ಅಮರ್ ಶಹೀದ್ ಚಂದ್ರಶೇಖರ್ ಆಝಾದ್ ಪಾರ್ಕ್
ʼಆಝಾದ್ ಗ್ಯಾಲರಿʼಯಲ್ಲಿ ಚಿತ್ರಗಳ, ಚಾರಿತ್ರಿಕ ದಾಖಲೆಗಳು ಮುಂತಾದವುಗಳ ಮೂಲಕ ಭಾರತದ ಸ್ವಾತಂತ್ರ್ಯದ ಹೋರಾಟದ ಕ್ರಾಂತಿಕಾರಿ ಮಾರ್ಗ ಮತ್ತು ಕ್ರಾಂತಿಕಾರಿಗಳ ಕಥೆಯನ್ನು ಹೇಳಲಾಗಿದೆ. ದೃಶ್ಯ ಮತ್ತು ಶಬ್ದದ ಮಾಧ್ಯಮದ ಮೂಲಕ ಸತತವಾಗಿ ಚಂದ್ರಶೇಖರ್ ಆಝಾದ್ ಅವರ ವೃತ್ತಾಂತ ಬಿತ್ತರವಾಗುತ್ತಿರುತ್ತದೆ.
- ಸಿ.ಎ.ವಿಲಾಸ ಹುದ್ದಾರ
ಪ್ರಯಾಗರಾಜ್‌ನಲ್ಲಿರುವ ಮೋತಿಲಾಲ್ ನೆಹರು ಅವರ ಆನಂದ ಭವನ ಸ್ವಾತಂತ್ರ್ಯ ಪೂರ್ವದ ಎಷ್ಟೋ ನಿರ್ಣಯಗಳಿಗೆ ಸಾಕ್ಷಿಯಾಗಿ ನಿಂತಿದೆ. 1927ರಲ್ಲಿ ಶ್ರೀ ಮೋತಿಲಾಲ್ ನೆಹರು ತಮ್ಮ ಕುಟುಂಬದ ವಾಸಕ್ಕಾಗಿ ಈ ಭವ್ಯ ಭವನದ ನಿರ್ಮಾಣ ಮಾಡಿದರು. ಮಹಾತ್ಮ ಗಾಂಧಿಗಾಗಿ ಇಲ್ಲಿ ಪ್ರತ್ಯೇಕ ಕೋಣೆಯ ವ್ಯವಸ್ಥೆಯಿರುವುದನ್ನೂ ಕಾಣಬಹುದು. ನೆಹರು ಮನೆತನದವರು ಉಪಯೋಗಿಸುತ್ತಿದ್ದ ದೈನಂದಿನ ವಸ್ತುಗಳನ್ನು ಇಲ್ಲಿ ಪ್ರದರ್ಶನಕ್ಕೆ ಇಡಲಾಗಿದೆ. ಈ ಭವನವು ಶ್ರೀಮಂತಿಕೆಯ ಕುರುಹಾಗಿ ನಿಂತರೆ ಇಲ್ಲಿಂದ ಸುಮಾರು ಒಂದು ಕಿಮೀ.ದೂರದಲ್ಲಿ ದೇಶಕ್ಕಾಗಿ ತನ್ನ ಪ್ರಾಣವನ್ನೇ ಮುಡಿಪಾಗಿಟ್ಟ ಚಂದ್ರಶೇಖರ್ ಆಝಾದರ ಮೆಮೋರಿಯಲ್ ಪಾರ್ಕ್ ಇದೆ. ಇದೇ ಸ್ಥಳದಲ್ಲಿ ಚಂದ್ರಶೇಖರ್ ಆಝಾದ್ 27-02-1932ರಂದು ಬ್ರಿಟೀಷ್ ಪೊಲೀಸರ ಜತೆ ನಡೆದ ಘನಘೋರ ಗುಂಡಿನ ಕಾಳಗದಲ್ಲಿ ದೇಶಕ್ಕಾಗಿ ಆತ್ಮಾಹುತಿ ನೀಡಿದರು.
