Thursday, October 2, 2025
Thursday, October 2, 2025

ವನ್ಯಜೀವಿಗಳೊಂದಿಗೆ ಸಹಬಾಳ್ವೆ ಇಂದಿನ ಅಗತ್ಯ: ಈಶ್ವರ ಖಂಡ್ರೆ

ರಾಜ್ಯ ವನ್ಯಜೀವಿ ಸಂರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡಿರುವುದರಿಂದಲೇ ನಮ್ಮ ರಾಜ್ಯ ಆನೆಗಳ ಸಂಖ್ಯೆಯಲ್ಲಿ ನಂ.1 ಸ್ಥಾನದಲ್ಲಿದೆ. ರಾಜ್ಯದಲ್ಲಿ 5395 ಆನೆಗಳಿದ್ದರೆ, 563 ಹುಲಿಗಳಿವೆ. ದೇಶದಲ್ಲೇ ಅತಿ ಹೆಚ್ಚು ಹುಲಿಗಳಿರುವ ರಾಜ್ಯಗಳ ಪೈಕಿ ಕರ್ನಾಟಕ 2ನೇ ಸ್ಥಾನದಲ್ಲಿದೆ. ಆದರೆ ಮಲೆ ಮಹದೇಶ್ವರ ಬೆಟ್ಟದಲ್ಲಿ ವಿಷ ಪ್ರಾಶನದಿಂದ ಒಂದೇ ದಿನ ಶೇ.1ರಷ್ಟು ಹುಲಿಗಳು ಸಾವಿಗೀಡಾದವು, ಇದು ಹೃದಯ ವಿದ್ರಾವಕ ಘಟನೆ ಎಂದು ಈಶ್ವರ ಖಂಡ್ರೆಯವರು ನೋವು ವ್ಯಕ್ತಪಡಿಸಿದರು.

ಬೆಂಗಳೂರು, ಅ.2: ಮಲೆ ಮಹದೇಶ್ವರ ಬೆಟ್ಟದಲ್ಲಿ 5 ಹುಲಿ, ಮಧುಗಿರಿಯ ಮಿಡಿಗೇಶಿಯಲ್ಲಿ 20 ನವಿಲು, ಬಂಡೀಪುರದಲ್ಲಿ 19 ಕೋತಿಗಳ ಸಾವು ಅತೀವ ನೋವು ತಂದಿದ್ದು, ವನ್ಯಜೀವಿ ಸಂರಕ್ಷಣೆಯ ಜವಾಬ್ದಾರಿ ಹೆಚ್ಚಿಸಿದೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಹೇಳಿದ್ದಾರೆ.

ವಿಧಾನಸೌಧದ ಬಳಿ 71ನೇ ವನ್ಯಜೀವಿ ಸಪ್ತಾಹದಲ್ಲಿ ಮಾತನಾಡಿದ ಅವರು, ಕರ್ನಾಟಕ ರಾಜ್ಯ ವನ್ಯಜೀವಿ ಸಂರಕ್ಷಣಾ ಕಾಯಿದೆಯನ್ನು ಕಟ್ಟುನಿಟ್ಟಾಗಿ ಜಾರಿಗೆ ತಂದಿದೆ. ಆದರೂ ಇಂಥ ಘಟನೆಗಳು ನಡೆಯುತ್ತಿರುವುದು ದುರ್ದೈವ. ಭೂಮಿಯಲ್ಲಿ ಹುಟ್ಟಿದ ಪ್ರತಿಯೊಂದು ಜೀವಿಗೂ ಬದುಕುವ ಹಕ್ಕಿದ್ದು, ವನ ಪ್ರದೇಶ ಕ್ಷೀಣಿಸುತ್ತಿರುವ ಪ್ರಸಕ್ತ ಸನ್ನಿವೇಶದಲ್ಲಿ ವನ್ಯಜೀವಿಗಳೊಂದಿಗೆ ಸಹಬಾಳ್ವೆ ಅನಿವಾರ್ಯವಾಗಿದೆ ಎಂದರು. ಅಲ್ಲದೆ ವನ್ಯಜೀವಿಗಳು ಪ್ರಕೃತಿ ಸಮತೋಲನ ಕಾಪಾಡುವಲ್ಲಿ ಮಹತ್ವದ ಪಾತ್ರ ವಹಿಸುತ್ತಿದ್ದು, ಈ ಬಗ್ಗೆ ಜಾಗೃತಿ ಮೂಡಿಸುವುದೇ ಈ ಸಪ್ತಾಹದ ಉದ್ದೇಶವಾಗಿದೆ ಎಂದರು.

