ವಿಯೆಟ್ನಾಂ ಎಂಬ ಇಂಡೋಚೀನಾ
ಕ್ರೌರ್ಯದ ಪರಮಾವಧಿ ತೋರುವ ಅಮೆರಿಕ ಏಜೆಂಟ್ ಆರೆಂಜ್ ಹೆಸರಲ್ಲಿ ರಾಸಾಯನಿಕ ಪ್ರಯೋಗ ನಡೆಸುತ್ತದೆ. ಪರಿಣಾಮವಾಗಿ ವಿಯೆಟ್ನಾಂ ಮುಂದಿನ ಹತ್ತಾರು ವರ್ಷ ನರಳುತ್ತದೆ. ಅಂಗವಿಕಲ ಮಕ್ಕಳು ಹುಟ್ಟುತ್ತವೆ. ಅಪರೂಪದ ಕಾಯಿಲೆಗಳು ಬಂದೆರಗುತ್ತವೆ. ಅಂಥವರೂ ಕೂಡ ಛಲದಿಂದ ಎದ್ದುನ ನಿಂತು ಸಾಧನೆಗೈಯ್ಯುತ್ತಾರೆ. ಈ ವಿವರಗಳು ಹೃದಯ ಕಿವುಚುವಂತೆ ಮಾಡುತ್ತವೆ.
ವಿಯೆಟ್ನಾಂ ನಲ್ಲಿ ತಿರುಗಾಡಿದ ಎಲ್ಲ ಸಂತಸಗಳನ್ನು ಒಮ್ಮೆಲೇ ಬಡಿದು ಹಾಕಿ ಒಂದು ಖಿನ್ನತೆ ಮತ್ತು ದುಃಖಕ್ಕೆ ತಳ್ಳುವುದು ಅಲ್ಲಿನ ವಾರ್ ಮ್ಯೂಸಿಯಮ್. ವಿಯೆಟ್ನಾಂ ಹೋಗಿ ವಾರ್ ಮ್ಯೂಸಿಯಮ್ ಭೇಟಿ ನೀಡದಿದ್ದರೆ ಆ ಪ್ರವಾಸವೇ ಅಪೂರ್ಣ. ವಾರ್ ಮ್ಯೂಸಿಯಂನಲ್ಲಿ ನಮ್ಮಲ್ಲಿ ಪ್ರಶ್ನೆ ಹುಟ್ಟಿಸುವುದು ಇಂಡೋಚೀನಾ ವಾರ್ ಎಂಬ ಬೋರ್ಡ್ ಗಳು. ಯುದ್ಧ ನಡೆದದ್ದು ಅಮೆರಿಕ ವಿಯೆಟ್ನಾಂ ನಡುವೆ. ಇಲ್ಲಿ ಭಾರತ ಮತ್ತು ಚೀತಾ ಪಾತ್ರ ಇಲ್ಲವೇ ಇಲ್ಲ. ಆದರೂ ಯಾಕೆ ಇಂಡೋಚೀನಾ ಹೆಸರು ಪ್ರಸ್ತಾಪವಾಗಿದೆ ಎಂಬ ಅಚ್ಚರಿ. ಅದಕ್ಕೆ ಉತ್ತರ ವಿಯೆಟ್ನಾಂನ ಜನಜೀವನ ಮತ್ತು ಸಂಸ್ಕೃತಿ. ಭಾರತ ಮತ್ತು ಚೀನಾದ ಸಂಸ್ಕೃತಿ ಹಾಗೂ ಜೀವನಶೈಲಿಯನ್ನು ಮೈಗೂಡಿಸಿಕೊಂಡು ಅರ್ಧ ಚೀನೀಯರಂತೆ ಅರ್ಧ ಭಾರತೀಯರಂತೆ ಅನಿಸುವ ವಿಯೆಟ್ನಾಮಿಯರನ್ನು ಪಾಶ್ಚಾತ್ಯರು ಕರೆದದ್ದು ಇಂಡೋಚೀನೀಯರು ಅಂತ.

ಹೌದು. ವಿಯೆಟ್ನಾಂ ಒಂದರ್ಥದಲ್ಲಿ ಭಾರತದ ನೆರೆದೇಶವೇ. ಕೇವಲ ನಾಲ್ಕೈದು ಗಂಟೆಗಳಲ್ಲಿ ಭಾರತದಿಂದ ವಿಯೆಟ್ನಾಂ ತಲುಪಬಹುದು. ಭಾರತದ ಪೂರ್ವಕ್ಕೆ ಸಮಾನಾಂತರ ರೇಖೆಯಲ್ಲಿರುವ ವಿಯೆಟ್ನಾಂ ನಮ್ಮಂತೆಯೇ ಫ್ರೆಂಚರಿಂದ ಆಳಲ್ಪಟ್ಟಿತು. ಜಪಾನೀಯರು ಚೀನೀಯರು ಕೂಡ ವಿಯೆಟ್ನಾಂ ನ ಮೇಲೆ ಹಿಡಿತಕ್ಕೆ ಪ್ರಯತ್ನಿಸಿದರು. ಅಮೆರಿಕ ಎಂದಿನಂತೆ ಮೂಗು ತೂರಿಸಿ, ಬೆಂಕಿ ಹಚ್ಚಿ, ವಿಯೆಟ್ನಾಂ ಎಂಬ ಪ್ರಕೃತಿಸಿರಿಯನ್ನು ತನ್ನದಾಗಿಸಿಕೊಳ್ಳುವ ಕುತಂತ್ರ ನಡೆಸಿತು. ವಿಯೆಟ್ನಾಮಿಗಳ ಮೇಲೆ ಇನ್ನಿಲ್ಲದ ದೌರ್ಜನ್ಯ ಎಸಗಿ ನಲುಗುವಂತೆ ಮಾಡಿತು. ಆದರೆ ಇದೆಲ್ಲದರ ನಡುವೆಯೂ ಎದ್ದ್ ನಿಂತು ಸ್ವತಂತ್ರವಾದ ವಿಯೆಟ್ನಾಂ ಇದೀಗ ಸ್ವಾತಂತ್ರೋತ್ಸವದ ಸುವರ್ಣ ಸಂಭ್ರಮ ಪೂರೈಸಿದೆ. ಕಳೆದ ಏಪ್ರಿಲ್ ಮೂವತ್ತು ವಿಯೆಟ್ನಾಂಗೆ ಸ್ವಾತಂತ್ರ್ಯ ಬಂದು ಐವತ್ತು ವರ್ಷ.
