ಬಾಲಿ ಬಾಲಿ ಎಲ್ಲ ಜಾಲಿ ಜಾಲಿ
ಕಿಂಟಾಮನಿ ಇದು ಬಟೂರ್ ಪರ್ವತದಲ್ಲಿರುವ ಸಕ್ರಿಯ ಜ್ವಾಲಾಮುಖಿ. ಇಲ್ಲಿಗೆ ತಲುಪುವ ದಾರಿಯಲ್ಲಿನ ಹೊಟೇಲ್, ವ್ಯೂ ಪಾಯಿಂಟ್‌ಗಳಿಂದಲೇ ಜ್ವಾಲಾಮುಖಿಯನ್ನು ನೋಡಬಹುದು. ಆಸಕ್ತರು ಬಟೂರ್ ಪರ್ವತವನ್ನು ಮುಂಜಾನೆ ಹತ್ತಬಹುದು. ನಾವು ಜ್ವಾಲಾಮುಖಿ ಹೊರಹಾಕಿದ್ದ ‘ಲಾವಾ’ ಬೆಟ್ಟಗಳನ್ನು ನೋಡಿ ಬಂದೆವು. ಅಂಕು ಡೊಂಕಾದ ಕಚ್ಚಾ ಹಾದಿಯಾದ್ದರಿಂದ ಇದೊಂದು ರೋಚಕ ಅನುಭವ. ಭದ್ರವಾಗಿ ಕುಳಿತುಕೊಳ್ಳಬೇಕು. ಪರ್ವತದ ಹಿಂದೆ ಬಾಲಿಯ ಅತ್ಯಂತ ದೊಡ್ಡ ಸರೋವರವಿದೆ.
- ಶೈಲಜಾ ಪ್ರಸಾದ್
ಬಾಲಿಗೆ ಬೆಂಗಳೂರಿನಿಂದ ಹೆಚ್ಚೂಕಮ್ಮಿ 6 ಗಂಟೆಗಳ ವಿಮಾನಪ್ರಯಾಣ. ಬೆಂಗಳೂರಿನಲ್ಲೇ ಟ್ರಾವೆಲ್ಸ್ ಮೂಲಕ ವಾಸ್ತವ್ಯ ಹಾಗೂ ಇತರ ಸೌಲಭ್ಯಗಳನ್ನು ಮಾಡಿಕೊಂಡಿದ್ದೆವು. ಹಾಗಾಗಿ ಟ್ಯಾಕ್ಸಿ ಡ್ರೈವರ್ ನಮ್ಮನ್ನು ಏರ್‌ಪೋರ್ಟ್‌ನಲ್ಲಿ ಸ್ವಾಗತಿಸಿ ಹೊಟೇಲ್‌ಗೆ ಕರೆದೊಯ್ದರು. ಅಲ್ಲಿಂದ ನಾವು ಮೊದಲು ಹೋಗಿದ್ದು ʻಕೂಟʼ ಎಂಬ ಊರಿಗೆ. ಅಲ್ಲಿನ ಕೂಟ ಬೀಚ್ ಹೆರಿಟೇಜ್‌ನಲ್ಲಿ ದಿನವೆಲ್ಲಾ ವಿಶ್ರಾಂತಿ ಪಡೆದೆವು. ಬಾಲಿಯ ಕಾಲಮಾನ ಭಾರತಕ್ಕಿಂತ ಮೂರೂವರೆ ಗಂಟೆಗಳು ಮುಂದಿರುತ್ತದೆ.
