ಯುವ ಜನಾಂಗ ವನ್ಯಜೀವಿ ಸಂರಕ್ಷಣೆಯಲ್ಲಿ ತೊಡಗಲಿ: ವನ್ಯಜೀವಿ ತಜ್ಞ ಡಾ.ಕೆ ಉಲ್ಲಾಸ ಕಾರಂತ
ಭಾರತವು 1952ರಿಂದ ಪ್ರತಿ ವರ್ಷವೂ ಅಕ್ಟೋಬರ್ 2 ರಿಂದ 8 ರವರೆಗೆ ರಾಷ್ಟ್ರೀಯ ವನ್ಯಜೀವಿ ಸಪ್ತಾಹವನ್ನು ಆಚರಿಸಿಕೊಂಡು ಬಂದಿದೆ. ಈ ಬಾರಿ 71ನೇ ವನ್ಯಜೀವಿ ಸಪ್ತಾಹವನ್ನು ಮಾನವ ವನ್ಯಜೀವಿ ಸಹಬಾಳ್ವೆ ಎಂಬ ಧ್ಯೇಯದೊಂದಿಗೆ ಆರಂಭಿಸಲಾಗಿದೆ. ಭಾರತದ ಸಸ್ಯ ಮತ್ತು ಪ್ರಾಣಿಗಳನ್ನು ರಕ್ಷಿಸುವ ಮತ್ತು ಸಂರಕ್ಷಿಸುವ ಗುರಿಯೊಂದಿಗೆ, ಅಳಿವಿನಂಚಿನಲ್ಲಿರುವ ಮತ್ತು ಅಪಾಯದಲ್ಲಿರುವ ಪ್ರಾಣಿಗಳ ಜೀವಗಳನ್ನು ರಕ್ಷಿಸುವ ದೀರ್ಘಾವಧಿಯ ಯೋಜನೆಯನ್ನು ಹಮ್ಮಿಕೊಂಡಿರುವುದಾಗಿ ಕರ್ನಾಟಕ ಅರಣ್ಯ ಇಲಾಖೆಯೂ ಘೋಷಿಸಿದೆ.
ವನ್ಯಜೀವಿ ತಜ್ಞರು ಡಾ. ಕೆ. ಉಲ್ಲಾಸ ಕಾರಂತ..
ಡಾ. ಕೆ. ಉಲ್ಲಾಸ ಕಾರಂತರು ಭಾರತದಲ್ಲಿ ವನ್ಯಜೀವಿ ಸಂರಕ್ಷಣಾ ಯೋಜನೆಗಳಿಗೆ ವೈಜ್ಞಾನಿಕ ಆಯಾಮವನ್ನು ನೀಡಿದ ಸಂಶೋಧಕ ಮತ್ತು ಜೀವಶಾಸ್ತ್ರಜ್ಞ. ದಶಕಗಳ ಕಾಲ ದೇಶ-ವಿದೇಶಗಳ ಅಭಯಾರಣ್ಯಗಳಲ್ಲಿ ಓಡಾಡಿ, ವನ್ಯಜೀವಿಗಳೊಂದಿಗೆ ನಂಟು ಬೆಳೆಸಿ ಈ ಕ್ಷೇತ್ರದಲ್ಲಿ ಅನೇಕ ಮೈಲಿಗಲ್ಲುಗಳಿಗೆ ಕಾರಣರಾದವರು. ವನ್ಯಜೀವಿ ಸಪ್ತಾಹದ ಆಚರಣೆಯ ಈ ಸಂದರ್ಭದಲ್ಲಿ ಡಾ. ಕೆ. ಉಲ್ಲಾಸ ಕಾರಂತ ಅವರೊಂದಿಗೆ ಸಂದರ್ಶನ.
ಎಂಜಿನಿಯರಿಂಗ್ ಪದವಿ ಮಾಡಿದ ನಿಮಗೆ ವನ್ಯಜೀವಿಗಳ ಬಗ್ಗೆ ಆಸಕ್ತಿ ಹುಟ್ಟುಕೊಂಡಿದ್ದು ಹೇಗೆ..?
