ಬಾನಂಗಳದಲ್ಲಿ ಬಂಗಾರದ ಸೇತುವೆ
ಮಂಜಿನ ಮಧ್ಯೆ ಎದ್ದು ನಿಂತಿದ್ದ ಆ ಸೇತುವೆ, ದೇವರ ಆಶೀರ್ವಾದದಂಥೇ ಇತ್ತು. ಎರಡು ಬೃಹತ್ ಕಲ್ಲಿನ ಕೈಗಳು ಭೂಮಿಯಿಂದ ಆಕಾಶದತ್ತ ತೆರೆದಿದ್ದು ಅವುಗಳ ಹಸ್ತದ ಮಧ್ಯದಿಂದ ಸೇತುವೆ ಹಾದು ಹೋದಂಥ ಕಲ್ಪನೆಯೊಂದಿಗೆ ಚಿನ್ನದ ಬಣ್ಣದ ಸೇತುವೆಯನ್ನು ಹಿಡಿದು ನಿಂತ್ತಿದ್ದವು. ಒಮ್ಮೆಲೆ ಮೈ ಜುಂ ಎಂದಿತು. ನಿಜಕ್ಕೂ ಆ ಅದ್ಭುತದ ರೂವಾರಿಯ ಕಲ್ಪನೆಗೆ ಮನಸೋತೆ. ಆ ಕ್ಷಣದಲ್ಲಿ, ಕಾಲ ನಿಂತಂತಾಯಿತು. ಸುತ್ತಲೂ ನೋಡಿದೆ ಪಾದಗಳ ಕೆಳಗೆ ಮೋಡಗಳು ತೇಲುತ್ತಿವೆ, ಕಣ್ಮುಂದೆ ಗಾಳಿಯಲ್ಲಿ ಸೇತುವೆ ತೂಗುತ್ತಿದೆ.
- ಗಾಯತ್ರಿ ರಾಜ್
ವಿಯಟ್ನಾಂ ಎನ್ನುವ ಹೆಸರಿನಲ್ಲೇ ಒಂದು ಮಾಯೆಯಿದೆ. ಅದು ಪ್ರಯಾಣಿಕನೊಳಗಿನ ಅಲೆಮಾರಿ ಕನಸನ್ನು ಜಾಗೃತಗೊಳಿಸುತ್ತದೆ. ಅಲ್ಲಿನ ಪ್ರಕೃತಿ ಸೌಂದರ್ಯ, ಶಾಂತ ಸಮುದ್ರ, ಸಮುದ್ರದ ಮಧ್ಯೆ ಹಸುರಿನ ಪುಟ್ಟ ಪುಟ್ಟ ತೇಲುವ ಬೆಟ್ಟಗಳು, ಸುಂದರ ಬೀಚ್‌ಗಳು ಕೈ ಬೀಸಿ ಕರೆದಂತೆ ಭಾಸವಾಗುತ್ತದೆ. ನಾನು ಆ ದೇಶದ ನಕ್ಷೆ ತೆರೆದು ಅಲ್ಲಿನ ವೀಕ್ಷಣಾ ಸ್ಥಳಗಳನ್ನು ನೋಡುತ್ತಲೇ ಅಲ್ಲಿನ ರಮ್ಯ ಸ್ಥಳಗಳನ್ನು ಕಣ್ತುಂಬಿಕೊಳ್ಳಲು ಮನಸು ಹಾತೊರೆಯುತಿತ್ತು. ಹೊರಡುವ ದಿನ ಹತ್ತಿರ ಬರುತ್ತಲೇ ಹೃದಯದಲ್ಲಿ ಒಂದು ಉತ್ಸಾಹ ಪುಟಿದ್ದೆದ್ದಿತ್ತು. ಹೋ ಚಿ ಮಿನ್‌ನ ಬಿಸಿ ಬೀದಿಗಳಿಂದ ತಂಪು ಬೆಟ್ಟದ Ba Na Hills ತನಕ ಓಡಾಡಬೇಕೆಂಬ ಆಕಾಂಕ್ಷೆಯಂತೆ ಪ್ರವಾಸ ಯೋಜನೆ ಸಿದ್ಧಪಡಿಸಿಕೊಂಡೆ. ಇದು ನನ್ನ ಇಷ್ಟದ ಕೆಲಸಗಳಲ್ಲಿ ಒಂದು. ಹೊರದೇಶಕ್ಕೆ ಹೋದಾಗ ಅಲ್ಲಿ ನೋಡಬೇಕಾದ ಸ್ಥಳಗಳ ಪಟ್ಟಿ, ಉಳಿದುಕೊಳ್ಳುವ ಊರುಗಳ, ಅಲ್ಲಿನ ಖಾದ್ಯಗಳ, ಸಂಸ್ಕೃತಿಯ ಬಗ್ಗೆ ಒಂದು ಸ್ಥೂಲ ಪರಿಚಯ ಮಾಡಿಕೊಳ್ಳುವುದು ನನ್ನ ರೂಢಿ.