ಮರುದಿನ ಬೆಳಗ್ಗೆ ನಮ್ಮ ಗೈಡ್ ‘ಜಯ’ ಅವರೊಂದಿಗೆ ಸೈಟ್ ಸೀಯಿಂಗ್ ಶುರುಮಾಡಿದೆವು.ಇಲ್ಲಿ ಎಲ್ಲೆಲ್ಲೂ ಹಿಂದೂ ಸಂಸ್ಕೃತಿಯೇ ಎದ್ದು ಕಾಣುತ್ತಿದ್ದುದು ನನ್ನ ಗಮನ ಸೆಳೆಯಿತು. ಹಾಗಾಗಿ ಪರದೇಶಕ್ಕೆ ಹೋಗಿದ್ದೇವೆ ಎಂದು ಅನಿಸಲೇ ಇಲ್ಲ. ಜಯ 23-24 ವಯಸ್ಸಿನ ಯುವಕ. ತುಂಬಾ ಚೆನ್ನಾಗಿ ಬಾಲಿಯ ಸಾಂಸ್ಕೃತಿಕ, ಸಾಮಾಜಿಕ ಮಹತ್ವಗಳನ್ನು ವಿವರಿಸಿ ಎಲ್ಲ ಸ್ಥಳಗಳನ್ನು ತೋರಿಸಿದರು. ಅಲ್ಲಿಯ ಧಾರ್ಮಿಕ ಆಚರಣೆಗಳ ಬಗ್ಗೆ ನಾವು ಕೇಳಿದ್ದಕ್ಕೆ ಉತ್ಸಾಹದಿಂದಲೇ ತಿಳಿಸಿದ್ದು ಖುಷಿಯೆನಿಸಿತು. ಇಲ್ಲಿ ಮೂರ್ತಿ ಆರಾಧನೆಯಿಲ್ಲ. ನಿಸರ್ಗವನ್ನೇ ಪೂಜಿಸುತ್ತಾರೆ. ಎಲ್ಲರಿಗೂ ಅವರವರ ಖಾಸಗಿ ದೇಗುಲಗಳು, ಸಾರ್ವಜನಿಕ ದೇಗುಲಗಳು ಹಾಗೂ ಕಾರ್ಯಕ್ರಮಗಳಿಗೆಂದೇ ಪ್ರತ್ಯೆಕ ದೇವಾಲಯಗಳು ಇರುತ್ತವೆ ಎಂದೂ ತಿಳಿಸಿದರು. ಇಲ್ಲಿನ ಮನೆ ಮತ್ತು ಅಂಗಡಿಗಳ ಮುಂದೆ/ಮೇಲೆ ಚಿಕ್ಕ, ಚಿಕ್ಕ ಗೋಪುರಗಳ ರಚನೆಗಳಿವೆ. ಇವು ʻಲಾವಾʼ ಕಲ್ಲಿನಿಂದ ಮಾಡಿರುವಂಥವು.

ಮೊದಲು ನಾವು ಗರುಡ-ವಿಷ್ಣು ಕೆಂಚಾನ ಸಾಂಸ್ಕೃತಿಕ ಉದ್ಯಾನಕ್ಕೆ ಹೋದೆವು. ಇಲ್ಲಿ ವಿಷ್ಣು ದೇವರು ಗರುಡನ ಮೇಲೆ ಕುಳಿತ ಭಂಗಿಯ ಬೃಹತ್ ಪ್ರತಿಮೆಯಿದೆ. 121ಮೀ ಎತ್ತರದ ಇದು ಇಂಡೋನೇಷ್ಯಾದ ಅತಿ ಎತ್ತರದ ಪ್ರತಿಮೆಗಳಲ್ಲಿ ಒಂದು. ವಿಶ್ವದ ಅತಿ ಎತ್ತರದ ಹಿಂದೂ ದೇವರ ಪ್ರತಿಮೆಗಳಲ್ಲೂ ಒಂದಾಗಿದೆ. ಇದು ಬಾಲಿಯ ಬುಕಿಟ್ ಪರ್ಯಾಯ ದ್ವೀಪದಲ್ಲಿದೆ. ಸುಮಾರು 60 ಹೆಕ್ಟೆರ್ ವಿಸ್ತಾರವಾಗಿದೆ. ತಾಮ್ರ ಮತ್ತು ಹಿತ್ತಾಳೆಯಿಂದ ಕೂಡಿದ್ದು, 4000 ಟನ್ ತೂಕವಾಗಿದೆ. ಕಾರಣಾಂತರಗಳಿಂದ ಇದರ ನಿರ್ಮಾಣ ಕಾರ್ಯ ಆಗಾಗ ನಿಂತುಹೋಗಿ ಪೂರ್ಣವಾಗಲು ಸುಮಾರು 28 ವರ್ಷಗಳು ಬೇಕಾಯಿತು ಎಂದು ನಮ್ಮ ಗೈಡ್ ತಿಳಿಸಿದರು. ಕಡೆಗೆ 2018ರಲ್ಲಿ ಇದನ್ನು ಉದ್ಘಾಟಿಸಲಾಯಿತು. ನ್ಯೋಮನ್ ನುವಾರ್ಟಾ ಎಂಬ ಇಂಡೋನೇಷ್ಯಾದ ಪ್ರಸಿದ್ಧ ಶಿಲ್ಪಿ ಇದರ ವಿನ್ಯಾಸಕಾರ.
