Tuesday, February 10, 2026
Tuesday, February 10, 2026

ಜಾತ್ರಾ ಮಹೋತ್ಸವದ ಮೂಲಕ ಸಮ ಸಮಾಜವನ್ನು ಕಟ್ಟುವ ಪ್ರಯತ್ನದಲ್ಲಿದ್ದೇವೆ… - ಶ್ರೀ ಪ್ರಭು ನೀಲಕಂಠ ಮಹಾಸ್ವಾಮಿಗಳು

ಬೆಳಗಾವಿಯ ಹೊಸೂರ-ಬೈಲಹೊಂಗಲದ ಮೂರು ಸಾವಿರ ಮಠವು ಇದೀಗ ಕಂಗೊಳಿಸುತ್ತಿದೆ. ಅಸಂಖ್ಯಾತ ಭಕ್ತರು ಮಠದತ್ತ ಮುಖ ಮಾಡಿದ್ದಾರೆ. ಶ್ರೀ ನೀಲಕಂಠ ಮಹಾಶಿವಯೋಗೀಶ್ವರರ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲು ದೇಶ-ವಿದೇಶಗಳಲ್ಲಿ ನೆಲೆಸಿರುವ ಮಠದ ಸಮಸ್ತ ಭಕ್ತರು ಕಾತರರಾಗಿದ್ದಾರೆ. ಈಗಾಗಲೇ ಜಾತ್ರಾ ಮಹೋತ್ಸವದ ತಯಾರಿ ಕೆಲಸಗಳು ಆರಂಭವಾಗಿವೆ. ಈ ವಿಶೇಷ ಸಂದರ್ಭದಲ್ಲಿ ಪ್ರವಾಸಿ ಪ್ರಪಂಚ ಪತ್ರಿಕೆಯು ಮೂರು ಸಾವಿರ ಮಠದ ಪೀಠಾಧಿಪತಿಗಳಾದ ಶ್ರೀ ಪ್ರಭು ನೀಲಕಂಠ ಮಹಾಸ್ವಾಮಿಗಳನ್ನು ಮಾತಿಗೆಳೆದಿದೆ.

ಮಹಾಶಿವಯೋಗೀಶ್ವರರ ಜಾತ್ರೆಗೆ ಅದರದ್ದೇ ಆದ ಮಹತ್ವವಿದೆ. ಜಾತ್ರೆಯ ಹಿನ್ನೆಲೆ ಏನು?

