Wednesday, January 7, 2026
Wednesday, January 7, 2026

ಈ ಕಾಲುವೆ ಮೇಲೆ ಟ್ರಂಪಣ್ಣನ ಕಣ್ಣು

ಪೆಸಿಫಿಕ್ ಮತ್ತು ಅಟ್ಲಾಂಟಿಕ್ ಸಾಗರದ ನಡುವೆ ಕೇವಲ 80ಕಿಮೀ ಅಗಲದ ನೆಲ ಮಾತ್ರ ಇತ್ತು. 19ನೆಯ ಶತಮಾನದಲ್ಲಿ ಇದೇ ನೆಲವನ್ನು ಅಗೆದು ಕಾಲುವೆ ನಿರ್ಮಾಣದ ಮೂಲಕ ಎರಡು ಸಾಗರಗಳನ್ನು ಜೋಡಿಸುವ ಯೋಚನೆಗಳು ಶುರುವಾದವು. ಆರಂಭಿಕ ಪ್ರಯತ್ನಗಳು ಹೆಚ್ಚು ವಿಫಲವೂ ಆದವು. ಕಾರಣ, ಹಳದಿ ಜ್ವರ ಹಾಗೂ ಮಲೇರಿಯಾಗಳಿಂದ 20000ಕ್ಕೂ ಹೆಚ್ಚು ಕೆಲಸಗಾರರು ಸಾವನ್ನಪ್ಪಿದರು.

  • ರಾಜೇಶ್ ಕಲ್ಲಾಜೆ

ಪನಾಮಾ ಕಾಲುವೆ ಮತ್ತು ಹಗರಣ ಬಿಟ್ಟರೆ, ಭಾರತದಲ್ಲಿ ಪನಾಮಾ ಬಗ್ಗೆ ಸುದ್ದಿ ಸಿಗುವುದು ಇಲ್ಲವೆಂದೇ ಹೇಳಬಹುದು. ಇತ್ತೀಚಿಗೆ ಡೊನಾಲ್ಡ್ ಟ್ರಂಪ್ ಪನಾಮಾ ಕಾಲುವೆಯನ್ನು ಅಮೆರಿಕದ ವಶಕ್ಕೆ ಪುನಃ ತೆಗೆದುಕೊಳ್ಳಬೇಕು ಎಂದಿದ್ದರು. ಆಗ ಈ ರಾಷ್ಟ್ರ ಇನ್ನೊಮ್ಮೆ ಸುದ್ದಿಯಾಯಿತು. ITTOನ ಒಂದು ಸಮ್ಮೇಳನ ಪನಾಮಾದ ರಾಜಧಾನಿ 'ಪನಾಮಾ ಸಿಟಿ'ಯಲ್ಲಿ ಕಳೆದ ಅಕ್ಟೋಬರ್ ಕೊನೆಯ ವಾರದಲ್ಲಿ ಆಯೋಜನೆಯಾಗಿತ್ತು. ಈ ಸಭೆಯಲ್ಲಿ ಭಾರತದ ನಿಯೋಗದ ಸದಸ್ಯನಾಗಿ ಭಾಗವಹಿಸುವ ಜವಾಬ್ದಾರಿ ದೊರೆತಿತ್ತು. ಆಗ ನನಗೆ ಮಧ್ಯ ಅಮೆರಿಕಗೆ ಭೇಟಿ ನೀಡುವ ಅವಕಾಶವೂ ಸಿಕ್ಕಿತ್ತು. ಉತ್ತರ ಅಮೆರಿಕ, ಯೂರೋಪ್‌ ಸೇರಿ ಪೂರ್ವ ಏಷ್ಯಾ ದೇಶಗಳಿಗೆ ಕೆಲಸಕ್ಕೋ ಅಥವಾ ಪ್ರವಾಸಕ್ಕೋ ಭಾರತೀಯರು ಪ್ರಯಾಣ ಮಾಡುತ್ತಿರುತ್ತಾರೆ. ಆದರೆ, ಮಧ್ಯ ಏಷ್ಯಾ - ಗ್ವಾಟೆಮಾಲಾ, ಬೆಲಿಝೆ, ಹೊಂಡುರಾಸ್, ಎಲ್-ಸಾಲ್ವಡೊರ್, ನಿಕರಾಗುವಾ, ಕೋಸ್ಟಾ ರಿಕಾ ಮತ್ತು ಪನಾಮಾ - ಈ ಏಳು ದೇಶಗಳಿಗೆ ಹೋಗುವ ಭಾರತೀಯರು ವಿರಳ. ಪ್ರಾಕೃತಿಕ ಸೌಂದರ್ಯ, ಪಕ್ಷಿ ವೀಕ್ಷಣೆ ಮತ್ತು ಫೊಟೋಗ್ರಫಿಗೆ ಆಸಕ್ತರು ಕೋಸ್ಟಾ ರಿಕಾಗೆ ಭೇಟಿನೀಡುತ್ತಾರೆ. ಇನ್ನೊಮ್ಮೆ ಅತ್ತಕಡೆ ಹೋಗುವುದು ಕಷ್ಟವೆಂದುಕೊಂಡೇ ಸಮಾವೇಶ ಮುಗಿದ ನಂತರ ನಾಲ್ಕು ದಿನ ರಜೆ ಹಾಕಿ ನಾನು ಕೋಸ್ಟಾ ರಿಕಾ ಸುತ್ತಿ ಬರೋಣ ಎಂದು ನಿರ್ಧರಿಸಿದೆ. ಅದಕ್ಕಾಗಿ ಪ್ರತ್ಯೇಕ ವ್ಯವಸ್ಥೆ ಮಾಡಿಕೊಂಡೆ.

