Monday, July 20, 2026
Monday, July 20, 2026

ಧರ್ಮದೊಂದಿಗೆ ಜ್ಞಾನ-ವಿಜ್ಞಾನದ ಬೆಳಕು

ಭೋವಿ ಸಮುದಾಯದ ಬದುಕನ್ನು ರೂಪಿಸುತ್ತಿರುವ ಶಕ್ತಿ, ಚಿತ್ರದುರ್ಗದ ಶಿವಯೋಗಿ ಸಿದ್ಧರಾಮೇಶ್ವರ ಮಹಾಸಂಸ್ಥಾನ ಭೋವಿ ಗುರುಪೀಠದ ಪೀಠಾಧ್ಯಕ್ಷರಾದ ಪೂಜ್ಯ ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಅವರು. ಈ ಮಹಾನ್ ಚೇತನದ 40ನೆಯ ಜನ್ಮವರ್ಧಂತಿಯನ್ನು ಜುಲೈ 18ರಂದು ಸಂಭ್ರಮದಿಂದ ಆಚರಿಸಗಿದ್ದು, ಅವರೊಂದಿಗೆ ಸಂದರ್ಶನ ಇಲ್ಲಿದೆ.

ಜನೋತ್ಸವದ ಕಾರ್ಯಕ್ರಮದ ವಿಶೇಷತೆಗಳ ಬಗ್ಗೆ ತಿಳಿಸಬಹುದೇ?

'ಜನೋತ್ಸವ' ಕಾರ್ಯಕ್ರಮವು ಜನರಿಗಾಗಿ ಮೀಸಲಾಗಿರುವ ಒಂದು ಬದ್ಧತೆಯ ವೇದಿಕೆ. ಈ ವೇದಿಕೆಯ ಮೂಲಕ ನಾವು ಸಮುದಾಯದ ಸರ್ವತೋಮುಖ ಅಭಿವೃದ್ಧಿಯನ್ನು ಗುರಿಯಾಗಿಸಿಕೊಂಡಿದ್ದೇವೆ. ಅದರಲ್ಲೂ ವಿಶೇಷವಾಗಿ, ನಮ್ಮ ಸಮುದಾಯ ಶೈಕ್ಷಣಿಕವಾಗಿ ಸುದೃಢವಾಗಬೇಕು ಎಂಬುದು ನಮ್ಮ ಪ್ರಮುಖ ಆಲೋಚನೆ. ವಿದ್ಯಾರ್ಥಿಗಳಲ್ಲಿ ಓದಿನ ಬಗ್ಗೆ ಉತ್ಸಾಹವನ್ನು ತುಂಬಲು ಮತ್ತು ಅವರನ್ನು ಪ್ರೋತ್ಸಾಹಿಸಲು ನಾವು ಕಳೆದ ಕೆಲವು ಸಮಯದಿಂದ ವಿಶೇಷ ಗಮನ ಹರಿಸುತ್ತಿದ್ದೇವೆ. ನಮ್ಮ ಕರೆಗೆ ಓಗೊಟ್ಟು ಸುಮಾರು 500 ರಿಂದ 600 ವಿದ್ಯಾರ್ಥಿಗಳು ಈಗಾಗಲೇ ಅರ್ಜಿ ಸಲ್ಲಿಸಿದ್ದಾರೆ, ಇವರೆಲ್ಲರೂ ತಮ್ಮ ಪರೀಕ್ಷೆಗಳಲ್ಲಿ ಶೇ. 90ಕ್ಕೂ ಹೆಚ್ಚು ಅಂಕಗಳನ್ನು ಗಳಿಸಿದವರು. ಅಂಥ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ, ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಹಂತದಲ್ಲಿ, ಹಾಗೆಯೇ ಡಿಗ್ರಿ ಮತ್ತು ಮಾಸ್ಟರ್ ಡಿಗ್ರಿಯಲ್ಲಿ ಗೋಲ್ಡ್ ಮೆಡಲ್ ಪಡೆದ ವಿದ್ಯಾರ್ಥಿಗಳನ್ನು ಮತ್ತು ಪಿಎಚ್‌ಡಿ ಪೂರ್ಣಗೊಳಿಸಿದ ಸಾಧಕರನ್ನು 'ಪ್ರತಿಭಾ ಪುರಸ್ಕಾರ' ನೀಡಿ ಗೌರವಿಸುತ್ತಿದ್ದೇವೆ. ಇತ್ತೀಚಿನ ದಿನಗಳಲ್ಲಿ ಆರ್ಯ-ಅಲೆಮಾರಿ ಸಮುದಾಯದ ಯುವಕ-ಯುವತಿಯರಿಗೆ ವಧು-ವರರನ್ನು ಹುಡುಕುವುದು ಪೋಷಕರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಅವರು ವರ್ಷಕ್ಕೊಮ್ಮೆ ಮಠಕ್ಕೆ ಬರುವ ಸಂದರ್ಭವನ್ನು ಬಳಸಿಕೊಂಡು, ಅವರಿಗೆ ಅನುಕೂಲವಾಗಲೆಂದು ನಾವು 'ಋಣಾನುಬಂಧ' ಎಂಬ ಹೆಸರಿನಲ್ಲಿ ವಧು-ವರರ ಮತ್ತು ಪೋಷಕರ ಸಮಾವೇಶವನ್ನು ಏರ್ಪಡಿಸುತ್ತಿದ್ದೇವೆ. ಇನ್ನು ಸಾಮಾಜಿಕ ಸೇವೆಯ ವಿಷಯಕ್ಕೆ ಬಂದರೆ, ನಮ್ಮ ಯುವ ಸ್ವಯಂಸೇವಕರು ಅತ್ಯಂತ ಉತ್ಸಾಹದಿಂದ ಭಾಗವಹಿಸುತ್ತಿರುವುದು ನನಗೆ ಹೆಮ್ಮೆ ತರುವ ವಿಷಯ. ಜಾತ್ಯತೀತವಾಗಿ ಸಮಾಜಕ್ಕೆ ಸೇವೆ ಸಲ್ಲಿಸಬೇಕು ಎಂಬ ನಿಟ್ಟಿನಲ್ಲಿ, ನಾವು ನಿರಂತರವಾಗಿ ರಕ್ತದಾನ ಶಿಬಿರಗಳನ್ನು ನಡೆಸಿಕೊಂಡು ಬಂದಿದ್ದೇವೆ. ನಮ್ಮ ಯುವ ಬಳಗದ ಪ್ರಯತ್ನದಿಂದ ಈಗಾಗಲೇ 10,000 ಯೂನಿಟ್‌ಗಿಂತಲೂ ಹೆಚ್ಚು ರಕ್ತವನ್ನು ಸಂಗ್ರಹಿಸಿ ಅಗತ್ಯವಿರುವವರಿಗೆ ತಲುಪಿಸಿದ್ದೇವೆ. ಇದರೊಂದಿಗೆ, ಆರೋಗ್ಯದ ಕಡೆಗೂ ವಿಶೇಷ ಗಮನ ನೀಡುತ್ತಿದ್ದೇವೆ. ಈಗಿನ ಕಾಲದಲ್ಲಿ ವೈದ್ಯರಲ್ಲಿ ಅರಿವು ಹೆಚ್ಚಾಗಿರುವುದರಿಂದ, ಅವರೇ ಮುಂದೆ ಬಂದು ಹೆಲ್ತ್ ಕ್ಯಾಂಪ್ ಮಾಡಿಕೊಡುತ್ತಿದ್ದಾರೆ.

