Tuesday, November 18, 2025
Tuesday, November 18, 2025

ಸ್ಮೋಕಿ ಮೌಂಟನ್ಸ್ ಒಡಲಲ್ಲಿ ಸೋಮೇಶ್ವರ ದೇಗುಲ

ದೂರದಿಂದಲೇ ಕಾಣುವ ಶಿಖರದ ಬಿಳಿಬಣ್ಣ ಬೆಳ್ಳಿಯಂತೆ ಹೊಳೆದರೆ ಹಸಿರು ಮುಚ್ಚಿದ ಕಾಡಿನಲ್ಲಿ ಅಪ್ಪಟ ದಕ್ಷಿಣ ಭಾರತದ ಶೈಲಿಯಲ್ಲಿ ಕಟ್ಟಿದ್ದ ಕೋನಾಕಾರದ ಗೋಪುರಕ್ಕೆ ಅಸಂಖ್ಯ ಕೆತ್ತನೆಗಳಿದ್ದದ್ದು ಕಂಡು‌ ಈ ಗುಡಿಯನ್ನು ಕಟ್ಟಿಸಿದವರ ಆಸಕ್ತಿಯ ಬಗ್ಗೆ ಕುತೂಹಲ, ಎರಡೂ ಖುಷಿ ಅನಿಸಿತು. ಅದಕ್ಕೆ ಇನ್ನೂ ಒಂದು ಕಾರಣ. ಬೃಹತ್ತಾದ ಈ‌ ಮೌಂಟ್ ಸೋಮ‌ ದೇವಸ್ಥಾನವನ್ನು ಶ್ರದ್ಧೆಯಿಂದ ಕಟ್ಟಿಸಿರುವ ವ್ಯಕ್ತಿ ಓರ್ವ ಅಮೆರಿಕನ್.

  • ಜಯಶ್ರೀ ದೇಶಪಾಂಡೆ

ಬೆಟ್ಟ ಗುಡ್ಡ ಪರ್ವತ ಅಂದಾಕ್ಷಣ ಹಾವು ಸುತ್ತಿದ ವರಸೆಯಲ್ಲಿ ಸುರುಳಿ ಸುರುಳಿ ಸುತ್ತಿ ಮಲಗುವ ದಾರಿ ಸಹಜ. ಎಡಬಲಕ್ಕೆ ಕಣ್ಣಿಡೀ ಹಸಿರು ತುಂಬಿಸುವ ಕಾಡು, ಉದ್ದುದ್ದ, ದಪ್ಪದ ಬಗೆಬಗೆ ಮರಗಳು ಕಣ್ಣೆದುರು. ಎಷ್ಟು ಹಸಿರೆಂದರೆ ಭೂಮ್ಯಾಕಾಶಗಳ ನಡುವೆ ಹಸಿರು ಬಿಟ್ಟರೆ ಇನ್ನೇನೂ ಇಲ್ಲವೇ ಇಲ್ಲವೇನೋ ಅನಿಸುವಷ್ಟರ ಮಟ್ಟಿಗಿನ ಆ ಕಾಡನ್ನು ಸೇರಲು ನಾವೆಲ್ಲ ಅಂದರೆ ಒಟ್ಟು ಎಂಟು ಜನ, ನಿಧಾನವಾಗಿ ಮೇಲೇರುತ್ತಿದ್ದೆವು.

ಆಗ ಯಾರೋ ಸುತ್ತಿಸಿದಂತೆ ಸುರುಳಿ ಸುರುಳಿಯಾಗಿ ಅಷ್ಟು ದೂರದಲ್ಲಿ ಹಸಿಯಾದ ಹೊಗೆಯ ಹೊನಲೇ ಕಾಣಿಸಿಕೊಂಡಿತ್ತು. ಆಕಾಶವಿಡೀ ನೀಲಿ, ಹಸಿರು ಬಣ್ಣದಲ್ಲಿ ಕಣ್ಣುಗಳನ್ನು‌ ಕೀಳಲಾಗದಷ್ಟು ಆಕರ್ಷಕವಾದ ಆ ನೋಟ ಮೂಡಿಸಿದ ಕಣ್ಣಿಗೆ ತಂಪು ಸೂಸುವ ಹಸಿ ಹೊಗೆ!