vanyajeevi saptaha 2

ರಾಜ್ಯ ವನ್ಯಜೀವಿ ಸಂರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡಿರುವುದರಿಂದಲೇ ನಮ್ಮ ರಾಜ್ಯ ಆನೆಗಳ ಸಂಖ್ಯೆಯಲ್ಲಿ ನಂ.1 ಸ್ಥಾನದಲ್ಲಿದೆ. ರಾಜ್ಯದಲ್ಲಿ 5395 ಆನೆಗಳಿದ್ದರೆ, 563 ಹುಲಿಗಳಿವೆ. ದೇಶದಲ್ಲೇ ಅತಿ ಹೆಚ್ಚು ಹುಲಿಗಳಿರುವ ರಾಜ್ಯಗಳ ಪೈಕಿ ಕರ್ನಾಟಕ 2ನೇ ಸ್ಥಾನದಲ್ಲಿದೆ. ಆದರೆ ಮಲೆ ಮಹದೇಶ್ವರ ಬೆಟ್ಟದಲ್ಲಿ ವಿಷ ಪ್ರಾಶನದಿಂದ ಒಂದೇ ದಿನ ಶೇ.1ರಷ್ಟು ಹುಲಿಗಳು ಸಾವಿಗೀಡಾದವು ಇದು ಹೃದಯ ವಿದ್ರಾವಕ ಘಟನೆ ಎಂದು ನೋವು ವ್ಯಕ್ತಪಡಿಸಿದರು.

ಇಂಥ ಆಘಾತಕಾರಿ ಘಟನೆಗಳು ಮರುಕಳಿಸಬಾರದು. ವನ್ಯಜೀವಿಗಳ ಸಂರಕ್ಷಣೆ ಕೇವಲ ಅರಣ್ಯ ಸಿಬ್ಬಂದಿಯ ಜವಾಬ್ದಾರಿ ಮಾತ್ರ ಅಲ್ಲ. ನಾಗರಿಕರ ಕರ್ತವ್ಯವೂ ಆಗಿದೆ ಎಂದ ಈಶ್ವರ ಖಂಡ್ರೆ, ಇಂದು ಹಲವು ವನ್ಯ ಜೀವಿಗಳು ಅಳಿವಿನ ಅಂಚಿನಲ್ಲಿವೆ. ಕೆಲವು ಅವಸಾನ ಕಂಡಿವೆ. ಹೀಗಾಗಿ ಜನರಲ್ಲಿ ಅರಣ್ಯದ ಬಗ್ಗೆ ವನ್ಯ ಜೀವಿಗಳ ಬಗ್ಗೆ ಜಾಗೃತಿ ಮೂಡಿಸುವ ಅಗತ್ಯ ಹಿಂದೆಂದಿಗಿಂತ ಇಂದು ಹೆಚ್ಚಾಗಿದೆ ಎಂದರು.

ಗಾಂಧೀ ಸ್ಮರಣೆ:

