ಲಾಕ್ ನೆಸ್‌ನಲ್ಲಿ ಜನಪದ ದೈತ್ಯನಿದ್ದಾನೆ…
ಮೊದಲೇ ದೈತ್ಯನಲ್ಲವೇ, ಕುಬ್ಜ ಮಾನವರಿಗೆ ಆಕರ್ಷಣೆಯ ಕೇಂದ್ರವಾದ. ಕಾಲುದಾರಿಯಾಗಿದ್ದ ಸರೋವರದ ಪಕ್ಕಕ್ಕೆ ಮೋಟಾರು ರಸ್ತೆ ಬಂತು. ಹೆಚ್ಚಿನ ಜನಸಂಚಾರದ ಕಾರಣ ಪ್ರವಾಸೋದ್ಯಮ ದಿನೇದಿನ ಬೆಳೆಯತೊಡಗಿತು. ಬ್ರಿಟನ್ ಮತ್ತು ವೇಲ್ಸ್‌ನಲ್ಲಿರುವ ಇತರ ಸರೋವರಗಳಿಗಿಂತ ಇದು ಹೆಚ್ಚಿನ ಪ್ರವಾಸಿಗರನ್ನು ಆಕರ್ಷಿಸಿತು.
- ಎಸ್. ಶಿವಲಿಂಗಯ್ಯ
ಜಾನಪದವೆಂಬುದು ಜನರಿಂದ ಜನರಿಗೆ ತಲುಪುವ ಮಾಹಿತಿ. ಈ ಮಾಹಿತಿ ಒಬ್ಬರಿಂದ ಒಬ್ಬರಿಗೆ ತಲುಪುವ ಹಾದಿಯಲ್ಲಿ ವಿರೂಪ ಗೊಳ್ಳುವುದು ಸಹಜ. ಅದರ ನೈಜತೆಯನ್ನು ಮರುಸ್ಥಾಪಿಸುವ ಪ್ರಯತ್ನವೇ ಸಂಶೋಧನೆ. ಆದರೆ, ಕೆಲವು ವಿಷಯಗಳ ಬಗ್ಗೆ ಸಂಶೋಧಿತ ಸತ್ಯ ಹೊರಬಿದ್ದ ಮೇಲೂ ಪದೇಪದೇ ಸಂಶೋಧನೆಗೆ ಒಳಗಾಗುವ, ಹಳೆಯ ತೀರ್ಮಾನಗಳನ್ನು ಬದಿಗೆ ಸರಿಸಿ, ಹೊಸಹೊಸ ಸುಳ್ಳುಗಳ ಸ್ಥಾಪನೆಗೆ ಮಾಡುವ ಪ್ರಯತ್ನಕ್ಕೆ ಅತ್ಯುತ್ತಮ ಉದಾಹರಣೆ ಲಾಕ್ ನೆಸ್ ದೈತ್ಯನ ಕತೆ.
ಲಾಕ್ ನೆಸ್ ಎಂಬುದು ಸ್ಕಾಟ್ಲೆಂಡಿನ ಉತ್ತರದಲ್ಲಿರುವ ಸಿಹಿನೀರಿನ ಸರೋವರ. ಸುಮಾರು 23ಮೈಲಿ ಉದ್ದದ, 22ಚ. ಮೈ. ವಿಸ್ತೀರ್ಣದ ಸ್ಪಟಿಕ ಸದೃಶ ಜಲರಾಶಿ. ವಿಸ್ತೀರ್ಣದಲ್ಲಿ ಬ್ರಿಟನ್‌ನ ಎರಡನೆಯ ದೊಡ್ಡ ಸರೋವರ. 750 ಅಡಿ ಆಳದ ಬೆಟ್ಟದ ಇಳಿಜಾರಿನ ಇದರಲ್ಲಿ ಬ್ರಿಟನ್ ಮತ್ತು ವೇಲ್ಸ್‌ನಲ್ಲಿರುವ ಎಲ್ಲ ಸರೋವರಗಳ ಮೊತ್ತಕ್ಕಿಂತ ಹೆಚ್ಚು ನೀರಿನ ಸಂಗ್ರಹವಿದೆ. ಹಸಿರು ಹೊದ್ದ ಬೆಟ್ಟ-ಗುಡ್ಡಗಳಿಂದ ಬಹುತೇಕ ತಣ್ಣನೆಯ ನೀರು, ದೋಣಿ ವಿಹಾರಕ್ಕೆ ಹೇಳಿಮಾಡಿಸಿದ ತಾಣ.

