Monday, November 16, 2026
Monday, November 16, 2026

ಕಲ್ಲಿನಲ್ಲಿ ಅರಳಿದ ಚಾಲುಕ್ಯರ ಕನಸು

ಸಾವಿರದ ಮುನ್ನೂರು ವರ್ಷಗಳ ಹಿಂದಿನ ಕಲಾ ವೈಭವವನ್ನು ಇಂದಿಗೂ ಜೀವಂತವಾಗಿಟ್ಟಿರುವ ಪಟ್ಟದಕಲ್ಲು, ಚಾಲುಕ್ಯ ವಾಸ್ತುಶಿಲ್ಪದ ಕಿರೀಟಪ್ರಾಯವಾಗಿದೆ. ಆಧುನಿಕ ತಂತ್ರಜ್ಞಾನವಿಲ್ಲದ ಕಾಲದಲ್ಲಿ ನಿರ್ಮಾಣವಾದ, ದ್ರಾವಿಡ ಮತ್ತು ನಾಗರ ಶೈಲಿಯ ಸಮನ್ವಯವನ್ನು ಸಾರುವ ಪಟ್ಟದಕಲ್ಲಿನ ದೇವಾಲಯಗಳು ನಮ್ಮ ಪೂರ್ವಜರ ಕಲಾಪ್ರೌಢಿಮೆಗೆ ಕನ್ನಡಿ ಹಿಡಿಯುತ್ತವೆ.

  • ಮೇಘಾ ಭಟ್‌

ಹಿಂದಿನ ಕಾಲದಲ್ಲಿ ರಾಜ ಸಂಸ್ಥಾನಗಳು, ನಾಗರೀಕತೆಗಳು ಉದಯವಾಗುತ್ತಿದ್ದುದು ನದಿ ತೀರದಲ್ಲಿ. ಆದರೆ, ಕೃಷ್ಣಾ ನದಿಯ ಪ್ರಮುಖ ಉಪನದಿಯಾದ ಮಲಪ್ರಭಾ ನದಿಯ ತೀರದಲ್ಲಿ ಉದಯವಾದ ಚಾಲುಕ್ಯರ ಒಂದು ಕನಸು, ಪಟ್ಟದಕಲ್ಲು ಎಂಬ ದೃಶ್ಯ ಕಾವ್ಯಕ್ಕೆ ಕಾರಣವಾಯಿತು. ಬಹುಶಃ ಸುಮಾರು ಸಾವಿರದ ಮುನ್ನೂರು ವರ್ಷಗಳ ನಂತರ ಇದು ವಿಶ್ವ ಪಾರಂಪರಿಕ ಪಟ್ಟಿಯಲ್ಲಿ ಸ್ಥಾನ ಪಡೆಯುವಷ್ಟು ಪ್ರಸಿದ್ಧವಾಗುತ್ತದೆ ಎಂದು ಚಾಲುಕ್ಯರು ಕನಸಿನಲ್ಲೂ ಎಣಿಸಿರಲಿಲ್ಲ. ಪ್ರಭುತ್ವದ ಸಹಕಾರ, ದೂರಾಲೋಚನೆ, ಕಲೆಗೆ ಅವರು ಕೊಡುವ ಗೌರವ, ಹಾಗೆಯೇ ಉತ್ಕೃಷ್ಟ ಕಲಾವಿದರ ತ್ಯಾಗ ಮತ್ತು ಬಲಿದಾನಗಳು ಸೇರಿದರೆ ಏನಾಗುತ್ತದೆ ಎಂಬುದಕ್ಕೆ ಪಟ್ಟದಕಲ್ಲು ಉತ್ತಮ ಉದಾಹರಣೆ. ಇದರ ಜತೆಗೆ, ಈ ಜಾಗದಲ್ಲಿ ನದಿಯು ದಕ್ಷಿಣದಿಂದ ಉತ್ತರ ದಿಕ್ಕಿನತ್ತ ಹರಿಯುವುದರಿಂದ, 'ಉತ್ತರ ವಾಹಿನಿ ಗಂಗಾ' ಎಂದೂ ಹೆಸರಾಗಿದೆ. ಹಾಗಾಗಿ ಪಟ್ಟದಕಲ್ಲು ಪುಣ್ಯಕ್ಷೇತ್ರವೂ ಹೌದು.