ಕೃಷಿ, ಕೈಗಾರಿಕೆ ಮತ್ತು ಸೇವಾ ಕ್ಷೇತ್ರಗಳನ್ನೇ ಪ್ರಮುಖವಾಗಿಸಿಕೊಂಡಿದ್ದ ವಿಯೆಟ್ನಾಂ ಇದೀಗ ಪ್ರವಾಸೋದ್ಯಮವನ್ನೂ ತುಂಬ ಗಂಭೀರವಾಗಿ ಪರಿಗಣಿಸಿದೆ. ಏಷಿಯನ್ನರು ಮತ್ತು ಭಾರತೀಯರು ಒಂದು ಬಜೆಟ್ ಫ್ರೆಂಡ್ಲೀ ವಿದೇಶ ಪ್ರವಾಸ ನೋಡುತ್ತಿದ್ದರೆ ಅದಕ್ಕೆ ವಿಯೆಟ್ನಾಂ ಉತ್ತರವಾಗುತ್ತದೆ.
ಉತ್ತರ ವಿಯೆಟ್ನಾಂನ ಹನೋಯ್, ಮಧ್ಯ ವಿಯೆಟ್ನಾಂ ನ ಡಾ ನಂಗ್ ಮತ್ತು ದಕ್ಷಿಣದ ಹೋ ಚಿ ಮಿನ್ ಪ್ರವಾಸಿಗರನ್ನು ಸೆಳೆಯುತ್ತದೆ. ಹದಿನೈದು ದಿನಗಳ ಪ್ಲಾನ್ ಇದ್ದಲ್ಲಿ ಆರಾಮಾಗಿ ಇಡೀ ವಿಯೆಟ್ನಾಂ ಸುತ್ತಿ ಬರಬಹುದು. ಪ್ರಮುಖ ಪ್ರವಾಸಿ ತಾಣಗಳನ್ನು ಸಂದರ್ಶಿಸಿ ಬರಬಹುದು. ಅಲ್ಲಲ್ಲಿ ಇಂಗ್ಲಿಷ್ ಅರ್ಥವಾಗುವ ಮಂದಿ ಸಿಕ್ಕರೂ ಬಹುತೇಕ ವಿಯೆಟ್ನಾಮಿ ಭಾಷೆಯೇ ಇಲ್ಲಿ ಪ್ರಧಾನ. ಸ್ಥಳೀಯರೊಂದಿಗೆ ವ್ಯವಹರಿಸಲು ಭಾಷೆ ತೊಡಕಾದರೂ ಭಾವ ಅದನ್ನು ನಿವಾರಿಸುತ್ತದೆ. ಸಿನ್ ಚೋವ್, ಕ್ಯಾಮ್ ಆನ್ ಎಂಬ ಎರಡು ಪದಗಳಿಂದಲೇ ಹತ್ತಿರವಾಗುವ ವಿಯೆಟ್ನಾಮಿಯರು ಅತಿಥಿ ದೇವೋಭವ ಎಂಬ ಮನಸ್ಥಿತಿ ಬೆಳೆಸಿಕೊಂಡಿದ್ದಾರೆ.

