ಪ್ರವಾಸಿಗರು ತಮ್ಮ ದೇಶದ ಪುಟ್ಟಪುಟ್ಟ ರಾಯಭಾರಿಗಳು!
ಡಿಸ್ನಿ ಸ್ಟುಡಿಯೋ ಬೇರೆಯದೇ ಲೋಕ. ಇಲ್ಲೇನಿದ್ದರೂ ಹಾಲಿವುಡ್ ಚಿತ್ರಗಳನ್ನು ಹೇಗೆ ತೆಗೆಯುತ್ತಾರೆ, ಸ್ಪೆಷಲ್ ಎಫೆಕ್ಟ್ ಹೇಗೆ ಬಳಸಲಾಗುತ್ತದೆ ಎನ್ನುವುದನ್ನು ತೋರಿಸುತ್ತಾರೆ. ಟೈಟಾನಿಕ್ ಸಿನಿಮಾದಲ್ಲಿ ನೀರು ಇಡೀ ಹಡಗನ್ನೇ ಪ್ರವೇಶಿಸುವ ದೃಶ್ಯ ಹೇಗೆ ಚಿತ್ರೀಕರಿಸಿರಬಹುದು ಎನ್ನುವುದನ್ನು ನಿಮಗೆ ತೋರಿಸಲಾಗುತ್ತದೆ!
- ರಂಗಸ್ವಾಮಿ ಮೂಕನಹಳ್ಳಿ
ಡಿಸ್ನಿಲ್ಯಾಂಡ್ ಒಂದು ಭ್ರಾಮಕ ಲೋಕ ಎನ್ನುವುದರಲ್ಲಿ ಸಂಶಯವಿಲ್ಲ. ಡಿಸ್ನಿಲ್ಯಾಂಡ್ ಎಂದ ತಕ್ಷಣ ಅದು ‘ಮಕ್ಕಳಿಗೆ’ ಎಂದು ತಿಳಿದವರು ಹೆಚ್ಚು ಎಂದು ನನ್ನ ಭಾವನೆ. ಏಕೆಂದರೆ ನನ್ನ ನಿಲುವು ಕೂಡ ಅದೇ ಆಗಿತ್ತು. ನಮಗೇನು ಅಲ್ಲಿ ಕೆಲಸ? ಎನ್ನುವ ಭಾವನೆಯಿಂದ ಡಿಸ್ನಿಲ್ಯಾಂಡ್ ನಮ್ಮ ನೋಡಬೇಕಾದ ಸ್ಥಳಗಳಲ್ಲಿ ಸ್ಥಾನ ಪಡೆದಿರಲಿಲ್ಲ. ನಮ್ಮ ಈ ಬಾರಿಯ ಪ್ರವಾಸದ ಉದ್ದೇಶವೇ ಡಿಸ್ನಿಲ್ಯಾಂಡ್ ನೋಡುವುದಾಗಿತ್ತು. ಅನನ್ಯ ಡಿಸ್ನಿಯ ಅದೆಷ್ಟೋ ಎಪಿಸೋಡ್ಸ್ ನೋಡಿ ಎಲ್ಲಾ ಪಾತ್ರಗಳ ಹೆಸರು ಕುಲ ಗೋತ್ರ ಬಲ್ಲ ಪುರೋಹಿತೆ ಆಗಿದ್ದಳು! ಮುಖತಃ ಹೋಗಿ ನೋಡುವುದು ಬಾಕಿ ಉಳಿಸಿ ಕೊಂಡಿದ್ದಳು. ಆ ಬಾಕಿಯ ಚುಕ್ತಾ ಮಾಡಲು ಹೊರಟಿದ್ದೆವು.

