ಮುರುಡೇಶ್ವರಕ್ಕೆ ಬಂದ್ಮೇಲೆ ನೇತ್ರಾಣಿಯನ್ನು ಮರೆಯೋದುಂಟಾ..?
ಅದು ದೇಶದ ಏಕೈಕ 'ಹೃದಯ ದ್ವೀಪ'. ಜಲಾಂತರಾಳದಲ್ಲಿ ಹೊಳೆಯುವ ಅಪರೂಪದ ಹವಳಗಳ ದೀಪ. ಜಲಚರಗಳ ಬೆರಗಿನ ಚಲನೆ ನೋಡುತ್ತಿದ್ದರೆ ಮನದೊಳಗೆ ಖುಷಿಯ ಉದ್ದೀಪ. ಅದು, ಮನೋಲ್ಲಾಸದಿಂದ ತ್ರಾಣ ತುಂಬುವ ನೇತ್ರಾಣಿ!
- ರಮೇಶ್ ನಾಯಕ್
ಇತ್ತೀಚಿನ ವರ್ಷಗಳಲ್ಲಿ ನೇತ್ರಾಣಿ ಐಲ್ಯಾಂಡ್ ವಿಶ್ವ ವಿಖ್ಯಾತಿ ಗಳಿಸಿದೆ. ಜಾಗತಿಕ ಪ್ರವಾಸ ನಕ್ಷೆಯಲ್ಲಿ ತಾನೂ ಒಂದು ಸ್ಥಾನ ಪಡೆದುಕೊಂಡುಬಿಟ್ಟಿದೆ. 2022ರಲ್ಲಿ ಪುನೀತ್ ರಾಜ್‌ಕುಮಾರ್-ಅಮೋಘ ವರ್ಷ ನಿರ್ಮಿತ 'ಗಂಧದಗುಡಿ' ಸಾಕ್ಷ್ಯಚಿತ್ರದಲ್ಲಿ ಈ ದ್ವೀಪದ ದೃಶ್ಯ ಕಂಡುಬಂದ ಬಳಿಕವಂತೂ ನೇತ್ರಾಣಿಯ ಖ್ಯಾತಿ ಮತ್ತಷ್ಟು ಹೆಚ್ಚಿದೆ. ಹೃದಯಾಕಾರದಲ್ಲಿ ಇರುವುದರಿಂದ ಇದನ್ನು Heart Shaped Island ಎಂಬುದಾಗಿಯೂ ಕರೆಯುತ್ತಾರೆ.
ಈ ಜಗದ್ವಿಖ್ಯಾತ ನೇತ್ರಾಣಿ ಐಲ್ಯಾಂಡ್ ಸ್ಥಳೀಯರ ಪಾಲಿಗೆ ನೇತ್ರಾಣಿ ಗುಡ್ಡ ಅಷ್ಟೇ! ಇದು ಉತ್ತರ ಕನ್ನಡ ಜಿಲ್ಲೆಯ ಮುರುಡೇಶ್ವರದಿಂದ 10 ನಾಟಿಕಲ್ ಮೈಲು ದೂರದಲ್ಲಿದೆ. ಅಂದರೆ 18.5 ಕಿಮೀ. ಸುಸಜ್ಜಿತ ಬೋಟ್‌ನಲ್ಲಿ ಹೋದರೆ ಒಂದೂವರೆ ಗಂಟೆ ಪ್ರಯಾಣ. ಮುರುಡೇಶ್ವರ ಬೀಚ್‌ನಲ್ಲಿ ನಿಂತು ಅರಬ್ಬಿ ಸಮುದ್ರದತ್ತ ಕಣ್ಣು ಹಾಯಿಸಿದರೆ ಈ ನೇತ್ರಾಣಿ ಗುಡ್ಡ ಸ್ಪಷ್ಟವಾಗಿ ಕಣ್ಣಿಗೆ ಗೋಚರಿಸುತ್ತದೆ.

