ಕನಸೊಂದು ನನಸಾದಾಗ...
ಗೋವಾ ಟ್ರಿಪ್ ಅದೆಷ್ಟೋ ಯುವಕರ ಬಹು ವರ್ಷಗಳ ಕನಸು. ಪ್ರತಿಯೊಬ್ಬರೂ ತಮ್ಮ ಕಾಲೇಜು ದಿನಗಳಲ್ಲಿ ಗೋವಾ ಹೋಗಲು ಪ್ಲ್ಯಾನ್ ಮಾಡಿರುತ್ತಾರೆ. ಆದರೆ ಪ್ರತಿಬಾರಿ ಪ್ಲ್ಯಾನ್ ಮಾಡಿದಾಗಲೂ ಉಲ್ಟಾ ಹೊಡೆದಿರುತ್ತದೆ. ಹೊರಟೇ ಹೋದೆವು ಎನ್ನುವಷ್ಟರಲ್ಲಿ ಟ್ರಿಪ್ ಕ್ಯಾನ್ಸಲ್ ಆಗಿರುತ್ತದೆ. ಎಲ್ಲ ಗೆಳೆಯರು ರೆಡಿ ಇದ್ದಾಗ ಟೀಮ್‌ನಲ್ಲಿ ಯಾರೋ ಒಬ್ಬ ಜಾರಿಕೊಳ್ಳುತ್ತಾನೆ. ‘Goa Trip’ ಹೆಸರಿನಲ್ಲಿ ಕ್ರಿಯೇಟ್ ಆದ ವಾಟ್ಸಾಪ್ ಗ್ರೂಪ್‌ಗಳು ಆಯುಷ್ಯ ಕಳೆದುಕೊಂಡಿರುತ್ತವೆ. ಪ್ಲ್ಯಾನ್ ಮಾಡಿಕೊಂಡಂತೆ ಗೋವಾ ಟ್ರಿಪ್ ಗೆ ಹೋಗಿಬಂದ ಮೇಲಂತೂ ನಮ್ಮ ಹುಡುಗರು ಕಾಲರ್ ಪಟ್ಟಿಯನ್ನು ಮೇಲಕ್ಕೆತ್ತುಕೊಂಡೇ ತಿರುಗಾಡುತ್ತಾರೆ.
- ಯತೀಶ .ಎಸ್
ಗೋವಾ ಎಂದಾಕ್ಷಣ ಎಲ್ಲರ ಮನದಲ್ಲಿ ಮೂಡುವ ಒಂದೇ ಭಾವನೆ ಎಂದರೆ ಎಂಜಾಯ್‌ಮೆಂಟ್. ಮೋಜು-ಮಸ್ತಿ. ಬೀಚು, ಬೀರು, ಮಸಾಜ್, ಕ್ಲಬ್-ಪಬ್, ಕ್ಯಾಸಿನೊ ಅರೆ… ಗೋವಾ ಅಂದರೆ ಇಷ್ಟೇನಾ? ಇಲ್ಲ. ಇದೆಲ್ಲವನ್ನೂ ಮೀರಿದ ಗೋವಾವಿದೆ. ಅದೆಷ್ಟೋ ಅಚ್ಚರಿ ಮತ್ತು ಬೆರಗುಗಳೊಂದಿಗೆ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಪುಟಾಣಿ ರಾಜ್ಯವಾದರೂ ಗೋವಾ ಟೂರಿಸಂನಲ್ಲಿ ದಾಖಲೆಯ ಸಾಧನೆ ಮಾಡಿದೆ. ಟೂರಿಸಂ ಒಂದರಿಂದಲೇ ಆದಾಯಗಳಿಸುತ್ತಾ ರಾಜ್ಯವನ್ನು ಡೆವಲಪ್ ಮೆಂಟ್ ನತ್ತ ಕೊಂಡೊಯ್ಯುತ್ತಿದೆ. ಗೋವಾ ನಿಜಕ್ಕೂ ಒಂದು ಅದ್ಬುತ ಪ್ರವಾಸಿ ತಾಣ. ಮನಸ್ಸು ಮಾಡಿದರೆ ಸ್ವಲ್ಪ ಹಣದಲ್ಲೇ ಗೋವಾಗೆ ವಿಮಾನದಲ್ಲಿ ಹಾರಿ ಹೋಗಿ ಬರಬಹುದು. ವಿಮಾನದಲ್ಲಿ ಹಾರುವ ಆಸೆಯ ಜತೆಗೆ ಗೋವಾ ರಾಜ್ಯವನ್ನು ಕಣ್ತುಂಬಿಕೊಳ್ಳಬಹುದು. ಡ್ರೈವಿಂಗ್ ಕ್ರೇಜ್ ಇದ್ದು ಕಾರಿನಲ್ಲಿ ಪ್ರಯಾಣಿಸಿದರೆ ಸುಮಾರು ಅರ್ಧ ದಿನದ ಪ್ರವಾಸ. ಟ್ರೈನ್ ಅಥವಾ ಬಸ್ ಮೂಲಕವೂ ಹೋಗಿಬರಬಹುದು. ಹಾಂ.. ಟ್ರೈನ್ ಮೂಲಕ ನೀವು ಹೋಗುವುದಾದರೆ ದೂಧ್ ಸಾಗರ್ ಜಲಪಾತದ ಸೌಂದರ್ಯವನ್ನು ಸವಿಯಬಹುದು.
