Wednesday, November 18, 2026
Wednesday, November 18, 2026

ಲೋಣಾವಾಲ ಪ್ರವಾಸದಲ್ಲಿ ಈಡೇರಿದ ಆಸೆ

ಗಾಳಿ-ಮಳೆಗಿಂತ ಇನ್ನೂ ಮಜಾ ನೀಡಿದ್ದು ಬುಶಿ ಡ್ಯಾಂ. ಮಳೆಯಲ್ಲಿ ತೊಯ್ದ ಯುವತಿಯರು, ಮುದುಕಿಯರು, ಚಿಕ್ಕ ಮಕ್ಕಳು, ಯುವಕರು, ಅಜ್ಜಂದಿರು ಈ ಡ್ಯಾಂನತ್ತ ನಡುಮಟ್ಟದ ನೀರಿನಲ್ಲಿ ಬೀಳುತ್ತಾ ಏಳುತ್ತಾ ಓಡುವುದನ್ನು ನೋಡುವುದೇ ರೋಚಕ ಅನುಭವ. ನಮಗೆ ಆ ಸ್ಥಳ ಅಪರಿಚಿತ. ತಿಳಿಯದ ಭಾಷೆ. ನಮ್ಮವರಾರೂ ಅಲ್ಲಿಲ್ಲ. ಹಾಗಾಗಿ ನಾವು ಆ ಸಾಹಸ ಮಾಡಲು ಹೋಗಲಿಲ್ಲ. ದೂರದಿಂದಲೇ ಆ ಮರಾಠಿಗರ ಸಾಹಸಗಳನ್ನು ನೋಡಿ ಸಂತಸಪಟ್ಟೆವು. ತುಂಬಾ ಅಪಾಯಕಾರಿ ಸಾಹಸವದು!

  • ಬಂಡು ಕಟ್ಟಿ

ಮಧ್ಯಾಹ್ನ ಮಳೆ ಬರುತ್ತಿತ್ತು. ಅದು ಬಿರುಬಿಸಿಲಿನ ನಂತರ ಸುರಿದ ಮಳೆ. ನಮಗೆ ಖುಷಿ ನೀಡಿತ್ತು. ನನ್ನವಳನ್ನು ಮಳೆಯಲ್ಲಿ ನಿಂತು ಒದ್ದೆಯಾಗಲು ಕರೆದೆ. ಆಕೆ ಜನ ಏನಂದಾರು ಬೇಡ ಅಂದಳು. ಇದೇ ಕಾರಣಕ್ಕೆ ಪ್ರವಾಸ ಯೋಚನೆ ಮೊಳೆಯಿತು. ಚೀರಾಪುಂಜಿಗೆ ಹೋಗೋಣ ಅಂದಳು. ಅದು ಮೇಘಾಲಯದಲ್ಲಿರುವ ವಿಷಯ ಅವಳಿಗೆ ತಿಳಿದಿರಲಿಲ್ಲ. ದು ತುಂಬಾ ದೂರ, ಮಳೆಗೆ ಮೈಯೊಡ್ಡುವ ಆಸೆಗೆ ತುಂಬಾ ದುಬಾರಿಯಾಗುತ್ತದೆ ಎಂದೆ. ಹಾಗಾಗಿ ಖಂಡಾಲಾ-ಲೋಣಾವಾಲಾ ಪ್ರವಾಸ ಫಿಕ್ಸ್‌ ಮಾಡಿದೆವು. ಅದೂ ಮಳೆಯಲ್ಲಿ ನೆನೆಯಲು!

ಇದನ್ನೂ ಓದಿ: ಮಳೆಗಾಲದಲ್ಲಿ ವೈಭವ ಮೆರೆಯುವ ನೆರೆರಾಜ್ಯಗಳ ಜಲಪಾತಗಳು!