ಪನಾಮಾ ಸಿಟಿಯಲ್ಲಿ 'ನಮಸ್ತೇ' ಹೊಟೇಲ್‌

ಪನಾಮಾ ಸಿಟಿಯಲ್ಲಿ ನಮ್ಮ ವಿಮಾನ ಇಳಿದಾಗ ಸಂಜೆ 5 ಗಂಟೆ. ಭಾರತೀಯ ದೂತಾವಾಸದಿಂದ ನಮ್ಮನ್ನು ಕರೆದೊಯ್ಯಲು ಬಂದಿದ್ದು ಗುಜರಾತಿ ಮಹಿಳೆ! ಪನಾಮಾ ದೇಶದಲ್ಲಿ ಗುಜರಾತ್, ಪಂಜಾಬ್ ಮತ್ತು ಸಿಂಧ್ (ಸಿಂಧಿಗಳು) ಪ್ರದೇಶಗಳ ಸುಮಾರು 15,000 ಜನರಿದ್ದಾರೆ. ಹೆಚ್ಚಿನವರು ವ್ಯಾಪಾರ, ವಾಣಿಜ್ಯ, ಲೇವಾದೇವಿ, ಬ್ಯಾಂಕಿಂಗ್, ಐ ಟಿ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿದ್ದಾರೆ.

ಮೊದಲ ದಿನ ಸಂಜೆ ನಾನು ಉಳಿದುಕೊಂಡಿದ್ದ ಹೊಟೇಲ್‌ನ ಸುತ್ತ ಮುತ್ತ ಸ್ವಲ್ಪ ತಿರುಗಾಡಿದೆ. ದೇಹದ ಜೈವಿಕ ಗಡಿಯಾರ ಏರುಪೇರಾದ ಕಾರಣ ಸುಸ್ತಾಗಿತ್ತು. ಹಾಗಾಗಿ ಸ್ಥಳೀಯ ಆಹಾರ ಹುಡುಕುವ ಸಾಹಸ ಮಾಡದೇ, ಪಕ್ಕದಲ್ಲಿದ್ದ 'ನಮಸ್ತೇ' ಎಂಬ ಭಾರತೀಯ ರೆಸ್ಟೋರೆಂಟ್‌ನಲ್ಲಿ ಊಟಮಾಡಿ ಮಲಗಿದೆ.

Untitled design (30)

ರೊಬೊಟಿಕ್ಸ್ ಸ್ಪರ್ಧೆಯಲ್ಲಿ ಭಾರತೀಯ ವಿದ್ಯಾರ್ಥಿಗಳ ತಂಡ

ಸೋಮವಾರದಿಂದ ಗುರುವಾರದ ತನಕ ಬೆಳಗ್ಗೆ ಎಂಟರಿಂದ ಸಂಜೆ ಆರರ ತನಕ ಸಭೆ ಚೆನ್ನಾಗಿ ನಡೆಯಿತು. ವಿವಿಧ ದೇಶಗಳ ಪ್ರತಿನಿಧಿಗಳ ಜತೆ tropical timber ಬಗ್ಗೆ ಚರ್ಚೆ, ಸಂವಾದ ಉತ್ತಮವಾಗಿತ್ತು. ಸಂಪರ್ಕ ಜತೆಗೆ ದೇಶಹಿತದ ನಿಟ್ಟಿನಲ್ಲಿ ಇನ್ನೇನು ಮಾಡಬಹುದು ಎಂಬುದರ ಬಗ್ಗೆ ಕಾರ್ಯಯೋಜನೆ ರೂಪಿಸಲೂ ಇದೊಂದು ಉತ್ತಮ ಅವಕಾಶ.