ನಮ್ಮ ಬೈಲಹೊಂಗಲದ ಮೂರು ಸಾವಿರ ಮಠಕ್ಕೆ ಭವ್ಯ ಪರಂಪರೆ ಮತ್ತು ಇತಿಹಾಸವಿದೆ. ಮಠವು ಕಳೆದ ಒಂಬೈನೂರು ವರ್ಷಗಳಲ್ಲಿ ಸಾಕಷ್ಟು ಸಮಾಜಪರ ಕೆಲಸಗಳನ್ನು ಮಾಡಿಕೊಂಡು ಬಂದಿದೆ. ಭಕ್ತರ ನಂಬಿಕೆ ಉಳಿಸಿಕೊಳ್ಳುತ್ತಾ, ಬಡ ಮತ್ತು ಮಧ್ಯಮ ವರ್ಗದ ಮಕ್ಕಳಲ್ಲಿ ಶೈಕ್ಷಣಿಕ ಕ್ರಾಂತಿಯ ಬೀಜವನ್ನು ಬಿತುತ್ತಾ ಮೂರು ಸಾವಿರ ಮಠವು ಇಂದು ಜಿಲ್ಲೆಯಷ್ಟೇ ಅಲ್ಲ. ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಹೆಸರುವಾಸಿಯಾಗಿದೆ. ಘನ ಪರಂಪರೆಯನ್ನು ಹೊಂದಿರುವ ಈ ಮಠದ ಮೂಲ ಸ್ಥಾಪಕರು ನೀಲಕಂಠ ಮಹಾಶಿವಯೋಗೀಶ್ವರರು. ಅವರು ಉತ್ತರ ಭಾರತದಿಂದ ಈ ಕಡೆಗೆ ಬಂದವರು ಎಂಬ ಮಾಹಿತಿಯಿದೆ. ಹಲವರು ಹೇಳುವ ಪ್ರಕಾರ ಹಿಮಾಲಯದಲ್ಲಿ ತಪಸ್ವಿಗಳಾಗಿದ್ದ ಅವರು ದೇಶದಾದ್ಯಂತ ಸಂಚರಿಸಿ ಕೊನೆಗೆ ಬೈಲಹೊಂಗಲದ ಕಡೆಗೆ ಬಂದರು ಎನ್ನಲಾಗುತ್ತದೆ. ಶಿವಯೋಗಿಗಳು ಬಹುದೊಡ್ಡ ತಪಸ್ವಿಗಳು. ವಾಕ್‌ ಸಿದ್ದಿ ಪುರುಷರು. ಅವರು ತಮ್ಮ ಹಸ್ತ ಚಾಚಿದರೆ ಎಲ್ಲ ರೀತಿಯಲ್ಲೂ ಶುಭವಾಗುತ್ತಿತ್ತು ಎನ್ನಲಾಗುತ್ತದೆ. ಲಿಂಗಪೂಜಾ ನಿಷ್ಠರಾಗಿದ್ದ ಅವರು ಇಲ್ಲಿ ವಿರಕ್ತ ಮಠವನ್ನು ಸ್ಥಾಪಿಸುವ ಮೂಲಕ ಮಠ ಪರಂಪರೆಗೆ ಭದ್ರ ಬುನಾದಿಯನ್ನು ಹಾಕಿದರು. ಆರು ಶಾಖಾ ಮಠಗಳನ್ನು ಸ್ಥಾಪಿಸಿ ಧಾರ್ಮಿಕ ಮತ್ತು ಶೈಕ್ಷಣಿಕ ಕ್ರಾಂತಿಗೆ ಮಹಾಶಿವಯೋಗೀಶ್ವರರು ಮುನ್ನುಡಿ ಬರೆದರು. ಈ ಮೂರು ಸಾವಿರ ಮಠಕ್ಕೆ ಕಾಯಕಲ್ಪ ನೀಡಿ ಇದನ್ನು