Monday, November 16, 2026
Monday, November 16, 2026

ಆಫ್‌ ರೋಡಿಂಗ್‌ ಅದ್ಭುತ

ದುಬೈಗೆ ಹೋಗಬೇಕೆಂಬುದು ಆಸೆಯಿಲ್ಲದವರಿಲ್ಲ. ಇತ್ತೀಚೆಗಷ್ಟೇ ತಮ್ಮ ಹಾಗೂ ತಂಗಿಯೊಂದಿಗೆ ದುಬೈ ಪ್ರವಾಸ ಮಾಡಿದ್ದೆ. ಆದರೆ ಅಲ್ಲಿಗೆ ಹೋಗಬೇಕಾದರೆ ಆದ ಫಜೀತಿಯನ್ನು ಜೀವನದಲ್ಲಿ ಮರೆಯುವುದು ಅಸಾಧ್ಯ. ನನಗೆ ಹೊಸತೆನಿಸಿದರೂ ವಿಮಾನದಲ್ಲಿ ಪ್ರಯಾಣ ಮಾಡುವವರಿಗಿದು ಸಾಮಾನ್ಯ ಸಮಸ್ಯೆ. ಗಂಟೆಗಳ ಕಾಲ ಫ್ಲೈಟ್‌ ತಡವಾಗಿ ಬಂದು ಸುಸ್ತಾಗಿಬಿಟ್ಟಿದ್ದೆ. ಆದರೆ ದುಬೈಗೆ ಹೋದ ನಂತರ ಅಲ್ಲಿ ಡೆಸರ್ಟ್‌ ಸಫಾರಿ, ಬುರ್ಜ್‌ ಕಲೀಫಾ ಸೇರಿದಂತೆ ಮಸ್ಟ್‌ ವಿಸಿಟ್‌ ಎಂಬ ತಾಣಗಳನ್ನು ಕಣ್ತುಂಬಿಕೊಂಡು ಬಂದಿದ್ದೇನೆ ಎನ್ನುತ್ತಾರೆ ನಟ ಮೌನಾ ಗುಡ್ಡೆಮನೆ.

ರಾಮಾಚಾರಿ ಧಾರಾವಾಹಿಯಲ್ಲಿ ʻಚಾರುಲತಾʼ ಪಾತ್ರಧಾರಿಯಾಗಿ ಕನ್ನಡ ಸೀರಿಯಲ್‌ ಇಂಡಸ್ಟ್ರಿಗೆ ಪದಾರ್ಪಣೆ ಮಾಡಿದ್ದ ನಟಿ ಮೌನಾ ಗುಡ್ಡೆಮನೆ, ಸದ್ಯ ಜೀ಼ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ʻಕೃಷ್ಣ ರುಕ್ಕುʼ ಧಾರಾವಾಹಿಯಲ್ಲಿ ರುಕ್ಕು ಆಗಿ ಎಲ್ಲರ ಮನೆ ಗೆದ್ದಿದ್ದಾರೆ. ಕೊಡಗಿನಲ್ಲಿ ಹುಟ್ಟಿದರೂ ಮಂಗಳೂರಿನಲ್ಲಿ ಜೀವನ ಕಟ್ಟಿಕೊಂಡಿರುವ ಮೌನಾ, ಚಿತ್ರೀಕರಣದ ನಡುವೆ ಸಿಗುವ ಸಮಯದಲ್ಲಿ ಪ್ರವಾಸದ ಹೊರಟುಬಿಡುತ್ತೇನೆ. ಪ್ರವಾಸದಿಂದ ಪ್ರಯಾಸ ದೂರವಾಗುತ್ತದೆ ಎನ್ನುತ್ತಾರೆ. ಮೌನಾ ಗುಡ್ಡೆಮನೆಯವರ ಪ್ರವಾಸಿ ಜೀವನ ಹೇಗಿದೆ ಗೊತ್ತಾ?

ಮಂಗಳೂರು..ಮರೆಯಲಾಗದ ಪ್ರೀತಿ..