ನಮ್ಮ ಕಾಲೇಜು ದಿನಗಳಲ್ಲಿ ಗೋವಾ ಟ್ರಿಪ್ ಅಂಥ ನಾವೆಲ್ಲ ಎಷ್ಟು ಬಂಬಡ ಬಜಾಯಿಸಿದ್ದೆವು ನೆನಪಿದ್ಯಾ? ಗೋವಾ ಟ್ರಿಪ್ ಅದೆಷ್ಟೋ ಯುವಕರ ಬಹು ವರ್ಷಗಳ ಕನಸು. ನಾವು ಅದಕ್ಕೆ ಹೊರತಲ್ಲ ಬಿಡಿ. ಪ್ರತಿಯೊಬ್ಬರೂ ತಮ್ಮ ಕಾಲೇಜು ದಿನಗಳಲ್ಲಿ ಗೋವಾ ಹೋಗಲು ಪ್ಲ್ಯಾನ್ ಮಾಡಿರುತ್ತಾರೆ. ಆದರೆ ಪ್ರತಿಬಾರಿ ಪ್ಲ್ಯಾನ್ ಮಾಡಿದಾಗಲೂ ಉಲ್ಟಾ ಹೊಡೆದಿರುತ್ತದೆ. ಹೊರಟೇ ಹೋದೆವು ಎನ್ನುವಷ್ಟರಲ್ಲಿ ಟ್ರಿಪ್ ಕ್ಯಾನ್ಸಲ್ ಆಗಿರುತ್ತದೆ. ಎಲ್ಲ ಗೆಳೆಯರು ರೆಡಿ ಇದ್ದಾಗ ಟೀಮ್‌ನಲ್ಲಿ ಯಾರೋ ಒಬ್ಬ ಜಾರಿಕೊಳ್ಳುತ್ತಾನೆ. ‘Goa Trip’ ಹೆಸರಿನಲ್ಲಿ ಕ್ರಿಯೇಟ್ ಆದ ವಾಟ್ಸಾಪ್ ಗ್ರೂಪ್‌ಗಳು ಆಯುಷ್ಯ ಕಳೆದುಕೊಂಡಿರುತ್ತವೆ. ಪ್ಲ್ಯಾನ್ ಮಾಡಿಕೊಂಡಂತೆ ಗೋವಾ ಟ್ರಿಪ್ ಗೆ ಹೋಗಿಬಂದ ಮೇಲಂತೂ ನಮ್ಮ ಹುಡುಗರು ಕಾಲರ್ ಪಟ್ಟಿಯನ್ನು ಮೇಲಕ್ಕೆತ್ತುಕೊಂಡೇ ತಿರುಗಾಡುತ್ತಾರೆ. ಕಾಲೇಜಿನ ಕಾರಿಡಾರ್ ಗಳಲ್ಲಿ ಗೋವಾದ್ದೇ ಸುದ್ದಿ ಮತ್ತು ಸದ್ದು. ಜನರೇಷನ್ ಗಳು ಬದಲಾದರೂ ಗೋವಾ ಮೇಲಿನ ವ್ಯಾಮೋಹ ಮಾತ್ರ ಕಡಿಮೆಯಾಗುತ್ತಿಲ್ಲ. ಗೋವಾ ಯಾಕೆ ಹೋಗಬೇಕು? ಗೋವಾದಲ್ಲಿ ಎಲ್ಲಿಗೆ ಹೋಗಬೇಕು ಎಂಬುದನ್ನು ಹೇಳ್ತಿನಿ ಕೇಳಿ.

