Saturday, May 2, 2026
Saturday, May 2, 2026

ದಿ ಡೋಮ್‌ ರಿಟ್ರೀಟ್‌

ಸಾಮಾನ್ಯ ರೆಸಾರ್ಟ್‌ಗಳಿಗಿಂತ ಭಿನ್ನವಾಗಿ ಪಾಶ್ಚಾತ್ಯ ದೇಶಗಳಲ್ಲಿ ಹೆಸರು ಮಾಡಿರುವ ಡೋಮ್‌ ಅಥವಾ ಗುಂಬಜ್‌ಗಳ ವಿನ್ಯಾಸದ ಸ್ಟೇ ಗಳಲ್ಲಿ ಒಂದು ದಿನವಾದರೂ ಉಳಿದುಕೊಳ್ಳಬೇಕು ಅಂದುಕೊಂಡಿದ್ದೀರಾ..? ಅದಕ್ಕಾಗಿ ಈಗ ವಿದೇಶ ಪ್ರಯಾಣ ಮಾಡಬೇಕಿಲ್ಲ. ಬೆಂಗಳೂರಿನಿಂದ ಕೂಗಳತೆಯ ದೂರದಲ್ಲೇ ಇರುವ ದೊಡ್ಡ ಬಳ್ಳಾಪುರದ ರಾಜಾನುಕುಂಟೆಯಲ್ಲಿರುವ ʻದಿ ಡೋಮ್‌ ರಿಟ್ರೀಟ್‌ʼಗೆ ಭೇಟಿ ನೀಡಿದರೆ ಸಾಕು.

ಬೆಂಗಳೂರಿನ ಸುತ್ತಮುತ್ತಲೂ ವಿಶಿಷ್ಟ ಹಾಗೂ ಆಕರ್ಷಕವಾಗಿರುವ ಅನೇಕ ರೆಸಾರ್ಟ್‌ಗಳಿಗೆ. ಆದರೆ ಡೋಮ್‌ ಅಥವಾ ಗುಂಬಜ್‌ಗಳ ಮಾದರಿಯಲ್ಲಿ ನಿರ್ಮಾಣವಾಗಿರುವ ರೆಸಾರ್ಟ್‌ಗಳನ್ನು ನೋಡಿದ್ದೀರಾ? ಇಲ್ಲವಾದರೆ ಮಹಾನಗರಿಯಲ್ಲೂ ಪ್ರಕೃತಿಯ ಮಧ್ಯೆ ನೆಲೆಸಿರುವ ʻದಿ ಡೋಮ್‌ ರಿಟ್ರೀಟ್ʼ ಬಗ್ಗೆ ನೀವು ತಿಳಿಯಲೇ ಬೇಕು. ನಗರ ಜೀವನದ ಗದ್ದಲದಿಂದ ದೂರವಾಗಿ ಮನಸ್ಸಿಗೆ ಶಾಂತಿ ನೀಡುವ ಈ ತಾಣ ಬೆಂಗಳೂರು ನಗರದಿಂದ ಸುಮಾರು 20–30 ಕಿಮೀ ದೂರದಲ್ಲಿದೆ.

