ನಿರಂಜನ್ ಯಶಸ್ವಿಯಾಗಿ ಪ್ರೀತೀಲಿ ’ಬಿದ್ದ’ ಕಥೆ!
ಟ್ರಾವೆಲ್ ಲೈಫ್ ಎಂದರೆ ನನಗೆ ಹೊಸತಲ್ಲ, ದಿನನಿತ್ಯದ ಜೀವನದೊಂದಿಗೆ ಬೆಸೆದುಕೊಂಡಿದೆ. ನಿತ್ಯವೂ ಮಾಡುವ ಎಲ್ಲ ಕೆಲಸಗಳಂತೆ ಮಸ್ಟ್ ಆಂಡ್ ಶುಡ್ ಎನ್ನುವ ವಿಷಯ ಪ್ರವಾಸ. ಇದು ಪ್ರವಾಸದ ಬಗ್ಗೆ ಜನಪ್ರಿಯ ನಿರೂಪಕ, ನಟ ನಿರಂಜನ್ ದೇಶಪಾಂಡೆ ಹೇಳಿರುವ ಮಾತುಗಳು. ಕೆಲಸದ ಕಾರಣಕ್ಕಾಗಿ ಮಾತ್ರವಲ್ಲದೆ ಬಿಡುವಿನ ವೇಳೆಯನ್ನು ಕಳೆಯುವುದಕ್ಕಾಗಿಯೂ ಪ್ರವಾಸವನ್ನು ರೂಢಿಯಾಗಿಸಿಕೊಂಡಿರುವ ನಿರಂಜನ್ ದೇಶಪಾಂಡೆಯವರ ಟ್ರಾವೆಲ್ ಲೈಫ್ ಈ ವಾರದ ಪ್ರವಾಸಿ ಪ್ರಪಂಚದಲ್ಲಿ.
ವರ್ಷಕ್ಕೆ ಒಂದೋ ಎರಡೋ
ಇದುವರೆಗೂ 10-12 ದೇಶಗಳನ್ನು ಸುತ್ತಾಡಿ ಬಂದಿದ್ದೇನೆ. ಪತ್ನಿಯ ಜತೆಗೆ ವರ್ಷಕ್ಕೊಂದು ವಿದೇಶ ಪ್ರಯಾಣ ಮಾಡುತ್ತೇನೆ. ಆದರೆ ಪ್ರವಾಸವೆಂದರೆ ವಿದೇಶವಷ್ಟೇನಾ ? ನಮ್ಮ ದೇಶದಲ್ಲಿಯೇ ಲೆಕ್ಕವಿಲ್ಲದಷ್ಟು ಪ್ರವಾಸಿ ಸ್ಥಳಗಳಿವೆ. ಅವುಗಳನ್ನು ಸುತ್ತಿ ಬರಬೇಕೆಂದರೆ ಈ ಒಂದು ಜೀವನ ಸಾಕಾಗುವುದಿಲ್ಲ. ನನಗೆ ಈ ಅರಿವಾಗಲು ತಡವಾಗಿದೆ. ಅದಕ್ಕಾಗಿಯೇ ಈಗಂತೂ ಸಮಯ ಸಿಕ್ಕಾಗಲೆಲ್ಲಾ ಸ್ಥಳೀಯ ಪ್ರವಾಸ, ರಾಜ್ಯ ಹಾಗೂ ದೇಶೀ ಪ್ರವಾಸಗಳನ್ನೂ ಕೈಗೊಳ್ಳುತ್ತಲೇ ಬಂದಿದ್ದೇನೆ.