ಇಂದು ರಾಷ್ಟ್ರಪಿತ ಮಹಾತ್ಮಾ ಗಾಂಧೀ ಜಯಂತಿ. ಸತ್ಯ, ಶಾಂತಿ ಮತ್ತು ಅಹಿಂಸೆ ಎಂಬ ಶಸ್ತ್ರ ಹಿಡಿದು ಸತ್ಯಾಗ್ರಹದ ಶಕ್ತಿಯನ್ನು ಜಗತ್ತಿಗೆ ತೋರಿದ ಮತ್ತು ಭಾರತವನ್ನು ಪರಕೀಯರ ದಾಸ್ಯದಿಂದ ಮುಕ್ತಗೊಳಿಸಿದ ಮಹಾತ್ಮಾ ಗಾಂಧೀ ಅವರು ಪ್ರಕೃತಿ, ಪರಿಸರದ ಬಗ್ಗೆ ಅಪಾರ ಕಾಳಜಿ ಹೊಂದಿದ್ದರು. ಮಹಾತ್ಮಾ ಗಾಂಧೀ ಅವರು, “ಪ್ರಕೃತಿ, ಪರಿಸರ ಇರುವುದು ಮನುಷ್ಯನ ಅವಶ್ಯಕತೆ ಪೂರೈಸುವುದಕ್ಕೇ ಹೊರತು, ದುರಾಸೆ ಪೂರೈಸುವುದಕ್ಕಲ್ಲ’’ ಎಂದು ಪ್ರತಿಪಾದಿಸುತ್ತಿದ್ದರು. ಈ ಜಗತ್ತು ನಮ್ಮ ಪಿತ್ರಾರ್ಜಿತ ಆಸ್ತಿಯಲ್ಲ, ಬದಲಾಗಿ ನಮ್ಮ ಮುಂದಿನ ಪೀಳಿಗೆಯಿಂದ ನಾವು ಪಡಿದಿರುವ ಸಾಲ ಎಂದೂ ಮಹಾತ್ಮಾ ಗಾಂಧೀ ಹೇಳುತ್ತಿದ್ದರು ಎಂದು ಖಂಡ್ರೆ ಸ್ಮರಿಸಿದರು.

ಬೆಂಗಳೂರು ನಗರವೊಂದರಲ್ಲೇ ಸುಮಾರು 10 ಸಾವಿರ ಕೋಟಿ ರೂ. ಬೆಲೆ ಬಾಳುವ 250 ಎಕರೆಗೂ ಹೆಚ್ಚು ಅರಣ್ಯ ಭೂಮಿ ಒತ್ತುವರಿ ತೆರವು ಮಾಡಿಸಲಾಗಿದ್ದು, ಅಲ್ಲಿ ಸಸಿಗಳನ್ನು ನೆಡಲಾಗಿದೆ. ಬೆಂಗಳೂರು ನಗರದ ಹಸಿರು ಪ್ರದೇಶ ಹೆಚ್ಚಳ ಮಾಡಲಾಗುತ್ತಿದೆ. ಇದರ ಜೊತೆಗೆ ಮಾದಪ್ಪನಹಳ್ಳಿಯಲ್ಲಿ 153 ಎಕರೆ ಪ್ರದೇಶದಲ್ಲಿ ಲಾಲ್ ಬಾಗ್ ಮಾದರಿಯಲ್ಲಿ ಬೃಹತ್ ಸಸ್ಯೋದ್ಯಾನ ನಿರ್ಮಾಣ ಮಾಡಲಾಗುತ್ತಿದೆ. ಹೆಸರುಘಟ್ಟ ಪ್ರದೇಶದಲ್ಲಿ 5678 ಎಕರೆ ಪ್ರದೇಶವನ್ನು ಸಂರಕ್ಷಿತ ಹುಲ್ಲುಗಾವಲು ಎಂದು ಘೋಷಿಸಲಾಗಿದೆ ಎಂದು ಈಶ್ವರ ಖಂಡ್ರೆ ತಿಳಿಸಿದರು.

vanyajeevi saptaha

ಕಂಟೋನ್ಮೆಂಟ್ ರೈಲು ನಿಲ್ದಾಣದ ಬಳಿ 371 ಮರಗಳಿರುವ ಪ್ರದೇಶವನ್ನು ಪಾರಂಪರಿಕ ಜೀವವೈವಿಧ್ಯತೆಯ ತಾಣ ಎಂದು ಘೋಷಿಸಲಾಗಿದೆ. ನಾವು ಸರ್ಕಾರದ ವತಿಯಿಂದ ಇಲಾಖೆಯ ವತಿಯಿಂದ ಪರಿಸರ, ಅರಣ್ಯ, ವನ್ಯಜೀವಿ ರಕ್ಷಣೆಗೆ ಕ್ರಮ ಕೈಗೊಂಡಿದ್ದೇವೆ. ನೀವೂ ನಾಗರಿಕರು ನಿಮ್ಮ ಕೈಲಾದ ಕೊಡುಗೆ ನೀಡಬೇಕು. ಪ್ರಕೃತಿ ಪರಿಸರ ಉಳಿಸಬೇಕು ಎಂದು ಮನವಿ ಮಾಡಿದರು.

