ಪ್ರವಾಸ ಅಂದ್ರೆ ಕಣ್ಣು ತುಂಬಿಕೊಳ್ಳುವುದೊಂದೇ ಅಲ್ಲ, ಹೊಟ್ಟೆ ತುಂಬಿಕೊಳ್ಳೋದೂ ಹೌದು
ಪ್ರವಾಸಿಗರನ್ನು ಪ್ರೇಕ್ಷಣೀಯ ಸ್ಥಳ, ಸ್ಮಾರಕ, ಜಲಪಾತ, ಮನಮೋಹಕ ತಾಣಗಳ ಮೂಲಕ ಆಕರ್ಷಿಸಬಹುದು ಎಂದು ಯಾರಾದರೂ ತಿಳಿದಿದ್ದರೆ ಅದು ಸುಳ್ಳು. ಇವುಗಳಷ್ಟೇ ಇದ್ದರೆ ಸಾಲದು, ಪ್ರವಾಸಿಗರನ್ನು ಸೆಳೆಯಲು ವಿವಿಧ ಬಗೆಯ ಆಹಾರಗಳೂ ಅಷ್ಟೇ ಮುಖ್ಯ. ಒಳ್ಳೆಯ ಆಹಾರವೂ ಇರಬೇಕು ಎಂಬುದನ್ನು ಎಲ್ಲ ದೇಶಗಳು ಮನಗಂಡಿವೆ. ಜನರ ಮನಸ್ಸನ್ನು ಆಕರ್ಷಿಸಲು ಮನಸ್ಸೊಂದೇ ಅಲ್ಲ, ಹೊಟ್ಟೆಯೂ ಅಷ್ಟೇ ಮುಖ್ಯ.
ನಾನು ಕೆಲವು ವರ್ಷಗಳ ಹಿಂದೆ, ಐರ್ಲೆಂಡ್ ಪ್ರವಾಸ ಹೋಗಿದ್ದೆ. ಎಸ್ಒಟಿಸಿ ಎಂಬ ಸಂಸ್ಥೆ ಈ ಪ್ರವಾಸವನ್ನು ಆಯೋಜಿಸಿತ್ತು. ಈ ಸಂಸ್ಥೆ conducted tour ಗಳನ್ನೂ ಏರ್ಪಡಿಸುವುದರಲ್ಲಿ ಎತ್ತಿದ ಕೈ. ನಮ್ಮ ಬಸ್ಸಿನಲ್ಲಿ ಭಾರತದ ಏಳು ರಾಜ್ಯಗಳ ನಲವತ್ತು ಮಂದಿ ಪ್ರಯಾಣಿಕರಿದ್ದರು. ಐರ್ಲೆಂಡ್ ಮತ್ತು ಬ್ರಿಟನ್ ನ ಪ್ರಮುಖ ಊರುಗಳನ್ನು ನಾವು ಸುತ್ತಬೇಕಿತ್ತು. ನಮ್ಮ ಜತೆ ಉತ್ತರ ಕರ್ನಾಟಕದ ಚಡಚಣದ ಒಂದೇ ಕುಟುಂಬದ ನಾಲ್ವರು ಇದ್ದರು. ಅವರು ತಮ್ಮ ಪ್ರವಾಸದ ಸಂದರ್ಭದಲ್ಲಿ ನಮ್ಮ ಜತೆ ಹೊಟೇಲಿಗೆ ಬರುತ್ತಿರಲಿಲ್ಲ. ಬಸ್ಸಿನಲ್ಲಿಯೇ ತಾವು ಊರಿನಿಂದ ಸೂಟ್ ಕೇಸುಗಳಲ್ಲಿ ಪ್ಯಾಕ್ ಮಾಡಿಕೊಂಡು ಬಂದ ರೊಟ್ಟಿ ಮತ್ತು ಬಗೆಬಗೆಯ ಚಟ್ನಿ ಪುಡಿಯನ್ನು ಸೇವಿಸುತ್ತಿದ್ದರು. ಗಟ್ಟಿ ಮೊಸರು ಹೋದೆಡೆಯೆಲ್ಲ ಸಿಗುತ್ತಿತ್ತು. ಅದನ್ನು ಮಾತ್ರ ಖರೀದಿಸುತ್ತಿದ್ದರು. ರಾತ್ರಿ ಊಟವೂ ಹೀಗೆ ಸಾಗುತ್ತಿತ್ತು. ಅವರಿಗೆ ರೊಟ್ಟಿ, ಚಟ್ನಿ ಮತ್ತು ಪಲ್ಯ ಇದ್ದರೆ ಬೇರೇನೂ ಬೇಕಾಗುತ್ತಿರಲಿಲ್ಲ.
