ಉಗೀರಿ ಮಕ್ಕೆ!!!
ನಾಯಿಗಳು ಕಂಬ ಕಂಡಲ್ಲಿ ಕಾಲೆತ್ತುವಂತೆ, ಇವರು ಗೋಡೆಯ ಮೂಲೆ ಕಂಡಲ್ಲಿ ತುಪುಕ್ಕನ್ನುತ್ತಾರೆ. ಬಾಯಲ್ಲಿ ಗುಟ್ಕಾ ಅಗಿಯುವಾಗ ಬಹುಶಃ ಕಣ್ಣುಗಳು ಕುರುಡಾಗುತ್ತವೇನೋ, ಇಲ್ಲಿ ಉಗುಳಬಾರದು ಅಂತ ಬರೆದಿರುವ ಕಡೆಗೇ ಹೆಚ್ಚು ಗುಟ್ಕಾ ಆರ್ಟ್‌ಗಳು ಕಾಣಸಿಗುತ್ತವೆ. ‘ಈ ಜಾಗ ಎಷ್ಟು ಸುಂದರವಾಗಿದೆ! ನಾನು ಇಲ್ಲೊಂದು ನೆನಪು ಬಿಡಬೇಕು ಎಂಬ ತುಡಿತ ಈ ಉಗಿಬಂಡಿಗಳಿಗೆ ಹೆಚ್ಚಾಗುತ್ತದೆ ಅನಿಸುತ್ತೆ.
ಮೊನ್ನೆ ಗುಟಕಾ ನಿಷೇಧ ಹೇರಿದಾಗ ಪ್ರವಾಸಿ ತಾಣಗಳು ನಿಟ್ಟುಸಿರು ಬಿಟ್ಟು ಮುಗುಳ್ನಕ್ಕಿದ್ದವು. ಇಂದು ನಿಷೇಧ ವಾಪಸ್ ಎಂಬ ಸುದ್ದಿ ಕೇಳಿ ಮತ್ತೆ ಕವಳ ಗಿರಾಕಿಗಳ ಭಯದಿಂದ ಕಳವಳಕ್ಕೊಳಗಾಗಿವೆ. ದೇವಾಲಯ, ಶಿಲ್ಪಕಲೆಗಳ ತಾಣ, ಪಾರ್ಕು ಏನೇ ಇರಲಿ, ತಮ್ಮದೊಂದು ಚಿತ್ರ ಬಿಡಿಸಿ ಬರುವುದು ಈ ಗುಟ್ಕಾ ಜಗಿಯುವವರ ಚಟ. ಪಾಪ ಪ್ರವಾಸಿ ತಾಣಗಳ ಗೋಡೆಗಳಿಗೆ ಪೇಂಟ್ ಮಾಡೋಕೆ ಹಣವಿಲ್ಲ ಅಂದುಕೊಂಡಿದ್ದಾರೆ ಇವರು. ಅದಕ್ಕೇ ಬಾಯಿಂದ ಕೆಂಬಣ್ಣ ಸ್ಪ್ರೇ ಮಾಡಿ ಸಹಾಯ ಮಾಡುತ್ತಿದ್ದಾರೆ.ಅದರಲ್ಲೂ ಇವರ ಪಿಚಕಾರಿ ಆರ್ಟ್‌ನ ಡಿಸೈನ್‌ಗಳನ್ನು ನೋಡಿದರೆ ಇವರ ಕಲೆಗಾರಿಕೆ ಬಗ್ಗೆ ಅಚ್ಚರಿ ಆಗದಿರದು.
