Tuesday, January 6, 2026
Tuesday, January 6, 2026

ಎಂಜಿನ್‌ ವಿಫಲವಾದರೆ ಮುಂದೇನು ?

ಒಂದು ಎಂಜಿನ್ ಕೆಟ್ಟುಹೋದಾಗ ವಿಮಾನವು ಹತ್ತಿರದ ವಿಮಾನ ನಿಲ್ದಾಣವನ್ನು ತಲುಪಲು ಎಷ್ಟು ಸಮಯ ತೆಗೆದುಕೊಳ್ಳಬಹುದು ಎಂಬುದನ್ನು ಇದು ನಿರ್ಧರಿಸುತ್ತದೆ. ಹಿಂದಿನ ಕಾಲ ದಲ್ಲಿ, ಸಮುದ್ರದ ಮೇಲೆ ಹಾರಲು ಕನಿಷ್ಠ ಮೂರು ಅಥವಾ ನಾಲ್ಕು ಎಂಜಿನ್‌ಗಳಿರಬೇಕು ಎಂಬ ನಿಯಮವಿತ್ತು. ಆದರೆ ಇಂದಿನ ಎಂಜಿನ್‌ಗಳ ವಿಶ್ವಾಸಾರ್ಹತೆ ಹೆಚ್ಚಾಗಿರುವುದರಿಂದ, ಎರಡು ಎಂಜಿನ್ ಇರುವ ವಿಮಾನಗಳಿಗೂ ಸುದೀರ್ಘ ಹಾರಾಟಕ್ಕೆ ಅನುಮತಿ ನೀಡಲಾಗುತ್ತದೆ

ವಿಮಾನದ ಎಂಜಿನ್ ಹಠಾತ್ ವಿಫಲವಾದರೆ? ಈ ಭಯ ಅನೇಕರಲ್ಲಿ ಇರುತ್ತದೆ. ವಿಶೇಷವಾಗಿ ವಿಶಾಲವಾದ ಸಮುದ್ರದ ಮೇಲೆ ಹಾರುವಾಗ ಈ ಆತಂಕ ಸಹಜ. ಆದರೆ ಆಧುನಿಕ ವಿಮಾನಯಾನ ತಂತ್ರಜ್ಞಾನವು ನಾವು ಊಹಿಸುವುದಕ್ಕಿಂತಲೂ ಹೆಚ್ಚು ಸುರಕ್ಷಿತವಾಗಿದೆ.

ಅವಳಿ ಎಂಜಿನ್ ಹೊಂದಿರುವ ಜೆಟ್ ವಿಮಾನಗಳು ಕೇವಲ ಒಂದು ಎಂಜಿನ್ ಸಹಾಯದಿಂದ ಗಂಟೆಗಟ್ಟಲೆ ಹಾರುವ ಸಾಮರ್ಥ್ಯ ಹೊಂದಿವೆ ಎಂಬುದು ಅನೇಕರಿಗೆ ಗೊತ್ತಿರ ಲಿಕ್ಕಿಲ್ಲ. ವಿಮಾನಯಾನ ಕ್ಷೇತ್ರದಲ್ಲಿ ETOPS (Extended range Twin-engine Operational Performance Standards) ಎಂಬುದು ಅತ್ಯಂತ ನಿರ್ಣಾಯಕ ನಿಯಮ.

ಸರಳವಾಗಿ ಹೇಳುವುದಾದರೆ, ಒಂದು ಎಂಜಿನ್ ಕೆಟ್ಟುಹೋದಾಗ ವಿಮಾನವು ಹತ್ತಿರದ ವಿಮಾನ ನಿಲ್ದಾಣವನ್ನು ತಲುಪಲು ಎಷ್ಟು ಸಮಯ ತೆಗೆದುಕೊಳ್ಳಬಹುದು ಎಂಬುದನ್ನು ಇದು ನಿರ್ಧರಿಸುತ್ತದೆ. ಹಿಂದಿನ ಕಾಲದಲ್ಲಿ, ಸಮುದ್ರದ ಮೇಲೆ ಹಾರಲು ಕನಿಷ್ಠ ಮೂರು ಅಥವಾ ನಾಲ್ಕು ಎಂಜಿನ್‌ಗಳಿರಬೇಕು ಎಂಬ ನಿಯಮವಿತ್ತು. ಆದರೆ ಇಂದಿನ ಎಂಜಿನ್‌ಗಳ ವಿಶ್ವಾಸಾರ್ಹತೆ ಹೆಚ್ಚಾಗಿರುವುದರಿಂದ, ಎರಡು ಎಂಜಿನ್ ಇರುವ ವಿಮಾನಗಳಿಗೂ ಸುದೀರ್ಘ ಹಾರಾಟಕ್ಕೆ ಅನುಮತಿ ನೀಡಲಾಗುತ್ತದೆ.