ಗೂಗಲ್ ಕತೆಗಳೆಲ್ಲ ನಿಜವಲ್ಲ!
ಗೂಗಲ್‌ನಲ್ಲಿ ಸರ್ಚ್ ಮಾಡಿ ನೋಡಿದರೆ ನೇತ್ರಾಣಿಯ ಬಗ್ಗೆ ಥರಹೇವಾರಿ ಕತೆಗಳು ಕಾಣಿಸಿಕೊಳ್ಳುತ್ತವೆ. ರಾಮ-ರಾವಣರ ಯುದ್ಧದ ಸಂದರ್ಭದಲ್ಲಿ, ಲಕ್ಷ್ಮಣನ ಪ್ರಾಣ ಉಳಿಸಲು ಹನುಮಂತ ಸಂಜೀವಿನಿ ಪರ್ವತ ಎತ್ತಿಕೊಂಡು ಬರಲು ಹೋಗಿದ್ದಾಗ ಈ ದ್ವೀಪದಲ್ಲಿ ಸ್ವಲ್ಪ ಹೊತ್ತು ತಂಗಿದ್ದ ಎನ್ನುವುದು ಒಂದು ಕತೆ. ಮಾವಿನ ಹಣ್ಣು ಎಂದು ಚಂದ್ರನನ್ನು ನುಂಗಲು ಆಕಾಶಕ್ಕೆ ನೆಗೆದಿದ್ದ ಬಾಲ ಆಂಜನೇಯನನ್ನು ಇಂದ್ರ ಗದೆ ಬೀಸಿ ನಿಯಂತ್ರಿಸಿದ. ಆ ಹಿನ್ನೆಲೆಯಲ್ಲಿ ಈ ದ್ವೀಪದಲ್ಲಿನ ಆಂಜನೇಯನಿಗೆ ಮಾವಿನಹಣ್ಣುಗಳನ್ನು ಸಮರ್ಪಿಸುತ್ತಾರೆ ಎನ್ನುವುದು ಮತ್ತೊಂದು ಕತೆ. ಮೂಲ ಪುರಾಣ ಕತೆ ಏನೇ ಇರಬಹುದು. ಆದರೆ ಸ್ಥಳೀಯರ ಪ್ರಕಾರ ಈ ದ್ವೀಪಕ್ಕೆ ಅವುಗಳ ನಂಟು ಮಾತ್ರ ಕೇವಲ ಅಂತೆಕಂತೆ!
ವಾಸ್ತವ ಏನೆಂದರೆ, ಆ ದ್ವೀಪದಲ್ಲೊಂದು ಕಲ್ಲಿನ ಒರಟು ಕೆತ್ತನೆ ಇದೆ. ದ್ವೀಪದ ಸಮೀಪದ ಭಟ್ಕಳ, ಮುರುಡೇಶ್ವರ, ಮಂಕಿ ಇತ್ಯಾದಿ ಊರುಗಳ ಜನರ ಪಾಲಿಗೆ ಅದು ಜಟಕೇಶ್ವರ. ಮೀನುಗಾರಿಕೆಯನ್ನೇ ಉಸಿರಾಗಿಸಿಕೊಂಡಿರುವ ಕಡಲ ತೀರದ ಜನ ವರ್ಷಕ್ಕೊಮ್ಮೆ ಈ ದ್ವೀಪವನ್ನೇರಿ ಆ ಕಲ್ಲನ್ನು ಪೂಜಿಸುತ್ತಾರೆ. ಹರಕೆಯ ರೂಪದಲ್ಲಿ ಕುರಿ, ಕೋಳಿಗಳನ್ನು ಅಲ್ಲಿ ಬಿಟ್ಟು ಬರುತ್ತಾರೆ. ಹೀಗೆ ಬಿಟ್ಟುಬಂದ ನಾಡ ಕುರಿ, ಕೋಳಿಗಳೆಲ್ಲ ವರ್ಷಾನುಗಟ್ಟಲೆ ಅಲ್ಲೇ ಉಳಿದು ಕಾಡು ಕುರಿ, ಕಾಡು ಕೋಳಿಗಳಂತಾಗಿ ಬೆಳೆದು ಬಿಡುತ್ತವೆ!