ನಂಗೆ ನಾನೇ ಪಾರ್ಟ್ನರ್
ನನಗ್ಯಾಕೋ ಪಾರ್ಟ್ನರ್ ಜತೆಗೆ ಪ್ರವಾಸ ಮಾಡುವುದಕ್ಕಿಂತ ಒಬ್ಬಂಟಿಯಾಗಿ ಸುತ್ತಾಡುವುದೇ ಖುಷಿಯೆನಿಸಿದೆ. ಸ್ವಾತಂತ್ರ್ಯಕ್ಕೆ ಇನ್ನೊಂದು ಹೆಸರೇ ಸೋಲೋ ಟ್ರಾವೆಲ್. ಯಾರ ಜವಾಬ್ದಾರಿ ತೆಗೆದುಕೊಳ್ಳಬೇಕಿಲ್ಲ, ನಿರ್ಧಾರಗಳಿಗೆ ಕಾಯಬೇಕಿಲ್ಲ, ಮನಸೋ ಇಚ್ಛೆ ತೋಚಿದ್ದನ್ನು ಮಾಡುವ ಅವಕಾಶವಿಲ್ಲಿದೆ. ಲೇಹ್-ಲಡಾಖ್, ಸಿಂಗಾಪುರ ಹೀಗೆ ಅನೇಕ ಕಡೆಗಳಿಗೆ ಒಬ್ಬನೇ ಪ್ರವಾಸ ಮಾಡಿ ಬಂದಿದ್ದೇನೆ.
ಭಲೇ ಬಾಲಿ

ಪತ್ನಿಯ ಜತೆಗೆ ಮೊದಲ ಬಾರಿಗೆ ಕೂರ್ಗ್ ಸುತ್ತಾಡಿಬಂದಿದ್ದೆ. ಅದಾದ ಮೇಲೆ ಇಂಡೋನೇಷ್ಯಾದ ಬಾಲಿಗೆ ಹೋಗಿ ಬಂದಿದ್ದೇನೆ. ನಮಗಿಬ್ಬರಿಗೂ ಅದು ಮರೆಯಲಾಗದ ಪ್ರವಾಸ. ಸಾಗರದಾಳದಲ್ಲಿ ಸುತ್ತಾಟ ಮಾತ್ರವಲ್ಲದೆ ಬಾಲಿಯ ಫೇಮಸ್ ಕೇಚಕ್ ಡ್ಯಾನ್ಸ್ ನಮಗೆ ಬಹಳ ಮೆಚ್ಚುಗೆಯಾಗಿತ್ತು. ಅಲ್ಲಿನ ಮೃಗಾಲಯವೊಂದರಲ್ಲಿ ನಡೆದ ʻಅಗುಂಗ್ ಶೋʼ ಮೂಲಕ ಬಾಲಿಯ ಹುಟ್ಟಿನ ಕತೆಯನ್ನು ತಿಳಿಯುವುದಕ್ಕಾಯಿತು. 500ಕ್ಕೂ ಹೆಚ್ಚು ನೃತ್ಯಪಟುಗಳ ನಡುವೆ ಅನೇಕ ತರಬೇತಿ ಪಡೆದ ಪ್ರಾಣಿಗಳೂ ಬಂದುಹೋಗುವ ಬ್ಯಾಲೇ ಥರದ ಪ್ಲೇ ಅದು. ಅದಷ್ಟೇ ಅಲ್ಲದೆ ಬೆಳಗ್ಗಿನಿಂದ ಸಂಜೆಯವರೆಗೂ ಅಲ್ಲಿನ ವೈಟ್ ರಿವರ್‌ನಲ್ಲಿ ಲಾಂಗೆಸ್ಟ್ ರಿವರ್ ರಾಫ್ಟಿಂಗ್ ಮಾಡಿದ ಅನುಭವ ನಮಗಾಗಿತ್ತು.
ಪ್ರವಾಸ-ಆಹಾರ
ಪ್ರಯಾಣದ ವೇಳೆ ನನಗೆ ಆಹಾರದ ವಿಚಾರದಲ್ಲಿ ಸಮಸ್ಯೆಯಾಗುವುದಿಲ್ಲ. ಯಾಕೆಂದರೆ ನಾನು ಆಹಾರಪ್ರಿಯ. ಪ್ರವಾಸಕ್ಕೆ ಹೋದವೇಳೆ ಅಲ್ಲಿನ ಸ್ಥಳೀಯ ಆಹಾರಗಳ ರುಚಿ ನೋಡುತ್ತೇನೆ. ಸ್ಟ್ರೀಟ್ ಫುಡ್ ಎಂದರೂ ನನಗೆ ಬಹಳ ಇಷ್ಟ.