ಪನಾಮಾ ಸಿಟಿಯಲ್ಲಿ ನಮ್ಮ ಎರಡನೇ ದಿನ, ಭಾರತೀಯ ರಾಯಭಾರಿ ಕಚೇರಿಯಿಂದ ಮಧ್ಯಾಹ್ನದ ಊಟಕ್ಕೆ ಆಹ್ವಾನವಿತ್ತು. ಪನಾಮಾ, ಕೋಸ್ಟಾ ರಿಕಾ ಮತ್ತು ನಿಕರಾಗುವಾ - ಈ ಮೂರು ದೇಶಗಳಿಗೆ ಭಾರತೀಯ ವಿದೇಶೀ ಸೇವೆಯ ಹಿರಿಯ ಅಧಿಕಾರಿ ಡಾ. ಸುಮಿತ್ ಸೇಥ್ ಈಗಿನ ರಾಯಭಾರಿ. ಭಾರತೀಯ ಅಡುಗೆಯನ್ನು ಆನಂದಿಸುತ್ತಾ ಸುಮಾರು ಒಂದು ಗಂಟೆ ಅವರ ಮತ್ತು ದೂತಾವಾಸದ ಇತರ ಅಧಿಕಾರಿಗಳ ಜತೆ ಮಧ್ಯ ಅಮೇರಿಕ ಹಾಗೂ ಇತರ ವಿಷಯಗಳ ಬಗ್ಗೆ ಚರ್ಚಿಸಿದೆವು. ಅದೇ ಸಮಯದಲ್ಲಿ ಪನಾಮಾ ಸಿಟಿಯಲ್ಲಿ ನಡೆಯುತ್ತಿದ್ದ ವಿದ್ಯಾರ್ಥಿಗಳ ವಿಶ್ವ ರೊಬೊಟಿಕ್ಸ್ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಬಂದ ಭಾರತದ ತಂಡದ ಜತೆ ಡಾ. ಸೇಥ್ ಅವರ ಭೇಟಿ ಇತ್ತು. ನಾವೂ ಜತೆಗಿದ್ದುದರಿಂದ ನಮಗೂ ಉತ್ಸಾಹೀ ಮಕ್ಕಳನ್ನು ಭೇಟಿಯಾಗುವ ಅವಕಾಶ ಸಿಕ್ಕಿತು. ಅವರಲ್ಲಿ ಐದು ಹುಡುಗರು ಮಲ್ಲೇಶ್ವರಂನ ಸರಕಾರಿ ಪ್ರೌಢ ಶಾಲೆಯ ವಿದ್ಯಾರ್ಥಿಗಳು! ಪ್ರಪಂಚ ಎಷ್ಟು ಚಿಕ್ಕದು ನೋಡಿ! ಅವರ ಜತೆ ಅವರಷ್ಟೇ ಉತ್ಸಾಹಿ ಸಾಯೀಶ್ ಗಾಂಧೀ ಮತ್ತು ಅಖಿಲ್ ಮೆನನ್ ಎಂಬ ಅಧ್ಯಾಪಕರು/ಮೆಂಟರ್‌ಗಳು ಇದ್ದರು. ಅಟಲ್ ಟಿಂಕರಿಂಗ್ ಲ್ಯಾಬ್ ಎಂಬ ಸರಕಾರಿ ಯೋಜನೆಯ ಫಲ ಈ ಮೇಧಾವೀ ಮಕ್ಕಳ ಪನಾಮಾ ಪಯಣವಾಗಿತ್ತು.