ಗೋವಾ ಹೋಗುವ ಮುನ್ನ
ಯುವಕರಿಗೆ ಕ್ರೇಜ್ ತುಂಬುವ ಮತ್ತು ಮಜ ಬರಿಸುವ ಗೋವಾ ಬೇಕು. ಗೋವಾ ಎರಡು ಭಾಗವಾಗಿ ವಿಂಗಡಣೆಯಾಗಿದೆ. ನಾರ್ಥ್ ಗೋವಾ ಹಾಗೂ ಸೌಥ್ ಗೋವಾ. ನೀವು ಮೊದಲ ಬಾರಿ ಗೋವಾ ಟ್ರಿಪ್ ಗೆ ಹೊರಟಿದ್ದರೆ ನಾರ್ಥ್ ಗೋವಾ ಬೆಸ್ಟ್. ಕಾರಿನಲ್ಲಿ ಬೆಂಗಳೂರಿನಿಂದ ಸುಮಾರು 600 ಕಿಮೀ ಹೈವೇ ರಸ್ತೆಯಲ್ಲಿ ಹಾಯಾಗಿ ಹೋಗಬಹುದು. ನೀವು ಟ್ರೈನ್, ಬಸ್ ಇಲ್ಲವೇ ವಿಮಾನದಲ್ಲಿ ಗೋವಾ ತಲುಪಿದರೆ ಅಲ್ಲಿ ಸುತ್ತಾಡಲು ಕೈಗೆಟುಕುವ ಬೆಲೆಯಲ್ಲಿ ಬಾಡಿಗೆ ಗಾಡಿ ಹಾಗೂ ಲಕ್ಸುರಿ ಕಾರುಗಳು ಸಿಗುತ್ತವೆ. ನೀವು ಅಲ್ಲಿ ಇಳಿಯುತ್ತಿದ್ದಂತೆ ಅಲ್ಲಿನ ಒಂದಷ್ಟು ಜನ ನಿಮ್ಮ ಬಳಿಯೇ ಬಂದು ಈ ರೆಂಟಲ್ ವಾಹನವನ್ನು ತಲುಪಿಸುವ ವ್ಯವಸ್ಥೆ ಮಾಡಿಕೊಡುತ್ತಾರೆ. ಅಂದಹಾಗೆ ಅವರು ಹೇಳುವ ಬೆಲೆಗೆ ಮರುಳಾಗಬೇಡಿ. ಒಂದೆರೆಡು ಕಡೆ ವಿಚಾರಿಸಿ ನಂತರ ವಾಹನಗಳನ್ನು ತೆಗೆದುಕೊಳ್ಳಿ. ನಿಮಗೆ ಗೋವಾದಲ್ಲಿ ಎಲ್ಲ ಕಡೆಯೂ ಕಾಮನ್ ಆಗಿ ಕಾಣುವುದು ಹಳೆಯ ಕಟ್ಟಡಗಳು. ಚರ್ಚ್ ಗಳಂತೂ ಬೀದಿಬೀದಿಗೂ ಸಿಗುತ್ತವೆ. ಜನರು ಸದಾಕಾಲ ತುಂಬಿರುವ ಚರ್ಚ್ ಎಂದರೆ ಅದು ಸೆ ಕ್ಯಾಥೆಡ್ರಲ್ ಚರ್ಚ್. ಪ್ರವೇಶ ಶುಲ್ಕ ಭರಿಸುವ ಅಗತ್ಯವಿಲ್ಲ. ಫೊಟೋಗ್ರಫಿಗಂತೂ ಹೇಳಿ ಮಾಡಿಸಿದ ಜಾಗ. ಕ್ರೈಸ್ತರಿಗೆ ಅದು ಪವಿತ್ರ ಸ್ಥಳ. ಒಳಗೆ ಪ್ರಾಚೀನ ಮೂರ್ತಿಗಳು ಮತ್ತು ವಿಭಿನ್ನ-ವಿಶೇಷ ವಸ್ತುಗಳನ್ನು ನೋಡಬಹುದು. ಇನ್ನು ಪೋರ್ಚುಗೀಸರ ಕಾಲೋನಿ ಎಂದೇ ಕರೆಯಲ್ಪಡುವ ಫಾಂಟೈನ್ಹಾಸ್ ಬಣ್ಣಗಳಿಂದ ತುಂಬಿದೆ. ಒಂದಕ್ಕೊಂದು ಅಂಟಿರುವ ಕಟ್ಟಡಗಳ ಬೀದಿಗಳು ಕಣ್ಣುಗಳನ್ನು ಕುಕ್ಕುತ್ತವೆ. ಅಲ್ಲಿ ಎಲ್ಲ ಪ್ರವಾಸಿಗರನ್ನು ನೀವು ಒಮ್ಮೆಲೇ ಕಾಣಬಹುದು. ಇಂಗ್ಲಿಷ್ ಕಾದಂಬರಿಗಳಲ್ಲಿನ ಪಾತ್ರಗಳು ಅದೇ ಬೀದಿಯಲ್ಲಿ ಹುಟ್ಟಿವೆಯೇನೋ ಎಂಬಂತಿದೆ ಆ ಬೀದಿ. ಅಪ್ಪಟ ವಿದೇಶಿ ಗುಣವಿರುವ ರಾಯಲ್ ಸ್ಟ್ರೀಟ್ ಅದು.