ಡಿಸ್ನಿಲ್ಯಾಂಡ್, ಪ್ಯಾರಿಸ್ ನಗರದಿಂದ ಪೂರ್ವಕ್ಕೆ ಇಪ್ಪತ್ತು ಮೈಲಿ ದೂರದಲ್ಲಿ ಸುಮಾರು 5000 ಎಕರೆ ಪ್ರದೇಶದಲ್ಲಿ ಅಂದರೆ 19 ಚದರ ಕಿಲೋಮೀಟರ್ ವಿಸ್ತೀರ್ಣದಲ್ಲಿ ತಲೆ ಎತ್ತಿ ನಿಂತಿರುವ ಒಂದು ನಗರ. ಇದು ಅತಿ ಹೆಚ್ಚು ಪ್ರವಾಸಿಗರು ಭೇಟಿ ಕೊಟ್ಟ ಪ್ರದೇಶ ಏಕೆ ಎಂದು ತಿಳಿಯಲು ಅಲ್ಲಿಗೆ ಹೋಗುವುದು ಉತ್ತಮ.
ಮುಖ್ಯವಾಗಿ ಇಲ್ಲಿ ಡಿಸ್ನಿ ಲ್ಯಾಂಡ್ ಪಾರ್ಕ್ ಮತ್ತು ಡಿಸ್ನಿ ಸ್ಟುಡಿಯೋ ಪಾರ್ಕ್ ಎನ್ನುವ ಎರಡು ಮನರಂಜನೆ ಪಾರ್ಕ್ ಗಳಿವೆ. ಮುಂಗಡ ಕಾಯ್ದಿರಿಸಿ ಮತ್ತು ಡಿಸ್ನಿಲ್ಯಾಂಡ್ ನಲ್ಲೇ ಯಾವುದಾದರೂ ಹೊಟೇಲ್ ನಲ್ಲಿ ತಂಗುವುದರಿಂದ ಕೊಟ್ಟ ಹಣ ಮತ್ತು ಸಮಯ ಎರಡನ್ನೂ ಸದುಪಯೋಗ ಮಾಡಿಕೊಳ್ಳಬಹುದು. ಎರಡು ದಿನ ಏನೇನೂ ಸಾಲದು ಎನ್ನುವುದು ನನ್ನ ಭಾವನೆ.
ಡಿಸ್ನಿ ಲ್ಯಾಂಡ್ ನಲ್ಲಿ ಆಟಗಳದ್ದೆದ್ದೇ ಸಾಮ್ರಾಜ್ಯ! ಹಲವು ಕ್ರೀಡೆಗಳಿಗೆ ವಯೋಮಿತಿ ಉಂಟು. ಇನ್ನು ಕೆಲವಕ್ಕೆ ವ್ಯಕ್ತಿಯ ಎತ್ತರ ಮಾನದಂಡ! ಹೀಗಾಗಿ ಕೆಲವು ಆಟಗಳು 7 ವರ್ಷಕ್ಕಿಂತ ಕಡಿಮೆ ಪ್ರಾಯದ ಮಕ್ಕಳಿಗೆ ಪ್ರವೇಶವೇ ಸಿಕ್ಕದು.
ಡಿಸ್ನಿ ಸ್ಟುಡಿಯೋ ಬೇರೆಯದೇ ಲೋಕ. ಇಲ್ಲೇನಿದ್ದರೂ ಹಾಲಿವುಡ್ ಚಿತ್ರಗಳನ್ನು ಹೇಗೆ ತೆಗೆಯುತ್ತಾರೆ, ಸ್ಪೆಷಲ್ ಎಫೆಕ್ಟ್ ಹೇಗೆ ಬಳಸಲಾಗುತ್ತದೆ ಎನ್ನುವುದನ್ನು ತೋರಿಸುತ್ತಾರೆ. ಟೈಟಾನಿಕ್ ಸಿನಿಮಾದಲ್ಲಿ ನೀರು ಇಡೀ ಹಡಗನ್ನೇ ಪ್ರವೇಶಿಸುವ ದೃಶ್ಯ ಹೇಗೆ ಚಿತ್ರೀಕರಿಸಿರಬಹುದು ಎನ್ನುವುದನ್ನು ನಿಮಗೆ ತೋರಿಸಲಾಗುತ್ತದೆ! ಪರದೆಯ ಮೇಲಲ್ಲ. ಪ್ರವಾಸಿಗರನ್ನು ಒಂದು ರೈಲ್ ನಂಥ ಚಲಿಸುವ ಬಂಡಿಯಲ್ಲಿ ಕೂರಿಸಿ ಕರೆದುಕೊಂಡು ಹೋಗುತ್ತಾರೆ. ಕಣಿವೆಯಂಥ ಪ್ರದೇಶ ಸೃಷ್ಟಿಸಲಾಗಿದೆ, ಅಲ್ಲಿ ಅಚಾನಕ್ ನಿಮ್ಮ ಬಂಡಿ ನಿಲ್ಲುತ್ತದೆ. ಸುಶ್ರಾವ್ಯ ಸ್ವರದಲ್ಲಿ ಈಗ ನಿಮಗೆ ಸ್ಪೆಷಲ್ ಎಫೆಕ್ಟ್ ತೋರಿಸಲಾಗುತ್ತದೆ. ತಯಾರಾಗಿ ಎನ್ನುವ ಘೋಷಣೆ ಹೊರಡಿಸಲಾಗುತ್ತದೆ.