ನಾಲ್ಕನೇ ದಿನ ನಾವು ಬಸ್ ಬದಲಿಸಿ, ಹಡಗಿನಲ್ಲಿ ಸಂಚರಿಸುವುದಿತ್ತು. ಆ ಸಂದರ್ಭದಲ್ಲಿ ಅವರ ಒಂದು ಬ್ಯಾಗ್ ಆಕಸ್ಮಿಕವಾಗಿ ಬಸ್ಸಿನಲ್ಲಿಯೇ ಉಳಿದುಬಿಟ್ಟಿತು. ಅದು ಅವರಿಗೆ ತಡವಾಗಿ ಗಮನಕ್ಕೆ ಬಂದಿತು. ಅವರಿಗೆ ಬಟ್ಟೆಬರೆ ಇರುವ ಬ್ಯಾಗ್ ಕಳೆದು ಹೋಗಿದ್ದರೆ ಏನೂ ಅನಿಸುತ್ತಿರಲಿಲ್ಲವೇನೋ? ಆದರೆ ರೊಟ್ಟಿ-ಚಟ್ನಿ ಇರುವ ಬ್ಯಾಗ್ ಕಳೆದುಹೋಗಿದ್ದು ಆಘಾತಕ್ಕೆ ಕಾರಣವಾಗಿತ್ತು. ಅವರಿಗೆ ಅವಿಲ್ಲದೇ ಬದುಕುಳಿಯುವುದು ಸಾಧ್ಯವೇ ಇಲ್ಲ ಎನಿಸಲಾರಂಭಿಸಿತ್ತು. ಆ ಪೈಕಿ ಇಬ್ಬರು ಎರಡು ದಿನ ಹೇಗೋ ಮ್ಯಾನೇಜ್ ಮಾಡಿದರು. ಆದರೆ ಹಿರಿಯರಿಬ್ಬರು ರೊಟ್ಟಿ-ಚಟ್ನಿ ಇಲ್ಲದೇ ಊಟ ಸಾಧ್ಯವೇ ಇಲ್ಲ ಎಂದು ಹಠಕ್ಕೆ ಬಿದ್ದರು. ತಮ್ಮನ್ನು ವಾಪಸ್ ಬೆಂಗಳೂರಿಗೆ ಕಳಿಸಿಕೊಡಿ ಎಂದು ವರಾತ ಶುರು ಮಾಡಿಬಿಟ್ಟರು. ಆಗ ಟೂರ್ ಮ್ಯಾನೇಜರ್ ಯಾವ ಊರಿಗೆ ಹೋದರೂ ಅಲ್ಲಿ ಭಾರತೀಯ ಹೊಟೇಲ್ ಹುಡುಕಿ, ಅವರಿಗೆ ಮುಂಚಿತವಾಗಿ ಚಪಾತಿ, ರೊಟ್ಟಿ ಮಾಡಿಕೊಡುವಂತೆ ವಿನಂತಿಸಿ ಅವರ ಕೋರಿಕೆ ಈಡೇರಿಸುತ್ತಿದ್ದ. ಆದರೂ ಅವರಿಗೆ ಸಮಾಧಾನ ಆಗುತ್ತಿರಲಿಲ್ಲ. ಎರಡು ದಿನ ಆದ ಬಳಿಕ ಖಡಕ್ ಜೋಳದ ರೊಟ್ಟಿ ಇಲ್ಲದೇ ತಮಗೆ ಊಟ ಸಾಧ್ಯವಿಲ್ಲ ಎಂದು ರಚ್ಚೆ ಹಿಡಿದರು. ಟೂರಿನಲ್ಲಿರುವವರು ಅವರಿಗೆ ಎಷ್ಟೇ ಹೇಳಿದರೂ, ಅವರು ಕೇಳುವ ಮನಸ್ಥಿತಿಯಲ್ಲಿ ಇರಲಿಲ್ಲ.