ಇಲ್ಲಿ ನಿರ್ಮಿಸಲಾದ ಗುಂಬಜ್ ಮನೆಗಳು ವಿಶಿಷ್ಟ ವಿನ್ಯಾಸವನ್ನು ಹೊಂದಿದ್ದು, ಪರಿಸರ ಸ್ನೇಹಿಯಾಗಿ ನಿರ್ಮಾಣಗೊಂಡಿದೆ. ಸೌರಶಕ್ತಿ, ಮಳೆನೀರು ಸಂಗ್ರಹಣೆ ಮತ್ತು ಪರಿಸರಕ್ಕೆ ಹಾನಿಯಾಗದ ಅನೇಕ ಯೋಜನೆಗಳೊಂದಿಗೆ ಕಾರ್ಯನಿರ್ವಹಿಸುತ್ತಿರುವ ಈ ರೆಸಾರ್ಟ್‌ ಸಾಮಾನ್ಯ ಹೋಟೆಲ್ ವಾಸ್ತವ್ಯದ ಅನುಭವಕ್ಕಿಂತಲೂ ಭಿನ್ನವಾಗಿದೆ. ಇಲ್ಲಿ ಖಾಸಗಿ ಸ್ವಿಮ್ಮಿಂಗ್ ಪೂಲ್, ಓಪನ್ ಸ್ಕೈ ಸ್ಪ್ಲಾಶ್ ಪೂಲ್ ಮುಂತಾದ ವಿಶೇಷ ಸೌಲಭ್ಯಗಳಿವೆ. ಜತೆಗೆ, ಪ್ರಕೃತಿಯೊಂದಿಗೆ ಕಳೆದುಹೋಗುವುದಕ್ಕಾಗಿಯೇ ಯೋಗ, ಧ್ಯಾನ ಸೇರಿದಂತೆ ಅನೇಕ ಬಗೆಯ ಚಟುವಟಿಕೆಗಳನ್ನು ಆಯೋಜಿಸಲಾಗುತ್ತದೆ. ಕುಟುಂಬ, ಸ್ನೇಹಿತರ ಜತೆಗೆ ಅಥವಾ ಜೋಡಿಗಳಿಗಾಗಿ ಬರುವವರಿಗಿದು ಸೂಕ್ತ ಸ್ಥಳ.

ಇದನ್ನೂ ಓದಿ: ಅಂಡರ್‌ಗ್ರೌಂಡ್‌ ಆಗ್ಬೇಕಂದ್ರೆ ಇಲ್ಲೊಂದ್‌ ಜಾಗವಿದೆ!

ಪಂಚಭೂತಗಳನ್ನು ಪ್ರತಿಬಿಂಬಿಸುವ ರೆಸಾರ್ಟ್‌

ಹಿಂದೂ ಧರ್ಮ ಮತ್ತು ಭಾರತೀಯ ತತ್ವಶಾಸ್ತ್ರದ ಪ್ರಕಾರ ವಿಶ್ವದ ಸೃಷ್ಟಿಗೆ ಆಧಾರವಾಗಿರುವ ಐದು ಮೂಲಭೂತ ಅಂಶಗಳೆಂದರೆ ಅವು ಭೂಮಿ, ನೀರು, ಬೆಂಕಿ, ಗಾಳಿ ಮತ್ತು ಆಕಾಶ. ಈ ಪಂಚಭೂತಗಳನ್ನೇ ಆಧಾರವಾಗಿಸಿಕೊಂಡಿರುವ ಡೋಮ್‌ ರಿಟ್ರೀಟ್‌ ರೆಸಾರ್ಟ್‌, ಇಲ್ಲಿಗೆ ಭೇಟಿ ನೀಡುವ ಅತಿಥಿಗಳಿಗೂ ಇವುಗಳ ಅನುಭವ ನೀಡುತ್ತದೆ. ಕುಂಬಾರಿಕೆಯ ಅನುಭವ ನೀಡುವ ಮೂಲಕ ಭೂಮಿ, ಕೆರೆ ಹಾಗೂ ಖಾಸಗಿ ಈಜು ಕೊಳಗಳ ಮೂಲಕ ನೀರು, ಕ್ಯಾಂಪ್‌ ಫಯರ್‌ ಮೂಲಕ ಬೆಂಕಿ, ಔಟ್‌ ಡೋರ್‌ ಗೇಮ್ಸ್‌ ಹಾಗೂ ಸುಂದರವಾದ ಓಪನ್‌ ಏರಿಯಾಗಳ ಮೂಲಕ ಗಾಳಿ ಹಾಗೂ ಟೆಲಿಸ್ಕೋಪ್‌ ಮೂಲಕ ಬಾಹ್ಯಾಕಾಶ ವೀಕ್ಷಣೆಗೂ ಅನುವು ಮಾಡಿರುವದರಿಂದ ಆಕಾಶದ ಅನುಭವವೂ ನಿಮ್ಮದಾಗಲಿದೆ.

