ಆನ್‌ಲೈನ್ ಬುಕಿಂಗ್ ಸಂಸ್ಥೆಗೆ 10,000 ರು. ದಂಡ ವಿಧಿಸಿದ ಗ್ರಾಹಕ ನ್ಯಾಯಾಲಯ!
ವಿಚಾರಣೆಯ ವೇಳೆ ರೆಡ್‌ಬಸ್ ಸಂಸ್ಥೆಯು, ʼನಾವು ಕೇವಲ ಪ್ರಯಾಣಿಕರು ಮತ್ತು ಬಸ್ ಆಪರೇಟರ್‌ಗಳನ್ನು ಜೋಡಿಸುವ ಆನ್‌ಲೈನ್ ಮಧ್ಯವರ್ತಿ ಮಾತ್ರ. ಬಸ್ ವೇಳಾಪಟ್ಟಿ ಅಥವಾ ಕಾರ್ಯಾಚರಣೆಯ ಮೇಲೆ ನಮ್ಮ ಯಾವುದೇ ನಿಯಂತ್ರಣವಿರುವುದಿಲ್ಲ,ʼ ಎಂದು ತನಗೂ ಇದಕ್ಕೂ ಸಂಬಂಧವಿಲ್ಲ ಎಂಬಂತೆ ವಾದಿಸಿತು.
ಆನ್‌ಲೈನ್ ಮೂಲಕ ಬಸ್ ಟಿಕೆಟ್ ಬುಕ್ ಮಾಡಿದ್ದ ಪ್ರಯಾಣಿಕರೊಬ್ಬರಿಗೆ, ಪ್ರಯಾಣ ಆರಂಭವಾಗಲು ಕೇವಲ 17 ನಿಮಿಷ ಬಾಕಿ ಇರುವಾಗ ಟಿಕೆಟ್ ರದ್ದುಗೊಳಿಸಿ ತೀವ್ರ ಆಘಾತ ನೀಡಿದ್ದ ಆನ್‌ಲೈನ್ ಟಿಕೆಟಿಂಗ್ ಪ್ಲಾಟ್‌ಫಾರ್ಮ್ 'ರೆಡ್‌ಬಸ್' ಮತ್ತು ಸಂಬಂಧಿತ ಬಸ್ ಆಪರೇಟರ್‌ಗೆ ಗ್ರಾಹಕ ನ್ಯಾಯಾಲಯವು ಭಾರಿ ದಂಡ ವಿಧಿಸಿದೆ. ಕೊನೆ ಕ್ಷಣದಲ್ಲಿ ಸೇವೆ ಇಲ್ಲದ ಕಾರಣ ಪ್ರಯಾಣಿಕರನ್ನು ನಡುರಾತ್ರಿಯಲ್ಲಿ ಪರದಾಡುವಂತೆ ಮಾಡಿದ್ದಕ್ಕಾಗಿ ಒಟ್ಟು ರು.10,000 ಪರಿಹಾರವನ್ನು ಜಂಟಿಯಾಗಿ ಪಾವತಿಸುವಂತೆ ಹಿಮಾಚಲ ಪ್ರದೇಶದ ಕಾಂಗ್ರಾ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗವು ಆದೇಶಿಸಿದೆ.
ಇದನ್ನೂ ಓದಿ: ಸ್ಪೈಸ್‌ಜೆಟ್‌ಗೆ 62,000 ರು. ದಂಡ
ಜಯಂತ್ ಪಟಿಯಾಲ್ ಎಂಬ ಪ್ರಯಾಣಿಕರು ಅಕ್ಟೋಬರ್ 5, 2023 ರಂದು ಹಿಮಾಚಲ ಪ್ರದೇಶದ ಪಾಲಂಪುರ್‌ನಿಂದ ದೆಹಲಿಗೆ ಪ್ರಯಾಣಿಸಲು 'ರೆಡ್‌ಬಸ್' ಆಪ್ ಮೂಲಕ 600 ರು. ಪಾವತಿಸಿ 'ಭರ್ಮಣಿ ಟ್ರಾವೆಲ್ಸ್' ಸಂಸ್ಥೆಯ ವೋಲ್ವೋ ಬಸ್ ಟಿಕೆಟ್ ಬುಕ್ ಮಾಡಿದ್ದರು. ಟಿಕೆಟ್ ಪ್ರಕಾರ ಬಸ್ ರಾತ್ರಿ 10:15 ಕ್ಕೆ ಹೊರಡಬೇಕಾಗಿತ್ತು. ಜಯಂತ್ ಅವರು ನಿಗದಿತ ಸಮಯಕ್ಕಿಂತ 20-30 ನಿಮಿಷ ಮುಂಚಿತವಾಗಿಯೇ ಬೋರ್ಡಿಂಗ್ ಪಾಯಿಂಟ್‌ಗೆ ತಲುಪಿದ್ದರು.
