Tuesday, October 7, 2025
Tuesday, October 7, 2025

ನಕ್ಷತ್ರಗಳ ಬೆಳಕಲ್ಲೇ ಈ ಊರಿನಲ್ಲಿ ರಾತ್ರಿ ಊಟ

ರಾತ್ರಿಯಾದರೆ ಸಾಕು, ಊರಿನ ವಿದ್ಯುತ್‌ ಸಂಪರ್ಕ ಕಡಿಯಲಾಗುತ್ತದೆ. ಎಲ್ಲ ಮನೆ ಮತ್ತು ಹೋಮ್‌ಸ್ಟೇಗಳ ಯುಪಿಎಸ್‌ ಬಳಸಿ ಬೆಳಗಿಸುವ ದೀಪಗಳನ್ನೂ ಕಡ್ಡಾಯವಾಗಿ ಆರಿಸುತ್ತಾರೆ. ಗದ್ದೆಗಳಲ್ಲಿ , ಹೋಮ್‌ಸ್ಟೇಗಳ ತಾರಸಿಯ ಮೇಲೆ, ರಸ್ತೆಗಳಲ್ಲಿ ನಕ್ಷತ್ರ ವೀಕ್ಷಕರು ತಮ್ಮ ದುಬಾರಿಯಾದ ಕ್ಯಾಮೆರಾ, ಮೊಬೈಲ್‌, ಚಿಕ್ಕ ಟೆಲಿಸ್ಕೋಪ್ ಹಾಗೂ ಟ್ರೈಪಾಡ್‌ಗಳೊಂದಿಗೆ ಬಿಡಾರ ಹೂಡುತ್ತಾರೆ. ಊರಿಗೆ ಊರೇ ರಾತ್ರಿಯ ಹೊತ್ತು ಕತ್ತಲೆಯ ಕಾಡಾದರೆ, ಇಲ್ಲಿನ ಆಕಾಶ ಮಾತ್ರ ನಕ್ಷತ್ರಗಳ ಬೆಳಕಿನ ಸಾಮ್ರಾಜ್ಯವಾಗುತ್ತದೆ.

  • ಗುರುರಾಜ ಶಾಸ್ತ್ರಿ

ಏಳು ಸುತ್ತಿನ ಕೋಟೆಯಂತೆ ನೂರಾರು ಎತ್ತರದ ಪರ್ವತಗಳ ಮಧ್ಯದಲ್ಲಿ ಸಮುದ್ರ ಮಟ್ಟಕ್ಕಿಂತ 14,000 ಅಡಿ ಎತ್ತರದಲ್ಲಿ ಸುರಕ್ಷಿತವಾಗಿರುವ ಹಸಿರು ಕಣಿವೆಯೇ ಹಾನ್ಲೇ. ಲೇಹ್‌ ವಿಮಾನ ನಿಲ್ದಾಣದಿಂದ ಸುಮಾರು 300 ಕಿಲೋಮೀಟರ್‌ ದೂರದಲ್ಲಿ ಭಾರತ ಚೀನಾ ಗಡಿಯ ಹತ್ತಿರ ಇದೆ. ಈ ಪ್ರದೇಶ ಸಾಮಾನ್ಯ ಪ್ರವಾಸಿಗರಿಗೆ ಹೆಚ್ಚೇನು ಪರಿಚಯವಿರುವುದಿಲ್ಲ. ಹಾನ್ಲೇ ಎಂಬುದು ಇಲ್ಲಿನ ಕಣಿವೆಯಲ್ಲಿ ಹರಿಯುವ ನದಿಯ ಹೆಸರೂ ಆಗಿದೆ. ಊರಿಗೆ ಪ್ರವಾಸಿಗರನ್ನು ಸ್ವಾಗತ ಕೋರುವಂತೆ ಆರಂಭದಲ್ಲೇ ಚಿಕ್ಕದಾದ ಗುಡ್ಡದ ಮೇಲೆ ಬುದ್ಧನ ದೇವಾಲಯ (Tibetian monestry) ಇದೆ. ಸೌಂದರ್ಯ ಚಿಲುಮೆಯಂತಿರುವ ಪ್ರಕೃತಿಯನ್ನು ಹೊಂದಿದ್ದರೂ ಈ ಹಾನ್ಲೇ ವಿಶೇಷವಾಗಿರುವುದು ಬೇರೆ ವಿಷಯಗಳಿಗೆ. ಪಕ್ಷಿ ಹಾಗೂ ವನ್ಯ ಜೀವಿ ವೀಕ್ಷಕರು , ಮೋಜಿಗೆ ಮೋಟಾರ್‌ ಬೈಕ್‌ ಓಡಿಸುವವರು ಹಾಗೂ ನಕ್ಷತ್ರ ಅಥವಾ ಬಾಹ್ಯಾಕಾಶ ವೀಕ್ಷಕರು, ಇವರಿಗಷ್ಟೆ ಹೆಚ್ಚು ಪರಚಯವಿರುತ್ತದೆ ಈ ಹಾನ್ಲೇ.

