳ ಕಾಲ ಜೈಲಿನಲ್ಲಿ ಕಳೆದರು. ದೈಹಿಕವಾಗಿ ಮಾತ್ರವಲ್ಲ, ಮಾನಸಿಕವಾಗಿಯೂ ಅವರನ್ನು ಮುರಿಯಲು ನಡೆದ ಪ್ರಯತ್ನಗಳು ಊಹೆಗೂ ಮೀರಿವೆ. ಎಷ್ಟೇ ಹಿಂಸೆಗಳನ್ನು ಅನುಭವಿಸಿದರೂ ಹಾಗೂ ಎಷ್ಟೇ ಆಮಿಷವನ್ನು ಒಡ್ಡಿದರೂ ಅವರು ದೇಶದ ರಹಸ್ಯವನ್ನು ಬಹಿರಂಗಪಡಿಸಲಿಲ್ಲ ಮತ್ತು ಕೊನೆಯವರೆಗೂ ತಾನು ಒಬ್ಬ ಭಾರತೀಯ ಗೂಢಚಾರಿ ಎಂದು ಎಂದಿಗೂ ಒಪ್ಪಿಕೊಳ್ಳುವುದಿಲ್ಲ. ದೇಶದ ಮೇಲಿನ ನಿಷ್ಠೆ ಮತ್ತು ಕರ್ತವ್ಯಪ್ರಜ್ಞೆಗೆ ಇಂಥ ಉದಾಹರಣೆಗಳು ತುಂಬಾ ಅಪರೂಪ. ಮೋಹನ್ ಲಾಲ್ ಅವರ ಕಥೆ ಕೇವಲ ಒಬ್ಬ ವ್ಯಕ್ತಿಯ ನೋವಿನ ಕಥೆಯಲ್ಲ, ಅದು ದೇಶಕ್ಕಾಗಿ ಮೌನವಾಗಿ ನರಳಿದ ಸಾವಿರಾರು ಅನಾಮಧೇಯ ವೀರರ ಸಂಕೇತವಾಗಿದೆ.
ಇನ್ನೊಂದು ರೋಚಕ ಹಾಗೂ ದುರಂತಮಯ ಕಥೆ, ರವೀಂದ್ರ ಕೌಶಿಕ್ ಅವರದ್ದು. ತನ್ನ 23ನೆಯ ವಯಸ್ಸಿನಲ್ಲಿ ಪಾಕಿಸ್ತಾನಕ್ಕೆ ನುಸುಳಿ ಅಲ್ಲೇ ಕಾನೂನು ಪದವಿಯನ್ನು ಪಡೆದು, ಮಿಲಿಟರಿಯಲ್ಲಿ ಗುಮಾಸ್ತ ಹುದ್ದೆಯನ್ನು ಪಡೆಯುವುದು ಮಾತ್ರವಲ್ಲದೇ ಉನ್ನತ ಹುದ್ದೆಯ ಸೈನಿಕ ಅಧಿಕಾರಿಯ ಮಗಳನ್ನು ಮದುವೆಯಾದ ಅವರು ತಮ್ಮ ಕರ್ತವ್ಯವನ್ನು ಎಂಥ ಅಪಾಯಕಾರಿ ಸ್ಥಿತಿಯಲ್ಲಿ ನಿರ್ವಹಿಸುತ್ತಿದ್ದರು ಎಂಬುದನ್ನು ತೋರಿಸುತ್ತದೆ. ಗುಪ್ತಚರ ಕಾರ್ಯಾಚರಣೆಯ ಯಶಸ್ಸು ಎಷ್ಟರಮಟ್ಟಿಗೆ ತಲುಪಬಹುದು ಎಂಬುದಕ್ಕೆ ಇವರದ್ದು ಅದ್ಭುತವಾದ ಉದಾಹರಣೆ. ಆದರೆ ವಿಧಿಯ ಕ್ರೂರತೆಯಿಂದ ಅವರ ಗುರುತು ಬಹಿರಂಗಗೊಂಡು, ಕೊನೆಗೆ ಅವರು ಜೈಲಿನಲ್ಲಿ ತಮ್ಮ ಜೀವವನ್ನು ಬಲಿದಾನ ಮಾಡಿದ್ದು ಓದುಗರ ಹೃದಯವನ್ನು ಭಾರಗೊಳಿಸುತ್ತದೆ.
ಲೇಖಕರ ಬರವಣಿಗೆಯ ಶೈಲಿಯ ಬಗ್ಗೆ ವಿಶೇಷವಾಗಿ ಹೇಳಲೇಬೇಕು. ಡಾ. ಗುರುಪ್ರಸಾದ್ ಅವರು ವಿಷಯವನ್ನು ಅತಿಯಾದ ನಾಟಕೀಯತೆಯಿಂದ ನಿರೂಪಿಸುವುದಿಲ್ಲ. ಬದಲಾಗಿ ವಾಸ್ತವಿಕತೆಯಿಂದ ಕಥನವನ್ನು ಮುಂದುವರಿಸುತ್ತಾರೆ. ಇದರ ಪರಿಣಾಮವಾಗಿ ಓದುಗರು ಕೇವಲ ಘಟನೆಗಳನ್ನು ಓದುವುದಿಲ್ಲ, ಅವುಗಳನ್ನು ಅನುಭವಿಸುತ್ತಾರೆ. ಪ್ರತಿಯೊಂದು ಅಧ್ಯಾಯವೂ ಓದುಗರಲ್ಲಿ ಒಂದು ಹೊಸ ಪ್ರಶ್ನೆಯನ್ನು ಹುಟ್ಟುಹಾಕುತ್ತದೆ; ದೇಶಕ್ಕಾಗಿ ಇಷ್ಟೊಂದು ತ್ಯಾಗ ಮಾಡಿದವರಿಗೆ ನಾವು ಯಾವ ರೀತಿಯ ಗೌರವ ನೀಡಿದ್ದೇವೆ ಎಂದು?