ಬೋರ್ಡಿಂಗ್ ಪಾಯಿಂಟ್ ತಲುಪಿದ ಜಯಂತ್ ಅವರು ಬಸ್‌ನ ಆಗಮನವನ್ನು ಖಚಿತಪಡಿಸಿಕೊಳ್ಳಲು ಬಸ್ ಆಪರೇಟರ್ ಭರ್ಮಣಿ ಟ್ರಾವೆಲ್ಸ್ ಅನ್ನು ಸಂಪರ್ಕಿಸಿದಾಗ ಅವರಿಗೆ ಭಾರಿ ಆಘಾತ ಕಾದಿತ್ತು. ರಾತ್ರಿ 10:15 ಕ್ಕೆ ತಮ್ಮ ಯಾವುದೇ ಬಸ್ ನಿಗದಿಯಾಗಿಲ್ಲ ಮತ್ತು ಅಂದಿನ ಅವರ ಕೊನೆಯ ಬಸ್ ಈಗಾಗಲೇ ರಾತ್ರಿ 8 ಗಂಟೆಗೇ ಹೊರಟುಹೋಗಿದೆ ಎಂದು ಆಪರೇಟರ್ ತಿಳಿಸಿದರು.
ತಕ್ಷಣ ಜಯಂತ್ ಅವರು ರೆಡ್‌ಬಸ್ ಗ್ರಾಹಕ ಸೇವಾ ಕೇಂದ್ರವನ್ನು ಸಂಪರ್ಕಿಸಿ ದೂರು ನೀಡಿದರು. ಆದರೆ, ರಾತ್ರಿ 9:58 ಕ್ಕೆ- ಅಂದರೆ ಬಸ್ ಹೊರಡಲು ಕೇವಲ 17 ನಿಮಿಷ ಬಾಕಿ ಇರುವಾಗ ಅವರ ಟಿಕೆಟ್ ರದ್ದಾಗಿದೆ ಮತ್ತು ಹಣವನ್ನು ಮರುಪಾವತಿ ಮಾಡಲಾಗುತ್ತಿದೆ ಎಂಬ ಸಂದೇಶ ರೆಡ್‌ಬಸ್‌ನಿಂದ ಬಂದಿತು.
ತುರ್ತು ಕೆಲಸದ ನಿಮಿತ್ತ ದೆಹಲಿ ತಲುಪಬೇಕಾಗಿದ್ದ ಜಯಂತ್ ಅವರಿಗೆ ನಡುರಾತ್ರಿಯಲ್ಲಿ ಪರ್ಯಾಯ ಬಸ್‌ಗಳ ಸೌಲಭ್ಯ ಸಿಗಲಿಲ್ಲ. ಇದರಿಂದಾಗಿ ಅವರು ಮಧ್ಯರಾತ್ರಿಯಲ್ಲಿ ಬೋರ್ಡಿಂಗ್ ಪಾಯಿಂಟ್‌ನಿಂದ ಸುಮಾರು 40 ಕಿಮೀ. ದೂರದಲ್ಲಿದ್ದ ಹತ್ತಿರದ ವಿಮಾನ ನಿಲ್ದಾಣಕ್ಕೆ ಪ್ರಯಾಣ ಬೆಳೆಸಿ, ಮರುದಿನ ಬೆಳಗ್ಗೆ ದೆಹಲಿ ತಲುಪಲು ಕೊನೆ ಕ್ಷಣದ ಭಾರಿ ದುಬಾರಿ ದರದ ವಿಮಾನ ಟಿಕೆಟ್ ಬುಕ್ ಮಾಡಬೇಕಾಯಿತು. ಇದರಿಂದ ತಮಗಾದ ಆರ್ಥಿಕ ನಷ್ಟ ಮತ್ತು ಮಾನಸಿಕ ಕಿರುಕುಳಕ್ಕೆ ಪರಿಹಾರ ಕೋರಿ ಅವರು ಗ್ರಾಹಕ ಆಯೋಗದ ಮೆಟ್ಟಿಲೇರಿದರು.
ವಿಚಾರಣೆಯ ವೇಳೆ ರೆಡ್‌ಬಸ್ ಸಂಸ್ಥೆಯು, ʼನಾವು ಕೇವಲ ಪ್ರಯಾಣಿಕರು ಮತ್ತು ಬಸ್ ಆಪರೇಟರ್‌ಗಳನ್ನು ಜೋಡಿಸುವ ಆನ್‌ಲೈನ್ ಮಧ್ಯವರ್ತಿ ಮಾತ್ರ. ಬಸ್ ವೇಳಾಪಟ್ಟಿ ಅಥವಾ ಕಾರ್ಯಾಚರಣೆಯ ಮೇಲೆ ನಮ್ಮ ಯಾವುದೇ ನಿಯಂತ್ರಣವಿರುವುದಿಲ್ಲ,ʼ ಎಂದು ತನಗೂ ಇದಕ್ಕೂ ಸಂಬಂಧವಿಲ್ಲ ಎಂಬಂತೆ ವಾದಿಸಿತು.