ಮರುಘಳಿಗೆಯಲ್ಲಿ’ಧೋ’ ಎಂದು ಸುರಿಯುವ ನೀರು ರಭಸದಿಂದ ಮೇಲಿನಿಂದ ಬೀಳಲು ಶುರುವಾಗುತ್ತದೆ. ಪ್ರವಾಸಿಗರು ಗಟ್ಟಿ ಗಾಜಿನ ಹಿಂದೆ ಸುರಕ್ಷಿತ. ನೋಡುಗರಿಗೆ ನೀರಿನಲ್ಲಿ ಮುಳುಗಿದರೇನೋ ಎನ್ನುವ ಭಾವ! ಇಂಥ ಅನೇಕ ವಿಷಯಗಳನ್ನು ಖುದ್ದು ಅನುಭವಿಸಬೇಕು.
ಜನರ ಜಾತ್ರೆ, ಎತ್ತ ನೋಡಿದರೂ ಜನ, ಜನ, ಜನ… ಪ್ರತಿ ಆಟಕ್ಕೆ ಕಾಯಬೇಕು! ಈ ಕಾಯುವಿಕೆಯದು ಒಂದು ಕಥೆ. ಆಟ ಯಾವುದೇ ಇರಲಿ ಕನಿಷ್ಠ ಅರ್ಧ ಘಂಟೆಯಾದರೂ ಕಾಯಲೇಬೇಕು ನಮ್ಮ ಸರದಿ ಬರಲು. ಹೀಗೆ ಡಿಸ್ನಿ ಲ್ಯಾಂಡ್ ನಲ್ಲಿ ಒಂದು ಆಟದಲ್ಲಿ ಪಾಲ್ಗೊಳ್ಳಲು ನಮ್ಮ ಸರದಿ ಕಾಯುತ್ತ ನಿಂತಿದ್ದೆವು. ನಮ್ಮ ಮುಂದೆ ಉತ್ತರ ಭಾರತೀಯ ಎರಡು ಜೋಡಿ ಪ್ರೇಮಿಗಳು (?) ನಿಂತಿದ್ದರು. ಅವರಲ್ಲಿ ಒಬ್ಬ ಹುಡುಗಿ, ಒಬ್ಬ ಹುಡುಗ ಪರವಾಗಿಲ್ಲ ಎನ್ನುವ ಮಟ್ಟಿನ ಸಭ್ಯತೆ, ಸಂಯಮದಲ್ಲಿ ನಿಂತಿದ್ದರು. ಮತ್ತೊಂದು ಜೋಡಿಯಲ್ಲಿನ ಹುಡುಗ ಮಾತ್ರ ಚಡಪಡಿಸಹತ್ತಿದ. ಅವಾಚ್ಯ ಪದಗಳು ಸರಾಗವಾಗಿ ಬಾಯಿಯಿಂದ ಹರಿಯತೊಡಗಿದವು. ಕಾಯುವುದು ಅವನಿಗೆ ಒಲ್ಲದ ವಿಷಯವಾಗಿತ್ತು. ‘ಸಾಲಾ ಗೋರಾ ಲೋಗ್’ .. ‘ಕಿತ್ನಾ ಔರ್ ರುಕ್ನಾ ಪಡೇಗಾ’ ಎನ್ನುವ ಪದಪುಂಜಗಳು ಅವನಿಂದ ಹಲವು ಬಾರಿ ಹೊರಬಿದ್ದವು.