ಇದನ್ನೂ ಓದಿ: ಕಲ್ಲಿನಲ್ಲಿ ಅರಳಿದ ಚಾಲುಕ್ಯರ ಕನಸು
ತಮ್ಮ 24ನೆಯ ವಯಸ್ಸಿನಲ್ಲಿ ತಾವು ಜೀವಂತ ಬ್ರಿಟೀಷರಿಗೆ ಶರಣಾಗಬಾರದು ಎಂದು ಪ್ರತಿಜ್ಞೆ ಮಾಡಿದಂತೆ ತಮ್ಮ ಸಹೋದ್ಯೋಗಿಗಳನ್ನು ಕಾಪಾಡುತ್ತ ತಮ್ಮ ಕಡೆಗೆ ಇದ್ದ ಮದ್ದು ಗುಂಡುಗಳು ಮುಗಿದಾಗ ತಮಗೆ ತಾವೇ ಕೊನೆಯಲ್ಲಿ ಉಳಿದಿದ್ದ ಒಂದೇ ಒಂದು ಗುಂಡಿನಿಂದ ಆತ್ಮಸಮರ್ಪಣೆ ಮಾಡಿಕೊಂಡರು. ಈ ಪಾರ್ಕನ್ನು ನಾವು ಪವೇಶಿಸಿದಾಗ ಎದುರಿಗೆ ಇರುವ ವೇದಿಕೆಯ ಮೇಲೆ ಚಂದ್ರಶೇಖರ್ ಆಝಾದ್ ಅವರ ಸ್ಮಾರಕ ಕಾಣಿಸಿತು. ಮೀಸೆ ತಿರುವುತ್ತಿರುವ, ಕಟ್ಟು ಮಸ್ತಾದ ದೇಹ ಇರುವ ಚಂದ್ರಶೇಖರ್ ಆಝಾದ್ ಅವರ ಭವ್ಯ ವಿಗ್ರಹವನ್ನು ವೇದಿಕೆಯ ಮೇಲೆ ಸ್ಥಾಪಿಸಲಾಗಿದೆ. ಅಲ್ಲಿಯೇ ಬಲಭಾಗಕ್ಕೆ ಸುಮಾರು ಒಂದು ಕಿಮೀ. ಹೋದರೆ ಭವ್ಯವಾದ ಕೆಂಪುಬಣ್ಣದ ಅಲ್ಹಾಬಾದ್ ವಸ್ತುಸಂಗ್ರಹಾಲಯವಿದೆ. ಇಲ್ಲಿನ ಮುಖ್ಯ ಆಕರ್ಷಣೆ ಚಂದ್ರಶೇಖರ್ ಆಝಾದ್ ಮತ್ತು ಇನ್ನಿತರ ಕ್ರಾಂತಿಕಾರಿಗಳ/ಕ್ರಾಂತಿಕಾರಿ ಘಟನೆಗಳ ವಿಸ್ತೃತ ಮಾಹಿತಿಗಳು.

ಈ ವಸ್ತುಸಂಗ್ರಹಾಲಯದ ಹೊರಗೆ ಕೂಡ ಚಂದ್ರಶೇಖರ್ ಆಝಾದ್ ಆಕರ್ಷಕ ಪ್ರತಿಮೆಯನ್ನು ಕಾಣಬಹುದು. ಈ ವಸ್ತು ಸಂಗ್ರಹಾಲಯದಲ್ಲಿ ಸುಮಾರು 16 ಗ್ಯಾಲರಿಗಳು ಇದ್ದು ವಿವಿಧ ಕಲಾವಸ್ತುಗಳ ಸಂಗ್ರಹಣೆ ಇದೆ. ಕಲ್ಲಿನ ಶಿಲ್ಪಗಳು, ಟೆರ‍್ರಾಕೋಟಾ, ಅಲಂಕಾರಿಕ ವಸ್ತುಗಳು, ಶಸ್ತ್ರಾಸ್ತ್ರಗಳು, ನಾಣ್ಯಗಳು, ರಿಸರ್ಚ್ ಸ್ಕಾಲರ್‌ಗಳಿಗೆ ಗ್ರಂಥಾಲಯ, ಹಸ್ತಪ್ರತಿಗಳು ಹಾಗೂ ಮುಂತಾದವುಗಳ ಅದ್ಭುತ ಸಂಗ್ರಹ ಇಲ್ಲಿದೆ.