ಇಲ್ಲಿ ಗಾಳಿ- ಮಳೆ ಜೋರೋ ಜೋರು

ಖಂಡಾಲಾ-ಲೋಣಾವಾಲಾ ಮಳೆಯಲ್ಲಿ ಸಿಲುಕುವುದು ಕಷ್ಟಕರ ಅನುಭವ. ಆದರೂ ಅದರ ನೆನಪುಗಳು ನಮ್ಮೊಡನೆ ತುಂಬಾ ದಿನ ಉಳಿಯುತ್ತವೆ. ಹಾಗೆ ನೋಡಿದರೆ ನಾವು 500 ಕಿಮೀ ಪ್ರಯಾಣ ಮಾಡಿ ಬಂದಿದ್ದೇ ಮಳೆಯಲ್ಲಿ ನೆನೆಯಲು. ಆದರೂ ಈ ರಭಸದ ಮಳೆ ನಮ್ಮನ್ನು ತಲ್ಲಣಗೊಳಿಸಿತು. ಕಟ್ಟೆ ತುಂಬಿ ಹರಿಯುತ್ತಿದ್ದ ದೃಶ್ಯಗಳು ಮನೋಹರವಾಗಿದ್ದವು. ಟೈಗರ್ ಪಾಯಿಂಟ್, ಲಯನ್ಸ್ ಪಾಯಿಂಟ್‌ಗಳಲ್ಲಿ ನಾವೂ ಪೂರ್ತಿ ತೊಯ್ದುಹೋದೆವು. ಗಾಳಿಯ ಜೋರು ಹೊಡೆತ! ಆದರೆ ನಮಗಿದು ಸಖತ್‍ ಮಜಾ ನೀಡಿತ್ತು.

Untitled Design (31)

ಬುಶಿ ಡ್ಯಾಂ ಸಾಹಸ

ಆ ಗಾಳಿ-ಮಳೆಗಿಂತ ಇನ್ನೂ ಮಜಾ ನೀಡಿದ್ದು ಬುಶಿ ಡ್ಯಾಂ. ಮಳೆಯಲ್ಲಿ ತೊಯ್ದ ಯುವತಿಯರು, ಮುದುಕಿಯರು, ಚಿಕ್ಕ ಮಕ್ಕಳು, ಯುವಕರು, ಅಜ್ಜಂದಿರು ಈ ಡ್ಯಾಂನತ್ತ ನಡುಮಟ್ಟದ ನೀರಿನಲ್ಲಿ ಬೀಳುತ್ತಾ ಏಳುತ್ತಾ ಓಡುವುದನ್ನು ನೋಡುವುದೇ ರೋಚಕ ಅನುಭವ. ನಮಗೆ ಆ ಸ್ಥಳ ಅಪರಿಚಿತ. ತಿಳಿಯದ ಭಾಷೆ. ನಮ್ಮವರಾರೂ ಅಲ್ಲಿಲ್ಲ. ಹಾಗಾಗಿ ನಾವು ಆ ಸಾಹಸ ಮಾಡಲು ಹೋಗಲಿಲ್ಲ. ದೂರದಿಂದಲೇ ಆ ಮರಾಠಿಗರ ಸಾಹಸಗಳನ್ನು ನೋಡಿ ಸಂತಸಪಟ್ಟೆವು. ತುಂಬಾ ಅಪಾಯಕಾರಿ ಸಾಹಸವದು! ಎಲ್ಲಾ ನೋಡಿ, ಎಂಜಾಯ್‌ ಮಾಡಿ, ಅಲ್ಲಿಂದ ಮರಳಿ ಬರುವಾಗ ನಮ್ಮ ಬಟ್ಟೆಗಳು ಒಣಗಿದ್ದವು.

Untitled Design (30)