ನಾನು ಹುಟ್ಟಿ ಬೆಳೆದಿದ್ದೆಲ್ಲ ಕೊಡಗಿನಲ್ಲಿ. ಅಪ್ಪ ಸೋಮವಾರಪೇಟ ಮೂಲದವರು. ಆದರೆ ಅಪ್ಪ ಆರ್ಮಿಯಲ್ಲಿ ಸೇವೆ ಸಲ್ಲಿಸುತ್ತಿದ್ದುದರಿಂದ ಚಿಕ್ಕಂದಿನಿಂದಲೂ ಪ್ರವಾಸ ಜೀವನವನ್ನು ಕಂಡಿದ್ದೇನೆ. ಹೈದರಾಬಾದ್, ಪುಣೆ, ಜಮ್ಮು ಕಾಶ್ಮೀರ ಹೀಗೆ ಅನೇಕ ಕಡೆಗಳಿಗೆ ಕುಟುಂಬದ ಜತೆಗೆ ಪ್ರವಾಸ ಮಾಡಿದ್ದೇನೆ. ಆದರೆ ನಾನು ಆರನೆಯ ತರಗತಿಯವಳಾದಾಗ ಮಂಗಳೂರಿಗೆ ಬಂದುಬಿಟ್ಟಿದ್ದೆ. ಅಲ್ಲಿನ ಪ್ರವಾಸಿ ತಾಣಗಳೆಂದರೆ ನನಗೆ ಬಹಳ ಇಷ್ಟ. ಈಗಲೇ ಬಿಡುವಾದಾಗಲೆಲ್ಲಾ ಮಂಗಳೂರು ಪ್ರಯಾಣ ಖಾಯಂ ಎಂಬಂತಾಗಿದೆ. ಅಲ್ಲಿನ ದೇವಾಲಯಗಳು, ಕಡಲ ತೀರಗಳಲ್ಲಿ ಕಾಲ ಕಳೆಯುವ ಖುಷಿಯೇ ಬೇರೆ.

ಇದನ್ನೂ ಓದಿ: ಕೂರ್ಗ್‌ನವಳಾದರೂ ನೀಲಕುರಿಂಜಿ ನೋಡಲಾಗಲಿಲ್ಲ..

ರಾಮಾಚಾರಿಗಾಗಿ ತಮಿಳುನಾಡು ಪ್ರವಾಸ

ಕಾಲೇಜು ದಿನಗಳಲ್ಲಿದ್ದಾಗಲೇ ನನಗೆ ಮಾಡೆಲಿಂಗ್ ಬಗ್ಗೆ ಹೆಚ್ಚಿನ ಆಸಕ್ತಿಯಿತ್ತು. ಆ ಸಂದರ್ಭದಲ್ಲಿ ಕಲರ್ಸ್‌ ವಾಹಿನಿಯಲ್ಲಿ ರಾಮಾಚಾರಿ ಧಾರಾವಾಹಿಯಲ್ಲಿ ನಾಯಕಿ ಪಾತ್ರಕ್ಕೆ ಹುಡುಕಾಟ ನಡೆಯುತ್ತಿರುವುದು ತಿಳಿದು, ಆಡಿಷನ್‌ ಕೊಟ್ಟು ಆಯ್ಕೆಯಾಗಿದ್ದೆ. ರಾಮಾಚಾರಿ ತಂಡದೊಂದಿಗೆ ಶೂಟಿಂಗ್‌ ಅನುಭವ ಜೀವನದಲ್ಲಿ ಮರೆಯಲು ಸಾಧ್ಯವಿಲ್ಲ. ಇಂಟ್ರಡಕ್ಷನ್‌ ಹಾಡನ್ನು ಸುಮಾರು 15 ದಿನಗಳ ಕಾಲ ತಮಿಳುನಾಡಿನಲ್ಲಿ ಚಿತ್ರೀಕರಣ ಮಾಡಲಾಗಿತ್ತು. ಉಳಿದಂತೆ ಚಿಕ್ಕಮಗಳೂರು, ಹಾಸನ, ಮದ್ದೂರು ಮತ್ತು ಬೆಂಗಳೂರು ಭಾಗದಲ್ಲಿ ಚಿತ್ರೀಕರಣ ಮಾಡಲಾಗಿದೆ.