ಪನಾಮಾ ಸಿಟಿ ತಿರುಗಾಟ

ಪನಾಮಾ ಪೂರ್ವಕ್ಕೆ ಅಟ್ಲಾಂಟಿಕ್ ಮತ್ತು ಪಶ್ಚಿಮಕ್ಕೆ ಪೆಸಿಫಿಕ್ ಮಹಾಸಾಗರಗಳಿವೆ. ಇದರಿಂದಲೇ ಇಲ್ಲಿ ಸಮುದ್ರ/ಕರಾವಳಿ ಪ್ರವಾಸಕ್ಕೆ ಹೆಚ್ಚು ಒತ್ತು ನೀಡುತ್ತಾರೆ. ಕೆಲವು ಭಾಗಗಳಲ್ಲಿ ಅಡ್ವೆಂಚರ್ ಟೂರಿಸಂ ಜನಪ್ರಿಯವಾಗಿದೆ. ನನಗೆ ಇವೆರಡರಲ್ಲೂ ಆಸಕ್ತಿ ಇಲ್ಲ ಮತ್ತು ಸಮಯದ ಅಭಾವದಿಂದ ರಾಜಧಾನಿಯ ಪ್ರವಾಸ ಅಲ್ಲಿಗೇ ಮುಗಿಸಿ, ಅರ್ಧ ದಿನದ 'ಪನಾಮಾ ಸಿಟಿ ತಿರುಗಾಟಕ್ಕೆ ಹೊರಟೆ. 1914ರಲ್ಲಿ ಕಟ್ಟಿದ್ದ ಪನಾಮಾ ಕಾಲುವೆ ಒಂದು ಇಂಜಿನಿಯರಿಂಗ್ ಅದ್ಭುತ. ಸ್ಪೇನ್ ದೇಶದ ಅನ್ವೇಷಕ 1513ರಲ್ಲಿ ಪನಾಮಾ ಒಂದು ಸಣ್ಣ ಭೂಸಂಧಿ (isthmus) ಎಂದು ಪತ್ತೆಹಚ್ಚಿದ. ಸ್ಪೇನ್‌ನ ವಸಾಹತುಶಾಹಿಗಳಿಗೆ, ದಕ್ಷಿಣ ಅಮೆರಿಕದಿಂದ ಕದ್ದ ಮಾಲನ್ನು (ಮುಖ್ಯವಾಗಿ ಪೆರು ದೇಶದ ಚಿನ್ನ, ಬೆಳ್ಳಿ) ತಮ್ಮ ದೇಶಕ್ಕೆ ಸಾಗಿಸಲು ಇದು ವರಧಾನವಾಗಿತ್ತು. ಪೆಸಿಫಿಕ್ ಮತ್ತು ಅಟ್ಲಾಂಟಿಕ್ ಸಾಗರದ ನಡುವೆ ಕೇವಲ 80ಕಿಮೀ ಅಗಲದ ನೆಲ ಮಾತ್ರ ಇತ್ತು. 19ನೆಯ ಶತಮಾನದಲ್ಲಿ ಇದೇ ನೆಲವನ್ನು ಅಗೆದು ಕಾಲುವೆ ನಿರ್ಮಾಣದ ಮೂಲಕ ಎರಡು ಸಾಗರಗಳನ್ನು ಜೋಡಿಸುವ ಯೋಚನೆಗಳು ಶುರುವಾದವು. ಆರಂಭಿಕ ಪ್ರಯತ್ನಗಳು ಹೆಚ್ಚು ವಿಫಲವೂ ಆದವು. ಕಾರಣ, ಹಳದಿ ಜ್ವರ ಹಾಗೂ ಮಲೇರಿಯಾಗಳಿಂದ 20000ಕ್ಕೂ ಹೆಚ್ಚು ಕೆಲಸಗಾರರು ಸಾವನ್ನಪ್ಪಿದರು.

20ನೆಯ ಶತಮಾನದ ಪ್ರಾರಂಭಕ್ಕೆ, ಪನಾಮಾಕ್ಕೆ ಕೊಲಂಬಿಯಾ ದೇಶದಿಂದ ಸ್ವಾತಂತ್ರ್ಯ ಕೊಡಿಸಲು ಒಡಂಬಡಿಕೆ ಮಾಡಿಕೊಂಡು, ಪನಾಮಾ ಕಾಲುವೆ ನಿರ್ಮಾಣ ಕೆಲಸವನ್ನು ಅಮೆರಿಕ ಕೈಗೆತ್ತಿಕೊಂಡಿತು. ಅಂದಿಗೆ ಹಳದಿ ಜ್ವರ ಹಾಗೂ ಮಲೇರಿಯಾಗಳಿಗೆ ಸೊಳ್ಳೆ ಕಡಿತ ಕಾರಣ ಎಂಬ ವಿಷಯ ವಿಜ್ಞಾನಿಗಳು ಪತ್ತೆ ಹಚ್ಚಿದ್ದರಿಂದ ಸೊಳ್ಳೆಗಳ ಶಮನಕ್ಕೆ ಕ್ರಮಗಳನ್ನು ಕೈಗೊಂಡು ಕಾಲುವೆ ನಿರ್ಮಾಣದಲ್ಲಿ ಸಫಲರಾದರು.