ಇಡೀ ಪ್ರವಾಸದಲ್ಲಿ ನಾವು ನೋಡುವ ಸ್ಥಳಕ್ಕಿಂತ ರೊಟ್ಟಿ-ಚಟ್ನಿ ಇಲ್ಲದ ಚಡಚಣದವರ ರೊಟ್ಟಿ-ಚಟ್ನಿ ಗೋಳೇ ಪ್ರಧಾನ ಆಕರ್ಷಣೆಯಾಗಿಬಿಟ್ಟಿತು. ಪ್ರವಾಸ ಮುಗಿಯಲು ಇನ್ನು ನಾಲ್ಕು ದಿನಗಳಿರುವಾಗ, ತಮ್ಮನ್ನು ಬೆಂಗಳೂರಿಗೆ ಕಳಿಸಿಕೊಡಿ ಎಂಬ ಅವರ ಬೇಡಿಕೆ ಬಲವಾಗಲಾರಂಭಿಸಿತು. ಇನ್ನು ನಾಲ್ಕು ದಿನ ತಡೆದುಕೊಳ್ಳಿ ಎಂದು ಎಲ್ಲರೂ ಹೇಳಿದರೂ ಅವರು ಕೇಳುವ ಮನಸ್ಥಿತಿಯಲ್ಲಿ ಇರಲಿಲ್ಲ. ನಂತರ ಅವರನ್ನು ಬೆಂಗಳೂರಿಗೆ ಕಳಿಸಿ ಎಂದು ಎಲ್ಲರೂ ನಮ್ಮ ಟೂರ್ ಮ್ಯಾನೇಜರ್‌ನನ್ನು ಒತ್ತಾಯಿಸಿದರು. ಅರ್ಧ ಪ್ರವಾಸ ಮೊಟಕುಗೊಳಿಸಿ, ಅವರನ್ನು ಬೆಂಗಳೂರಿಗೆ ಸಾಗಹಾಕುವ ಹೊತ್ತಿಗೆ ಆತನಿಗೆ ಸಾಕೋ ಸಾಕಾಗಿತ್ತು. ಯಾವ ದೇಶದಲ್ಲಿ ‘ಬಸವೇಶ್ವರ ಖಾನಾವಳಿ’ಯಿರುವುದೋ, ಅಲ್ಲಿ ಉತ್ತರ ಕರ್ನಾಟಕದ ಮಂದಿಯನ್ನು ಆಕರ್ಷಿಸುವುದು ಬಹಳ ಸುಲಭ ಎಂಬ ಮಾತು ತಮಾಷೆಯಷ್ಟೇ ಅಲ್ಲ. ಅಪ್ಪಟ ಸತ್ಯ.