ನನಗೆ ಚಿಕ್ಕಂದನಿಂದಲೂ ವನ್ಯಜೀವಿಗಳ ಕಡೆಗೆ ಆಸಕ್ತಿಯಿತ್ತು. ತಂದೆ ಶಿವರಾಮ ಕಾರಂತರಿಗೂ ನಿಸರ್ಗದ ಕಡೆಗೆ ಆಸಕ್ತಿಯಿತ್ತಾದ್ದರಿಂದ ವನ್ಯಜೀವಿಗಳ ಬಗೆಗೆ ಅನೇಕ ಪುಸ್ತಕಗಳೂ ಮನೆಯಲ್ಲಿತ್ತು. ಅಂಥ ಪುಸ್ತಕಗಳ ಓದು ನನ್ನಲ್ಲಿ ಹೊಸ ಲೋಕವನ್ನೇ ತೆರೆದಿರಿಸಿತ್ತು. 1965ರಲ್ಲಿ ಎಂಜಿನಿಯರಿಂಗ್ ಹೋದಾಗಲೂ ವನ್ಯಜೀವಿಗಳ ಕಡೆಗೆ ನನ್ನ ಆಸಕ್ತಿಯಿತ್ತಾದರೂ ಅವಕಾಶವಿರಲಿಲ್ಲ. ಆದರೂ ಕಾಡಿನ ಸಂಪರ್ಕವಿಟ್ಟುಕೊಂಡಿದ್ದೆ. ಅರಣ್ಯ ಇಲಾಖೆಯಲ್ಲಿ ನನಗೆ ಅನೇಕರು ಉತ್ತೇಜನ ಕೊಟ್ಟರು. ಪಾಶ್ಚಾತ್ಯ ದೇಶದಲ್ಲಿ ಸಿಕ್ಕ ಕೆಲವು ವಿದ್ವಾಂಸರು ಯುನಿವರ್ಸಿಟಿ ಪದವಿ ಪಡೆದು ಇದನ್ನೇ ಮುಂದುವರಿಸಿಕೊಂಡು ಹೋಗುವಂತೆ ಸಲಹೆ ನೀಡಿದರು . ವೃತ್ತಿಪರ ವನ್ಯಪ್ರಾಣಿಶಾಸ್ತ್ರಜ್ಞನಾಗುವ ಬಯಕೆಯಿಂದಾಗಿ ಮತ್ತೆ ಅಧ್ಯಯನದಲ್ಲಿ ತೊಡಗಿದೆ. ವನ್ಯಜೀವಿ ನಿರ್ವಹಣೆಯನ್ನು ಕುರಿತ ಸರ್ಟಿಫಿಕೇಟ್ ಕೋರ್ಸಿನಲ್ಲಿ ಪಾಲ್ಗೊಳ್ಳುವುದಕ್ಕಾಗಿ 1984ರಲ್ಲಿ ಅಮೆರಿಕದ ಸ್ಮಿತ್ಸೋನಿಯನ್ ಸಂಸ್ಥೆಯ ಮೆಟ್ಟಿಲು ಹತ್ತಿದೆ. ಈ ವ್ಯಾಸಂಗಶ್ರದ್ಧೆ ಮುಂದುವರಿದುದರ ಫಲವಾಗಿ 1988ರಲ್ಲಿ ವೈಲ್ಡ್ ಲೈಫ್ ಇಕಾಲಜಿಯಲ್ಲಿ ಸ್ನಾತಕೋತ್ತರ ಪದವಿ ಪಡೆದುಕೊಂಡೆ. ಮುಂದೆ 1993ರಲ್ಲಿ ಮಂಗಳೂರು ವಿಶ್ವವಿದ್ಯಾಲಯದಿಂದ ಅನ್ವಯಿಕ ಪ್ರಾಣಿ ಶಾಸ್ತ್ರದಲ್ಲಿ ಡಾಕ್ಟರೇಟ್ ಪದವಿ ಒದಗಿಬಂತು. 1993ರ ನಂತರದಲ್ಲಿ ನ್ಯೂಯಾರ್ಕ್ ವೈಲ್ಡ್ ಲೈಫ್ ಕನ್ಸರ್ವೇಷನ್ ಸೊಸೈಟಿಯ ಆಶ್ರಯದ ಇಂಡಿಯಾ ಪ್ರೋಗ್ರಾಂ ನಿರ್ದೇಶಕ ಹಾಗೂ ಸಂಶೋಧಕ ವಿಜ್ಞಾನಿಯಾಗಿ ಸೇವೆಗೈಯಲು ಅವಕಾಶ ಸಿಕ್ಕಿತು. ಹುಲಿ ಮತ್ತಿತರ ಸಸ್ತನಿವರ್ಗದ ದೊಡ್ಡ ಪ್ರಾಣಿಗಳ ಜೀವಿಪರಿಸ್ಥಿತಿಯನ್ನು ಕುರಿತಂತೆ ಸುದೀರ್ಘ ಕಾಲದ ಸಂಶೋಧನೆ ನಡೆಸಿದೆ..ಹೀಗೆ ವನ್ಯಜೀವಿಗಳು, ಅರಣ್ಯದೊಂದಿಗಿನ ನಂಟು ಮುಂದುವರಿಯಿತು.

ರಾಜ್ಯ ಸರಕಾರ ಈ ಬಾರಿ 71ನೇ ವನ್ಯಜೀವಿ ಸಪ್ತಾಹವನ್ನು ಆಚರಿಸುತ್ತಿದೆ. ವನ್ಯಜೀವಿ ತಜ್ಞರಾಗಿ ಈ ಬಗ್ಗೆ ನಿಮ್ಮ ಮಾತು
ಅರಣ್ಯ, ಪರಿಸರ ಹಾಗೂ ವನ್ಯಜೀವಿಗಳ ಬಗ್ಗೆ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವ ಉದ್ದೇಶದೊಂದಿಗೆ ಸರಕಾರಗಳು ಅ.2 ರಿಂದ 8ರವರೆಗೆ ವನ್ಯ ಜೀವಿ ಸಪ್ತಾಹಗಳನ್ನು ಆಚರಿಸುತ್ತಲೇ ಬಂದಿದೆ. ಈ ಬಾರಿ 71ನೇ ವನ್ಯಜೀವಿ ಸಪ್ತಾಹದ ಸಂಭ್ರಮದಲ್ಲಿದ್ದೇವೆ. ಇಂಥ ಆಚರಣೆಗಳು ಒಳ್ಳೆಯದೇ. ಆದರೆ ಅದರ ಆಚರಣೆಯ ರೀತಿ ಅರ್ಥ ಕಳೆದುಕೊಳ್ಳುತ್ತಿದೆ ಎಂಬುದು ನನ್ನ ಅನಿಸಿಕೆ. 1947ರಿಂದ ಈ ಕ್ಷೇತ್ರದಲ್ಲಿ ಏನೇನು ಅಭಿವೃದ್ಧಿಗಳಾಗಿವೆ, ಯಾವುದರಲ್ಲಿ ಸೋತಿದ್ದೇವೆ, ಜಾಗತಿಕ ಮಟ್ಟದಲ್ಲಿ ಹೋಲಿಸಿದರೆ ನಾವು ಇನ್ನೂ ಹೆಚ್ಚಿನದಾಗಿ ಹೇಗೆ ಪ್ರಯತ್ನಿಸಬಹುದಿತ್ತು? ಇಂಥ ವಿಚಾರಗಳ ಬಗ್ಗೆ ಯೋಚನೆ ಮಾಡುವ ಮೂಲಕ ಈ ವನ್ಯಜೀವಿ ಸಪ್ತಾಹವನ್ನು ವಿಶೇಷವಾಗಿ ಅಚರಿಸಿಕೊಳ್ಳಬಹುದು ಎನಿಸುತ್ತದೆ.
ವನ್ಯ ಜೀವಿ ಸಂರಕ್ಷಣೆ ಅಂದು ಮತ್ತು ಇಂದು…ಬೆಳೆದುಬಂದ ಹಾದಿ..?
ಸ್ವಾತಂತ್ರ್ಯ ಬಂದಾಗ ಪರಿಸ್ಥಿತಿ ತೀರಾ ಕೆಟ್ಟದಾಗಿತ್ತು. ಆಹಾರದ ಕೊರತೆ, ಬಡತನ, ನಿರುದ್ಯೋಗವಿತ್ತು, ಔದ್ಯಮೀಕರಣ ಮುಂದುವರಿದಿರಲಿಲ್ಲ. ಹಾಗಾಗಿ ವನ್ಯಜೀವಿ ಸಂರಕ್ಷಣೆ ಮೂಲೆಗುಂಪಾಗಿತ್ತು. ಸರಕಾರ ನೈಸರ್ಗಿಕ ಆವಾಸಗಳನ್ನು ನೋಡಿಕೊಳ್ಳುವುದರಲ್ಲಿ ಅತಿ ಮುಖ್ಯ ಅಂಗಸಂಸ್ಥೆ ಅರಣ್ಯ ಇಲಾಖೆ. ಆ ವೇಳೆ ಅವರಿಗೆ ವನ್ಯಜೀವಿಗಳ ಬಗ್ಗೆ ಕಾಳಜಿಯೂ ಇರಲಿಲ್ಲ. ಗಟ್ಟಿ ಧೋರಣೆಯೂ ಇರಲಿಲ್ಲ. ಆಹಾರ ಕೊರತೆ ಇದ್ದಿದ್ದರಿಂದ ʻಗ್ರೋ ಮೋರ್ ಫುಡ್ʼ ಎಂಬ ಪಾಲಿಸಿಯಿತ್ತು. ಕಾಡು ಕಡಿದು