ಪನಾಮಾ ಕಾಲುವೆ ಭೇಟಿಗೂ ಮೊದಲು ಮಿರಾಫ್ಲೋಸ್ ವಿಸಿಟರ್ ಸೆಂಟರ್‌ನಲ್ಲಿ ವಿಡಿಯೋ ಶೋ ಮೂಲಕ ಕಾಲುವೆ ಬಗ್ಗೆ ಸಂಪೂರ್ಣ ಮಾಹಿತಿ ಕೊಡಲಾಗುತ್ತದೆ. ಆನಂತರ ಕಾಲುವೆಯ ಕಡೆಗೆ ಹೋಗಿ ಹಡಗುಗಳು ದಾಟುವುದನ್ನು ನೋಡಬಹುದು. 1914ರಿಂದ 1999ರ ತನಕ ಅಮೆರಿಕದ ಸುಪರ್ದಿಯಲ್ಲಿದ್ದ ಕಾಲುವೆ, ಈಗ ಪನಾಮಾದ ಆಡಳಿತದಲ್ಲಿದೆ. ಈ ದೇಶದ ಅರ್ಥವ್ಯವಸ್ಥೆಗೆ ಬಹುದೊಡ್ಡ ಕೊಡುಗೆ ನೀಡುತ್ತಿದೆ.

ಸ್ಪೇನಿಗರು ಕಟ್ಟಿದ್ದ ನಗರ 'ಕಾಸ್ಕೊ ವಿಯೆಯೋ' ಪನಾಮಾ ಸಿಟಿಯ ಇನ್ನೊಂದು ಬಹುಮುಖ್ಯ ಪ್ರೇಕ್ಷಣೀಯ ಸ್ಥಳ. ಇದು ಯುನೆಸ್ಕೋ ವಿಶ್ವ ಪರಂಪರೆಯ ತಾಣವಾಗಿ ಗುರುತಿಸಿಕೊಂಡಿದೆ. ಕೋಟೆಯ ರೀತಿಯಲ್ಲಿರುವ ಈ ಸಮುದ್ರ ದಂಡೆಯ ನಗರವನ್ನು ಬಹಳ ಸುಂದರವಾಗಿ ನಿರ್ವಹಣೆ ಮಾಡಲಾಗುತ್ತಿದೆ.

ಕುರಿಕಾಂಚಾದಲ್ಲಿ ಕಂಡಿದ್ದು ಕಡಿಮೆ ಕಳೆದುಕೊಂಡಿದ್ದು ಹೆಚ್ಚು

ಪನಾಮಾ ಸಿಟಿಯಿಂದ ಕೋಸ್ಟಾ ರಿಕಾ ರಾಜಧಾನಿಯಾದ ಸ್ಯಾನ್ ಹೋಸೆಗೆ ಕೇವಲ ಒಂದು ಗಂಟೆಯ ವಿಮಾನ ಪಯಣ. ಪ್ರಕೃತಿ ಪ್ರವಾಸ, birdwatching ನನ್ನ ಉದ್ದೇಶವಾದ್ದರಿಂದ, ಇದಕ್ಕೆಂದೇ ಪ್ರಸಿದ್ಧವಾದ ಮೊಂಟೆವೆರ್ಡೆಗೆ ವಿಮಾನ ನಿಲ್ದಾಣದಿಂದ ಬಸ್ ಹತ್ತಿ ಹೊರಟೆ. ಸುಮಾರು ಮೂರೂವರೆ ಗಂಟೆಯ ದಾರಿ. ರಾಜಧಾನಿಯನ್ನು ದಾಟಿ, ಸಣ್ಣ ಪಟ್ಟಣಗಳು, ಹಳ್ಳಿಗಳನ್ನು ಬಳಸುತ್ತಾ ಸಾಗುವ ಬೆಟ್ಟದ ಹಾದಿ. ಇಕ್ಕೆಲಗಳಲ್ಲಿ ಕಣ್ಣು ಹಾಯಿಸಿದಷ್ಟು ದೂರಕ್ಕೂ ಮಳೆಕಾಡು.