ನಮ್ಮ ಗ್ಲಾಸ್ಗೊ ಭೇಟಿಯ ಸಮಯದಲ್ಲಿ, ಸಂಸಾರ ಸಮೇತ ಲಾಕ್ ಲಮಂಡ್ ಸರೋವರದ ಸೌಂದರ್ಯ ವೀಕ್ಷಿಸಿದ್ದೆವು. ಆಗ ಇನ್ನಷ್ಚು ದೂರ ಹೋಗಲಾರದೆ, ಲಾಕ್ ನೆಸ್ ನೋಡದೆ ಹಿಂದಿರುಗಿದ್ದೆವು. ಅದರಲ್ಲಿ ಇರಬಹುದಾದ ದೈತ್ಯನ ದರ್ಶನದಿಂದ ವಂಚಿತರಾಗಲು ಮನಸಾಗದೆ ಒಂದೆರಡು ವಾರ ಕಾದೆವು. ಕೊನೆಗೂ ಆಸಕ್ತ ಗುಂಪಿನೊಂದಿಗೆ ಮತ್ತೆ ಪ್ರವಾಸ ಹೊರೆಟೆವು. ಚಿಕ್ಕಂದಿನಲ್ಲಿ ಸ್ವಲ್ಪ ಓದಿಕೊಂಡಿದ್ದರೂ, ಲಾಕ್ ನೆಸ್ ಸರೋವರ ಮತ್ತು ಅಲ್ಲಿ ಇರಬಹುದಾದ ದೈತ್ಯನ ಬಗ್ಗೆ ಇನ್ನೂ ಒಂದಷ್ಟು ಹೆಚ್ಚಿನ ಮಾಹಿತಿ ಪಡೆದೆವು. ಪ್ರಯಾಣದ ಅವಧಿಯಲ್ಲಿ ಸಹಪ್ರಯಾಣಿಕರೊಂದಿಗೆ ವಿಷಯ ವಿನಿಮಯ/ವಿಮರ್ಶೆಯೂ ಸಾಗಿತ್ತು. ದೈತ್ಯನನ್ನು ನೋಡಿದ ಅದೃಷ್ಟವಂತರಲ್ಲಿ ನಾವೂ ಒಬ್ಬರಾಗಬಹುದೆಂಬ ನಿರೀಕ್ಷೆಯಲ್ಲಿದ್ದೆವು.
ಉಪಾಹಾರದ ದೋಣಿಯ ವ್ಯವಸ್ಥೆಯಿದ್ದ ಕಡೆ ಇಳಿದು, ಸುತ್ತಲಿನ ಪರಿಸರ ವೀಕ್ಷಿಸಿದಾಗ ಮನಸು ಹಿಗ್ಗಿತು. ಒಂದಷ್ಟು ಫೊಟೋ ಕ್ಲಿಕ್ಕಿಸಿ ಕಾದೆವು. ನೀರಿನ ಅಲೆಗಳು ಬದಿಯಲ್ಲಿದ್ದ ನಮ್ಮನ್ನು ಬಂದು ತಲುಪುತ್ತಿದ್ದವು. ಆದರೆ, ದೈತ್ಯ ತಲೆಯೆತ್ತುವ ಯಾವ ಲಕ್ಷಣಗಳೂ ಕಾಣಲಿಲ್ಲ. ಹಿಂದಿರುಗಿ ನೋಡಿದಾಗ ಅಲ್ಲಿ ಬಿಳಿ ನಿಲುವಂಗಿ ಧರಿಸಿದ ಪಾದ್ರಿಯೊಬ್ಬರು ನಿಂತಿದ್ದರು. ತಲೆ ಎತ್ತಿದ್ದ ದೈತ್ಯನಿಗೆ ಕೊರಳಲ್ಲಿ ನೇತಾಡುತ್ತಿದ್ದ ಶಿಲುಬೆಯನ್ನು ಎತ್ತಿಹಿಡಿದು ತೋರಿಸಿ ʻಹಿಂದಿರುಗಿ ಹೋಗುʼ ಎಂದು ಆಜ್ಞಾಪಿಸಿದರು. ಇವರೇ ಏಳನೇ ಶತಮಾನದಲ್ಲಿ ಆ ಪ್ರದೇಶಕ್ಕೆ ಧರ್ಮಪ್ರಸಾರಕ್ಕೆ ತನ್ನ ಶಿಷ್ಯರೊಡಗೂಡಿ ಬಂದಿದ್ದ ಐರಿಷ್ ಪಾದ್ರಿ ಸಂತ ಕೊಲಂಬ. ಅಲ್ಲಿಯವರೆಗೆ, ಕೇವಲ ಸ್ಕಾಟಿಷ್ ಜಾನಪದ ಕತೆಗಳಲ್ಲಿ ಪ್ರಸ್ತಾಪಿಸಲಾಗುತ್ತಿದ್ದ ಈ ದೈತ್ಯ ಚಾರಿತ್ರಿಕ ಸ್ಥಾನ ಪಡೆದ.