ಹಾಗೆಂದರೇನು? ಅದು ಆಕಾಶಕ್ಕೆ ಹರಡುವುದೆಂದರೇನು ಎಂಬ ಕುತೂಹಲಕ್ಕೆ ಉತ್ತರ ಹೇಳಿದ್ದು‌ ಅವೇ ಗ್ರೇಟ್ ಸ್ಮೋಕಿ ಮೌಂಟನ್ಸ್!

ಅದರೊಡಲಲ್ಲಿನ 6643 ಅಡಿಗಳ ಎತ್ತರದ ಕಿಂಗ್ ಮ್ಯಾನ್ಸ್ ಡೋಮ್, ಮೌಂಟ್ ಲೆಕಾಂಟ್ ನ ಚೂಪುತುದಿಗಳು ಮತ್ತು ಫೇಮಸ್ ಫೋರ್ ಎನ್ನುವ ನಾಲ್ಕು ಜಲಪಾತಗಳ ಸಾಲು ಸಾಲಿನ‌ ನಡುನಡುವೆ, ಕೇಡ್ಸ್ ಕೋವ್ ಆಳ ಕಣಿವೆಗಳ ನಡುವೆ ಏಳುವ ನೀಲಿ ಬಿಳಿ ಹಸಿತಂಪು ಹೊಗೆ!

Untitled design (15)

ಅಚ್ಚರಿಗಳ ಆಗರ

ಅಟ್ಲಾಂಟಾ ಜಾರ್ಜಿಯಾದಿಂದ ನಾಲ್ಕು ನೂರು ಮೈಲಿ ದೂರದಲ್ಲಿರುವ (Smoky Mountains) ಸ್ಮೋಕೀ‌ ಪರ್ವತಗಳು ಅಂತ ಅತ್ಯಂತ ಸುಂದರ ಬೆಟ್ಟಸಾಲುಗಳು. ಅಮೆರಿಕದ ಟೆನೆಸ್ಸೀ ಮತ್ತು ನಾರ್ಥ ಕೆರೋಲಿನಾ ರಾಜ್ಯಗಳುದ್ದಕ್ಕೂ ಹರಡಿರುವ ಇವು ಅಪ್ಲಾಚಿಯನ್ ಪರ್ವತಗಳ ಶ್ರೇಣಿಯ ಒಂದು ಭಾಗ. ಇವುಗಳಲ್ಲಿರುವ ಹಸಿರು ಕಣಿವೆಗಳ ಮೇಲೆ ನೀಲಿ ಬಣ್ಣದ ಮಂಜು ಹರಡಿಕೊಂಡು ಹೊರಡುವ ಹೊಗೆಯನ್ನೇ ಹೋಲುವ ಆದರೆ ಹೊಗೆಯಲ್ಲದ ಮಂಜಿನ ಪರದೆ! ಸಂಜೆಯ ಹೊತ್ತಿನ ಇದರ ಕಿತ್ತಳೆಗೆಂಪಿನ ಪಸರಿಸುವಿಕೆ ಇನ್ನೂ ಹೆಚ್ಚು ಮನಮೋಹಕ. ಗ್ರೇಟ್ ಸ್ಮೋಕಿ ಮೌಂಟನ್ಸ್ ನ್ಯಾಶನಲ್ ಪಾರ್ಕ್ ಬೇಸಿಗೆಯಲ್ಲಿ ಪ್ರವಾಸಿಗರಿಂದ ತುಂಬಿ ತುಳುಕುತ್ತದೆ. ಪರ್ವತಗಳ ನಡುವಿನ‌ ರೋಪ್ ವೇ, ಹಾಲಿವುಡ್ ಸ್ಟಾರ್ ಗಳು ಬಳಸಿದ ಕಾರುಗಳ ಪ್ರದರ್ಶನ ಮಾಡಿರುವ ಸ್ಟಾರ್ ಕಾರ್ಸ್ ಮ್ಯೂಸಿಯಂ ಕೂಡ ಇಲ್ಲಿನ ಒಂದು ಆಕರ್ಷಣೆ.