ಇಷ್ಟು ಮಾತ್ರ ಆಗಿದ್ದರೆ ಹೋಗಲಿ ಬಿಡು ಎನ್ನಬಹುದು. ಆತ ಸಭ್ಯತೆಯ ಮೀರಿ ಒಂದು ಹೆಜ್ಜೆ ಮುಂದೆ ಹೋಗಿ, ಕೈಲಿದ್ದ ಡಿಸ್ನಿಲ್ಯಾಂಡ್ ನ ಮ್ಯಾಪ್ ಮಡಿಚಿ ಅದನ್ನು ಜೋರಾಗಿ ಬೀಸುತ್ತಿದ್ದ. ಆಗೆಲ್ಲ’ಪಟ್ ‘ ಎನ್ನುವ ಶಬ್ದ ಹೊರಬರುತ್ತಿತ್ತು. ಆತನಿಗೆ ಏನೋ ಸಾಧನೆ ಮಾಡಿದ ಸಂಭ್ರಮ ! ಆತನ ಹುಡುಗಿ ವಾಹ್ ಎಂದದ್ದು ಕೋತಿಗೆ ಮದಿರೆ ಕುಡಿಸಿದಂತೆ ಆಯಿತು. ಹಿಂದೆ ಮುಂದೆ ನಿಂತಿದ್ದ ಪ್ರವಾಸಿಗರಿಗೆ ‘ಯು ವಾಂಟ್ ಟು ಸೀ ಇಂಡಿಯನ್ ಮ್ಯಾಜಿಕ್’ ಎಂದು ಕೇಳಿ, ಅವರು ಉತ್ತರಿಸುವ ಮುನ್ನವೇ ಕೈಲಿದ್ದ ಪೇಪರ್ ಬೀಸಿ ‘ಪಟ್ ‘ ಸದ್ದು ಹೊರಡಿಸಿ ಜೋರಾಗಿ ನಗುತ್ತಿದ್ದ. ಪ್ರವಾಸಿಗರಲ್ಲಿ ಮುಕ್ಕಾಲು ಪಾಲು ಬಂದವರು ಸಂಸಾರಸ್ಥರು, ಮಕ್ಕಳೊಂದಿಗೆ ಬಂದವರು. ಕ್ಷುಲ್ಲಕ ಕಾರಣಕ್ಕೆ ತಮ್ಮ ಸಮಯ ಹಾಳು ಮಾಡಿಕೊಳ್ಳಲು ಬಯಸದವರು. ಹೀಗಾಗಿ ಆತ ತನ್ನ ಕಪಿಚೇಷ್ಟೆ ಮುಂದುವರಿಸಿಯೂ ಯಾರಿಂದಲೂ ಬಯ್ಗುಳ ತಿನ್ನದೆ ಬಚಾವಾದ.
ವರ್ಸಲೈಸ್ ಎನ್ನುವುದು ಪ್ಯಾರಿಸ್ ನಗರದಿಂದ ಪಶ್ಚಿಮಕ್ಕೆ18 ಕಿಲೋಮೀಟರ್ ದೂರದಲ್ಲಿದೆ. ಮೊದಲು ಇದು ಫ್ರಾನ್ಸ್ ದೇಶದ ರಾಜಧಾನಿಯಾಗಿತ್ತು. ಇಲ್ಲಿಗೆ ನಾವು ಟ್ರೇನ್ ಮೂಲಕ ಹೊರಟೆವು. ಹೋದಲೆಲ್ಲಾ ಭಾರತೀಯರು ಕಣ್ಣಿಗೆ ಬೀಳುತ್ತಿದ್ದರು. ಒಂದು ಯುವ ಜೋಡಿ ನಮ್ಮ ಮುಂದಿನ ಸೀಟಿನಲ್ಲಿ ಕುಳಿತಿದ್ದರು. ತಮ್ಮ ಕಾಲುಗಳನ್ನು ಚಾಚಿ ಮುಂದೆ ಖಾಲಿ ಇದ್ದ ಆಸನದ ಮೇಲಿಟ್ಟು ಹರಟುತ್ತಿದ್ದರು. ವಯಸ್ಸಾದ ಒಬ್ಬ ಫ್ರೆಂಚ್ ಮಹಿಳೆ ‘ಈ ರೀತಿ ಕಾಲು ಚಾಚುವುದು ನಿಮ್ಮ ದೇಶದಲ್ಲಿ ನಡೆಯಬಹುದು. ಇಲ್ಲಿ ಇದು ಸಲ್ಲದು. ಇದು ನಮ್ಮೆಲ್ಲರ ಆಸ್ತಿ. ಕಾಲು ಕೆಳಗಿಳಿಸಿ’ ಎಂದು ಫ್ರೆಂಚ್ ನಲ್ಲೇ ಹೇಳಿದಳು. ಆಕೆಯ ಆಂಗಿಕ ಭಾವದಿಂದ ಆಕೆ ಹೇಳುವುದನ್ನು ಅರಿತ ಯುವ ಜೋಡಿ ಮರುಮಾತನಾಡದೆ ಕಾಲನ್ನು ಕೆಳಗಿಳಿಸಿದರು.