ಇದನ್ನೂ ಓದಿ: ಇದು ನೋಡುವ ಜಾಗವೊಂದೇ ಅಲ್ಲ, ಅನುಭವಕ್ಕೆ ಇಳಿಯಬೇಕಾದ ಊರು!

ಭಾರತದ ದೇವಾಲಯ ವಾಸ್ತುಶಿಲ್ಪದ ಇತಿಹಾಸದಲ್ಲಿ ಒಂದು ಯುಗವನ್ನೇ ನಿರ್ಮಿಸಿದ ಸ್ಥಳವೆಂದರೆ ಅದು ಪಟ್ಟದಕಲ್ಲು. ಇಲ್ಲಿ 7ನೆಯ ಮತ್ತು 8ನೆಯ ಶತಮಾನದ ಹಿಂದೂ ಹಾಗೂ ಜೈನ ದೇವಾಲಯಗಳ ಸಮೂಹವನ್ನೇ ನೋಡಬಹುದು. ಯುನೆಸ್ಕೋ ಇದನ್ನು ಉತ್ತರ ಮತ್ತು ದಕ್ಷಿಣ ಭಾರತದ ವಾಸ್ತುಶಿಲ್ಪ ಶೈಲಿಗಳ ಸಮನ್ವಯದ ಅದ್ಭುತ ಉದಾಹರಣೆ ಎಂದು ಹೇಳಿದೆ. ಇಲ್ಲಿನ ದೇವಾಲಯಗಳು ಮುಖ್ಯವಾಗಿ ಶಿವನಿಗೆ ಸಮರ್ಪಿತವಾಗಿದ್ದರೂ, ವೈಷ್ಣವ ಮತ್ತು ಶಾಕ್ತ ಸಂಪ್ರದಾಯಗಳ ಅನೇಕ ಶಿಲ್ಪಗಳನ್ನೂ ಕಾಣಬಹುದು. ರಾಮಾಯಣ, ಮಹಾಭಾರತ, ಭಾಗವತ ಪುರಾಣ, ಪಂಚತಂತ್ರ ಹಾಗೂ ಇತರ ಪುರಾಣ ಕಥೆಗಳನ್ನು ಕಲ್ಲಿನ ಮೇಲೆ ಅದ್ಭುತವಾಗಿ ಕೆತ್ತಲಾಗಿದೆ. ಪಟ್ಟದಕಲ್ಲಿನ ವಿರೂಪಾಕ್ಷ ಮತ್ತು ಪಾಪನಾಥ ದೇವಾಲಯಗಳು ಉತ್ತರದ ನಾಗರ ಹಾಗೂ ದಕ್ಷಿಣದ ದ್ರಾವಿಡ ವಾಸ್ತುಶಿಲ್ಪದ ಸಂಗಮವನ್ನು ಅತ್ಯಂತ ಸುಂದರವಾಗಿ ತೋರಿಸುತ್ತವೆ. ಇಂದಿಗೂ ವಿರೂಪಾಕ್ಷ ದೇವಾಲಯದಲ್ಲಿ ಪೂಜೆಗಳು ನಡೆಯುತ್ತಿವೆ.

Untitled Design (18)

ಹಂಪಿ, ತಾಜ್‌ಮಹಲ್ ಅಥವಾ ಮೈಸೂರು ಅರಮನೆಯಂತೆ ಜನಸಂದಣಿಯಿಂದ ತುಂಬಿರುವ ತಾಣವಲ್ಲ ಇದು. ಆದರೆ ಇತಿಹಾಸ, ವಾಸ್ತುಶಿಲ್ಪ ಮತ್ತು ಭಾರತೀಯ ನಾಗರೀಕತೆಯ ಬೆಳವಣಿಗೆಯನ್ನು ಅರ್ಥಮಾಡಿಕೊಳ್ಳಬಯಸುವವರಿಗೆ ಪಟ್ಟದಕಲ್ಲು ಒಂದು ತೆರೆದ ವಿಶ್ವವಿದ್ಯಾಲಯ. ಆಶ್ಚರ್ಯವೆಂದರೆ, ಇತಿಹಾಸವನ್ನು ಕೇವಲ ಪರೀಕ್ಷೆಯ ಸಲುವಾಗಿ ಓದುವ ಈ ಕಾಲದಲ್ಲಿ, ಕರ್ನಾಟಕದ ಹೆಮ್ಮೆ ಎನ್ನಬಹುದಾದ ಈ ತಾಣವನ್ನು ಅನೇಕ ಕನ್ನಡಿಗರೇ ಇನ್ನೂ ನೋಡಿಲ್ಲ.