ಇದನ್ನೂ ಓದಿ: ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿಯವರ 40ನೆಯ ಜನ್ಮವರ್ಧಂತಿ

ಸುದೀರ್ಘ ಪಯಣದಲ್ಲಿ ನಿಮಗೆ ಎದುರಾದ ಸವಾಲುಗಳು ಯಾವುವು ?

ಆರಂಭಿಕ ದಿನಗಳಲ್ಲಿ, ನಮ್ಮ ಸಮುದಾಯಕ್ಕೆ ಸಂಘಟನೆಯ ಮಹತ್ವವೇ ಗೊತ್ತಿರಲಿಲ್ಲ. ಮೂಢನಂಬಿಕೆ ಮತ್ತು ಕಂದಾಚಾರಗಳು ಸಮುದಾಯದ ಬದುಕಿನಲ್ಲಿ ಆಳವಾಗಿ ಮನೆಮಾಡಿದ್ದವು. ನಾವು ಧಾರ್ಮಿಕ ತಳಹದಿಯಲ್ಲಿ ಸಮುದಾಯವನ್ನು ಒಂದಾಗಿಸಲು ದೇವಸ್ಥಾನಗಳಿಗೆ ಹೋದರೂ, ಆರಂಭದಲ್ಲಿ ಜನ ಬರುತ್ತಿರಲಿಲ್ಲ. 'ನಮಗೆ ಗುರುಗಳೇ ಇಲ್ಲವಲ್ಲ ಸ್ವಾಮೀಜಿ' ಎಂದು ಜನ ಕೇಳುತ್ತಿದ್ದರು. ಅಂಥ ಕಠಿಣ ದಿನಮಾನಗಳಲ್ಲಿ ನಾವು ಧೃತಿಗೆಡದೆ 'ಮನೆ ಮನೆಗೆ ಸಿದ್ಧರಾಮೇಶ್ವರ', 'ಸಿದ್ಧರಾಮ ಪ್ರವೇಶ' ಮತ್ತು 'ಸಿದ್ಧರಾಮೇಶ್ವರ ಸಂದೇಶ ಯಾತ್ರೆ'ಯಂಥ ಶೀರ್ಷಿಕೆಗಳಡಿ ಸಮುದಾಯದ ಬಾಗಿಲನ್ನು ಬಡಿದೆವು. ಬಾಲ್ಯದಿಂದಲೇ ಸಮುದಾಯವನ್ನು ಧಾರ್ಮಿಕವಾಗಿ ಮತ್ತು ಸಾಮಾಜಿಕವಾಗಿ ಸಂಘಟಿಸಲು ಪ್ರಾರಂಭಿಸಿದ ಆ ಶ್ರಮವೇ ಇಂದು ಫಲ ನೀಡಿದೆ. ಆವತ್ತು ನಾವೇ ಮನೆ ಮನೆಗೆ ಹೋದರೂ ಯಾರೂ ಬರದಿದ್ದ ಪರಿಸ್ಥಿತಿಯಿಂದ, ಇಂದು ಒಂದು ವಾಟ್ಸಾಪ್ ಸಂದೇಶ ಅಥವಾ ಸಾಮಾನ್ಯ ಎಸ್‌ಎಮ್‌ಎಸ್ ಕಳುಹಿಸಿದರೆ ಲಕ್ಷಾಂತರ ಜನ ಸೇರುವ ಮಟ್ಟಿಗೆ ನಾವು ಬೆಳೆದಿದ್ದೇವೆ. ಮಠದಿಂದ ಯಾವುದೇ ಅಧಿಕೃತ ಕರೆ ಹೋಗದಿದ್ದರೂ, ಮಠದಲ್ಲಿ ಒಂದು ಉತ್ಸವವಿದೆ ಅಥವಾ ಕಾರ್ಯಕ್ರಮವಿದೆ ಎಂದು ತಿಳಿದರೆ ಸಾಕು, ರಾಜ್ಯಾದ್ಯಂತ ಮಾತ್ರವಲ್ಲದೆ ದೇಶದ 16ಕ್ಕೂ ಹೆಚ್ಚು ರಾಜ್ಯಗಳಿಂದ ಜನರು ಸ್ವಯಂಪ್ರೇರಿತರಾಗಿ ರಾಷ್ಟ್ರೀಯ ಭೋವಿ ಜನೋತ್ಸವಕ್ಕೆ ಆಗಮಿಸುತ್ತಾರೆ. ಆವತ್ತು ಸಂಘಟನೆ ಎಂದರೇನು ಎಂದು ಅರಿಯದಿದ್ದ ಯುವಕರು ನಮಗೆ ನೀಡಿದ ಬೆಂಬಲ ಮತ್ತು ಅಂದಿನಿಂದ ಇಂದಿನವರೆಗೂ ಹಿರಿಯರು ತೋರುತ್ತಿರುವ ಭಕ್ತಿ, ವಿಶ್ವಾಸ ಹಾಗೂ ಸಾಮಾಜಿಕ ನ್ಯಾಯ ಸಿಗುತ್ತದೆಂಬ ಶ್ರದ್ಧೆಯೇ ನಮ್ಮ ಶಕ್ತಿ. ಸಂಘಟನೆಯೇ ಒಂದು ದೊಡ್ಡ ಸವಾಲಾಗಿರುವಾಗ, ಅದನ್ನು ಇಷ್ಟು ಸಮರ್ಥವಾಗಿ ಕಟ್ಟಿದ್ದೇವೆ ಎಂಬ ತೃಪ್ತಿ ನಮಗಿದೆ.

