Saturday, February 21, 2026
Saturday, February 21, 2026

ಜೈಲೂಟ ಗ್ಯಾರಂಟಿ

ಬೆಂಗಳೂರಿನ ಪ್ರಪ್ರಥಮ ಹಾಗೂ ಏಕೈಕ ಜೈಲ್ ಥೀಮ್ ರೆಸ್ಟೋರೆಂಟ್ ಇದೀಗ ಯೂಟ್ಯೂಬರ್ ಗಳ ಮತ್ತು ಇನ್ ಸ್ಟಾಗ್ರಾಮ್ ಹಾಟ್ ಸ್ಪಾಟ್ ಆಗಿದೆ. ಸೋಷಿಯಲ್ ಮೀಡಿಯಾಗಳಲ್ಲಿ ಈ ರೆಸ್ಟೋರೆಂಟ್ ನ ವಿಡಿಯೋ ನೋಡಿದವರು ನಾವೂ ಒಮ್ಮೆ ಜೈಲಿನ ಅನುಭವ ಪಡೆಯೋಣವೆಂದು ಸೆಂಟ್ರಲ್ ಜೈಲ್ ರೆಸ್ಟೋರೆಂಟ್ ಗೆ ದೌಡಾಯಿಸುತ್ತಿದ್ದಾರೆ.

  • ನವೀನ್

ಪೊಲೀಸ್ ಸ್ಟೇಷನ್ ಮತ್ತು ಜೈಲು; ಇವೆರಡೂ ಯಾರೂ ಹೋಗಲು ಇಷ್ಟಪಡದ ಎರಡು ಜಾಗಗಳು. ಅವು ಭೂಮಿ ಮೇಲಿನ ಯಮಲೋಕ ಅಥವಾ ನರಕ ಎಂಬುದು ಮನುಷ್ಯನ ಸಹಜ ಭಾವನೆ. ಒಮ್ಮೆ ಜೈಲಿಗೆ ಹೋಗಿಬಂದವರೂ ಕೂಡ ತಮ್ಮ ಶತ್ರುಗಳಿಗೂ ಆ ಬದುಕು ಬೇಡಪ್ಪಾ ಅನ್ನುತ್ತಾರೆ. ಗಡಿಬಿಡಿ ಅಳಿಯ ಚಿತ್ರದ ಟೆನ್ನಿಸ್ ಕೃಷ್ಣನ ಹೊರತಾಗಿ ಇನ್ಯಾರೂ ಜೈಲನ್ನು ಮಿಸ್ ಮಾಡಿಕೊಂಡು ಕೊರಗುವುದಿಲ್ಲ!

ಇದನ್ನೂ ಓದಿ: ರೈಲೂಟ ರೆಡಿ..!

ಆದರೆ ಬೆಂಗಳೂರಲ್ಲಿ ಜನ ಈಗ ಜೈಲೂಟಕ್ಕೆ ಕ್ಯೂ ನಿಲ್ಲುತ್ತಿದ್ದಾರೆ. ವೀಕೆಂಡ್ ಬಂತು ನಾನು ಸೆಂಟ್ರಲ್ ಜೈಲಿಗೆ ಹೋಗ್ತೀನಿ ಅನ್ನುತ್ತಿದ್ದಾರೆ. ಮನೇಲಿ ಊಟ ಸರಿ ಹೋಗಲಿಲ್ಲ ಅಂದ್ರೆ, ನಾನು ಜೈಲಿಗೆ ಹೋಗ್ತೀನಿ ನೋಡು ಅಂತ ಅಪ್ಪಅಮ್ಮನಿಗೆ ಧಮಕಿ ಹಾಕ್ತಿದ್ದಾರೆ. ಈ ಧಮಕಿಗೆ ಹೆದರದ ಅಪ್ಪ ಅಮ್ಮಂದಿರು ನಾವೂ ನಿನ್ನಜತೆ ಜೈಲಿಗೆ ಬರ್ತೀವಿ ಎಂದು ಹೊರಡುತ್ತಿದ್ದಾರೆ. ಇದೇನಿದು ಜೈಲು ಮೇನಿಯಾ ಅಂತ ಅಚ್ಚರಿ ಪಡಬೇಡಿ. ಇವೆರಲ್ಲರ ಮಾತಿನಲ್ಲಿ ನಲಿಯುತ್ತಿರುವುದು ಬೆಂಗಳೂರಿನ ಹೆಚ್ ಎಸ್ ಆರ್ ಲೇಔಟ್ ನಲ್ಲಿರುವ ಸೆಂಟ್ರಲ್ ಜೈಲ್ ರೆಸ್ಟೋರೆಂಟ್!