ರಾಜರ ಪಟ್ಟಾಭಿಷೇಕದ ನೆಲ

ʼಪಟ್ಟದಕಲ್ಲುʼ ಎಂಬ ಹೆಸರಿನಲ್ಲಿಯೇ ಅದರ ಇತಿಹಾಸ ಅಡಗಿದೆ. ಚಾಲುಕ್ಯ ರಾಜರ ಪಟ್ಟಾಭಿಷೇಕಗಳು ಇಲ್ಲಿ ನಡೆಯುತ್ತಿದ್ದುದರಿಂದ ಈ ಪ್ರದೇಶಕ್ಕೆ ʼಪಟ್ಟದಕಿಸುವ ಕಲ್ಲುʼ ಅಥವಾ ʼಪಟ್ಟದಕಲ್ಲುʼ ಎಂಬ ಹೆಸರು ಬಂದಿತೆಂದು ಹೇಳಲಾಗುತ್ತದೆ. ಹಾಗೆಯೇ, ಇದನ್ನು ರಕ್ತಪುರ ಎಂದೂ ಕರೆಯುತ್ತಿದ್ದರಂತೆ. ಇಲ್ಲಿನ ಕೆಂಪು ಮಣ್ಣಿನ ಕಾರಣಕ್ಕೆ ಈ ಹೆಸರು ಬಂದಿರಲಿಕ್ಕೂ ಸಾಕು.

ಕ್ರಿ.ಶ. 7 ಮತ್ತು 8ನೆಯ ಶತಮಾನಗಳಲ್ಲಿ ಚಾಲುಕ್ಯ ಸಾಮ್ರಾಜ್ಯ ತನ್ನ ಉತ್ತುಂಗದಲ್ಲಿದ್ದ ಕಾಲ. ಬಾದಾಮಿ ರಾಜಧಾನಿಯಾಗಿದ್ದರೆ, ಐಹೊಳೆ ಪ್ರಯೋಗಾಲಯವಾಗಿತ್ತು ಮತ್ತು ಪಟ್ಟದಕಲ್ಲು ಸಾಧನೆಯ ಶಿಖರವಾಗಿತ್ತು. ಐಹೊಳೆಯಲ್ಲಿ ವಿವಿಧ ರೀತಿಯ ದೇವಾಲಯ ವಿನ್ಯಾಸಗಳ ಮೇಲೆ ಪ್ರಯೋಗ ಮಾಡಿದ ಚಾಲುಕ್ಯ ಶಿಲ್ಪಿಗಳು, ಪಟ್ಟದಕಲ್ಲಿನಲ್ಲಿ ತಮ್ಮ ಎಲ್ಲ ಅನುಭವ ಮತ್ತು ಪ್ರತಿಭೆಯನ್ನು ಒಟ್ಟುಗೂಡಿಸಿ ಒಂದು ಅದ್ಭುತ ಕಲಾಲೋಕವನ್ನೇ ನಿರ್ಮಿಸಿದರು. ಅದಕ್ಕಾಗಿಯೇ ಇತಿಹಾಸಕಾರರು ಐಹೊಳೆ, ಬಾದಾಮಿ ಮತ್ತು ಪಟ್ಟದಕಲ್ಲನ್ನು ʼಭಾರತೀಯ ದೇವಾಲಯ ವಾಸ್ತುಶಿಲ್ಪದ ತ್ರಿವೇಣಿ ಸಂಗಮʼ ಎಂದು ಕರೆಯುತ್ತಾರೆ.