ಚಿಕ್ಕಮಗಳೂರೆಂಬ ಸ್ವರ್ಗ

ಯುಎಸ್, ಯುಕೆ, ಸಿಂಗಾಪುರ, ಥೈಲ್ಯಾಂಡ್ , ದುಬೈ, ಅಬುಧಾಬಿ, ಕತಾರ್ ಹೀಗೆ ಅನೇಕ ದೇಶಗಳನ್ನು ಕಣ್ತುಂಬಿಕೊಂಡು ಬಂದರೂ ಚಿಕ್ಕಮಗಳೂರೇ ನನಗೆ ಫೇವರಿಟ್. ಒಂದೊಮ್ಮೆ ಪ್ರವಾಸಕ್ಕೆ ಹೋಗಿರುವ ಜಾಗ ಚೆನ್ನಾಗಿದ್ದರೆ, ಊಟ ಕೆಟ್ಟದಾಗಿರುತ್ತದೆ. ಊಟ ಸವಿಯಾಗಿದ್ದರೆ ಅಲ್ಲಿನ ಜನರೊಂದಿಗೆ ಬೆರೆಯುವುದು ಕಷ್ವವೆಂಬಂತಾಗಿರುತ್ತದೆ. ಎಲ್ಲವೂ ಚೆನ್ನಾಗಿರುವುದೆಂದರೆ ನಮ್ಮ ನೆಲದಲ್ಲಷ್ಟೇ.
ಯಾರೂ ನೋಡದಿರುವ ಚಿಕ್ಕಮಗಳೂರು
ಚಿಕ್ಕಮಗಳೂರಿಗೆ ಪ್ರವಾಸ ಹೋಗಬೇಕೆನ್ನುವವರು ತಪ್ಪದೇ ಅಲ್ಲಿನ ಹಿಡನ್ ಜೆಮ್‌ಗಳನ್ನು ನೋಡಿ ಬನ್ನಿ. ಎಲ್ಲರೂ ಭೇಟಿ ನೀಡುವ ಮುಳ್ಳಯ್ಯನಗಿರಿ, ಅಬ್ಬಿ ಫಾಲ್ಸ್ನಂಥ ತಾಣಗಳ ಜತೆಗೆ ದೇವರ ಮನೆ ಬೆಟ್ಟ, ಕಲ್ಲತಗಿರಿಯಂಥ ಜಾಗಗಳನ್ನೂ ನೋಡಿ ಬನ್ನಿ.
ನಾನು ಪ್ರವಾಸೋದ್ಯಮ ಸಚಿವನಾದರೆ!
ಒಂದು ದಿನಕ್ಕಾದರೂ ನಾನು ಪ್ರವಾಸೋದ್ಯಮ ಇಲಾಖೆಯ ಜವಾಬ್ದಾರಿ ವಹಿಸಿಕೊಂಡರೆ, ಅನೇಕ ಯೋಜನೆಗಳನ್ನು ಕಾರ್ಯರೂಪಕ್ಕೆ ತರುತ್ತೇನೆ. ಸೂಕ್ತ ರಸ್ತೆ ಸಂಪರ್ಕವಿರದ ಹೆಸರಾಂತ ಪ್ರವಾಸಿ ತಾಣಗಳಿಗೆ ರಸ್ತೆ ಸೌಲಭ್ಯವನ್ನು ಕಲ್ಪಿಸುತ್ತೇನೆ. ಖಾಸಗಿ ಒಡೆತನದ ರೆಸಾರ್ಟ್‌ಗಳಂತೆಯೇ ದುಬಾರಿಯಾಗುತ್ತಿರುವ ಸರಕಾರದ ಐಬಿ ಹಾಗೂ ಜೆಎಲ್‌ಏರ್ ಸ್ಟೇಗಳನ್ನು ಕಡಿಮೆ ಬೆಲೆಗೆ ಪ್ರವಾಸಿಗರಿಗೆ ಸಿಗುವಂತೆ ಮಾಡುತ್ತೇನೆ. ಈ ಮೂಲಕ ಸ್ಥಳೀಯ ಉದ್ಯೋಗ ಅವಕಾಶವನ್ನು ಹೆಚ್ಚಿಸುತ್ತೇನೆ.