ಮೊಂಟೆವೆರ್ಡೆಯ ಹೊಟೇಲ್ ಒಂದರಲ್ಲಿ ಉಳಿದುಕೊಂಡು, ಮರುದಿನ ಬೆಳಗ್ಗೆ ಪಕ್ಕದ 'ಕುರಿಕಾಂಚಾ' ರಕ್ಷಿತ ಅರಣ್ಯದಲ್ಲಿ ಗೈಡ್ ಜತೆಗೆ birdwatchingಗಾಗಿ ಹೋದೆ. ನಾನು ನಿರೀಕ್ಷಿದಷ್ಟು ಪಕ್ಷಿಗಳೇನೂ ಕಾಣಸಿಗಲಿಲ್ಲ. ತುಂಬಾ ಸುಂದರವಾದ ಟೂಕನ್ (toucan) ಮತ್ತು bee humming ಹಕ್ಕಿಗಳನ್ನು ನನ್ನ ಹೊಟೇಲ್‌ನ ಪಕ್ಕದಲ್ಲೇ ನೋಡಿದ್ದೆ. ಕಾಡಿನೊಳಗೆ ಸುಮಾರು ಎರಡೂವರೆ ಗಂಟೆಯ ನಡಿಗೆಯಲ್ಲಿ ನಮ್ಮ ಗೈಡ್ 20 -25 ಪಕ್ಷಿಗಳನ್ನು ತೋರಿಸಿದ. ಇದಕ್ಕಿಂತ ಹೆಚ್ಚು ಪಕ್ಷಿಗಳನ್ನು ದಾಂಡೇಲಿಯ ಫಾರೆಸ್ಟ್ ಗೆಸ್ಟ್ ಹೌಸ್‌ನ ಮುಂದೆ ಕುಳಿತೇ ನೋಡಬಹುದು! ಆದರೆ, ಪ್ರಕೃತಿ ಪ್ರವಾಸದ ಬಗ್ಗೆ ಕೋಸ್ಟಾ ರಿಕನ್ನರ ಮಾರ್ಕೆಟಿಂಗ್ ಕ್ಷಮತೆಯನ್ನು ಮೆಚ್ಚಲೇಬೇಕು. ಕುರಿಕಾಂಚಾ ಅರಣ್ಯ ಪ್ರವೇಶಕ್ಕೆ 26 ಡಾಲರ್‌, ಗೈಡ್‌ಗೆ 60 ಡಾಲರ್‌ ಒಟ್ಟು ಹೆಚ್ಚು ಕಮ್ಮಿ 7,600 ರುಪಾಯಿ!

ಕೋಸ್ಟಾ ರಿಕಾ ಮತ್ತು ಪನಾಮಾ ಎರಡೂ ದೇಶಗಳು ಕಾಫಿ ಮತ್ತು ಚಾಕಲೇಟ್‌ಗೆ ಪ್ರಸಿದ್ಧವಾಗಿವೆ. ಇದರಿಂದಲೇ ಮೊಂಟೆವೆರ್ಡೆಯಲ್ಲಿ ಕಾಫಿ, ಕಬ್ಬು ಮತ್ತು ಚಾಕಲೇಟ್ ವಾಕಿಂಗ್ ಟೂರ್ ಮಾಡಿದೆ. ತುಂಬಾ ಪ್ರೊಫೆಷನಲ್ ಆಗಿತ್ತು. ಕಬ್ಬಿನ ಹಾಲು ಗಾಣದಿಂದ ತೆಗೆದು ಸಣ್ಣ ಪಿಂಗಾಣಿ ಕಪ್‌ನಲ್ಲಿ ಹಾಕಿ ಕುಡಿಯಲು ಕೊಡುವುದನ್ನೂ ಎಷ್ಟು ಆಕರ್ಷಕವಾಗಿ ಮಾಡಬಹುದೆಂದು ಅಲ್ಲಿ ಕಂಡುಕೊಂಡೆ!