ಆಹಾರ ಉತ್ಪಾದನೆ ಮಾಡಿ ಎಂಬಂತಿತ್ತು. ಅರಣ್ಯ ಇಲಾಖೆಗೆ ಮರ ಕಡಿದು ಸರಕಾರದ ಬೊಕ್ಕಸಕ್ಕೆ ಹಣ ತುಂಬಿಸುವುದಕ್ಕೆ ಹೇಳಿದ್ದರು. ಹಾಗಾಗಿ ಅವ್ಯಾಹತವಾಗಿ ಬೇಟೆಯಾಗುತ್ತಿತ್ತು. ವನ್ಯ ಪ್ರಾಣಿಗಳನ್ನು ಗುಂಡಿಕ್ಕಿ ಕೊಂದರೂ ಶಿಕ್ಷೆಯಾಗುತ್ತಿರಲಿಲ್ಲ. ಹುಲಿ, ಚಿರತೆಗಳು ಅಪಾಯಕಾರಿ ಪ್ರಾಣಿಗಳೆಂದು ಗುರುತಿಸಿ ಅವುಗಳನ್ನು ಗುಂಡಿಕ್ಕಿಕೊಂದರೆ ಬಹುಮಾನವೂ ಲಭ್ಯವಾಗುತ್ತಿತ್ತು. ಇಂಥ ಪರಿಸ್ಥಿತಿಯಲ್ಲಿ ವನ್ಯಜೀವಿಗಳ ರಕ್ಷಣೆಗೆ ಗಟ್ಟಿಯಾದ ಕಾನೂನುಗಳಿರಲಿಲ್ಲ. 60ರ ದಶಕದಲ್ಲಿ ಎಂ. ಕೃಷ್ಣನ್ ರಂಥವರು ಪತ್ರಿಕೆಗಳಲ್ಲಿ ಈ ಬಗ್ಗೆ ಮಾಹಿತಿಗಳನ್ನು ಹಂಚಿಕೊಂಡರೂ ಸರಕಾರ ಇದಕ್ಕೆ ಸ್ಪಂದಿಸಿಯೂ ಇರಲಿಲ್ಲ. ಆದರೆ ಆ ಬರಹಗಳು ಅಂದಿನ ಕಾಲಕ್ಕೆ ನಮ್ಮಂಥ ಯುವಕರಿಗೆ ಮಾರ್ಗದರ್ಶನವಾಯಿತು, ಪ್ರೇರಣೆ ನೀಡಿತು. ಅಸ್ಸಾಂನ ಟೀ ಪ್ಲಾಂಟರ್ ಇಪಿಜೀ ಅವರು 1964ರಲ್ಲಿ ಬರೆದ ʻವೈಲ್ಡ್ ಲೈಫ್ ಆಫ್ ಇಂಡಿಯಾʼ ದಲ್ಲಂತೂ ಅರಣ್ಯಗಳು, ವನ್ಯಜೀವಿಗಳ ನಾಶವಾಗುತ್ತಿರುವ ಬಗ್ಗೆ ವಿವರವಾಗಿ ಹೇಳಿದ್ದರು. ಜಾರ್ಜ್ ಶಾಲರ್ ಅಂಥ ಅಮೆರಿಕದ ವಿಜ್ಞಾನಿ 1964ರಲ್ಲಿಯೇ ಭಾರತಕ್ಕೆ ಬಂದು ಹುಲಿಗಳ ಅಧ್ಯಯನ ಮಾಡಿ ಭಾರತದ ವನ್ಯಜೀವಿ ಪರಿಸ್ಥಿತಿಯ ಬಗ್ಗೆ ಕಟುವಾಗಿ ಬರೆದುಕೊಂಡಿದ್ದರು.ನಮ್ಮಲ್ಲಿ ಹುಲಿಗಳ ಬಗ್ಗೆ ತಿಳಿವಳಿಕೆ ಪ್ರಾರಂಭಿಸಿದವರೂ ಅವರೇ. ವನ್ಯಜೀವಿಗಳ ಬಗ್ಗೆ ಆಸಕ್ತಿಯಿದ್ದ ಇಂದಿರಾ ಗಾಂಧಿಯವರು ಅಧಿಕಾರಕ್ಕೆ ಬಂದ ಮೇಲೆ ಸಾಕಷ್ಟು ಬೆಳವಣಿಗೆಗಳಾದವು. ವೈಲ್ಡ್ ಲೈಫ್ ಪ್ರೊಟೆಕ್ಷನ್ ಆ್ಯಕ್ಟ್ ಜಾರಿಗೆ ತಂದರು. ಅಭಯಾರಣ್ಯಗಳ ಸ್ಥಾಪನೆ, ಪ್ರಾಣಿ ಭೇಟಿ ನಿಷೇಧದಂಥ ಉತ್ತಮ ಕೆಲಸಗಳಾದವು.