ಆಧುನಿಕ ವಿಮಾನಗಳು ಕೇವಲ ಒಂದು ಎಂಜಿನ್‌ನಲ್ಲಿ ಎಷ್ಟು ದೂರ ಸಾಗಬಲ್ಲವು ಎಂಬುದಕ್ಕೆ ಕೆಲವು ಉದಾಹರಣೆಗಳನ್ನು ಗಮನಿಸಬಹುದು. ಬೋಯಿಂಗ್ 787 ಡ್ರೀಮ್ ಲೈನರ್ ವಿಮಾನವು 330 ನಿಮಿಷಗಳ ETOPS ರೇಟಿಂಗ್ ಹೊಂದಿದೆ.

ಇದನ್ನೂ ಓದಿ: ಕಿಟಕಿಯ ರಂಧ್ರದ ಮಹತ್ವ

ಅಂದರೆ, ಒಂದು ಎಂಜಿನ್ ಸಂಪೂರ್ಣವಾಗಿ ಸ್ಥಗಿತಗೊಂಡರೂ, ಇದು ಸುಮಾರು ಐದೂವರೆ ಗಂಟೆಗಳ ಕಾಲ ಹಾರಾಟ ನಡೆಸಿ ಸುರಕ್ಷಿತವಾಗಿ ಇಳಿಯಬಲ್ಲದು. ಏರ್‌ಬಸ್ A-350 ಪ್ರಸ್ತುತ ಜಾಗತಿಕ ದಾಖಲೆಯನ್ನು ಹೊಂದಿದೆ. ಇದಕ್ಕೆ 370 ನಿಮಿಷಗಳ ರೇಟಿಂಗ್ ನೀಡಲಾಗಿದೆ. ಅಂದರೆ ಆರು ಗಂಟೆಗಳಿಗೂ ಹೆಚ್ಚು ಕಾಲ ಒಂದು ಎಂಜಿನ್‌ನಲ್ಲಿ ಇದು ಸುಮಾರು 4600 ಕಿಮೀ. ದೂರವನ್ನು ಕ್ರಮಿಸಬಲ್ಲದು. ವಿಮಾನಯಾನ ಕಾನೂನಿನ ಪ್ರಕಾರ, ಪ್ರತಿಯೊಂದು ವಾಣಿಜ್ಯ ವಿಮಾನವು ಕೆಲವು ಕಟ್ಟುನಿಟ್ಟಾದ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಬೇಕು.

ವಿಮಾನವು ಇಂಧನ, ಪ್ರಯಾಣಿಕರು ಮತ್ತು ಸರಕುಗಳಿಂದ ಸಂಪೂರ್ಣವಾಗಿ ತುಂಬಿದ್ದರೂ, ಒಂದೇ ಎಂಜಿನ್ ಬಳಸಿ ಪ್ರತಿ ನಿಮಿಷಕ್ಕೆ 500 ಅಡಿಗಳಷ್ಟು ಎತ್ತರಕ್ಕೆ ಏರುವ ಸಾಮರ್ಥ್ಯ ಹೊಂದಿರಬೇಕು. ವಿಮಾನಯಾನ ಸಂಸ್ಥೆಗಳು ತಮ್ಮ ಎಂಜಿನ್‌ಗಳನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡುತ್ತವೆ.

ಒಂದು ವೇಳೆ ಎಂಜಿನ್‌ನಲ್ಲಿ ಸಣ್ಣ ದೋಷ ಕಂಡುಬಂದರೂ ತಕ್ಷಣವೇ ಕ್ರಮ ಕೈಗೊಳ್ಳಲಾಗುತ್ತದೆ. ಎಂಜಿನ್ ವಿಫಲವಾಗುವುದು ಅತ್ಯಂತ ಅಪರೂಪದ ಘಟನೆ (ಒಂದು ಅಂದಾಜಿನ ಪ್ರಕಾರ, 10 ಲಕ್ಷ ಹಾರಾಟಗಳಲ್ಲಿ ಒಮ್ಮೆ ಮಾತ್ರ ಇಂಥ ಘಟನೆ ಸಂಭವಿಸಬಹುದು). ಆದರೂ, ಪೈಲಟ್‌ಗಳು ಈ ಪರಿಸ್ಥಿತಿಯನ್ನು ಎದುರಿಸಲು ಸದಾ ಸಿದ್ಧರಿರುತ್ತಾರೆ.