ಅಲ್ಲಿ ಮೋಡದೊಳಗೇ ಕೇಬಲ್ ಕಾರ್ ಹಾದು ಹೋಗುತ್ತದೆಯಂತೆ, ಮೋಡಗಳ ಮಧ್ಯೆ ಚಿನ್ನದ ಸೇತುವೆ ಇದೆಯಂತೆ ಎಂದು ಓದಿದ್ದೆ ಮತ್ತು ಕೇಳಿದ್ದೆ. ಅದು ನಿಜವೋ ಅಥವಾ ಉತ್ಪ್ರೇಕ್ಷೆಯೋ ಎಂದು ನೋಡಬೇಕಿತ್ತು. ವೀಸಾ ಆನ್ ಅರೈವಲ್ ಸಿಗುವುದರಿಂದ ಹೊಟೇಲ್, ವಿಮಾನವನ್ನು ಬುಕ್ ಮಾಡುವುದಷ್ಟೇ ಸಧ್ಯದ ತಯಾರಿಯಾಗಿತ್ತು. ಇಲ್ಲಿಂದ ಹೋ ಷೀ ಮಿನ್ಹ ಸಿಟಿ, ಅಲ್ಲಿಂದ ದಾ ನಾಂಗ್, ದಾ ನಾಂಗ್‌ನಿಂದ ಒಂದು ಮುಂಜಾನೆ Ba Na Hills ಮಂಜಿನ ಹಾದಿಯೆಡೆಗೆ ನಿಗಧಿತ ದಿನಾಂಕಕ್ಕೆ ಹೊರಟೇ ಬಿಟ್ಟೆವು.

ಬೆಳಗಿನ ದಾ ನಾಂಗ್ ಆಕಾಶವು ಬೆಳ್ಳಿ ಬಣ್ಣದಲ್ಲಿ ಹೊಳೆಯುತ್ತಿತ್ತು. ಕಾರ್ ಕಿಟಕಿಯಾಚೆ ಸಣ್ಣ ಹಳ್ಳಗಳು, ಪರ್ವತಗಳ ನೋಟಗಳು, ಕಾಡಿನ ಹಸಿರು ಎಲ್ಲವೂ ಒಂದು ರಮ್ಯ ಕವಿತೆಯಂತೆ ಹಾದು ಹೋಗುತ್ತಿತ್ತು. ಪ್ರತಿ ತಿರುವಿನೊಂದಿಗೆ ಗಾಳಿ ತಂಪಾಗುತ್ತಿತ್ತು. ರಸ್ತೆ ಬದಿಯ ಹೂಗಳು ಹನಿಗಳ ತೂಕದಿಂದ ತಲೆಬಾಗುತ್ತಿದ್ದವು. ಅಲ್ಲಿಗೆ ನಾವು ಬೆಟ್ಟದ ತಪ್ಪಲಿನಲ್ಲಿದ್ದೇವೆ ಎಂದರ್ಥ.