Untitled design - 2026-05-01T201709.967

ಕಯಾಕಿಂಗ್‌, ಬರ್ಡ್‌ ಸೈಟಿಂಗ್‌

ಬೆಂಗಳೂರಿನ ಸಮೀಪದಲ್ಲೇ ಇದ್ದರೂ ಈ ರೆಸಾರ್ಟ್‌ನಲ್ಲಿ ವಾಟರ್‌ ಸ್ಪೋರ್ಟ್ಸ್‌ಗೂ ಅವಕಾಶಗಳನ್ನು ಮಾಡಿಕೊಡಲಾಗಿದೆ. ಕಯಾಕಿಂಗ್‌ ಪ್ರಿಯರಿಗಾಗಿ ಇಲ್ಲಿ ವಿಶೇಷ ಸವಲತ್ತುಗಳಿದ್ದು, ರೆಸಾರ್ಟ್‌ ನಿಗದಿಪಡಿಸಿದ ಸಮಯದಲ್ಲೇ ಕಯಾಕಿಂಗ್‌ ಮಾಡಬಹುದು. ಕಯಾಕಿಂಗ್‌ ಜತೆಗೆ ಬರ್ಡ್‌ ಸೈಟಿಂಗ್‌ ಮಾಡಲು ಬಯಸುವವರಿಗಾಗಿ ವಿಶೇಷ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.

ಆಫ್ರಿಕನ್‌ ಡ್ರಮ್‌ ಸರ್ಕಲ್‌

ಸಾಮಾನ್ಯವಾಗಿ ರೆಸಾರ್ಟ್‌ಗಳಲ್ಲಿ ಬಾನ್‌ ಫಯರ್‌ಗಳು ಇದ್ದೇ ಇರುತ್ತವೆ. ಆದರೆ ಕೆಲವೊಮ್ಮೆ ಅವು ಬಜೆಟ್‌ನಲ್ಲಿ ಸೇರಿಕೊಳ್ಳದೆ ಹೆಚ್ಚುವರಿಯಾಗಿಯೂ ಇರುವುದಿದೆ. ಆದರೆ ಈ ರೆಸಾರ್ಟ್‌ನ ಬಾನ್‌ ಫಯರ್‌ ವಿಭಿನ್ನವೆನಿಸುವುದೇ ಇಲ್ಲಿನ ಆಫ್ರಿಕನ್‌ ಡ್ರಮ್‌ ಸರ್ಕಲ್‌ನಿಂದ. ರಾತ್ರಿ 7ರ ನಂತರ ಬಂದ ಅತಿಥಿಗಳೆಲ್ಲರೂ ಬೆಂಕಿಯ ಸುತ್ತಲೂ ಕುಳಿತುಕೊಂಡು ಆಫ್ರಿಕಾದಲ್ಲಿ ಹೆಸರಾಗಿರುವ ಡ್ರಮ್‌ ಬೀಟ್ಸ್‌ ನುಡಿಸುವ ಅವಕಾಶ ಲಭ್ಯವಿದೆ. ತರಬೇತಿದಾರ ತಿಳಿಸಿಕೊಡುವಂತೆ ಡ್ರಮ್‌ ನುಡಿಸುತ್ತಿದ್ದರೆ ಕೇಳುವುದೇ ಕಿವಿಗೆ ಹಬ್ಬದಂತೆ.

ಇದು ಕೇವಲ ವಿಶ್ರಾಂತಿಗಾಗಿ ಮಾತ್ರವಲ್ಲದೆ, ಕಾರ್ಪೊರೇಟ್ ಕಾರ್ಯಕ್ರಮಗಳು ಮತ್ತು ಪಾರ್ಟಿಗಳಿಗಾಗಿ ಕೂಡ ಬಳಸಲಾಗುತ್ತದೆ. ದೊಡ್ಡ ಸಮಾರಂಭಗಳನ್ನು ಆಯೋಜಿಸಲು ಬೇಕಾದ ಸೌಲಭ್ಯಗಳೂ ಇಲ್ಲಿದ್ದು, ಡೆಸ್ಟಿನೇಷನ್‌ ವೆಡ್ಡಿಂಗ್‌ಗೆ ಹೇಳಿ ಮಾಡಿಸಿದಂಥ ತಾಣವಾಗಿದೆ.