Untitled Design (11)

ಸ್ವಂತ ಊರಿನಲ್ಲೇ ಮೊದಲ ಸಿನಿಮಾ ಶೂಟಿಂಗ್!

ಶ್ರೇಯಸ್ ರಾಜ್ ಶೆಟ್ಟಿ ನಿರ್ದೇಶನದ ʻಕುಲದಲ್ಲಿ ಕೀಳ್ಯಾವುದೋʼ ನನ್ನ ಮೊದಲ ಸಿನಿಮಾ. ಈ ಚಿತ್ರದ ಚಿತ್ರೀಕರಣ ರಾಮನಗರ, ಮದ್ದೂರು ಭಾಗದಲ್ಲಿ ಮಾಡಲಾಗಿತ್ತು. ಆದರೆ ನಾನು ನಿತ್ಯವೂ ಬೆಂಗಳೂರಿಗೆ ಹೋಗಿ ಬರುತ್ತಿದ್ದೆ. ಖುಷಿಯ ವಿಚಾರವೆಂದರೆ ಈ ಚಿತ್ರದ ಹಾಡಿನ ಚಿತ್ರೀಕರಣ ನಡೆದಿರುವುದು ನನ್ನೂರು ಕೂರ್ಗ್‌ನ ಅರಣ್ಯ ಪ್ರದೇಶಗಳಲ್ಲಿ. ಕೂರ್ಗ್‌ ವಾತಾವರಣ ನನಗೆ ಹೊಸತಲ್ಲ. ಆದರೆ ಚಿತ್ರೀಕರಣದ ವೇಳೆ ಬರಿಗಾಲಿನಲ್ಲಿ ಬೆಟ್ಟವನ್ನೇರುವ ಸಾಹಸ ಸ್ವಲ್ಪ ಕಷ್ಟವೆನಿಸಿತ್ತು. ಆದರೂ ಅದು ನೆನಪಿನಲ್ಲುಳಿಯುವ ಅನುಭವಗಳನ್ನು ನೀಡಿದೆ.

ರೋಡ್‌ ಟ್ರಿಪ್‌ ಖುಷಿಯೇ ಬೇರೆ..

ಪ್ರವಾಸ, ಪ್ರವಾಸದ ಜೀವನ ನನಗೆ ಖುಷಿ ನೀಡುತ್ತದೆ. ಕೆಲಸದ ಒತ್ತಡ, ಖಾಸಗಿ ಜೀವನದ ಜಂಜಾಟಗಳಿಂದ ಮುಕ್ತಿ ಪಡೆಯಲು ಪ್ರವಾಸವೇ ಮದ್ದು. ಖುದ್ದು ಕಾರ್‌ ಡ್ರೈವ್‌ ಮಾಡುತ್ತಾ, ಪ್ರವಾಸಕ್ಕೆ ಹೋಗುವುದನ್ನೂ ರೂಢಿಸಿಕೊಂಡಿದ್ದೇನೆ. ಡ್ರೈವ್‌ ಖುಷಿಕೊಡಬೇಕು, ತೀರಾ ದೂರದ ಪ್ರಯಾಣವೂ ಇರಕೂಡದು ಎಂಬ ಯೋಜನೆಯೊಂದಿಗೆ ಪ್ರವಾಸದ ಪ್ಲ್ಯಾನ್‌ ಮಾಡಿಕೊಳ್ಳುತ್ತೇನೆ. ಆಗಾಗ ನನ್ನ ಅಣ್ಣ, ತಂಗಿ, ಅಮ್ಮ ಪ್ರವಾಸದಲ್ಲಿ ಜತೆಯಾಗುತ್ತಾರೆ.