ಮಳೆಯಲ್ಲಿ ಕಾರ್ಲಾ ಗುಹೆಯ ಆರೋಹಣ

ಎರಡನೆಯ ದಿನ ಸ್ನಾನ ಊಟ ಮಾಡಿ ಕಾರ್ಲಾ ಗುಹೆಗಳನ್ನು ನೋಡಲು ಹೊರಟೆವು. ಲೋಣಾವಾಲಾದಲ್ಲಿ ತಯಾರಿಸುವ ವೈವಿಧ್ಯಮಯ ಚಿಕ್ಕಿಗಳು ಜಗತ್ಪ್ರಸಿದ್ಧ. 45 ನಿಮಿಷಗಳ ಪ್ರಯಾಣದ ನಂತರ ಕಾರ್ಲಾ ತಲುಪಿದೆವು. ನಾವು ಮೇಲೆ ಹತ್ತಲು ಆರಂಭಿಸಿದ ಕೂಡಲೇ ಮತ್ತೆ ಮಳೆ ಚಾಲು. ದಾರಿಯಲ್ಲಿ ಎರಡ್ಮೂರು ಜಲಪಾತಗಳಿವೆ. ಛತ್ರಿ ಹಿಡಿದು ಮಳೆಯಲ್ಲೇ ಹೊರಟೆವು. ಇದು ಜೀವಮಾನದ ಅನುಭವ. ನನ್ನವಳು ತಲೆಗೆ ಟವೆಲ್ ಹಾಕಿಕೊಂಡಿದ್ದಳು. ಮಳೆಯ ಸಂಪೂ‍ರ್ಣ ಅರಿವಿದ್ದೇ ನಾವು ಇಲ್ಲಿಗೆ ಬಂದಿದ್ದೆವು. ಮಳೆಯನ್ನು ನೋಡುವುದು, ಒದ್ದೆಯಾಗುವುದೇ ನಮ್ಮ ಉದ್ದೇಶವಾಗಿತ್ತು. ಬೆಟ್ಟ ಏರುವಾಗ ಪಾವಟಿಗೆಗಳ ಪಕ್ಕದಲ್ಲಿ ಟೆಂಟ್ ಕ್ಯಾಂಟೀನ್‌ಗಳಿವೆ. ವಡಾ ಪಾವ್ ತಿಂದು ಬಿಸಿಬಿಸಿ ಚಹಾ ಕುಡಿದೆವು. ಮತ್ತೆ ಆರೋಹಣ. ಸುಮಾರು 350 ಪಾವಟಿಗೆಗಳು. ಆದರೆ ಆಯಾಸವಾಗಲಿಲ್ಲ. ಪೂರ್ತಿ ಏರಿದಾಗ ಬೌದ್ಧ ಗುಹೆಗಳ ವಿಹಂಗಮ ನೋಟ ನಮ್ಮೆದುರಿಗಿತ್ತು. ಪಕ್ಕದಲ್ಲೇ ಜಲಪಾತ ದಬದಬನೆ ಸುರಿಯುತ್ತಿತ್ತು. ಮಳೆಯಲ್ಲೇ ಓಡಾಡಿದೆವು. ಅಲ್ಲಿನ ದೇವಿಯ ದರ್ಶನ ಮಾಡಿದೆವು.

Untitled Design (28)

ಕಾರ್ಲಾ ಗುಹೆಯ ಒಳಹೊಕ್ಕಾಗ ಮತ್ತೊಂದು ಹೊಸತನದ ಅನುಭವವಾಯಿತು. ಸ್ತೂಪವನ್ನು ಹೊಂದಿದ ಗುಹೆಯ ಹೊರಗೋಡೆಯಲ್ಲಿ ಚಿತ್ತಾಕರ್ಷಕ ಚಿತ್ರಗಳಿವೆ. ಇದು ಸುಮಾರು 2000 ವರ್ಷಗಳಿಗೂ ಪುರಾತನ ಗುಹೆ. ಒಳಗೆ ತಿರುಗಾಡುವುದೇ ಮನಸಿಗೆ ಮುದ ನೀಡುತ್ತದೆ. ನಮ್ಮ ವಾಸ್ತುಶಿಲ್ಪದ ಬಗ್ಗೆ ಅಭಿಮಾನವೆನಿಸುತ್ತದೆ. ನನಗೆ ಚರ್ಚ್‌ನಲ್ಲಿ ತಿರುಗಾಡಿದ ಅನುಭವವಾಯಿತು. ಅಪರಿಚಿತ ವ್ಯಕ್ತಿಯೊಬ್ಬ ಫೊಟೋ ತೆಗೆದುಕೊಡುತ್ತೇನೆ ಮೊಬೈಲ್ ಕೊಡಿ ಎಂದು ದುಂಬಾಲು ಬಿದ್ದ. ಆತನ ಹಾವಭಾವ ನೋಡಿ ನಾವು ಮೊಬೈಲ್ ಕೊಡಲಿಲ್ಲ. ಒದ್ದೆಬಟ್ಟೆಯಲ್ಲಿಯೇ ಗುಹೆಯೊಳಗೆ ತಿರುಗಾಡಿದೆವು. ಮಳೆಯಲ್ಲಿ ಎರಡು ಗಂಟೆ ಬೆಟ್ಟದ ಮೇಲಿದ್ದು, ಕೆಳಗಿಳಿದು ಬಂದಾಗ ಮಳೆ ನಿಂತಿತ್ತು. ನಮ್ಮ ದೇಹದ ಬಿಸಿಗೆ ನಮ್ಮ ಬಟ್ಟೆಗಳೂ ಅರ್ಧಂಬರ್ಧ ಒಣಗಿದ್ದವು.