Sun World Ba Na Hills ಸ್ಟೇಷನ್‌ಗೆ ತಲುಪಿದ ಕ್ಷಣದಲ್ಲೇ ಮನಸ್ಸು ಸಂತೋಷದಿಂದ ತುಂಬಿತು. ಒಳಗೆ ಎಲ್ಲವೂ ಸ್ವಚ್ಛ, ಸಮರ್ಪಕ, ಆಕರ್ಷಕ. ಗೋಡೆಗಳ ಮೇಲೆ ನಾವು ನೋಡಲಿರುವ ಬೆಟ್ಟದ ಚಿತ್ರಗಳು, ಹತ್ತಿರದ ಕೆಫೆಯಿಂದ ಕಾಫಿಯ ಸುಗಂಧ ಮತ್ತು ಸುತ್ತಮುತ್ತ ಮೃದು ಸಂಗೀತ ನಮ್ಮನ್ನು ಸ್ವಾಗತಿಸಿತು.
ಜನಸಂದಣಿ ಇತ್ತು, ಆದರೆ ಯಾವುದೇ ಗದ್ದಲವಿಲ್ಲ. ಎಲ್ಲರ ಕಣ್ಣಲ್ಲೂ ಸ್ವರ್ಗವನ್ನು ಕಣ್ತುಂಬಿಕೊಳ್ಳುವ ಸಂಭ್ರಮ. ಮುಂಗಡ ಟಿಕೆಟ್‌ಗಳನ್ನು (ಪಾಸ್) ಖರೀದಿಸಿದ್ದುದ್ದು ಕೂಡ ಕಾರಣವಿರಬಹುದು. ವೀಶಾಲವಾದ ಕಾಯುವ ಕೊಠಡಿಯಲ್ಲಿ ಎಲ್ಲಾ ಸೌಲಭ್ಯವಿತ್ತು. ಸುಸಜ್ಜಿತವಾದ ಕೆಫೆಟೇರಿಯಾ, ಸ್ವಚ್ಛವಾದ ರೆಸ್ಟ್ ರೂಮ್‌ಗಳು ಪ್ರತಿಯೊಬ್ಬರೂ ತಮ್ಮ ಸರದಿಯನ್ನು ಸಮಧಾನವಾಗಿ ಕಾಯುವಂತೆ ಮಾಡಿದ್ದನ್ನು ಗಮನಿಸಿದೆ.
ಮೋಡದೊಳಗಿನ ಯಾನ
ಅಂತೂ ನಮ್ಮ ಸರದಿ ಬಂತು. ಅಷ್ಟರಲ್ಲಿ ಕೆಂಪು, ಹಳದಿ, ಬಿಳಿ, ನೀಲಿ ಎಂಬಂತೆ ವಿವಿಧ ಬಣ್ಣಗಳ ಕೇಬಲ್ ಕಾರ್‌ಗಳು ಕಾಮನಬಿಲ್ಲಿನಂತೆ ಕಂಗೊಳಿಸುತ್ತಾ, ಮೋಡದೊಳಗೆ ನಮ್ಮನ್ನು ಎತ್ತೊಯ್ಯಲು ಸಜ್ಜಾಗಿ ನಿಂತವು.