ಹೋ ಚಿ ಮಿನ್ಹ್ ಎಂಬ ಗಾಂಧಿನಗರ
ಹೋ ಚಿ ಮಿನ್ಹ್ ಸೌತ್ ವಿಯೆಟ್ನಾಂ ನ ಪ್ರಮುಖ ನಗರ. ಭಾರತಕ್ಕೆ ಮುಂಬೈ ಇದ್ದಂತೆ ವಿಯೆಟ್ನಾಂಗೆ ಹೋ ಚಿ ಮಿನ್ಹ್. ಈ ವಾಣಿಜ್ಯ ನಗರಿ ಮೇಲ್ನೋಟಕ್ಕೆ ಭಾರೀ ದೊಡ್ಡದು ಅನಿಸುವುದಿಲ್ಲ. ಆದರೆ ಬೆಂಗಳೂರಿನ ಮೂರು ಪಟ್ಟು ಹಿರಿದಾಗಿದೆ. ಜನಸಂಖ್ಯೆಯೂ ಬೆಂಗಳೂರಿಗಿಂತ ಅಧಿಕ. ಟ್ರಾಫಿಕ್ಕೂ ಅಷ್ಟೇ. ಇತರ ವಿದೇಶಿ ನಗರಗಳಂತೆ ಇಲ್ಲಿ ಕಾರುಗಳ ಕಾರುಬಾರು ಇಲ್ಲ. ಇಲ್ಲಿ ಟೀವೀಲರ್ ಗಳದ್ದೇ ದರ್ಬಾರು. ಬೆಂಗಳೂರನ್ನು ಮೀರಿಸುವಷ್ಟು ದ್ವಿಚಕ್ರವಾಹನಗಳಿವೆ. ಸೈಗಾನ್ ಎಂಬ ಹೆಸರಿನ ನಗರವಾಗಿದ್ದ ಇದು ಸ್ವಾತಂತ್ರ್ಯದ ನಂತರ ಹೋ ಚಿ ಮಿನ್ಹ್ ಆಯ್ತು. ಅಂದ ಹಾಗೆ ಹೋ ಚಿ ಮಿನ್ಹ್ ವಿಯೆಟ್ನಾಂ ನ ಗಾಂಧಿ ಇದ್ದಂತೆ ಎಂದು ಅಲ್ಲಿನ ಗೈಡ್ ವಿವರಿಸುತ್ತಾರೆ. ವಿಯೆಟ್ನಾಂ ಗೆ ಸ್ವಾತಂತ್ರ್ಯ ಕೊಡಿಸುವಲ್ಲಿ ಹೋ ಚಿ ಮಿನ್ಹ್ ಪಾತ್ರ ಬಹಳ ದೊಡ್ಡದಿದೆ. ಅವರನ್ನು ದೇವರಂತೆ ಕಾಣುವ ವಿಯೆಟ್ನಾಂನಲ್ಲಿ ಕಂಡಕಂಡ ಕಡೆ ಹೋ ಚಿ ಮಿನ್ಹ್ ಪಟ ರಾರಾಜಿಸುತ್ತದೆ. ನಗರದ ಹೃದಯಭಾಗದಲ್ಲಿ ಟೌನ್ ಹಾಲ್ ಎದುರು ಭವ್ಯ ಪ್ರತಿಮೆಯೂ ಇದೆ. ಅವರ ಸ್ಮರಣಾರ್ಥ ಸಿಟಿಗೇ ಮರುನಾಮಕರಣವೂ ಆಗಿದೆ.
ಕಾಸ್ಮಾಪಾಲಿಟನ್ ಸಂಸ್ಕೃತಿ ಮತ್ತು ಲೈಫ್ ಸ್ಟೈಲ್ ಹೊಂದಿರುವ ಸೈಗಾನ್ ಅಲಿಯಾಸ್ ಹೋ ಚಿ ಮಿನ್ಹ್ ಗಮನ ಸೆಳೆಯುವುದು ನಗರ ಸೌಂದರ್ಯದಿಂದ ಮತ್ತು ನೈಟ್ ಲೈಫ್ ನಿಂದ. ಡಬಲ್ ಡೆಕರ್ ಬಸ್ಸಿನಲ್ಲಿ ಸಿಟಿ ಟೂರ್ ಹೋದರೆ ಕೆಲವೇ ಗಂಟೆಗಳಲ್ಲಿ ಡ್ರೋನ್ ಕೋನದಲ್ಲಿ ಇಡೀ ಹೋಚಿ ಮಿನ್ಹ್ ನೋಡಬಹುದು. ಥೈಲ್ಯಾಂಡ್ ಬ್ಯಾಂಕಾಕ್ ನೆನಪಿಸುವ ರಾತ್ರಿ ಸೌಂದರ್ಯವೂ ಇಲ್ಲಿದೆ. ಪ್ರವಾಸಿಗರಿಗೆ ಇದರತ್ತ ವಿಚಿತ್ರ ಆಕರ್ಷಣೆ. ಇನ್ನು ಮಿಸ್ ಮಾಡಬಾರದ ಒಂದು ವಿಷಯ ಅಂದರೆ ಅದು ನಗರದ ಒಪೆರಾ ಹೌಸ್‌ನಲ್ಲಿನ ಸೈಗಾನ್ ಬ್ಯಾಂಬೂ ಶೋ
ನೋಟ್ರೆ ಡೇಮ್ ಕೆಥೆಡ್ರಲ್
ಕೆನಡಾದ ಮಾಂಟಿಯಲ್ ನಲ್ಲಿ ಇರುವಂಥ ಡೇಮ್ ಬೆಸಿಲಿಕಾ ಚರ್ಚ್ ವಿಯೆಟ್ನಾಂ ನಲ್ಲಿಯೂ ಇದೆ. ಹೋ ಚಿ ಮಿನ್ ಸಿಟಿಯ ಇತಿಹಾಸದ ಪ್ರಮುಖ ಮಾನುಮೆಂಟ್ ಇದು. 58 ಮೀ. ಎತ್ತರದ ಎರಡು ಘಂಟಾ ಗೋಪುರ ಹೊಂದಿರುವ ಈ ಚರ್ಚ್ ನಿರ್ಮಿಸಿದ್ದು ಫ್ರೆಂಚರು. ಪ್ರವಾಸಿಗರಿಗೂ ಪ್ರಾರ್ಥನೆ ಮಾಡುವವರಿಗೂ ಓಪನ್ ಇರುವ ಈ ಚರ್ಚ್ ನೋಡಲೇಬೇಕಾದ ಜಾಗ.