ಪ್ರವಾಸಿಗರನ್ನು ಪ್ರೇಕ್ಷಣೀಯ ಸ್ಥಳ, ಸ್ಮಾರಕ, ಜಲಪಾತ, ಮನಮೋಹಕ ತಾಣಗಳ ಮೂಲಕ ಆಕರ್ಷಿಸಬಹುದು ಎಂದು ಯಾರಾದರೂ ತಿಳಿದಿದ್ದರೆ ಅದು ಸುಳ್ಳು. ಇವುಗಳಷ್ಟೇ ಇದ್ದರೆ ಸಾಲದು, ಪ್ರವಾಸಿಗರನ್ನು ಸೆಳೆಯಲು ವಿವಿಧ ಬಗೆಯ ಆಹಾರಗಳೂ ಅಷ್ಟೇ ಮುಖ್ಯ. ಒಳ್ಳೆಯ ಆಹಾರವೂ ಇರಬೇಕು ಎಂಬುದನ್ನು ಎಲ್ಲ ದೇಶಗಳು ಮನಗಂಡಿವೆ. ಜನರ ಮನಸ್ಸನ್ನು ಆಕರ್ಷಿಸಲು ಮನಸ್ಸೊಂದೇ ಅಲ್ಲ, ಹೊಟ್ಟೆಯೂ ಅಷ್ಟೇ ಮುಖ್ಯ. ಕೆಲವರು ವಿದೇಶಗಳಿಗೆ ಪ್ರವಾಸ ಹೋದಾಗ, Getting my food, has always been an adventure ಎಂದು ಅನೇಕರು ಭಾವಿಸಿದ್ದಾರೆ. ಆ ದೇಶದಲ್ಲಿ ನೋಡುವ ಅನೇಕ ಸ್ಥಳಗಳಿದ್ದೂ ಊಟ, ತಿಂಡಿ, ಆಹಾರ ಸರಿಯಿರದಿದ್ದರೆ ಪ್ರವಾಸಿಗರನ್ನು ಆಕರ್ಷಿಸುವುದು ಕಷ್ಟ. ಈ ಕಾರಣಕ್ಕಾಗಿ ಎಲ್ಲ ದೇಶಗಳು ಇತ್ತೀಚಿನ ದಿನಗಳಲ್ಲಿ ‘ಫುಡ್ ಟೂರಿಸಂ’ ಎಂಬ ಪರಿಕಲ್ಪನೆ ಆರಂಭಿಸಿವೆ. ವಿದೇಶಿಯರನ್ನು ಸೆಳೆಯುವ ಸುಲಭ ಮಾರ್ಗವೆಂದರೆ ಮನಸ್ಸಿನ ಜತೆಗೆ ಉದರ ಎಂಬುದನ್ನು ಎಲ್ಲ ದೇಶಗಳೂ ಅರಿತುಕೊಂಡಿವೆ.

ಇಂಗ್ಲಿಷಿನಲ್ಲಿ ಒಂದು ಮಾತಿದೆ. ಅದು ಪ್ರವಾಸೋದ್ಯಮಕ್ಕೆ ಹೇಳಿ ಮಾಡಿಸಿದಂತಿದೆ. ಅದೇನೆಂದರೆ, Food is for eating and Food is very beautiful than places. ಆಹಾರ ಕೇವಲ ಹೊಟ್ಟೆಗಷ್ಟೇ ಅಲ್ಲ, ಅದು ವಿಶೇಷ ಅನುಭೂತಿ ನೀಡುವಂಥದ್ದು. ಪ್ರತಿ ಪ್ರವಾಸಿಯೂ ಬೇರೆ ದೇಶಗಳಿಗೆ ಹೋಗುವ ಮುನ್ನ ಅಲ್ಲಿನ ಊಟ, ತಿಂಡಿ, ಆಹಾರಗಳ ಬಗ್ಗೆ ಯೋಚಿಸುತ್ತಾನೆ. ತಾನು ವಿದೇಶಗಳಲ್ಲಿ ಪ್ರವಾಸ ಹೋಗುವಷ್ಟು ದಿನ ಹೇಗೆ ಅಲ್ಲಿನ ಆಹಾರಗಳನ್ನು ಸೇವಿಸಿ ಕಾಲ ಕಳೆಯುವುದು ಎಂದು ಯೋಚಿಸಿಯೇ ಪ್ರವಾಸಕ್ಕೆ ಮುಂದಾಗುತ್ತಾನೆ. ಖ್ಯಾತ ಪ್ರವಾಸಿ ಲೇಖಕನೊಬ್ಬ ಹೇಳಿದ I think food, culture, people and landscape are all absolutely inseparable ಎಂಬ ಮಾತು ನೂರಕ್ಕೆ ನೂರು ನಿಜ.
