Wednesday, April 22, 2026
Wednesday, April 22, 2026

ಅಂಡರ್‌ಗ್ರೌಂಡ್‌ ಆಗ್ಬೇಕಂದ್ರೆ ಇಲ್ಲೊಂದ್‌ ಜಾಗವಿದೆ!

ವಿಶ್ವದ ಅತ್ಯಂತ ಆಳವಾದ ಹೊಟೇಲ್‌ನಲ್ಲಿ ಉಳಿದರೆ ಹೇಗಿರಬಹುದು. ಯಾರಾದರೂ ಕೇಳಿದರೆ ನಿಜವಾಗಿಯೂ ಅಂಡರ್‌ಗ್ರೌಂಡ್‌ ಆಗಿದ್ದೇನೆ ಎಂಬ ಹೇಳುವ ಅವಕಾಶ ಸಿಗುತ್ತದೆ. ಒಂದಿಷ್ಟು ಸಾಹಸದ ಜತೆಗೆ ರೋಮಾಂಚನಕಾರಿ ಅನುಭವವನ್ನು ಪಡೆಯುವ ಅವಕಾಶ ಈ ಜಾಗದಲ್ಲಿ ಸಿಗುತ್ತದೆ.

ಭೂಮಿಯ ಮೇಲೆ ಜೀವನ ಹೇಗಿದೆ, ಜಾಗ ಹೇಗಿದೆ ಎಂದು ನೋಡಾದ ಮೇಲೆ ಒಂದು ವೇಳೆ ಭೂಮಿಯೊಳಗೆ ಹೋಗಿ ಇರುವ ಅವಕಾಶ ಸಿಕ್ಕರೆ ಹೇಗಿರಬಹುದಲ್ಲವೇ? ಇದನ್ನು ಬದುಕಿದ್ದಾಗಲೇ ಮಣ್ಣು ಮಾಡುವ ಹುನ್ನಾರ ಅಂತ ತಪ್ಪಾಗಿ ಭಾವಿಸಬಾರದು. ವಿಷಯ ಏನೆಂದರೆ ಭೂಮಿಯೊಳಗೆ ಒಂದು ಹೊಟೇಲ್‌ ಇದೆ. ಸ್ವೀಡನ್‌ನ ದಟ್ಟ ಅರಣ್ಯಗಳ ನಡುವೆ ಭೂಮಿಯ ಆಳದಲ್ಲಿ ಆಕರ್ಷಕ ಹೊಟೇಲ್‌ ಇದೆ. ಅದೇ ಸಾಲಾ ಸಿಲ್ವರ್‌ಮೈನ್‌ನ ಭೂಗತ ಸೂಟ್. ವಿಶ್ವದ ಅತ್ಯಂತ ಆಳವಾದ ಹೊಟೇಲ್‌ ಇದೆ. ಈ ಹೊಟೇಲ್‌ ಭೂಮಿಯಿಂದ ಸುಮಾರು 509 ಅಡಿ ಆಳದಲ್ಲಿದೆ. ಸುರಂಗಗಳೊಳಗಿರುವ ಈ ಹೊಟೇಲ್‌ ಸೂಟ್‌ ಸಾಹಸ, ವಿಶೇಷ, ವಿಚಿತ್ರ ಅನುಭವವಗಳನ್ನು ಹುಡುಕುವ ಜೀವಗಳಿಗೆ ಬೆಸ್ಟ್‌ ಆಯ್ಕೆ. ಎಲ್ಲಾದರೂ ಕಳೆದು ಹೋಗಬೇಕು, ಯಾರ ಕೈಗೂ ಸಿಗಬಾರದು ಎಂದು ಹಂಬಲಿಸುವ ಕೆಲವರು ಇಲ್ಲಿ ಬಂದು ಅಡಗಿಕೊಳ್ಳಬಹುದು. ಇದನ್ನೂ ಓದಿ: ಜೈಲೂಟ ಗ್ಯಾರಂಟಿ

ಏನಿದರ ಹಿನ್ನೆಲೆ?