ಕೆಲವು ಖಾಸಗಿ ಸಂಸ್ಥೆಗಳು ಪ್ರವಾಸಿಗರು ಮತ್ತು ಸಾಹಸಿಗಳಿಗಾಗಿ ಸ್ಕೂಬಾ ಡೈವಿಂಗ್ ಪರಿಚಯಿಸಿದ ಬಳಿಕ ನೇತ್ರಾಣಿ ಗುಡ್ಡ ನೇತ್ರಾಣಿ ಐಲ್ಯಾಂಡ್ ಆಗಿ ಪಾಪ್ಯುಲರ್ ಆಗಿ ಬಿಟ್ಟಿದೆ.

ಇಲ್ಲಿ ಮಿಲಿಟರಿ ಬಾಂಬ್‌ಗಳು ಬೀಳುತ್ತವೆ!
ನೇತ್ರಾಣಿ ದ್ವೀಪದ ಪಕ್ಕದಲ್ಲೇ ಇರುವ ಪುಟ್ಟ ಗುಡ್ಡದ ಮೇಲೆ ಭಾರತೀಯ ವಾಯು ಸೇನೆ ಆಗಾಗ ಬಾಂಬ್ ಬೀಳಿಸುತ್ತ ಪ್ರಾಕ್ಟೀಸ್ ಮಾಡುತ್ತಿರುತ್ತದೆ ಎಂಬ ಸಂಗತಿ ಬಹಳಷ್ಟು ಜನರಿಗೆ ಗೊತ್ತಿಲ್ಲ!
ಈಗಲೂ ರೇಡಿಯೊ ಮೂಲಕ ಸ್ಥಳೀಯ ಜನರಿಗೆ ಬಾಂಬ್ ಪ್ರಯೋಗದ ಮಾಹಿತಿ ನೀಡಲಾಗುತ್ತದೆ. ಆ ನಿರ್ದಿಷ್ಟ ದಿನಗಳಲ್ಲಿ ಮೀನುಗಾರರು ಆ ಗುಡ್ಡದ ಬಳಿ ಸುಳಿಯುವುದಿಲ್ಲ. ದಶಕಗಳ ಹಿಂದೆಲ್ಲ, ನಡು ಮಧ್ಯಾಹ್ನದ ಹೊತ್ತಲ್ಲಿ ಸಿಡಿಯುತ್ತಿದ್ದ ಬಾಂಬ್‌ಗಳ ಸದ್ದು ಕಡಲ ತೀರದ ಊರುಗಳಲ್ಲೆಲ್ಲ ಸ್ಪಷ್ಟವಾಗಿ ಕೇಳಿಸಿ ಭಯ ಹುಟ್ಟಿಸುತ್ತಿತ್ತು. ಆದರೀಗ ಹೆಚ್ಚಿರುವ ಜನಸಂಖ್ಯೆಯ ಗದ್ದಲದ ನಡುವೆ ಬಾಂಬ್ ಸಿಡಿತದ ಸದ್ದು ಕರಗಿ ಹೋಗುತ್ತಿದೆ.
