ಆಕ್ಸಿಜನ್ ಮಾಸ್ಕ್ ಮತ್ತು ಮೈಕ್ರೋಪೋನ್
ವಿಮಾನದ ಕ್ಯಾಬಿನ್‌ನಲ್ಲಿ ಒತ್ತಡ ಕಡಿಮೆಯಾದಾಗ ಅಥವಾ ಹೊಗೆ ಆವರಿಸಿದಾಗ, ಪೈಲಟ್ ಗಳು ತಕ್ಷಣವೇ ‘ಕ್ವಿಕ್ ಡಾನಿಂಗ್ ಮಾಸ್ಕ್’ ಧರಿಸುತ್ತಾರೆ. ಇದನ್ನು ಧರಿಸಿದ ತಕ್ಷಣ, ಅವರು ಬಳಸುತ್ತಿದ್ದ ಸಾಮಾನ್ಯ ಹೆಡ್ಸೆಟ್ ಮೈಕ್ರೊಫೋನ್ ನಿಷ್ಕ್ರಿಯವಾಗುತ್ತದೆ ಮತ್ತು ಮಾಸ್ಕ್ ಒಳಗಿರುವ ವಿಶೇಷ ಮೈಕ್ರೊಫೋನ್ ಕೆಲಸ ಮಾಡಲು ಶುರು ಮಾಡುತ್ತದೆ.
ತುರ್ತು ಪರಿಸ್ಥಿತಿಯಲ್ಲಿ ಕಾಕ್‌ಪಿಟ್‌ನಲ್ಲಿ ಏನಾಗುತ್ತದೆ ಎಂಬುದನ್ನು ಹಾಲಿವುಡ್ ಸಿನಿಮಾಗಳಲ್ಲಿ ತೋರಿಸಿದಾಗ, ಪೈಲಟ್‌ಗಳು ಆಕ್ಸಿಜನ್ ಮಾಸ್ಕ್ ಧರಿಸಿ ಮಾತನಾಡುವುದನ್ನು ನೀವು ನೋಡಿರಬಹುದು. ಆ ಸಮಯದಲ್ಲಿ ಅವರ ಧ್ವನಿ ‘ಸ್ಟಾರ್ ವಾರ್ಸ್’ ಸಿನಿಮಾದ ‘ಡಾರ್ತ್ ವೇರ್ಡ್’ ನಂತೆ ಭಾರವಾಗಿ ಮತ್ತು ವಿಚಿತ್ರವಾಗಿ ಕೇಳಿಸುತ್ತದೆ. ಆದರೆ, ನಿಜವಾದ ವಿಮಾನ ಯಾನದಲ್ಲಿ, ಸ್ಪಷ್ಟವಾದ ಸಂವಹನ ಅತಿ ಮುಖ್ಯ.
ವಿಮಾನಕ್ಕೆ ಅಪಾಯ ಎದುರಾದಾಗ, ಪೈಲಟ್ ‘ಏರ್ ಟ್ರಾಫಿಕ್ ಕಂಟ್ರೋಲ್’ (ಎಟಿಸಿ) ಜತೆ ಅಥವಾ ಸಹ-ಪೈಲಟ್ ಜತೆ ಮಾತನಾಡುವಾಗ ಒಂದು ಸಣ್ಣ ಶಬ್ದ ಅಸ್ಪಷ್ಟವಾದರೂ ಅದು ದೊಡ್ಡ ದುರಂತಕ್ಕೆ ಕಾರಣವಾಗಬಹುದು. ಹಾಗಾದರೆ, ಮುಖಕ್ಕೆ ಗಟ್ಟಿಯಾಗಿ ಅಂಟಿ ಕೊಂಡಿರುವ, ಗಾಳಿ ರಭಸವಾಗಿ ಬೀಸುವ ಮಾಸ್ಕ್‌ನ ಒಳಗಿದ್ದುಕೊಂಡು ಪೈಲಟ್‌ಗಳು ಹೇಗೆ ಸ್ಪಷ್ಟವಾಗಿ ಮಾತನಾಡುತ್ತಾರೆ? ಇದರ ಹಿಂದೆ ಆಸಕ್ತಿದಾಯಕವಾದ ‘ಅಕೌಸ್ಟಿಕ್ ಇಂಜಿನಿಯರಿಂಗ್’ ಇದೆ.
ವಿಮಾನದ ಕ್ಯಾಬಿನ್‌ನಲ್ಲಿ ಒತ್ತಡ ಕಡಿಮೆಯಾದಾಗ ಅಥವಾ ಹೊಗೆ ಆವರಿಸಿದಾಗ, ಪೈಲಟ್ ಗಳು ತಕ್ಷಣವೇ ‘ಕ್ವಿಕ್ ಡಾನಿಂಗ್ ಮಾಸ್ಕ್’ ಧರಿಸುತ್ತಾರೆ. ಇದನ್ನು ಧರಿಸಿದ ತಕ್ಷಣ, ಅವರು ಬಳಸುತ್ತಿದ್ದ ಸಾಮಾನ್ಯ ಹೆಡ್ಸೆಟ್ ಮೈಕ್ರೊಫೋನ್ ನಿಷ್ಕ್ರಿಯವಾಗುತ್ತದೆ ಮತ್ತು ಮಾಸ್ಕ್ ಒಳಗಿರುವ ವಿಶೇಷ ಮೈಕ್ರೊಫೋನ್ ಕೆಲಸ ಮಾಡಲು ಶುರು ಮಾಡುತ್ತದೆ.