ಬೈಕ್‌ ಸವಾರರ ಮೋಜು

ಲೇಹ್‌ ಇಂದ ಹಾನ್ಲೇಗೆ ನೀವು ಸಂಚರಿಸುತ್ತಿದ್ದಾಗ ಪ್ರತಿ 30 ನಿಮಿಷದಲ್ಲಿ ಒಬ್ಬ ಮೋಟಾರ್‌ ಬೈಕ್‌ ಓಡಿಸುವವನು ದಾರಿಯಲ್ಲಿ ಸಿಗಲಿಲ್ಲ ಅಂದರೆ ನೀವು ದಾರಿ ತಪ್ಪಿದ್ದೀರಿ ಎಂದರ್ಥ. ದೊಡ್ಡ ದೊಡ್ಡ ಪರ್ವತಗಳ ಪಕ್ಕದ ರಸ್ತೆಗಳಲ್ಲಿ ಬೈಕ್‌ ಓಡಿಸುವುದೇ ಒಂದು ಮಜಾ ಬಿಡಿ. ಆದರೆ ಕೆಲವೊಂದು ಕಡೆ ಅಷ್ಟೇ ಅಪಾಯದ ಹಾದಿಗಳು ಇವೆ. ಮೋಟಾರ್‌ ಗಾಡಿಗಳನ್ನು ಓಡಿಸಬಲ್ಲ ಜಗತ್ತಿನ ಅತಿ ಎತ್ತರದ ರಸ್ತೆ ಅಂದರೆ ಸಮುದ್ರ ಮಟ್ಟಕ್ಕಿಂತ ಸುಮಾರು 19,000 ಅಡಿ ಎತ್ತರದಲ್ಲಿರುವ ಉಮಿಂಗ್ ಲಾ. ಅದು ಈ ಹಾನ್ಲೇ ಹತ್ತಿರವೇ ಇದೆ. ಈ ಉಮಿಂಗ್‌ ಲಾ ಮೋಟಾರ್‌ ಬೈಕಿನಲ್ಲಿ ಹೋಗಿ ಅಲ್ಲಿ ಒಂದು ಫೊಟೋ ಅಥವಾ ಸೆಲ್ಫಿ ತೆಗೆದುಕೊಂಡು ಗೆಳೆಯರೊಂದಿಗೆ ಹಂಚಿಕೊಂಡರೆ ಜೀವನದಲ್ಲಿ ಏನೋ ಸಾಧನೆ ಮಾಡಿದಂತೆ. ಈ ಉಮಿಂಗ್‌ ಲಾ ಲಡಾಕ್‌ಗೆ ಹೋಗುವ ಪ್ರತಿಯೊಬ್ಬ ಬೈಕ್‌ ಸವಾರನ ಗುರಿಯಾಗಿರುತ್ತದೆ. ಅಂಥ ಬೈಕ್‌ ಸವಾರರು ಹಾನ್ಲೇಗೆ ಸಂಜೆ ಬಂದು ರಾತ್ರಿ ಹೋಮ್‌ಸ್ಟೇಯಲ್ಲಿ ವಿಶ್ರಾಂತಿ ಪಡೆದು ಮಾರನೇ ದಿನ ಬೆಳಗಿನ ಜಾವ ಉಮಿಂಗ್‌ ಲಾ ಕಡೆಗೆ ಬೈಕ್‌ ಸವಾರಿ ಆರಂಭಿಸುತ್ತಾರೆ. ಬೆಳಗ್ಗೆ 5 ಗಂಟೆಗೆ ಹಾನ್ಲೇ ಇಂದ ಹೊರಟರೆ, ಹವಾಮಾನ ಸರಿಯಾಗಿದ್ದರೆ ಅವರು ಅಂದು ಸಂಜೆ 5ಗಂಟೆಯ ಒಳಗೆ ಮತ್ತೆ ಹಾನ್ಲೇಗೆ ವಾಪಸ್‌ ಬರಬಹುದು.