ಯುನೆಸ್ಕೋ ವಿಶ್ವ ಪರಂಪರೆಯ ಗೌರವ

ಪಟ್ಟದಕಲ್ಲಿನ ಮಹತ್ವವನ್ನು ವಿಶ್ವವೇ ಗುರುತಿಸಿದೆ. 1987ರಲ್ಲಿ ಯುನೆಸ್ಕೋ ಈ ತಾಣವನ್ನು 'ವಿಶ್ವ ಪರಂಪರೆ ತಾಣ' ಎಂದು ಘೋಷಿಸಿತು. ಭಾರತದಲ್ಲಿ ಸಾವಿರಾರು ದೇವಾಲಯಗಳಿದ್ದರೂ, ಎಲ್ಲಕ್ಕೂ ಈ ಗೌರವ ಸಿಕ್ಕಿಲ್ಲ. ಸಾವಿರದ ಮೂರುನೂರು ವರ್ಷಗಳ ಹಿಂದಿನ ಶಿಲ್ಪಕಲೆ, ವಾಸ್ತುಶಿಲ್ಪ ಮತ್ತು ಸಾಂಸ್ಕೃತಿಕ ಇತಿಹಾಸದ ಅಪಾರ ಮೌಲ್ಯವನ್ನು ಗಮನಿಸಿ ಈ ಮಾನ್ಯತೆ ನೀಡಲಾಗಿದೆ. ಆದರೆ ವಿದೇಶದಿಂದ ಬರುವ ಪ್ರವಾಸಿಗರಿಗೆ ಪಟ್ಟದಕಲ್ಲಿನ ಬಗ್ಗೆ ಹೆಚ್ಚು ತಿಳಿದಿದ್ದು, ನಮ್ಮಲ್ಲಿ ಅನೇಕರಿಗೆ ಇದರ ಬಗ್ಗೆ ಗೊತ್ತೇ ಇಲ್ಲದಿರುವುದು ವಿಷಾದದ ಸಂಗತಿ!

Untitled Design (15)

ಕಲ್ಲಿನಲ್ಲಿ ಅರಳಿದ ಕಲೆ

ಪಟ್ಟದಕಲ್ಲು ಪ್ರವೇಶಿಸಿದ ಕ್ಷಣದಲ್ಲೇ ಒಂದು ವಿಶಿಷ್ಟ ಅನುಭವ ಆಗುತ್ತದೆ. ಹಸಿರು ಹುಲ್ಲಿನ ನಡುವೆ ಸಾಲಾಗಿ ನಿಂತಿರುವ ದೇವಾಲಯಗಳು, ಹಿಂದೆ ಹರಿಯುವ ಮಲಪ್ರಭಾ ನದಿ, ಸುತ್ತಮುತ್ತಲಿನ ನಿಶ್ಶಬ್ದ ವಾತಾವರಣ ಎಲ್ಲವೂ ಸೇರಿ ನಮ್ಮನ್ನು ನೇರವಾಗಿ ಎಂಟನೆಯ ಶತಮಾನಕ್ಕೆ ಕರೆದೊಯ್ಯುತ್ತವೆ.

ಅಲ್ಲಿಯ ಪ್ರಮುಖ ಆಕರ್ಷಣೆ ವಿರೂಪಾಕ್ಷ ದೇವಾಲಯ. ಚಾಲುಕ್ಯ ರಾಜ ಇಮ್ಮಡಿ ವಿಕ್ರಮಾದಿತ್ಯನ ವಿಜಯವನ್ನು ಸ್ಮರಿಸಲು ಅವನ ಪತ್ನಿ ಲೋಕಮಹಾದೇವಿ ಈ ದೇವಾಲಯವನ್ನು ನಿರ್ಮಿಸಿದಳು ಎಂದು ಇತಿಹಾಸ ಹೇಳುತ್ತದೆ. ದೇವಾಲಯದ ಮುಂದೆ ನಿಂತಾಗ ತತ್‌ಕ್ಷಣ ಮನಸಿಗೆ ಬರುವ ಪ್ರಶ್ನೆ, ʼಇವತ್ತಿನ ಕ್ರೇನ್, ಕಂಪ್ಯೂಟರ್, ಲೇಸರ್ ಮಾಪಕಗಳಿಲ್ಲದೆ ಇಂಥ ಮಹಾ ನಿರ್ಮಾಣವನ್ನು ಹೇಗೆ ಮಾಡಿದರು?ʼ ಎನ್ನುವುದು. ದೇವಾಲಯದ ಪ್ರತಿಯೊಂದು ಕಂಬ, ಗೋಡೆ ಮತ್ತು ಮೇಲ್ಚಾವಣಿಯಲ್ಲೂ ಸಾವಿರಾರು ಕಥೆಗಳು ಕೆತ್ತಲ್ಪಟ್ಟಿವೆ. ರಾಮಾಯಣ, ಮಹಾಭಾರತ ಮತ್ತು ಪುರಾಣ ಕಥೆಗಳು ಜೀವಂತವಾಗಿ ಕಲ್ಲಿನಲ್ಲಿ ಮೂಡಿಬಂದಂತೆ ಕಾಣುತ್ತವೆ. ಒಂದು ಶಿಲ್ಪಿಯ ಕೈಯಲ್ಲಿ ಕಲ್ಲು ಕೇವಲ ಕಲ್ಲಾಗಿರದೆ, ಮಾತಾಡುವ ಗ್ರಂಥವಾಯಿತು ಎಂಬುದಕ್ಕೆ ಪಟ್ಟದಕಲ್ಲೇ ಜೀವಂತ ಸಾಕ್ಷಿ.