ವಿಷ್ಣುವಿನ ಪ್ರತಿಮೆಯು 23ಮೀ ಎತ್ತರವಾಗಿದ್ದು, ಇಲ್ಲಿಂದ ಸುತ್ತಲಿನ ಪ್ರಕೃತಿಯ ಸುಂದರ ದೃಶ್ಯಗಳನ್ನು ಕಾಣಬಹುದು. ವೈವಿಧ್ಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಿರುತ್ತಾರೆ. ಈ ಬೃಹತ್ ಪ್ರತಿಮೆಯ ಮೇಲೆ ಹೋಗಲು ಟಿಕೆಟ್ ಕೊಳ್ಳಬೇಕು. ಇಲ್ಲಿನ ನೆಲಹಾಸು ಗಾಜಿನದ್ದಾದ್ದರಿಂದ ಪಾದರಕ್ಷೆಗಳ ಮೇಲೆ ಪ್ಲಾಸ್ಟಿಕ್ ಶೀಟ್ ಹಾಕಬೇಕು. ಮೊದಲ ಒಂದೆರೆಡು ಅಂತಸ್ತುಗಳಲ್ಲಿ ಪ್ರತಿಮೆ ನಿರ್ಮಾಣಕ್ಕೆ ಬಳಸಿರುವ ಲೋಹಗಳು, ವಿನ್ಯಾಸದ ಚಿತ್ರಗಳಿವೆ. ವಿಷ್ಣುವಿನ ಶಂಖ, ಚಕ್ರ, ಗದೆ ಹಾಗೂ ಕಿರೀಟಗಳನ್ನು ಗಾಜಿನ ಶೋಕೇಸ್‌ಗಳಲ್ಲಿ ಇಟ್ಟಿದ್ದಾರೆ.
ಇಲ್ಲಿ ಒಂದೆಡೆ ವಿಷ್ಣುವಿಗೆ ಗರುಡ ಏಕೆ ವಾಹನವಾದನೆಂಬ ಮಾಹಿತಿಯನ್ನು ನೀಡುವ ಕಿರು ಚಿತ್ರವನ್ನು ಪ್ರದರ್ಶಿಸುತ್ತಾರೆ. ಗರುಡ ತನ್ನ ತಾಯಿ ವಿನತೆಯನ್ನು ಕದ್ರುವಿನ ಸೆರೆಯಿಂದ ಬಿಡಿಸಿ ತರಲು ಸ್ವರ್ಗದಿಂದ ಅಮೃತವನ್ನು ತರುತ್ತಾನೆ. ಇದನ್ನು ಕಂಡು ವಿಷ್ಣು ಸಂತುಷ್ಟನಾಗಿ ಗರುಡನನ್ನು ತನ್ನ ವಾಹನವಾಗಿ ಮಾಡಿಕೊಂಡ ಎಂದು ಹೇಳಲಾಗುತ್ತದೆ. ಇಲ್ಲಿ ಒಂದೆಡೆ ಗರುಡನ ತಾಯಿ ವಿನತೆಯ ಪ್ರತಿಮೆ ಇರುವುದು ವಿಶೇಷ.