leh

ಪಕ್ಷಿ ಹಾಗೂ ವನ್ಯಜೀವಿ ವೀಕ್ಷಕರು

ಪಲಾಸ್‌ ಬೆಕ್ಕು ಹಾಗೂ ಜಿಂಕೆಯಂತೆ ಕಾಣುವ ಟಿಬೇಟಿಯನ್‌ ಗಿಜೆಲ್‌ ಇಲ್ಲಿಯ ಮುಖ್ಯವಾದ ಆಕ‌ರ್ಷಣೆ. ಹಾಗಂತ ಸುಲಭವಾಗಿ ಇವು ವೀಕ್ಷಣೆಗೆ ಸಿಗುತ್ತವೆ ಅಂದುಕೊಳ್ಳಬೇಡಿ. ಇಲ್ಲಿನ ಸ್ಥಳೀಯ ಮಾರ್ಗದರ್ಶಿಗಳ (ಗೈಡ್) ಸಹಾಯ ಪಡೆದು ವಾರಗಟ್ಟಲೆ ಹುಡುಕಿದರೂ ಸಿಗುವುದಿಲ್ಲ. ಇನ್ನು ಕುದುರೆಯಷ್ಟು ಎತ್ತರದ ಕಾಡು ಕತ್ತೆಗಳಂತೂ ನೋಡಿದಲ್ಲೆಲ್ಲ ಸಿಗುತ್ತವೆ. ಪಕ್ಷಿ ಪ್ರಿಯರಿಗೆ ಕಪ್ಪು ಕುತ್ತಿಗೆಯ ಕೊಕ್ಕರೆ (Black Necked Crane) ಹೆಚ್ಚಾಗಿ ಕಂಡರೆ, ಅಷ್ಟೇನೂ ಬಣ್ಣವಿಲ್ಲದಿದರೂ ಪ್ರಪಂಚದಾದ್ಯಂತ ಕಷ್ಟ ಪಟ್ಟು ಹುಡುಕಬೇಕಾದ ಕೆಲವೊಂದು ಪಕ್ಷಿಗಳು ಇಲ್ಲಿ ಸುಲಭವಾಗಿ ಕಾಣಸಿಗುತ್ತವೆ.