ನಾವು ಕೇಬಲ್ ಕಾರ್ ಹತ್ತಿದೊಡನೆ ತೂಗಾಡಿ ಸ್ವಾಗತಿಸಿತು. ಒಂದು ಕಾರಿನೊಳಗೆ ನಾಲ್ಕು ಪ್ರಯಾಣಿಕರಂತೆ ಕೂರಿಸಿ, ಡೋರ್‌ಗಳನ್ನು ಲಾಕ್ ಮಾಡಿದೊಡನೆ ತೂಗುವ ತೊಟ್ಟಿಲು ಮೇಲೇರತೊಡಗಿತು. ಎಲ್ಲಾ ದೃಶ್ಯವನ್ನು ಸೆರೆಹಿಡಿಯುವ ಸಲುವಾಗಿ ಕಿಟಕಿ ಬದಿಯಲ್ಲಿ ಕೂತೆ. ಕೆಳಗಿನ ಸ್ಟೇಷನ್, ಅಡ್ವೆಂಚರ್ ಪಾರ್ಕ್, ಅರಣ್ಯ ಹಸಿರು ಅಲೆಗಳಂತೆ ಹಿಂದೆ ಹಿಂದೆ ಸರಿಯಿತು. ಪರ್ವತದ ಮಧ್ಯೆ ಹರಿಯುತ್ತಿದ್ದ ನದಿ ಬೆಳ್ಳಿಯ ರೇಖೆಯಂತಾಯಿತು.
ಕಿಟಕಿಯಾಚೆ ನಿಗೂಢ ಮಂಜು, ಮಂಜಿನೊಳಗಿಂದ ನಮಗೆ ಎದುರಾಗಿ ಪಕ್ಕದ ಸಾಲಿನಿಂದ ತೂರಿ ಬರುತ್ತಿದ್ದ ಬಣ್ಣ ಬಣ್ಣದ ತೊಟ್ಟಿಲುಗಳು. ಅವು ತಮ್ಮೊಳಗೆ ಸಂತೃಪ್ತ ಮನಸುಗಳನ್ನು ಹೊತ್ತು ತೂಗುತ್ತಾ ಬರುತ್ತಿದ್ದವು. ಹುಡುಗರ ಕೇಕೆ, ಮಕ್ಕಳ ಅಚ್ಚರಿಗಳ ಚಪ್ಪಾಳೆಗಳಿಂದ ತೊಟ್ಟಿಲು ಬೀಗುತ್ತಿದ್ದವು. ಕ್ಯಾಮೆರಾ ಬದಿಗಿಟ್ಟು ಆ ಸಂತಸವನ್ನು, ಆ ಉತ್ಸಾಹವನ್ನು ಎದೆಯಲ್ಲಿ ತುಂಬಿಕೊಳ್ಳತೊಡಗಿದೆ. ಹಠಾತ್ತನೆ ಮೋಡಗಳು ಬದಿಗೆ ಸರಿದವು. ಆಗ ತೂರಿ ಬಂದಿತ್ತು ನೋಡಿ ಆ Golden Bridge.
ದೇವರ ಕೈಗಳ ದೊಡ್ಡ ಸೇತುವೆ
ಮಂಜಿನ ಮಧ್ಯೆ ಎದ್ದು ನಿಂತಿದ್ದ ಆ ಸೇತುವೆ, ದೇವರ ಆಶೀರ್ವಾದದಂಥೇ ಇತ್ತು. ಎರಡು ಬೃಹತ್ ಕಲ್ಲಿನ ಕೈಗಳು ಭೂಮಿಯಿಂದ ಆಕಾಶದತ್ತ ತೆರೆದಿದ್ದು ಅವುಗಳ ಹಸ್ತದ ಮಧ್ಯದಿಂದ ಸೇತುವೆ ಹಾದು ಹೋದಂಥ ಕಲ್ಪನೆಯೊಂದಿಗೆ ಚಿನ್ನದ ಬಣ್ಣದ ಸೇತುವೆಯನ್ನು ಹಿಡಿದು ನಿಂತ್ತಿದ್ದವು. ಒಮ್ಮೆಲೆ ಮೈ ಜುಂ ಎಂದಿತು. ನಿಜಕ್ಕೂ ಆ ಅದ್ಭುತದ ರೂವಾರಿಯ ಕಲ್ಪನೆಗೆ ಮನಸೋತೆ. ಆ ಕ್ಷಣದಲ್ಲಿ, ಕಾಲ ನಿಂತಂತಾಯಿತು. ಸುತ್ತಲೂ ನೋಡಿದೆ ಪಾದಗಳ ಕೆಳಗೆ ಮೋಡಗಳು ತೇಲುತ್ತಿವೆ, ಕಣ್ಮುಂದೆ ಗಾಳಿಯಲ್ಲಿ ಸೇತುವೆ ತೂಗುತ್ತಿದೆ.