ಮೊದಲೇ ದೈತ್ಯನಲ್ಲವೇ, ಕುಬ್ಜ ಮಾನವರಿಗೆ ಆಕರ್ಷಣೆಯ ಕೇಂದ್ರವಾದ. ಕಾಲುದಾರಿಯಾಗಿದ್ದ ಸರೋವರದ ಪಕ್ಕಕ್ಕೆ ಮೋಟಾರು ರಸ್ತೆ ಬಂತು. ಹೆಚ್ಚಿನ ಜನಸಂಚಾರದ ಕಾರಣ ಪ್ರವಾಸೋದ್ಯಮ ದಿನೇದಿನ ಬೆಳೆಯತೊಡಗಿತು. ಬ್ರಿಟನ್ ಮತ್ತು ವೇಲ್ಸ್‌ನಲ್ಲಿರುವ ಇತರ ಸರೋವರಗಳಿಗಿಂತ ಇದು ಹೆಚ್ಚಿನ ಪ್ರವಾಸಿಗರನ್ನು ಆಕರ್ಷಿಸಿತು. ಬಹುಶಃ ಈ ಆಲೋಚನೆಯ ಪ್ರವರ್ತಕ ಜಾರ್ಜ್ ಸ್ಪೈಸರ್ ಎಂಬಾತ, ʻನಾನು ಪ್ರತ್ಯಕ್ಷ ನೋಡಿದೆʼ ಎನ್ನುವ ಲೇಖನವನ್ನು 1933ರ ಆಗಸ್ಟ್‌ನಲ್ಲಿ ಇನ್ವರ್ನೆಸ್ ಕೊರಿಯರ್ ಪತ್ರಿಕೆಯಲ್ಲಿ ಪ್ರಕಟಿಸಿದ. ನಂತರ 21 ಮಾರ್ಚ್ 1934ರ ಡೈಲಿ ಮೈಯಿಲ್ ಪತ್ತಿಕೆಯಲ್ಲಿ ಲಂಡನ್ ವೈದ್ಯ ರಾಬರ್ಟ್ ಕೆನೆತ್ ವಿಲ್ಸನ್ ಜಾನಪದ ಕಲ್ಪನೆಯಾದ ಇದರ ಅಸ್ಪಷ್ಟ ಫೊಟೋವನ್ನು ಹರಿಬಿಟ್ಟ. ನಂತರ ದೈತ್ಯನ ಕತೆ ಧಾರಾವಾಹಿಯಾಯಿತು. ತನ್ನ ರೋಚಕತೆಯೊಂದಿಗೆ ಕುತೂಹಲದ ಪಂಡಾರ ಪೆಟ್ಟಿಗೆಯನ್ನು ತೆರೆಯಿತು. ಇನ್ನು ತಡವೇಕೆ? ಅಜ್ಞರು, ಪ್ರಾಜ್ಞರಾದಿಯಾಗಿ ಜನ ದೌಡಾಯಿಸ ತೊಡಗಿದರು. ʻನಾನು ಅದರ ತಲೆ ನೋಡಿದೆʼ, ʻನನಗೆ ಅದರ ಉಬ್ಬಿದ ಬೆನ್ನು ಕಾಣಿಸಿತುʼ ಇತ್ಯಾದಿ ವೈವಿಧ್ಯ ಅನುಭವಗಳ ವರದಿಗಳು, ಅಸ್ಪಷ್ಟ ಫೊಟೋಗಳು, ಕಾಣಲಾಗದವರ ಕಟು ಅಭಿಪ್ರಾಯಗಳು ಮಾಧ್ಯಮಗಳಲ್ಲಿ ಪ್ರಕಟವಾದವು.