flight engine

ಪೈಲಟ್‌ಗಳು ಸುಧಾರಿತ ಸಿಮ್ಯುಲೇಟರ್‌ಗಳಲ್ಲಿ ನೂರಾರು ಗಂಟೆಗಳ ಕಾಲ ‘ಸಿಂಗಲ್ ಎಂಜಿನ್’ ಪರಿಸ್ಥಿತಿಯನ್ನು ಹೇಗೆ ನಿಭಾಯಿಸಬೇಕು ಎಂದು ಅಭ್ಯಾಸ ಮಾಡುತ್ತಾರೆ. ಎಂಜಿನ್ ವಿಫಲವಾದ ತಕ್ಷಣ ಪೈಲಟ್‌ಗಳು ಅನುಸರಿಸಬೇಕಾದ ನಿರ್ದಿಷ್ಟ ‘ಚೆಕ್‌ಲಿಸ್ಟ್’ ಇರುತ್ತದೆ. ಅವರು ವಿಮಾನದ ಎತ್ತರವನ್ನು ಸ್ವಲ್ಪ ಕಡಿಮೆ ಮಾಡಿ, ಲಭ್ಯವಿರುವ ಎಂಜಿನ್‌ ನ ಶಕ್ತಿಯನ್ನು ಸಮರ್ಪಕವಾಗಿ ಬಳಸಿ ಹತ್ತಿರದ ನಿಲ್ದಾಣಕ್ಕೆ ವಿಮಾನವನ್ನು ತಿರುಗಿಸು‌ತ್ತಾರೆ.

ಆಧುನಿಕ ವಿಮಾನಗಳಲ್ಲಿ ಎಂಜಿನ್ ಮಾತ್ರವಲ್ಲ, ವಿದ್ಯುತ್ ಶಕ್ತಿ ಮತ್ತು ಹೈಡ್ರಾಲಿಕ್ ವ್ಯವಸ್ಥೆಗಳಿಗೂ ಪರ್ಯಾಯ ವ್ಯವಸ್ಥೆಗಳಿರುತ್ತವೆ. ವಿಮಾನದ ಬಾಲದ ಭಾಗದಲ್ಲಿರುವ ಈ ಸಣ್ಣ ಎಂಜಿನ್, ಮುಖ್ಯ ಎಂಜಿನ್‌ಗಳು ವಿಫಲವಾದಾಗ ವಿಮಾನಕ್ಕೆ ಅಗತ್ಯವಿರುವ ವಿದ್ಯುತ್ ಮತ್ತು ಗಾಳಿಯ ಒತ್ತಡವನ್ನು ಪೂರೈಸುತ್ತವೆ.

ತುರ್ತು ಸಂದರ್ಭದಲ್ಲಿ ವಿಮಾನದ ಹೊರಭಾಗದಲ್ಲಿ ಒಂದು ಸಣ್ಣ ಗಾಳಿಚಕ್ರ ತೆರೆದುಕೊಳ್ಳುತ್ತದೆ, ಇದು ಗಾಳಿಯ ವೇಗವನ್ನು ಬಳಸಿ ವಿದ್ಯುತ್ ಉತ್ಪಾದಿಸುತ್ತದೆ. ವಿಮಾನದ ಎಂಜಿನ್ ವಿಫಲವಾಗುವುದು ಒಂದು ವಿಪತ್ತು ಎಂದು ನಾವು ಭಾವಿಸುತ್ತೇವೆ. ಆದರೆ ವಿಮಾನಯಾನ ತಂತ್ರಜ್ಞಾನದ ದೃಷ್ಟಿಯಲ್ಲಿ ಇದು ಕೇವಲ ಒಂದು ‘ನಿರ್ವಹಿಸಬಹು ದಾದ ಪರಿಸ್ಥಿತಿ’ (Manageable Situation).

ಪ್ರಯಾಣಿಕರಿಗೆ ಎಂಜಿನ್ ನಿಂತಿರುವುದು ಸರಿಯಾಗಿ ತಿಳಿಯದಷ್ಟು ಸುಗಮವಾಗಿ ವಿಮಾನವನ್ನು ಇಳಿಸುವ ಸಾಮರ್ಥ್ಯ ಇಂದಿನ ತಂತ್ರಜ್ಞಾನಕ್ಕಿದೆ. ಹೀಗಾಗಿ, ನೀವು ಮುಂದಿನ ಬಾರಿ ಸಮುದ್ರದ ಮೇಲೆ ಹಾರಾಟ ನಡೆಸುವಾಗ ಯಾವುದೇ ಭಯವಿಲ್ಲದೇ ಪ್ರಯಾಣಿಸಬಹುದು.

Vishweshwar Bhat

Vishweshwar Bhat

Editor in Chief

ಕೈ ಸವೆಯುವವರೆಗೂ ನಿರಂತರ ಬರೆಯಲು ಸೈ !

Read Previous

ಕೈ ಸವೆಯುವವರೆಗೂ ನಿರಂತರ ಬರೆಯಲು ಸೈ !

ವಿಮಾನದಲ್ಲಿ ಮುಂಭಾಗದ ಆಸನಗಳು ಸುರಕ್ಷಿತವೇ ?

Read Next

ವಿಮಾನದಲ್ಲಿ ಮುಂಭಾಗದ ಆಸನಗಳು ಸುರಕ್ಷಿತವೇ ?