ಪ್ರವಾಸಿಗರನ್ನು ಗೌರವದಿಂದ ಕಾಣುವ ಈ 7 ಸ್ಥಳಗಳ ಬಗ್ಗೆ ನೀವು ತಿಳಿಯಲೇಬೇಕು..
"ಅತಿಥಿ ದೇವೋ ಭವ" ಅಂದರೆ ಅತಿಥಿಗಳನ್ನು ದೇವರಂತೆ ಕಾಣುವ ಸಂಪ್ರದಾಯವನ್ನು ಪ್ರಾಚೀನ ಕಾಲದಿಂದಲೂ ಭಾರತೀಯರು ರೂಢಿಸಿಕೊಂಡಿದ್ದಾರೆ.ಭಾರತದ ಹೊರತಾಗಿ ಅತಿಥಿಗಳನ್ನು ಗೌರವದಿಂದ ಬರಮಾಡಿಕೊಳ್ಳುವ ದೇಶಗಳು ಯಾವೆಲ್ಲಾ ಅಂತ ನಿಮಗೆ ಗೊತ್ತಾ?
ಯಾವುದೇ ದೇಶಕ್ಕೆ ಭೇಟಿ ಕೊಡುವಾಗಲೂ ಪ್ರವಾಸಿಗರಿಗೆ ಸಾಕಷ್ಟು ನಿರೀಕ್ಷೆಗಳಿರುತ್ತವೆ. ಅಲ್ಲಿನ ಪ್ರವಾಸಿ ತಾಣಗಳಿಗೆ ಭೇಟಿ ನೀಡುವುದರ ಜೊತೆಗೆ ಸಂಸ್ಕೃತಿ, ಸಂಪ್ರದಾಯಗಳನ್ನು ತಿಳಿಯುವುದು, ಸ್ಥಳೀಯ ಆಹಾರವನ್ನು ಸವಿಯುವುದು ಹೀಗೆ ಸಾಕಷ್ಟು ಯೋಜನೆಗಳೊಂದಿಗೆ ಬರುವ ಪ್ರವಾಸಿಗರಿಗೆ ಅಲ್ಲಿ ಸಿಗುವ ಗೌರವ ಆದರಣೀಯ ಭಾವವು ಅತಿ ಮುಖ್ಯವಾಗಿರುತ್ತದೆ.
ಹಾಗಾದರೆ ಪ್ರಪಂಚದ ಯಾವ್ಯಾವ ದೇಶಗಳು ಪ್ರವಾಸಿಗರನ್ನು ಆಪ್ತರಂತೆ ಕಾಣುತ್ತದೆ? ಯಾವೆಲ್ಲಾ ದೇಶಗಳು ಸಂದರ್ಶಕರನ್ನು ಗೌರವದಿಂದ ಬರಮಾಡಿಕೊಂಡು, ವಿಶೇಷ ಆತಿಥ್ಯವನ್ನು ಒದಗಿಸುತ್ತವೆ ಎಂಬುದರ ಮಾಹಿತಿ ಇಲ್ಲಿವೆ.
ಭಾರತ -"ಅತಿಥಿ ದೇವೋ ಭವ"
"ಅತಿಥಿ ದೇವೋ ಭವ" ಅಂದರೆ ಅತಿಥಿಗಳನ್ನು ದೇವರಂತೆ ಕಾಣುವ ಸಂಪ್ರದಾಯವನ್ನು ಪ್ರಾಚೀನ ಕಾಲದಿಂದಲೂ ಭಾರತೀಯರು ರೂಢಿಸಿಕೊಂಡಿದ್ದಾರೆ. ಪ್ರವಾಸೋದ್ಯಮ ರಂಗವೂ ಇದಕ್ಕೆ ಹೊರತಾಗಿಲ್ಲ. ಸಣ್ಣ ಪುಟ್ಟ ಲಾಡ್ಜ್ ಗಳಿಂದ ತೊಡಗಿ, ಐಷಾರಾಮಿ ಹೊಟೇಲ್ಗಳೂ ಸಹ ಪ್ರವಾಸಿಗರನ್ನು ತುಂಬು ಹೃದಯದಿಂದ ಬರಮಾಡಿಕೊಳ್ಳುತ್ತದೆ. ಅತಿಥಿಗಳಿಗೆ ಅಗತ್ಯವಾದ ಸವಲತ್ತುಗಳನ್ನು ಮಾಡಿಕೊಡುವುದು ಮಾತ್ರವಲ್ಲ ತಮ್ಮ ದೇಶಕ್ಕೆ ಹಿಂದಿರುಗುವಾಗ ಹೊಚ್ಚ ಹೊಸ ಅನುಭವಗಳನ್ನು ನೀಡುತ್ತದೆ.