ಮೌಂಟ್‌ ಸೋಮೇಶ್ವರ

ಪರ್ವತಸಾಲುಗಳನ್ನು ದಾಟುತ್ತ ಗ್ಯಾಟ್ಲಿನ್ ಬರ್ಗ ಎಂಬ ಕ್ಯಾಂಪಿಂಗ್ ಪ್ರದೇಶಕ್ಕೆ ರಜಾದಿನಗಳನ್ನು ಕಳೆಯಲು ನಾವು ಹೊರಟಿದ್ದೆವು. ದಾರಿಯ ನೂರಾರು ಮೈಲಿಗಳಷ್ಟುದ್ದಕ್ಕೂ‌ ಸ್ಮೋಕಿ ಮೌಂಟನ್ ನ ನೀಲಿ ಹಸಿರು ಮಂಜು ಹೊಗೆಗಳ‌ನ್ನು ನೋಡಿ ಮೂಡಿದ ಅನೇಕ ಕುತೂಹಲಗಳ ಕಾರಣ ಮೂಡಿದ ಪ್ರಶ್ನೆಗಳ ಜೊತೆಯಲ್ಲೇ 'ಇನ್ನೊಂದು ಬಗೆಯ ವಿಸ್ಮಯ ಇಲ್ಲಿದೆ ಹೇಳುವೆ ಬಾ' ಅಂದಂತೆ ಆ ಪರ್ವತಗಳ ತಪ್ಪಲಿನಲ್ಲಿ ತನ್ನಿರವನ್ನು‌ ಹಮ್ಮಿಕೊಂಡು ಕೂತಿದ್ದ ಶಿವನ ಕರೆ ಬಂದಂತೆನಿಸಿತು.

ಅದೇ ಮೌಂಟ್ ಸೋಮ ಎಂದು ಹೆಸರಿಸಿಕೊಂಡ ಸೋಮೇಶ್ವರ ದೇವಸ್ಥಾನ. ಶಿವ ಸ್ಥಾಪಿತನಾಗಿರುವ ಕಾರಣಕ್ಕೇ ಇದನ್ನು ಮೌಂಟ್ ಸೋಮ ಎನ್ನುತ್ತಾರೆ.

ದೂರದಿಂದಲೇ ಕಾಣುವ ಶಿಖರದ ಬಿಳಿಬಣ್ಣ ಬೆಳ್ಳಿಯಂತೆ ಹೊಳೆದರೆ ಹಸಿರು ಮುಚ್ಚಿದ ಕಾಡಿನಲ್ಲಿ ಅಪ್ಪಟ ದಕ್ಷಿಣ ಭಾರತದ ಶೈಲಿಯಲ್ಲಿ ಕಟ್ಟಿದ್ದ ಕೋನಾಕಾರದ ಗೋಪುರಕ್ಕೆ ಅಸಂಖ್ಯ ಕೆತ್ತನೆಗಳಿದ್ದದ್ದು ಕಂಡು‌ ಈ ಗುಡಿಯನ್ನು ಕಟ್ಟಿಸಿದವರ ಆಸಕ್ತಿಯ ಬಗ್ಗೆ ಕುತೂಹಲ, ಎರಡೂ ಖುಷಿ ಅನಿಸಿತು. ಅದಕ್ಕೆ ಇನ್ನೂ ಒಂದು ಕಾರಣ. ಬೃಹತ್ತಾದ ಈ‌ ಮೌಂಟ್ ಸೋಮ‌ ದೇವಸ್ಥಾನವನ್ನು ಶ್ರದ್ಧೆಯಿಂದ ಕಟ್ಟಿಸಿರುವ ವ್ಯಕ್ತಿ ಓರ್ವ ಅಮೆರಿಕನ್.