ವಾಯುಪಡೆ ಬೀಳಿಸಿದ ಸಿಲಿಂಡರ್ ಆಕಾರದ ಕೆಲವು ಬಾಂಬ್‌ಗಳು ಸಿಡಿಯದೆ ನೇತ್ರಾಣಿ ದ್ವೀಪದಲ್ಲೇ ಬಿದ್ದುಕೊಂಡಿವೆ. ಹೀಗೆ ಸಿಡಿಯದೇ ಮಣ್ಣಿನಡಿ ಹೂತು ಹೋಗಿದ್ದ ಹಳದಿ ಬಣ್ಣದ ಬಾಂಬೊಂದನ್ನು, ಯಾರೋ ಅವಿತಿಟ್ಟ ಬಂಗಾರ ಎಂದು ತಿಳಿದು ಎತ್ತಿಕೊಳ್ಳಲು ಹೋದಾಗ ಸ್ಫೋಟಿಸಿ ಐದಾರು ಮಂದಿ ಸತ್ತ ದುರ್ಘಟನೆಯೊಂದು 40 ವರ್ಷಗಳ ಹಿಂದೆ ನಡೆದಿತ್ತು. ಈಗ ಸ್ಕೂಬಾ ಡೈವಿಂಗ್‌ಗೆ ಹೋದ ಪ್ರವಾಸಿಗರಿಗೆ ಈ ಗುಡ್ಡ ಹತ್ತಿಸುವುದಿಲ್ಲ. ಹಾಗಾಗಿ ಭಯ ಬೇಡ!
ಸ್ಕೂಬಾ ಡೈವಿಂಗ್ ಎಂಬ ರೋಚಕ ಅನುಭವ!
ನೇತ್ರಾಣಿ ದ್ವೀಪದ ಬಳಿಯ ಸಾಗರದಾಳದಲ್ಲಿ ಸುಮಾರು 90 ಮೀಟರ್ ಆಳಕ್ಕೆ ಇಳಿದು ಮೀನುಗಳ ಜತೆ ಮೀನಿನಂತೆ ಸಂಚರಿಸುವುದೇ ಒಂದು ಚೇತೋಹಾರಿ ಅನುಭವ. ಸ್ಕೂಬಾ ಡೈವಿಂಗ್ ಮಾಡಲು ಆನ್‌ಲೈನ್‌ನಲ್ಲೇ ಬುಕ್ ಮಾಡುವ ಅವಕಾಶ ಇದೆ. ಇನ್‌ಸ್ಟ್ರಕ್ಟರ್ ಒಬ್ಬರು ಜತೆಗಿರುವುದರಿಂದ ಭಯಪಡಬೇಕಿಲ್ಲ. ವಿಶೇಷ ಉಡುಗೆ ಧರಿಸಿ, ಆಕ್ಸಿಜನ್ ಮಾಸ್ಕ್ ಹಾಕಿಕೊಂಡು ಸಮುದ್ರದ ನೀರಿಗೆ ಜಿಗಿದು ಬಿಟ್ಟರೆ ಪಾತಾಳ ಲೋಕ ನೋಡಿದ ಅನುಭವ. ಸುಮಾರು 90 ಬಗೆಯ ಮೀನುಗಳು ಅಲ್ಲಿವೆ. ಸ್ಪಟಿಕ ಸ್ಪಷ್ಟ ನೀರಿನಲ್ಲಿ ಬಣ್ಣಬಣ್ಣದ ಮೀನುಗಳು ನಮ್ಮ ಸುತ್ತಮುತ್ತವೇ ಓಡಾಡುತ್ತಿರುತ್ತವೆ. ಜತೆಗೆ ಕಡಲಾಮೆಗಳು, ಕಪ್ಪೆ ಚಿಪ್ಪು, ಪಾಚಿಗಟ್ಟಿದ ಕಡಿದಾದ ಬಂಡೆಗಳು, ಹಸಿರು ಸಸ್ಯಗಳು, ಮನ ಸೆಳೆಯುವ ಹವಳ ದಿಬ್ಬಗಳು...ನ್ಯಾಷನಲ್ ಜಿಯೊಗ್ರಾಫಿಕ್ ಚಾನೆಲ್‌ನಲ್ಲಿ ನೋಡಿದ ದೃಶ್ಯಗಳು ಸಾಕಾರಗೊಂಡಂತೆ. ನಮ್ಮನ್ನೇ ನಾವು ಮರೆಯುವ ಕ್ಷಣ!

