ದಿಲ್‌ಪಸಂದ್ ಡೈಕರ್ ಹೈಟ್ಸ್
ನಕ್ಷತ್ರಗಳು, ಕ್ರಿಸ್ತನ ಜನನ, ಕ್ರಿಸ್ಮಸ್ ಮರಗಳು, ಸಾಂತಾಕ್ಲಾಸ್, ಚರ್ಚ್, ಶಾಪಿಂಗ್ ಸೆಂಟರ್‌ಗಳ ಮಾದರಿಗಳು, ಮಕ್ಕಳ ಆಟೋಟಗಳು, ಜನಜಂಗುಳಿ, ಅಲ್ಲಲ್ಲಿ ತಿಂಡಿ ತಿನಿಸುಗಳ ಪುಟ್ಟ ಪುಟ್ಟ ಗಾಡಿಗಳು, ಕೊರೆವ ಚಳಿಗೆ ಬಿಸಿಬಿಸಿ ತಿನಿಸುಗಳು ಸಾಕಷ್ಟು ಇದ್ದವು. ಗಾಳಿ ತುಂಬಿದ ಬೃಹದಾಕಾರದ ಬೊಂಬೆಗಳಿಗೂ ಚಳಿಗಾಲದ ಉಡುಗೆ-ತೊಡುಗೆಗಳನ್ನು ತೊಡಿಸಿದ್ದರು. ಹವಾಮಾನಕ್ಕೆ ತಕ್ಕಂತೆ ಟೋಪಿ ಮಫಲರ್ ತೊಟ್ಟ ಬೊಂಬೆಗಳನ್ನು ನೋಡಿ ಆನಂದಿಸುವುದೂ ನನ್ನ ಪಾಲಿಗಾಗಿತ್ತು.
- ಸವಿತಾ ನಾಗೇಶ್
ಅದೊಂದು ದಿನ ಕೆಲಸವನ್ನೆಲ್ಲಾ ಮುಗಿಸಿ ಓದುತ್ತಾ ಕುಳಿತಿದ್ದೆ. ಆಫೀಸಿನಿಂದ ಮಗಳು ಫೋನಾಯಿಸಿ ಅಮ್ಮ ಸಂಜೆ 5ಕ್ಕೆ ರೆಡಿಯಿರು. ನಿನ್ನನ್ನು ಒಂದು ಕಡೆ ಕರೆದುಕೊಂಡು ಹೋಗ್ತೀನಿ. ಇಷ್ಟು ವರ್ಷದಿಂದ ನಾನಿಲ್ಲಿ ಇದ್ದರೂ ಈ ಸ್ಥಳವನ್ನು ನೋಡಲಾಗಲಿಲ್ಲ. ನಿನ್ನ ದಯೆಯಿಂದ ನನಗೂ ನೋಡುವ ಭಾಗ್ಯ ಒದಗಿದೆ ಎಂದಾಗ, ಯಾವ ಜಾಗ ಎಂದು ಕೇಳಿದೆ. ನೀನೇ ನೋಡುವೆಯಂತೆ ತಾಳು, ಎನ್ನುತ್ತ ನನ್ನಲ್ಲಿದ್ದ ಉತ್ಸುಕತೆಯನ್ನು ಇಮ್ಮಡಿಗೊಳಿಸಿದಳು. ಯೋಚಿಸುತ್ತಲೇ ಸಂಜೆಗೆ ರೆಡಿಯಾಗಿ ಕುಳಿತೆ. ಕೊರೆವ ಚಳಿ, ಬೇಗನೇ ಕತ್ತಲಾಗುವ ವಾತಾವರಣ ಇದ್ದುದರಿಂದ ಇಡೀ ದೇಹವನ್ನೆಲ್ಲಾ ಪ್ಯಾಕ್ ಮಾಡಿಕೊಂಡು ಅಮ್ಮ ಮಗಳು ಹೊರಟು ನಿಂತಾಗ ಗೆಳತಿಯರಾದ ವಿನೀತಾ, ಅರ್ಪಿತ ಕೂಡಾ ಜತೆಯಾದರು.