ಬೆನ್ ಥನ್ ಎಂಬ ಚೌಕಾಸಿ ಮಾರ್ಕೆಟ್
ಒಂದೇ ಸೂರಿನಲ್ಲಿದೆ ಎಂಬುದು ಬಿಟ್ಟರೆ ಬೆಂಗಳೂರಿನ ಕೆ.ಆರ್.ಮಾರ್ಕೆಟ್ ಮೆಜೆಸ್ಟಿಕ್, ಚಿಕ್ಕಪೇಟೆ, ಬಜಾರುಗಳಿಗೂ ಇದಕ್ಕೂ ಅಂಥ ವ್ಯತ್ಯಾಸವೇನಿಲ್ಲ. ಫ್ರೆಂಚರ ಕಾಲದ ಈ ಮಾರ್ಕೆಟ್ ನಲ್ಲಿ ಚೌಕಾಸಿ ಗೊತ್ತಿದ್ದವನೇ ಕಿಂಗ್. ಇಲ್ಲಿನ ಕರೆನ್ಸಿ ಲೆಕ್ಕದಲ್ಲಿ ಭಾರತೀಯರು ಮಿಲೆನಿಯರ್ ಗಳು. ಆದರೆ ಕನ್ವರ್ಟ್ ಮಾಡಿ ಲೆಕ್ಕ ಹಾಕಿದರೆ ಬೆಲೆ ಎಲ್ಲ ಒಂದೇ. ಒಂದು ಅಂಗಿಗೆ ಒಂದೂವರೆ ಲಕ್ಷ ವಿಯೆಟ್ನಾಮಿ ಡಾಂಗ್. ಚೌಕಾಸಿ ಮಾಡಿದರೆ ಎಪ್ಪತ್ತೈದು ಸಾವಿರಕ್ಕೆ ಬರುತ್ತಾರೆ. ಅಂದ್ರೆ ಐನೂರು ರುಪಾಯಿ ಶರಟನ್ನು ಇನ್ನೂರೈವತ್ತಕ್ಕೆ ಕೊಡುತ್ತಾರೆ. ದಿನಸಿ, ಹಣ್ಣು-ತರಕಾರಿ, ಮೀನು, ಮಾಂಸಗಳಿಂದ ಹಿಡಿದು, ಟೀಶರ್ಟ್, ಜರ್ಕಿನ್, ಶೂ, ಚಪ್ಪಲಿ, ಬ್ಯಾಗು, ಆಭರಣ, ಆಟದ ಸಾಮಗ್ರಿ ಎಲ್ಲವೂ ಸಿಗುವ ಈ ಜಾಗ ಪ್ರವಾಸಿಗರ ಕೊನೆಯ ಪಾಯಿಂಟ್. ಊರಿಗೆ ಏನಾದರೂ ತರಬೇಕೆಂದು ಹೋದರೆ ಖಾಲಿ ಕೈಲಿ ಬರಲು ಬಿಡುವುದಿಲ್ಲ.
ಪೋಸ್ಟಾಫೀಸೂ ಪ್ರವಾಸಿ ತಾಣ
ನಮ್ಮಲ್ಲಿ ಎಂಥ ಅಂದದ ಪೋಸ್ಟ್ ಆಫೀಸ್ ಇದ್ದರೂ ಅದನ್ನು ಪ್ರವಾಸಿಗರಿಗೆ ತೋರಿಸುವುದಿಲ್ಲ. ಆದರೆ ಇಲ್ಲಿ ಅದನ್ನೂ ಸಂದರ್ಶಿಸುತ್ತಾರೆ. 19ನೇ ಶತಮಾನದ ಕೊನೆಯಲ್ಲಿ ನಿರ್ಮಾಣವಾದ ಈ ಅಂಚೆ ಕಚೇರಿ ಈಗ ಪಾರಂಪರಿಕ ಕಟ್ಟಡ. ಇಲ್ಲಿಂದ ಸುಮ್ಮನೆ ಒಂದು ಪತ್ರ ಬರೆದು ತಂತಮ್ಮ ದೇಶಕ್ಕೆ ಪೋಸ್ಟ್ ಮಾಡಬಹುದು.ತಿಂಗಳೊಳಗಾಗಿ ಬಂದು ತಲುಪುತ್ತದೆ. ಪ್ರವಾಸಿಗರು ಆ ಕೆಲಸ ಮಾಡುತ್ತಾರೆ. ಒಂದು ಪತ್ರದ ಬೆಲೆ ಸುಮಾರು 200 ರೂಪಾಯಿ.