ಅರಣ್ಯ ಇಲಾಖೆಗೆ ಕೆ.ಹೆಚ್. ಪಾಟೀಲರ ಸಾರಥ್ಯ ವಹಿಸಿದ ನಂತರ ಬೆಳವಣಿಗೆಗಳೇನು ?
ಕರ್ನಾಟಕದಲ್ಲಿ ದೇವರಾಜ ಅರಸು ಅವರ ಕಾಲದಲ್ಲಿ ಕೆ.ಹೆಚ್. ಪಾಟೀಲರಂಥ ಅರಣ್ಯ ಸಚಿವರು ಪರಿಣಾಮಕಾರಿ ಕೆಲಸ ಮಾಡಿದ್ದರು. 1973ರಲ್ಲಿ ಪ್ರಾಜೆಕ್ಟ್ ಟೈಗರ್, 1980ರಲ್ಲಿ ಅರಣ್ಯ ಸಂರಕ್ಷಣಾ ಕಾಯ್ದೆಗಳು ಬಂದಮೇಲೆ ಅಭಯಾಣ್ಯಗಳನ್ನು ಉಳಿಸುವ ಸಲುವಾಗಿ ಅನೇಕ ಯೋಜನೆಗಳನ್ನು ಕರ್ನಾಟಕದಲ್ಲಿ ಪಾಟೀಲರು ಜಾರಿಗೆ ತಂದರು. ಆಗ ಅರಣ್ಯ ಇಲಾಖೆ ರಾಜ್ಯ ಸೇವೆಯಾಗಿತ್ತು. ಅರಣ್ಯ ಇಲಾಖೆಯಲ್ಲಿ ನಮ್ಮ ರಾಜ್ಯದವರೇ ಅಧಿಕಾರಿಗಳಿದ್ದರು. ಅವರಿಗೆ ನೆಲದ ಅನುಭವವಿದ್ದುದರಿಂದ ವನ್ಯಜೀವಿಗಳು ಸುರಕ್ಷಿತವಾಗಿದ್ದವು.
ನಗರದೊಳಗೆ ಮೃಗಾಲಯಗಳನ್ನು ನಿರ್ಮಸುವುದು ಸರಿಯಾ? ನಿಮ್ಮ ಅನಿಸಿಕೆಯೇನು?
ನ್ಯೂಯಾರ್ಕ್ ಸಿಟಿಯೊಳಗೆಯೇ 5 ಮೃಗಾಲಯಗಳಿವೆ. ಮೃಗಾಲಯಗಳು ಇರಬೇಕಾದದ್ದು ನಗರದೊಳಗೆಯೇ. ಮೃಗಾಲಯಗಳ ಉದ್ದೇಶವೆಂದರೆ, ಅದನ್ನು ಅತ್ಯಾಧುನಿಕ ರೀತಿಯಲ್ಲಿ ನಿರ್ವಹಣೆ ಮಾಡಿ ಪ್ರಾಣಿಗಳನ್ನು ನೋಡಿಕೊಳ್ಳುವುದು. ಜನರಲ್ಲಿ ಪ್ರಾಣಿಗಳ ಸಂರಕ್ಷಣೆಯ ಬಗ್ಗೆ ತಿಳುವಳಿಕೆ ಮೂಡಿಸುವುದು ಹಾಗೂ ಮಕ್ಕಳಲ್ಲಿ ಪ್ರಾಣಿಗಳ ಬಗ್ಗೆ ತಿಳಿವಳಿಕೆ ನೀಡಲು ಮೃಗಾಲಯಗಳು ನಗರದೊಳಗಿದ್ದರೆ ಮಾತ್ರ ಸೂಕ್ತವೆನಿಸುತ್ತದೆ. ಪ್ರಾಣಿಗಳ ಬ್ರೀಡಿಂಗ್ ಒಂದು ಮುಂದುವರಿದ ವಿಜ್ಞಾನ. ಅದು ನಗರ ಪರಿಸರದಲ್ಲಿ ಇದ್ದರೆ ಮಾತ್ರವೇ ಉತ್ತಮ. ಆದರೆ ಇದರ ನಡುವೆ ಕಾಡಿನಲ್ಲಿ ನೈಸರ್ಗಿಕವಾಗಿ ಬದುಕಿರುವ ಪ್ರಾಣಿಗಳನ್ನು ನೋಡುವ ಆಸಕ್ತಿಯನ್ನೂ ಬೆಳೆಸಿಕೊಳ್ಳಬೇಕಷ್ಟೇ.