ಭೂತಾನ್ - ಸಂತೋಷದ ಸಾಮ್ರಾಜ್ಯ
ಭೂತಾನ್ ಅನ್ನು ಸಾಮಾನ್ಯವಾಗಿ "ಸಂತೋಷದ ಸಾಮ್ರಾಜ್ಯ" ಎಂದು ಕರೆಯಲಾಗುತ್ತದೆ. ಯಾಕೆಂದರೆ ಪ್ರವಾಸೋದ್ಯಮದಿಂದ ಕೇವಲ ದೇಶದ ಆರ್ಥಿಕ ಬೆಳವಣಿಗೆಯ ಬಗೆಗೆ ಮಾತ್ರವೇ ಚಿಂತಿಸದೆ ಒಟ್ಟು ರಾಷ್ಟ್ರೀಯ ಸಂತೋಷದ ಮೇಲೆ ಕೇಂದ್ರೀಕರಿಸುತ್ತಿರುವುದು ಗಮನಾರ್ಹ ವಿಚಾರ. ಇದೇ ಕಾರಣಕ್ಕೆ ಇಲ್ಲಿಗೆ ಬರುವ ಸಂದರ್ಶಕರು ಹಾಗೂ ಪ್ರವಾಸಿಗರನ್ನು ಬಹಳ ಆಪ್ತವಾಗಿ ನಡೆಸಿಕೊಳ್ಳಲಾಗುತ್ತದೆ. ಭೂತಾನ್ ಗೆ ಬರುವ ಪ್ರವಾಸಿಗರನ್ನು ಸಾಂಪ್ರದಾಯಿಕವಾಗಿ ಬರಮಾಡಿಕೊಳ್ಳಲಾಗುತ್ತದೆ.
ಜಪಾನ್ - ಒಮೊಟೆನಾಶಿ ಕಲೆ
ಜಪಾನ್ನಲ್ಲಿ, "ಒಮೊಟೆನಾಶಿ" ಎಂಬ ಪರಿಕಲ್ಪನೆಯು ಆತಿಥ್ಯದ ಮನೋಭಾವವನ್ನು ತಿಳಿಸುತ್ತದೆ. ಯಾವುದೇ ನಿರೀಕ್ಷೆಗಳಿಲ್ಲದೆ, ಬಂದಂಥ ಅತಿಥಿಗಳ ಬೇಕು ಬೇಡಗಳನ್ನು ಸಾಕಾರಗೊಳಿಸುವತ್ತ ಜಪಾನಿಗರು ಗಮನಹರಿಸುತ್ತಾರೆ. ನೀವು ಜಪಾನಿಗೆ ಬಂದ ಕ್ಷಣದಿಂದ, ನಿಮ್ಮನ್ನು ಅತ್ಯಂತ ಗೌರವದಿಂದ ನಡೆಸಿಕೊಳ್ಳುವ ಅಲ್ಲಿನ ಸ್ಥಳೀಯರು, ಅಲ್ಲಿನ ಸಂಪ್ರದಾಯ, ಆಹಾರ ಪದ್ಧತಿಯ ಮೂಲಕವೂ ಪ್ರವಾಸಿಗರ ಗಮನ ಸೆಳೆಯುತ್ತಾರೆ.