ಇತರ ದೇವಾಲಯಗಳು

ವಿರೂಪಾಕ್ಷ ದೇವಾಲಯದ ಪಕ್ಕದಲ್ಲಿಯೇ ಮಲ್ಲಿಕಾರ್ಜುನ ದೇವಾಲಯವಿದೆ. ಗಾತ್ರದಲ್ಲಿ ಸ್ವಲ್ಪ ಚಿಕ್ಕದಾಗಿದ್ದರೂ ಅದರ ಶಿಲ್ಪಕಲೆ ಅದ್ಭುತವಾಗಿದೆ. ಕಂಬಗಳ ಮೇಲಿನ ಕೆತ್ತನೆಗಳು ಮತ್ತು ಗೋಡೆಗಳ ಮೇಲಿನ ಶಿಲ್ಪಗಳನ್ನು ಎಷ್ಟು ಹೊತ್ತು ನೋಡಿದರೂ ತೃಪ್ತಿಯಾಗುವುದಿಲ್ಲ. ಸಂಗಮೇಶ್ವರ ದೇವಾಲಯವು ಪಟ್ಟದಕಲ್ಲಿನ ಅತ್ಯಂತ ಹಳೆಯ ದೇವಾಲಯಗಳಲ್ಲಿ ಒಂದು. ಸರಳ ವಿನ್ಯಾಸದ ಈ ದೇವಾಲಯ ಚಾಲುಕ್ಯರ ವಾಸ್ತುಶಿಲ್ಪದ ಬೆಳವಣಿಗೆಯ ಪ್ರಮುಖ ಹಂತವನ್ನು ತೋರಿಸುತ್ತದೆ.

Untitled Design (16)

ಎಂದಿಗೂ ಮಾಸದ ವೈಭವ

ಚಾಲುಕ್ಯರ ಪತನದ ನಂತರ ರಾಷ್ಟ್ರಕೂಟರು, ಕಲ್ಯಾಣಿ ಚಾಲುಕ್ಯರು, ವಿಜಯನಗರ ಸಾಮ್ರಾಜ್ಯ, ಆದಿಲ್ ಶಾಹಿಗಳು, ಮೊಘಲರು, ಮರಾಠರು, ಹೈದರಾಲಿ ಹಾಗೂ ಟಿಪ್ಪು ಸುಲ್ತಾನರ ಆಳ್ವಿಕೆಯನ್ನು ಈ ಪ್ರದೇಶ ಕಂಡಿದೆ. ಇಂತಹುದೇ ಇತರ ಪಾರಂಪರಿಕ ಸ್ಥಳಗಳಲ್ಲಿ ನಾವು ಕಡಿದ ಕಲ್ಲುಗಳು, ಮುರಿದ ಶಿಲ್ಪಗಳು ಹಾಗೂ ಭಗ್ನಗೊಂಡ ಮೂರ್ತಿಗಳನ್ನು ಕಾಣುತ್ತೇವೆ. ಆದರೆ, ಅಸಂಖ್ಯಾತ ಯುದ್ಧಗಳು, ಆಕ್ರಮಣಗಳು ಹಾಗೂ ಕಾಲದ ಹೊಡೆತಗಳ ನಡುವೆಯೂ ಪಟ್ಟದಕಲ್ಲಿನ ದೇವಾಲಯಗಳು ಇಂದಿಗೂ ತಮ್ಮ ಹಿರಿಮೆಯನ್ನು ಕಳೆದುಕೊಳ್ಳದೆ ನಿಂತಿವೆ. ಇದು ಅಂದಿನ ಶಿಲ್ಪಿಗಳ ಪ್ರತಿಭೆಗೆ ಜೀವಂತ ಸಾಕ್ಷಿಯಾಗಿದೆ.