ಇಲ್ಲಿ ಏನೇನಿದೆ ?

ಒಳಾಂಗಣ ಹಾಗೂ ಹೊರಾಂಗಣ ಚಟುವಟಿಕೆಗಳು

ಮಿನಿ ಗಾಲ್ಫ್‌ ಕೋರ್ಟ್‌

ಕ್ಯಾಂಪ್‌ ಫಯರ್‌

ಮಲ್ಟಿ ಕ್ವಿಸಿನ್‌ ರೆಸ್ಟೊರೆಂಟ್‌

ಸೆಲ್ಫೀ ಸ್ಪಾಟ್ಸ್‌

ಕ್ಯಾಂಡಲ್‌ಲೈಟ್‌ ಡಿನ್ನರ್‌‌

Untitled design - 2026-05-01T201717.559

ರೆಸಾರ್ಟ್‌ಗೆ ಗುಂಬಜ್‌ ವಿನ್ಯಾಸವೇ ಏಕೆ ?

ಉಳಿದ ವಿನ್ಯಾಸಗಳಿಗಿಂತಲೂ ಡೋಮ್‌ ಅಥವಾ ಗುಂಬಜ್‌ ವಿನ್ಯಾಸದ ಕಟ್ಟಡಗಳು ಹೆಚ್ಚು ಆಕರ್ಷಕವಾಗಿ ಕಾಣಿಸುತ್ತವೆ. ಅಲ್ಲದೆ ಈ ವಿನ್ಯಾಸಗಳ ನಿರ್ಮಾಣಕ್ಕೆ ಕಬ್ಬಿಣ, ಕಾಂಕ್ರೀಟು ಬೇಕಾಗುವುದಿಲ್ಲ. ಬದಲಾಗಿ ಸಿಮೆಂಟ್‌ ಅಥವಾ ಮಣ್ಣಿನ ಇಟ್ಟಿಗೆಗಳನ್ನು ಸರಿಯಾದ ರೀತಿಯಲ್ಲಿ ಜೋಡಿಸಿಕೊಂಡರೆ ರೂಫ್‌, ಪಿಲ್ಲರ್‌ಗಳಿಲ್ಲದೆಯೇ ಈ ವಿನ್ಯಾಸ ಸಿದ್ಧವಾಗುತ್ತದೆ. ಇವೆಲ್ಲದಕ್ಖೂ ಮುಖ್ಯವಾಗಿ ಡೋಮ್‌ಗಳು ಬಹುಬೇಗನೆ ಎನರ್ಜಿಯನ್ನು ಸೆಳೆಯುತ್ತವೆ. ಈಗ ಮಾರುಕಟ್ಟೆಯಲ್ಲಿ ಲಭ್ಯವಿರುವ ಹಗುರವಾಗಿರುವ ಎಎಸಿ ಬ್ಲಾಕ್ಸ್‌ ಈ ಡೋಮ್‌ಗಳ ನಿರ್ಮಾಣಕ್ಕೆ ಯೋಗ್ಯವಾಗಿವೆ.

ಒಟ್ಟಿನಲ್ಲಿ ದಿ ಡೋಮ್‌ ರಿಟ್ರೀಟ್‌ ಬೆಂಗಳೂರು ಆಸುಪಾಸಿನಲ್ಲೇ ನಿರ್ಮಾಣಗೊಂಡಿರುವ ವಿಶೇಷ ರೆಸಾರ್ಟ್‌ಗಳಲ್ಲಿ ಒಂದಾಗಿದ್ದು, ಪ್ರಕೃತಿ, ವಿಶೇಷ ಸೌಕರ್ಯಗಳು ಮತ್ತು ಹೊಸ ವಿನ್ಯಾಸಗಳೆಲ್ಲವನ್ನೂ ಏಕಕಾಲದಲ್ಲಿ ಬಯಸುವವರಿಗೆ ಇದು ಅತ್ಯುತ್ತಮ ಸ್ಥಳವೆನಿಸಿಕೊಂಡಿದೆ. ದಿನನಿತ್ಯದ ಒತ್ತಡದಿಂದ ದೂರವಾಗಿ ನೆಮ್ಮದಿಯಿಂದ ಕಾಲ ಕಳೆಯಲು ಈ ರಿಟ್ರೀಟ್ ಉತ್ತಮ ಆಯ್ಕೆಯಾಗಿದೆ.