ಫುಡ್ಡೇ ದುಬಾರಿ
ನಿಮಗೆ ತಿಳಿದಿರಲಿ. ಗೋವಾದಲ್ಲಿ ಮದ್ಯಕ್ಕಿಂತ ಆಹಾರವೇ ದುಬಾರಿ. ಐನೂರು ರುಪಾಯಿಗೆ ಹೊಟ್ಟೆ ತುಂಬಾ ಕುಡಿದು ತೇಗುವಷ್ಟು ಮದ್ಯ ಸಿಗುತ್ತದೆ. ಆದರೆ ಒಂದು ಅಂಗೈ ಅಗಲದಷ್ಟು ಮಸಾಲೆದೋಸೆಗೆ 100 ರಿಂದ 200 ರುಪಾಯಿ, ಅಂದ ಹಾಗೆ ಇದು ದೊಡ್ಡ ರೆಸ್ಟೋರೆಂಟ್ ನ ದರವಲ್ಲ. ತಳ್ಳುವ ಗಾಡಿಯಲ್ಲಿ ಮಾರುವವರಲ್ಲೂ ಇದೇ ಬೆಲೆ. ಅಲ್ಲಿ ಕುಡಿಯುವ ನೀರೂ ದುಬಾರಿ. ನೀರಿನ ಬದಲು ಬಿಯರ್ ಕುಡಿದು ಬದುಕ ಬಹುದಾದ ಜಾಗ ಅಂದರೆ ಅದು ಗೋವಾ.
ಸಂಜೆಯ ಸರಿಹೊತ್ತಿನಲ್ಲೂ ಬಿಸಿಲಿನ ಬೇಗೆಯಲ್ಲಿ ಬೆಂದ ನಮಗೆ ಮುದ ನೀಡುವ ಒಂದೇ ಜಾಗ ಅದು ಗೋವಾದ ಬೀಚ್ ಗಳು. ನಿಮ್ಮ ಮೊದಲ ದಿನದ ಬೀಚ್ ಪ್ಲಾನ್ ಬಾಗಾ ಬೀಚ್ ಕಡೆ ಸಾಗಲಿ, ಕಪ್ಪನೆ ಮೋಡ, ತಿಳಿ ಬೆಳ್ಳಗಿನ ನೀರು, ನೋಡಿದಷ್ಟು ದೂರ ನಿಮ್ಮ ಕಣ್ಣಿಗೆ ಕಾಣುವ ಕಡಲು. ಬೀಚ್ ಸ್ಯಾಂಡ್ ಮೇಲೆ ಕೊಡೆಯ ಕೆಳಗೆ ಜೋಡಿಸಿರುವ ಕುರ್ಚಿಗಳು, ಅದರಲ್ಲಿ ಕೂರಲು ನೀವು ಕೇವಲ ಅಲ್ಲಿನ ಪಾನ ಮತ್ತು ಪಾನೀಯಗಳನ್ನು ಕೊಂಡರೆ ಸಾಕು. ಒಂದೇ ತೊಂದರೆ ಎಂದರೆ ಪಾರ್ಕಿಂಗ್ ಗಾಗಿ 300 ರುಪಾಯಿ ಕೊಡಬೇಕು. ನೀವು ಅಲ್ಲಿಂದ ಹೊರಟು ನಿಮ್ಮ ವಸತಿ ಗೃಹಕ್ಕೆ ತೆರಳಿ ವಿಶ್ರಾಂತಿ ತೆಗೆದುಕೊಳ್ಳಬಹುದು.