ಏಜೆಂಟ್ ಆರೆಂಜ್ ಎಂಬ ಅಮೆರಿಕನ್ ವಿಕೃತಿ
ನೂರು ವರ್ಷ ಆಳಿ 1954ರಲ್ಲಿ ಫ್ರೆಂಚರು ವಿಯೆಟ್ನಾಂ ತೊರೆಯುತ್ತಾರೆ. ಆಗ ಉತ್ತರ ಹಾಗೂ ದಕ್ಷಿಣ ವಿಯೆಟ್ನಾಂ ನಡುವೆ ‘ವಿಯೆಟ್ನಾಂ ಯುದ್ಧ’ ಎಂದು ಕರೆಯಲ್ಪಡುವ ಆಂತರಿಕ ಸಂಘರ್ಷ ಶುರುವಾಗುತ್ತದೆ. ಇಲ್ಲಿ ಅಮೆರಿಕ ತನ್ನ ಬೇಳೆ ಬೇಯಿಸಿಕೊಳ್ಳಲು ಪ್ರವೇಶ ಮಾಡುತ್ತದೆ. 1955ರಿಂದ 1975ರವರೆಗೆ ಸುಮಾರು 20 ವರ್ಷಗಳ ಕಾಲ ನಡೆಯುವ ಯುದ್ಧ ಅಮೆರಿಕ ಮತ್ತು ವಿಯೆಟ್ನಾಂ ನಡುವಣ ಯುದ್ಧವಾಗಿ ಬದಲಾಗುತ್ತದೆ. ಸುಮಾರು ನಾಲ್ಕು ಮಿಲಿಯನ್ ಮಂದಿ ಯುದ್ಧದಲ್ಲಿ ಬಲಿಯಾಗುತ್ತಾರೆ. ಆ ಯುದ್ಧದ ಇಂಚಿಂಚು ಮಾಹಿತಿ, ಚಿತ್ರಸಮೇತ ನಮಗೆ ವಿಯೆಟ್ನಾಂ ವಾರ್ ಮ್ಯೂಸಿಯಂನಲ್ಲಿ ಸಿಗುತ್ತದೆ. ಕ್ರೌರ್ಯದ ಪರಮಾವಧಿ ತೋರುವ ಅಮೆರಿಕ ಏಜೆಂಟ್ ಆರೆಂಜ್ ಹೆಸರಲ್ಲಿ ರಾಸಾಯನಿಕ ಪ್ರಯೋಗ ನಡೆಸುತ್ತದೆ. ಪರಿಣಾಮವಾಗಿ ವಿಯೆಟ್ನಾಂ ಮುಂದಿನ ಹತ್ತಾರು ವರ್ಷ ನರಳುತ್ತದೆ. ಅಂಗವಿಕಲ ಮಕ್ಕಳು ಹುಟ್ಟುತ್ತವೆ. ಅಪರೂಪದ ಕಾಯಿಲೆಗಳು ಬಂದೆರಗುತ್ತವೆ. ಅಂಥವರೂ ಕೂಡ ಛಲದಿಂದ ಎದ್ದುನ ನಿಂತು ಸಾಧನೆಗೈಯ್ಯುತ್ತಾರೆ. ಈ ವಿವರಗಳು ಹೃದಯ ಕಿವುಚುವಂತೆ ಮಾಡುತ್ತವೆ. ಶಸ್ತ್ರಾಸ್ತ್ರಗಳು, ಅಮೆರಿಕನ್ ಫಿರಂಗಿಗಳು, ಮದ್ದುಗುಂಡುಗಳು ಏನೇನೆಲ್ಲ ವಾರ್ ಮ್ಯೂಸಿಯಂ ನಲ್ಲಿ ಕಂಡರೂ ನೆನಪಲ್ಲಿ ಉಳಿಯುವುದು ಯುದ್ಧದ ಪರಿಣಾಮ ಮತ್ತು ದಾರುಣತೆ.
ಕು ಚಿ ಟನೆಲ್ ಎಂಬ ಪಬ್ ಜಿ ತಾಣಗಳು!
ಅಮೆರಿಕ ವಿರುದ್ಧ ವಿಯೆಟ್ನಾಮ್ ಹೋರಾಡಿದ ರೀತಿ ಮತ್ತು ಬಳಸಿದ ಪ್ಲಾನ್ ಗೊತ್ತಾಗಬೇಕು ಅಂದ್ರೆ ಕು ಚಿ ಸುರಂಗ ನೋಡಬೇಕು. ಹೋ ಚಿ ಮಿನ್ ಸಿಟಿಯಿಂದ ಐವತ್ತು ಕಿಮೀ ದೂರದಲ್ಲಿರುವ ಈ ಮಾನವನಿರ್ಮಿತ ಸುರಂಗಗಳು ಸುಮಾರು 200 ಕಿಮೀ ಪ್ರದೇಶದಲ್ಲಿ ವ್ಯಾಪಿಸಿಕೊಂಡಿದೆ ಎನ್ನುತ್ತದೆ ದಾಖಲೆ. ಸಾವಿರಾರು ಯೋಧರು ಸುರಂಗಗಳಲ್ಲಿ ತಂಗಿ ಅಮೆರಿಕ ಶತ್ರುಗಳನ್ನು ಮುಗಿಸಲು ತಂತ್ರಗಳನ್ನು ರೂಪಿಸುತ್ತಿದ್ದ ಕತೆಗಳು ನಿಜಕ್ಕೂ ರೋಮಾಂಚಕ. ಗಡ್ಡೆ ಗೆಣಸು ತಿಂದು ದಿನಗಟ್ಟಲೇ ಸುರಂಗದಲ್ಲೇ ಜೀವಿಸಿ, ಅಮೆರಿಕ ಹಾಕಿದ ಬಾಂಬ್‌ಗಳ ಕಬ್ಬಿಣವನ್ನೇ ಬಳಸಿ ಶಸ್ತ್ರಾಸ್ತ್ರ ತಯಾರಿಸಿಕೊಂಡ ಚಾಣಾಕ್ಷರು ಈ ವಿಯೆಟ್ನಾಮಿಗಳು. ಶ್ವಾನ ದಳವನ್ನು ಯಾಮಾರಿಸಲು ಪೆಪ್ಪರ್ ಸ್ಪ್ರೇ ಬಳಸಿದ ಕಥೆ ಕೇಳುತ್ತಿದ್ದರೆ ಮೈ ನವಿರೇಳುತ್ತದೆ. ಇಲ್ಲಿ ಸಾಹಸಿಗಳಿಗಾಗಿ ಎಕೆ-47 ರೈಫಲ್ ಪ್ರಯೋಗಿಸುವ ಶೂಟಿಂಗ್ ರೇಂಜ್ ಇದೆ. ಸಾವಿರ ರುಪಾಯಿಕ ಕೊಟ್ಟರೆ ಯೋಧರ ರೀತಿಯೇ ರೈಫಲ್ ಹಿಡಿದು ಶೂಟ್ ಮಾಡಬಹುದು. ಗುಂಡಿನ ಮೊರೆತ ಬಹಳ ದಿನ ಕಿವಿ ಕೊರೆಯುತ್ತದೆ. ಮಿಸ್ ಮಾಡಬಾರದ ಇನ್ನೊಂದು ಜಾಗವಿದು.
ಕಾಫಿಬಣ್ಣದ ಮೆಕಾಂಗ್ ಡೆಲ್ಟಾ
ವಿಯೆಟ್ನಾಂ ನಲ್ಲಿ ಹರಿಯುವುದು ಮೆಕಾಂಗ್ ನದಿ . 5 ದೇಶ ಹಾದು ವಿಯೆಟ್ನಾಂ ಪ್ರವೇಶಿಸಿ ನಂತರ ಕವಲೊಡೆದು ಸಮುದ್ರ ಸೇರುತ್ತದೆ. 40 ಸಾವಿರ ಚದರ ಕಿಲೋಮೀಟರು ಫಲವತ್ತಾದ ಭೂಮಿ ಇದೆ ಅಂದ್ರೆ ಅದಕ್ಕೆ ಕಾರಣ ಮೆಕಾಂಗ್ ನದಿ. ಕೃಷಿ, ತೋಟಗಾರಿಕೆ ನೈಋತ್ಯ ವಿಯೆಟ್ನಾಂನ ಪ್ರಮುಖ ಉದ್ಯೋಗ. ಭತ್ತ ಇಲ್ಲಿನ ಪ್ರಮುಖ ಬೆಳೆ. ವಿಯೆಟ್ನಾಂ ‘ವಿಶ್ವದ ಅಕ್ಕಿಯ ಬಟ್ಟಲು’ ಎಂದು ಕರೆಸಿಕೊಳ್ಳುತ್ತದೆ. ವಿಯೆಟ್ನಾಂಗೆ ಹೋದವರು ಒಂದು ಕೇಜಿಯಾದರೂ ಅಕ್ಕಿ ತರಬೇಕು. ಅದರಲ್ಲಾಗುವ ಅನ್ನ ಸ್ಪೆಷಲ್ಲು. ತೆಂಗು ಮತ್ತು ಜೇನು ಕೃಷಿ ಇಲ್ಲಿನ ಪ್ರಮುಖ ಆಕರ್ಷಣೆ. ಇವೆಲ್ಲವೂ ಇಲ್ಲಿ ಪ್ರವಾಸೋದ್ಯಮದ ಆಕರ್ಷಣೆಯಾಗಿಸುತ್ತಾರೆ. ಮೆಕಾಂಗ್ ದಂಡೆಯ ಮೇಲೆ ಮೈ ಥೋ ಎಂಬ ಪ್ರದೇಶವಿದೆ. ಅಲ್ಲಿ ಪುಟ್ಟ ಪುಟ್ಟ ದ್ವೀಪಗಳಿವೆ. ಮೋಟಾರು ಬೋಟಿನಲ್ಲಿ ಆ ದ್ವೀಪಗಳಿಗೆ ತೆರಳಿದರೆ, ಜೇನು ಹಾಗೂ ಅದರ ಉಪ ಉತ್ಪನ್ನಗಳ ರುಚಿ ಸವಿಯುವ ಕೆಫೆ, ವಿಯೆಟ್ನಾಮೀಸ್ ಗಾಯನ, ವಿಶೇಷ ಹಣ್ಣುಗಳ ರುಚಿ ನೋಡುವ ಅವಕಾಶ, ಅಲ್ಲೇ ಇರುವ ಚಿಕ್ಕ ಕಾಲುವೆಗಳಲ್ಲಿ ದೋಣಿ ವಿಹಾರದ ಖುಷಿ. ಕೃಷಿ ಮತ್ತು ತೋಟಗಾರಿಕೆಯೂ ಪ್ರವಾಸೋದ್ಯಮವಾಗಬಹುದು ಎಂಬುದನ್ನು ವಿಯೆಟ್ನಾಂ ನಿಂದ ಕಲಿಯಬೇಕು.