ಪಟಾಕಿ ತ್ಯಜಿಸಲು, ಇಲ್ಲವೆ ಹಸಿರು ಪಟಾಕಿ ಸಿಡಿಸಲು ಮನವಿ:

ಮುಂದಿನ ತಿಂಗಳು ದೀಪಾವಳಿ ಹಬ್ಬದಲ್ಲಿ ಜನರು ಪಟಾಕಿ ಸಿಡಿಸಿ ಸಂಭ್ರಮಿಸುತ್ತಾರೆ. ಆದರೆ ಪಟಾಕಿಯಲ್ಲಿ ಭಾರ ಲೋಹಗಳಿದ್ದು, ಅದರಿಂದ ಆಸ್ತಮಾ, ಅಲರ್ಜಿ ಮೊದಲಾದ ಹಲವು ಸಮಸ್ಯೆ ಎದುರಾಗುತ್ತದೆ. ಪರಿಸರ ಮಾಲಿನ್ಯ ಉಂಟಾಗುತ್ತದೆ. ದೀಪಾವಳಿ ಸಮಯದಲ್ಲಿ ಹಿಮ ಸುರಿಯುತ್ತಿರುತ್ತದೆ. ಆ ಹಿಮ ಅಥವಾ ಮಂಜಿನ ಜೊತೆ ಈ ಪಟಾಕಿಯ ಹೊಗೆ ಸೇರಿ ದಟ್ಟವಾಗಿ ಹೊಂಜು – ಸ್ಲೋಕ್ ಪ್ಲಸ್ ಫಾಗ್ ಸ್ಮಾಗ್ ಆಗುತ್ತದೆ. ಇದರಿಂದ ಪುಟ್ಟ ಮಕ್ಕಳು, ಹಿರಿಯ ನಾಗರಿಕರು ಉಸಿರಾಡಲೂ ಕಷ್ಟಪಡಿಸುವ ಸ್ಥಿತಿ ನಿರ್ಮಾಣವಾಗುತ್ತದೆ. ಹೀಗಾಗಿ ಪಟಾಕಿ ಹಚ್ಚುವುದಿಲ್ಲ ಎಂದು ನಿರ್ಧಾರ ಮಾಡಿ, ಇಲ್ಲ ನಾವು ಹಬ್ಬ ಪಟಾಕಿ ಸಿಡಿಸಲೇಬೇಕು ಎಂದರೆ ಹಸಿರು ಪಟಾಕಿ ಮಾತ್ರ ಹಚ್ಚಿ ಎಂದು ಮನವಿ ಮಾಡಿದರು.

ಉದ್ಘಾಟನಾ ಕಾರ್ಯಕ್ರಮದಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ವನ, ವನ್ಯಜೀವಿ ರಾಯಭಾರಿ ಮಾಜಿ ಕ್ರಿಕೆಟಿಗ ಅನಿಲ್ ಕುಂಬ್ಳೆ, ಅರಣ್ಯಪಡೆ ಮುಖ್ಯಸ್ಥರಾದ ಮೀನಾಕ್ಷಿ ನೇಗಿ, ಮುಖ್ಯ ವನ್ಯಜೀವಿ ಪರಿಪಾಲಕ ಪಿ.ಸಿ.ರೇ ಮತ್ತಿತರರು ಪಾಲ್ಗೊಂಡಿದ್ದರು.

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ದೇಶ ಸುತ್ತಬೇಕಿಲ್ಲ, ಕರ್ನಾಟಕದಲ್ಲೇ ಇವೆ ಅನೇಕ ಡಾಲ್ಫಿನ್‌ ತಾಣಗಳು..

Read Previous

ದೇಶ ಸುತ್ತಬೇಕಿಲ್ಲ, ಕರ್ನಾಟಕದಲ್ಲೇ ಇವೆ ಅನೇಕ ಡಾಲ್ಫಿನ್‌ ತಾಣಗಳು..

ನೋಡಬನ್ನಿ ರಾಮನಗರ..ಇತಿಹಾಸವನ್ನು ಒಡಲಲ್ಲಿ  ಹೊತ್ತ ಬೆಟ್ಟಗಳ ತವರೂರ..

Read Next

ನೋಡಬನ್ನಿ ರಾಮನಗರ..ಇತಿಹಾಸವನ್ನು ಒಡಲಲ್ಲಿ ಹೊತ್ತ ಬೆಟ್ಟಗಳ ತವರೂರ..