ನಿಗೂಢ ಪಥಗಳಲ್ಲಿ ನೆಮ್ಮದಿಯ ತಾಣ
ನಾನು ಕಂಡಂತೆ ಜಂಗಲ್ ಲಾಡ್ಜಸ್ ಮತ್ತು ರೆಸಾರರ್ಟ್ಸ್‌ನ ಎಲ್ಲ ಕೇಂದ್ರಗಳಲ್ಲೂ ಸಿಬ್ಬಂದಿಯವರು ಬಹಳ ಸ್ನೇಹದಿಂದ ವರ್ತಿಸುತ್ತಾರೆ. ವೀರಪ್ಪನ್ ಬಗ್ಗೆ ಕಥೆಗಳನ್ನು ಹೇಳುತ್ತಾ, ಅವನು ಒಬ್ಬ ದುಷ್ಟನಾದರೂ ಗೋಪಿನಾಥಂ ಗ್ರಾಮಕ್ಕೆ ಅನುಕೂಲಗಳನ್ನು ಮಾಡಿಕೊಟ್ಟುದರಿಂದ ಇಲ್ಲಿನ ಜನರು ಅವನನ್ನು ಆದರಿಸುತ್ತಾರೆಂದು ಸಿಬ್ಬಂದಿಯವರು ಹೇಳಿದಾಗ ಆಶ್ಚರ್ಯವಾಯಿತು.
- ಡಾ. ಬಿ.ಆರ್.ಸುಹಾಸ್
ವೀರಪ್ಪನ್ ಹುಟ್ಟಿದ ಹಳ್ಳಿ ಗೋಪಿನಾಥಂ. ಆ ಕಾರಣದಿಂದಲೇ ಯಾರೂ ಇತ್ತ ಮುಖ ಮಾಡುತ್ತಿರಲಿಲ್ಲ. ಆದರೆ ಈಗ ವೀರಪ್ಪನ್ ಅಧ್ಯಾಯ ಮುಗಿದು, ಗೋಪಿನಾಥಂನ ಪ್ರಕೃತಿ ಸೌಂದರ್ಯದ ನಿಧಿ ಅನಾವರಣಗೊಳ್ಳುತ್ತಿದೆ. ಇಲ್ಲೊಂದು ಅಲೌಕಿಕ ಮತ್ತು ನಿಗೂಢವೆನಿಸುವ ಪ್ರಕೃತಿ ಸೌಂದರ್ಯವಿದೆ. ಮನಸಿಗೆ ಮುದ ತಂದು ಮೈಮರೆಯುವಂತೆ ಮಾಡುವ ದಿವ್ಯಾನುಭವ ಸಿಗುತ್ತದೆ. ಹಾಗಾಗಿಯೇ ಜಂಗಲ್ ಲಾಡ್ಜಸ್‌ನವರು ಇಲ್ಲಿನ ಕ್ಯಾಂಪ್‌ಗೆ ಗೋಪಿನಾಥಂ ಮಿಸ್ಟ್ರಿ ಟ್ರೇಲ್ಸ್ ಎಂದು ಹೆಸರಿಟ್ಟಿದ್ದಾರೆ. ಅಂದರೆ ಗೋಪಿನಾಥಂನ ನಿಗೂಢ ಪಥಗಳು ಎಂದರ್ಥ.