ದಿ ಡೋಮ್‌ ರಿಟ್ರೀಟ್‌ ಶ್ರೀಮಂತರಿಗೆ, ಸಾಮಾನ್ಯ ಜನರಿಗೆ ಎಂಬ ಭೇದ ಮಾಡುವುದಿಲ್ಲ. ಇದು ಜನರಿಗಾಗಿ ಅಷ್ಟೇ. ಇಲ್ಲಿನ ಬರುವ ಅತಿಥಿಗಳಿಗೆ ಪಂಚಭೂತಗಳ ಅನುಭವ ನೀಡಬೇಕೆಂಬುದು ನಮ್ಮ ಧ್ಯೇಯವಾಗಿತ್ತು. ಈ ಧ್ಯೇಯವನ್ನು ಎಲ್ಲರೂ ಅನುಭವಿಸಿ, ಒಪ್ಪಿಕೊಂಡಿದ್ದಾರೆ. ಇದೇ ಯೋಜನೆಯನ್ನು ಮಡಿಕೇರಿಯಲ್ಲೂ ತರುವ ಉದ್ದೇಶವಿದೆ. ಅದಕ್ಕಾಗಿ ಈಗಾಗಲೇ ಮಡಿಕೇರಿಯ 10 ಎಕರೆ ಅರಣ್ಯ ಭೂಮಿಯಲ್ಲಿ 46-47 ಕಾಟೇಜ್‌ ಗಳ ಗುಂಬಜ್‌ ವಿನ್ಯಾಸಗಳು ನಿರ್ಮಾಣದ ಹಂತದಲ್ಲಿದೆ. ಅಲ್ಲಿ ಎರಡು ವರ್ಷಗಳ ಕಾಲ ಇಕೋ ಸರ್ವೇ ಮಾಡಿದ ನಂತರ ಈ ಪ್ರಾಜೆಕ್ಟ್‌ ಕಾರ್ಯರೂಪಕ್ಕೆ ಬರಲು ಸಿದ್ಧವಾಗುತ್ತಿದೆ.

- ಜೀವನ್‌ ಶೆಟ್ಟಿ ಹಾಗೂ ಸಂಜೀವ್‌ ಕುಮಾರ್‌ ಬಿ , ಮಾಲೀಕರು

--

ವಿಳಾಸ:

ಅರ್ದೇಶನಹಳ್ಳಿ ಗೇಟ್, 151, ದೊಡ್ಡಬಳ್ಳಾಪುರ ಮುಖ್ಯ ರಸ್ತೆ, ಸುರಧೇನಪುರ, ಬೆಂಗಳೂರು, ಕರ್ನಾಟಕ 562110

ಮೊ: 8883411155

Bhagya Divana

Bhagya Divana

Bhagya Divana is a Professional Journalist. Working in Pravasi Prapancha.

ಪ್ರವಾಸಿಗರ ನೆಚ್ಚಿನ ಎವರ್ ಗ್ರೀನ್ ಕೌಂಟಿ...

Read Previous

ಪ್ರವಾಸಿಗರ ನೆಚ್ಚಿನ ಎವರ್ ಗ್ರೀನ್ ಕೌಂಟಿ...

ಪ್ರಕೃತಿಯ ಮೈಮಾಟವನ್ನು ನೋಡಬೇಕೆ? ಸಮತಗೆ ಬನ್ನಿ

Read Next

ಪ್ರಕೃತಿಯ ಮೈಮಾಟವನ್ನು ನೋಡಬೇಕೆ? ಸಮತಗೆ ಬನ್ನಿ