ಬರಬರುತ್ತ ಇಲ್ಲಿ ಮೂಲನಿವಾಸಿಗಳೇ ಕಡಿಮೆಯಾಗಿದ್ದಾರೆ

ಮರುದಿನ ಬೆಳಗ್ಗೆ ಮೊಂಟೆವೆರ್ಡೆಯಿಂದ ಹೊರಟು ಮಧ್ಯಾಹ್ನ ಸ್ಯಾನ್ ಹೋಸೆ ತಲುಪಿದೆ. ಸಂಜೆ ಒಬ್ಬ ಗೈಡ್ ಜತೆ ಜಿಟಿ ಜಿಟಿ ಮಳೆಯಲ್ಲಿ ನಗರದ ಪ್ರೇಕ್ಷಣೀಯ ಸ್ಥಳಗಳ ವಾಕಿಂಗ್ ಟೂರ್ ಮಾಡಿದೆ. 16ನೆಯ ಶತಮಾನದಲ್ಲಿ ಸ್ಪೇನಿಗರ ಆಡಳಿತಕ್ಕೆ ಒಳಪಟ್ಟು 1821ರಲ್ಲಿ ಸ್ವಾತಂತ್ರ್ಯ ಪಡೆದ ಈ ದೇಶದಲ್ಲಿ ತುಂಬಾ ಹಳೆಯ ಇತಿಹಾಸ, ಪುರಾತನ ಕಟ್ಟಡಗಳು, ಅವಶೇಷ ಇತ್ಯಾದಿಗಳು ಬಹಳ ಕಡಿಮೆ. ಸ್ಪೇನಿಗರು ಬರುವ ಮೊದಲು ಮೂಲನಿವಾಸಿಗಳೇ ಇದ್ದ ಪನಾಮಾ ಮತ್ತು ಕೋಸ್ಟಾ ರಿಕಾಗಳಲ್ಲಿ ಕ್ರಮೇಣ ಮಿಶ್ರ ಮೂಲದ ಜನಸಂಖ್ಯೆ ಹೆಚ್ಚಾಗಿ, ಮೂಲನಿವಾಸಿಗಳ ಸಂಖ್ಯೆ ಇಳಿಮುಖವಾಯಿತು. ಈಗ ಪನಾಮಾದಲ್ಲಿ ಶುದ್ಧ ಮೂಲನಿವಾಸಿಗಳು ಒಟ್ಟು ಜನಸಂಖ್ಯೆಯ ಶೇಕಡಾ 12 ಮಾತ್ರ. ಈ ಪ್ರಮಾಣ ಕೋಸ್ಟಾ ರಿಕಾದಲ್ಲಿ ಕೇವಲ 3 ಶೇಕಡಾ!

Untitled design (31)

ಟ್ರಾಫಿಕ್, ಹಾರ್ನ್ ಭರಾಟೆಗಳಿಲ್ಲ

ಈ ಎರಡು ಪುಟ್ಟ ರಾಷ್ಟ್ರಗಳ ಪ್ರವಾಸದಲ್ಲಿ ನನ್ನ ಅರಿವಿಗೆ ಬಂದ ಕೆಲವು ಮುಖ್ಯ ವಿಷಯಗಳು ಹೀಗಿವೆ.

ಯುರೋಪ್ ಮತ್ತು ಅಮೆರಿಕಕ್ಕೆ ಹೋಲಿಸಿದರೆ ಸ್ವಲ್ಪ ಹಿಂದುಳಿದ ಪ್ರದೇಶ ಎಂದು ಗುರುತಿಸಲ್ಪಡುವ ಮಧ್ಯ ಅಮೆರಿಕದ ಈ ರಾಷ್ಟ್ರಗಳು ಬಹಳ ವಿಷಯಗಳಲ್ಲಿ ನಮಗಿಂತ ಮುಂದಿವೆ. ಕೋಸ್ಟಾ ರಿಕಾದ HDI index ranking 61, ಪನಾಮ 57 ಮತ್ತು ಭಾರತ 130. ಎರಡೂ ದೇಶಗಳ ರಾಜಧಾನಿ, ಇತರ ನಗರಗಳು, ಹಳ್ಳಿ-ಪಟ್ಟಣಗಳು, ಎಲ್ಲವೂ ಸುಂದರ, ಸ್ವಚ್ಛ. ಟ್ರಾಫಿಕ್, ಹಾರ್ನ್ ಭರಾಟೆಗಳಿಲ್ಲ. ಲೇನ್ ಡ್ರೈವಿಂಗ್ ಎಲ್ಲರೂ ಕಡ್ಡಾಯವಾಗಿ ಪಾಲಿಸುತ್ತಾರೆ. ಓವರ್‌ಟೇಕ್‌ ಮಾಡುವ ವಾಹನಗಳು ಕಡಿಮೆ. ಯಾವ ರಸ್ತೆಗಳಲ್ಲೂ ಅಗೆದು ರಿಪೇರಿ ಕೆಲಸ ನಡೆಯುತ್ತಿಲ್ಲ. ಧೂಳು ಕುಡಿಯಬೇಕಿಲ್ಲ. ಫೂಟ್‌ಪಾತ್‌ಗಳು ಅಚ್ಚುಕಟ್ಟಾಗಿವೆ. ವಾರ್ಷಿಕ ಮಳೆಯ ಪ್ರಮಾಣ 3000 ಮಿಮೀ. ವೈಟ್ ಟಾಪಿಂಗ್ ಮಾಡದಿದ್ದರೂ ರಸ್ತೆಯಲ್ಲಿ ಗುಂಡಿಗಳಿಲ್ಲ. ಕೋಸ್ಟಾ ರಿಕಾದ ಬೆಟ್ಟದ ಮೇಲಿನ ಹಳ್ಳಿಗಳ ರಸ್ತೆಗಳಲ್ಲೂ ನನಗೆ ಒಂದು ಗುಂಡಿಯೂ ಕಾಣಲಿಲ್ಲ.