ಬೆಳಗಿದವರೇ ಅವರು. ಹಾಗಾಗಿ ಅವರನ್ನು ಮಠದ ಮೂಲ ಕರ್ತೃ ಎನ್ನಲಾಗುತ್ತದೆ. ಅವರು ಲಿಂಗೈಕ್ಯರಾದ ನಂತರ ಈ ಮಠಕ್ಕೆ ಸಾಕಷ್ಟು ಪೀಠಾಧಿಪತಿಗಳು ಬಂದರು. ಆದರೆ ಅವರ ಬಗ್ಗೆ ಅಧಿಕೃತ ಮಾಹಿತಿಯಿಲ್ಲ. ಈ ಮಠದ 16ನೆಯ ಪೀಠಾಧಿಕಾರಿಗಳಾಗಿ ಬಂದವರು ಪೂಜ್ಯ ಶ್ರೀ ಗಂಗಾಧರ ಮಹಾಸ್ವಾಮಿಗಳು. ಅವರು ಇಪ್ಪತ್ತೈದು ವರ್ಷಗಳು ಮಠದ ನೇತೃತ್ವವನ್ನು ವಹಿಸಿಕೊಂಡು ಮಠದ ಪರಂಪರೆಗೆ ಹೊಸ ಭಾಷ್ಯ ಬರೆದರು. ನೀಲಕಂಠ ಮಹಾಶಿವಯೋಗೀಶ್ವರರ ಪರಮಭಕ್ತರಾಗಿದ್ದ ಗಂಗಾಧರ ಮಹಾಸ್ವಾಮಿಗಳು ಶೈಕ್ಷಣಿಕ ಕ್ಷೇತ್ರಕ್ಕೆ ಅನನ್ಯ ಕೊಡುಗೆ ನೀಡಿದರು. ಹತ್ತಾರು ಶಾಲೆ,ಕಾಲೇಜುಗಳನ್ನು ನಿರ್ಮಿಸಿ ಸಾವಿರಾರು ಬಡ ಮಕ್ಕಳಿಗೆ ವಿದ್ಯಾದಾನ ಮಾಡಿದರು. ಮಹಾಶಿವಯೋಗೀಶ್ವರರ ಸಾಧನೆ ಮತ್ತು ಕೆಲಸಗಳನ್ನು ಮುಂದಿನ ತಲೆಮಾರುಗಳಿಗೆ ತಲುಪಿಸುವ ಸದುದ್ದೇಶದೊಂದಿಗೆ ಮೊದಲ ಬಾರಿಗೆ ಅವರ ಸ್ಮರಣಾರ್ಥವಾಗಿ ಶ್ರೀ ನೀಲಕಂಠ ಮಹಾಶಿವಯೋಗೀಶ್ವರರ ಜಾತ್ರಾ ಮಹೋತ್ಸವವನ್ನು ಆರಂಭಿಸಿದ್ದು ಪೂಜ್ಯ ಗಂಗಾಧರ ಮಹಾಸ್ವಾಮಿಗಳು. ಅವರು ಕಾಲವಾಗುವವರೆಗೂ ಅವರದ್ದೇ ದಿವ್ಯ ನೇತೃತ್ವದಲ್ಲಿ ಜಾತ್ರಾ ಮಹೋತ್ಸವವು ಅದ್ಧೂರಿಯಾಗಿ ನಡೆಯುತ್ತಿತ್ತು. ಅವರು ಲಿಂಗೈಕ್ಯರಾದ ನಂತರ ಮಠದ ಉತ್ತರಾಧಿಕಾರಿಯಾಗಿ ನಾನು ಮುಂದುವರಿಯುತ್ತಿದ್ದೇನೆ. ಗಂಗಾಧರ ಮಹಾಸ್ವಾಮಿಗಳ ಆಶಯದಂತೆಯೇ ಜಾತ್ರಾ ಮಹೋತ್ಸವವನ್ನು ಬಹಳ ಅಚ್ಚುಕಟ್ಟಾಗಿ ಆಯೋಜಿಸುತ್ತಾ ಬರುತ್ತಿದ್ದೇನೆ.