ನಕ್ಷತ್ರ ವೀಕ್ಷಣೆ

ಹಾನ್ಲೇಗೆ ಬರುವ ಪ್ರವಾಸಿಗರಲ್ಲಿ ಶೇಕಡ ಮೂವತ್ತರಷ್ಟು ಜನ ಬೈಕ್‌ ಸವಾರಿಗೆ ಬಂದರೆ, ಶೇಕಡ ಹತ್ತರಷ್ಟು ಜನ ಪಕ್ಷಿ ವೀಕ್ಷಣೆಗೆ ಬರುತ್ತಾರೆ. ಉಳಿದ ಶೇಕಡ 60ರಷ್ಟು ಪ್ರವಾಸಿಗರು ಇಲ್ಲಿಗೆ ಬರುವುದು ನಕ್ಷತ್ರ ವೀಕ್ಷಣೆಗೆ. ಸುತ್ತಲೂ ಎತ್ತರದ ಪರ್ವತಗಳಿಂದ ಕೂಡಿರುವುದರಿಂದ, ಹೊರಗಿನ ಯಾವುದೇ ಕೃತಕ ಬೆಳಕು ಹಾನ್ಲೇಗೆ ಪ್ರವೇಶಿಸುವುದಿಲ್ಲ. ಅಷ್ಟೇ ಅಲ್ಲದೆ ವರ್ಷಕ್ಕೆ ಸುಮಾರು 300 ದಿನ ತಿಳಿಯಾದ ನೀಲಿ ಆಕಾಶ ಇಲ್ಲಿ ಸಿಗುತ್ತದೆ. ಇವೆರಡೂ ನಕ್ಷತ್ರ ವೀಕ್ಷಕರಿಗೆ ಸುಗ್ಗಿ ಇದ್ದಂತೆ. ರಾತ್ರಿಯಾದರೆ ಸಾಕು, ಊರಿನ ವಿದ್ಯುತ್‌ ಸಂಪರ್ಕ ಕಡಿಯಲಾಗುತ್ತದೆ, ಎಲ್ಲ ಮನೆ ಮತ್ತು ಹೋಮ್‌ಸ್ಟೇಗಳ ಯುಪಿಎಸ್‌ ಬಳಸಿ ಬೆಳಗಿಸುವ ದೀಪಗಳನ್ನೂ ಕಡ್ಡಾಯವಾಗಿ ಆರಿಸುತ್ತಾರೆ. ಗದ್ದೆಗಳಲ್ಲಿ , ಹೋಮ್‌ಸ್ಟೇಗಳ ತಾರಸಿಯ ಮೇಲೆ, ರಸ್ತೆಗಳಲ್ಲಿ ನಕ್ಷತ್ರ ವೀಕ್ಷಕರು ತಮ್ಮ ದುಬಾರಿ ಕ್ಯಾಮೆರಾ, ಮೊಬೈಲ್‌, ಚಿಕ್ಕ ಟೆಲಿಸ್ಕೋಪ್ ಹಾಗೂ ಟ್ರೈಪಾಡ್‌ಗಳೊಂದಿಗೆ ಬಿಡಾರ ಹೂಡುತ್ತಾರೆ. ಊರಿಗೆ ಊರೇ ರಾತ್ರಿಯ ಹೊತ್ತು ಕತ್ತಲೆಯ ಕಾಡಾದರೆ, ಇಲ್ಲಿನ ಆಕಾಶ ಮಾತ್ರ ನಕ್ಷತ್ರಗಳ ಬೆಳಕಿನ ಸಾಮ್ರಾಜ್ಯವಾಗುತ್ತದೆ. ಸುಮಾರು ಹತ್ತರಿಂದ ಹದಿನೈದು ನಿಮಿಷ ನಮ್ಮ ಕ್ಯಾಮೆರಾ ತರೆದಿಟ್ಟರೆ (long exposure) ನಕ್ಷತ್ರ ಲೋಕದ ಜೊತೆಗೆ ಕ್ಷೀರಪಥ ಅಂದರೆ milky way ಚಿತ್ರ ಕೂಡ ಸೆರೆಹಿಡಿಯಬಹುದು.