ಸ್ವಚ್ಛತೆಯ ಬಗ್ಗೆ ಹೇಳುವುದಾದರೆ

ಪನಾಮಾ ಸಿಟಿಯ ಕೆಲವು ಕಡೆ ಕಸದ ಚೀಲಗಳನ್ನು ರಸ್ತೆ ಪಕ್ಕದಲ್ಲೇ ಎಸೆದಿದ್ದರು. ಇದನ್ನು ಬಿಟ್ಟರೆ ಬೇರೆಲ್ಲೂ ಕಸದ ರಾಶಿ ಇಲ್ಲ. ಹಳ್ಳಿ ಕಡೆಯೂ ಅಪರೂಪಕ್ಕೆ ಮಾರ್ಗದ ಬದಿ ನೀರಿನ ಖಾಲಿ ಬಾಟಲ್, ತಿಂಡಿ-ತಿನಿಸಿನ ಪೊಟ್ಟಣ ಕಣ್ಣಿಗೆ ಬಿದ್ದವು. ಹತ್ತು ದಿನಗಳಲ್ಲಿ ಈ ಎರಡೂ ದೇಶಗಳಲ್ಲಿ ನಾನು ನೋಡಿದ ಒಟ್ಟು ಕಸದ ಪ್ರಮಾಣ, ಪ್ರತೀ ದಿನ ಬೆಳಗ್ಗೆ ಮಲ್ಲೇಶ್ವರದ ಮಂತ್ರಿ ಮಾಲ್‌ನಿಂದ 18ನೆಯ ಕ್ರಾಸ್ ಬಸ್‌ಸ್ಟಾಂಡ್ ತನಕ ರಸ್ತೆಯ ಇಕ್ಕೆಲಗಳಲ್ಲಿ ಕಾಣುವ ಕಸದ ಪ್ರಮಾಣಕ್ಕಿಂತ ಕಡಿಮೆ.

ಸಣ್ಣ ದೇಶಗಳು, ಜನಸಂಖ್ಯೆ ಕಡಿಮೆ. ಆದರೆ ಇವೇ ಆದರ್ಶಗಳನ್ನು, ಆಡಳಿತ ವ್ಯವಸ್ಥೆಗಳನ್ನು ನಮ್ಮಲ್ಲಿ ಕಾರ್ಯರೂಪಕ್ಕೆ ತರಲು ಸಾಧ್ಯವಿಲ್ಲವೇ? ಮನಸಿದ್ದರೆ, ಎಲ್ಲದಕ್ಕೂ ಮಾರ್ಗವಿದೆ. ಮನಸು ಮಾಡಬೇಕಷ್ಟೆ.

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ಇದು 1753ರ ಮನೆ, ಗೊತ್ತಿರಲಿ!

Read Previous

ಇದು 1753ರ ಮನೆ, ಗೊತ್ತಿರಲಿ!

ಅಚ್ಚರಿ ಮೂಡಿಸುವ ʻಬ್ಲೂ ಡ್ರ್ಯಾಗನ್‌ ನದಿʼ...

Read Next

ಅಚ್ಚರಿ ಮೂಡಿಸುವ ʻಬ್ಲೂ ಡ್ರ್ಯಾಗನ್‌ ನದಿʼ...