Untitled design (8)

ನೀವು ಮಠದ ಪೀಠಾಧಿಕಾರಿಗಳಾಗಿ ಬಂದ ನಂತರ ಜಾತ್ರಾ ಮಹೋತ್ಸವದಲ್ಲಾದ ಬದಲಾವಣೆಗಳು?

ನೀಲಕಂಠ ಮಹಾಶಿವಯೋಗೀಶ್ವರರು ಲಿಂಗೈಕ್ಯರಾದ ನಂತರ ಸರಿ ಸುಮಾರು ಹದಿನೈದು ಪೀಠಾಧಿಕಾರಿಗಳು ಈ ಮಠದ ನೇತೃತ್ವವನ್ನು ವಹಿಸಿಕೊಂಡು ಮುನ್ನೆಡಿಸಿದರು ಎನ್ನಲಾಗುತ್ತದೆ. ಆದರೆ ಆ ಪೀಠಾಧಿಕಾರಿಗಳ ಬಗ್ಗೆ ಈವರೆಗೆ ಯಾವುದೇ ಸ್ಪಷ್ಟ ಮಾಹಿತಿ ದೊರೆತಿಲ್ಲ. ಆದರೆ 16ನೆಯ ಪೀಠಾಧಿಕಾರಿಗಳಾಗಿ ಬಂದ ಪೂಜ್ಯ ಶ್ರೀ ಗಂಗಾಧರ ಮಹಾಸ್ವಾಮಿಗಳು ಮಠವನ್ನು ಪುನರ್‌ ನಿರ್ಮಾಣ ಮಾಡಿದರು. ಕಾಲು ಶತಮಾನದಲ್ಲಿ ಸಾಕಷ್ಟು ಬದಲಾವಣೆಗಳನ್ನು ತಂದರು. ಮೂವತ್ತಕ್ಕೂ ಹೆಚ್ಚು ವಿದ್ಯಾ ಸಂಸ್ಥೆಗಳನ್ನು ಸ್ಥಾಪಿಸುವ ಮೂಲಕ ಶಿಕ್ಷಣದ ಹರಿಕಾರ ಎನಿಸಿಕೊಂಡರು. ಮಹಾಶಿವಯೋಗೀಶ್ವರರು ತೋರಿಸಿಕೊಟ್ಟ ಹಾದಿಯಲ್ಲಿಯೇಢ ನಡೆದ ಗಂಗಾಧರ ಮಹಾಸ್ವಾಮಿಗಳು ಆರಂಭದಿಂದಲೂ ಈ ಜಾತ್ರಾ ಮಹೋತ್ಸವವನ್ನು ನಡೆಸಿಕೊಂಡು ಬಂದರು. ಜಾತ್ರೆಯ ಮೂಲಕ ನೂತನ ರಥೋತ್ಸವ, ಸಾಮೂಹಿಕ ವಿವಾಹ ಮತ್ತು ಇನ್ನು ಹತ್ತು ಹಲವು ಕಾರ್ಯಕ್ರಮಗಳ ಮೂಲಕ ನಾಡಿನ ಗಮನಸೆಳೆದರು. ಅವರು ಲಿಂಗೈಕ್ಯರಾದ ನಂತರ ಇಡೀ ಭಕ್ತ ಸಮೂಹ ನನ್ನನ್ನು ಈ ಮಠದ ಪೀಠಾಧಿಕಾರಿಯನ್ನಾಗಿ ಆಯ್ಕೆ ಮಾಡಿತು. ಕಳೆದ ಎಂಟು ವರ್ಷಗಳಿಂದ ನಾನು ಜಾತ್ರೆಯಲ್ಲಿ ಸಾಕಷ್ಟು ಬದಲಾವಣೆಗಳನ್ನು ತಂದಿದ್ದೇನೆ. ಶೈಕ್ಷಣಿಕ ಸಮ್ಮೇಳನ ಮತ್ತು ಯುವಕರಲ್ಲಿ ಜಾಗೃತಿ ಮೂಡಿಸಲು ಯುವ ಸಮ್ಮೇಳನವನ್ನು ನಿರಂತರವಾಗಿ ಆಯೋಜಿಸುತ್ತಿದ್ದೇವೆ. ರಾಷ್ಟ್ರ ಮತ್ತು ಅಂತಾರಾಷ್ಟ್ರೀಯಮಟ್ಟದಲ್ಲಿ ಹೆಸರುವಾಸಿಯಾಗಿರುವ ಸ್ಫೂರ್ತಿದಾಯಕ ಭಾಷಣಕಾರರನ್ನು ಇಲ್ಲಿಗೆ ಕರೆಸಿ ನಮ್ಮ ಯುವಕರಲ್ಲಿ ಅರಿವಿನ ಬೀಜ ಬಿತ್ತುವ ಪ್ರಯತ್ನ ಮಾಡುತ್ತಿದ್ದೇವೆ. ಬಹಳ ಮುಖ್ಯವಾಗಿ ಜನ ಜಾಗೃತಿ ಪಾದಯಾತ್ರೆಯ ಮೂಲಕ ಊರಿನ ಪ್ರತಿ ಮನೆಗೂ ಭೇಟಿಕೊಟ್ಟು ಧರ್ಮ ಜಾಗೃತಿ ಮೂಡಿಸಲಾಗುತ್ತಿದೆ. ಆ ನೆಪದಲ್ಲಿ ರುದ್ರಾಕ್ಷಿಧಾರಣೆ, ಭಸ್ಮ ವಿತರಣೆ ಮಾಡುತ್ತಿದ್ದೇವೆ. ಊರು,ಕೇರಿ,ಜಾತಿ,ಲಿಂಗ ಮತ್ತು ದರ್ಮ ಎಂಬ ಬೇಧ ಭಾವವಿಲ್ಲದೆ ಪ್ರತಿಯೊಬ್ಬರ ಮನೆಗೂ ಭೇಟಿ ನೀಡುವ ಮೂಲಕ ವಿಶೇಷ ಸಂಚಲನ ಸೃಷ್ಟಿಸಲಾಗಿದೆ. ನೀಲಕಂಠ ಮಹಾಶಿವಯೋಗೀಶ್ವರರ ಜಾತ್ರಾ ಮಹೋತ್ಸವವೆಂದರೆ ಅದು ಸಾಮರಸ್ಯದ ಜಾತ್ರೆ ಎಂಬಷ್ಟರಮಟ್ಟಿಗೆ ಖ್ಯಾತಿಪಡೆದಿದೆ.