Untitled design (23)

ಬೆಂಗಳೂರಿನ ಪ್ರಪ್ರಥಮ ಹಾಗೂ ಏಕೈಕ ಜೈಲ್ ಥೀಮ್ ರೆಸ್ಟೋರೆಂಟ್ ಇದೀಗ ಯೂಟ್ಯೂಬರ್ ಗಳ ಮತ್ತು ಇನ್ ಸ್ಟಾಗ್ರಾಮ್ ಹಾಟ್ ಸ್ಪಾಟ್ ಆಗಿದೆ. ಸೋಷಿಯಲ್ ಮೀಡಿಯಾಗಳಲ್ಲಿ ಈ ರೆಸ್ಟೋರೆಂಟ್ ನ ವಿಡಿಯೋ ನೋಡಿದವರು ನಾವೂ ಒಮ್ಮೆ ಜೈಲಿನ ಅನುಭವ ಪಡೆಯೋಣವೆಂದು ಸೆಂಟ್ರಲ್ ಜೈಲ್ ರೆಸ್ಟೋರೆಂಟ್ ಗೆ ದೌಡಾಯಿಸುತ್ತಿದ್ದಾರೆ.

ಆಹಾ ಎಂಥಾ ಸ್ವಾಗತ!

ಜೈಲು ಬಾಗಿಲಿನಲ್ಲೇ ಪೊಲೀಸ್ ಒಬ್ಬರು ಲಾಠಿ ಹಿಡಿದು ನಿಂತಿರುತ್ತಾರೆ. ಆದರೆ ಕೈ ಮುಗಿದು ಒಳಗೆ ಕರೆಯುವುದಿಲ್ಲ. ಪೊಲೀಸರು ಕೈದಿಯನ್ನು ವೆಲ್ಕಮ್ ಮಾಡುವ ಸ್ಟೈಲಲ್ಲೇ ಬರಮಾಡಿಕೊಳ್ಳುತ್ತಾರೆ. ರಿಯಲ್ಲಾಗಿ ಲಾಠಿ ರುಚಿ ತೋರಿಸುತ್ತಾರೆಂದು ಗಾಬರಿಪಡಬೇಡಿ. ಅಷ್ಟಾದರೂ ವಿಭಿನ್ನತೆ ಇಲ್ಲದಿದ್ದರೆ ಜೈಲ್ ಅನಿಸೋದಾದ್ರೂ ಹೇಗೆ? ನೀವು ಬಯಸಿದರೆ ಕೈಗಳಿಗೆ ಅಂತ ಚಿತ್ರದ ಕನ್ವರ್ ಲಾಲ್ ರೀತಿ ಸರಪಳಿಯನ್ನೂ ಕಟ್ಟಲಾಗುತ್ತೆ. ಬೇಡಿಯನ್ನೂ ಹಾಕಲಾಗುತ್ತೆ.

ಸರಳು ಭೋಜನ!

ಸರಳ ಭೋಜನದ ಬದಲು ಇಲ್ಲಿ ಸರಳು ಭೋಜನ ಅನ್ನಬಹುದಾ? ಹೌದು ಎಲ್ಲೆಡೆ ಕಂಬಿಗಳೇ ಕಾಣಿಸುತ್ತವೆ. ಲಾಕಪ್ ಗಳು, ಸೆಲ್ ಗಳು ನೋಡ್ತಾ ಇದ್ದರೆ ಸಾಕ್ಷಾತ್ ಜೈಲು ದರ್ಶನವೇ! ಗೋಡೆಯ ಮೇಲೆ ಥ್ರೀಡಿ ಎಫೆಕ್ಟಿನಲ್ಲಿ ಪೊಲೀಸ್ ಜೀಪು, ಜೈಲು ವಾತಾವರಣದ ಫೀಲ್ ಕೊಡುವ ಚಿತ್ರಗಳು ನಿಮ್ಮನ್ನು ಜೈಲು ಮೂಡಿಗೆ ಕರೆದೊಯ್ಯುತ್ತವೆ.

ಕಾರಾಗೃಹವೋ ಖಾರಾಗೃಹವೋ?