ಪ್ಯಾರಿಸ್ ನಗರದಲ್ಲಿ ಎಂಟು ರಾತ್ರಿಯ ಅತಿಥಿಗಳು ನಾವು! ಇದೇನು ಮೊದಲ ಭೇಟಿಯಲ್ಲ ನನಗೆ. ಇದು ಒಂಬತ್ತನೇ ಭೇಟಿ. ರಮ್ಯಳಿಗೆ ನಾಲ್ಕನೇಯದು. ಅನ್ನಿಗೆ ಎರಡನೇಯದು. ನಮ್ಮ ಹೊಟೇಲ್ ನಲ್ಲಿ ಒಂದು ಭಾರತೀಯ ಕುಟುಂಬ ಬಂದು ತಂಗಿತು. ಲಿಫ್ಟ್ ಏರುವಾಗ ಪರಿಚಯವಾಗಿ ‘ಹಾಯ್ , ಹಲೋ’ ವಿನಿಮಯವಾಯಿತು. ತಂದೆ, ತಾಯಿ, ಒಬ್ಬಳು ಮಗಳು! ನೋಡಲು ಮೂವರು ಉತ್ತಮ ಸಂಸ್ಕಾರ ಹೊಂದಿರುವರಂತೆ ಕಂಡರು. ಎರಡು ಮೂರು ದಿನ ಹೋಗುವಾಗ ಬರುವಾಗ ಮುಗುಳ್ನಗೆ ಬೀರಿ ಹೋಗುತ್ತಿದ್ದಳು ಆ ಸುಂದರಿ. ಕಾಕತಾಳಿಯ ಎನ್ನುವಂತೆ ನಾವು ಚೆಕ್ ಔಟ್ ಮಾಡಿದ ದಿನವೇ ಅವರು ಕೂಡ ಹೊಟೇಲ್ ಖಾಲಿ ಮಾಡುತ್ತಿದ್ದರು. ನಾವಾಗಲೇ ಚೆಕ್ ಔಟ್ ಮುಗಿಸಿ ಏರ್ ಪೋರ್ಟ್ ಗೆ ಹೋಗಲು ಕಾಯ್ದಿರಿಸಿದ್ದ ಟ್ಯಾಕ್ಸಿ ಕಾಯುತ್ತ ಲಾಬಿಯಲ್ಲಿ ಕೂತಿದ್ದೆವು.