Golden Bridge ಅದ್ಭುತ ವಾಸ್ತುಶಿಲ್ಪ ಅಷ್ಟೇ ಅಲ್ಲ. ಅದು ಪ್ರಕೃತಿಯೊಂದಿಗೆ ಕಲಾವಿದನೊಬ್ಬನ ಆಧ್ಯಾತ್ಮ ಚಕ್ಷು ತೆರೆದಂತೆ, ಅದು ಒಂದು ಪ್ರೇಮ ಸಂಭಾಷಣೆ. ʻನಮ್ಮ ಜೀವನದ ಸೇತುವೆ ಆ ಭಗವಂತನ ನಂಬಿಕೆಯ ಕೈಗಳಲ್ಲಿ ನಿರ್ಮಾಣವಾಗುತ್ತದೆʼ ಎಂಬ ತತ್ತ್ವ ಸಾರಿದಂತೆ.
ಕೇಬಲ್ ಕಾರ್‌ನಿಂದ ಇಳಿಯುತ್ತಲೇ ಪ್ರಕೃತಿಯ ಸೊಗಸಿಗೆ, ಕಲಾವಿದನ ಕಲೆಗೆ ಮನಸೋತೆ. ಸೇತುವೆಯ ಮೇಲೆ ನಡೆಯುವಾಗ ಸಾಕ್ಷಾತ್ ಆ ಭಗವಂತನ ಕೈಗಳ ಮೇಲೇಯೇ ನಡೆಯುತ್ತಿರುವಂತೆ ಗದ್ಗದಿತಳಾದೆ. ಅಲ್ಲಿಂದ ಕೆಳಗೆ ನೋಡಿದರೆ ಮೋಡಗಳು ತೇಲುತ್ತಿದ್ದವು. ದೂರದ ಬೆಟ್ಟಗಳು ಐಸ್ ಕ್ರೀಮ್‌ನಲ್ಲಿ ತೊಯ್ದಂತ್ತಿದ್ದವು. ಎಷ್ಟು ಸಾಧ್ಯವೋ ಅಷ್ಟು ಆ ದೃಶ್ಯವನ್ನು ಕಣ್ಮನಗಳಲ್ಲಿ ತುಂಬಿಕೊಂಡೆ. ಸ್ವಚ್ಛವಾದ ಗಾಳಿಯಲ್ಲಿ ಅಲ್ಲಿ ಇಲ್ಲಿ ನಿಂತು ಫೊಟೋ ಕ್ಲಿಕ್ಕಿಸಿಕೊಂಡು ನೆನಪಿನ ಜೋಳಿಗೆಗೆ ತುಂಬಿಕೊಂಡೆ. ಸೇತುವೆಯ ಈ ಬದಿಯಿಂದ ಆ ಬದಿಯವರೆಗೂ ನಡೆದು ಮತ್ತೆ ಕೇಬಲ್ ಸ್ಟೇಷನ್‌ಗೆ ಬಂದಾಗ, ಒಮ್ಮೆ ಸೇತುವೆಯ ಕಡೆ ತಿರುಗಿ ನೋಡಿದೆ. ಆ ಬೃಹತ್ ಸೇತುವೆಯ ಮೇಲೆ ಓಡಾಡುತ್ತಿದ್ದ ಮನುಷ್ಯರು ಪುಟ್ಟ ಪುಟ್ಟ ಆಕೃತಿಗಳಂತೆ ಕಾಣತ್ತಿದ್ದರು. ಪ್ರಕೃತಿಯ ಅಗಾಧತೆಗೆ ಮನಸಲ್ಲೇ ಕೈ ಮುಗಿಯುತ್ತಾ, ಮನುಷ್ಯನ ಕಲ್ಪನೆಯನ್ನು ಷ್ಲಾಘಿಸುತ್ತಾ ಒಲ್ಲದ ಮನಸಿನಿಂದ ಕೆಳಗಿಳಿದೆ.