ಶತಮಾನಗಳಷ್ಟು ಹಳೆಯ ಇತಿಹಾಸ ಹೊಂದಿರುವ ಜಾಗ ಈ ಸಾಲಾ ಸಿಲ್ವರ್‌ ಮೈನ್‌. ಸಿಲ್ವರ್‌ ಮೈನ್‌ ಎಂದರೆ ಬೆಳ್ಳಿಯ ಗಣಿ ಎಂದರ್ಥ. 15ನೆಯ ಶತಮಾನದ ಹಿಂದೆಯೇ ಇಲ್ಲಿ ಗಣಿಗಾರಿಕೆ ಶುರುವಾಗಿತ್ತು. ನೂರಾರು ವರ್ಷಗಳ ಕಾಲ ಇದು ಸ್ವೀಡನ್‌ನ ಬೆಳ್ಳಿಯ ಪ್ರಮುಖ ಮೂಲಗಳಲ್ಲಿ ಒಂದಾಗಿತ್ತು. ಮಾತ್ರವಲ್ಲದೆ ದೇಶದ ಆರ್ಥಿಕತೆಯಲ್ಲೂ ನಿರ್ಣಾಯಕ ಪಾತ್ರವಹಿಸಿತ್ತು. 1962ರಲ್ಲಿ ಗಣಿಗಾರಿಕೆ ಕಾರ್ಯಾಚರಣೆಗಳು ನಿಂತ ಬಳಿಕ ಈ ಸ್ಥಳವನ್ನು ಆಕರ್ಷಿಕ ಸ್ಥಳವನ್ನಾಗಿ ಪರಿವರ್ತನೆ ಮಾಡಲಾಯಿತು. ಈಗ ಇಲ್ಲಿ ಹಲವು ಸಾಹಸ ಚಟುವಟಿಕೆಗಳಿಗೆ ಅವಕಾಶವಿದೆ. ಹಾಗಯೇ ವಸ್ತು ಸಂಗ್ರಹಾಲಯ, ವಿಶಿಷ್ಟ ಆತಿಥ್ಯದ ಕೇಂದ್ರವಾಗಿ ಕೆಲಸ ಮಾಡುತ್ತಿದೆ.

New Project (34)

ವಿಶಿಷ್ಟ ವಸತಿ ಅನುಭವ

ಭೂಮಿಯ ಮೇಲೆ ಒಂದು ಸುಂದರ ಹೊಟೇಲ್‌ ಅಥವಾ ರೆಸಾರ್ಟ್‌ ನಿರ್ಮಿಸುವುದು ಕಷ್ಟದ ಕೆಲಸ, ಅಂಥದ್ದರಲ್ಲಿ ಭೂಮಿಯ ಒಳಗೆ ಇದನ್ನು ಹೇಗೆ ನಿರ್ಮಿಸಿರಬಹುದು ಎಂಬ ಕುತೂಹಲ ಮೂಡುತ್ತದೆ. ಆದರೆ, ಹೊರಗೆ ಸಿಗುವ ರೆಸಾರ್ಟ್‌ನ ವಿಶೇಷ ಸೌಕರ್ಯಗಳನ್ನೆಲ್ಲ ಇಲ್ಲಿ ನಿರೀಕ್ಷಿಸಬಾರದು. ಈ ಭೂಗತ ಸೂಟ್‌ ಅನ್ನು ಬಂಡೆಗಳಲ್ಲಿ ಕೆತ್ತಲಾಗಿದೆ. ಶತಮಾನಗಳ ಉತ್ಖನನದಿಂದ ರೂಪುಗೊಂಡ ಅಂಕುಡೊಂಕಾದ ಸುರಂಗಗಳು ಮತ್ತು ವಿಶಾಲವಾದ ಗುಹೆಗಳು ಇದರ ಸುತ್ತಲೂ ಇವೆ. ವಿಶೇಷ ಎಂದರೆ ಇಲ್ಲಿ ಪೃಕ್ರಿತಿಗೆ ಹತ್ತಿರವಾದ ಸಹಜವಾದ ಹಾಗೂ ರಾ ಎನಿಸುವ ವಾತಾವರಣ ಹಾಗೇ ಇದೆ. ಒಳಗೆ ಆರಾಮಾಗಿ ನಿದ್ದೆ ಮಾಡಲು ಅನುಕೂಲ ಆಗುವಂಥ ಹಾಸಿಗೆ, ಹೊಟ್ಟೆ ತುಂಬ ಊಟ ಮಾಡಲು ವ್ಯವಸ್ಥೆಯ ಜತೆಗೆ ಜಾಗ ಇನ್ನಷ್ಟು ನಿಗೂಢ ಅನಿಸುವಂತೆ ಮಾಡಲು ಮೇಣದಬತ್ತಿಯ ಬೆಳಕು ಕಾಣಿಸುತ್ತದೆ. ಇದರೊಳಗೆ ತಾಪಮಾನ ಸಾಮಾನ್ಯವಾಗಿ 2°C ಆಸುಪಾಸಿನಲ್ಲಿ ಇರುತ್ತದೆ. ಆದರೂ ಸೂಟ್ ಅನ್ನು ಬೆಚ್ಚಗಿನ ಹದಕ್ಕೆ ತರಲಾಗಿದೆ. ಹೀಗಾಗಿ ಅತಿಥಿಗಳು ಆರಾಮವಾಗಿ ವಿಶ್ರಾಂತಿ ಪಡೆಯಬಹುದು.