ತಂದೆ ತಾಯಿಯ ಜತೆ ಯುವತಿ ಚೆಕ್ ಔಟ್ ಕ್ರಿಯೆಯಲ್ಲಿ ತೊಡಗಿದ್ದಳು. ಅದೇ ಕ್ಷಣದಲ್ಲಿ ಲಿಫ್ಟ್ ನಿಂದ ಇಳಿದು ಹದಿಹರಯದ ಒಬ್ಬ ಹುಡುಗ ಬಂದು ಅವರ ಹಿಂದೆ ನಿಂತ . ಸ್ವಾಗತಕಾರ ಆ ಹುಡುಗನನ್ನು ನೋಡಿದವನೇ ‘ನೀವು ಬುಕ್ ಮಾಡಿರುವುದು 3 ಜನರ ಕೊಠಡಿ. 4 ಜನ ಹೇಗೆ ಉಳಿದುಕೊಂಡಿರಿ?’ ಎಂದು ಪ್ರಶ್ನಿಸಿ, ನಮ್ಮ ಹೊಟೇಲ್ ನಲ್ಲಿ4 ಜನ ಉಳಿದುಕೊಳ್ಳಬಹುದಾದ ಕೊಠಡಿಯೇ ಇಲ್ಲ… ನೀವು ಭಾರತೀಯರು ಹೀಗೆ. ನಿಮಗೆ ರೂಲ್ಸ್ ಅಂಡ್ ರೆಗ್ಯುಲೇಷನ್ ಬಗ್ಗೆ ಗೌರವವೇ ಇಲ್ಲ. ಅಡ್ಜಸ್ಟ್ ಮಾಡಿಕೊಳ್ಳುವುದು ನಿಮ್ಮ ರಕ್ತದಲ್ಲಿ ಇದೆ. ಆದರೆ ನಮ್ಮ ಪ್ರಮಾಣಿತ ಗುಣಮಟ್ಟದಿಂದ ಕೆಳಗಿಳಿಯಲು ಸಾಧ್ಯವಿಲ್ಲ ಮುಂತಾಗಿ ತನ್ನ ಹರಕು ಇಂಗ್ಲಿಷ್ ನಲ್ಲಿ ಅರಚತೊಡಗಿದ.
ಉಪ್ಪು ತಿಂದಮೇಲೆ ನೀರು ಕುಡಿಯಲೇಬೇಕು ಎನ್ನುವ ಮುಖ ಭಾವ ಹೊತ್ತು ನಿಂತರವರು. ಚೆಕ್ಔಟ್ ಮುಗಿಸಿ ಹೊರಹೋದರು. ನಾನು ಕೂತ ಜಾಗದಿಂದ ಎದ್ದು ಸ್ವಾಗತಕಾರನ ಬಳಿಗೆ ಹೋಗಿ ನಿನಗೆ ಸ್ಪ್ಯಾನಿಷ್ ಬರುತ್ತದೆಯೇ ಎಂದೆ. ಹೂಂ ಎಂದು ತಲೆಯಾಡಿಸಿದ. ‘ನಮ್ಮದು ನೂರಾ ಐವತ್ತು ಕೋಟಿ ಜನಸಂಖ್ಯೆಯ ದೇಶ. ಯಾರೋ ಒಬ್ಬಿಬ್ಬರು ಮಾಡಿದ ತಪ್ಪಿಗೆ ಇಡೀ ದೇಶವನ್ನು ಹಳಿಯುವುದು ಎಷ್ಟು ಸರಿ’ ಎಂದು ಪ್ರಶ್ನಿಸಿದೆ. ಮುಂದುವರಿದು ಒಂದೂವರೆ ದಶಕದಿಂದ ನಾನು ಯುರೋಪ್ ನಿವಾಸಿ. ಇಲ್ಲಿನ ಪ್ರಜೆ ಕೂಡ ಇಲ್ಲಿಯ ತನಕ ಇಷ್ಟು ಕೆಟ್ಟದಾಗಿ ನಡೆದುಕೊಂಡಿದ್ದನ್ನು ನಾನು ಕಂಡಿಲ್ಲ ಎಂದೆ. ಆತ ಹಸನ್ಮುಖನಾಗಿ ‘ಸರ್ ಕಳೆದ ಮೂವತ್ತು ವರ್ಷದಿಂದ ಈ ವೃತ್ತಿಯಲ್ಲಿ ಕೆಲಸ ಮಾಡುತ್ತಿದ್ದೇನೆ. ಇಲ್ಲಿಗೆ ಬರುವ 99 ಪರ್ಸೆಂಟ್ ನಷ್ಟು ಭಾರತೀಯರು ಹೆಚ್ಚು ಕಡಿಮೆ ಎಲ್ಲರೂ ಹೀಗೆ ಮಾಡುತ್ತಾರೆ. ನನ್ನ ಅನುಭವ ಕಲಿಸಿರುವ ವಿಷಯ ನಾನು ಹೇಳಿದೆ ಅಷ್ಟೆ. ಅಷ್ಟಕ್ಕೂ ನೀವು ಸ್ಪ್ಯಾನಿಷ್ ಪ್ರಜೆ. ಭಾರತೀಯರನ್ನು ಬಯ್ದರೆ ನಿಮಗೇಕೆ ಉರಿ?’ ಎಂದು ಮರುಪ್ರಶ್ನಿಸಿದ.