Untitled Design (32)

ಮರಳಿ ಬರುವಾಗ ಡ್ರೈವರ್ ನಮಗೆ ಅನೇಕ ಗುಡಿಗಳನ್ನು ತೋರಿಸಿದ. ಅಲ್ಲಿಯ ಸಂಸ್ಕೃತಿ ಹಾಗೂ ಆಚರಣೆಗಳು ವಿಭಿನ್ನವಾಗಿವೆ. ಅಲ್ಲಿನದ್ದೇ ಒಂದು ವ್ಯಾಕ್ಸ್ ಮೂಜಿಯಂಗೆ ಭೇಟಿನೀಡಿದೆವು. ಇಲ್ಲಿ ಹೊಸತನವೇನೂ ಇಲ್ಲ. ನಂತರ ಚಾಕೊಲೆಟ್ ಫೆಸ್ಟ್‌ನಲ್ಲಿ ಭಾಗವಹಿಸಿದೆವು. ಇದು ನಮಗೆ ಹೊಸತು. ಲೋಣಾವಾಲಾ ಬಗೆಬಗೆಯ ಚಿಕ್ಕಿ ತಯಾರಿಸಿ ಮಾರುವುದರಲ್ಲಿ ಎತ್ತಿದ ಕೈ. ನಮ್ಮ ಡ್ರೈವರ್‍ ತೋರಿಸಿದ ಅಂಗಡಿಯಲ್ಲಿ ಸ್ವಲ್ಪ ಖರೀದಿಸಿದೆವು. ರೇಯಾಳಿಗಾಗಿ ಹೊಸ ನಮೂನೆಯ ಲಾಲಿಪಾಪ್ ಖರೀದಿಸಿದೆವು. ಶೇಂಗಾ ಹಾಗೂ ಎಳ್ಳಿನ ಚಿಕ್ಕಿಗಳು ತುಂಬಾ ರುಚಿಯಾಗಿದ್ದವು. ಲೋಣಾವಾಲಾ ಅನುಭವಗಳು ನಮ್ಮ ಊಹೆಗಿಂತ ಭಿನ್ನವಾಗಿದ್ದವು. ಎರಡು ದಿನಗಳಲ್ಲೇ ಎರಡು ತಿಂಗಳಿನ ಸ್ನಾನವಾಯಿತು. ನಮ್ಮಿಬ್ಬರಿಗೂ ಶೀತ-ಕೆಮ್ಮುಗಳ ಭಯವಿಲ್ಲ. ಹಾಗಾಗಿ ಬಿಂದಾಸ್‌ ಆಗಿ ಮಳೆಯಲ್ಲಿ ನೆನೆದೆವು. ಪುಣೆಗೆ ಬಂದು ಬಸ್ ಮುಖಾಂತರ ನಮ್ಮೂರಿಗೆ ಮರಳಿದೆವು.

Pramod Mohan Hegde

Pramod Mohan Hegde

A media professional with four years of experience in journalism, having worked with leading Kannada publications such as Vistara, Vijayavani, and Vijaya Karnataka as a cinema journalist. Also an author with a keen interest in travel and cinema. Currently serving as Senior Sub Editor at Pravasi Prapancha, contributing editorial expertise and engaging storytelling to the media industry.

ಗೋವಾ ಹೋದರೆ ಈ ಬೀಚ್‌ಗಳನ್ನು ಮಿಸ್‌ ಮಾಡಿಕೊಳ್ಳಲೇಬೇಡಿ!

Read Previous

ಗೋವಾ ಹೋದರೆ ಈ ಬೀಚ್‌ಗಳನ್ನು ಮಿಸ್‌ ಮಾಡಿಕೊಳ್ಳಲೇಬೇಡಿ!

ತತ್ಕಾಲ್ ಬುಕಿಂಗ್ ಸಮಯದಲ್ಲಿ ಬದಲಾವಣೆಗಲಿಲ್ಲ: IRCTC ಸ್ಪಷ್ಟನೆ

Read Next

ತತ್ಕಾಲ್ ಬುಕಿಂಗ್ ಸಮಯದಲ್ಲಿ ಬದಲಾವಣೆಗಲಿಲ್ಲ: IRCTC ಸ್ಪಷ್ಟನೆ