ಪ್ರತಿ ಆಚರಣೆ ಮತ್ತು ಸಂಪ್ರದಾಯಕ್ಕೂ ಅದರದ್ದೇ ಆದ ವಿಶೇಷತೆಯಿದೆ. ನೀಲಕಂಠ ಶಿವಯೋಗೀಶ್ವರರ ಜಾತ್ರೆಯ ವಿಶೇಷತೆಯೇನು?

ಸಕಲ ಧರ್ಮೀಯ ಜನರು ಈ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಳ್ಳುತ್ತಾರೆ ಅದೇ ಪ್ರಮುಖ ಆಕರ್ಷಣೆ. ಹನ್ನೊಂದು ದಿನಗಳು ನಡೆಯುವ ಈ ಜಾತ್ರೆಯ ಪಾದಯಾತ್ರೆಯ ಹಂತದಿಂದಲೂ ಜಾತಿ, ಧರ್ಮ ಎನ್ನದೆ ಪ್ರತಿಯೊಬ್ಬರೂ ಸಾಥ್‌ ನೀಡುತ್ತಾರೆ. ಜಾತ್ರೆಯ ಆರಂಭದ ತಯಾರಿಯಲ್ಲಿ ಮುಸ್ಲಿಂ ಮತ್ತು ಕ್ರೈಸ್ತ ಬಾಂಧವರು ನನ್ನನ್ನು ಭೇಟಿಯಾಗಿ ತಮ್ಮ ಸಹಕಾರ ನೀಡುತ್ತಾರೆ. ಜಾತ್ರೆ ಮುಗಿಯುವವರೆಗೂ ಎಲ್ಲ ರೀತಿಯಲ್ಲಿಯೂ ನೆರವು ನೀಡಿ ಶಿವಯೋಗೀಶ್ವರರ ಜಾತ್ರೆಯ ಯಶಸ್ಸಿಗೆ ಪ್ರಾಮಾಣಿಕವಾಗಿ ಶ್ರಮಿಸುತ್ತಾರೆ. ನಮ್ಮ ಮಠದ ವ್ಯಾಪ್ತಿಯಲ್ಲಿ ಕೋಮು ಸಂಘರ್ಷವಿಲ್ಲ. ಕೋಮು ಸೌಹಾರ್ದತೆಯಿದೆ. ಮಠ ಇಡೀ ಸಮಾಜದ ಸ್ವತ್ತು. ಭಕ್ತ ಸಮೂಹದ ಸಹಕಾರವಿಲ್ಲದೆ ಮಠದಲ್ಲಿ ಒಂದು ಹುಲ್ಲು ಕಡ್ಡಿಯೂ ಅಲ್ಲಾಡಲು ಸಾಧ್ಯವಿಲ್ಲ. ಸಮಾಜವಿಲ್ಲದೆ ನಾವಿಲ್ಲ. ಇಡೀ ಸಮಾಜದ ಜನರು ಜಾತ್ರೆಯಲ್ಲಿ ತಮ್ಮ ಮನೆಯ ಹಬ್ಬದಂತೆ ಭಾಗವಹಿಸುತ್ತಾರೆ. ಇದಕ್ಕಿಂತ ಬೇರೆ ವಿಶೇಷತೆ ಬೇಕಿಲ್ಲ ಎಂದುಕೊಳ್ಳುತ್ತೇನೆ.