ನೆಲ್ಸನ್ ಮಂಡೇಲಾ ಅಂತರರಾಷ್ಟ್ರೀಯ ದಿನ (7)

ನೀವು 'ಗಳಿಕೆ-ಬಳಕೆ-ಉಳಿಕೆ' ಎಂಬ ಸೂತ್ರ ನೀಡಿದ್ದೀರಿ. ಇದರ ಬಗ್ಗೆ ತಿಳಿಸಬಹುದೇ?

ಹಳ್ಳಿಗೆ ಏಕರಾತ್ರಿ, ಪಟ್ಟಣಕ್ಕೆ ಪಂಚರಾತ್ರಿ ಎಂದು ಸಂಚರಿಸುವಾಗ, ನಮ್ಮ ಸಮುದಾಯದ ಜನರು ದುಶ್ಚಟಗಳಿಗೆ ದಾಸರಾಗಿ, ಮೂಢನಂಬಿಕೆಗಳ ಸುಳಿಯಲ್ಲಿ ಸಿಲುಕಿ ತಮ್ಮ ನೈಜ ಅಭಿವೃದ್ಧಿಯನ್ನೇ ಮರೆತಿರುವುದನ್ನು ನಾನು ಹತ್ತಿರದಿಂದ ಕಂಡಿದ್ದೇನೆ. ಈ ಮೂಢನಂಬಿಕೆಯ ಧರ್ಮಾಚರಣೆಗಳು ಮತ್ತು ದುಶ್ಚಟಗಳು ಸಮುದಾಯಕ್ಕೆ ಅಂಟಿದ ಶಾಪವೆಂದು ನನಗೆ ಮನವರಿಕೆಯಾಯಿತು. ವಾಸ್ತವವಾಗಿ ನಮ್ಮವರು ಅಪ್ಪಟ ಕಾಯಕ ಜೀವಿಗಳು. ಸೂರ್ಯ ಉದಯಿಸುತ್ತಿದ್ದಂತೆ ಉಳಿ, ಸುತ್ತಿಗೆ, ಸಲಿಕೆಯಂಥ ತಮ್ಮ ಕಾಯಕದ ಪರಿಕರಗಳನ್ನು ಹಿಡಿದು ಕೆಲಸಕ್ಕೆ ಹೋಗಿ, ಸೂರ್ಯ ಮುಳುಗಿದ ನಂತರವೇ ಮನೆಗೆ ಮರಳುವ ಶ್ರಮಜೀವಿಗಳು ಅವರು. ಅವರ ಈ ಬದುಕಿಗೆ ಒಂದು ಆರ್ಥಿಕ ಶಿಸ್ತಿನ ಅಗತ್ಯವಿದೆ ಎಂಬುದನ್ನು ಮನಗಂಡೆ. ಜಾತ್ರೆಗಳು ನಮಗೆ ಸಾಲಗಾರರನ್ನಾಗಿ ಮಾಡುವ ಶೋಷಣೆಯ ಸಾಧನಗಳಾಗಬಾರದು, ಬದಲಾಗಿ ಅವು ಬದುಕು ಕಟ್ಟಿಕೊಳ್ಳುವ ವೇದಿಕೆಗಳಾಗಬೇಕು ಎಂದು ಅವರಿಗೆ ಅರ್ಥೈಸತೊಡಗಿದೆವು. ‘ಇನ್ನೊಬ್ಬರಿಗೆ ದಾನ ಮಾಡುವಷ್ಟು ಉದಾರತೆ ಇಲ್ಲದಿದ್ದರೂ ಪರವಾಗಿಲ್ಲ, ಆದರೆ ಕನಿಷ್ಠ ಪಕ್ಷ ಇನ್ನೊಬ್ಬರ ಮುಂದೆ ಸಾಲ ಕೇಳುವ ಪರಿಸ್ಥಿತಿ ಬಾರದಂತೆ ಬದುಕಿ’ ಎಂಬ ಸೂತ್ರವನ್ನು ನಾನು ಅವರ ಮುಂದೆ ಇಟ್ಟೆ. ನಮ್ಮ ಈ ಪ್ರಯತ್ನದ ಫಲವಾಗಿ, ಇಂದು ಅನೇಕ ಯುವಕರು ದುಶ್ಚಟಗಳಿಂದ ದೂರವಾಗಿದ್ದಾರೆ. ಎಷ್ಟೋ ಹಳ್ಳಿಗಳಲ್ಲಿ ಮೂಢನಂಬಿಕೆಯಿಂದ ನಡೆಯುತ್ತಿದ್ದ ಪ್ರಾಣಿ ಬಲಿಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಒಂದು ಕಾಲದಲ್ಲಿ ಸೂರು ಇಲ್ಲದಿದ್ದವರು ಇಂದು ತಾರಸಿ ಮನೆಗಳನ್ನು ನಿರ್ಮಿಸಿಕೊಂಡು, ತಮ್ಮ ಬದುಕನ್ನು ನೆಮ್ಮದಿಯ ತಾಣವನ್ನಾಗಿ ರೂಪಿಸಿಕೊಂಡಿದ್ದಾರೆ. ನಾನು ಅವರಿಗೆ ನಿರಂತರವಾಗಿ ಬೋಧಿಸುವ ಮುಖ್ಯ ವಿಷಯವೆಂದರೆ- 'ಗಳಿಕೆ, ಬಳಕೆ ಮತ್ತು ಉಳಿಕೆ'. ಎಷ್ಟು ದುಡಿದರೂ ಅದನ್ನು ಸರಿಯಾಗಿ ಉಳಿಸುವ ಅಭ್ಯಾಸ ಮಾಡಿಕೊಳ್ಳಿ. ಎಷ್ಟಕ್ಕೆ ಖರ್ಚು ಮಾಡಬೇಕು ಎಂಬುದನ್ನು ಅರಿತು ಸರಳವಾಗಿ ಹಾಗೂ ಸಹಜವಾಗಿ ಬದುಕಿ ಎಂದು ನಾನು ತಿಳಿಸುತ್ತೇನೆ. 'ಹನಿ ಹನಿ ಕೂಡಿದರೆ ಹಳ್ಳ' ಎಂಬಂತೆ, ಆರ್ಥಿಕ ಶಿಸ್ತನ್ನು ಮೈಗೂಡಿಸಿಕೊಂಡರೆ ನೀವು ಎಲ್ಲ ರೀತಿಯಲ್ಲೂ ಅಭಿವೃದ್ಧಿ ಹೊಂದಬಹುದು ಎಂಬ ಸತ್ಯವನ್ನು ಇಂದು ಅನೇಕರು ಅಳವಡಿಸಿಕೊಳ್ಳುತ್ತಿದ್ದಾರೆ.

