Monday, November 16, 2026
Monday, November 16, 2026

ಪಿಂಕ್‌ ಸಿಟಿ ಪ್ರವಾಸ

ಅರಾವಳಿ ಪರ್ವತ ಶ್ರೇಣೆಯ ʻಹಿಲ್‌ ಆಫ್‌ ಈಗಲ್‌ʼ ಬೆಟ್ಟದ ಮೇಲೆ ವಿಶ್ವ ಪಾರಂಪರಿಕ ತಾಣವಾದ ಅಂಬರ್‌ ಕೋಟೆ ಇದೆ. ಇದನ್ನು ರಾಜ ಮಾನ್‌ಸಿಂಗ್‌ ಅವರು 1600ರಲ್ಲಿ ಕಟ್ಟಿಸಿದರು. ರಜಪೂತ ಹಾಗೂ ಮೊಘಲ್‌ ಶೈಲಿಯಲ್ಲಿನ ಈ ಕೋಟೆ ಮಹಾದ್ವಾರಗಳು, ದರ್ಬಾರ್‌ ಹಾಲ್‌, ರಾಣಿವಾಸದ ಅಂತಃಪುರ, ಸೆಖೆಯಿಂದ ಪಾರಾಗಲು ನೀರಿನ ಮೇಲೆ ಗಾಳಿ ಹಾದು ಹೋಗುವ ದಿಕ್ಕಿನಲ್ಲಿ ನಿರ್ಮಿಸಿರುವ ಆಗಿನ ಕಾಲದ ಹವಾನಿಯಂತ್ರಿತ ಕೊಠಡಿಗಳು ಇನ್ನೂ ಹಲವು ವಿಶೇಷಗಳನ್ನು ಒಳಗೊಂಡಿದೆ.

  • ವಿ.ಶ್ರೀನಿವಾಸ

ಜೈಪುರ ಭಾರತದ ಮೊದಲ ʻಯೋಜಿತ ನಗರʻ ಎಂದು ಗುರುತಿಸಿಕೊಂಡಿರುವ ನಗರ. 2019ರಲ್ಲಿ ಯುನೆಸ್ಕೋ ವಿಶ್ವ ಪಾರಂಪರಿಕ ತಾಣದ ಮಾನ್ಯತೆ ಪಡೆದಿದೆ. ಇಂಥ ಜೈಪುರದಿಂದ 11 ಕಿಮೀ ದೂರದ ಬೆಟ್ಟದ ಮೇಲೆ ರಜಪೂತರ ಕಚ್ವಾಹ ವಂಶದ ರಾಜರ ಅರಮನೆ ಕೋಟೆ ಇತ್ತು. ಇಲ್ಲಿ ನೀರಿನ ಕೊರತೆಯಿಂದ 1727ರಲ್ಲಿ ಆಗಿನ ಮಹಾರಾಜ ಸವಾಯ್‌ ಜೈಸಿಂಗ್‌ ಅವರು ಹೊಸ ರಾಜಧಾನಿ ನಿರ್ಮಿಸಲು ತೀರ್ಮಾನಿಸಿದರು. ಶ್ರೀ ವಿದ್ಯಾಧರ ಭಟ್ಟಾಚಾರ್ಯ ಅವರು ಪಾಶ್ಚಿಮಾತ್ಯ ಹಾಗೂ ಭಾರತೀಯ ವಾಸ್ತುಶಾಸ್ತ್ರ, ಶಿಲ್ಪಶಾಸ್ತ್ರಗಳನ್ನು ಸಂಯೋಜಿಸಿ ನಗರ ನಿರ್ಮಾಣ ಯೋಜನೆ ರೂಪಿಸಿದರು. ಈ ನಗರಕ್ಕೆ ರಾಜ ಜೈಸಿಂಗ್‌ರ ನೆನಪಿಗಾಗಿ ಜೈಪುರ ಎಂದು ನಾಮಕರಣವಾಯಿತು.‌