ನಾಯಿಗಳು ಕಂಬ ಕಂಡಲ್ಲಿ ಕಾಲೆತ್ತುವಂತೆ, ಇವರು ಗೋಡೆಯ ಮೂಲೆ ಕಂಡಲ್ಲಿ ತುಪುಕ್ಕನ್ನುತ್ತಾರೆ. ಬಾಯಲ್ಲಿ ಗುಟ್ಕಾ ಅಗಿಯುವಾಗ ಬಹುಶಃ ಕಣ್ಣುಗಳು ಕುರುಡಾಗುತ್ತವೇನೋ, ಇಲ್ಲಿ ಉಗುಳಬಾರದು ಅಂತ ಬರೆದಿರುವ ಕಡೆಗೇ ಹೆಚ್ಚು ಗುಟ್ಕಾ ಆರ್ಟ್‌ಗಳು ಕಾಣಸಿಗುತ್ತವೆ. ‘ಈ ಜಾಗ ಎಷ್ಟು ಸುಂದರವಾಗಿದೆ! ನಾನು ಇಲ್ಲೊಂದು ನೆನಪು ಬಿಡಬೇಕು ಎಂಬ ತುಡಿತ ಈ ಉಗಿಬಂಡಿಗಳಿಗೆ ಹೆಚ್ಚಾಗುತ್ತದೆ ಅನಿಸುತ್ತೆ. ಲವ್ವರ್‌ಗಳ ಹೆಸರು ಬರೆಯೋವ್ರನ್ನಾದ್ರೂ ಒಂದು ಮಟ್ಟಿಗೆ ಸಹಿಸಬಹುದೇನೋ, ಗುಟ್ಕಾದಲ್ಲಿ ಸಹಿ ಹಾಕುವ ಸುವ್ವರ್‌ಗಳನ್ನು ಮಾತ್ರ ಸಹೀ ಅನ್ನಲಾಗದು.
ಕೆಂಪಾದವೋ ಎಲ್ಲ ಕೆಂಪಾದವೋ ಹಾಡಿನ ರಾಯಭಾರಿಗಳಾಗಿರುವ ಇವರು, ಚಾಲೆಂಜ್ ಕಟ್ಟಿದರೆ, ಜೋಗ ಜಲಪಾತದ ಬೆಳ್ನೊರೆ ನೀರನ್ನೂ ಕೆಂಪಾಗಿಸಬಲ್ಲರು. ಕೋಟಿ ವೆಚ್ಚದ ಪ್ರವಾಸಿ ತಾಣವನ್ನು ಐದೇ ರುಪಾಯಿಯ ಗುಟ್ಕಾದಲ್ಲಿ ಗಬ್ಬೆಬ್ಬಿಸಬಲ್ಲ ತಾಕತ್ತಿರೋದು ಈ ಕೇಸ್ರಿ ಜುಬಾನ್‌ಗಳಿಗೆ ಮಾತ್ರ. ಇವರು ಮನೆಯಲ್ಲಿ ಗೋಡೆಗೆ ಉಗುಳುವುದಿಲ್ಲ. ಕಚೇರಿಯಲ್ಲಿ ಉಗುಳುವುದಿಲ್ಲ. ಕಾರಿನೊಳಗೆ ಉಗುಳುವುದಿಲ್ಲ. ಆದರೆ ಸಾರ್ವಜನಿಕ ಸ್ಥಳಕ್ಕೆ ಬಂದ ತಕ್ಷಣ ಅವರ ಸಾಮಾಜಿಕ ಜವಾಬ್ದಾರಿ ರಜೆ ತೆಗೆದುಕೊಳ್ಳುತ್ತದೆ! ಕಂಡಕಂಡಲ್ಲಿ ಉಗಿಯೋ ಈ ಸ್ಪಿಟ್ ಪರ್ಸನಾಲಿಟಿಗಳಿಗೆ ನಾವು ನೀವು ಉಗಿದರೆ ಸಾಕಾಗುವುದಿಲ್ಲ. ಹುಡುಕಿ ಹಿಡಿದು ದಂಡ ಹಾಕುವಂತಾಗಬೇಕು. ಬಾಯಿಗೆ ಪ್ಲಾಸ್ಟರ್ ಅಂಟಿಸಿ ಶಿಕ್ಷಿಸಬೇಕು. ಆಗಲೇ ದಾರಿಗೆ ಬರೋದು.