ನಮ್ಮ ಪೂರ್ವಜರ ಕೈಚಳಕ

ಮೊನ್ನೆ ಮೊನ್ನೆ ಬೆಂಗಳೂರಿನ ಬಹು ಅಂತಸ್ತಿನ ಕಟ್ಟಡವೊಂದು ಉರುಳಿಬಿದ್ದ ಸುದ್ದಿ ಕೇಳಿರುತ್ತೀರಿ. ನಿರ್ಮಾಣ ಹಂತದ ಸೇತುವೆ, ಕಟ್ಟಡಗಳು ಬೀಳುವ ಸುದ್ದಿ ನಮಗೆ ಹೊಸದೇನಲ್ಲ. ಆದರೆ ಸಾವಿರದ ಮುನ್ನೂರು ವರ್ಷಗಳ ಹಿಂದೆ ಕಟ್ಟಿದ ಪಟ್ಟದಕಲ್ಲನ್ನು ನೋಡಿದ ನಂತರ ನನಗೆ ಬಂದ ದೊಡ್ಡ ಪ್ರಶ್ನೆ ಎಂದರೆ, ʼಇವತ್ತು ನಾವು ಆಧುನಿಕತೆಯ ಬಗ್ಗೆ ಹೆಮ್ಮೆಪಡುತ್ತೇವೆ, ಆದರೆ ಸಾವಿರದ ಮುನ್ನೂರು ವರ್ಷಗಳ ಹಿಂದೆ ಬದುಕಿದ್ದ ನಮ್ಮ ಪೂರ್ವಜರ ಪ್ರತಿಭೆಯನ್ನು ನಾವು ಸಾಕಷ್ಟು ಗೌರವಿಸುತ್ತಿದ್ದೇವೆಯೇ? ಸಿಮೆಂಟ್ ಇಲ್ಲದೆ, ಯಂತ್ರಗಳಿಲ್ಲದೆ, ಗಣಕಯಂತ್ರಗಳಿಲ್ಲದೆ ನಿರ್ಮಿಸಿದ ದೇವಾಲಯಗಳು ಇಂದಿಗೂ ಗಟ್ಟಿಯಾಗಿ ನಿಂತಿವೆ. ಆದರೆ ಇಂದು ಕೋಟಿ ಕೋಟಿ ರುಪಾಯಿ ಖರ್ಚು ಮಾಡಿ ನಿರ್ಮಿಸುವ ಕೆಲವು ಕಟ್ಟಡಗಳು ಕೆಲವೇ ದಶಕಗಳಲ್ಲಿ ದುರಸ್ತಿಗೆ ಬರುತ್ತವೆ ಎನ್ನುವುದು ವಿಪರ್ಯಾಸ.

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ದೇಶ ಸುತ್ತಬೇಕಿಲ್ಲ, ಕರ್ನಾಟಕದಲ್ಲೇ ಇವೆ ಅನೇಕ ಡಾಲ್ಫಿನ್‌ ತಾಣಗಳು..

Read Previous

ದೇಶ ಸುತ್ತಬೇಕಿಲ್ಲ, ಕರ್ನಾಟಕದಲ್ಲೇ ಇವೆ ಅನೇಕ ಡಾಲ್ಫಿನ್‌ ತಾಣಗಳು..

ನೋಡಬನ್ನಿ ರಾಮನಗರ..ಇತಿಹಾಸವನ್ನು ಒಡಲಲ್ಲಿ  ಹೊತ್ತ ಬೆಟ್ಟಗಳ ತವರೂರ..

Read Next

ನೋಡಬನ್ನಿ ರಾಮನಗರ..ಇತಿಹಾಸವನ್ನು ಒಡಲಲ್ಲಿ ಹೊತ್ತ ಬೆಟ್ಟಗಳ ತವರೂರ..