ಬೆಂಗಳೂರಿನ ಫುಡ್ ಅಡ್ಡಾ

ಮನಸಾದಾಗೆಲ್ಲ ವಿವಿ ಪುರಂನ ಫುಡ್ ಸ್ಟ್ರೀಟ್‌ಗೆ ಹೋಗುತ್ತೇನೆ. ಅನೇಕ ಆಯ್ಕೆಗಳು ಒಂದೇ ಕಡೆ ಸಿಗುವುದರಿಂದ ನನಗೆ ಈ ಫುಡ್ ಸ್ಟ್ರೀಟ್ ಬಹಳ ಇಷ್ಟ. ಚಿಕ್ಕಂದಿನಿಂದಲೂ ವಿದ್ಯಾರ್ಥಿ ಭವನ್ದ ಗರಿಗರಿಯಾದ ಮಸಾಲೆ ದೋಸೆಯ ಅಭಿಮಾನಿ ನಾನು. ಆದರೆ ನನ್ನ ಪತ್ನಿಗೆ ಮಲ್ಲೇಶ್ವರಂ ಸಿಟಿಆರ್ ಮಸಾಲೆದೋಸೆ ಇಷ್ಟವಾದ್ದರಿಂದ ಅಲ್ಲಿಗೂ ವಿಸಿಟ್ ಮಾಡುತ್ತಿರುತ್ತೇವೆ. ಇನ್ನು ಮಲ್ಲೇಶ್ವರಂ ಸಾಗರ್ ಹೊಟೇಲ್, ಗವಿಪುರಂ ಗುಟ್ಟಳ್ಳಿಯ ಸಮೀಪದಲ್ಲಿ ಡ್ರೈ ಚಾಟ್ಸ್ ಸೆಂಟರ್ ಕೂಡ ನನ್ನ ನೆಚ್ಚಿನ ಫುಡ್ ಅಡ್ಡಾಗಳಲ್ಲಿ ಪ್ರಮುಖವಾದವು.
ಚಾರಣ ಇಷ್ಟವಾದರೂ ಕಷ್ಟ

ಟೆಂಪಲ್ ರನ್ ಮಾಡುತ್ತಿರುತ್ತೇನೆ. ಬೀಚ್‌ಗಳಿಗೆ ಹೋಗುತ್ತೇನೆ. ಆದರೂ ಅವೆಲ್ಲವುಗಳಿಗಿಂತಲೂ ಹೆಚ್ಚಾಗಿ ಬೆಟ್ಟ-ಗುಡ್ಡಗಳನ್ನೇರುವುದು ತುಂಬಾ ಖುಷಿ ಕೊಡುತ್ತದೆ. ಕೊಡಚಾದ್ರಿ, ಮುಳ್ಳಯ್ಯನಗಿರಿ, ಸಾವನದುರ್ಗ, ಶಿವಗಂಗೆ ಹೀಗೆ ಅನೇಕ ಕಡೆಗಳಲ್ಲಿ ಚಾರಣ ಮಾಡಿದ್ದೇನೆ. ಕೇದಾರಕಂಠ ಚಾರಣ ಮಾಡಿದ್ದ ವೇಳೆ ಮಂಜು, ಹಿಮದಿಂದ ಕೂಡಿದ ಪ್ರದೇಶವನ್ನು ನೋಡಿ ಖುಷಿಯೆನಿಸಿದರೂ, ಮೈ ಕೈಯೆಲ್ಲಾ ನೋವು ಮಾಡಿಕೊಂಡು ಯಾಕಪ್ಪಾ ಬೇಕಿತ್ತು ಈ ಚಾರಣ ಅನಿಸಿಬಿಟ್ಟಿತ್ತು.