ವುಂಗ್ ತಾವ್ ಸಮುದ್ರ ಮತ್ತು ಏಸುಕ್ರಿಸ್ತ
ವುಂಗ್ ತಾವ್ ಪಕ್ಕಾ ಕರಾವಳಿ. ಮಂಗಳೂರಿನ ಹವಾಮಾನದಂತಿರುವ ಇಲ್ಲಿ ಸೆಖೆಗೆ ಬೆವರು ಸುರಿಯುತ್ತದೆ. ಸುಮಾರು 140 ಚದರ ಕಿಮೀ. ವ್ಯಾಪ್ತಿಯ ಕರಾವಳಿ ಈ ವುಂಗ್ ತಾವ್. ಹೋ ಚಿ ಮಿನ್ ಸಿಟಿಯಿಂದ 90 ಕಿಮೀ ದೂರದಲ್ಲಿರುವ ವುಂಗ್ ತಾವ್ ನಲ್ಲಿ ಕಾಮನ್ ಡಾರ್ಮೆಟ್ರಿಯಿಂದ ಐಷಾರಾಮಿ ರೆಸಾರ್ಟ್‌ಗಳು, ಕಾಂಟಿನೆಂಟಲ್ ಹಾಗೂ ವಿಯೆಟ್ನಾಮೀಸ್ ಆಹಾರ ನೀಡುವ ಹೊಟೇಲ್ ಗಳು ಎಲ್ಲವೂ ಇವೆ.. ಕೇಬಲ್ ಕಾರ್ ಕೂಡ ಇದೆ. ಕಡಲ ಕಿನಾರೆಯಲ್ಲಿ ವಿಧವಿಧ ಕ್ರೀಡೆಗಳಿವೆ. ಪ್ರವಾಸಿಗರಿಗೆ ಇಷ್ಟವಾಗುವ ಜಾಗ ವುಂಗ್ ತಾವ್. ಅಚ್ಚುಮೆಚ್ಚಿನ ಸ್ಥಳ. 105 ಅಡಿ ಎತ್ತರದ ಕ್ರೈಸ್ಟ್ ದ ಕಿಂಗ್ ಪ್ರತಿಮೆ ಇಲ್ಲಿದೆ. ಇದರೊಳಗೆ ಮೆಟ್ಟಿಲುಗಳಿದ್ದು, ಕ್ರಿಸ್ತನ ಹೆಗಲಿನ ವರೆಗೆ ಏರಿ, ಸುತ್ತಲಿನ ಪ್ರದೇಶದ ಪಕ್ಷಿನೋಟ ಪಡೆಯಬಹುದು. ಉಡುಗೆ ಶಿಷ್ಟಾಚಾರ ಕಡ್ಡಾಯವಾಗಿ ಪಾಲಿಸಬೇಕಿರೋ ಈ ಜಾಗ ಫೊಟೋಗ್ರಫಿಗೆ ಉತ್ತಮ ಪಾಯಿಂಟ್. ವುಂಗ್ ತಾವ್ ನ ಸಮುದ್ರ ತೀರಗಳನ್ನು ಈ ಎತ್ತರದಿಂದ ನೋಡುವ ಸೊಗಸೇ ಬೇರೆ.
ಇಂಗ್ಲಿಷ್ ಅಲ್ಲ ಇಂಗ್ಲಿಷ್ ಥರ
ವಿಯೆಟ್ನಾಂ ಲಿಪಿ ಇಂಗ್ಲಿಷ್ ಥರ ಇದೆ. ಆದರೆ ಇಂಗ್ಲಿಷ್ ಅಲ್ಲ. ಪ್ರತಿ ಅಕ್ಷರದ ಮೇಲೆ ಟೊಪ್ಪಿಗೆ ಚುಕ್ಕೆ ಎಲ್ಲ ಇರುತ್ತದೆ. ಅದು ಬೇರೆಯದೇ ಅರ್ಥ ಸೂಚಿಸುತ್ತದೆ. ವಿಯೆಟ್ನಾಂ ನ ಲಿಪಿ ಇಂಗ್ಲಿಷ್ ಗಿಂತ ಲ್ಯಾಟಿನ್ ಅಕ್ಷರಗಳನ್ನು ಹೆಚ್ಚು ಹೋಲುತ್ತದೆ. ಇವರ ಲಿಪಿಯಲ್ಲಿ ಇಂಗ್ಲಿಷ್ ಗಿಂತ ಜಾಸ್ತಿ ಅಂದ್ರೆ 29 ಅಕ್ಷರಗಳಿವೆ. ಆದರೂ ಕನ್ನಡಕ್ಕಿಂತ ಕಮ್ಮಿ. ಅಲ್ವೇ?
ಕೋಟ್ಯಧೀಶರ ನಾಡು!