ಗೋಪಿನಾಥಂನಲ್ಲಿ ಓಡಾಟ.. ಜೆಎಲ್‌ಆರ್ ಫುಲ್ ಊಟ
ಗೋಪಿನಾಥಂ ವಲಯದ ಕಾವೇರಿ ವನ್ಯಜೀವಿ ಅಭಯಾರಣ್ಯದ ಚೆಕ್ ಪೋಸ್ಟ್ ತಲುಪಿ, ಶುಲ್ಕ ಕಟ್ಟಲು ಗಾಡಿ ನಿಲ್ಲಿಸಲಾಯಿತು. ಇಲ್ಲಿ ಕಾಡಿನ ಜುಂಯ್ ಗುಟ್ಟುವ ಶಬ್ದ, ಅಲ್ಲಲ್ಲಿ ನವಿಲಿನ ಶಬ್ದಗಳು, ಸುತ್ತಲಿನ ಹಸಿರು ವನರಾಜಿ, ತಂಪಾದ ಹವೆ, ಬಹಳ ಮುದ ತಂದವು. ಚೆಕ್ ಪೋಸ್ಟ್ ದಾಟಿ ಮುಂದೆ ಹೋಗುತ್ತಿದ್ದಂತೆ ದಾರಿಯಲ್ಲೇ ಚುಕ್ಕಿ ಜಿಂಕೆಗಳ ಒಂದು ಹಿಂಡು ಕಾಣಿಸಿತು. ಪಾಲಾರ್- ಗೋಪಿನಾಥಂ ರಸ್ತೆಯಲ್ಲಿ ಹೋಗುತ್ತಾ ಎರಡೂ ಬದಿಗಳಲ್ಲಿನ ಬಂಡೆಗಲ್ಲು ಸಹಿತವಾದ ಹಸಿರು ಅರಣ್ಯದ ಸೊಬಗನ್ನು ಸವಿಯುತ್ತಾ ಸಾಗಿದೆ. ಇನ್ನು ಸುಮಾರು ಇಪ್ಪತ್ತು ಕಿಮೀಗಳಲ್ಲಿ ಗೋಪಿನಾಥಂ ತಲುಪುವವರಿದ್ದೆವು. ದಾರಿಯಲ್ಲಿ ನವಿಲುಗಳು ಹಾಗೂ ಶಿಕ್ರ ಎಂಬ ಹದ್ದುವಿನಂಥ ಪಕ್ಷಿ ಕಂಡವು.

ಸ್ನೇಹಮಯ ವಾತಾವರಣ
ಗೋಪಿನಾಥಂ ಮಿಸ್ಟ್ರಿ ಟ್ರೇಲ್ಸ್ ಎಂಬ ದೊಡ್ಡ ಫಲಕ ನಮ್ಮನ್ನು ಸ್ವಾಗತಿಸಿತು. ಕಚೇರಿ ಹಾಗೂ ಸಭಾಂಗಣ ಒಟ್ಟಿಗಿದ್ದು ಇದಕ್ಕೆ ಸುಪ್ರಸಿದ್ಧ ಅರಣ್ಯಾಧಿಕಾರಿಗಳಾಗಿದ್ದ ದಿ.ಪಿ.ಶ್ರೀನಿವಾಸ್ ಅವರ ಹೆಸರನ್ನಿಟ್ಟಿದ್ದಾರೆ. ಇಲ್ಲಿನ ಸಿಬ್ಬಂದಿಯವರು ಸ್ವಾಗತ ಪಾನೀಯ ನೀಡಿ, ಒಂದು ಕಾಟೇಜ್ ನಿಗದಿಪಡಿಸಿದರು. ಅನಂತರ, ಆ ದಿನದ ಹಾಗೂ ಮರುದಿನದ ಚಟುವಟಿಕೆಗಳ ವಿವರಗಳನ್ನು ಹೇಳಿದರು. ನಾನು ಕಂಡಂತೆ ಜಂಗಲ್ ಲಾಡ್ಜಸ್ ಮತ್ತು ರೆಸಾರರ್ಟ್ಸ್‌ನ ಎಲ್ಲ ಕೇಂದ್ರಗಳಲ್ಲೂ ಸಿಬ್ಬಂದಿಯವರು ಬಹಳ ಸ್ನೇಹದಿಂದ ವರ್ತಿಸುತ್ತಾರೆ. ವೀರಪ್ಪನ್ ಬಗ್ಗೆ ಕಥೆಗಳನ್ನು ಹೇಳುತ್ತಾ, ಅವನು ಒಬ್ಬ ದುಷ್ಟನಾದರೂ ಗೋಪಿನಾಥಂ ಗ್ರಾಮಕ್ಕೆ ಅನುಕೂಲಗಳನ್ನು ಮಾಡಿಕೊಟ್ಟುದರಿಂದ ಇಲ್ಲಿನ ಜನರು ಅವನನ್ನು ಆದರಿಸುತ್ತಾರೆಂದು ಸಿಬ್ಬಂದಿಯವರು ಹೇಳಿದಾಗ ಆಶ್ಚರ್ಯವಾಯಿತು.