ಖಾಲಿ ಸೂಟ್‌ಕೇಸ್ ಜತೆಗಿರಲಿ
ಅಂತಾರಾಷ್ಟ್ರೀಯ ಪ್ರವಾಸ ಹೋಗುವ ಮುನ್ನವೇ ಅತಿಯಾಗಿ ಶಾಪಿಂಗ್ ಮಾಡಿಕೊಳ್ಳದಿರುವುದೇ ಒಳ್ಳೆಯದು. ಅಗತ್ಯ ವಸ್ತುಗಳೊಂದಿಗೆ ಸ್ವಲ್ಪ ಖಾಲಿಯಿರುವ ಸೂಟ್‌ಕೇಸ್ ನಿಮ್ಮದಾಗಿದ್ದರೆ, ಬರುವಾಗ ಸೂಟ್‌ಕೇಸ್ ತುಂಬಾ ಶಾಪಿಂಗ್ ಐಟಂಗಳ ಜತೆಗೆ ಬರಬಹುದು. ಶಾಪಿಂಗ್ ಹುಚ್ಚಿರುವವರು ದುಬಾರಿಯಾದರೂ ಬೇಕೆನಿಸಿದ ವಸ್ತುಗಳನ್ನು ಕೊಂಡುಕೊಳ್ಳದೇ ಇರುವುದಿಲ್ಲ.
ಟ್ರಾವೆಲ್ ಟಿಪ್ಸ್
ಉಳಿದೆಲ್ಲಾ ಪ್ರವಾಸಗಳಿಗಿಂತಲೂ ಹೆಚ್ಚಾಗಿ ಅಂತಾರಾಷ್ಟ್ರೀಯ ಪ್ರವಾಸದ ವೇಳೆ ಔಷಧಿಯ ಕಿಟ್ ಜತೆಗೆ ಇಟ್ಟುಕೊಳ್ಳಿ. ಪ್ರಯಾಣದ ವೇಳೆ ಸ್ಕಿನ್ ಅಲರ್ಜಿ, ಡಸ್ಟ್ ಅಲರ್ಜಿಗಳಾದಾಗ ಔಷಧಿಗಳು ಜತೆಗಿದ್ದರೆ ಒಳ್ಳೆಯದು. ವಿದೇಶಗಳಲ್ಲಿ ಅನಾರೋಗ್ಯವಾದರೆ ಅದಕ್ಕೆ ಪ್ರತ್ಯೇಕ ಪ್ರಿಸ್ಕ್ರಿಪ್ಶನ್, ಇನ್ಶೂರೆನ್ಸ್ ಬೇಕಾಗುವುದರಿಂದ ಸುಲಭದಲ್ಲಿ ಔಷಧಿಗಳು ಸಿಗುವುದಿಲ್ಲ. ಇನ್ನು ಆಹಾರದಲ್ಲಿ ಆಯ್ಕೆ ಮಾಡಿಕೊಳ್ಳುವವರಾದರೆ ಹೊರಡುವ ಮುನ್ನವೇ ರೆಡಿ ಮಿಕ್ಸ್‌ಗಳನ್ನು ಜತೆಗಿಟ್ಟುಕೊಳ್ಳುವುದು ಒಳ್ಳೆಯದು.
ಕನ್ಯಾಕುಮಾರಿಯಂಥ ಕೀ ವೆಸ್ಟ್
ಕಳೆದ ವರ್ಷ ನಾವಿಕ ಕಾರ್ಯಕ್ರಮ ನಿರೂಪಣೆಗಾಗಿ ಅಮೆರಿಕಗೆ ಹೋಗಿದ್ದೆ. ಅಮೆರಿಕ ಕನ್ನಡಿಗರ ಪ್ರೀತಿ, ಕಾಳಜಿಯನ್ನು ನೋಡಿದ ಮೇಲಂತೂ ನಾನು ಬೆಂಗಳೂರಲ್ಲೇ ಇದ್ದೇನೆಂಬ ಭಾವನೆ ಮೂಡಿತ್ತು. ಆ ಭೇಟಿಯ ಸಂದರ್ಭದಲ್ಲೇ ಅಮೆರಿಕದ ದಕ್ಷಿಣದ ತುದಿಯಲ್ಲಿರುವ ನಗರ ಕೀ ವೆಸ್ಟ್ಗೆ ಭೇಟಿ ನೀಡಿದ್ದೆ. ಅದು ನಮ್ಮ ಕನ್ಯಾಕುಮಾರಿಯಂಥ ಜಾಗ.