ಈ ಕುರಿತ ಸಂಶೋಧನೆಯಲ್ಲಿ ಹವ್ಯಾಸಿಗಳೇ ಅಲ್ಲದೆ ವೃತ್ತಿನಿರತರೂ ಭಾಗಿಯಾಗಿದ್ದರು. ಅನೇಕ ಪ್ರತಿಷ್ಟಿತ ಪತ್ರಿಕೆಗಳು, ಸುದ್ಧಿವಾಹಿನಿಗಳೂ ಇದರ ಪ್ರಸಾರದಲ್ಲಿ ಹಿಂದೆ ಬೀಳಲಿಲ್ಲ. ಬಗೆಬಗೆಯ ವಿವರಣೆಗಳು, ಅಸ್ಪಷ್ಟ ಚಿತ್ರಗಳ ಮಹಾಪೂರವೇ ಹೊರಬರತೊಡಗಿತು. ಪುಸ್ತಕಗಳು ಪ್ರಕಟವಾದವು, ಚಲನಚಿತ್ರಗಳೂ ತಯಾರಾದವು. ಎಷ್ಟೋ ತಜ್ಞರು ಈ ವದಂತಿಯನ್ನು ಅಲ್ಲಗಳೆದರು, ವೈಜ್ಞಾನಿಕವಾಗಿ ಇದರ ಅಸ್ತಿತ್ವವನ್ನು ನಿರಾಕರಿಸಿದರೂ, ಹೊಸಹೊಸ ವಿವರಣೆಗಳು ಹುಟ್ಟಿಕೊಳ್ಳತೊಡಗಿದವು. ಮಾಹಿತಿಗಾಗಿ ವಸ್ತುಸಂಗ್ರಹಾಲಯಗಳು ತೆರೆದವು. ಪ್ರತಿಮೆಗಳನ್ನು ಸ್ಥಾಪಿಸಿ ಕಲ್ಪನೆಯನ್ನು ಚಿರಸ್ಥಾಯಿಯಾಗಿಸಿದ ಈ ಸಮೂಹಸನ್ನಿ ಬರುಬರುತ್ತಾ ಒಂದು ಲಾಭದಾಯಕ ಉದ್ಯಮವಾಯಿತು. ಇದು ಸ್ಕಾಟ್ಲೆಂಡ್ ಬೊಕ್ಕಸಕ್ಕೆ ವಾರ್ಷಿಕ 80 ಮಿಲಿಯನ್ ಡಾಲರ್‌ನಷ್ಟು ಆದಾಯದ ಮೂಲವಾಗಿದೆ.
ಅಂತಿಮವಾಗಿ, ತಾನು ಸಾಯುವ ಮುನ್ನ ಆ. 1934ರ ಫೊಟೋದ ಜನಕ ಅದೇ ವೈದ್ಯ ʻಇದು ನನ್ನ ಕಲ್ಪನೆಯಾಗಿತ್ತುʼ ಎಂದು ಸಾರಿದರೂ, ಯಾರೂ ಕೇಳಿಸಿಕೊಳ್ಳುವ ಸ್ಥಿತಿಯಲ್ಲಿರಲಿಲ್ಲ. ಇಂಥದೇ ಅನೇಕ ಕೌತುಕದ ಕಥಾನಕಗಳು ಪ್ರಪಂಚದಾದ್ಯಂತ ಇವೆ. ಇವುಗಳಲ್ಲಿ ಹಿಮಾಲಯದಲ್ಲಿ ಇದೆ ಎಂದು ಹೇಳಲಾಗುವ ʻಯತಿʼಯ ಅಸ್ಥಿತ್ವವೂ ಒಂದು. ಈ ದಿಸೆಯಲ್ಲಿಯೂ ಅನೇಕ ಪರ, ವಿರೋಧಗಳಿವೆ. ಅಷ್ಟೇ ಏಕೆ, ಮಾನವರು ನಿದ್ರಿಸುವಾಗ, ಮಾನಸ ಸರೋವರಕ್ಕೆ ದೇವತೆಗಳು ಸ್ನಾನಕ್ಕೆ ಬರುತ್ತಾರೆ ಎಂಬ ಧಾರ್ಮಿಕ ನಂಬಿಕೆಯಲ್ಲಿದ್ದ ನನ್ನ ಗೆಳೆಯರೊಬ್ಬರು, ಯಾತ್ರೆ ಸಮಯದಲ್ಲಿ ಸಮೀಪದ ಡೇರೆಯ ಕಿಂಡಿಯಲ್ಲಿ ಇಣುಕುತ್ತಾ ರಾತ್ರಿಯೆಲ್ಲಾ ಜಾಗರಣೆ ಮಾಡಿದ್ದನ್ನು ವಿವರಿಸಿದ್ದರು. ಆಗ ನನಗೆ ನಗು ಬಂದರೂ ನಗಲಿಲ್ಲ.