ಪ್ಲಾಸ್ಟಿಕ್ ಮುಕ್ತ ಕಾಡಿನತ್ತ ಒಂದು ಹೆಜ್ಜೆ
ಕೇವಲ ಸಫಾರಿಗೆ ಸೀಮಿತವಾಗಿದ್ದ ಕಬಿನಿಯ ಹಿನ್ನೀರಿನಲ್ಲಿ ಇಳಿದು ಪ್ಲಾಸ್ಟಿಕ್ ಕಸ ಹೆಕ್ಕುವ ಮೂಲಕ ಪರಿಸರ ಪ್ರೇಮಿಗಳು ಈ ಬಾರಿಯ ರಾಜ್ಯೋತ್ಸವವನ್ನು ವಿಭಿನ್ನವಾಗಿ ಆಚರಿಸಲಾಗಿದೆ. ಕಾಡುಪ್ರಾಣಿಗಳಿಗೆ ಮಾರಕವಾಗಿರುವ ತ್ಯಾಜ್ಯ ನಿರ್ಮೂಲನೆಯ ಮಹತ್ವ ಸಾರುವ ಲೇಖನ ಇಲ್ಲಿದೆ.
- ವಿನಯ್
ʼಈ ವರ್ಷದ ರಾಜ್ಯೋತ್ಸವದ ದಿನ ಏನ್ ಮಾಡ್ತೀಯಾ?ʼ ಅಂತ ಗೆಳೆಯ ಫೋನ್‌ನಲ್ಲಿ ಕೇಳಿದಾಗ, ನಾನು ಹೇಳಿದ್ದು ʼಕಬಿನಿ ಹಿನ್ನೀರಿನಲ್ಲಿ ಪ್ಲಾಸ್ಟಿಕ್ ಆಯಲು ಹೋಗುತ್ತೇನೆʼ ಎಂದು! ಅದಕ್ಕವನು, ʼಅಯ್ಯೋ ಬಾರೋ ಮಾರಾಯ, ಅಷ್ಟು ದೂರ ಯಾಕೆ, ನಮ್ಮ ಮನೆ ಹತ್ರನೇ ಕ್ಲೀನ್ ಮಾಡುವೆಯಂತೆʼ ಅಂದಾಗ ನಕ್ಕು ಫೋನ್ ಕಟ್ ಮಾಡಿದೆ.
ಕಬಿನಿ ಹಿನ್ನೀರಿಗೆ ರಾಶಿ ರಾಶಿ ಕಸ ಹೇಗೆ ಬಂತು?
ಕಬಿನಿ ನದಿಯು ವಯನಾಡಿನ ಪಶ್ಚಿಮ ಘಟ್ಟದಲ್ಲಿ ಉಗಮವಾಗಿ, ಜಲಾಶಯ ತಲುಪುವ ಮುನ್ನ ಬಹುತೇಕ ಕೇರಳದಲ್ಲಿ ಹರಿಯುತ್ತದೆ. ಅಲ್ಲಿ ಸುರಿಯುವ ಭಾರಿ ಮಳೆ ಹಾಗೂ ಪ್ರವಾಹದ ಸಮಯದಲ್ಲಿ ನದಿಯ ಆಸುಪಾಸಿನ ಮನೆ, ಪ್ರವಾಸಿ ಸ್ಥಳ, ರಸ್ತೆ ಮತ್ತು ರೆಸಾರ್ಟ್‌ಗಳಿಂದ ಸೃಷ್ಟಿಯಾಗುವ ತ್ಯಾಜ್ಯವನ್ನೆಲ್ಲ ತನ್ನ ಒಡಲಿನಲ್ಲಿ ಹೊತ್ತು ತಂದು ಹಿನ್ನೀರಿನಲ್ಲಿ ಸಂಗ್ರಹಿಸುತ್ತದೆ. ಹರಿವು ಕಡಿಮೆಯಾದಾಗ ಆ ಕಸವೆಲ್ಲ ನದಿಯಂಚಿನಲ್ಲಿ ಅನಾಥವಾಗಿ ಉಳಿದುಬಿಡುತ್ತದೆ.
ಇದನ್ನೂ ಓದಿ: ಪಿಂಕ್ ಸಿಟಿ ಪ್ರವಾಸ
ಏಕೆ ಇದನ್ನು ಸ್ವಚ್ಛ ಮಾಡಬೇಕು?