ಸುತ್ತಲೂ ಎತ್ತರದ ಪರ್ವತಗಳಿರುವ ಈ ಕಣಿವೆಯಲ್ಲೊಂದು ಪುಟ್ಟ ಬೆಟ್ಟ, ಆ ಬೆಟ್ಟದ ಮೇಲೆ ಭಾರತ ಸರಕಾರದ ಖಗೋಳಶಾಸ್ತ್ರದ ವಿಭಾಗವು ವೀಕ್ಷಣಾಲಯವನ್ನು ಸ್ಥಾಪಿಸಿದೆ. ಇದು ಜಗತ್ತಿನಲ್ಲೇ ಹತ್ತನೇ ಎತ್ತರದ ವೀಕ್ಷಣಾಲಯವಾಗಿದೆ ಮತ್ತು ʼಹಿಮಾಲಯದ ಚಂದ್ರʼ ಎಂದು ಕರೆಯುವ ಇಲ್ಲಿನ ಟೆಲಿಸ್ಕೋಪ್‌ ಜಗತ್ತಿನ ಎರಡನೇ ದೊಡ್ಡ ಟೆಲಿಸ್ಕೋಪ್‌ ಆಗಿದೆ. ಹಾಗಾದರೆ ಇಲ್ಲಿಂದಲೇ ನಕ್ಷತ್ರವನ್ನೆಲ್ಲ ನೋಡಬಹುದಿತ್ತಲ್ಲವೇ , ರಸ್ತೆಯಲ್ಲಿ ಯಾಕೆ ಕೂಡುತ್ತಾರೆ ಪ್ರವಾಸಿಗರು ಎಂದು ಯೋಚಿಸುತ್ತಿದ್ದೀರಾ. ಆದರೆ ಈ ವೀಕ್ಷಣಾಲಯದ ಪೂರ್ತಿ ನಿಯಂತ್ರಣ ಬೆಂಗಳೂರಿನಿಂದ ಆಗುತ್ತಿದ್ದು, ವೀಕ್ಷಣಾಲಯದಲ್ಲಿ ನಾವು ಟೆಲಿಸ್ಕೋಪ್‌ ನೋಡಬಹುದೇ ಹೊರತು ಅದರ ಮೂಲಕ ಆಕಾಶ ಅಥವಾ ನಕ್ಷತ್ರ ಮಂಡಲವನ್ನು ವೀಕ್ಷಿಸಲು ಅವಕಾಶವಿಲ್ಲ.

ಇತ್ತೀಚಿನ ದಿನಗಳಲ್ಲಿ ಇಲ್ಲಿಗೆ ಬರುವ ಪ್ರವಾಸಿಗರ ಸಂಖ್ಯೆ ಹೆಚ್ಚಾಗುತ್ತಿದ್ದು, ಅದಕ್ಕೆ ಅನುಗುಣವಾಗಿ ಇಲ್ಲಿ ಹೆಚ್ಚು ಹೆಚ್ಚು ಹೋಮ್‌ಸ್ಟೇಗಳು ಆರಂಭವಾಗುತ್ತಿವೆ. ಪ್ರವಾಸೋದ್ಯಮದ ಹೆಸರಿನಲ್ಲಿ ಊರಿನ ಮೂಲ ವಿಶೇಷ ಹಾಗೂ ವಿಸ್ಮಯಗಳು ಕಾಣೆಯಾಗಬಹುದೇ ಎಂಬ ಆತಂಕ ನನ್ನ ಮನಸ್ಸಿನಲ್ಲಿ ಮೂಡಿದ್ದಂತೂ ಸತ್ಯ.

ಪ್ರತಿ ವರ್ಷ ಜೂನ್‌ ಜುಲೈ ತಿಂಗಳುಗಳು ಹಾನ್ಲೇ ಪ್ರವಾಸ ಮಾಡಲು ಸೂಕ್ತ ಸಮಯ. ಲೇಹ್‌ನಿಂದಲೇ ಟ್ಯಾಕ್ಸಿ ವ್ಯವಸ್ಥೆ ಮಾಡಿಕೊಳ್ಳಬೇಕಾಗುತ್ತದೆ. ಇದೇ 2025ರ ಜುಲೈ ತಿಂಗಳಲ್ಲಿ ನಾನು ನನ್ನ ಪಕ್ಷಿ ವೀಕ್ಷಕ ಗೆಳೆಯರೊಂದಿಗೆ ಲಡಾಖ್‌ ಪ್ರವಾಸಕ್ಕೆ ಹೋಗಿದ್ದರಿಂದ , ಹಾನ್ಲೇ ನೋಡುವ ಅವಕಾಶ ನನಗೆ ಸಿಕ್ಕಿತ್ತು.