ಇದನ್ನೂ ಓದಿ: ಸಣ್ಣ ಸನ್ನೆ, ಉಳಿದ ಪ್ರಾಣ
ಇಲ್ಲಿ ಮೂರು ಮುಖ್ಯ ತಾಂತ್ರಿಕ ಸವಾಲುಗಳನ್ನು ಇಂಜಿನಿಯರ್‌ಗಳು ಭೇದಿಸಿದ್ದಾರೆ. ಉಸಿರಾಟದ ಶಬ್ದ (Breathing Noise). ಆಕ್ಸಿಜನ್ ಸರಬರಾಜು ಮಾಡುವಾಗ ಬರುವ ‘ಸ್ಶೂ....’ ಎಂಬ ಶಬ್ದವನ್ನು ತಡೆಯುವುದು. ಸಣ್ಣ ಕಪ್ (ಮಾಸ್ಕ್)ನೊಳಗೆ ಮಾತನಾಡು ವಾಗ ಧ್ವನಿ ಪ್ರತಿಧ್ವನಿಸುವುದನ್ನು ತಡೆಯುವುದು.
ಹೆಡ್ಸೆಟ್ ಮೈಕ್‌ನಿಂದ ಮಾಸ್ಕ್ ಮೈಕ್‌ಗೆ ಸಂಪರ್ಕ ಬದಲಾಯಿಸುವುದು. ಸಾಮಾನ್ಯವಾಗಿ ಪೈಲಟ್‌ಗಳು ಬಳಸುವ ಹೆಡ್ಸೆಟ್‌ನಲ್ಲಿ ‘ಬೂಮ್ ಮೈಕ್’ ಇರುತ್ತದೆ (ಬಾಯಿಯ ಹತ್ತಿರ ಬರುವ ಕಡ್ಡಿ). ಆದರೆ ಆಕ್ಸಿಜನ್ ಮಾಸ್ಕ್ ಧರಿಸಿದಾಗ, ಆ ಬೂಮ್ ಮೈಕ್ ಮಾಸ್ಕ್‌ನ ಹೊರಗೆ ಉಳಿಯುತ್ತದೆ.
ಆದ್ದರಿಂದ, ಮಾಸ್ಕ್‌ನ ವಿನ್ಯಾಸದ, ಮೂಗು ಮತ್ತು ಬಾಯಿಯನ್ನು ಮುಚ್ಚುವ ಕೋನ್ (Cone) ಆಕಾರದ ರಬ್ಬರ್ ಕಪ್‌ನ ಒಳಭಾಗದಲ್ಲಿ ಅತ್ಯಂತ ಸೂಕ್ಷ್ಮವಾದ ಮೈಕ್ರೊಫೋನ್ ಅನ್ನು ಅಳವಡಿಸಲಾಗಿರುತ್ತದೆ. ಇದು ಸಾಮಾನ್ಯ ಮೈಕ್ ಅಲ್ಲ. ಇದನ್ನು ‘ಡೈನಾಮಿಕ್ ನಾಯ್ಸ್ ಕ್ಯಾನ್ಸಲಿಂಗ್ ಮೈಕ್ರೊಫೋನ್’ ಎಂದು ಕರೆಯುತ್ತಾರೆ.
ಇದು ಹೇಗೆ ಕೆಲಸ ಮಾಡುತ್ತದೆ? ಇದು ವಿಮಾನದ ಇಂಜಿನ್ ಶಬ್ದ, ಎಚ್ಚರಿಕೆಯ ಗಂಟೆಗಳು (Alarms) ಮತ್ತು ಆಕ್ಸಿಜನ್ ಹರಿವಿನ ಶಬ್ದವನ್ನು ಹೇಗೆ ನಿಭಾಯಿಸುತ್ತದೆ ಎಂಬುದು ಕುತೂಹಲಕಾರಿ. ಈ ಮೈಕ್ರೊಫೋನ್ ಧ್ವನಿಯನ್ನು ಎರಡೂ ಕಡೆಯಿಂದ (ಮುಂಭಾಗ ಮತ್ತು ಹಿಂಭಾಗ) ಸ್ವೀಕರಿಸುವಂತೆ ವಿನ್ಯಾಸಗೊಳಿಸಲಾಗಿರುತ್ತದೆ.