ವಿಯೆಟ್ನಾಂನಲ್ಲಿ ಎಲ್ಲರೂ ಬಿಲೆನಿಯರ್ ಮತ್ತು ಮಿಲೆನಿಯರ್ ಗಳೇ. ಭಾರತೀಯರೂ ಸಹ ವಿಯೆಟ್ನಾಂಗೆ ಕಾಲಿಟ್ಟ ತಕ್ಷಣ ಕೋಟ್ಯಧೀಶರಾಗುತ್ತಾರೆ. ಇದ್ಯಾವ ಮಾಯೆ ಅಂತ ಕೇಳ್ತೀರಾ? ವಿಷಯ ಇಷ್ಟೇ. ವಿಯೆಟ್ನಾಂನ ಕರೆನ್ಸಿ ಹೆಸರು ವಿಯೆಟ್ನಾಮೀಸ್ ಡಾಂಗ್. ಒಂದು ಡಾಂಗ್ ಗೆ ಭಾರತದಲ್ಲಿ 0.0033 ರುಪಾಯಿ. ಅಂದರೆ ವಿಯೆಟ್ನಾಂನ ಒಂದು ಲಕ್ಷ ಭಾರತೀಯ ರುಪಾಯಿಯಲ್ಲಿ 334 ರುಪಾಯಿ ಅಷ್ಟೆ. ಪ್ಲಾಸ್ಟಿಕ್ ಕವರಿನಿಂದ ಮಾಡಿದಂಥ ನುಣುಪಾದ ನೋಟುಗಳು ಆಕರ್ಷಕವಾಗಿರುತ್ತವೆ. ಆದರೆ ಎಣಿಸಿಕೊಡುವ ಹೊತ್ತಿಗೆ ತಲೆಸುತ್ತುಬರುತ್ತದೆ. ನಾವು ಡಾಲರ್ ಎದುರು ಕುಬ್ಜರಾಗಿ ಕಾಣುವಂತೆ ವಿಯೆಟ್ನಾಂ ಡಾಂಗ್ ರುಪಾಯಿಯ ಎದುರು ಕುಬ್ಜವೆನಿಸುತ್ತದೆ. ಆದರೆ ಇದರರ್ಥ ವಿಯೆಟ್ನಾಂನಲ್ಲಿ ಹಣದುಬ್ಬರವಿದೆ ಎಂದರ್ಥವೇನಲ್ಲ. ಇನ್ನು ವಿಯೆಟ್ನಾಂನಲ್ಲಿ ವಸ್ತುಗಳ ಬೆಲೆ ಬಹುತೇಕ ಭಾರತೀಯ ಮಾರುಕಟ್ಟೆಯ ರೀತಿಯಲ್ಲೇ ಇದೆ. ಕಾಫಿ, ಡ್ರೈಫ್ರುಟ್ಸ್, ಬಟ್ಟೆಗಳಿಗೆ ಇಲ್ಲಿ ಗ್ರಾಹಕರಿಂದ ಹೆಚ್ಚು ಡಿಮ್ಯಾಂಡ್ ಇರುತ್ತದೆ.
ಸ್ನೇಕ್ ವೈನ್ ಬೇಕೇ?
ಮೆಕಾಂಗ್ ಡೆಲ್ಟಾದ ಹಿನ್ನೀರಿನಲ್ಲಿ ಬೋಟಿಂಗ್ ಹೋಗುವ ಮೊದಲು ಒಂದು ಆಹಾರಧಾಮ ಸಿಗುತ್ತದೆ. ಬಗೆಬಗೆಯ ಹಣ್ಣುಗಳನ್ನು ತಿನ್ನಿಸಿ ವಿಯೆಟ್ನಾಮಿ ಸಂಗೀತ ಹಾಡಿ ಕಳಿಸುತ್ತಾರೆ. ಅಲ್ಲಿ ನಿಮಗೊಂದು ವಿಚಿತ್ರ ಕಾಣಸಿಗುತ್ತದೆ. ಅದೇ ಸ್ನೇಕ್ ವೈನ್. ಬಗೆಬಗೆಯ ಸೈಜಿನ ಬಾಟಲುಗಳಲ್ಲಿ ವಿಧವಿಧ ಜಾತಿಯ ಹಾವುಗಳನ್ನು ದ್ರವದೊಂದಿಗೆ ತುಂಬಿಸಿಟ್ಟಿದ್ದಾರೆ. ಅವ್ಯಾವುದೂ ಈಗ ಬದುಕಿಲ್ಲ. ಭತ್ತದಿಂದ ತಯಾರಿಸುವ ವೈನ್ ಒಳಗೆ ಹಾವುಗಳನ್ನು ಇಟ್ಟಿರುವುದ್ಯಾಕೆ ಅಂದರೆ ಅದೊಂದು ಬಗೆಯ ಔಷಧೀಯ ವೈನ್ ಅಂತೆ. ಹಾವಿನ ವಿಷ ಸೇರುವುದಿಲ್ಲವಾ ಎಂಬ ಪ್ರಶ್ನೆ ಕೇಳಿದರೆ ವಿಷ ತೆಗೆದು ವೈನ್ ನೊಳಗೆ ಮುಳುಗಿಸಿಡುತ್ತಾರೆ ಎಂಬ ಉತ್ತರ ಬಂತು. ವಿಷ ತೆಗೆದ ಹಾವು ಇವರಿಗೆ ಆಹಾರವೂ ಹೌದು ಔಷಧಿಯೂ ಹೌದು. ಎಂಥ ವಿಚಿತ್ರ ಪದ್ಧತಿ ಮತ್ತು ರುಚಿ-ಅಭಿರುಚಿ ಅಲ್ಲವೇ?