ಯುನೈಟೆಡ್ ಅರಬ್ ಎಮಿರೇಟ್ಸ್ - ಶ್ರೀಮಂತಿಕೆಯ ನಾಡು
ಯುನೈಟೆಡ್ ಅರಬ್ ಎಮಿರೇಟ್ಸ್ (UAE) ಐಷಾರಾಮಿ ದೇಶಗಳಲ್ಲಿ ಒಂದು. ನೀವು ದುಬೈ ಮತ್ತು ಅಬುಧಾಬಿಯಂತಹ ನಗರಗಳಿಗೆ ಕಾಲಿಟ್ಟ ಕ್ಷಣದಿಂದಲೇ, ನೀವು ಐಷಾರಾಮಿ ಪ್ರಪಂಚದಲ್ಲಿರುವ ಅನುಭವ ನಿಮಗಾಗುತ್ತದೆ. ಉನ್ನತ ದರ್ಜೆಯ ಹೋಟೆಲ್ಗಳು ತಮ್ಮ ಅತಿಥಿಗಳ ಪ್ರತಿಯೊಂದು ಬೇಡಿಕೆಯನ್ನು ಪೂರೈಸಲು ತರಬೇತಿ ಪಡೆದ ಸಿಬ್ಬಂದಿಯೊಂದಿಗೆ ವಿಶೇಷ ಸೇವೆಯನ್ನು ನೀಡುತ್ತವೆ..
ಇಟಲಿ – ಅತಿಥಿಗಳಲ್ಲ ಕುಟುಂಬದ ಸದಸ್ಯರು
ಪಾಶ್ಚಾತ್ಯ ಮತ್ತು ದಕ್ಷಿಣ ಆಫ್ರಿಕಾದ ಪ್ರಮುಖ ದೇಶಗಳಲ್ಲೊಂದಾದ ಇಟಲಿಯು ಅತಿಥಿಗಳನ್ನು ತನ್ನದೇ ಕುಟುಂಬದವರಂತೆ ನೋಡಿಕೊಳ್ಳುತ್ತದೆ. ಇಲ್ಲಿನ ಸಣ್ಣ ಪಟ್ಟಣಗಳನ್ನು ಭೇಟಿ ಕೊಟ್ಟರಂತೂ ಈ ಮಾತು ಸತ್ಯವೆಂಬುದು ಮತ್ತೆ ಮತ್ತೆ ಸಾಬೀತಾಗುತ್ತದೆ. ಬಂದಂತಹ ಅತಿಥಿಗಳಿಗೆ ತಮ್ಮ ದೇಶದ ಸಂಪ್ರದಾಯವನ್ನು ತೋರಿಸಿಕೊಟ್ಟು,ಇಟೆಲಿಯ ಪಾಸ್ತಾ ಖಾದ್ಯಗಳು ಸೇರಿದಂತೆ ವಿಭಿನ್ನ ಆಹಾರ ಪದಾರ್ಥಗಳನ್ನು ಉಣಬಡಿಸುವ ಅವರ ಅತಿಥಿಗಳ ಉಪಚಾರ ಕ್ರಮವಂತೂ ಒಮ್ಮೆ ಭೇಟಿ ನೀಡಿಯೇ ತಿಳಿದುಕೊಳ್ಳಬೇಕಿದೆ.
ಥೈಲ್ಯಾಂಡ್ - ನಗುವಿನ ನಾಡು
ಥೈಲ್ಯಾಂಡ್ ಅನ್ನು "ನಗುವಿನ ನಾಡು" ಎಂದು ಕರೆಯಲಾಗುತ್ತದೆ.