ದೂರದಿಂದ ಬರುವ ಹಿನ್ನೆಲೆ ಶಬ್ದವು ಮೈಕ್‌ನ ಎರಡೂ ಬದಿಗಳಿಗೆ ಒಂದೇ ಸಮಯದಲ್ಲಿ ಅಪ್ಪಳಿಸುತ್ತದೆ. ಭೌತಶಾಸದ ನಿಯಮದಂತೆ, ಸಮಾನ ಒತ್ತಡವು ಎರಡೂ ಕಡೆಯಿಂದ ಬಿದ್ದರೆ ಅದು ರದ್ದುಗೊಳ್ಳುತ್ತದೆ. ಆದರೆ ಪೈಲಟ್ ಮಾತನಾಡುವಾಗ, ಅವರ ಬಾಯಿ ಮೈಕ್‌ನ ಒಂದು ಬದಿಗೆ ಹತ್ತಿರವಿರುತ್ತದೆ. ಹೀಗಾಗಿ ಧ್ವನಿಯ ಒತ್ತಡವು ಒಂದು ಬದಿಯಲ್ಲಿ ಹೆಚ್ಚಿರುತ್ತದೆ.
ಈ ವ್ಯತ್ಯಾಸವನ್ನು ಮಾತ್ರ ಮೈಕ್ರೊಫೋನ್ ವಿದ್ಯುತ್ ಸಂಕೇತವನ್ನಾಗಿ ಪರಿವರ್ತಿಸುತ್ತದೆ. ಹೀಗಾಗಿಯೇ ಅಬ್ಬರದ ಸೈರನ್‌ಗಳ ನಡುವೆಯೂ ಪೈಲಟ್ ಧ್ವನಿ ಎಟಿಸಿಗೆ ಸ್ಪಷ್ಟವಾಗಿ ಕೇಳಿಸುತ್ತದೆ. ಮಾಸ್ಕ್ ಧರಿಸಿದಾಗ ಪೈಲಟ್ ಉಸಿರಾಡಿದರೆ, ಆಮ್ಲಜನಕವು ರಭಸವಾಗಿ ಒಳಗೆ ಬರುತ್ತದೆ. ಇದನ್ನು ‘ಡಿಮ್ಯಾಂಡ್ ರೆಗ್ಯುಲೇಟರ್’ ನಿಯಂತ್ರಿಸುತ್ತದೆ.
ಪೈಲಟ್ ಉಸಿರು ಎಳೆದಾಗ ಮಾತ್ರ ಇದು ಆಕ್ಸಿಜನ್ ಬಿಡುತ್ತದೆ. ಇದು ದೊಡ್ಡ ‘ಕ್ಲಿಕ್-ಹಿಸ್ಸ್’ ಶಬ್ದವನ್ನು ಉಂಟುಮಾಡುತ್ತದೆ. ನೀವು ಟಿವಿಯಲ್ಲಿ ನೋಡುವಂತೆ, ಪೈಲಟ್‌ನ ಪ್ರತಿ ಉಸಿರಾಟವೂ ರೇಡಿಯೋದಲ್ಲಿ ಕೇಳಿಸಿದರೆ, ಎಟಿಸಿಗೆ ಕಿರಿಕಿರಿಯಾಗುತ್ತದೆ ಮತ್ತು ಸಂದೇಶ ಅಸ್ಪಷ್ಟವಾಗುತ್ತದೆ. ಇದನ್ನು ತಡೆಯಲು ‘ವಾಯ್ಸ್ ಆಕ್ಟಿವೇಟೆಡ್ ಸ್ಕ್ವೆಲ್ಚ’ ಅಥವಾ ಗೇಟಿಂಗ್ ತಂತ್ರಜ್ಞಾನವನ್ನು ಬಳಸಲಾಗುತ್ತದೆ.
ಪೈಲಟ್ ಮಾತನಾಡುವಾಗ ಉಂಟಾಗುವ ಧ್ವನಿಯ ತೀವ್ರತೆ ನಿರ್ದಿಷ್ಟ ಮಟ್ಟವನ್ನು ಮೀರಿದಾಗ ಮಾತ್ರ ಮೈಕ್ ಆನ್ ಆಗುತ್ತದೆ. ಕೇವಲ ಉಸಿರಾಟದ ಶಬ್ದವಿದ್ದರೆ, ಮೈಕ್ ಆಫ್ ಆಗಿಯೇ ಇರುತ್ತದೆ ಅಥವಾ ಆ ಶಬ್ದವನ್ನು ಫಿಲ್ಟರ್ ಮಾಡಲಾಗುತ್ತದೆ. ಸ್ಮಾರ್ಟ್ ಸ್ವಿಚಿಂಗ್ ವಿಮಾನಕ್ಕೆ ಹೇಗೆ ತಿಳಿಯುತ್ತದೆ? ತುರ್ತು ಪರಿಸ್ಥಿತಿಯಲ್ಲಿ ಪೈಲಟ್‌ಗೆ’ ನಾನು ಈಗ ಮಾಸ್ಕ್ ಹಾಕಿಕೊಂಡಿದ್ದೇನೆ, ಆಡಿಯೋ ಸೆಟ್ಟಿಂಗ್ ಬದಲಾಯಿಸು’ ಎಂದು ಸ್ವಿಚ್ ಹುಡುಕುವ ಸಮಯವಿರುವುದಿಲ್ಲ. ಇದಕ್ಕಾಗಿ ವಿಮಾನದಲ್ಲಿ ಸ್ವಯಂಚಾಲಿತ ವ್ಯವಸ್ಥೆ ಇರುತ್ತದೆ.