ಊಟಕ್ಕೆ ಟೇಬಲ್ ಎದುರು ಸೆಟ್ಲ್ ಆಗ್ತಾ ಇದ್ದ ಹಾಗೆ, ನಿಮ್ಮೆದುರು ಆರ್ಡರ್ ತೆಗೆದುಕೊಳ್ಳಲು ಪೊಲೀಸ್ ವೇಷಧಾರಿಗಳೇ ಬರುತ್ತಾರೆ. ಆದರೆ ನೀವು ಕೊಟ್ಟ ಆರ್ಡರ್ ಸರ್ವ್ ಮಾಡಲು ಬರುವವರು ಕೈದಿಯ ವೇಷಧಾರಿಗಳು. ಜೈಲಿನಂತೆಯೇ ಇಲ್ಲಿಯೂ ಅಲ್ಯೂಮೀನಿಯಂ ತಟ್ಟೆಗಳನ್ನು ಹಾಕುತ್ತಾರೆ. ಆದರೆ ನಿಜವಾದ ಜೈಲೂಟ ಕೊಟ್ಟರೆ ಇನ್ನೊಮ್ಮೆ ನೀವು ಬರಲಾರಿರಿ ಎಂದು ಗೊತ್ತು. ಹೀಗಾಗಿ ಊಟ ಮಾತ್ರ ಟೇಸ್ಟಿ ಅಂಡ್ ಸ್ಪೈಸಿ ಕೊಡಲಾಗುತ್ತೆ! ಹೀಗಾಗಿ ಇದನ್ನು ಕಾರಾಗೃಹ ಅನ್ನೋ ಬದಲು ಖಾರಾಗೃಹ ಅನ್ನಬಹುದು. ಅಂದಹಾಗೆ ಇಲ್ಲಿ ಜೈಲು ಬಿರಿಯಾನಿ ಸೂಪರ್ ಫೇಮಸ್!

Untitled design (26)

ಜಯನಗರದಿಂದ ಸ್ಥಳಾಂತರ!

ಈ ಜೈಲು ಥೀಮ್ ನ ರೆಸ್ಟೋರೆಂಟ್ ಮೊದಲು ಶುರುವಾಗಿದ್ದು ಜಯನಗರದಲ್ಲಿ. ಆಹಾರಪ್ರಿಯರ ವಲಯದಲ್ಲಿ ಇದು ಸೆನ್ಸೇಷನ್ ಆಗಿಬಿಟ್ಟಿತ್ತು. ಸೂಪರ್ ಸಕ್ಸಸ್ ಕೂಡ ಕಂಡಿತು. ಆದರೆ ಲಾಕ್ ಡೌನ್ ಸಮಯದಲ್ಲಿ ಎಲ್ಲ ಉದ್ಯಮಗಳಿಗೂ ಏಟು ಬಿದ್ದಂತೆ, ಹೊಟೇಲ್ ಉದ್ಯಮಕ್ಕೂ ಹೊಡೆತ ಬಿತ್ತು. ಕೋವಿಡ್ ನಿಂದಾಗಿ ಎಲ್ಲರಿಗೂ ಮನೆಯೇ ಜೈಲು ಎಂಬಂತಾಗಿ ಹೋಗಿತ್ತು. ಹೀಗಿದ್ದಾಗ ಜೈಲು ಥೀಮಿನ ಹೊಟೇಲ್ ಗೆ ಹೋಗಿ ಅಲ್ಲಿಯೂ ಅದೇ ಫೀಲ್ ಅನುಭವಿಸಬೇಕಾ ಎಂದು ಗ್ರಾಹಕರಿಗೆ ಅನಿಸಿರಬಹುದು. ಹೊಟೇಲ್ ಕೊಂಚ ಹಿನ್ನಡೆ ಕಂಡಿತು. ಇಂಥ ಸಮಯದಲ್ಲಿ ಹೊಟೇಲ್ ಮಾಲೀಕರೇನಾದರೂ ಎದೆಗುಂದಿದ್ದರೆ ಬೆಂಗಳೂರು ಅಪರೂಪದ ಹೊಟೇಲ್ ಒಂದನ್ನು ಶಾಶ್ವತವಾಗಿ ಕಳೆದುಕೊಳ್ಳುತ್ತಿತ್ತು. ಆದರೆ ಗ್ರಾಹಕರ ಪ್ರೀತಿಗೆ ಓಗೊಟ್ಟ ಮಾಲೀಕರು ಇದನ್ನು ಇನ್ನೂ ದೊಡ್ಡದಾಗಿ ಮಾಡುವ ನಿರ್ಧಾರ ಕೈಗೊಂಡು ಎಚ್ ಎಸ್ ಆರ್ ಲೇಔಟ್ ನಲ್ಲಿ ಸೆಂಟ್ರಲ್ ಜೈಲ್ ರೆಸ್ಟೋರೆಂಟನ್ನು ಪುನಾರಂಭ ಮಾಡುತ್ತಾರೆ. ಗ್ರಾಹಕರು ಮಾಲೀಕರ ನಿರೀಕ್ಷೆಯನ್ನು ಹುಸಿಗೊಳಿಸುವುದಿಲ್ಲ. ರೆಸ್ಟೊರೆಂಟ್ ಮತ್ತೆ ಗೆಲುವಿನ ಲಯಕ್ಕೆ ಮರಳುತ್ತದೆ. ಜನರ ಫೇವರಿಟ್ ಫುಡ್ ಸ್ಪಾಟ್ ಆಗುತ್ತದೆ.