ಇಲ್ಲಿನ ಸ್ಥಳೀಯರ ಸ್ನೇಹಪರ ಸ್ವಭಾವ, ಅತಿಥಿಗಳನ್ನು ಬರಮಾಡಿಕೊಳ್ಳುವ ಸಂಪ್ರದಾಯ ಮಾತ್ರವಲ್ಲದೆ ಥಾಯ್ ಆತಿಥ್ಯವು ಪ್ರವಾಸಿಗರನ್ನು ಬೆರಗುಗೊಳಿಸುತ್ತದೆ. ನೀವು ಸಾಂಪ್ರದಾಯಿಕ ಥಾಯ್ ಮಸಾಜನ್ನು ಆನಂದಿಸುತ್ತಿರಲಿ ಅಥವಾ ಸ್ಥಳಿಯ ಮಾರುಕಟ್ಟೆಗಳನ್ನು ಸುತ್ತಾಡುತ್ತಿರಲಿ, ಥೈಲ್ಯಾಂಡ್ನಲ್ಲಿನ ಆತಿಥ್ಯವು ಪ್ರತಿಯೊಬ್ಬ ಸಂದರ್ಶಕನನ್ನು ಗೌರವದಿಂದ ಕಾಣುತ್ತದೆ.

ಮೊರಾಕೊ - ಉದಾರತೆಯ ಸಂಸ್ಕೃತಿ
ಶ್ರೀಮಂತ ಸಂಪ್ರದಾಯಗಳು ಮತ್ತು ರೋಮಾಂಚಕ ಸಂಸ್ಕೃತಿಯ ನಾಡು ಉತ್ತರ ಆಫ್ರಿಕಾದ ಮೊರಾಕೊ. ಇಲ್ಲಿರಿಯಾಡ್ಸ್ ಎಂದು ಕರೆಯಲ್ಪಡುವ ಸಾಂಪ್ರದಾಯಿಕ ಅತಿಥಿಗೃಹಗಳು, ಪ್ರವಾಸಿಗರನ್ನು ಗೌರವದಿಂದ ನಡೆಸಿಕೊಳ್ಳುವ ರೀತಿಗೆ ಎಲ್ಲರೂ ಬೆರಗಾಗಲೇಬೇಕು. ಮೊರಾಕೊ ಸಂಸ್ಕೃತಿಯಲ್ಲಿ ಪ್ರವಾಸಿಗರನ್ನು ಅತ್ಯಂತ ಆದರದಿಂದ ಕಾಣಲಾಗುತ್ತದೆ. ಸ್ಥಳೀಯ ಆಚರಣೆಗಳು ಮತ್ತು ಹಬ್ಬಗಳಲ್ಲಿ ಪ್ರವಾಸಿಗರನ್ನು ಹೆಚ್ಚಾಗಿ ಆಹ್ವಾನಿಸಲಾಗುತ್ತದೆ. ಈ ಉದಾರತೆಯ ಸಂಸ್ಕೃತಿಯು ಪ್ರತಿಯೊಬ್ಬ ಪ್ರವಾಸಿಗನು ಮೊರಾಕೊಗೆ ಭೇಟಿ ಕೊಡುವಮತೆ ಮಾಡುತ್ತದೆ.
ಪ್ರಪಂಚದಾದ್ಯಂತ ಜನಪ್ರಿಯವಾಗಿರುವ ಈ ಸ್ಥಳಗಳಿಗೆ ನೀವೂ ಒಮ್ಮೆ ಭೇಟಿ ಕೊಟ್ಟುನೀಡಿ. ಬರಿಯ ಪ್ರವಾಸಿ ತಾಣಗಳನ್ನಷ್ಟೇ ಕಣ್ತುಂಬಿಕೊಳ್ಳುವುದಲ್ಲ. ಜೊತೆಗೆ ಅಲ್ಲಿನ ಆಹಾರ ಪದ್ಧತಿ, ಸಂಸ್ಕೃತಿ, ಸಂಪ್ರದಾಯಗಳನ್ನು ನೋಡಿ, ಅನುಭವಿಸಿಕೊಂಡು ಆತಿಥ್ಯ ಸ್ವೀಕರಿಸಿ ಬನ್ನಿ..