ದೇಶೀಯ ಮಾತ್ರವಲ್ಲದೆ ಅಂತಾರಾಷ್ಟ್ರೀಯ ಮಟ್ಟದಲ್ಲೂ ಮೃಗಾಲಯಗಳ ನಡುವೆ ಪ್ರಾಣಿಗಳ ವಿನಿಮಯ ನಡೆಯುತ್ತಿದೆ. ಈ ಬಗ್ಗೆ ನಿಮಗೇನೆನಿಸುತ್ತದೆ?
ಪ್ರಾಣಿಗಳ ವಿನಿಮಯ ವಿಚಾರ ಮೃಗಾಲಯಕ್ಕೆ ಸಂಬಂಧಪಟ್ಟದ್ದು. ಆದರೆ ಇದರ ಬಗ್ಗೆ ನನ್ನ ವೈಯಕ್ತಿಕ ಅಭಿಪ್ರಾಯವನ್ನು ಹೇಳುವುದಾದರೆ ಮೊದಲು ನಮ್ಮ ದೇಶದಲ್ಲಿರುವ ಪ್ರಾಣಿಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸಬೇಕು. ಅನ್ಯ ರಾಜ್ಯ, ದೇಶಗಳ ಪ್ರಾಣಿಗಳನ್ನು ತರುವುದಕ್ಕೆ ಹಾಕುವ ಶ್ರಮವನ್ನು ನಮ್ಮ ಮೃಗಾಲಯಗಳಲ್ಲಿರುವ ಪ್ರಾಣಿಗಳ ಕಡೆಗಿದ್ದರೆ ಇನ್ನಷ್ಟು ಅಭಿವೃದ್ಧಿಯಾಗುತ್ತಿತ್ತು. ಹಿಂದೆ ಪ್ರಾಣಿ ವಿನಿಮಯದ ಮೂಲಕ ಪೋಲಾರ್ ಬೇರನ್ನು ಮೈಸೂರು ಮೃಗಾಲಯಕ್ಕೆ ಕರೆತಂದು, ಏರ್ ಕಂಡೀಶನ್ ವ್ಯವಸ್ಥೆ ಕಲ್ಪಿಸಲಾಗಿತ್ತು. ಆದರೂ ಇಲ್ಲಿನ ವಾತಾವರಣಕ್ಕೆ ಹೊಂದಿಕೊಳ್ಳಲು ಸಾಧ್ಯವಾಗದೆ ಅದರ ಚರ್ಮ ಕಿತ್ತು ಬರುವಂತಾಗಿತ್ತು. ಇಂಥ ಸನ್ನಿವೇಶಗಳನ್ನು ನಮಗೇಕೆಬೇಕು ? ವಿದೇಶಗಳಿಗೆ ತೆರಳಿಯೇ ಅಲ್ಲಿನ ಪ್ರಾಣಿಗಳನ್ನು ಕಣ್ತುಂಬಿಕೊಳ್ಳಬಹುದು. ಅದು ಸಾಧ್ಯವಾಗಿಲ್ಲವೆಂದರೆ ಈಗಂತೂ ಸಮಾಜ ಅಭಿವೃದ್ಧಿಯಾಗಿದೆ. ಅಂಗೈಯಲ್ಲೇ ಇರುವ ಜಗತ್ತನ್ನು ಕಣ್ತೆರೆದು ನೋಡಿ. ಯೂಟ್ಯೂಬ್, ಡಿನ್ಸಿ, ಡಿಸ್ಕವರಿಯಂಥ ವಾಹಿನಿಗಳ ಮೂಲಕವೂ ಕುಳಿತಲ್ಲೇ ಬೇಕಾದಾಗೆಲ್ಲ ಜಗತ್ತನ್ನು ಸುತ್ತಾಡಿಬರಬಹುದು. ಪ್ರಾಣಿ ವಿನಿಮಯಕ್ಕೆ ಹಾಕುವ ದುಡ್ಡನ್ನು ಅಭಯಾರಣ್ಯಗಳ ವಿಸ್ತರಣೆ, ಪ್ರಾಣಿಗಳ ನೆಲವನ್ನು ಉಳಿಸಲು ಖರ್ಚು ಮಾಡಿದರೆ ಒಳ್ಳೆಯದು.