ಸೆರೆಮನೆಯಲ್ಲೇ ಸೆರಮನಿ!

ಇಂದಿಗೆ ಜೈಲಲ್ಲಿ ಊಟ ಮಾಡುವುದು ಎಂದು ಸಂಭ್ರಮ ಎಂಬಂತೆ ಜನರು ಇಲ್ಲಿಗೆ ಬರುತ್ತಿದ್ದಾರೆ. ಎಷ್ಟೋ ಮಂದಿ ಇಲ್ಲೇ ಹುಟ್ಟುಹಬ್ಬ ಕೂಡ ಆಚರಿಸಿಕೊಳ್ಳುತ್ತಿದ್ದಾರೆ. ಸೆಲ್ ನಲ್ಲೇ ಕೂತು ಸೆಲ್ ಫೋನ್ ತಗೊಂಡು ಸೆಲ್ಫೀ ತೆಗೆದುಕೊಳ್ಳುತ್ತಿದ್ದಾರೆ. ಸೆರೆಮನೆಯಲ್ಲಿ ಸೆರಮನಿ ಮಾಡ್ಕೊಳೋದೂ ಒಂಥರ ವಿಶೇಷವೇ . ಏನಂತೀರಿ? ಕೃಷ್ಣ ಭವನ, ಕೃಷ್ಣ ಕೆಫೆಗಳಲ್ಲಿ ನೀವು ತಿಂದಿರಬಹುದು. ಆದರೆ ಕೃಷ್ಣಜನ್ಮಸ್ಥಾನದಲ್ಲಿ ಊಟ ಮಾಡಿದ್ದೀರಾ ಅಂತ ಯಾರಾದ್ರೂ ಕೇಳಿದರೆ, ಸೆಂಟ್ರಲ್ ಜೈಲ್ ರೆಸ್ಟೋರೆಂಟ್ ನಲ್ಲಿ ಊಟ ಮಾಡಿ, ಯೆಸ್ ಅನ್ನಬಹುದು!

ರಾಜ್ಯಕ್ಕೊಂದೇ ಜೈಲು!

ಹೌದು ಕರ್ನಾಟಕದಲ್ಲಿ ಪರಪ್ಪನ ಅಗ್ರಹಾರ, ಹಿಂಡಲಗಾ, ಬಳ್ಳಾರಿ ಜೈಲ್ ಅಂತ ಸಾಕಷ್ಟು ಖ್ಯಾತ(!) ಜೈಲುಗಳಿರಬಹುದು. ಆದರೆ ಸೆಂಟ್ರಲ್ ಜೈಲ್ ರೆಸ್ಟೋರೆಂಟ್ ಅಂತ ಇರುವುದು ಇದೊಂದೆ. ಇದರ ಬ್ರಾಂಚ್ ಗಳೂ ಇಲ್ಲ. ನೀವು ಕಂಬಿ ಎಣಿಸುತ್ತಾ ಊಟ ಮಾಡಬೇಕು ಅಂದ್ರೆ ಎಚ್ ಎಸ್ ಆರ್ ಲೇಔಟ್ ಗೇ ಹೋಗಬೇಕು.