ಕಬಿನಿ ಹಿನ್ನೀರಿಗೆ ಬೇಸಗೆ ಕಾಲದಲ್ಲಿ ಬಂಡೀಪುರ, ನಾಗರಹೊಳೆ, ವಯನಾಡು, ಮುದುಮಲೈ ಸುತ್ತಮುತ್ತಲಿನ ಕಾಡುಗಳ ಆನೆಗಳು ಆಹಾರ ಹಾಗೂ ನೀರು ಅರಸಿ ಪ್ರತಿವರ್ಷ ಅತಿ ಹೆಚ್ಚು ಸಂಖ್ಯೆಯಲ್ಲಿ ಬಂದು ಸೇರುತ್ತವೆ. ಏಷ್ಯಾ ಖಂಡದಲ್ಲೇ ಇಷ್ಟು ದೊಡ್ಡ ಸಂಖ್ಯೆಯಲ್ಲಿ ಆನೆಗಳು ಸೇರುವ ಜಾಗ ಇದೊಂದೇ. ಸುತ್ತಮುತ್ತಲಿನ ಕಾಡಿನಲ್ಲಿರುವ ಹುಲಿ, ಚಿರತೆ, ಕಾಡುಕೋಣ ಸೇರಿದಂತೆ ಅಳಿವಿನಂಚಿನಲ್ಲಿರುವ ಎಷ್ಟೋ ಪ್ರಭೇದದ ಪ್ರಾಣಿಗಳು ಇಲ್ಲಿ ವಾಸಿಸುತ್ತವೆ. ಇಂಥ ಸೂಕ್ಷ್ಮ ಪ್ರದೇಶವೂ ಮನುಷ್ಯನ ಅತಿ ಬುದ್ಧಿವಂತಿಕೆಯ ಕೂಸಾದ ಪ್ಲಾಸ್ಟಿಕ್‌ನ ಹಾವಳಿಗೆ ನಲುಗಿದೆ. ಇದರ ಪರಿಣಾಮ ಮುಗ್ಧ ಕಾಡುಪ್ರಾಣಿಗಳೂ ಪ್ಲಾಸ್ಟಿಕ್‌ಗೆ ಬಲಿಯಾಗುವ ಪರಿಸ್ಥಿತಿಯನ್ನು ನಾವೇ ತಂದೊಡ್ಡಿದ್ದೇವೆ.

ಸ್ವಚ್ಛತಾ ಕಾರ್ಯಕ್ರಮದ ಅನುಭವ
ಮೊದಲಿಗೆ ಕಾಡು, ಪ್ರಾಣಿ, ಪ್ರಕೃತಿಪ್ರಿಯರಿಗೆ ಕಬಿನಿ ಎಂದೊಡನೆ ರೋಮಾಂಚನವಾಗುವುದು ಖಂಡಿತ. ಸಾಮಾನ್ಯವಾಗಿ ಸಫಾರಿಗೆ ಬಂದಾಗ ಬಸ್, ಜೀಪ್ ಅಥವಾ ಬೋಟ್‌ನಲ್ಲಿ ಕುಳಿತು ನೋಡಿ ಕಣ್ಣುತುಂಬಿಕೊಂಡಿರುತ್ತೇವೆ. ಯಾವುದೇ ಕಾರಣಕ್ಕೂ ಸಫಾರಿ ಜಾಗದಲ್ಲಿ ಕೆಳಗಿಳಿದು ಕಾಲಿಡಲು ಇಲಾಖೆಯ ಸಿಬ್ಬಂದಿ ಬಿಡುವುದಿಲ್ಲ. ಈಗ ಅದೇ ಕಾಡಿನಲ್ಲಿ, ಅದರಲ್ಲೂ ಹಿನ್ನೀರಿನಲ್ಲಿ ಒಂದು ಅರ್ಥಪೂರ್ಣ ಕಾರ್ಯಕ್ಕೆ ನಾವು ಭಾಗಿಯಾಗುವುದು ನಮ್ಮ ಭಾಗ್ಯವೇ ಸರಿ. ಅದಕ್ಕಾಗಿ ಸಂಬಂಧಪಟ್ಟ ವಲಯ ಅರಣ್ಯಾಧಿಕಾರಿಗಳಿಗೂ ಹಾಗೂ ಆಯೋಜಕರಿಗೂ ತುಂಬು ಹೃದಯದ ಧನ್ಯವಾದಗಳು.
ಸುಮಾರು 80 ಸ್ವಯಂಸೇವಕರು ಬೆಂಗಳೂರು, ಮೈಸೂರು, ಶಿವಮೊಗ್ಗ ಹಾಗೂ ಬೇರೆ ಬೇರೆ ಊರುಗಳಿಂದ ಬೆಳಗ್ಗೆ 8 ಗಂಟೆಯಷ್ಟರಲ್ಲಿ ಸೇರಿದ್ದೆವು. ಕರ್ನಾಟಕ ರಾಜ್ಯೋತ್ಸವದ ಆಚರಣೆಯೊಂದಿಗೆ ಚಟುವಟಿಕೆಯನ್ನು ಶುರುಮಾಡಿ, ಸುಮಾರು 5 ಗಂಟೆಗಳ ಕಾಲ ಹಿನ್ನೀರಿನ ಪ್ರದೇಶವನ್ನು ಸ್ವಚ್ಛಗೊಳಿಸಿ 200 ಚೀಲಗಳಷ್ಟು ಪ್ಲಾಸ್ಟಿಕ್ ತ್ಯಾಜ್ಯವನ್ನು ಸಂಗ್ರಹಿಸಿದೆವು. ಇಲಾಖೆಯು ಮೊಬೈಲನ್ನು ಕಾಡಿನೊಳಗೆ ಒಯ್ಯಲು ಅನುಮತಿ ಕೊಡದೆ ಇದ್ದಿದ್ದರಿಂದ ಕೆಲಸವು ಇನ್ನೂ ಸುಗಮವಾಗಿತ್ತು.