ಮಲೆ ಮಹದೇಶ್ವರ ಬೆಟ್ಟದಲ್ಲಿ ವಿಷ ಪ್ರಾಶನದಿಂದ ಒಂದೇ ದಿನ 5 ಹುಲಿಗಳು ಸಾವಿಗೀಡಾದವು. ಇದರ ಬಗ್ಗೆ ನೀವು ಏನು ಹೇಳುತ್ತೀರಿ?
ಮಲೆ ಮಹದೇಶ್ವರ ಬೆಟ್ಟದಲ್ಲಿ ಹುಲಿಗಳು ವಿಷಪ್ರಾಶನದಿಂದ ಸಾವಿಗೀಡಾದ ಸುದ್ದಿ ಅತೀವ ನೋವು ತಂದಿದೆ. ಇದು ಸರಕಾರದ ಮೇಲೆ ವನ್ಯಜೀವಿ ಸಂರಕ್ಷಣೆಯ ಜವಾಬ್ದಾರಿಯನ್ನು ಇನ್ನಷ್ಟು ಹೆಚ್ಚಿಸಿದೆ. ಕರ್ನಾಟಕ ರಾಜ್ಯ ವನ್ಯಜೀವಿ ಸಂರಕ್ಷಣಾ ಕಾಯಿದೆಯನ್ನು ಕಟ್ಟುನಿಟ್ಟಾಗಿ ಜಾರಿಗೆ ತಂದರೂ ಇಂಥ ಘಟನೆಗಳು ನಡೆಯುತ್ತಿರುವುದು ದುರ್ದೈವ.
ದಶಕಗಳ ಕಾಲ ನೀವು ಕಾಡಿನಲ್ಲಿ ಕಳೆದಿದ್ದೀರಿ. ಅಲ್ಲಿ ಮರೆಯಲಾಗದಂಥ ಘಟನೆಗಳ ಬಗ್ಗೆ ನೀವು ಪ್ರ.ಪ್ರ ಓದುಗರೊಂದಿಗೆ ಹಂಚಿಕೊಳ್ಳಬಹುದೇ?
ನಾನು ಹುಲಿಗಳನ್ನು ಹಿಡಿದು ಅವುಗಳಿಗೆ ರೇಡಿಯೋ ಕಾಲರ್ ಹಾಕಿಸುತ್ತಿದ್ದೆ. ಅವುಗಳನ್ನು ಹಿಡಿಯುವುದಕ್ಕೆ ನೇಪಾಳದಲ್ಲಿ ಅನುಸರಿಸುತ್ತಿದ್ದ ವಿಶಿಷ್ಟ ವಿಧಾನಗಳನ್ನೇ ಇಲ್ಲಿಯೂ ಅನುಸರಿಸಿದ್ದೆವು. ಮೂರು-ನಾಲ್ಕು ವರ್ಷಗಳ ಕಾಲ ಅವುಗಳ ಜತೆಗೆ ಓಡಾಡಿ, ಒಡನಾಡಿ, ಅದರ ಚಲನವಲನಗಳನ್ನು ನೋಡಿ ತಿಳಿದುಕೊಳ್ಳುವ ಅವಕಾಶ ನನಗೆ ಲಭ್ಯವಾಗಿತ್ತು. ರೇಡಿಯೋ ಟ್ರ್ಯಾಕ್ ಮಾಡಿದ್ದು, ಆ ದಿನಗಳ ಅನುಭವವಂತೂ ಮತ್ತೆ ಮತ್ತೆ ನೆನಪಾಗುತಿರುತ್ತದೆ.
ಅಭಯಾರಣ್ಯಗಳಲ್ಲಿ ಸಫಾರಿ ತೆರಳಲು ಆಸಕ್ತರ ಸಂಖ್ಯೆ ಏರಿಕೆಯಾಗುತ್ತಿದೆ. ಅಂಥವರಿಗೆ ನಿಮ್ಮ ಸಲಹೆಯೇನು?
ʻಸಫಾರಿʼ ಎಂಬ ಪದದ ಬಳಕೆಯೇ ನನಗೆ ಸೂಕ್ತವೆನಿಸಿಲ್ಲ.ಯಾಕೆಂದರೆ ಆಫ್ರಿಕಾದಲ್ಲಿ ಬೇಟೆಯಾಡಲು ಹೋಗುತ್ತಿರುವುದಕ್ಕೆ ಸಫಾರಿ ಎಂಬುದಾಗಿ ಹೇಳುತ್ತಾರೆ. ಆದರೆ ನಾವಿಲ್ಲಿ ಅದೇ ಪದವನ್ನು ಪ್ರಾಣಿಗಳನ್ನು ನೋಡಿ ಸಂಭ್ರಮಿಸುವುದಕ್ಕೆ ಇಟ್ಟುಕೊಂಡಿರುವುದು ವಿಪರ್ಯಾಸವೇ ಸರಿ. ನಮ್ಮಲ್ಲಿ ವನ್ಯ ಜೀವಿ ಅಭಯಾರಣ್ಯಗಳಿಗೆ ನ್ಯಾಷನಲ್ ಪಾರ್ಕ್ ಎಂದು ಅಸೂಕ್ತ ಹೆಸರಿಟ್ಟಿದ್ದಾರೆ. ಅವು ಪ್ರಾಣಿಗಳ ಆಶ್ರಯವಷ್ಟೇ. ಇಂಥ ಒಂದಷ್ಟು ಪದ ಬಳಕೆಗಳು ವೈಜ್ಞಾನಿಕವಾಗಿಲ್ಲ. ಇದರತ್ತ ಸರಕಾರ ಗಮನಹರಿಸಬೇಕು.