ಇಂಥದ್ದೊಂದು ಥೀಮ್ ನಲ್ಲಿ ಹೊಟೇಲ್ ಮಾಡಬೇಕು ಅಂತ ಅನಿಸಿದ್ದು ಹೇಗೆ ಮತ್ತು ಯಾಕೆ ಎಂಬ ಉತ್ತರ ತಿಳಿದುಕೊಳ್ಳುವ ಮುನ್ನ ಇನ್ನೆಲ್ಲಿ ಇಂಥ ಕಾನ್ಸೆಪ್ಟ್ ಹೊಟೇಲ್ ಇದೆ ಎಂದು ಹುಡುಕಿದರೆ ಬೆರಳೆಣಿಕೆಯಷ್ಟು ಸಿಗುತ್ತವೆ.

ಬಿಹಾರ/ಜಾರ್ಖಂಡ್ ನ ಜೆಮ್ ಷೆಡ್ ಪುರದಲ್ಲಿ ಕೈದಿ ಕಿಚನ್ ಎಂಬ ಹೊಟೇಲ್ ಪ್ರಾರಂಭಗೊಂಡು ಸಕ್ಸಸ್ ಆಯಿತು. ಆ ಯಶಸ್ಸಿನಲ್ಲಿ ಬ್ರಾಂಚ್ ಗಳು ಹುಟ್ಟಿಕೊಂಡು ಚೆನ್ನೈ ಮತ್ತು ಕೋಲ್ಕತಾದಲ್ಲೂ ಕೈದಿ ಕಿಚನ್ ಬಂದವು. ಮಾಜಿ ಕೈದಿಗಳು ತಿರುವನಂತಪುರದಲ್ಲಿ ಶುರು ಮಾಡಿದ ಫುಡ್ ಫಾರ್ ಫ್ರೀಡಂ ಕೂಡ ತನ್ನ ಆಹಾರಶೈಲಿಯಿಂದ ಗಮನ ಸೆಳೆದಿತ್ತು.

ಜಾಗತಿಕ ಮಟ್ಟದಲ್ಲಿ ನೋಡುವುದಾದರೆ ಚೀನಾದಲ್ಲಿ ಪ್ರಿಸನ್ ಫೆಂಗ್ ಯೂನ್ ಎಂಬ ರೆಸ್ಟೋರೆಂಟ್ ಇದೇ ಜೈಲ್ ಥೀಮ್ ನಲ್ಲಿ ಸಿದ್ಧವಾಗಿತ್ತು. ಜಪಾನ್ ನ ರಾಜಧಾನಿ ಟೋಕಿಯೋದಲ್ಲಿರುವ ದಿ ಲಾಕ್ ಅಪ್ ಕೂಡ ಜೈಲ್ ಮಾದರಿಯ ರೆಸ್ಟೋರೆಂಟ್. ಬೆಂಗಳೂರಿನ ಸೆಂಟ್ರಲ್ ಜೈಲ್ ರೆಸ್ಟೋರೆಂಟ್ ಟೊಕಿಯೋದ ದಿ ಲಾಕ್ ಅಪ್ ರೆಸ್ಟೋರೆಂಟ್ ನ ಪಡಿಯಚ್ಚಿನಂತಿದೆ.

ಸೆಂಟ್ರಲ್ ಜೈಲ್ ರೆಸ್ಟೋರೆಂಟ್‌ನ ದೊಡ್ಡ ಶಕ್ತಿ ಅದರ ಫುಡ್ ವೆರೈಟಿ. ಇಲ್ಲಿ ಉತ್ತರ ಭಾರತೀಯ, ದಕ್ಷಿಣ ಭಾರತೀಯ, ಚೈನೀಸ್, ಟ್ಯಾಂಡೂರಿ, ಕಾಂಟಿನೆಂಟಲ್ ಶೈಲಿಯ ಆಹಾರಗಳು ಒಂದೇ ಜಾಗದಲ್ಲಿ ಸಿಗುತ್ತವೆ.

Untitled design (25)