Untitled design (16)

ನಾಲ್ಕು ನೂರಾಐವತ್ತು ಎಕರೆಯಷ್ಟು ವಿಶಾಲ ಕಾಡಿನ ತಪ್ಪಲಲ್ಲಿ ನಿರ್ಮಿತ, ಅತ್ಯಂತ ಸುಂದರವಿರುವ ಈ ಈಶ್ವರನ ದೇವಸ್ಥಾನದ ಸನ್ನಿಧಿಗೆ ಮೂವತ್ತೈದು ಮೆಟ್ಟಿಲುಗಳನ್ನೇರಿದಾಲೇ ಚಂದದ ಕೆತ್ತನೆಯ ದೊಡ್ಡ ಬಾಗಿಲ ಮೂಲಕ‌ ಒಳಪ್ರವೇಶ ಸಾಧ್ಯ. ಪರ್ವತವಾಸಿಯಲ್ಲವೇ ಈಶ್ವರ?

ಪೂಜೆ, ಅರ್ಚನೆಯ ಅನಂತರ ಮಧ್ಯಾಹ್ನದ ಹೊತ್ತು ಕೆಲವರು ಅಮೆರಿಕನ್ ದೈವೀಕಭಾವನೆಯ ಆಸಕ್ತರು ವೇದ ಮಂತ್ರಾದಿಗಳನ್ನು ಹೇಳುತ್ತಿದ್ದದ್ದು ಕಂಡಿತು. ಎಲ್ಲ ಬಗೆಯ ಶಾಸ್ತ್ರೋಕ್ತ ಹೋಮ, ಹವನ, ಪೂಜೆಗಳೆಲ್ಲ ಅಲ್ಲಿ ನಡೆಯುತ್ತವೆ. ಬೆಂಗಳೂರಿನ ಒಬ್ಬರು ಅರ್ಚಕರೂ ಅಲ್ಲಿದ್ದರು‌. ಅವರೊಂದಿಗೆ ಕನ್ನಡದಲ್ಲಿ ಮಾತನಾಡಿದ್ದು‌ ಸಂತಸ ತಂದಿತು.

ದೇವಸ್ಥಾನದ ಹಿಂಭಾಗಲ್ಲಿ ಮೂವತ್ತಡಿ ಎತ್ತರದ ಹಸಿರಿನ ಇಳಿಜಾರಿನಲ್ಲಿ ಹನುಮನ ಐವತ್ತಡಿ ಭವ್ಯ ಎತ್ತರದ ಮೂರ್ತಿಯನ್ನು ಕಟೆದು ನಿಲ್ಲಿಸಿದ್ದಾರೆ. ವರಪ್ರದ ಹಸ್ತನಾಗಿ‌ ದೂರದಿಗಂತದತ್ತ ದೃಷ್ಟಿನೆಟ್ಟು ನಿಂತಿರುವ ಹನುಮ ಕಂಡ ಕಣ್ಣುಗಳಿಗೆ ಆಶ್ಚರ್ಯ ಮತ್ತು ಭಕ್ತಿಭಾವ ಎರಡನ್ನೂ ಮೂಡಿಸುತ್ತಾನೆ.‌ ಪ್ರತಿವರ್ಷ ಹನುಮಜಯಂತಿ ವಿಜೃಂಭಣೆಯಿಂದ ನಡೆಯುತ್ತದೆಯಂತೆ.ಪಶುವೈದ್ಯಕೀಯ ಕ್ಷೇತ್ರದ ಡಾ.ಮೈಕೆಲ್ ಮಾಮ್ ಎಂಬ ಅಮೇರಿಕನ್ ದಾರ್ಶನಿಕ ಈ ಸೋಮೇಶ್ವರ ದೇವಸ್ಥಾನವನ್ನು ನಿರ್ಮಿಸಿದ್ದು. ಅವರ ಕನಸಿನಲ್ಲಿ‌ ಶಿವ ಕಾಣಿಸಿಕೊಂಡು ಕೊಟ್ಟ ಸೂಚನೆಯಂತೆ ಎಂಬ ಕತೆಯೊಂದನ್ನು ಅಲ್ಲಿ ಕೇಳಿದೆವು.