ʼಆಝಾದ್ ಗ್ಯಾಲರಿʼಯಲ್ಲಿ ಚಿತ್ರಗಳ, ಚಾರಿತ್ರಿಕ ದಾಖಲೆಗಳು ಮುಂತಾದವುಗಳ ಮೂಲಕ ಭಾರತದ ಸ್ವಾತಂತ್ರ್ಯದ ಹೋರಾಟದ ಕ್ರಾಂತಿಕಾರಿ ಮಾರ್ಗ ಮತ್ತು ಕ್ರಾಂತಿಕಾರಿಗಳ ಕಥೆಯನ್ನು ಹೇಳಲಾಗಿದೆ. ದೃಶ್ಯ ಮತ್ತು ಶಬ್ದದ ಮಾಧ್ಯಮದ ಮೂಲಕ ಸತತವಾಗಿ ಚಂದ್ರಶೇಖರ್ ಆಝಾದ್ ಅವರ ವೃತ್ತಾಂತ ಬಿತ್ತರವಾಗುತ್ತಿರುತ್ತದೆ. ಸುಭಾಷ್ ಚಂದ್ರ ಬೋಸ್ ಅವರ ʼಆಝಾದ್ ಹಿಂದ್ ಫೌಜ್ʼ, ರೈರ್ಸ್ ಬಿಲ್ಡಿಂಗ್ ಘಟನೆಯ ಗುಪ್ತಾ, ಲಾಲಾ ಲಜಪತ್ ರಾಯ್, ಭಗತ್ ಸಿಂಗ್, ಮಹಿಳಾ ಕ್ರಾಂತಿಕಾರಿಗಳು ಹಾಗೂ ಹಲವರ ಮತ್ತು ಹಲವು ಪ್ರಮುಖ ಘಟನೆಗಳ ಭಾವಚಿತ್ರಗಳನ್ನು ಕಾಣಬಹುದು.

ಮುಖ್ಯವಾಗಿ ʼಚಂದ್ರಶೇಖರ ಆಝಾದ ಅವರ ಸ್ವಯಂ ತ್ಯಾಗʼ ಎಂಬ ಶೀರ್ಷಿಕೆ ಅಡಿ ಒಂದು ಫಲಕವಿದ್ದು ಅದರ ಸಾರಾಂಶ ಹೀಗಿದೆ. ʼಆಜಾದ್ ಅವರು ಸಂಘಟನಾ ಕೌಶಲ್ಯಕ್ಕೆ ಹೆಸರುವಾಸಿ ಆಗಿದ್ದರು. ಅವರು ಹಿಂದೂಸ್ತಾನ್ ಸೋಷಿಯಲಿಸ್ಟ್ ರಿಪಬ್ಲಿಕನ್ ಸಂಘವನ್ನು ಪುನಃ ಸ್ಥಾಪನೆ ಮಾಡುವಲ್ಲಿ ನಿರ್ಣಯ ಪಾತ್ರವಹಿಸಿದರು. ಲಾಲಾ ಲಜಪತ್ ರಾಯ್ ಅವರ ನಿಧನದ ಸೇಡಿನ ಅಂಗವಾಗಿ ಬ್ರಿಟಿಷ್ ಸಹಾಯಕ ಸುಪರಿಂಡೆಂಟ್ ಆಫ್ ಪೋಲೀಸ್ ಜೆ.ಪಿ. ಸೌಂಡರ್ಸ್ ಹತ್ಯೆ ಮಾಡಿದರು. ಇದರಿಂದ ಬ್ರಿಟಿಷರಿಗೆ ಬೇಕಾದ ವ್ಯಕ್ತಿ ಆದರು. ಎಷ್ಟೋ ವರ್ಷಗಳು ಚಾಣಾಕ್ಷತನದಿಂದ ತಪ್ಪಿಸಿಕೊಂಡರೂ ಒಬ್ಬ ಜತೆಗಾರನ ವಿಶ್ವಾಸ ದ್ರೋಹದಿಂದ ಪೋಲೀಸರು ಅವರನ್ನು ಸುತ್ತುವರಿಯುವಂತಾಯಿತು. ಆದರೆ, ತಮ್ಮ ಪ್ರತಿಜ್ಞೆಯಂತೆ ಅವರು ಪೊಲೀಸರ ಕೈಗೆ ಸಿಗದೆ ತಮಗೆ ತಾವೇ ಗುಂಡು ಚಲಾಯಿಸಿ ಹುತಾತ್ಮರಾದರು.