ಇಲ್ಲಿನ ಕಾಟೇಜ್‌ಗಳು ಬಹಳ ಅಂದವಾಗಿವೆ. ಮುದ್ದಾದ ಪುಟ್ಟ ಗುಡಿಸಲಿನ ಆಕಾರದಲ್ಲಿರುವ ಇವು, ವಾಸ್ತವವಾಗಿ ಟೆಂಟ್ ಕಾಟೇಜ್‌ಗಳು. ಹುಲ್ಲಿನ ಮೇಲ್ಛಾವಣಿ ಹೊಂದಿದ್ದು, ಗೋಡೆಗಳೆಲ್ಲವೂ ಟಾರ್ಪಾಲಿನಿಂದ ಮಾಡಲಾಗಿದ್ದು, ಶೌಚಾಲಯದ ಗೋಡೆ ಹಾಗೂ ಕಾಟೇಜ್ ನಿಂತಿರುವ ಎತ್ತರದ ತಳಹದಿ ಮಾತ್ರ ಇಟ್ಟಿಗೆಯದ್ದಾಗಿವೆ. ಕಾಟೇಜ್ ನ ಒಳಗೆ ಶೌಚಾಲಯ ಸೇರಿದಂತೆ ಎಲ್ಲವೂ ಸ್ವಚವಾಗಿವೆ. ಒಟ್ಟು ಹತ್ತು ಕಾಟೇಜ್‌ಗಳಿದ್ದು ಇವುಗಳ ಸುತ್ತಲೂ ಬಂಡೆ ಕಲ್ಲುಗಳ ಸೊಗಸಾದ ದಿಬ್ಬವಿದೆ. ಕಾಟೇಜ್ ನ ತಳಹದಿಯ ಮೇಲೆ ನಡೆಯುತ್ತಾ ಒಂದು ಸುತ್ತು ಹಾಕಲು ಬಹಳ ಹಿತವಾಗಿರುತ್ತದೆ. ಸುತ್ತಲೂ ಮರಗಿಡಗಳ ಹಸಿರು ಪ್ರಕೃತಿಯ ಸೊಬಗು, ತಂಪಾಗಿ ಬೀಸುವ ಗಾಳಿ, ಸ್ವಚ್ಛ ವಾತಾವರಣ, ನಮಗೆ ಆಹ್ಲಾದ ನೀಡುತ್ತವೆ. ಕ್ಯಾಂಪಸ್‌ನ ಎದುರಿಗೇ ಇರುವ ಗೋಪಿನಾಥಂ ಕೆರೆ ಹಾಗೂ ಅದರ ಸುತ್ತಲೂ ಇರುವ ದೊಡ್ಡ ಬೆಟ್ಟ ಈ ಸೌಂದರ್ಯವನ್ನು ಇಮ್ಮಡಿಗೊಳಿಸಿವೆ. ಇವುಗಳೊಂದಿಗೆ ಕಾಡಿನ ಜುಂಯ್ ಗುಟ್ಟುವ ಶಬ್ದ, ಇವೆಲ್ಲವೂ ಸೇರಿ ನಮಗೆ ಯಾವುದೋ ಲೋಕಕ್ಕೆ ಬಂದ ಅನುಭವ ನೀಡುತ್ತವೆ.
ಊಟ-ಆಟ
ಗೋಲ್ ಘರ್ ಮಂದಿರದಲ್ಲಿ ಸೊಗಸಾದ, ರುಚಿಯಾದ, ಶುಚಿಯಾದ, ತಾಜಾ ಊಟಕ್ಕೆ ಜಂಗಲ್ ಲಾಡ್ಜಸ್ ಮತ್ತು ರೆಸಾರ್ಟ್ಸ್ ಹೆಸರುವಾಸಿ. ಮುಖ್ಯವಾಗಿ ಸಸ್ಯಾಹಾರದ ಖಾದ್ಯಗಳಿದ್ದರೂ ಒಂದೆರಡು ಮಾಂಸಾಹಾರದ ಖಾದ್ಯಗಳೂ ಇರುತ್ತವೆ.