ಮಕ್ಕಳನ್ನು ಶಾಲೆಗೆ ಕಳುಹಿಸಲು ಪೋಷಕರನ್ನು ಒಪ್ಪಿಸುವುದು ಎಷ್ಟು ಕಷ್ಟವಿತ್ತು?

ನಮ್ಮ ಸಮುದಾಯ ಶಿಕ್ಷಣದ ವಿಚಾರದಲ್ಲಿ ಬಹಳ ಹಿಂದುಳಿದಿತ್ತು. ನಾನು ವಿವಿಧ ಹಳ್ಳಿಗಳಿಗೆ ಪ್ರವಾಸ ಹೋದಾಗ, ಮನೆಗಳಿಗೆ ಬಾಗಿಲುಗಳೇ ಇಲ್ಲದಿರುವುದನ್ನು ಕಂಡು ಆಶ್ಚರ್ಯಚಕಿತನಾಗುತ್ತಿದ್ದೆ. ಈ ಬಗ್ಗೆ ಜನರನ್ನು ವಿಚಾರಿಸಿದಾಗ, ‘ನಾವು ಅರೆ ಅಲೆಮಾರಿಗಳಾಗಿರುವುದರಿಂದ ಕೆಲಸ ಹುಡುಕಿಕೊಂಡು ವಲಸೆ ಹೋಗಲೇಬೇಕು. ನಮ್ಮ ಮನೆಗಳಲ್ಲಿ ಬೆಲೆಬಾಳುವ ವಸ್ತುಗಳೇ ಇರುವುದಿಲ್ಲ, ಹೀಗಿರುವಾಗ ಬಾಗಿಲು ಹಾಕಿ ಕಳ್ಳತನದ ಭಯ ಪಡುವ ಅಗತ್ಯವೇನಿದೆ?’ ಎಂದು ಅವರು ತೀರಾ ಸರಳವಾಗಿ ಉತ್ತರಿಸುತ್ತಿದ್ದರು. ಆ ಸಂದರ್ಭದಲ್ಲಿ, ಸಮುದಾಯದ ಜನರಿಗೆ ನಾನು ಶಿಕ್ಷಣದ ಮಹತ್ವವನ್ನು ಮನವರಿಕೆ ಮಾಡಿಕೊಡಲು ನಿರ್ಧರಿಸಿದೆ. ‘ನೀವು ಪಡುತ್ತಿರುವ ಕಷ್ಟವನ್ನು ನಿಮ್ಮ ಮಕ್ಕಳು ಅನುಭವಿಸಬಾರದು. ಕೂಲಿಯ ಮಗನಾಗಿ ಹುಟ್ಟಿದವನು ಕೂಲಿಯಾಗಿಯೇ ಉಳಿಯಬಾರದು, ಕಾರ್ಮಿಕನ ಮಗ ಕೇವಲ ಕಾರ್ಮಿಕನಾಗಿ ಬದುಕು ಮುಗಿಸಬಾರದು’ ಎಂದು ಅವರಿಗೆ ಪದೇಪದೆ ಹೇಳುತ್ತಾ ಬಂದೆ. ಅವರ ಮಕ್ಕಳು ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕೆಂದರೆ, ಹತ್ತಿರದ ಸರಕಾರಿ ಶಾಲೆಗಳು, ವಸತಿ ನಿಲಯಗಳು, ಮಠದ ಆಶ್ರಯ ಅಥವಾ ಸರಕಾರದ ಶೈಕ್ಷಣಿಕ ಸೌಲಭ್ಯಗಳನ್ನು ಬಳಸಿಕೊಳ್ಳುವಂತೆ ನಾನು ಅವರನ್ನು ಪ್ರೇರೇಪಿಸಿದೆ. ಕಳೆದ 15 ವರ್ಷಗಳ ನಿರಂತರ ಪ್ರಯತ್ನ ಮತ್ತು ನಮ್ಮ ಸೇವೆಯ ಫಲವಾಗಿ, ಇಂದು ಅದ್ಭುತವಾದ ಬದಲಾವಣೆಯನ್ನು ನಾವು ಕಾಣುತ್ತಿದ್ದೇವೆ.

ಬಸವ ತತ್ತ್ವದ ವೈಚಾರಿಕತೆಯನ್ನು ಜನರಿಗೆ ತಲುಪಿಸುವ ಬಗ್ಗೆ ತಿಳಿಸಬಹುದಾ?