ಅದಕ್ಕೂ ಮೊದಲು ಮುರುಡೇಶ್ವರ ಬೀಚ್‌ನಿಂದ ಬೋಟ್ ಏರಿ, ಅಪ್ಪಳಿಸುವ ಅಲೆಗಳನ್ನು ದಾಟಿ, ಸುವಿಶಾಲ ನೀಲ ಸಮುದ್ರದಲ್ಲಿ ಸಾಗುವುದೇ ಮತ್ತೊಂದು ಪುಳಕ. ಹೀಗೆ ಸಾಗುವಾಗ ನಮ್ಮ ಬೋಟ್ ಪಕ್ಕದಲ್ಲೇ ಮೀನುಗಳು ಪುಳಕ್ಕನೆ ನೀರಿನಿಂದ ಮೇಲಕ್ಕೆ ಜಿಗಿಯುವುದೂ ಉಂಟು.
ನೀವೂ ಒಮ್ಮೆ ಟ್ರೈ ಮಾಡಿ ನೋಡಬಹುದು! ಒಬ್ಬರಿಗೆ 4,500 ರು. ಶುಲ್ಕ ಇರುತ್ತದೆ. ಕೆಲವೊಮ್ಮೆ ವಿನಾಯಿತಿಯೂ ಸಿಗಬಹುದು. ಸಮುದ್ರದಾಳದಲ್ಲಿ ಅರ್ಧ ಗಂಟೆ ಮೀನಿನ ಅವತಾರ ತಾಳಿ ಮೋಜು ಮಾಡಬಹುದು!
ಹಾಗೆಯೇ, ಮುರುಡೇಶ್ವರದ ಜತೆಗೆ ಇಡಗುಂಜಿ ಮಹಾಗಣಪತಿಯ ದರ್ಶನ ಪಡೆದು, ಗೋಕರ್ಣ ಕಡಲತೀರದ ಸೊಬಗನ್ನೂ ಸವಿದು ಬರಬಹುದು.
ಜಲಕ್ರೀಡೆಗೆ ಆಕ್ವಾ ರೈಡ್
ಸ್ಕೂಬಾ ಡೈವಿಂಗ್, ಸ್ನಾರ್ಕೆಲಿಂಗ್ ಸೇರಿದಂತೆ ಹಲವಾರು ಸಾಹಸ ಜಲಕ್ರೀಡೆಗಳನ್ನು ತರುವ ಮೂಲಕ ನೇತ್ರಾಣಿಯ ಹೆಸರನ್ನು ಜಗತ್ತಿನ ಪ್ರವಾಸಿ ತಾಣಗಳ ಸಾಲಿನಲ್ಲಿ ತಂದು ನಿಲ್ಲಿಸಿದೆ ಆಕ್ವಾ ರೈಡ್. ಸಾಹಸಗಳ ಜತೆ ಜವಾಬ್ದಾರಿಯುತ ಟೂರಿಸಂ ನಿಂದಲೂ ಹೆಸರು ಮಾಡಿರುವ ಆಕ್ವಾ ರೈಡ್ ಈಗ ಪ್ರವಾಸಿಗರ ಹಾಟ್ ಸ್ಪಾಟ್. ನೇತ್ರಾಣಿ ಆಕ್ವಾ ರೈಡ್‌ನ ಮುಖ್ಯ ಆಕರ್ಷಣೆಯೆಂದರೆ ಇದರ ವೈವಿಧ್ಯಮಯ ಜಲಕ್ರೀಡೆಗಳು. ನೀರಿಗೆ ಹೊಸಬರು, ಈಜು ಗೊತ್ತಿರದವರು, ಎಕ್ಸ್ ಪರ್ಟ್ ಗಳು ಯಾರು ಬೇಕಾದರೂ ಇಲ್ಲಿ ಧೈರ್ಯವಾಗಿ ಆಟವಾಡಬಹುದು. ಸಾಹಸ ಚಟುವಟಿಕೆಯಲ್ಲಿ ಮಿಂದು ಸಂಭ್ರಮಿಸಬಹುದು.