ಈ ವಿಷಯದಲ್ಲಿ ಅಮೇರಿಕನ್ನರು ಮತ್ತು ಯೂರೋಪಿಯನ್ನರು ನಿಸ್ಸೀಮರು. ಅವರು ಪ್ರವಾಸಿಗರಿಗೆ ಎಲ್ಲ ವಿಧಗಳ ಆಹಾರಗಳನ್ನು ಪೂರೈಸುವುದರಲ್ಲಿ ಎತ್ತಿದ ಕೈ. ಯಾವ ದೇಶ ಪ್ರವಾಸೋದ್ಯಮದಲ್ಲಿ ಮುಂದಿದೆಯೋ, ಆ ದೇಶ ‘ಫುಡ್ ಟೂರಿಸಂ’ನಲ್ಲೂ ಮುಂದಿದೆ ಎಂದು ಭಾವಿಸಬಹುದು. ಆಹಾರ ಪ್ರವಾಸೋದ್ಯಮದಲ್ಲಿ ಜಗತ್ತಿಗೆ ಪಾಠ ಹೇಳುವ ಇಟಲಿಯಲ್ಲಿ ಒಂದು ಮಾತಿದೆ - You learn a lot about someone when you share a meal together. Food is the spice of life. One cannot think well, love well, sleep well, if one has not dined well.
ನೀವು ಪ್ಯಾರಿಸ್, ಸ್ವಿಟ್ಜರ್ಲ್ಯಾಂಡ್, ಜರ್ಮನಿ ಮುಂತಾದ ದೇಶಗಳಿಗೆ ಹೋದಾಗ ಅಲ್ಲಿ ಸಾಮಾನ್ಯವಾಗಿ ಕಾಣುವುದೇನೆಂದರೆ, ಎಲ್ಲ ಸ್ಟ್ರೀಟ್‌ಗಳಲ್ಲೂ ಹತ್ತಾರು ಬಗೆಯ, ಹತ್ತಾರು ದೇಶಗಳ ರೆಸ್ಟೋರೆಂಟ್‌ಗಳು. ನೀವು ಲಂಡನ್, ಫ್ರಾಂಕ್ ಫರ್ಟ್‌ನಲ್ಲಿ ಉಡುಪಿ ಬ್ರಾಹ್ಮಣರ ಹೊಟೇಲುಗಳನ್ನು ಕಾಣಬಹುದು. ಥೈಲ್ಯಾಂಡಿನಲ್ಲಿ ಐಸ್‌ಲ್ಯಾಂಡ್ ಆಹಾರಗಳನ್ನು ನೀಡುವ ರೆಸ್ಟೋರೆಂಟ್ ಗಳನ್ನೂ ಕಾಣಬಹುದು. ಜೋರ್ಡಾನಿನಲ್ಲಿ ಮೆಕ್ಸಿಕನ್ ಫುಡ್ ರೆಸ್ಟೋರೆಂಟುಗಳಿವೆ. ಅರ್ಜೆಂಟೀನಾದ ಬ್ಯುನಸ್ ಐರಿಸ್‌ನಲ್ಲಿ ಚೀನಾ ಫುಡ್ ಬಹಳ ಪ್ರಸಿದ್ಧ. ಇಟಲಿ, ಚೀನಾ, ಥಾಯ್‌ಫುಡ್ ಇಲ್ಲದ ರೆಸ್ಟೋರೆಂಟುಗಳನ್ನು ಕಾಣದಿರಲು ಸಾಧ್ಯವೇ ಇಲ್ಲ. ಅಲ್ಲಿ ಯಾವ ದೇಶದ ಪ್ರವಾಸಿಗರಿಗೂ ತಾನು ಪರಕೀಯ ಎಂದು ಅನಿಸುವುದಿಲ್ಲ. Feel at home ಎಂದು ಅನಿಸಬೇಕಾದರೆ home Food ಬೇಕಂತೆ. ಉತ್ತರ ಕರ್ನಾಟಕದವರಿಗೆ ಖಡಕ್ ರೊಟ್ಟಿ, ಚಟ್ನಿ ಪುಡಿ ಇದ್ದರೆ ಯಾವ ಊರಾದರೂ ಅವರಿಗೆ ತವರುಮನೆಯೇ. ಇದು ಕೇವಲ ಉತ್ತರ ಕರ್ನಾಟಕದವರಿಗೆ ಮಾತ್ರ ಅಲ್ಲ, ಜಗತ್ತಿನ ಎಲ್ಲ ದೇಶಗಳ ಜನರ ಉತ್ತರವೂ ಹೌದು.