ಉಲುವಾಟಿನ ನೈಟ್
ಇಲ್ಲಿಂದ ಮುಂದೆ ನಾವು ಹೋಗಿದ್ದು, ನಿಸರ್ಗದ ಮಡಿಲಿನಲ್ಲಿನ ʻಉಲುವಾಟು' ದೇಗುಲಕ್ಕೆ. ಇಲ್ಲಿ ನಡೆಸುವ ʻಕೆಕಾಕ್ ಬೆಂಕಿ ನೃತ್ಯʼ ಅಮೋಘವಾಗಿದೆ. ಇದು ರಾಮಾಯಣದ ಕತೆಯನ್ನು ಬಾಲಿ ಸಾಂಪ್ರದಾಯಿಕ ಉಡುಗೆ ತೊಟ್ಟು ಮಾಡುವ ನೃತ್ಯರೂಪಕ. ಸಂಜೆಯ ಕೆಂಪಿನ ಜತೆಗೆ ಸಮುದ್ರದ ನೀಲಿಯ ಸುಂದರ ದೃಶ್ಯಗಳನ್ನು ಇಲ್ಲಿ ಕಾಣಬಹುದು. ಕತ್ತಲಾಗುತ್ತಿದ್ದಂತೆ ಬೆಂಕಿಯ ದೊಂದಿ ಹಿಡಿದು ಪ್ರದರ್ಶನ ಮುಂದುವರೆಸುತ್ತಾರೆ. ಇದಕ್ಕಾಗಿ ಟಿಕೆಟ್ ಕೊಳ್ಳಲು ಉದ್ದದ ಸರದಿಯ ಸಾಲುಗಳಲ್ಲಿ ನಿಲ್ಲುವುದು ಅನಿವಾರ್ಯ.

ಉಲುನ್ ದಾನು ಬೆರಟನ್ ಮತ್ತು ತನಾಹ್ ಲಾಟ್
ಸಮುದ್ರತೀರದಲ್ಲಿ ಇರುವ ದೇಗುಲಗಳು ಇವು. ಸುಂದರ ವಾಸ್ತುಶಿಲ್ಪ ಹೊಂದಿವೆ. ಕಣ್ಮನ ಸೆಳೆಯುವ ನಿಸರ್ಗದ ನಡುವೆ ಬಾಲಿಯ ವಿಶಿಷ್ಟ ವಿನ್ಯಾಸದ ಗೋಪುರಗಳನ್ನು ನೋಡುವುದೇ ವಿಶಿಷ್ಟ ಅನುಭವ. ಬಾಲಿಯ ಯಾವ ದೇಗುಲದ ಒಳಗೆ ಹೋಗಲೂ ಪ್ರವಾಸಿಗೆ ಅನುಮತಿಯಿಲ್ಲ. ಪ್ರಾಂಗಣಕ್ಕೆ ಹೋಗಬಹುದು. ಅದೂ ಅವರ ಸಾಂಪ್ರದಾಯಿಕ ಉಡುಪು ʻಬಾರಾಂಗ್' ಮತ್ತು ಶಾಲನ್ನು ಧರಿಸಿಕೊಂಡರೆ ಮಾತ್ರ. ದೇಗುಲಗಳ ಮುಂದೆ ಪ್ರವಾಸಿಗಳಿಗೆಂದು ಇವುಗಳನ್ನು ಇಟ್ಟಿರುತ್ತಾರೆ. ಬಳಸಿ ಮತ್ತೆ ಹಿಂದಿರುಗಿಸಬೇಕು.