ಇದರ ಹೊರತಾಗಿಯೂ ಸಲಹೆಗಳನ್ನು ನೀಡುವ ಬಗ್ಗೆ…
ಸಲಹೆ ನೀಡುವುದು ದೊಡ್ಡದಲ್ಲ, ಅದನ್ನು ಪಾಲಿಸುವುದು ಮುಖ್ಯ. ಸಫಾರಿ ಹೋಗಲು ಬಯಸುವವರು ಮೊದಲು ತಿಳಿದಿರಬೇಕಾದ ಒಂದಷ್ಟು ವಿಚಾರಗಳಿವೆ. ನೀವು ಯಾಕಾಗಿ ಸಫಾರಿಗೆ ಹೋಗುತ್ತೀರಿ ಎಂಬುದನ್ನು ಮನದಟ್ಟುಮಾಡಿಕೊಳ್ಳಿ. ಅಲ್ಲಿಗೆ ಹೋದಾಗ ವನ್ಯ ಜೀವಿಗಳಿಗೆ, ಪ್ರಾಣಿಗಳಿಗೆ ನಿಮ್ಮಿಂದ ಯಾವುದೇ ತೊಂದರೆಯಾಗದಂತೆ ಕಾಳಜಿವಹಿಸಬೇಕು. ಇನ್ನು ಸರಕಾರದ ದೃಷ್ಟಿಯಿಂದ ಹೇಳುವುದಾದರೆ ಅಭಿವೃದ್ಧಿ ಆಗಲೇಬೇಕು. ಆದರೆ ಅದರ ಹೆಸರಿನಲ್ಲಿ ನೈಸರ್ಗಿಕತೆಯ ನಾಶವಾಗದಂತೆ ಗಮನಹರಿಸಬೇಕು.
ಯುವಜನತೆಯಲ್ಲಿ ವನ್ಯಜೀವಿ ಸಂರಕ್ಷಣೆಯ ಅರಿವು ಮೂಡಿಸುವುದು ಹೇಗೆ?
ಇಂದಿನ ಯುವ ಜನಾಂಗ ಪರಿಣಾಮಕಾರಿಯಾಗಿ ವನ್ಯಜೀವಿ ಸಂರಕ್ಷಣೆಯಲ್ಲಿ ತೊಡಗಿಸಿಕೊಂಡಿಲ್ಲ ಎಂಬುದು ನನ್ನ ಅಭಿಪ್ರಾಯ. ಬೆಂಗಳೂರಿನಲ್ಲಿ ಬೀದಿ ನಾಯಿಗಳಿಗೆ ಊಟ ಇಲ್ಲ ಅಂದರೆ ಊಟ ಹಾಕಲು ಲಕ್ಷಗಟ್ಟಲೆ ಜನ ಮುಂದೆ ಬರುತ್ತಾರೆ. ಬರಬಾರದೆಂದಲ್ಲ. ಆದರೆ ಅದೇ ಜನರು ವನ್ಯಜೀವಿ ಸಂರಕ್ಷಣೆಗೆ ವಿಚಾರದಲ್ಲಿ ಸುಮ್ಮನಾಗುತ್ತಿರುವುದೇಕೆ? ಯಾರೂ ಅದರ ಬಗ್ಗೆ ಗಮನಹರಿಸುವುದಿಲ್ಲವೇಕೆ? ಇಂದಿನ ಯುವಜನಾಂಗ ಸೋಶಿಯಲ್ ಮೀಡಿಯಾದಲ್ಲೇ ಕಳೆದುಹೋಗಿದ್ದಾರೆ. ಕಾಳಜಿಯಿರುವ ವನ್ಯಜೀವಿ ಸಂರಕ್ಷಕರೇ ಕಡಿಮೆಯಾಗಿದ್ದಾರೆ.