ಇದನ್ನೂ ಓದಿ: ಅಮರ್‌ ಶಹೀದ್‌ ಚಂದ್ರಶೇಖರ್‌ ಆಝಾದ್‌ ಪಾರ್ಕ್‌

ಜೈಪುರ ಪಿಂಕ್‌ ಸಿಟಿಯಾಗಿದ್ದು ಹೀಗೆ

ಸ್ವತಂತ್ರ ನಂತರ ಜೈಪುರ ರಾಜಾಸ್ಥಾನದ ರಾಜಧಾನಿಯಾಯಿತು. ಇಂದು ಅತಿಹೆಚ್ಚು ಪ್ರವಾಸಿಗರನ್ನು ಸೆಳೆಯುತ್ತಿರುವ ದೆಹಲಿ, ಆಗ್ರಾ, ಜೈಪುರವನ್ನು ʻಗೋಲ್ಡನ್‌ ಟ್ರಯಾಂಗಲ್ʼ‌ ಎಂದು ಕರೆಯಲಾಗುತ್ತಿದೆ. 1876ರಲ್ಲಿ ಬ್ರಿಟನ್ನಿನ ವೇಲ್ಸ್‌ನ ರಾಜಕುಮಾರನನ್ನು ಸ್ವಾಗತಿಸಲು ನಗರದ ಎಲ್ಲ ಕಟ್ಟಡಗಳಿಗೂ ಪಿಂಕ್‌ ಬಣ್ಣವನ್ನು ಹಚ್ಚಲಾಗಿತ್ತು. ಇದರಿಂದ ಜೈಪುರ ʻಪಿಂಕ್‌ ಸಿಟಿʼ ಎಂದು ಹೆಸರಾಯಿತು. ಈಗ ಆ ಕಾಲದ ಹಳೆಯ ಕಟ್ಟಡಗಳು ಮಾಸಿದ ಕಾವಿ ಬಣ್ಣಕ್ಕೆ ತಿರುಗಿವೆ. ಅದೇ ಪಿಂಕ್‌ ಸಿಟಿ ಎಂದು ಅಲ್ಲಿನ ಗೈಡ್‌ ಹೇಳುತ್ತಾರೆ.

Untitled Design (24)

ಜಂತರ್‌ ಮಂತರ್

ಜೈಪುರವನ್ನು ಕಟ್ಟಿಸಿದ ರಾಜ ಜೈಸಿಂಗ್‌ ಅವರು ಐದು ಕಡೆ ಜಂತರ್‌ ಮಂತರ್‌ ಎಂಬ ಖಗೋಳ ಶಾಸ್ತ್ರಾಧ್ಯಯನ ಕೇಂದ್ರಗಳನ್ನು ನಿರ್ಮಿಸಿದರು. ಅವುಗಳಲ್ಲಿ ಜೈಪುರದ ಅರಮನೆಯ ಹತ್ತಿರದ ಜಂತರ್‌ ಮಂತರ್‌ 19 ಯಂತ್ರಗಳ ರಚನೆಗಳಿಂದ ಕೂಡಿದ್ದು ಎಲ್ಲಕ್ಕಿಂತ ದೊಡ್ಡದಾಗಿದೆ. ಜಂತರ್‌ ಎಂದರೆ ಯಂತ್ರ, ಮಂತರ್‌ ಎಂದರೆ ಲೆಕ್ಕಾಚಾರ. ಇದು ಅತಿದೊಡ್ಡ ʼಸನ್‌ ಡಯಲ್‌ʼ ಅಂದರೆ ಸೂರ್ಯನ ಬೆಳಕಿನಿಂದ ಸಮಯವನ್ನು ಲೆಕ್ಕಹಾಕುವ ರಚನೆ. ಆಯಾ ಸಮಯದ ರಾಶಿ- ನಕ್ಷತ್ರ, ಗ್ರಹಗಳ ಚಲನೆಯನ್ನು ಗುರುತಿಸಲು ವಿವಿಧ ರಚನೆಗಳಿವೆ. ಭಾರತದ ಪ್ರಾಚೀನ ಜ್ಞಾನ, ವಿಜ್ಞಾನ ಅಧ್ಯಯನ ಮಾದರಿಗೆ ಸಾಕ್ಷಿಯಾಗಿ ನಿಂತಿವೆ.

ಹವಾ ಮಹಲ್

ಜೈಪುರದ ಐಕಾನಿಕ್‌ ಕಟ್ಟಡವೆಂದರೆ ʻಹವಾ ಮಹಲ್ʼ.‌ 1799ರಲ್ಲಿ ಮಹಾರಾಜ ಸವಾಯ್‌ ಪ್ರತಾಪ ಸಿಂಗ್‌ ಅವರು ಜನಾನಾದ ರಾಣಿ ಪರಿವಾರದವರು ನಗರದ ಮುಖ್ಯರಸ್ತೆಯಲ್ಲಿ ಜನಸಂಚಾರ ನೋಡಲು, ವಿರಮಿಸಲು, ಉತ್ಸವ ಮುಂತಾದವನ್ನು ವೀಕ್ಷಿಸಲು ಅನುಕೂಲವಾಗುವಂತೆ ನಿರ್ಮಿಸಿದರು. ಇದು ಪಿಂಕ್‌ ಸ್ಯಾಂಡ್‌ ಸ್ಟೋನ್‌ ಬಳಸಿ ಕಟ್ಟಿರುವ 5 ಅಂತಸ್ತುಗಳ ಕಟ್ಟಡ. 953 ವಿಶಿಷ್ಟ ವಿನ್ಯಾಸದ ಕಿಟಕಿಗಳನ್ನು ಹೊಂದಿದ್ದು ಉಲ್ಟಾ ಜೇನುಗೂಡಿನಂತಿದೆ.