ಲೆಂಪುಯಾಗ್ ದೇಗುಲ
ಇದು ತುಂಬಾ ಎತ್ತರದಲ್ಲಿದ್ದು ನಡೆಯಲು ಆಗದವರು ಅಲ್ಲಿ ಸಿಗುವ ಬಾಡಿಗೆ ಸ್ಕೂಟರಿನಲ್ಲಿ ಮೇಲೇರಬಹುದು. ಇಲ್ಲಿನ ʻಗೇಟ್ ಆಫ್ ಹೆವೆನ್' ತುಂಬಾ ವಿಶೇಷ ಅನುಭವ ನೀಡುತ್ತದೆ. ಇದನ್ನು ಬಾಲಿ ಫ್ರೇಂ ಎಂದೂ ಕರೆಯುತ್ತಾರೆ. ಇಲ್ಲಿ ಇರುವ ಸುಂದರ ವಿನ್ಯಾಸದ ಎರಡು ಗೋಪುರಗಳನ್ನು ನಿರ್ಮಿಸಿದ್ದು, ಆಕರ್ಷಕವಾಗಿದೆ. ಪ್ರವಾಸಿಗರು ಫೊಟೋ ತೆಗೆದುಕೊಳ್ಳಲು ಮಾತ್ರ ಕ್ರಮಸಂಖ್ಯೆಯ ಚೀಟಿಕೊಂಡು ಕಾಯಲೇಬೇಕು.
ತೀರ್ಥ ಗಂಗಾ ಎಂಬ ಬಾಲಿ ಗಂಗೆ
ಇದು ಜಲ -ಅರಮನೆಗೆ. ಈ ಅರಮನೆಯ ಮುಂದೆ ನೀರಿನ ಕೊಳವಿದ್ದು, ಬಗೆಬಗೆಯ ಹೂ ಗಿಡ, ಬಳ್ಳಿ, ಕಮಾನುಗಳಿಂದ ಕೂಡಿದ್ದು ಮನೋಹರವಾಗಿದೆ. ಇದು ಬಾಲಿಯ ಪೂರ್ವದಲ್ಲಿದ್ದು, 1948ರಲ್ಲಿ ನಿರ್ಮಾಣಗೊಂಡಿದೆ. ತೀರ್ಥ ಗಂಗಾ ಹೆಸರು ಭಾರತದ ಪವಿತ್ರ ಗಂಗಾನದಿಯನ್ನು ಸೂಚಿಸುತ್ತದೆ. ಬಾಲಿಯ ಜನರು ಇದನ್ನು ಪವಿತ್ರವೆಂದು ಧಾರ್ಮಿಕ ಕಾರ್ಯಗಳಿಗೆ ಬಳಸುತ್ತಾರೆ.
ಬಟೂರ್ ಪರ್ವತದಲ್ಲಿ ಕಿಂಟಾಮನಿ ಕಿಡಿ
ಇದು ‘ಬಟೂರ್ʼ ಪರ್ವತದಲ್ಲಿರುವ ಸಕ್ರಿಯ ಜ್ವಾಲಾಮುಖಿ. ಇಲ್ಲಿಗೆ ತಲುಪುವ ದಾರಿಯಲ್ಲಿನ ಹೊಟೇಲ್, ವ್ಯೂ ಪಾಯಿಂಟ್‌ಗಳಿಂದಲೇ ಜ್ವಾಲಾಮುಖಿಯನ್ನು ನೋಡಬಹುದು. ಆಸಕ್ತರು ಬಟೂರ್ ಪರ್ವತವನ್ನು ಮುಂಜಾನೆ ಹತ್ತಬಹುದು. ನಾವು ಜ್ವಾಲಾಮುಖಿ ಹೊರಹಾಕಿದ್ದ ‘ಲಾವಾ’ ಬೆಟ್ಟಗಳನ್ನು ನೋಡಿ ಬಂದೆವು. ಅಂಕು ಡೊಂಕಾದ ಕಚ್ಚಾ ಹಾದಿಯಾದ್ದರಿಂದ ಇದೊಂದು ರೋಚಕ ಅನುಭವ. ಭದ್ರವಾಗಿ ಕುಳಿತುಕೊಳ್ಳಬೇಕು. ಪರ್ವತದ ಹಿಂದೆ ಬಾಲಿಯ ಅತ್ಯಂತ ದೊಡ್ಡ ಸರೋವರವಿದೆ. ಇದನ್ನು ನೋಡಿಕೊಂಡು ಮುಂದೆ ‘ಟುಕಡ್ ಸೆಪಂಗ್ʼ ಹಾಗೂ ‘ಟೆಜಿನಂಗನ್’ ಜಲಪಾತಗಳನ್ನೂ ನೋಡಿದೆವು.