ಇದೊಂದು ಅದ್ಭುತ ಸ್ಥಳ. ದೀಪಗಳಿಂದ ಅಲಂಕೃತಗೊಂಡ ಸುಂದರ ಬಂಗಲೆಗಳನ್ನು ನೋಡುವುದೇ ಒಂದು ವಿಸ್ಮಯ.ವೈವಿಧ್ಯ ದೀಪಗಳು ಗೊಂಬೆಗಳು ಕಣ್ಮನ ಸೆಳೆದವು. ಅಲ್ಲಿನ ಹಲವು ರಸ್ತೆಗಳಲ್ಲಿ ಇಂಥ ಸುಂದರ ದೃಶ್ಯವನ್ನು ನೋಡಿ ಆನಂದಿಸಬಹುದು. ಎಲ್ಲಿ ಎಂದಿರಾ? ನ್ಯೂಯಾರ್ಕ್ ಸಿಟಿಯ ಬ್ರುಕ್ಲಿನ್‌ನಲ್ಲಿನ ‘ಡೈಕರ್ ಹೈಟ್ಸ್’ ಎಂಬ ಸುಂದರ ನಗರ.

ಥ್ಯಾಂಕ್ಸ್ ಗೀವಿಂಗ್ ಮುಗಿಯುತಿದ್ದಂತೆ, ಕ್ರಿಸ್ತನ ಆಗಮನದ ಸಡಗರ ಅಮೆರಿಕನ್ನರಿಗೆ ಬಹು ದೊಡ್ಡ ಹಬ್ಬ. ಇನ್ನೂ ತಿಂಗಳಿದೆ ಎನ್ನುವಾಗಲೇ ತಮ್ಮ ಮನೆ, ಕಚೇರಿ, ನಗರ, ಹೊಟೇಲ್, ರೆಸ್ಟೋರೆಂಟ್‌ಗಳನ್ನು ಸುಂದರವಾಗಿ ಅಲಂಕರಿಸುತ್ತಾರೆ. ಅವುಗಳಲ್ಲಿ ಡೈಕರ್ ಹೈಟ್ಸ್ ಕಂಡು ನನ್ನ ಮನಸೂರೆಗೊಂಡಿತು. ರಾತ್ರಿಯಲ್ಲಿ ವರ್ಣರಂಜಿತ, ಸುಂದರ ದೀಪಗಳ ಸಾಲುಗಳಿಂದ ಬಂಗಲೆಗಳ ಸುಂದರ ಜಗತ್ತಿನ ಅನಾವರಣವಾಗಿತ್ತು. ನೋಡಲು ಕಣ್ಣೆರಡು ಸಾಲದಾಗಿತ್ತು.
ನಕ್ಷತ್ರಗಳು, ಕ್ರಿಸ್ತನ ಜನನ, ಕ್ರಿಸ್ಮಸ್ ಮರಗಳು, ಸಾಂತಾಕ್ಲಾಸ್, ಚರ್ಚ್, ಶಾಪಿಂಗ್ ಸೆಂಟರ್‌ಗಳ ಮಾದರಿಗಳು, ಮಕ್ಕಳ ಆಟೋಟಗಳು, ಜನಜಂಗುಳಿ, ಅಲ್ಲಲ್ಲಿ ತಿಂಡಿ ತಿನಿಸುಗಳ ಪುಟ್ಟ ಪುಟ್ಟ ಗಾಡಿಗಳು, ಕೊರೆವ ಚಳಿಗೆ ಬಿಸಿಬಿಸಿ ತಿನಿಸುಗಳು ಸಾಕಷ್ಟು ಇದ್ದವು. ಗಾಳಿ ತುಂಬಿದ ಬೃಹದಾಕಾರದ ಬೊಂಬೆಗಳಿಗೂ ಚಳಿಗಾಲದ ಉಡುಗೆ-ತೊಡುಗೆಗಳನ್ನು ತೊಡಿಸಿದ್ದರು. ಹವಾಮಾನಕ್ಕೆ ತಕ್ಕಂತೆ ಟೋಪಿ ಮಫಲರ್ ತೊಟ್ಟ ಬೊಂಬೆಗಳನ್ನು ನೋಡಿ ಆನಂದಿಸುವುದೂ ನನ್ನ ಪಾಲಿಗಾಗಿತ್ತು. ಬೃಹದಾಕಾರದ ಮರಗಳು, ಗೊಂಬೆಗಳು ಒಂದೆಡೆಯಾದರೆ, ಇನ್ನೊಂದೆಡೆ ಬಂಗಲೆಗಳ ಮುಂದೆ ಅವುಗಳ ಮಾದರಿಗಳು ಇದ್ದುದು ನೋಡಲು ಸಿಕ್ಕವು.