ವೈದಿಕ ಜ್ಞಾನ ಮತ್ತು ಭಾರತೀಯ ಭಕ್ತಿಪರಂಪರೆಯಲ್ಲಿ ನಂಬುಗೆ ಬೆಳೆದಾಗ ಮೈಕೆಲ್ ಮಾಮ್ ಆಧ್ಯಾತ್ಮಿಕ‌ತೆಯತ್ತ ವಾಲಿ ತಮ್ಮ ಇಪ್ಪತ್ತೊಂದನೆಯ ವಯಸ್ಸಿನಲ್ಲಿ ಗುರು ಮಹೇಶ್ ಯೋಗಿಯ ಅನುಯಾಯಿಯಾಗಿರುವ 'ಅಧ್ಯಾತ್ಮ ವಿದ್ಯಾ ವಿಶಾರದ' ಎನಿಸಿಕೊಂಡ ಜ್ಞಾನಿಯಾದರು. ಹೀಗೆ ಅವರ ಕುರಿತಾದ ಕೆಲವು ವಿಷಯಗಳು‌ ತಿಳಿದುವು.

ಶ್ರೀ ಸೋಮೇಶ್ವರ ದೇವಸ್ಥಾನವನ್ನು ವಾಸ್ತು ಶಾಸ್ತ್ರ ಪ್ರಕಾರದಲ್ಲೇ ವಿಧಿಪೂರ್ವಕವಾಗಿ ಕಟ್ಟಲಾಗಿದೆ. ಕೆಳಗಿಳಿದು ಹೋದರೆ ಆಧ್ಯಾತ್ಮಿಕ‌ ಪಾಠ ಪ್ರವಚನಗಳು ನಡೆಯುವ ಹಾಲ್ ಗಳು, ವಿಶಾಲವಾದ ಪ್ರಸಾದ ವಿತರಣೆಯ ಹಾಲ್ ಇದ್ದು, ಅಲ್ಲಿ‌ ಚಪಾತಿ, ಪಲ್ಯಗಳು, ಅನ್ನ, ಮೊಸರಿನ ಸಮೃದ್ಧ ಊಟವೇ ದೊರೆಯುತ್ತದೆ.

ಎಲ್ಲೆಲ್ಲಿಂದಲೂ ಕಾಣುವ‌ ಸ್ಮೋಕೀ ಮೌಂಟನ್ ಗಳ ನೀಲಿ ತಂಪು ಹೊಗೆಯ ನೋಟದ ಆಸ್ವಾದ ಖಂಡಿತ ಪ್ರವಾಸಿಗರ ಕಣ್ಮನ ತಣಿಸಿಯೇ ಕಳಿಸುತ್ತದೆ.

ಅಮೆರಿಕದ ಪೂರ್ವತಡಿಯ ಯಾವುದೇ ಊರಿನಿಂದ ನಾರ್ಥ್ ಕೆರೋಲಿನಾದ ವಿಶಿಷ್ಟ ಸ್ಮೋಕೀ‌ ಪರ್ತತಾವಳಿಯ ಪ್ರವಾಸ ಮಾಡಬಯಸಿದರೆ ಇಲ್ಲಿಗೊಮ್ಮೆ ಹೋಗಬಹದು. ಇಲ್ಲಿ ಸೋಮೇಶ್ವರನೂ ಕರೆದು ಹರಸಿ ಕಳಿಸಿಯಾನು!!

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ಕೃಷ್ಣ-ಸುಧಾಮರ ಸ್ನೇಹದ ಗುರುತು ಬೇಟ್ ದ್ವಾರಕಾ

Read Previous

ಕೃಷ್ಣ-ಸುಧಾಮರ ಸ್ನೇಹದ ಗುರುತು ಬೇಟ್ ದ್ವಾರಕಾ

ವಿಹಂಗಮ ಸಂಗಮ

Read Next

ವಿಹಂಗಮ ಸಂಗಮ