ನಾನು ಇಸ್ರೇಲಿನಲ್ಲಿ ಎರಡು ವಾರ ಇದ್ದರೂ, ನನಗೆ ಎಂದೂ ಆಹಾರ ಒಂದು ಸಮಸ್ಯೆ ಎಂದು ಅನಿಸಲೇ ಇಲ್ಲ. ಕಾರಣ ಅಲ್ಲಿ ಭಾರತವೂ ಸೇರಿದಂತೆ, ಎಲ್ಲ ದೇಶಗಳ ಆಹಾರಗಳನ್ನು ತಯಾರಿಸುವ ಹೊಟೇಲ್‌ಗಳಿವೆ. ಅಲ್ಲಿನ ಭಾರತೀಯ ರೆಸ್ಟೋರೆಂಟ್‌ಗಳಿಗೆ ದೊಡ್ಡ ಪ್ರಮಾಣದಲ್ಲಿ ಬೇರೆ ದೇಶಗಳ (ಭಾರತೀಯರಲ್ಲದವರು) ಪ್ರವಾಸಿಗರೂ ಬರುತ್ತಾರೆ. ಆ ದೇಶದಲ್ಲಿ ಯಾರಿಗೂ ಆಹಾರದ ಸಮಸ್ಯೆ ಆಗಲು ಸಾಧ್ಯವೇ ಇಲ್ಲ. ಅದರಲ್ಲೂ ಟೆಲ್ ಅವಿವ್ ನಗರದಲ್ಲಿ ಮನುಷ್ಯರ ಮಾಂಸದ ಹೊರತಾಗಿ ಮತ್ತೆಲ್ಲವೂ ಸಿಗಬಹುದು, ಮಲೆನಾಡಿನ ಕಜ್ಜಾಯಗಳನ್ನೂ ಸೇರಿಸಿ.

ನೀವು ಇಟಲಿಗೆ ಹೋಗಿ ಇಟಲಿಯ ಆಹಾರಗಳನ್ನು ತಿನ್ನದೇ ಬಂದರೆ ಅಷ್ಟರ ಮಟ್ಟಿಗೆ ನಿಮಗೆ ಇಟಲಿ ದಕ್ಕುವುದಿಲ್ಲ. ನಿಮಗೆ ಇಷ್ಟವಾಗದಿರಬಹುದು, (ಯಾರಿಗೂ ಮೊದಲ ಬಾರಿಗೆ ಎಲ್ಲ ಆಹಾರಗಳೂ ಇಷ್ಟವಾಗುವುದಿಲ್ಲ) ಆದರೂ ಸ್ಥಳೀಯ ಆಹಾರ, ಪದಾರ್ಥಗಳನ್ನು ಸೇವಿಸಲೇ ಬೇಕು. ಅದು ಅಲ್ಲಿನ ಸಂಸ್ಕೃತಿಯ ಪರಿಚಯವೂ ಹೌದು. ಪಂಜಾಬಿಗೆ ಹೋಗಿ ಇಡ್ಲಿ ತಿಂದು ಬಂದರೆ, ಇಟಲಿಗೆ ಹೋಗಿ ಪಿಜ್ಜಾ ಬದಲು ರೊಟ್ಟಿ ತಿಂದು ಬಂದರೆ ಒಂದು ಸಂಸ್ಕೃತಿಯ ಅನುಭವದಿಂದ ವಂಚಿತರಾದಂತೆ.