ಸಿದ್ಧರಾಮೇಶ್ವರರ ಬದುಕನ್ನು ನಾವು ಎರಡು ಮುಖ್ಯ ಆಯಾಮಗಳಲ್ಲಿ ಜನರಿಗೆ ಅರ್ಥೈಸುವ ಪ್ರಯತ್ನ ಮಾಡುತ್ತಿದ್ದೇವೆ. ಅವರು ಉತ್ತರಾರ್ಧದಲ್ಲಿ ನಾಥ ಪರಂಪರೆಯಲ್ಲಿದ್ದು, ನಂತರ ಶರಣ ಪರಂಪರೆಯ ವೈಚಾರಿಕ ಮತ್ತು ವೈಜ್ಞಾನಿಕ ಹಾದಿಯನ್ನು ಅಳವಡಿಸಿಕೊಂಡವರು. ಇಂದಿಗೆ 900 ವರ್ಷಗಳ ಹಿಂದೆಯೇ ಅವರು ರಚಿಸಿದ ವಚನಗಳನ್ನು ಅಧ್ಯಯನ ಮಾಡಿದರೆ, ಅದರಲ್ಲಿ ಇಂದಿನ ವಿಜ್ಞಾನಿಗಳು ಕೂಡ ಒಪ್ಪಿಕೊಳ್ಳುವಂಥ ಜ್ಞಾನ, ಸುಜ್ಞಾನ ಮತ್ತು ವೈಚಾರಿಕತೆ ಅಡಗಿರುವುದು ಸ್ಪಷ್ಟವಾಗುತ್ತದೆ. ಧರ್ಮದೊಳಗೆ ಜ್ಞಾನ ಮತ್ತು ವಿಜ್ಞಾನವಿದ್ದಾಗ ಮಾತ್ರ ಅದು ವೈಚಾರಿಕ ಧರ್ಮವಾಗಿ ಸಮಾಜಕ್ಕೆ ಬೆಳಕಾಗಬಲ್ಲದು. ಪ್ರತಿಯೊಂದು ವಚನವನ್ನು ಆಯ್ದು, ಅದರ ಹಿನ್ನೆಲೆಯಲ್ಲಿ ವಿದ್ವಾಂಸರು ಮತ್ತು ಅಧ್ಯಯನಾಸಕ್ತರಿಂದ ವಿಶ್ಲೇಷಣೆ ಮಾಡಿಸಿ, ಅದನ್ನು ಆಡಿಯೋ ರೂಪದಲ್ಲಿ ಮತ್ತು ಪುಸ್ತಕ ರೂಪದಲ್ಲಿ ಪ್ರಕಟಿಸುತ್ತಿದ್ದೇವೆ. ಇತ್ತೀಚೆಗೆ ನಡೆದ ನಮ್ಮ 'ದೀಕ್ಷಾ ರಜತ ಮಹೋತ್ಸವ'ದಲ್ಲಿ ಈ ಪ್ರಯತ್ನಕ್ಕೆ ಉತ್ತಮ ಚಾಲನೆ ಸಿಕ್ಕಿದ್ದು, ಇದೊಂದು ಯಶಸ್ವಿ ಪ್ರಯೋಗವಾಗಿ ಹೊರಹೊಮ್ಮಿದೆ. ಸದ್ಯ ನಮಗೆ ಸಿದ್ಧರಾಮೇಶ್ವರರ ಸುಮಾರು 2,000 ವಚನಗಳು ಲಭ್ಯವಿದ್ದು, ಇವುಗಳನ್ನೇ ಆಡಿಯೋ ಮತ್ತು ವಿಶ್ಲೇಷಣಾತ್ಮಕ ಪುಸ್ತಕಗಳ ಮೂಲಕ ಜನಸಾಮಾನ್ಯರಿಗೆ ತಲುಪಿಸುತ್ತಿದ್ದೇವೆ. ಈ ಮೂಲಕ ಧಾರ್ಮಿಕ ಮೌಢ್ಯಗಳನ್ನು ಹೋಗಲಾಡಿಸಿ, ವೈಜ್ಞಾನಿಕ ಮತ್ತು ವೈಚಾರಿಕ ಧರ್ಮದ ಅರಿವನ್ನು ಜನರ ಮನಸಿನಲ್ಲಿ ಬಿತ್ತುವ ಸಾರ್ಥಕ ಕೆಲಸದಲ್ಲಿ ನಾವು ನಿರತರಾಗಿದ್ದೇವೆ.

ಈ 40 ವರ್ಷಗಳನ್ನು ಹಿಂದಿರುಗಿ ನೋಡಿದಾಗ, ನಿಮಗೆ ಏನನಿಸುತ್ತದೆ?