Untitled design (6)

ಜನರ ಗಮನಸೆಳೆಯುವ ಕಾರ್ಯಕ್ರಮಗಳು ಜಾತ್ರಾ ಮಹೋತ್ಸವದಲ್ಲಿ ಜರುಗುತ್ತವೆಯೇ?

ಹೌದು, ಈಗಗಾಗಲೇ ಹೇಳಿದ್ದೇನೆ. ಜಾತ್ರೆಯ ಪ್ರತಿ ಹಂತವೂ ಜನರ ಗಮನಸೆಳೆದು ಆಕರ್ಷಿಸುವಂಥದ್ದು. ಧಾರ್ಮಿಕ,ಅಧ್ಯಾತ್ಮ,ಯೋಗ,ಪಂಚಕರ್ಮ,ಕ್ರೀಡೆ,ಸಂಗೀತ,ಸಾಹಿತ್ಯ,ಹಾಸ್ಯ ಹೀಗೆ ಹತ್ತಾರು ಪ್ರಕಾರದ ಕಾರ್ಯಕ್ರಮಗಳು ನಮ್ಮ ಜಾತ್ರಾ ಮಹೋತ್ಸವದಲ್ಲಿ ಜರುಗುತ್ತವೆ. ಹನ್ನೊಂದು ದಿನವೂ ನಾಡಿನ ಪ್ರಮುಖ ಮಠಾಧೀಶರ ಪ್ರವಚನ ಕಾರ್ಯಕ್ರಮವಿರುತ್ತದೆ. ನೃತ್ಯ,ಸಂಗೀತ ಮತ್ತು ಸಾಹಿತ್ಯ ಸಮ್ಮೇಳನಗಳು ಅರ್ಥಪೂರ್ಣವಾಗಿ ನೆರವೇರುತ್ತವೆ. ಸಾಧಕರಿಗೆ ಸನ್ಮಾನ ಮತ್ತು ಗುರುವಂದನಾ ಕಾರ್ಯಕ್ರಮಗಳು ನಡೆಯುತ್ತವೆ. ತೀರಾ ವಿಶೇಷವೆಂದರೆ ಕಳೆದ ಮೂರ್ನಾಲ್ಕು ವರ್ಷಗಳಿಂದ ಜಾತ್ರಾ ಮಹೋತ್ಸವದಲ್ಲಿ ಈ ನಾಡಿನ ಎಲೆಮರೆಯ ಕಾಯಿಯ ಸಾಧಕರಿಗೆ ʼನೀಲಕಂಠ ಶ್ರೀʼ ಪ್ರಶಸ್ತಿ ನೀಡಿ ಗೌರವಿಸುತ್ತಿದ್ದೇವೆ. ದೇಹದಾನದ ಅರಿವು ಮೂಡಿಸುತ್ತಿರುವ ಡಾ.ರಾಮನ್‌, ಸಾಹಿತ್ಯ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿರುವನಿರುಪಾಧೀಶ್ವರ ಸ್ವಾಮೀಜಿಗಳಿಗೆ ಈವರೆಗೆ ಪ್ರಶಸ್ತಿ ನೀಡಿದ್ದೇವೆ. ಈ ಬಾರಿ ನೂರಾರು ಸರೋರವರಗಳನ್ನು ಪುನರ್‌ ನಿರ್ಮಿಸಿರುವ, ರಾಜ್ಯದಾದ್ಯಂತ ಸಾವಿರಾರು ಕೆರೆಗಳನ್ನು ಸ್ವಚ್ಛಗೊಳಿಸಿರುವ, ದೇಶ-ವಿದೇಶಗಳಲ್ಲಿ ಈವರೆಗೆ ಐದು ಲಕ್ಷಕ್ಕೂ ಅಧಿಕ ಸಸಿಗಳನ್ನು ನೆಟ್ಟಿರುವ ಆನಂದ ಮಲ್ಲಿಗವಾಡ ಅವರಿಗೆ ನೀಲಕಂಠ ಶ್ರೀ ಪ್ರಶಸ್ತಿ ನೀಡುತ್ತಿದ್ದೇವೆ. ಎಲೆಮರೆಯ ಪ್ರತಿಭೆಗಳನ್ನು ಮುನ್ನೆಲೆಗೆ ತಂದು ಸಮಾಜಕ್ಕೆ ಪರಿಚಯಿಸುತ್ತಿರುವ ತೃಪ್ತಿ ನಮಗಿದೆ.