ಬಹಳ ತ್ರಿಲ್ಲಿಂಗ್ ಬಾಲಿ ಸ್ವಿಂಗ್
ಅಲ್ಲಿಂದ ಹೋಟಲ್‌ಗೆ ಮರಳಿದ ರಾತ್ರಿ ನಾವು ‘ಸೆಮಿನ್ಯಾಕ್‘ನ ಹೋಟಲ್ಲಿಗೆ ಚೆಕ್ಕಿನ್ ಆದೆವು. ಮಾರನೆಯ ದಿನ ‘ಟರನ್ಟುಲಾ’ ಎಂಬ ಸುಂದರ ಪ್ರದೇಶಕ್ಕೆ ಭೇಟಿ ನೀಡಿದೆವು. ಆಗ ಕಾರಣಾಂತರಗಳಿಂದ ನಮ್ಮ ಗೈಡ್ ಆಗಿ ಜಯ ಬದಲು ‘ಆಯು’ ಎಂಬ ಮಹಿಳೆಯಾಗಿದ್ದರು. ಇಲ್ಲಿಯೇ ಬಾಲಿಯ ಪ್ರಮುಖ ಆಕರ್ಷಣೆ ‘ಬಾಲಿ ಸ್ವಿಂಗ್‘ ಇರುವುದು. ಸುಂದರ ಎಲೆಗಳಿಂದ ಸಿಂಗರಿಸಲ್ಪಟ್ಟ ಹೂಬಳ್ಳಿಗಳಂಥ ಜೋಕಾಲಿಯಲ್ಲಿ ಜೀಕುವುದು ವಿಶಿಷ್ಟ ಅನುಭವ ನೀಡುತ್ತದೆ. ತುಂಬಾ ಎತ್ತರದಲ್ಲಿ ಇರುವುದರಿಂದ ಕಟ್ಟುನಿಟ್ಟಿನ ಸುರಕ್ಷತೆ ಕ್ರಮಗಳನ್ನು ಪಾಲಿಸುತ್ತಾರೆ.
ಮಂಗನ ಅಂಗಳ ಮಂಕಿ ಫಾರೆಸ್ಟ್
ಇದರ ನಂತರ ನಾವು ‘ಮಂಕಿ ಫಾರೆಸ್ಟ್’ಗೆ ಹೋದೆವು. ಇಲ್ಲಿ ವೈವಿಧ್ಯ ಬಣ್ಣ, ಗಾತ್ರ ಮತ್ತು ಜಾತಿಗಳ ಮಂಗಗಳಿದ್ದವು. ಅಲ್ಲಿನ ಸಿಬ್ಬಂದಿ ಅವುಗಳಿಗೆ ಮುಸುಕಿನ ಜೋಳ, ಬಾಳೆಹಣ್ಣು ತಿನ್ನಲು ಕೊಡುತ್ತಾರೆ. ಪ್ರವಾಸಿಗರು ಮಂಗಗಳೊಂದಿಗೆ ಫೊಟೋ, ಸೆಲ್ಫಿ ತೆಗೆದುಕೊಳ್ಳಬಹುದು. ಇದನ್ನು ಕಂಡು ಹೊಟೇಲ್‌ಗೆ ಮರಳಿ ಮರುದಿನ ನಮ್ಮ ಪ್ರವಾಸದ ಕೊನೆಯ ಹಂತವಾದ ‘ನುಸಾ ಪೆನಿಡ’ ದ್ಪೀಪದತ್ತ ಪಯಣ ಶುರುವಾಯಿತು.