ಚಿಕನ್ ಟಿಕ್ಕಾ, ಪನ್ನೀರ್ ಟಿಕ್ಕಾ, ಕ್ರಿಸ್ಪಿ ಕಾರ್ನ್,,ಚಿಲ್ಲಿ ಚಿಕನ್ / ಚಿಲ್ಲಿ ಪನ್ನೀರ್,,ಪೆಪ್ಪರ್ ಫ್ರೈ ಈ ಸ್ಟಾರ್ಟರ್ ಗಳ ಮೂಲಕ ಊಟ ಶುರು ಮಾಡಿದರೆ, ಬಟರ್ ಚಿಕನ್, ಹೈದರಾಬಾದಿ ಬಿರಿಯಾನಿ, ಚಿಕನ್ ದಮ್ ಬಿರಿಯಾನಿ, ಪನ್ನೀರ್ ಬಟರ್ ಮಸಾಲಾ, ಕಡಾಯಿ ಚಿಕನ್, ವೆಜ್ ಕೊಲ್ಹಾಪುರಿ, ದಾಲ್ ತಡ್ಕಾ, ನಾನ್, ಕುಲ್ಚಾ, ರೋಟಿ, ಪರೋಟಾ ಮೇನ್ ಕೋರ್ಸ್ ನಲ್ಲಿ ಹಿಂಬಾಲಿಸುತ್ತವೆ. ಸೌತ್ ಇಂಡಿಯನ್ ಊಟ ಬೇಕೆನ್ನುವವರಿಗೆ ಮೀಲ್ಸ್, ಬಿಸಿಬೇಳೆಭಾತ್, ರಸಂ, ಸಾಂಬಾರ್, ಮೊಸರನ್ನ ಕೂಡ ಲಭ್ಯ. ಚೈನೀಸ್ ಐಟಮ್ ಎಲ್ಲವೂ ಇದ್ದು. ಡೆಸರ್ಟ್ ಐಸ್ ಕ್ರೀಮ್ ನಂತರ ಪಾನ್ ಬೀಡಾ ಕೂಡ ಸಿಗುತ್ತದೆ. ಇಂಥ ರಾಜಾತಿಥ್ಯ ಸಿಗೋದಾದ್ರೆ ಯಾರು ತಾನೇ ಜೈಲಿಗೆ ಹೋಗದೇ ಇರ್ತಾರೆ!

ಹೊಟೇಲ್ ಉದ್ಯಮವನ್ನೇ ಶುರು ಮಾಡಬೇಕು ಆದರೆ ಏನಾದರೂ ಭಿನ್ನವಾಗಿ ಮಾಡಬೇಕು ಎಂದು ಯೋಚಿಸುತ್ತಾ ಇದ್ದಾಗ ಹೊಳೆದದ್ದು ಈ ಪರಿಕಲ್ಪನೆ. ಪಾರ್ಟ್ನರ್ ಶಿಪ್ ನಲ್ಲಿ ಶುರುಮಾಡಿದ್ದು ಕೈ ಹಿಡಿಯಿತು. ಲಾಕ್ ಡೌನ್ ಕೊಟ್ಟ ಹೊಡೆತ ಜೋರಿದ್ದರೂ ನಾವು ಪುಟಿದೆದ್ದು ಜಯನಗರದಲ್ಲಿದ್ದ ರೆಸ್ಟೋರೆಂಟ್ ಗಿಂತ ದೊಡ್ಡ ರೆಸ್ಟೋರೆಂಟ್ ಮಾಡಿದೆವು. ಒಳ್ಳೆ ಆತಿಥ್ಯ ಹಾಗೂ ಒಳ್ಳೆ ರುಚಿ, ತ್ವರಿತ ಸೇವೆ ಕೊಟ್ಟರೆ ಜನ ಬಂದೇ ಬರ್ತಾರೆ ಅನ್ನೋ ನಂಬಿಕೆ ನಿಜವಾಗಿದೆ. ನಾವು ಇದೇ ಗುಣಮಟ್ಟ ಕಾಯ್ದುಕೊಂಡು ಹೋಗುತ್ತೇವೆ.
- ಚೇತನ್ ಮತ್ತು ಅರವಿಂದ್, ಮಾಲೀಕರು

ವಿಳಾಸ:

2631, 27ನೇ ಮುಖ್ಯರಸ್ತೆ, 1ನೇ ವಲಯ, HSR ಲೇಔಟ್, ಬೆಂಗಳೂರು, ಕರ್ನಾಟಕ 560102

ಮೊ: 073378 86666

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ಪ್ರವಾಸಿಗರ ನೆಚ್ಚಿನ ಎವರ್ ಗ್ರೀನ್ ಕೌಂಟಿ...

Read Previous

ಪ್ರವಾಸಿಗರ ನೆಚ್ಚಿನ ಎವರ್ ಗ್ರೀನ್ ಕೌಂಟಿ...

ಪ್ರಕೃತಿಯ ಮೈಮಾಟವನ್ನು ನೋಡಬೇಕೆ? ಸಮತಗೆ ಬನ್ನಿ

Read Next

ಪ್ರಕೃತಿಯ ಮೈಮಾಟವನ್ನು ನೋಡಬೇಕೆ? ಸಮತಗೆ ಬನ್ನಿ