ನನ್ನ ಬದುಕಿನ ಪಯಣವನ್ನು ಹಿಂದಿರುಗಿ ನೋಡಿದಾಗ, ಅವೆಲ್ಲವೂ ಒಂದು ವಿಸ್ಮಯದಂತೆ, ಒಂದು ಪವಾಡದಂತೆ ಕಾಣುತ್ತದೆ. ಆರಂಭದ ದಿನಗಳಲ್ಲಿ ’ಇವೆಲ್ಲಾ ಸಾಧ್ಯವೇ?’ ಎಂದು ನಾನು ಅಂದುಕೊಂಡಿದ್ದ ಅನೇಕ ವಿಷಯಗಳು ಇಂದು ನನಸಾಗುತ್ತಿವೆ. ಒಂದು ಸುಸಂಸ್ಕೃತ ಸಮಾಜವನ್ನು ಕಟ್ಟಲು ಸಾಧ್ಯವೇ ಎಂದು ಪ್ರಶ್ನಿಸಿಕೊಳ್ಳುತ್ತಿದ್ದೆ, ಅದು ಇಂದು ಸಾಧ್ಯವಾಗಿದೆ. ಒಂದು ಮಠವನ್ನು ಕಟ್ಟಿ ಬೆಳೆಸುವ ಕನಸು ನನಸಾಗಿದೆ. ಸಮುದಾಯದ ಶೈಕ್ಷಣಿಕ ಮಟ್ಟವನ್ನು ಎತ್ತರಕ್ಕೆ ಕೊಂಡೊಯ್ಯುವ ಗುರಿ ತಲುಪುವ ಹಾದಿಯಲ್ಲಿದೆ. ಇವೆಲ್ಲವೂ ಕೇವಲ ನನ್ನ ಪ್ರಯತ್ನದಿಂದ ಮಾತ್ರವಲ್ಲ, ಒಂದು ಸದುದ್ದೇಶದೊಂದಿಗೆ ಸಮುದಾಯವನ್ನು ಸಂಘಟಿಸಿದಾಗ, ಅದಕ್ಕೆ ಜನರು ನೀಡಿದ ಅಪಾರ ಬೆಂಬಲ ಮತ್ತು ಸ್ಪಂದನೆಯಿಂದ ಸಾಧ್ಯವಾಗಿದೆ. ನಾನು ಕೇವಲ 12-13ನೆಯ ವಯಸ್ಸಿನಲ್ಲಿ ಗುರುಕುಲಕ್ಕೆ ಬಂದಾಗ, ನನ್ನ ಬದುಕಿನ ಗುರಿ ಜನಸೇವೆಯೇ ಆಗಿತ್ತು. ಆ ಅರಿವು ಇಂದು 'ಜನಾರ್ದನ ಸೇವೆ'ಯಾಗಿ ರೂಪಾಂತರಗೊಂಡಿದೆ. ಸಮಾಜದ ಸೇವೆಯೇ ಭಗವಂತನ ಸೇವೆ ಎಂಬ ಭಾವನೆಯೊಂದಿಗೆ, ಸಾಮಾಜಿಕ ಮತ್ತು ಧಾರ್ಮಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಈ ಬದುಕನ್ನು ಅತ್ಯಂತ ತೃಪ್ತಿಯಿಂದ ಕಳೆಯುತ್ತಿದ್ದೇನೆ. ಆದರೆ, ಇದೇ ಅಂತಿಮವಲ್ಲ. ಇನ್ನೂ ಮಾಡಬೇಕಾದ ಕೆಲಸಗಳು, ಸಾಧಿಸಬೇಕಾದ ಗುರಿಗಳು ಅನೇಕವಿವೆ. ಸಮಾಜದ ಏಳಿಗೆಗಾಗಿ ನಾನು ಕಂಡಿರುವ ಮುಂದಿನ ಕನಸುಗಳನ್ನು ಶೀಘ್ರದಲ್ಲಿ ನನಸಾಗಿಸುವ ಬದ್ಧತೆಯೊಂದಿಗೆ ನನ್ನ ಸೇವಾ ಪಯಣವನ್ನು ಮುಂದುವರಿಸುತ್ತಿದ್ದೇನೆ.

ಸಮಾಜದಿಂದ ಏನು ನಿರೀಕ್ಷೆಯಿದೆ?

ಬಾಗಲಕೋಟೆ ಜಿಲ್ಲೆಯ ಮುದೋಳದ ಸತೀಶ್ ಪಂಡಿ ಎಂಬ ನಮ್ಮ ಸದ್ಭಕ್ತರು ನನಗೆ ನೀಡಿದ ಕಿವಿಮಾತು ಇಂದಿಗೂ ದಾರಿದೀಪವಾಗಿದೆ. ‘ಸ್ವಾಮೀಜಿ, ನಮ್ಮವರು ಲೇಬರ್ ಕ್ಲಾಸ್‌ನಿಂದ ಬಂದವರು, ಅವರ ಬಳಿ ಹಣ ಕೇಳಿದರೆ ಮಠಕ್ಕೆ ಯಾರೂ ಬರುವುದಿಲ್ಲ. ಆದ್ದರಿಂದ ಹಣವನ್ನು ಹೊರತುಪಡಿಸಿ, ಬೇರೆ ವಿಧದಲ್ಲಿ ಮಠ ಮತ್ತು ಸಮಾಜವನ್ನು ಕಟ್ಟುವ ಕೆಲಸ ಮಾಡಿ' ಎಂದಿದ್ದರು. ಅವರ ಮಾತುಗಳ ಸಾರವನ್ನು ಅಳವಡಿಸಿಕೊಂಡು, ಇಂದಿನವರೆಗೂ ಮಠದ ನಿರ್ಮಾಣಕ್ಕಾಗಿ ನಾವು ಎಲ್ಲೂ ದೇಣಿಗೆಯಾಗಲೀ, ದಾನವಾಗಲೀ ಒತ್ತಾಯಪೂರ್ವಕವಾಗಿ ಸಂಗ್ರಹಿಸಿಲ್ಲ. ಭಕ್ತರು ಸ್ವಯಂಪ್ರೇರಿತರಾಗಿ ಬಂದು ನೀಡಿದ್ದನ್ನು ಸ್ವೀಕರಿಸಿದ್ದೇವೆಯೇ ಹೊರತು, ಹಣವನ್ನೇ ಗುರಿಯಾಗಿಸಿಕೊಳ್ಳದೆ ಮಠವನ್ನು ಭೌತಿಕವಾಗಿ ಬೆಳೆಸಿದ್ದೇವೆ. ಸಂಘಟನಾತ್ಮಕವಾಗಿ ಮತ್ತು ಧಾರ್ಮಿಕವಾಗಿ ಕಾರ್ಯಕರ್ತರನ್ನು ರೂಪಿಸುತ್ತಾ, ಸಮಾಜ ಮತ್ತು ಮಠವನ್ನು ಸಮಾನಾಂತರವಾಗಿ ಕಟ್ಟುತ್ತಾ ಸಾಗಿದ್ದೇವೆ. ಮಠವು ಭಕ್ತರಿಗೆ ಒಂದು 'ಪ್ರಬುದ್ಧ ಕೇಂದ್ರ'ವಾಗಬೇಕು ಎಂಬುದು ನನ್ನ ಹಂಬಲ. ಅದಕ್ಕಾಗಿ ಅವರ ಮನಸ್ಥಿತಿಯನ್ನು ರೂಪಿಸುವ ಕೆಲಸವನ್ನು ಮಠದ ಆವರಣದಲ್ಲಿ ನಿರಂತರವಾಗಿ ಮಾಡುತ್ತಿದ್ದೇವೆ. ನಾನು ಇಲ್ಲಿಗೆ ಬಂದಾಗ ಇದು ಕೇವಲ ಒಂದು ಸಣ್ಣ ಗುಡಿಸಲು ಮಠವಾಗಿತ್ತು. ಆದರೆ ಇಂದು ಹತ್ತಾರು ಕೋಟಿ ರೂಪಾಯಿಗಳ ಅಭಿವೃದ್ಧಿ ಕಾಮಗಾರಿಗಳು ಇಲ್ಲಿ ನಡೆಯುತ್ತಿವೆ ಎಂದರೆ, ಅದು ಭಗವಂತನ ಕೃಪೆ ಮತ್ತು ಆಶೀರ್ವಾದವೇ ಹೊರತು ಮತ್ತೇನೂ ಅಲ್ಲ. ಭಕ್ತರ ಪ್ರೀತಿ, ವಿಶ್ವಾಸ ಮತ್ತು ನಾವು ಅನುಸರಿಸಿದ ಆರ್ಥಿಕ ಶಿಸ್ತಿನ ಮಾರ್ಗವೇ ಇಂದು ಮಠವನ್ನು ಈ ಎತ್ತರಕ್ಕೆ ಕೊಂಡೊಯ್ದಿದೆ.

ನೆಲ್ಸನ್ ಮಂಡೇಲಾ ಅಂತರರಾಷ್ಟ್ರೀಯ ದಿನ (8)

ಯುವಜನತೆಗೆ ನಿಮ್ಮ ಕಿವಿಮಾತು..

ಇತ್ತೀಚೆಗೆ ವಿಶ್ವೇಶ್ವರ ಭಟ್ಟರ ಜತೆಗೂಡಿ ಕೆಲವು ಪ್ರಗತಿಪರ ದೇಶಗಳಿಗೆ ಭೇಟಿ ನೀಡಿದಾಗ, ಅಲ್ಲಿನ ವ್ಯವಸ್ಥೆಯನ್ನು ಗಮನಿಸಿ ನನಗೆ ಒಂದು ಪ್ರಮುಖ ಸತ್ಯ ಅರಿವಾಯಿತು. ಸರಕಾರವು ಜನರಿಗೆ ಶಿಕ್ಷಣ ಮತ್ತು ಮೂಲಭೂತ ಸೌಕರ್ಯಗಳನ್ನು ಒದಗಿಸಬಹುದು, ಆದರೆ ಎಲ್ಲ ಉದ್ಯೋಗಗಳನ್ನು ಸರಕಾರವೇ ನೀಡಬೇಕು ಎಂದು ನಿರೀಕ್ಷಿಸುವುದು ಸರಿಯಲ್ಲ. ಶಿಕ್ಷಣ ನಮ್ಮನ್ನು ನಾವು ಬದಲಾಯಿಸಿಕೊಂಡು, ಪ್ರಬುದ್ಧರಾಗಿ ಬದುಕನ್ನು ರೂಪಿಸಿಕೊಳ್ಳುವ ಒಂದು ಸಾಧನ. ಭಾರತವನ್ನು ವಿಶ್ವಗುರುವಾಗಿಸಬೇಕಾದರೆ, ನಮ್ಮ ಯುವಕರು ಖುದ್ದು ಅವರೇ ಉದ್ಯೋಗಗಳನ್ನು ಸೃಷ್ಟಿಸುವ ಮಟ್ಟಕ್ಕೆ ಚಿಂತಿಸಬೇಕು. ಯಾವಾಗ ನಾವು ಉದ್ಯೋಗವನ್ನು ಹುಡುಕುವವರಾಗಿ ಉಳಿಯದೆ, ಉದ್ಯೋಗ ಸೃಷ್ಟಿಕರ್ತರಾಗುತ್ತೇವೆಯೋ, ಆಗ ನಮ್ಮ ದೇಶದ ಜಿಡಿಪಿ ಅಭೂತಪೂರ್ವವಾಗಿ ಬೆಳೆಯುತ್ತದೆ. ಹೀಗಾಗಿ, ಯುವಕರು ತಮ್ಮ ವಿದ್ಯಾಭ್ಯಾಸ ಮುಗಿದ ತಕ್ಷಣ ಉದ್ಯೋಗದ ಅರಸುವಿಕೆಯಲ್ಲಿ ಸಮಯ ವ್ಯರ್ಥ ಮಾಡದೆ, ಹೊಸ ಉದ್ಯೋಗಗಳನ್ನು ಸೃಷ್ಟಿಸುವುದು ಹೇಗೆ ಎಂದು ಆಲೋಚಿಸಬೇಕು. ಆ ದೃಷ್ಟಿಕೋನವನ್ನು ಮೈಗೂಡಿಸಿಕೊಂಡರೆ ಮಾತ್ರ ಇಡೀ ನಮ್ಮ ಯುವ ಸಮೂಹವನ್ನು ನಿರುದ್ಯೋಗದ ಸಮಸ್ಯೆಯಿಂದ ಮುಕ್ತಗೊಳಿಸಲು ಸಾಧ್ಯ. ಇಂಥ ಕ್ರಿಯಾಶೀಲ ಚಿಂತನೆಯೇ ನವ ಭಾರತ ನಿರ್ಮಾಣಕ್ಕೆ ದಾರಿಯಾಗಬಲ್ಲದು ಎಂಬುದು ನನ್ನ ದೃಢ ನಂಬಿಕೆ.

ಮಠದ ಮುಂದಿನ ಯೋಜನೆಗಳು ಏನೇನು?