ಇಲ್ಲಿನ ಆಟದ ಮೈದಾನ ಹಾಗೂ ಇಲ್ಲಿರುವ ಸಾಹಸ ಕ್ರೀಡೆಗಳಲ್ಲಿ ತೊಡಗಿಕೊಳ್ಳಬಹುದು. ಹಾಗೆಯೇ ಇಲ್ಲಿ ಕಂಬಗಳಿಗೆ ಕಟ್ಟಿರುವ ತೂಗುಯ್ಯಾಲೆ ಇದ್ದು ಅದರ ಮೇಲೆ ಮಲಗಿ ಸುಖವಾಗಿ ವಿಶ್ರಾಂತಿ ಪಡೆಯಬಹುದು. ಇಲ್ಲಿ ಹಲವಾರು ಹೂಗಿಡಗಳೂ ಬಣ್ಣಬಣ್ಣದ ಚಿಟ್ಟೆಗಳೂ ಪಕ್ಷಿಗಳೂ ಇವೆ. ಅವುಗಳನ್ನು ಹುಡುಕುತ್ತಾ ಫೋಟೋ ತೆಗೆಯತೊಡಗಿದೆ. ಮುಖ್ಯವಾಗಿ, ಕಾಮನ್ ಮಾರ್ಮಾನ್ ಚಿಟ್ಟೆ, ಪ್ಲೇನ್ ಟೈಗರ್ ಚಿಟ್ಟೆ, ಆರೆಂಜ್ ಟಿಪ್ ಚಿಟ್ಟೆ, ಮೊದಲಾದ ಸುಂದರ ಚಿಟ್ಟೆಗಳು ನನ್ನ ಕ್ಯಾಮೆರಾದಲ್ಲಿ ಸೆರೆಯಾದವು! ಅಂತೆಯೇ ಥ್ರೆಡ್ ವೇಯ್ಸ್ಟೆಡ್ ವ್ಯಾಸ್ಪ್ ಎಂಬ ಮಣ್ಣಿನ ಕಣಜ, ಸ್ಪ್ಲೆಂಡರ್ ಸ್ಕಿಮ್ಮರ್ ಡ್ರ್ಯಾಗನ್ ಫ್ಲೈ ಎಂಬ ಸುಂದರವಾದ ಡ್ರ್ಯಾಗನ್ ಫ್ಲೈ ಅಥವಾ ಕೊಡತಿ ಕೀಟ ಕೂಡ ನೋಡಲು ಸಿಕ್ಕಿದವು. ಇಲ್ಲಿನ ಸಿಬ್ಬಂದಿಯವರು ಮರವೊಂದರ ಮೇಲೆ ಇಲ್ಲಿಯೇ ನೆಲೆಸಿದ್ದ ಚುಕ್ಕಿ ಗೂಬೆ ದಂಪತಿಗಳನ್ನು ತೋರಿಸಿದರು. ಮೈತುಂಬಾ ಚುಕ್ಕಿಗಳನ್ನು ಹೊಂದಿರುವ ಪುಟ್ಟ ಗೂಬೆಗಳಿವು. ಇವನ್ನು ಸ್ಪಾಟೆಡ್ ಔಲೆಟ್ ಗಳೆನ್ನುತ್ತಾರೆ. ನಾವು ಇವನ್ನೇ ಹಾಲಕ್ಕಿಗಳೆಂದು ಕರೆಯುವುದು. ಇಲ್ಲಿ ಅನೇಕ ಮರಗಳಿವೆ ಹಾಗೂ ಅವುಗಳ ಮೇಲೆ ಅವುಗಳ ಹೆಸರುಗಳ ಫಲಕಗಳನ್ನು ಹಾಕಿದ್ದಾರೆ. ಹೀಗೆ ಕ್ಯಾಂಪಸ್ ನಲ್ಲಿ ಸುತ್ತಾಡುತ್ತಾ ಗೋಪಿನಾಥಂ ಕೆರೆಯವರೆಗೂ ಹೋಗಿ ಪ್ರಕೃತಿಯ ಹಲವಾರು ಜೀವಿಗಳನ್ನೂ ವೈಶಿಷ್ಟ್ಯಗಳನ್ನೂ ಇಲ್ಲಿ ನೋಡಬಹುದು! ಈ ನಡಿಗೆ ಆಹ್ಲಾದಕರ ಹಾಗೂ ಆರೋಗ್ಯಕರವಾಗಿರುತ್ತದೆ. ಇಲ್ಲಿನ ಪರಿಸರವಾದಿಗಳನ್ನು ಕೇಳಿದರೆ ಅವರು ಅನೇಕ ವಿಚಾರಗಳನ್ನು ತಿಳಿಸಿಕೊಡುತ್ತಾರೆ.