ಅಚ್ಚರಿಯೆನಿಸುವ ಬ್ಯಾಂಕಾಕ್

ವಿದೇಶ ಪ್ರವಾಸದ ಕನಸು ಬಹಳ ವರ್ಷಗಳಿಂದಲೂ ಇತ್ತು. ಸ್ನೇಹಿತರ ಜತೆಗೆ ಮೂರು ವರ್ಷಗಳ ಹಿಂದೆ ಬ್ಯಾಂಕಾಕ್‌ಗೆ ವಿಮಾನವೇರುವ ಮೂಲಕ ಆ ಆಸೆ ಈಡೇರಿತ್ತು. ಅಲ್ಲಿನ ಪ್ರಮುಖ ಪ್ರವಾಸಿ ತಾಣಗಳಿಗೆ ಭೇಟಿ ನೀಡಿದ್ದೇನೆ. ಬ್ಯಾಂಕಾಕ್‌ ಎಷ್ಟು ಸುಂದರವಾಗಿದೆಯೋ ಅಷ್ಟೇ ಅಚ್ಚರಿ ಮೂಡಿಸುತ್ತದೆ. ಶಾಪಿಂಗ್‌ಗೆ ಹೇಳಿಮಾಡಿಸಿದ ತಾಣವದು. ದಿ ಗ್ರ್ಯಾಂಡ್ ಪ್ಯಾಲೇಸ್ ಮತ್ತು ವಾಟ್ ಫ್ರಾ ಕೇವ್, ವಾಟ್ ಫೋ, ವಾಟ್ ಅರುಣ್, ವಾಟ್ ಟ್ರೈಮಿತ್, ಸೀ ಲೈಫ್ ಬ್ಯಾಂಕಾಕ್ ಓಷನ್ ವರ್ಲ್ಡ್, ಬ್ಯಾಂಕಾಕ್‌ ಸಫಾರಿ ವರ್ಲ್ಡ್ ಇಂಥ ಅನೇಕ ಪ್ರದೇಶಗಳಿಗೆ ಭೇಟಿ ನೀಡುವ ಅವಕಾಶ ಸಿಕ್ಕಿತ್ತು.

Untitled Design (12)

ದುಬೈ ತಕರಾರು..

ದುಬೈಗೆ ಹೋಗಬೇಕೆಂಬುದು ಆಸೆಯಿಲ್ಲದವರಿಲ್ಲ. ಇತ್ತೀಚೆಗಷ್ಟೇ ತಮ್ಮ ಹಾಗೂ ತಂಗಿಯೊಂದಿಗೆ ದುಬೈ ಪ್ರವಾಸ ಮಾಡಿದ್ದೆ. ಆದರೆ ಅಲ್ಲಿಗೆ ಹೋಗಬೇಕಾದರೆ ಆದ ಫಜೀತಿಯನ್ನು ಜೀವನದಲ್ಲಿ ಮರೆಯುವುದು ಅಸಾಧ್ಯ. ನನಗೆ ಹೊಸತೆನಿಸಿದರೂ ವಿಮಾನದಲ್ಲಿ ಪ್ರಯಾಣ ಮಾಡುವವರಿಗಿದು ಸಾಮಾನ್ಯ ಸಮಸ್ಯೆ. ಗಂಟೆಗಳ ಕಾಲ ಫ್ಲೈಟ್‌ ತಡವಾಗಿ ಬಂದು ಸುಸ್ತಾಗಿಬಿಟ್ಟಿದ್ದೆ. ಆದರೆ ದುಬೈಗೆ ಹೋದ ನಂತರ ಅಲ್ಲಿ ಡೆಸರ್ಟ್‌ ಸಫಾರಿ, ಬುರ್ಜ್‌ ಕಲೀಫಾ ಸೇರಿದಂತೆ ಮಸ್ಟ್‌ ವಿಸಿಟ್‌ ಎಂಬ ತಾಣಗಳನ್ನು ಕಣ್ತುಂಬಿಕೊಂಡು ಬಂದಿದ್ದೇನೆ.