ನಿಶ್ಯಬ್ದ ಮತ್ತು ಏಕಾಂತದ ಪಯಣ

ಇಲ್ಲಿ ವಾಸ್ತವ್ಯ ಹೂಡುವುದು ಒಂದು ರೋಚಕ ಪಯಣವೇ ಸರಿ. ಅತಿಥಿಗಳು ಲಿಫ್ಟ್ ಮೂಲಕ ಗಣಿಯ ಆಳಕ್ಕೆ ಇಳಿಯಬೇಕು. ಈ ವೇಳೆ ಹೊರಗಿನ ಬೆಳಕು ಮತ್ತು ಆಧುನಿಕ ಜಗತ್ತಿನ ಗದ್ದಲಗಳನ್ನು ಮರೆತು ಹೋಗುತ್ತದೆ. ಅಲ್ಲಿ ಮೊಬೈಲ್ ಸಿಗ್ನಲ್ ಆಗಲಿ ಅಥವಾ ವೈ-ಫೈ ಆಗಲಿ ಇರುವುದಿಲ್ಲ. ಪಕ್ಕಾ ಭೂಗತ ಪ್ರಪಂಚದ ನಿಶ್ಶಬ್ದ ಮತ್ತು ಶಾಂತತೆ ಹೋದವರನ್ನು ಸಂಪೂರ್ಣವಾಗಿ ಆವರಿಸಿಕೊಳ್ಳುತ್ತದೆ.

New Project (35)

ವಿಶೇಷತೆಗಳು ಮತ್ತು ಸೌಲಭ್ಯಗಳು

ಯಾವುದನ್ನೇ ಪಡೆಯಬೇಕಾದರೂ ಕೆಲವೊಂದನ್ನು ಕಳೆದುಕೊಳ್ಳಬೇಕಾಗುತ್ತದೆ. ಕೆಲವೊಮ್ಮೆ ಸವಾಲುಗಳು ಹೆಚ್ಚಿರುತ್ತದೆ. ಮಜಾ ಎಂದರೆ ಇಲ್ಲಿ ಖಾಸಗಿ ಶೌಚಾಲಯವಿಲ್ಲ. ಮೂಲಭೂತ ಸೌಲಭ್ಯಗಳು ಗಣಿಯ ಇನ್ನೊಂದು ಭಾಗದಲ್ಲಿದೆ. ಇಲ್ಲದಿದ್ದರೆ ಭೂಮಿಯ ಮೇಲೆ ಬರಬೇಕಾಗುತ್ತದೆ. ಅತಿಥಿಗಳ ಸುರಕ್ಷತೆಗಾಗಿ ಸಿಬ್ಬಂದಿಯೊಬ್ಬರು ಯಾವಾಗಲೂ ಭೂಮಿಯ ಮೇಲೆ ಲಭ್ಯವಿರುತ್ತಾರೆ. ಹಾಗೆಯೇ ಸಂವಹನ ಸಾಧನಗಳ ಮೂಲಕ ಅವರನ್ನು ಸಂಪರ್ಕಿಸಬಹುದು. ಉಪಾಹಾರ ಸೇರಿದಂತೆ ಊಟವನ್ನು ಭೂಗತ ಸೂಟ್‌ಗೇ ತಲುಪಿಸಲಾಗುತ್ತದೆ. ಭೂಮಿಯ ಆಳದಲ್ಲಿ ಊಟ ಮಾಡುವ ಒಂದು ಮಾಂತ್ರಿಕ ಅನುಭವವನ್ನು ನೀಡುತ್ತದೆ.