ಮರುದಿನ ನೀವು ಹೋಗಬೇಕಾದ ಜಾಗವೇ ಅಲ್ಲಿನ ಸುಂದರ ಕೋಟೆಗಳು. ರೀಸ್ ಮಾಗೋಸ್ ಕೋಟೆ. ಅಲ್ಲಿನ ಜನಪ್ರಿಯ ಕೋಟೆಯೆಂದರೆ ಅಗುವಾಡಾ. ಅಲ್ಲಿನ ಲೈಟ್ ಹೌಸ್ ಮತ್ತೊಂದು ಮೆರುಗು ಕೊಡುವ ತಾಣ. ಅದರ ಒಳಗೆ ಹೋಗುವವರು ತೆಳ್ಳಗೆ ಇರಬೇಕು ಇಲ್ಲವಾದರೆ ತುದಿಯಲ್ಲಿ ಸಿಲುಕುತ್ತೀರಿ. ನಂತರ ನೀವು ಕಾಯ್ಕಿಂಗ್ ಮಾಡಲು ಬಯಸಿದರೆ ಗೋವಾಗಿಂತ ಮತ್ತೊಂದು ಜಾಗ ಇಲ್ಲ. ಒಬ್ಬರಿಗೆ ಕೇವಲ 400 ರುಪಾಯಿಗೇ ಸ್ವಲ್ಪ ಚೌಕಾಸಿ ಮಾಡಿದರೆ 45 ನಿಮಿಷಗಳ ಕಾಲ ಬೋಟಿಂಗ್ ಮಾಡಬಹುದು. ಶಾಪಿಂಗ್ ಮಾಡಲು ಬಯಸುವವರಿಗೆ ಅಂಜುನ ಮಾರ್ಕೆಟ್ ಇದೆ.
ಮದ್ಯ ಪ್ರಿಯರೇ ಗಮನಿಸಿ
ಗೋವಾದಲ್ಲಿ ಮದ್ಯ ಅಗ್ಗದ ಬೆಲೆಯಲ್ಲಿ ಸಿಗುತ್ತದೆ. ಅಲ್ಲಿ ಮದ್ಯ ಖರೀದಿಸಿ ಅದನ್ನು ಕರ್ನಾಟಕಕ್ಕೆ ತಂದು ಕಂಠಪೂರ್ತಿ ಕುಡಿಯಬಹುದು ಎಂಬ ಆಸೆಗಳನ್ನು ಇಟ್ಟುಕೊಳ್ಖಬೇಡಿ. ಎಲ್ಲ ಕರ್ನಾಟಕ ಪ್ರವಾಸಿಗರಿಗೆ ವಿನಂತಿ. ಚೆಕ್ ಪೋಸ್ಟ್ ನಲ್ಲಿ ಕಳ್ಳ ಗಾರ್ಡ್‌ಗಳ ಜೇಬನ್ನು ಬಿಸಿ ಮಾಡಲು ನಿಮ್ಮಿಂದ ಸಾಧ್ಯವಾಗದಿದ್ದರೆ ದುಂಬಾಲು ಬಿದ್ದು ಮದ್ಯ ಬಾಟಲಿಗಳನ್ನು ಖರೀದಿಸಬೇಡಿ. ಕಡಿಮೆ ಬೆಲೆಯೆಂದು ಖರೀದಿಸಿ ಚೆಕ್ ಪೋಸ್ಟ್ ನಲ್ಲಿ ಅದನ್ನು ಬಿಡುಗಡೆ ಮಾಡಿಸಲು ನಾಲ್ಕರಷ್ಟು ದಂಡ ಕಟ್ಟಬೇಕಾಗುತ್ತದೆ. ಮತ್ತದೇ ಹೇಳುತ್ತೇನೆ. ಮದ್ಯದಿಂದ ಆಚೆಗೂ ಗೋವಾವಿದೆ. ಅದನ್ನು ಸಂಭ್ರಮಿಸಿ. ನೀವು ಗೋವಾದಿಂದ ಮರಳಿ ಬರುವಾಗ ನೂರಾರು ನೆನಪುಗಳ ಮೂಟೆಯನ್ನು ಹೊತ್ತು ತನ್ನಿ. ಗೋವಾದಿಂದ ಬಂದ ನಂತರ ಕನಿಷ್ಠ ಒಂದು ತಿಂಗಳಾದರೂ ನೀವು ಟ್ರಿಪ್ ಬಗ್ಗೆ ಮಾತನಾಡಿಕೊಳ್ಳಬೇಕು!