ಯುರೋಪ್‌ ಸುತ್ತುವಾಸೆ

ನನಗೂ ಒಂದಷ್ಟು ಡ್ರೀಮ್‌ ಡೆಸ್ಟಿನೇಷನ್‌ಗಳಿವೆ. ಜೀವನದಲ್ಲಿ ಒಮ್ಮೆಯಾದರೂ ಅಲ್ಲಿಗೆ ಭೇಟಿ ನೀಡಬೇಕೆಂದಿದೆ. ಅವುಗಳ ಪೈಕಿ ಯುರೋಪಿಯನ್‌ ದೇಶಗಳು ಪ್ರಮುಖವಾದವು. ಸಾಮಾಜಿಕ ಜಾಲತಾಣದಲ್ಲಿ ಅಲ್ಲಿನ ದೇಶಗಳ ರೀಲ್ಸ್‌, ವಿಡಿಯೋಗಳನ್ನು ನೋಡಿ ಲವ್ವಾಗಿಬಿಟ್ಟಿದೆ. ಅಲ್ಲಿನ ವಾತಾವಾರಣ, ಪ್ರಕೃತಿಯ ಅದ್ಭುತ ಸೃಷ್ಟಿಗಳು, ವಿಶೇಷವೆನಿಸುವ ಸಂಸ್ಕೃತಿ, ಆಚರಣೆಗಳನ್ನು ಕಣ್ಣಿನಲ್ಲಿಯೇ ಬಂಧಿಯಾಗಿಸಬೇಕೆಂದುಕೊಂಡಿದ್ದೇನೆ.

ಸಕಲೇಶಪುರದಲ್ಲಿ ಆಫ್‌ ರೋಡಿಂಗ್‌ ಅನುಭವ

ಕುಟುಂಬದ ಜತೆಗೆ ಆಗಾಗ ಸಣ್ಣ ಪುಟ್ಟ ಪ್ರವಾಸವನ್ನು ಮಾಡುತ್ತಲೇ ಇರುತ್ತೇನೆ. ಅವುಗಳ ಪೈಕಿ ನೆನಪಿನಲ್ಲುಳಿಯುವ ಪ್ರವಾಸ ಯಾವುದೆಂದರೆ, ಮಡಿಕೇರಿಯ ತಡಿಯಂಡಮೋಲ್‌ ಚಾರಣ. ಪ್ರವಾಸದಲ್ಲಿ ಸಾಹಸಕ್ಕೆ ಹೆಚ್ಚಿನ ಮಹತ್ವ ನೀಡುವುದರಿಂದ ಎಲ್ಲೇ ಹೋದರೂ ಅಡ್ವೆಂಚರ್‌ ಮಾಡುವ ಅವಕಾಶವಿದೆಯೇ ಎಂಬುದನ್ನು ಹುಡುಕುತ್ತೇನೆ. ಆಫ್‌ ರೋಡಿಂಗ್‌ ನನಗೆ ಬಹಳ ಇಷ್ಟ. ಇತ್ತೀಚೆಗಷ್ಟೇ ಸಕಲೇಶಪುರದಲ್ಲಿ ಆಫ್‌ ರೋಡಿಂಗ್‌ ಮಾಡಿದ ಅನುಭವ ಅದ್ಭುತವಾಗಿತ್ತು.

Bhagya Divana

Bhagya Divana

Bhagya Divana is a Professional Journalist. Working in Pravasi Prapancha.

ಟ್ರೆಕ್ಕಿಂಗ್‌ ಮಾಡುವುದೆಂದರೆ ನನಗಿಷ್ಟ: ರಂಜನಿ ರಾಘವನ್‌

Read Previous

ಟ್ರೆಕ್ಕಿಂಗ್‌ ಮಾಡುವುದೆಂದರೆ ನನಗಿಷ್ಟ: ರಂಜನಿ ರಾಘವನ್‌

ಅವಿಸ್ಮರಣೀಯ ಅನುಭವ ನೀಡಿದ ಮಾಸೈ ಮರಾ ; ರಮೇಶ್ ಅರವಿಂದ್

Read Next

ಅವಿಸ್ಮರಣೀಯ ಅನುಭವ ನೀಡಿದ ಮಾಸೈ ಮರಾ ; ರಮೇಶ್ ಅರವಿಂದ್