ಇತರ ಚಟುವಟಿಕೆಗಳು

ಸೂಟ್‌ನಲ್ಲಿ ಉಳಿಯುವುದರ ಜತೆಗೆ, ಸಾಲಾ ಸಿಲ್ವರ್‌ಮೈನ್ ವಿವಿಧ ಚಟುವಟಿಕೆಗಳನ್ನು ಅನುಭವಿಸಬಹುದು. ಪ್ರವಾಸಿಗರು ಭೂಗತ ಸರೋವರಗಳನ್ನು ಅನ್ವೇಷಿಸಬಹುದು, ಮಾರ್ಗದರ್ಶಿ ಪ್ರವಾಸಗಳಲ್ಲಿ ಪಾಲ್ಗೊಳ್ಳಬಹುದು ಅಥವಾ ನೀರಿನಿಂದ ತುಂಬಿದ ಗುಹೆಗಳಲ್ಲಿ ಡೈವಿಂಗ್ ಮಾಡಬಹುದು. ಭೂಮಿಯ ಮೇಲೆ ಸಾಹಸ ಹಾದಿಗಳು, ಐತಿಹಾಸಿಕ ಕಟ್ಟಡಗಳು ಮತ್ತು ಸುಂದರವಾದ ಭೂದೃಶ್ಯಗಳಿವೆ.

ಸಾಲಾ ಸಿಲ್ವರ್‌ಮೈನ್ ಅಲ್ಲಿರುವ ಗಾಢವಾದ ಮೌನ, ಮಂದ ಬೆಳಕಿನಲ್ಲಿ ಕಾಣುವ ನೆರಳು ಮತ್ತು ಭೂಮಿಯ ಒಳಗೆಲ್ಲೋ ಇದ್ದೇವೆ ಎಂಬ ಅರಿವು ವಿಸ್ಮಯವನ್ನು ಮೂಡಿಸುತ್ತದೆ. ತಮ್ಮಿಷ್ಟದವರಿಗೆ ಪ್ರಪೋಸ್‌ ಮಾಡುವ ಉದ್ದೇಶ ಇದ್ದರೆ ಅವರನ್ನು ಇಲ್ಲಿಗೆ ಕರೆದುಕೊಂಡು ಹೋಗಿ ಪ್ರಪೋಸ್‌ ಮಾಡಬಹುದು. ಭಯಕ್ಕಾದರೂ ಒಪ್ಪಿಕೊಳ್ಳಬಹುದು. ವಿವಾಹ ವಾರ್ಷಿಕೋತ್ಸವ ಅಥವಾ ಜನ್ಮದಿನದಂಥ ವಿಶೇಷ ಸಂದರ್ಭಗಳಿಗೆ ಈ ಜಾಗವನ್ನು ಆಯ್ಕೆ ಮಾಡಬಹುದು.

ಇತ್ತೀಚಿನ ಮಾಹಿತಿಯ ಪ್ರಕಾರ, ಈ ಭೂಗತ ಸೂಟ್ ಈಗ ರಾತ್ರಿಯ ವಾಸ್ತವ್ಯಕ್ಕಾಗಿ ಲಭ್ಯವಿಲ್ಲದಿರಬಹುದು. ಆದರೂ, ವಿಶ್ವದ ಅತ್ಯಂತ ಆಳವಾದ ಹೊಟೇಲ್ ಸೂಟ್ ಎಂಬ ಖ್ಯಾತಿ ಮತ್ತು ಇತಿಹಾಸವು ಇಂದಿಗೂ ಗಮನ ಸೆಳೆಯುತ್ತಿದೆ.

Pramod Mohan Hegde

Pramod Mohan Hegde

A media professional with four years of experience in journalism, having worked with leading Kannada publications such as Vistara, Vijayavani, and Vijaya Karnataka as a cinema journalist. Also an author with a keen interest in travel and cinema. Currently serving as Senior Sub Editor at Pravasi Prapancha, contributing editorial expertise and engaging storytelling to the media industry.

ಪ್ರವಾಸಿಗರ ನೆಚ್ಚಿನ ಎವರ್ ಗ್ರೀನ್ ಕೌಂಟಿ...

Read Previous

ಪ್ರವಾಸಿಗರ ನೆಚ್ಚಿನ ಎವರ್ ಗ್ರೀನ್ ಕೌಂಟಿ...

ಪ್ರಕೃತಿಯ ಮೈಮಾಟವನ್ನು ನೋಡಬೇಕೆ? ಸಮತಗೆ ಬನ್ನಿ

Read Next

ಪ್ರಕೃತಿಯ ಮೈಮಾಟವನ್ನು ನೋಡಬೇಕೆ? ಸಮತಗೆ ಬನ್ನಿ