Untitled Design (25)

ಅಂಬರ್‌ ಮಹಲ್‌

ಅರಾವಳಿ ಪರ್ವತ ಶ್ರೇಣೆಯ ʻಹಿಲ್‌ ಆಫ್‌ ಈಗಲ್‌ʼ ಹೆಸರಿನ ಬೆಟ್ಟದ ಮೇಲೆ 2013ರಲ್ಲಿ ವಿಶ್ವ ಪಾರಂಪರಿಕ ತಾಣವಾಗಿ ಗುರುತಿಸಿಕೊಂಡಿರುವ ಅಂಬರ್‌ ಕೋಟೆ ಇದೆ. ಇದನ್ನು ರಾಜ ಮಾನ್‌ಸಿಂಗ್‌ ಅವರು 1600 ರಲ್ಲಿ ಕಟ್ಟಿಸಿದರು. ರಜಪೂತ ಹಾಗೂ ಮೊಘಲ್‌ ಶೈಲಿಯಲ್ಲಿನ ಈ ಕೋಟೆಯ ಮಹಾದ್ವಾರಗಳು, ದರ್ಬಾರ್‌ ಹಾಲ್‌, ರಾಣಿವಾಸದ ಅಂತಃಪುರ, ಸೆಖೆಯಿಂದ ಪಾರಾಗಲು ನೀರಿನ ಮೇಲೆ ಗಾಳಿ ಹಾದು ಹೋಗುವ ದಿಕ್ಕಿನಲ್ಲಿ ನಿರ್ಮಿಸಿರುವ ಆಗಿನ ಕಾಲದ ಹವಾನಿಯಂತ್ರಿತ ಕೊಠಡಿಗಳು ಬೆಲ್ಜಿಯಂ ಗಾಜುಗಳಿಂದ ಅಲಂಕೃತ ಶೀಶ್‌ ಮಹಲ್‌, ರಾಜ ಪರಿವಾರಕ್ಕಾಗಿ ನಿರ್ಮಿತ ದೇವಸ್ಥಾನ ಮುಂತಾದ ಬೃಹತ್‌ ಕಟ್ಟಡಗಳು ಇಲ್ಲಿವೆ.

1988ರಲ್ಲಿ ಬಿಳಿ ಅಮೃತಶಿಲೆಯಿಂದ ನಿರ್ಮಿತ ಲಕ್ಷ್ಮೀನಾರಾಯಣ ದೇವಸ್ಥಾನ ಬಿರ್ಲಾ ಮಂದಿರ್‌ ಜೈಪುರದ ಇನ್ನೊಂದು ಆಕರ್ಷಣೆಯಾಗಿದೆ. 2006ರಲ್ಲಿ ಪ್ರಾರಂಭವಾದ ʼಜೈಪುರ್‌ ಲಿಟರರಿ ಫೆಸ್ಟಿವಲ್‌ʼ ಈಗ ಜಗತ್ತಿನ ಅತಿದೊಡ್ಡ ಸಾಹಿತ್ಯ ಸಮ್ಮೇಳನ ಎಂಬ ಖ್ಯಾತಿಗೆ ಪಾತ್ರವಾಗಿದೆ. ಜಗತ್ಪ್ರಸಿದ್ದ ಸಾಹಿತಿಗಳು, ಕವಿಗಳು, ಪಂಡಿತರು, ವಿಮರ್ಶಕರು, ಕಲಾವಿದರು, ಸಂಗೀತಗಾರರು, ಚಿಂತಕರು ಹೀಗೆ ಎಲ್ಲಾ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಸಾಧಕರು ಪ್ರತಿವರ್ಷ ಇಲ್ಲಿ ಸೇರಿ ಚಿಂತನ ಮಂಥನ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಾರೆ. ಇದೇ ಮಾದರಿ ಅನುಸರಿಸಿ ಈಗ ಹಲವು ನಗರಗಳಲ್ಲೂ ಲಿಟರರಿ ಫೆಸ್ಟ್‌ಗಳು ನಡೆಯುತ್ತಿವೆ. ಜೈಪುರದಲ್ಲಿನ ಪ್ರೇಕ್ಷಣಿಯ ಸ್ಥಳಗಳನ್ನು ಒಂದೆರಡು ದಿನದಲ್ಲಿ ನೋಡಲಾಗದು. ಹಾಗಾಗಿ ಸಮಯ ಸಿಕ್ಕಾಗ ಐದಾರು ದಿನಗಳ ಪ್ರವಾಸ ಹೊರಡುವುದು ಉತ್ತಮ.

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ಗೋವಾ ಹೋದರೆ ಈ ಬೀಚ್‌ಗಳನ್ನು ಮಿಸ್‌ ಮಾಡಿಕೊಳ್ಳಲೇಬೇಡಿ!

Read Previous

ಗೋವಾ ಹೋದರೆ ಈ ಬೀಚ್‌ಗಳನ್ನು ಮಿಸ್‌ ಮಾಡಿಕೊಳ್ಳಲೇಬೇಡಿ!

ತತ್ಕಾಲ್ ಬುಕಿಂಗ್ ಸಮಯದಲ್ಲಿ ಬದಲಾವಣೆಗಲಿಲ್ಲ: IRCTC ಸ್ಪಷ್ಟನೆ

Read Next

ತತ್ಕಾಲ್ ಬುಕಿಂಗ್ ಸಮಯದಲ್ಲಿ ಬದಲಾವಣೆಗಲಿಲ್ಲ: IRCTC ಸ್ಪಷ್ಟನೆ