ನುಸಾ ಪೆನಿಡದ ನೋಟ
ನಮ್ಮ ಹೊಟೇಲ್‌ನಿಂದ ‘ಸನೂರ್ʼ ಬಂದರಿಗೆ ನಮ್ಮ ಟ್ಯಾಕ್ಸಿಯಲ್ಲಿ ಬೆಳಗ್ಗೆ 6ಗಂಟೆಗೆ ಹೊರಟು ಅಲ್ಲಿನ ಜೆಟ್ಟಿಗೆ ಹೋದೆವು. ಚೆಕ್‌ಇನ್ ಮುಗಿಸಿದೆವು 7:30ಕ್ಕೆ ಸ್ಪೀಡ್ ಬೋಟ್ ಹೊರಡುವುದೆಂದು ನಿಶ್ಚಯವಾಗಿತ್ತು. ಸುಮಾರು 20-25 ನಿಮಿಷಗಳ ಪ್ರಯಾಣ ಮಾಡಿ ‘ನುಸಾ ಪೆನಿಡʼ ದ್ವೀಪವನ್ನು ತಲುಪಿದೆವು. ಈ ಮನಮೋಹಕ ದ್ವೀಪದಲ್ಲಿ ನೋಡಲೇಬೇಕಾದವು ಸಾಕಷ್ಟಿವೆ. ಇವುಗಳಲ್ಲಿ ಮುಖ್ಯವಾದವು ಬ್ರೊಕನ್ ಬೀಚ್, ಏಂಜಲ್ ಬೀಚ್. ಕ್ರಿಸ್ಟಲ್ ಬೇ, ಬಿಲ್ಲಬಾಂಗ್ ಹಾಗೂ ಕ್ಲೆಂಗ್ ಕಿಂಗ್ ಬೇ. ಇವುಗಳನ್ನು ನೋಡಲು ಸ್ಧಳೀಯರ ಕಾರುಗಳನ್ನು ಬಾಡಿಗೆಗೆ ಪಡೆಯಬೇಕು. ಇಲ್ಲಿನ ಕಚ್ಚಾ ರಸ್ತೆಯು ಎತ್ತರ- ತಗ್ಗುಗಳಿಂದ ಕೂಡಿದ್ದು, ತುಂಬಾ ಎತ್ತಿಹಾಕುತ್ತಿತ್ತು.
ಸರಧಿಯಂತೆ ಕ್ರಿಸ್ಟಲ್ ಬೀಚ್ ನೋಡಿ, ನಂತರ ಬ್ರೊಕನ್ ಬೀಚ್‌ಗೆ ಹೋದೆವು. ಇದನ್ನು ಹತ್ತಿರದಿಂದ ನೋಡಲು ಮೆಟ್ಟಿಲುಗಳನ್ನು ಇಳಿದು ಹೋಗಬೇಕು. ಮೇಲಿನಿಂದ ನೋಡುವಾಗ ಸುತ್ತಲೂ ಹಸಿರಿನಿಂದ ನಳನಳಿಸುವ ಮರಗಿಡಗಳು, ಶುಭ್ರವಾದ, ತಿಳಿ ನೀಲಿಬಣ್ಣದ ಸಮುದ್ರದ ಅಲೆಗಳನ್ನು ನೋಡಲು ಕಣ್ಣುಗಳೆರೆಡು ಸಾಲದೆನಿಸುತ್ತದೆ. ಈ ದೃಶ್ಯವನ್ನು ಕಣ್ತುಂಬಿಕೊಂಡು ಮುಂದೆ ಇನ್ನೂ ಹಲವಾರು ಮೆಟ್ಟಿಲುಗಳನ್ನು ಇಳಿದು ಒಂದಷ್ಟು ದೂರ ಕಲ್ಲುಬಂಡೆಗಳ ಮೇಲೆ ಹುಷಾರಾಗಿ ನಡೆದು ಹೋದರೆ ಮತ್ತೊಂದು ಮನೋಹರವಾದ ಬೀಚ್ ಕಣ್ತುಂಬಿಕೊಳ್ಳಬಹುದು. ಇದರ ಹೆಸರು ಬಿಲ್ಲಬಾಂಗ್. ಎಷ್ಟು ಸುಂದರವೋ ಅಷ್ಷೇ ಅಪಾಯಕಾರಿ! ಇಲ್ಲಿ ಬಹಳ ಜಾಗ್ರತೆಯಿಂದ ನಡೆಯುವುದು ಮುಖ್ಯ. ನಮ್ಮ ಜತೆ ಬಂದಿದ್ದ ಡ್ರೈವರ್ ಹೇಳಿದ್ದು –ಒಮ್ಮೆ ಪ್ರವಾಸಿಯೊಬ್ಬ ಹೀಗೆ ಈ ಬದಿಯಿಂದ ಇನ್ನೊಂದು ಕಡೆಗೆ ನಡೆದು ಹೋಗುತ್ತಿದ್ದಾಗ ಜೋರಾಗಿ ಸಮುದ್ರದಲೆಗಳು ಭೋರ್ಗರೆದು ಅಪ್ಪಳಿಸಿ ನೀರಿನೊಳಗೆ ಸೆಳೆದೊಯ್ಯೊದಿತಂತೆ. ಇದನ್ನು ಕೇಳಿ ಗಾಬರಿಯು ಜತೆಗೆ ಬೇಸರವೂ ಆಯಿತು.
‘ಕ್ಲೆಂಗ್ ಕಿಂಗ್ ಬೇ ಹಾಗೂ ಬೀಚ್ʼ. ಇಲ್ಲಿನ ಸುಂದರ ಪ್ರಕೃತಿ ಸೌಂದರ್ಯವನ್ನು ಬಣ್ಣಿಸಲು ಪದಗಳೇ ಸಾಲದೆನಿಸುತ್ತದೆ. ಈ ವ್ಯೂ ಪಾಯಿಂಟ್ ನೋಡಲು ಕಡಿದಾದ ಹಲವಾರು ಮೆಟ್ಟಿಲುಗಳನ್ನು ಇಳಿದು ಹೋಗಬೇಕು. ಕೈಲಾಗದವರು ಮತ್ತು ವಯಸ್ಸಾದವರಿಗೆ ಇಳಿಯಲು ಕಷ್ಟವಾಗುತ್ತದೆ. ಇದನ್ನು ತಪ್ಪಿಸಲು ಈಗ ಅಲ್ಲಿ ಗ್ಲಾಸ್ ಲಿಫ್ಟ್ ನಿರ್ಮಾಣವಾಗುತ್ತಿದ್ದು, ಕೆಲಸಗಳು ಭರದಿಂದ ಸಾಗುತ್ತಿವೆ. ಇಲ್ಲಿ ತಿನ್ನಲು, ಕುಡಿಯಲು ಪ್ರವಾಸಿಗರ ಅನುಕೂಲಕ್ಕೆ ಅನೇಕ ಫುಡ್ ಸ್ಟಾಲ್‌ಗಳು ಮತ್ತು ಐಸ್ಕ್ರೀಂ ಅಂಗಡಿಗಳು ಬೇಕಾದಷ್ಟಿದ್ದವು. ನಾವೂ ಇಲ್ಲಿ ಐಸ್ಕ್ರೀಂ ತಿಂದು ಖುಷಿ ಪಟ್ಟೆವು. ಆ ವೇಳೆಗಾಗಲೇ ಸಂಜೆಯಾಗಿತ್ತು. ಹೇಗೆ ಬಂದೆವೋ ಹಾಗೇ ಮರಳಿದೆವು. ಭಾರತಕ್ಕೆ ಬಂದಿಳಿದಾಗ ಹೋಸ ನೆನಪುಗಳು ಕೂಡಿಕೊಂಡಿವೆ.