ಇಲ್ಲಿನ 80 ಮತ್ತು 81ನೇ ಸ್ಟ್ರೀಟ್ ಬ್ರುಕ್ಲಿನ್‌ನ ನೈಬರ್ ಆಗಿದ್ದು 11 ಮತ್ತು 13ನೇ ಅವೆನ್ಯೂ ನಡುವೆಯಿದೆ. ನಾವು ನವರಾತ್ರಿಯಲ್ಲಿ ಪ್ರತಿ ಮನೆಯಲ್ಲೂ ದಸರಾ ಬೊಂಬೆಗಳನ್ನು ಜೋಡಿಸಿ ಅಲಂಕರಿಸುವಂತೆ, ಕ್ರಿಸ್ಮಸ್‌ನ ಆಚರಣೆಯಲ್ಲಿ ಇಲ್ಲಿ ತಮ್ಮ ಇಡೀ ಭವ್ಯ ಬಂಗಲೆಗಳಿಗೆ ದೀಪಗಳಿಂದ ಅಲಂಕರಿಸುತ್ತಾರೆ. ತರಹೇವಾರಿ ಬೊಂಬೆಗಳನ್ನೂ ಇಟ್ಟು ಆನಂದಿಸುತ್ತಾರೆ. ಇಲ್ಲಿ ಸೆಲೆಬ್ರೆಟಿಗಳು, ಚಿತ್ರನಟರು, ಗಾಯಕರು ಹಾಗೂ ವ್ಯಾಪಾರಿಗಳು ಮುಖ್ಯವಾಗಿ ಬಿಲ್ಡರ್ಸ್‌ಗಳೂ ಇರುತ್ತಾರೆ. ಈ ಆಚರಣೆಯ ಮುಖ್ಯ ಉದ್ದೇಶ ತಮ್ಮ ಸಮುದಾಯದ ಜನರೊಂದಿಗೆ ಸಂಪರ್ಕ ಸಾಧಿಸುವುದು, ಪ್ರೀತಿ ಹಂಚಿಕೊಳ್ಳುವುದು ಎನ್ನುತ್ತಾರೆ ಇಲ್ಲಿನ ಜನ. ಬೇ ರಿಡ್ಜ್ ಡೈಕರ್ ಹೈಟ್ಸ್ ‘ಮೆರಿಲ್ ಸ್ಟ್ರೀಪ್ ಲೈಟ್ಸ್’ ‘ಲಿಂಡ್ಸೆ ಲೋಹನ್ ಲೈಟ್ಸ್’ನ್ನು ಹೊಂದಿದೆ.
ಬ್ರೂಕ್ಲಿನ್ ಟೇಸ್ಟಿಂಗ್
ಇದು ಪ್ರವಾಸದ ಅಂತಿಮ ನಿಲುಗಡೆ, ಬೆನ್ಸನ್ ಹರ್ಸ್ಟ್ನಲ್ಲಿರುವ ಮೋನಾಲಿಸಾ ಬೇಕರಿ. ಇಲ್ಲಿನ ಹಾಲಿಡೇ ಪಾಕಪದ್ಧತಿಯನ್ನು ಸವಿಯುವ ಅವಕಾಶವನ್ನು ನೀಡುತ್ತದೆ. ಜೊತೆಗೆ ಕುಕ್ಕೀಸ್, ಇಟಾಲಿಯನ್ ಹಾಗೂ ಪ್ರೆಂಚ್ ಪೇಸ್ಟಿçÃಸ್, ಕೇಕ್‌ಗಳು, ಇಟಾಲಿಯನ್ ಬ್ರೆಡ್‌ಗಳದ್ಧೇ ಕಾರುಬಾರು ಏಕೆಂದರೆ ಇವೆಲ್ಲವೂ ವಿಶೇಷ ರುಚಿಯನ್ನು ನೀಡುವಂತಹ ತಿನಿಸುಗಳು. ಒಟ್ಟಿನಲ್ಲಿ ರಾತ್ರಿಯ ಭವ್ಯ ಬಂಗಲೆಗಳ ದೀಪಗಳ ಸುಂದರ ಜಗತ್ತಿನ ಲೋಕದ ಸವಿನೆನಪುಗಳ ಹೊತ್ತು ಮನೆ ಸೇರುವಾಗ ನೈಜ್ಯ ಹುಣ್ಣಿಮೆ ಬೆಳಕ ಬೀರುತ್ತಿದ್ದ ಚಂದ್ರನೂ ಕೂಡಾ ಜೊತೆಯಾದದ್ದು ಇನ್ನೂ ಹೆಚ್ಚಿನ ಖುಷಿ ನೀಡಿತು. ಅಲ್ಲಿನ ಸಂಸ್ಕೃತಿಯನ್ನು ತೋರಿಸಿದ ಮಗಳಿಗದೆಷ್ಟು ಥ್ಯಾಂಕ್ಸ್ ಹೇಳಿದೆನೋ ನನಗೇ ತಿಳಿಯೋಲ್ದು!