ಒಂದು ದೇಶ ಮತ್ತೊಂದರಿಂದ ವಿಭಿನ್ನವಾಗಿದ್ದರೆ ಮತ್ತು ವಿಭಿನ್ನವಾಗಿದೆಯೆಂದು ನಮಗೆ ಅನಿಸಿದರೆ ಅದಕ್ಕೆ ಮುಖ್ಯ ಕಾರಣ ವಾತಾವರಣ, ಅಲ್ಲಿನ ಮನುಷ್ಯರು ಮಾತ್ರ ಅಲ್ಲ. ಆಹಾರವೂ ಹೌದು. A tourist consumes not only the sights and sounds, but also the taste of place ಎಂಬ ಮಾತಿದೆ. ಈ ಕಾರಣದಿಂದ ಆಹಾರಕ್ಕೆ ಪ್ರವಾಸೋದ್ಯಮದಲ್ಲಿ ಎಲ್ಲಿಲ್ಲದ ಮಹತ್ವ. ಕಿಸೆಯಲ್ಲಿ ಹಣ ಮತ್ತು ಹೊಟ್ಟೆಗೆ ಸರಿಯಾದ ಊಟವಿದ್ದರೆ ಮಾತ್ರ ಪ್ರವಾಸ, ಇಲ್ಲದಿದ್ದರೆ ಪ್ರಯಾಸ ಎಂಬ ಮಾತು ಅಕ್ಷರಶಃ ಸತ್ಯ. Food is symbol of love when words are inadequate ಎಂಬ ಮಾತನ್ನು ಒಪ್ಪಲೇಬೇಕು.
ಮಲೆನಾಡಿನ ಸಂಸ್ಕೃತಿಯನ್ನು ಅರಿತುಕೊಳ್ಳಲು ಆಹಾರ ಮತ್ತು ಆತಿಥ್ಯ ಅತ್ಯಗತ್ಯ. ಕಾರಣ ಅವೆರಡೂ ಅಲ್ಲಿನ ಅವಿಭಾಜ್ಯ ಅಂಗ. ಇಂಥದೇ ಶಿಷ್ಟಾಚಾರ ಎಲ್ಲ ದೇಶಗಳಲ್ಲೂ ಇರುತ್ತವೆ. ಅವನ್ನು ಅರಿಯದೇ ಆ ದೇಶ, ಜನ, ಜನಜೀವನ ಅರಿಯಲು ಸಾಧ್ಯವೇ ಇಲ್ಲ. ನಾನು ಆಫ್ರಿಕಾದ ರವಾಂಡಾ ದೇಶಕ್ಕೆ ಹೋದಾಗ ಊಟಕ್ಕೆ ಕುಳಿತಾಗ ಅಲ್ಲಿ ಬಿದಿರಿನ ಸೊಪ್ಪಿನ ಗೊಜ್ಜು, ಬಿದಿರಿನ ತೊಗಟೆಯ ಪಲ್ಯವನ್ನು ಬಡಿಸಿದರು. ಆಗ ತಕ್ಷಣಕ್ಕೆ ಗೊತ್ತಾಗಿದ್ದೇನೆಂದರೆ, ಆ ದೇಶದಲ್ಲಿ ಬಿದಿರು ಸಮೃದ್ಧವಾಗಿದೆ, ಆ ದೇಶದಲ್ಲಿ ಕಾಡು ದಟ್ಟವಾಗಿದೆ, ಬಿದಿರು ಮತ್ತು ಕಾಡು ಸಮೃದ್ಧವಾಗಿರುವುದರಿಂದ ಆನೆಗಳೂ ಸಾಕಷ್ಟಿವೆ... ಆನಂತರ ನಾನು ಹೋಗಿದ್ದು ಬಿದಿರಿನಿಂದಲೇ ತಯಾರಿಸಿದ ವಿವಿಧ ಆಹಾರ ಪದಾರ್ಥಗಳ ರೆಸ್ಟೋರೆಂಟ್ ಎಂದು ತಿಳಿಯಿತು. ಅಲ್ಲಿ ಎಲ್ಲವೂ ಬಿದಿರುಮಯ. ಬಿದಿರಿನ ಮೊಳಕೆಯ ಪಲ್ಯ, ಬಿದಿರಿನ ಬೇರಿನ ಕಷಾಯ, ಬಿದಿರಿನ ಕಾಂಡದ ಸೂಪ್, ಬಿದಿರಿನ ಕಳಲೆಯ ಸಾಂಬಾರು, ಕಳಲೆ ಉಪ್ಪಿನಕಾಯಿಯಂಥ ಕೆಚಪ್ ಇತ್ಯಾದಿ. ನಾನು ಆ ರೆಸ್ಟೋರೆಂಟ್‌ಗೆ ಹೋಗದಿದ್ದರೆ ನನಗೆ ಅಲ್ಲಿನ ಆಹಾರ, ಕಾಡು, ಜನಜೀವನ, ಜೀವನ ವಿಧಾನದ ಕೆಲವು ಸಂಗತಿಗಳು ಗೊತ್ತೇ ಆಗುತ್ತಿರಲಿಲ್ಲ.