ನಾನು ಮೂಲ ಭಾರತೀಯನೇ ಎಂದಾಗ, ಆತ ನಕ್ಕು ‘ಸರಿ, ನೀವು ಬೇಜಾರು ಮಾಡಿಕೊಳ್ಳುವುದೇ ಆದರೆ ನಿಮ್ಮ ದೇಶದ ನಿವಾಸಿಗಳ ಬಗ್ಗೆ ಮಾಡಿಕೊಳ್ಳಿ, ನನ್ನ ಬಗ್ಗೆ ಅಲ್ಲ’ ಎಂದ.
ನನ್ನ ಟ್ಯಾಕ್ಸಿ ಬಂದಿದೆ ಎಂದು ಆತನೇ ಅರುಹಿದ. ಹೆಚ್ಚು ಮಾತನಾಡಲು ಸಮಯ ಇರಲಿಲ್ಲ. ‘ನಿನಗೆ ಇದು ಬೇಕಿತ್ತಾ?‘ ಎನ್ನುವ ರಮ್ಯಳ ನೋಟ ತಪ್ಪಿಸಿ ಅನನ್ಯಳೊಂದಿಗೆ ಮಾತಿಗಿಳಿದೆ. ಆದರೂ ತಲೆಯಲ್ಲಿ ಮಾತ್ರ ಪರದೇಶದಲ್ಲಿ ನಾವು ‘ಒಂಟಿ’ ಅಲ್ಲ ಬದಲಿಗೆ ಇಡೀ ದೇಶವನ್ನು ಪ್ರತಿನಿಧಿಸುತ್ತೇವೆ. ನಮ್ಮ ನಡೆ ನುಡಿ ಹಾವಭಾವ ಇಡೀ ದೇಶಕ್ಕೆ ಒಳ್ಳೆಯ ಅಥವಾ ಕೆಟ್ಟ ಹೆಸರು ತರಬಹುದು. ಕ್ಷಣಿಕತೆಯಲ್ಲಿ ನಾವು ಮಾಡುವ ತಪ್ಪು ಇಡೀ ದೇಶದ ಇಮೇಜನ್ನೇ ಬದಲಾಯಿಸುತ್ತೆ. ನಾವು ನಮ್ಮ ದೇಶದ ಪುಟ್ಟ ಪುಟ್ಟ ರಾಯಭಾರಿಗಳು ಎನ್ನುವ ಅರಿವಿದ್ದರೆ ದೇಶಕ್ಕೆ ಕೆಟ್ಟ ಹೆಸರು ತರುವ ಕೆಲಸ ಯಾರೂ ಮಾಡುವುದಿಲ್ಲ ಎನ್ನುವ ಯೋಚನೆಯ ಜತೆಜತೆಗೆ ಆತ್ಮಸಮ್ಮಾನವ ಬಿಟ್ಟು ಐಷಾರಾಮದ ಜೀವನ ನಡೆಸಿ ಪ್ರಯೋಜನವೇನು? ತನ್ನ ದೇಶದ ಹಿರಿಮೆಯ ಪರದೇಶದಲ್ಲಿ ಹರಾಜು ಹಾಕುವವ್ರು ನಿಜ ನಾಗರಿಕರೇನು? ಮುಂತಾದ ಚಿಂತನೆಗಳ ನಡುವೆ ಪ್ಯಾರಿಸ್ ಗೆ au revoir (ಬೈ) ಹೇಳಿ ಬಾರ್ಸಿಲೊನಾ ಕಡೆ ಮುಖ ಮಾಡಿದೆವು.