ನದಿಯ ನಡುವೆ
ಮುಂದಿನ ಚಟುವಟಿಕೆ, ವನ್ಯಜೀವಿ ಸಫಾರಿ. ಗೋಪಿನಾಥಂನಂಥ ಕೆಲವು ಕೇಂದ್ರಗಳಲ್ಲಿ ಸಫಾರಿಗೆ ಪ್ರತ್ಯೇಕ ಹಣ ಕೊಡಬೇಕಾಗುತ್ತದೆ. ಕಾವೇರಿ ವನ್ಯಜೀವಿ ಅಭಯಾರಣ್ಯದೊಳಗೆ ಹೋದಂತೆ ನಮಗೆ ಹಸಿರು ಇಂಪೀರಿಯಲ್ ಪಾರಿವಾಳ, ಸ್ಪಾಟೆಡ್ ಡವ್, ನರ್ತಿಸುತ್ತಿದ್ದ ನವಿಲು, ಮರಕ್ಕೆ ಒತ್ತಿಕೊಂಡಿದ್ದ ಮಾನೀಟರ್ ಲಿಜರ್ಡ್, ರೆಡ ವ್ಯಾಟಲ್ಡ್ ಲ್ಯಾಪ್ ವಿಂಗ್ ಎಂಬ ಸುಂದರ ಪಕ್ಷಿ, ಗೌರ್ ಅಥವಾ ಇಂಡಿಯನ್ ಬೈಸನ್ ಎಂದು ಕರೆಯಲ್ಪಡುವ ಕಾಡಿನ ಹಸು ಜಾತಿಯ ಪ್ರಾಣಿ ಅಥವಾ ಕಾಟಿ, ಸ್ಪಾಟೆಡ್ ಡೀರ್ ಅಥವಾ ಚೀತಲ್ ಎಂದು ಕರೆಯಲಾಗುವ ಚುಕ್ಕಿ ಜಿಂಕೆಗಳ ಹಿಂಡು, ಮಣ್ಣಿನ ಸ್ನಾನ ಮಾಡುತ್ತಿದ್ದ ಉದ್ದ ಕೊಕ್ಕಿನ ಮತ್ತು ಕಿರೀಟದ ಹೂಪೋ ಅಥವಾ ಚಂದ್ರಮಕುಟ ಮತ್ತು ಕೋಳಿಯಂಥ ಫ್ರಾಂಕೋಲಿನ್ ಪಕ್ಷಿಗಳು, ಇವೆಲ್ಲವೂ ನೋಡಲು ಸಿಕ್ಕಿದವು. ಕಾವೇರಿ ವನ್ಯಜೀವಿಧಾಮ, ಬಂಡೆಗಲ್ಲುಗಳು, ನೀರಿನ ಹೊಂಡಗಳು, ಮತ್ತು ಹಸಿರು ಪ್ರಕೃತಿಯಿಂದ ಕಂಗೊಳಿಸುತ್ತಿತ್ತು ಸೂರ್ಯಾಸ್ತದ ಸಮಯ ಹತ್ತಿರವಾಗುತ್ತಾ, ಪ್ರಕೃತಿಯ ವಿವಿಧ ಬಣ್ಣಗಳು ಕಾಡಿನ ಸೌಂದರ್ಯವನ್ನು ಇನ್ನಷ್ಟು ಹೆಚ್ಚಿಸತೊಡಗಿದವು.
ಬಿಸಿಬಿಸಿಯಾದ ಮಂಗಳೂರು ಬೋಂಡಗಳು ಹಾಗೂ ಚಹಾ, ಕಾಫಿಗಳು ಕಾದಿದ್ದವು. ನಾವು ಅವುಗಳನ್ನು ಸೇವಿಸಿ ದಣಿವಾರಿಸಿಕೊಂಡೆವು. ಅನಂತರ, ಏಳುವರೆ ಗಂಟೆಗೆ ಕಾವೇರಿ ವನ್ಯಜೀವಿ ಅಭಯಾರಣ್ಯವನ್ನು ಕುರಿತ ಒಂದು ಸಾಕ್ಷ್ಯಚಿತ್ರವನ್ನು ಸಭಾಂಗಣದಲ್ಲಿ ಪ್ರದರ್ಶಿಸಲಾಯಿತು. ಅನಂತರ, ರಾತ್ರಿ ಎಂಟುವರೆ ಗಂಟೆಗೆ ಗೋಲ್ ಘರ್‌ನಲ್ಲಿ ಪುಷ್ಕಳವಾದ ಭೋಜನವಿತ್ತು.