ನೀವು ಯಾವುದೇ ದೇಶಕ್ಕೆ ಹೋಗಿ ಅಲ್ಲಿನ ಸ್ಥಳೀಯ ಆಹಾರಗಳನ್ನು ಸೇವಿಸದೇ ಬರಬಾರದು. ನೋಡಿದ್ದು ಮತ್ತು ತಿಂದಿದ್ದು ಎಂದೂ ಮರೆತು ಹೋಗುವುದಿಲ್ಲ. ಕಣ್ಣು ಮತ್ತು ನಾಲಗೆ ಎಂದೂ ನಿಮಗೆ ಮೋಸ ಮಾಡಲಾರವು. ಐರ್ಲೆಂಡ್‌ಗೆ ಹೋಗಿ ಅಲ್ಲಿನ ಪಬ್ ಅಥವಾ ಹೊಟೇಲ್‌ಗೆ ಹೋಗದೆ ಬಂದರೆ, ಗೋಕರ್ಣಕ್ಕೆ ಹೋಗಿ ಕೋಟಿತೀರ್ಥ ಮತ್ತು ಆತ್ಮಲಿಂಗವನ್ನು ನೋಡದೇ ಬಂದಂತೆ.
ನಿಮಗೆ ಇಷ್ಟವಾಗದಿರಬಹುದು, ನೀವು ಅದನ್ನು ಈ ಮೊದಲು ಸೇವಿಸದಿರಬಹುದು, ಆದರೆ ರುಚಿಗಾದರೂ ಸವಿಯಬೇಕು. ಒಂದು ಅನುಭವ ಎಂದಾದರೂ ಸೇವಿಸಬೇಕು. ನಿಮ್ಮ ನಾಲಗೆ ಮೇಲೆ ರುಚಿಗ್ರಂಥಿ ಮೂಡದೇ ಯಾವ ಆಹಾರವೂ ಮತ್ತೊಮ್ಮೆ ತಿನ್ನಬೇಕು ಎಂದು ಅನಿಸುವುದಿಲ್ಲ. ಆಹಾರ ಪ್ರವಾಸೋದ್ಯಮವೆಂದರೆ ಪ್ರವಾಸದ ಒಂದು ಭಾಗವಾಗಿ ಅಲ್ಲಿನ ಸ್ಥಳೀಯ ಆಹಾರವನ್ನು ಮತ್ತು ಪಾನೀಯಗಳನ್ನು ಅನುಭವಿಸುವುದು. ಆಹಾರ ಪ್ರವಾಸೋದ್ಯಮವು ಒಂದು ಪ್ರದೇಶವನ್ನು ಆರ್ಥಿಕವಾಗಿ ಮತ್ತು ಸಾಂಸ್ಕೃತಿಕವಾಗಿ ಸಮೃದ್ಧಗೊಳಿಸುವ ಒಂದು ಉತ್ತಮ ಮಾರ್ಗವಾಗಿದೆ. ಇದು ಪ್ರವಾಸಿಗರಿಗೆ ಹೊಸ ರೀತಿಯ ಅನುಭವವನ್ನು ನೀಡುತ್ತದೆ.
ಊರು ನೋಡುವುದೆಂದರೆ ಕಣ್ಣು ತುಂಬಿಸಿಕೊಳ್ಳುವುದೊಂದೇ ಅಲ್ಲ, ಹೊಟ್ಟೆ ತುಂಬಿಸಿಕೊಳ್ಳುವುದೂ ಹೌದು.