ಅಲ್ಲಿಂದ ತುಸುದೂರದಲ್ಲಿದ್ದ ವಿಲೇಜ್ ಕಡೆಗೆ ಹೊರಟಿತು ನಮ್ಮ ಗುಂಪು. ಅಲ್ಲಿ ಫ್ರೆಂಚ್ ವಿಲೇಜ್ ಹ್ಯಾಲೋವೀನ್ ಹಬ್ಬದ ಸಡಗರದಲ್ಲಿತ್ತು. ಹ್ಯಾಲೋವೀನ್ ಎಂದರೆ ಬರೀ ಕಾಮಿಕ್ಸ್‌ನಲ್ಲಿ ಓದಿ ಗೊತ್ತಿದ್ದ ನನಗೆ ಆ ಸಂಭ್ರಮವನ್ನು ಕಣ್ಣಾರೆ ಕಾಣುವ ಅವಕಾಶ. ಎಲ್ಲೆಡೆ ವಿವಿಧ ರೀತಿಯ, ಬಣ್ಣದ, ಗಾತ್ರದ ಕುಂಬಳಕಾಯಿ ಅಲಂಕಾರಗಳು, ಬಣ್ಣ ಬಣ್ಣದ ಮುಖವಾಡಗಳು, ಹೂಗಳಿಂದ ತುಂಬಿದ ಕಾರ್‌ಗಳ ಸಾಲು.
ಹಳದಿ ಮತ್ತು ಬಿಳಿ ಕುಂಬಳಕಾಯಿಗಳನ್ನು ದೊಡ್ಡ ಬಯಲಿನಲ್ಲಿ ನಮ್ಮ ಲಾಲ್ ಭಾಗ್‌ನ ಪುಷ್ಪ ಅಲಂಕಾರದಂತೆ ಜೋಡಿಸಿಟ್ಟಿದ್ದರು. ಸಣ್ಣ ಗುಡ್ಡೆಯಿಂದ ಹತ್ತು ಹನ್ನೆರಡು ಅಡಿಗಳವರೆಗೂ, ದೊಡ್ಡ ದೊಡ್ಡ ಕೊಳಗದ ಗಾತ್ರದಿಂದ ಟೆನಿಸ್ ಬಾಲ್ ಗಾತ್ರದ ಕುಂಬಳಕಾಯಿಗಳು ನೋಡಲು ಸಿಕ್ಕವು. ನಡುವೆ ಬಣ್ಣ ಬಣ್ಣದ ಹೂಗಳು. ಬೆಟ್ಟದ ತಪ್ಪಲಿನಲ್ಲಿ ಪುಟ್ಟ ಪುಟ್ಟ ಸೂರ್ಯನಂತೆ ಕುಂಬಳಕಾಯಿಗಳು ಹೊಳೆಯುತ್ತಿದ್ದವು.