ಆದರೆ, ಕಾಂಗ್ರಾ ಜಿಲ್ಲಾ ಗ್ರಾಹಕ ಆಯೋಗದ ಅಧ್ಯಕ್ಷರಾದ ಹೇಮಾಂಶು ಮಿಶ್ರಾ ಮತ್ತು ಸದಸ್ಯರಾದ ಆರತಿ ಸೂದ್ ಹಾಗೂ ನಾರಾಯಣ್ ಠಾಕೂರ್ ಅವರ ಪೀಠವು ಈ ವಾದವನ್ನು ಕಟುವಾಗಿ ತಿರಸ್ಕರಿಸಿತು:
ʼಒಂದು ಆನ್‌ಲೈನ್ ಪ್ಲಾಟ್‌ಫಾರ್ಮ್ ಗ್ರಾಹಕರಿಂದ ಹಣವನ್ನು ಸ್ವೀಕರಿಸಿ, ಸೇವಾ ಶುಲ್ಕವನ್ನು ವಿಧಿಸಿ, ಟಿಕೆಟ್ ಕನ್ಫರ್ಮ್ ಮಾಡಿದ ನಂತರ ರಸ್ತೆಯಲ್ಲಿ ಅಸ್ತಿತ್ವದಲ್ಲೇ ಇಲ್ಲದ ಸೇವೆಗೆ ತಾನು ಜವಾಬ್ದಾರನಲ್ಲ ಎಂದು ನುಣುಚಿಕೊಳ್ಳಲು ಸಾಧ್ಯವಿಲ್ಲ. ಕನ್ಫರ್ಮ್ ಆದ ಟಿಕೆಟ್ ಅನ್ನು ಪ್ರಯಾಣದ ಕೇವಲ 17 ನಿಮಿಷ ಮುಂಚೆ ರದ್ದುಗೊಳಿಸುವುದು ಇವೆರಡೂ ಸಂಸ್ಥೆಗಳ ತೀವ್ರ ನಿರ್ಲಕ್ಷ್ಯ ಹಾಗೂ 'ಅನ್‌ಫೇರ್ ಟ್ರೇಡ್ ಪ್ರಾಕ್ಟೀಸ್ʼ ತೋರ್ಪಡಿಸುತ್ತದೆ ಎಂದರು
ಬಸ್ ಆಪರೇಟರ್ ನ್ಯಾಯಾಲಯಕ್ಕೆ ಹಾಜರಾಗದ ಹಿನ್ನೆಲೆಯಲ್ಲಿ, ರೆಡ್‌ಬಸ್ ಮತ್ತು ಭರ್ಮಣಿ ಟ್ರಾವೆಲ್ಸ್ ಇಬ್ಬರನ್ನೂ ಜಂಟಿಯಾಗಿ ಹೊಣೆಗಾರರನ್ನಾಗಿ ಮಾಡಿದ ಗ್ರಾಹಕ ಆಯೋಗವು ಜುಲೈ 4, 2026 ರ ತನ್ನ ಆದೇಶದಲ್ಲಿ ಈ ಕೆಳಗಿನಂತೆ ತೀರ್ಪು ನೀಡಿದೆ:
- ಮಾನಸಿಕ ಯಾತನೆ ಮತ್ತು ಕಿರುಕುಳಕ್ಕೆ ಪರಿಹಾರ: ರು. 5,000
- ನ್ಯಾಯಾಲಯದ ವೆಚ್ಚ : ರು. 5,000
- ಒಟ್ಟು ಮೊತ್ತ: ರು. 10,000 (ಜಯಂತ್ ಅವರಿಗೆ ಈಗಾಗಲೇ ಸಿಕ್ಕಿರುವ ಟಿಕೆಟ್ ರೀಫಂಡ್ ಹೊರತಾಗಿ ಈ ಮೊತ್ತವನ್ನು ನೀಡಬೇಕು).
ಈ ಒಟ್ಟು ರು.10,000 ಮೊತ್ತವನ್ನು ಆದೇಶದ ಪ್ರತಿ ಸಿಕ್ಕ 30 ದಿನಗಳ ಒಳಗಾಗಿ ಪಾವತಿಸಬೇಕು. ತಪ್ಪಿದಲ್ಲಿ, ದೂರು ದಾಖಲಿಸಿದ ದಿನಾಂಕದಿಂದ ವಾರ್ಷಿಕ 9% ನಷ್ಟು ಬಡ್ಡಿಯನ್ನು ಸೇರಿಸಿ ನೀಡಬೇಕಾಗುತ್ತದೆ ಎಂದು ಆಯೋಗ ಸ್ಪಷ್ಟಪಡಿಸಿದೆ. ಆನ್‌ಲೈನ್ ಬುಕಿಂಗ್ ಆಪ್‌ಗಳು ಕೇವಲ ಕಮಿಷನ್ ಪಡೆಯುವುದಷ್ಟೇ ಅಲ್ಲದೆ, ಗ್ರಾಹಕರ ಸುರಕ್ಷತೆ ಮತ್ತು ನಂಬಿಕೆಯನ್ನು ಕಾಯ್ದುಕೊಳ್ಳುವುದು ಕಡ್ಡಾಯ ಎಂಬುದನ್ನು ಈ ತೀರ್ಪು ಪುನರುಚ್ಚರಿಸಿದೆ.