ಈ ಕೃತಿಯು ದೇಶಭಕ್ತಿಯ ಪರಿಕಲ್ಪನೆಯನ್ನು ಹೊಸ ದೃಷ್ಟಿಕೋನದಲ್ಲಿ ಪರಿಚಯಿಸುತ್ತದೆ. ದೇಶಭಕ್ತಿ ಎಂದರೆ ದೇಶಕ್ಕಾಗಿ ಮೌನವಾಗಿ ತ್ಯಾಗ ಮಾಡುವುದು, ಅಗತ್ಯವಿದ್ದರೆ ತನ್ನ ಕುಟುಂಬ, ತನ್ನ ಕನಸುಗಳನ್ನು ಮತ್ತು ಬದುಕನ್ನೇ ಅರ್ಪಿಸುವುದು ಎಂಬುದನ್ನು ಈ ಕೃತಿ ಸ್ಪಷ್ಟಪಡಿಸುತ್ತದೆ.
ಸ್ವಾತಂತ್ರ್ಯ ಮತ್ತು ಭದ್ರತೆ ನಮಗೆ ಸಹಜವಾಗಿ ದೊರೆತ ವರಗಳಲ್ಲ. ಅವುಗಳ ಹಿಂದೆ ಇಂಥ ಅನೇಕ ವೀರರ ಬೆವರು, ರಕ್ತ ಮತ್ತು ಕಣ್ಣೀರು ಅಡಗಿವೆ. ದೇಶ ಸೇವೆಗಾಗಿ ಇವರು ತಮ್ಮ ಕುಟುಂಬವನ್ನು, ವೈಯಕ್ತಿಕ ಜೀವನವನ್ನು ಮತ್ತು ತಮ್ಮ ಭವಿಷ್ಯವನ್ನು ಹೇಗೆ ಪಣಕ್ಕಿಡುತ್ತಾರೆ ಎಂಬುದನ್ನು ನಾವು ಈ ಕೃತಿಯಿಂದ ತಿಳಿಯಬಹುದಾಗಿದೆ. ಹಲವು ಏಜೆಂಟರು ತಮ್ಮ ಮಕ್ಕಳ ಹುಟ್ಟನ್ನು, ಬೆಳವಣಿಗೆಯನ್ನು ನೋಡಲು ಸಾಧ್ಯವಾಗಲಿಲ್ಲ, ಕೆಲವರು ತಮ್ಮ ಕುಟುಂಬವನ್ನು ಕಾಣಲು ತಮ್ಮ ಜೀವವನ್ನು ಕೈಯಲ್ಲಿ ಹಿಡಿದುಕೊಂಡು ಹಲವಾರು ವರ್ಷ ಕಾಯಬೇಕಾಯಿತು ಮತ್ತು ಕೆಲವರು ಪಾಕಿಸ್ತಾನದ ಜೈಲಿನಲ್ಲಿ ತಮ್ಮ ಜೀವವನ್ನು ಕಳೆದುಕೊಂಡರು. ಇವೆಲ್ಲವೂ ದೇಶಭಕ್ತಿಯ ನಿಜವಾದ ಬೆಲೆಯನ್ನು ಓದುಗರಿಗೆ ಅರ್ಥ ಮಾಡಿಸುತ್ತವೆ.
ಡಾ. ಡಿ.ವಿ ಗುರುಪ್ರಸಾದ್ ಅವರು ಕನ್ನಡ ಓದುಗರಿಗೆ ಕೇವಲ ಒಂದು ಕೃತಿಯನ್ನು ನೀಡಿಲ್ಲ. ದೇಶಕ್ಕಾಗಿ ಎಲ್ಲವನ್ನೂ ಕಳೆದುಕೊಂಡ ವೀರರ ಬದುಕಿನ ಅಮರಗಾಥೆಯನ್ನು ನೀಡಿದ್ದಾರೆ. ದೇಶಭಕ್ತಿಯ ನಿಜವಾದ ಅರ್ಥವನ್ನು ಅರಿಯಲು ಬಯಸುವ ಪ್ರತಿಯೊಬ್ಬರೂ ಈ ಕೃತಿಯನ್ನು ಓದಲೇಬೇಕು, ಅದರಲ್ಲೂ ಇಂದಿನ ಯುವಪೀಳಿಗೆಯವರು ಖಂಡಿವಾಗಿಯೂ ಓದಲೇಬೇಕಾದ ಉತ್ತಮ ಕೃತಿ ಎಂದರೆ ತಪ್ಪಾಗಲಾರದು. ಈ ಕೃತಿಯು ದೇಶಕ್ಕಾಗಿ ಮೌನವಾಗಿ ಹೋರಾಡಿದ ಗುಪ್ತ ಯೋಧರಿಗೆ ಸಲ್ಲಿಸಿದ ಗೌರವವಾಗಿದೆ.
ಲೇಖಕರು: ಹವ್ಯಾಸಿ ಬರಹಗಾರರು
ಕೃತಿ ವಿವರ:
ಕೃತಿ: ‘ಪಾಕ್‌ನಲ್ಲಿ ನಮ್ಮ ಧುರಂಧರರು’
ಲೇ: ಡಿ.ವಿ. ಗುರುಪ್ರಸಾದ್