ನಾವೇನು ಮಾಡಬಹುದು?
- ಯಾವುದೇ ಪ್ರವಾಸದ ಸಮಯದಲ್ಲಿ ಅಥವಾ ಸಾಮಾನ್ಯ ದಿನಗಳಲ್ಲೂ ಪ್ಲಾಸ್ಟಿಕ್ ಅಥವಾ ಕಸವನ್ನು ರಸ್ತೆ ಬದಿಯಲ್ಲಿ, ಕೆರೆಗಳಲ್ಲಿ, ನದಿಗಳಲ್ಲಿ ಎಸೆಯಬೇಡಿ. ಅದು ಕೊನೆಗೆ ಎಲ್ಲಿಗೆ ಸೇರುತ್ತದೆ ಎಂದು ಊಹಿಸಲೂ ಅಸಾಧ್ಯ.
- ಸಿಂಗಲ್ ಯೂಸ್ ಪ್ಲಾಸ್ಟಿಕ್‌ನಿಂದ ದೂರವಿರಿ. ಮನೆಯಿಂದಲೇ ನೀರಿನ ಬಾಟಲಿ, ಬಟ್ಟೆಯ ಕೈಚೀಲ ಕೊಂಡೊಯ್ಯಿರಿ.
- ಯಾವುದೇ ಕಾಡುಪ್ರಾಣಿಗಳಿಗೆ (ಮಂಗನಿಗೂ ಸಹ) ಆಹಾರ ನೀಡಬೇಡಿ. ಯಾವುದಾದರೂ ಕಾಡುಪ್ರಾಣಿ ಸಂಕಷ್ಟದಲ್ಲಿದ್ದರೆ ತಕ್ಷಣವೇ ಅರಣ್ಯ ಇಲಾಖೆಯ ಸಹಾಯವಾಣಿ 1926ಕ್ಕೆ ಮಾಹಿತಿ ನೀಡಿ.

ಕಬಿನಿಯ ವಿಶೇಷತೆ
ಕಬಿನಿ ಅರಣ್ಯ ಪ್ರದೇಶ ಮತ್ತು ಅದರ ಹಿನ್ನೀರು ಏಷ್ಯಾ ಖಂಡದಲ್ಲೇ ಅತ್ಯಂತ ವಿಶಿಷ್ಟವಾದ ವನ್ಯಜೀವಿ ತಾಣಗಳಲ್ಲಿ ಒಂದಾಗಿದೆ. ಬೇಸಗೆಯ ಕಾಲದಲ್ಲಿ ನೀರು ಮತ್ತು ಆಹಾರವನ್ನರಸಿ ಬಂಡೀಪುರ, ನಾಗರಹೊಳೆ, ಕೇರಳದ ವಯನಾಡು ಹಾಗೂ ತಮಿಳುನಾಡಿನ ಮುದುಮಲೈ ಕಾಡುಗಳಿಂದ ನೂರಾರು ಸಂಖ್ಯೆಯಲ್ಲಿ ಆನೆಗಳು ಕಬಿನಿ ಹಿನ್ನೀರಿಗೆ ಬಂದು ಸೇರುತ್ತವೆ. ಏಷ್ಯಾದಲ್ಲಿಯೇ ಇಷ್ಟು ದೊಡ್ಡ ಪ್ರಮಾಣದಲ್ಲಿ ಆನೆಗಳು ಏಕಕಾಲದಲ್ಲಿ ಸೇರುವ ಏಕೈಕ ಜಾಗ ಇದಾಗಿದೆ. ಇದರ ಜತೆಗೆ ಕಬಿನಿಯ ದಟ್ಟ ಕಾಡುಗಳು ಅಳಿವಿನಂಚಿನಲ್ಲಿರುವ ಹುಲಿ, ಕಪ್ಪು ಚಿರತೆ (ಬ್ಲಾಕ್ ಪ್ಯಾಂಥರ್), ಕಾಡುಕೋಣ ಸೇರಿದಂತೆ ಅಪರೂಪದ ವನ್ಯಜೀವಿಗಳಿಗೆ ಆಶ್ರಯ ತಾಣವಾಗಿದ್ದು, ಪ್ರಕೃತಿ ಮತ್ತು ವನ್ಯಜೀವಿ ಪ್ರಿಯರಿಗೆ ಒಂದು ಅದ್ಭುತ ಸ್ವರ್ಗವಾಗಿದೆ.