ನನ್ನ ಪ್ರವಾಸಗಳಲ್ಲಿ ಪಕ್ಷಿ ವೀಕ್ಷಣೆ ಒಂದು ನೆಪವಷ್ಟೆ. ಸಾಮಾನ್ಯ ಪ್ರವಾಸಿಗರು ಭೇಟಿ ಕೊಡದೆ ಇರುವ ಕೆಲವು ವಿಶೇಷ ಊರು ಹಾಗೂ ಸ್ಥಳಗಳಿಗೆ ಈ ಪಕ್ಷಿವೀಕ್ಷಕರು ಮಾತ್ರ ಹೋಗುವುದರಿಂದ ಅಂತ ಸ್ಥಳಗಳನ್ನೇ ನೋಡುವ ಹಾಗೂ ಆ ಪರಿಸರವನ್ನು ಕಣ್ಮನ ತುಂಬಿಕೊಳ್ಳುವ ಹಾಗೂ ಅನುಭವಿಸುವ ಆಸಕ್ತಿ ನನ್ನದು. ಹೀಗಾಗಿ ಛಾಯಾಗ್ರಹಣದಲ್ಲಿ ನಾನು ಸ್ವಲ್ಪ ಹಿಂದೆಯೇ.

ಪಲಾಸ್‌ ಬೆಕ್ಕು ಬಿಟ್ಟು ಹಾನ್ಲೇಯಲ್ಲಿ ಸಿಗುವ ಉಳಿದೆಲ್ಲ ಪಕ್ಷಿ ಹಾಗೂ ವನ್ಯಜೀವಿಗಳನ್ನು ವೀಕ್ಷಿಸಲು ನನಗೆ ಸಾಧ್ಯವಾಯಿತು. ಅಲ್ಲಿ ತಂಗಿದ್ದ ಮೂರು ದಿನವೂ ಮೋಡ ಕವಿದಿದ್ದು ನಕತ್ರ ವೀಕ್ಷಣೆ ನನಗೆ ಮರೀಚಿಕೆಯಾಯಿತು. ವರ್ಷದಲ್ಲಿ ಮುನ್ನೂರು ದಿನಗಳು ತಿಳಿಯಾದ ನೀಲಿ ಆಕಾಶವಿರುವ ಈ ಹಾನ್ಲೇಯಿಂದ ನಕ್ಷತ್ರ ವೀಕ್ಷಣೆ ಮಾಡುವ ಅದೃಷ್ಟ ನಮ್ಮ ಗುಂಪಿಗೆ ನಾವು ಭೇಟಿ ಮಾಡಿದ ಸಮಯದಲ್ಲಿ ಸಿಗಲಿಲ್ಲವಷ್ಟೆ. ಪ್ರವಾಸೋದ್ಯಮವೇ ಮುಖ್ಯ ಆದಾಯವಾಗಿರುವ ಈ ಹಾನ್ಲೇಯ ಹೋಮಸ್ಟೇಗಳಲ್ಲಿನ ಆತಿಥ್ಯ ಹಾಗೂ ನಿರ್ವಹಣೆ ಖಂಡಿತವಾಗಿಯೂ ಶ್ಲಾಘನೀಯ. ಮುಂದಿನ ದಿನಗಳಲ್ಲಿ ಲಡಾಕ್‌ ಪ್ರವಾಸ ಕೈಗೊಂಡರೆ ಹಾನ್ಲೇ ಊರನ್ನು ಪಟ್ಟಿಗೆ ಸೇರಿಸಲು ಮರೆಯಬೇಡಿ.

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ಕಲ್ಲಿನಲ್ಲಿ ಅರಳಿದ ಕಲಾಕುಸುಮ - ಪುಷ್ಕರಣಿ

Read Previous

ಕಲ್ಲಿನಲ್ಲಿ ಅರಳಿದ ಕಲಾಕುಸುಮ - ಪುಷ್ಕರಣಿ

ಕೃಷ್ಣ-ಸುಧಾಮರ ಸ್ನೇಹದ ಗುರುತು ಬೇಟ್ ದ್ವಾರಕಾ

Read Next

ಕೃಷ್ಣ-ಸುಧಾಮರ ಸ್ನೇಹದ ಗುರುತು ಬೇಟ್ ದ್ವಾರಕಾ