ನಮ್ಮ ಭವಿಷ್ಯದ ದೃಷ್ಟಿಕೋನವು ಅತ್ಯಂತ ಸ್ಪಷ್ಟವಾಗಿದೆ. ಈ ಮಠವನ್ನು ಕೇವಲ ಧಾರ್ಮಿಕ ಕೇಂದ್ರವನ್ನಾಗಿ ಮಾತ್ರವಲ್ಲದೆ, ಒಂದು ಸಂಪೂರ್ಣ ಸಾಕ್ಷರತಾ ಕೇಂದ್ರವಾಗಿ ಮತ್ತು ಶೈಕ್ಷಣಿಕ ಕೇಂದ್ರವನ್ನಾಗಿ ರೂಪಿಸಬೇಕೆಂಬುದು ನಮ್ಮ ಪ್ರಮುಖ ಆಲೋಚನೆಯಾಗಿದೆ. ಸಮಾಜದ ದಲಿತರು ಮತ್ತು ಬಡವರ್ಗದ ಜನರಿಗೆ ವಿಶೇಷ ಶಿಕ್ಷಣವನ್ನು ಒದಗಿಸುವುದರ ಮೂಲಕ, ನಮ್ಮ ದೇಶವನ್ನು ಒಂದು ಸಾಕ್ಷರ ಮತ್ತು ಪ್ರಬುದ್ಧ ರಾಷ್ಟ್ರವನ್ನಾಗಿ ಕಟ್ಟಲು ನಾವು ಬದ್ಧರಾಗಿದ್ದೇವೆ. ಈ ಶೈಕ್ಷಣಿಕ ಚಿಂತನೆಯು ಶಿಕ್ಷಣದ ಬೆಳಕನ್ನು ಪ್ರತಿ ಮನೆಗೂ ತಲುಪಿಸುವ ನಮ್ಮ ಗುರಿಯ ಭಾಗವಾಗಿದೆ. ಅದೇ ರೀತಿ, ಸಮಾಜವನ್ನು ಆವರಿಸಿರುವ ಮೂಢನಂಬಿಕೆ ಮತ್ತು ಕಂದಾಚಾರಗಳನ್ನು ಹೋಗಲಾಡಿಸಲು ನಾವು ವೈಚಾರಿಕ ಸಾಹಿತ್ಯವನ್ನು ಸೃಷ್ಟಿಸುತ್ತಿದ್ದೇವೆ. ಸಮಾಜದ ಒಗ್ಗಟ್ಟು ಮತ್ತು ಏಕತೆ ಇದ್ದರೆ ಮಾತ್ರ ಸರಕಾರದ ಗಮನ ಸೆಳೆಯಲು ಮತ್ತು ಸಮುದಾಯದ ಹಕ್ಕುಗಳನ್ನು ಪಡೆಯಲು ಸಾಧ್ಯ ಎಂಬುದು ನಮ್ಮ ನಂಬಿಕೆ. ಆದ್ದರಿಂದ, ಸಮುದಾಯದ ಬಲವನ್ನು ಇನ್ನಷ್ಟು ಹೆಚ್ಚಿಸಿ, ಅವರನ್ನು ಸಂಘಟಿತ ಶಕ್ತಿಯನ್ನಾಗಿ ಮಾಡುವುದು ನಮ್ಮ ಮತ್ತೊಂದು ಉದ್ದೇಶವಾಗಿದೆ. ಧಾರ್ಮಿಕ ಆಸಕ್ತಿ ಉಳ್ಳವರಿಗೆ ಸೂಕ್ತ ಸಂಸ್ಕಾರವನ್ನು ನೀಡುವ ಜತೆಗೆ, ಸಮುದಾಯವನ್ನು ಕೇವಲ ತಮ್ಮ ಸಾಂಪ್ರದಾಯಿಕ ಕುಲವೃತ್ತಿಗೆ ಸೀಮಿತಗೊಳಿಸದೆ, ಆಧುನಿಕ ಜಗತ್ತಿನ ಸವಾಲುಗಳನ್ನು ಎದುರಿಸುವಂತೆ ಸಿದ್ಧಪಡಿಸಬೇಕಿದೆ. ಮುಂದಿನ ದಿನಗಳಲ್ಲಿ ಮಠದ ವತಿಯಿಂದಲೇ ಒಂದು 'ಔದ್ಯೋಗಿಕ ಕ್ರಾಂತಿ'ಯನ್ನು ಮಾಡುವ ಆಲೋಚನೆಯನ್ನು ನಾವು ಹೊಂದಿದ್ದೇವೆ. ನಮ್ಮ ಯುವಕರು ಸಾಂಪ್ರದಾಯಿಕ ಕೆಲಸಗಳಿಂದ ಹೊರಬಂದು, ಹೊಸ ಹೊಸ ಉದ್ಯಮಗಳನ್ನು ಸ್ಥಾಪಿಸಿ, ಆರ್ಥಿಕವಾಗಿ ಸ್ವಾವಲಂಬಿಗಳಾಗಬೇಕು ಎಂಬುದು ನಮ್ಮ ಬಯಕೆ. ಈ ಮೂಲಕ ಶೈಕ್ಷಣಿಕ, ಸಾಮಾಜಿಕ ಮತ್ತು ಆರ್ಥಿಕ ಕ್ಷೇತ್ರಗಳಲ್ಲಿ ಸಮಗ್ರ ಬದಲಾವಣೆಯನ್ನು ತರುವ ಮೂಲಕ ಮಠವು ಸಮಾಜದ ಏಳಿಗೆಯ ದೃಢವಾದ ಅಡಿಪಾಯವಾಗಲಿದೆ.

Pramod Mohan Hegde

Pramod Mohan Hegde

A media professional with four years of experience in journalism, having worked with leading Kannada publications such as Vistara, Vijayavani, and Vijaya Karnataka as a cinema journalist. Also an author with a keen interest in travel and cinema. Currently serving as Senior Sub Editor at Pravasi Prapancha, contributing editorial expertise and engaging storytelling to the media industry.

ಟ್ರೆಕ್ಕಿಂಗ್‌ ಮಾಡುವುದೆಂದರೆ ನನಗಿಷ್ಟ: ರಂಜನಿ ರಾಘವನ್‌

Read Previous

ಟ್ರೆಕ್ಕಿಂಗ್‌ ಮಾಡುವುದೆಂದರೆ ನನಗಿಷ್ಟ: ರಂಜನಿ ರಾಘವನ್‌

ಅವಿಸ್ಮರಣೀಯ ಅನುಭವ ನೀಡಿದ ಮಾಸೈ ಮರಾ ; ರಮೇಶ್ ಅರವಿಂದ್

Read Next

ಅವಿಸ್ಮರಣೀಯ ಅನುಭವ ನೀಡಿದ ಮಾಸೈ ಮರಾ ; ರಮೇಶ್ ಅರವಿಂದ್