ಮೈದಾನದ ಎರಡೂ ಬದಿಯಲ್ಲಿ ಕಾಫಿ ಅಂಗಡಿಗಳು, ಅಲ್ಲೇ ಸ್ವಲ್ಪ ಹೊತ್ತು ಕುಳಿತು ವಿಶ್ರಮಿಸಿ, ಪಾರ್ಕ್‌ನ ಸುತ್ತಲು ಓಡಾಡಿ ಅಲ್ಲಿನ ವಿವಿಧ ಥೀಮ್‌ಗಳ ಆಕೃತಿಗಳು, ವಿವಿಧ ಆಕಾರದ ತಂಗು ಮಹಲುಗಳು, ಕೊಳಗಳು, ಗಿಡ - ಪುಷ್ಪಗಳನ್ನು ನೋಡಿಕೊಂಡು ಸಂಜೆ ವೇಳೆಗೆ ಪರ್ವತದ ಅಂಚಿನ ದೇವಾಲಯ (ಲಿನ್ಹ ಉಂಗ್ ಪಾಗೋಡ) ತಲುಪಿದೆವು. ಚಿನ್ನದ ಅಲಂಕಾರಗಳು ಮತ್ತು ಶ್ವೇತ ಕಲ್ಲಿನ ಬೃಹತ್ ಬುದ್ಧನ ಪ್ರತಿಮೆಯ ದರ್ಶನ ಮಾಡಿದೆವು. ಮೌನವಾಗಿ ಕೈ ಮುಗಿದು ಧೂಪ ಹಚ್ಚಿಟ್ಟು, ಬೆಟ್ಟದ ತಪ್ಪಲಿನ ಆ ತಂಪಿನಲ್ಲಿ ಪ್ರಾರ್ಥಿಸುವ ವೇಳೆಗೆ ʻಸರ್ವಮ್ ತತ್ವಥ ಏಕಮ್, ನಾಮ ರೂಪ ಭೇದ ಮಾತ್ರಂʼ ಎಂಬ ಭಾವವೊಂದು ಹೃದಯ ಆವರಿಸಿ ಕಣ್ಮುಚ್ಚಿದವು. ಗಾಳಿ ಇನ್ನೂ ತಣ್ಣಗಾಗಿತ್ತು, and the mist turned to prayer. ಕಣ್ತೆರೆದು ಹಿಂದಕ್ಕೆ ನೋಡಿದಾಗ - Golden Bridge ದೂರದ ಮಂಜಿನೊಳಗೆ ಮತ್ತೆ ಹೊಳೆಯುತ್ತಿತ್ತು. ಮಾನವ ನಿರ್ಮಿತ ಆ ಅದ್ಭುತ, ಸೃಷ್ಟಿಕರ್ತನ ಪ್ರಕೃತಿಯೆಂಬ ಹಸಿರು ಪರ್ವತದ ಅದ್ಭುತಗಳಲ್ಲಿ ಮಿಳಿತಗೊಂಡು ಮಿಂಚುತ್ತಿತ್ತು. ಆ ಅನಂತಾನಂತ ಕೈಗಳು ಭೂಮಿಯಿಂದ ಆಕಾಶದವರೆಗೂ ವ್ಯಾಪಿಸಿ ಮಾನವನಿಗೆ ಮಾರ್ಗ ತೋರಿಸುತ್ತಿರುವಂತೆ ಭಾಸವಾಯಿತು.
ಸ್ಥಳ - Sun World Ba Na Hills, Da Nang, Vietnam
ವಿನ್ಯಾಸ ಸಂಸ್ಥೆ - TA Landscape Architecture, Ho Chi Minh ಸಿಟಿ
ನಿರ್ಮಾಣ ಪ್ರಾಯೋಜಕರು - Sun Group, Vietnam
ಉದ್ಘಾಟನೆ - ಜೂನ್ 2018
ಉದ್ದ -150 ಮೀಟರ್
ಅಗಲ - 5 ಮೀಟರ್
ಎತ್ತರ - ಸಮುದ್ರಮಟ್ಟದಿಂದ ಸುಮಾರು 1,414 ಮೀಟರ್
ಬಳಸಿರುವ ವಸ್ತುಗಳು - ಸ್ಟೀಲ್, ಕಾಂಕ್ರೀಟ್, ಫೈಬರ್ ಗ್ಲಾಸ್ (ಕಲ್ಲಿನ ಕೈಗಳ ವಿನ್ಯಾಸ)
ಖ್ಯಾತಿ - TIME Magazine ಮತ್ತು BBC - World’s Most Iconic Bridges ಪಟ್ಟಿಯಲ್ಲಿ ಸೇರಿದೆ