ನಾಲ್ಕಾರು ದೇಶಗಳನ್ನು ಸುತ್ತಿರುವ ನಿಮ್ಮ ಪ್ರವಾಸದ ಅನುಭವಗಳು?

ಅಸಾಧಾರಣ ಪ್ರತಿಭಾವಂತರಾದ ವಿಶ್ವವಾಣಿ ಮತ್ತು ಪ್ರವಾಸಿ ಪ್ರಪಂಚ ಪತ್ರಿಕೆಯ ಪ್ರಧಾನ ಸಂಪಾದಕರಾದ ವಿಶ್ವೇಶ್ವರ ಭಟ್ಟರ ನಿಯೋಗದೊಂದಿಗೆ ಈವರೆಗೆ ಫ್ರಾನ್ಸ್‌, ಸ್ವಿಟ್ಜರ್‌ಲ್ಯಾಂಡ್‌ ,ಜಾರ್ಜಿಯಾ ದೇಶಗಳಿಗೆ ಹೋಗಿದ್ದೇನೆ. ಭಟ್ಟರೊಂದಿಗೆ ಪ್ರವಾಸಕ್ಕೆ ಹೋದದ್ದು ಅತ್ಯಂತ ವಿಶೇಷ. ಬಾವಿಯ ಕಪ್ಪೆಗಳಂತಿರುವ ನಾವು ಸಮುದ್ರದ ಆಳವನ್ನೂ ಆಗಾಗ್ಗೆ ನೋಡುತ್ತಿರಬೇಕು. ಕೋಶ ಓದುವುದರೊಂದಿಗೆ ದೇಶವನ್ನೂ ಸುತ್ತಬೇಕು. ಆಗ ನಮ್ಮ ಅರಿವಿನ ವ್ಯಾಪ್ತಿ ವಿಸ್ತಾರವಾಗುತ್ತಾ ಹೋಗುತ್ತದೆ. ಹಲವು ದೇಶಗಳ ಜನರ ನಡೆ-ನುಡಿ,ಅಲ್ಲಿನ ಆಚರಣೆ ಮತ್ತು ಸಂಪ್ರದಾಯಗಳ ಬಗ್ಗೆ ತಿಳಿದುಕೊಳ್ಳುವ ಅವಕಾಶ ಸಿಗುತ್ತದೆ. ವಿದೇಶ ಪ್ರವಾಸ ಮುಗಿಸಿ ಬಂದ ನಂತರವೂ ನನಗೆ ನಮ್ಮ ಭಾರತದ ಬಗ್ಗೆ ಹೆಮ್ಮೆ ಮೂಡುತ್ತದೆ. ಯಾವ ವಿಷಯದಲ್ಲೂ ನಮ್ಮ ದೇಶ ಕಮ್ಮಿಯಿಲ್ಲ. ವಿದೇಶ ಪ್ರವಾಸ ಮುಗಿಸಿ ಬಂದ ಕೂಡಲೇ ನಮ್ಮ ದೇಶವನ್ನು ಹೀಗಳೆಯುವುದು ಸರಿಯಲ್ಲ. ಪ್ರವಾಸ ನಮ್ಮ ಅನುಭವವನ್ನು ದಟ್ಟಗೊಳಿಸುತ್ತದೆ. ಸಾದ್ಯವಾದರೆ ಅಲ್ಲಿ ಗಳಿಸಿದ ಅನುಭವದ ಅರಿವನ್ನು ಇತರಿರಿಗೂ ಹಂಚುವ ಕೆಲಸ ನಮ್ಮಿಂದ ಆಗಬೇಕು. ಮನುಷ್ಯ ಸಂಚಾರಿ ಜೀವಿ. ಪ್ರಯಾಣ ಮಾಡುತ್ತಲೇ ಇರಬೇಕು. ಸ್ಥಾವರಕ್ಕಳಿವುಂಟು, ಜಂಗಮಕ್ಕಳಿವಿಲ್ಲ.