ಸಫಾರಿ ಬೇಕಿತ್ತು
ಸದ್ಯ ಕರ್ನಾಟಕದ ಪ್ರಮುಖ ಅರಣ್ಯಗಳಲ್ಲಿ ಸಫಾರಿಗೆ ಬಂದ್ ಮಾಡಿದ್ದಾರೆ. ಅದಕ್ಕೆ ಅವರು ನೀಡುವ ಕಾರಣ ಏನೇ ಇದ್ದರೂ ವನ್ಯಜೀವಿ ಪ್ರವಾಸವನ್ನು ಸಂಭ್ರಮಿಸುವ ನನ್ನಂಥ ಅನೇಕ ಮಂದಿಗೆ ಇದು ನಿರಾಸೆ ತಂದಿದೆ. ಸರಕಾರ ಆದಷ್ಟು ಬೇಗ ಇದಕ್ಕೊಂದು ಸೂಕ್ತ ಪರಿಹಾರ ಕಾಣಬೇಕಿದೆ.
ಪ್ರೇಮ ನಿವೇದನೆಯಲ್ಲೂ ಫಜೀತಿ

ಫಜೀತಿಯಿಲ್ಲವಾದರೆ ಪ್ರಯಾಣ ಮಜವಾಗಿರುವುದಿಲ್ಲ. ಹನಿಮೂನ್‌ಗಾಗಿ ಬಾಲಿಗೆ ಹೋಗಿದ್ದ ವೇಳೆ ರೊಮ್ಯಾಂಟಿಕ್ ಆಗಿರಲಿ ಅಂತ ಸಮುದ್ರದೊಳಗೆ ಹೋಗಿ ಪತ್ನಿಗೆ ಪ್ರಪೋಸ್ ಮಾಡಲು ಯೋಜನೆ ಹಾಕಿಕೊಂಡಿದ್ದೆ. ಆದರೆ ನೀರಿಗಿಳಿಯುತ್ತಲೇ ಅವಳು ʻನೀರು ಕಂಡರೆ ಪ್ರಾಣ ಭಯʼ ಅಂದಳು. ಅಲ್ಲದೆ ಭಯದಲ್ಲಿ ನಮ್ಮನ್ನು ಸಮುದ್ರದ ಆಳಕ್ಕೆ ಕರೆದುಕೊಂಡು ಹೋಗಿದ್ದ ವ್ಯಕ್ತಿಯ ಆಕ್ಸಿಜನ್ ಕಿಟ್ ಕಿತ್ತು ಹಾಕಿ, ಸುಸ್ತಾಗಿಸಿದ್ದಳು. ಸಾಗರದಾಳದಲ್ಲಿ ಪ್ರೇಮ ನಿವೇದನೆಯ ಕನಸು ಭಗ್ನವಾಗಿತ್ತು.
2026ರ ಭೇಟಿ
ಈ ವರ್ಷ ಅನೇಕ ಪ್ರವಾಸಗಳನ್ನು ಮಾಡಬೇಕೆಂದುಕೊಂಡಿದ್ದೇನೆ. ಕರ್ನಾಟಕದ ಅನೇಕ ಪ್ರವಾಸಿತಾಣಗಳಿಗೆ ಭೇಟಿ ನೀಡಬೇಕು, ವಿದೇಶವಾದರೆ ಆಸ್ಟ್ರೇಲಿಯಾ, ಸೌತ್ ಆಫ್ರಿಕಾದ ಮಸೈ ಮಾರಾ ಹೋಗಬೇಕೆಂಬ ಆಸೆಯಿದೆ.