ಹಕ್ಕಿಗಳ ಕಲರವ
ಮರುದಿನ ಬೆಳಗ್ಗೆ ಆರು ಗಂಟೆಗೆ ಕೊರೆಕಲ್ ಸವಾರಿ ಅಥವಾ ತೆಪ್ಪದ ವಿಹಾರಕ್ಕೆ ಹೊರಟೆ. ಗೋಪಿನಾಥಂ ಕೆರೆಯ ಮೇಲೆ ತೆಪ್ಪ ನಡೆಸುತ್ತಾ ತೆಪ್ಪದ ವಿಹಾರ ಮಾಡಿಸಿದರು. ದೂರದಲ್ಲಿ ನವಿಲುಗಳ ಮತ್ತಿತರ ಪಕ್ಷಿಗಳ ಶಬ್ದಗಳು ಕೇಳುತ್ತಿದ್ದವು. ಸ್ಪಾಟ್ ಬಿಲ್ಡ್ ಡಕ್‌ಗಳು ಹಾಗೂ ಚಿಕ್ಕ ಎಗ್ರೆಟ್ ಅಥವಾ ಬೆಳ್ಳಕ್ಕಿಗಳು ಕಂಡವು. ತೆಪ್ಪದ ವಿಹಾರದ ಬಳಿಕ, ನಾನು, ಸಿಬ್ಬಂದಿಯವರ ಮಾರ್ಗದರ್ಶನದಲ್ಲಿ ವೀರಪ್ಪನ್ ಪೂಜಿಸುತ್ತಿದ್ದ ಮುನೀಶ್ವರ ಸ್ವಾಮಿಯ ಭವ್ಯ ವಿಗ್ರಹದವರೆಗೂ ನಡೆದು ಹೋದೆ. ದಾರಿಯಲ್ಲಿ, ಇಂಡಿಯನ್ ರಾಬಿನ್, ಗ್ರೀನ್ ಬೀ ಈಟರ್, ಸಾಮಾನ್ಯ ಮೈನಾ, ಡ್ರೋಂಗೋ, ಮೊದಲಾದ ಪಕ್ಷಿಗಳೂ ಹಲವಾರು ಚಿಟ್ಟೆಗಳೂ ಕಾಣಸಿಕ್ಕವು. ಅಂತೆಯೇ ಇಲ್ಲಿ ಎಲೆಗಳನ್ನು ಮೆಲ್ಲುತ್ತಿದ್ದ ಬ್ಲಿಸ್ಟರ್ ಬೀಟಲ್ ಎಂಬ ಆಕರ್ಷಕ ಜೀರುಂಡೆಯನ್ನು ನೋಡಿದೆ.
ಬೆಳಗಿನ ನಡಿಗೆಯಿಂದ ರೆಸಾರ್ಟ್ ಗೆ ಹಿಂದಿರುಗಿದಾಗ ಗೋಲ್ ಘರ್ ನಲ್ಲಿ ಬಿಸಿ ಬಿಸಿ ಉಪಾಹಾರ ತಯಾರಾಗಿತ್ತು. ವಿವಿಧ ತಿನಿಸುಗಳೊಂದಿಗೆ ಚಹಾ, ಕಾಫೀ ಕೂಡ ಇದ್ದವು! ಸೊಗಸಾದ ಉಪಾಹಾರ ಮುಗಿಸಿ ಹತ್ತುವರೆ ಗಂಟೆಯ ಹೊತ್ತಿಗೆ ಚೆಕ್ ಔಟ್ ನ ಸಮಯವಾಗಿತ್ತು. ಹಾಗಾಗಿ ನಾನು ಚೆಕ್ ಔಟ್ ಆಗಿ, ಸಫಾರಿಯ ಹೆಚ್ಚುವರಿ ಶುಲ್ಕವನ್ನು ನೀಡಿ, ಸಿಬ್ಬಂದಿಯವರಿಗೆ ನನ್ನ ಧನ್ಯವಾದಗಳನ್ನು ಅರ್ಪಿಸಿ ಹೊರಟೆ.
ದಾರಿ ಹೇಗೆ?
ಕರ್ನಾಟಕ, ತಮಿಳುನಾಡುಗಳ ಅಂಚಿನಲ್ಲಿರುವ, ಚಾಮರಾಜನಗರ ಜಿಲ್ಲೆಯಲ್ಲಿರುವ ಈ ಪುಟ್ಟ ಹಳ್ಳಿಗೆ ಹೋಗಲು ಬೆಂಗಳೂರಿನಿಂದ ಸುಮಾರು 250 ಕಿ.ಮೀ. ದೂರವಾಗುತ್ತದೆ ಹಾಗೂ ಸುಮಾರು ಐದು ಗಂಟೆಗಳಾಗುತ್ತವೆ.
ಲೇಖಕರು: ಹವ್ಯಾಸಿ ಬರಹಗಾರರು