Untitled design (3)

ಕರ್ನಾಟಕ ಪ್ರವಾಸೋದ್ಯಮದಲ್ಲಿ ಆಗಬೇಕಾದ ಬದಲಾವಣೆಗಳು?

ನಮ್ಮ ಕರ್ನಾಟಕ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಹೊಸ ನೀರು ಹರಿಯಬೇಕಿದೆ. ಸಾಕಷ್ಟು ಬದಲಾವಣೆಗಳ ನಿರೀಕ್ಷೆಯಲ್ಲಿದ್ದೇವೆ. ಅದು ಯಾವುದೇ ಸರಕಾರ ಅಧಿಕಾರಕ್ಕೆ ಬಂದರೂ ಪ್ರವಾಸೋದ್ಯಮ ವಲಯದ ಕಡೆಗೆ ಹೆಚ್ಚು ಗಮನಕೊಡಬೇಕು. ಐತಿಹಾಸಿಕ ತಾಣಗಳಿಗೆ ಕಾಯಕಲ್ಪ ನೀಡಿ ನಮ್ಮ ಪರಂಪರೆಯ ಕಥೆಗಳನ್ನು ಆ ತಾಣದ ಮೂಲಕ ಹೇಳಬೇಕು. ಕರ್ನಾಟಕಕ್ಕೆ ಅದ್ಭುತ ಪರಂಪರೆಯಿದೆ. ಯಾವ ರಾಜ್ಯಕ್ಕೂ ಕಡಿಮೆ ಇರದ ನಿಸರ್ಗ ಸಂಪತ್ತು ಇಲ್ಲಿದೆ. ಬೇರೆಲ್ಲೂ ಇಲ್ಲದ ಐತಿಹ್ಯಗಳು ನಮ್ಮ ರಾಜ್ಯದಲ್ಲಿದೆ. ನಮ್ಮ ಸರಕಾರ ನೇಪಥ್ಯಕ್ಕೆ ಸರಿದಿರುವ ನೂರಾರು ದೇವಾಲಯಗಳ ಜೀರ್ಣೋದ್ಧಾರ ಮಾಡಬೇಕಿದೆ. ಪ್ರವಾಸೋದ್ಯಮ ಇಲಾಖೆಗೂ ಹೆಚ್ಚಿನ ಅನುದಾನ ನೀಡುವ ಮೂಲಕ ನೆರವಾಗಬೇಕಿದೆ. ಕರ್ನಾಟಕದ ಪ್ರವಾಸಿ ತಾಣಗಳನ್ನು ಉಳಿಸಿ ಬೆಳೆಸುವ ಪ್ರಾಮಾಣಿಕ ಕೆಲಸ ಪ್ರವಾಸೋದ್ಯಮ ಇಲಾಖೆಯ ಮೂಲಕವಾಗಲಿ ಎಂದು ಆಶಿಸುತ್ತೇನೆ.

Deekshith Nair

Deekshith Nair

Travel blogger and adventurer passionate about exploring new cultures and sharing travel experiences.

ಕಲ್ಲಿನಲ್ಲಿ ಅರಳಿದ ಕಲಾಕುಸುಮ - ಪುಷ್ಕರಣಿ

Read Previous

ಕಲ್ಲಿನಲ್ಲಿ ಅರಳಿದ ಕಲಾಕುಸುಮ - ಪುಷ್ಕರಣಿ

ಕೃಷ್ಣ-ಸುಧಾಮರ ಸ್ನೇಹದ ಗುರುತು ಬೇಟ್ ದ್ವಾರಕಾ

Read Next

ಕೃಷ್ಣ-ಸುಧಾಮರ ಸ್ನೇಹದ ಗುರುತು ಬೇಟ್ ದ್ವಾರಕಾ