ಕೆಸಿಸಿಡಿ ಜಾಗತಿಕ ಸಮಾವೇಶ ಯಶಸ್ವಿ
ಸಮಾವೇಶವನ್ನು ಉದ್ಘಾಟಿಸಿದ ಅವರು, ಸಾಂಸ್ಕೃತಿಕ ಪಾಲುದಾರಿಕೆ, ಪ್ರವಾಸೋದ್ಯಮ ಪ್ರಚಾರ, ಜ್ಞಾನ ವಿನಿಮಯ ಮತ್ತು ವ್ಯಾಪಾರ ಸಹಕಾರದಂತಹ ಚಟುವಟಿಕೆಗಳ ಮೂಲಕ ಕರ್ನಾಟಕ ಹಾಗೂ ವಿಶ್ವದ ಹಲವು ದೇಶಗಳ ರಾಜತಾಂತ್ರಿಕ ಕಛೇರಿಗಳ ನಡುವಿನ ಸಹಯೋಗ ಬಲಪಡಿಸುವುದು ಕೆಸಿಸಿಡಿಯ ಮುಖ್ಯ ಗುರಿ ಎಂದು ತಿಳಿಸಿದರು.
ಕರ್ನಾಟಕ ಸರಕಾರ ಆಯೋಜಿಸಿದ ಕರ್ನಾಟಕ ಸಾಂಸ್ಕೃತಿಕ ರಾಜತಾಂತ್ರಿಕ ಕೋಶ (ಕೆಸಿಸಿಡಿ) ಜಾಗತಿಕ ಸಮಾವೇಶವು ಬೆಂಗಳೂರಿನಲ್ಲಿ ಯಶಸ್ವಿಯಾಗಿ ನೆರವೇರಿತು. ರಾಜ್ಯ ಪ್ರವಾಸೋದ್ಯಮವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಉತ್ತೇಜಿಸಲು ಈ ಸಮಾವೇಶ ಮಹತ್ವದ ಮೈಲುಗಲ್ಲಾಗಿದೆ ಎಂದು ಪ್ರವಾಸೋದ್ಯಮ ಸಚಿವ ಎಚ್.ಕೆ. ಪಾಟೀಲ್ ಅಭಿಪ್ರಾಯ ಪಟ್ಟರು.
ಸಮಾವೇಶವನ್ನು ಉದ್ಘಾಟಿಸಿದ ಅವರು, ಸಾಂಸ್ಕೃತಿಕ ಪಾಲುದಾರಿಕೆ, ಪ್ರವಾಸೋದ್ಯಮ ಪ್ರಚಾರ, ಜ್ಞಾನ ವಿನಿಮಯ ಮತ್ತು ವ್ಯಾಪಾರ ಸಹಕಾರದಂಥ ಚಟುವಟಿಕೆಗಳ ಮೂಲಕ ಕರ್ನಾಟಕ ಹಾಗೂ ವಿಶ್ವದ ಹಲವು ದೇಶಗಳ ರಾಜತಾಂತ್ರಿಕ ಕಛೇರಿಗಳ ನಡುವಿನ ಸಹಯೋಗ ಬಲಪಡಿಸುವುದು ಕೆಸಿಸಿಡಿಯ ಮುಖ್ಯ ಗುರಿ ಎಂದು ತಿಳಿಸಿದರು. ಈ ಹಿನ್ನೆಲೆಯಲ್ಲಿ ಇಲಾಖೆಯ ಹೊಸ ಸಾಂಸ್ಕೃತಿಕ ಡಿಪ್ಲೊಮಸಿ ಯೋಜನೆಯ ಕಾರ್ಯಸೂಚಿಗಳನ್ನು ಪರಿಚಯಿಸಲಾಯಿತು.

ಪ್ರವಾಸೋದ್ಯಮವು ಜಾಗತಿಕವಾಗಿ ಶಾಂತಿ, ಸಾಮರಸ್ಯ ಮತ್ತು ಸಾಂಸ್ಕೃತಿಕ ಸಹಯೋಗ ನಿರ್ಮಾಣಕ್ಕೆ ಪ್ರಮುಖ ಸಾಧನವೆಂದು ಹೇಳಿದ ಅವರು, “ಕರ್ನಾಟಕಕ್ಕೆ ಬರುವವರು ನಮ್ಮ ಆಧ್ಯಾತ್ಮಿಕ ಪರಂಪರೆ, ಹಬ್ಬ-ಸಂಪ್ರದಾಯ ಮತ್ತು ಇತಿಹಾಸವನ್ನು ಅರಿಯಬೇಕು ಮತ್ತು ಆ ನಿಟ್ಟಿನಲ್ಲಿ ನಮ್ಮ ಪ್ರವಾಸೋದ್ಯಮವನ್ನು ನಾವು ಅಭಿವೃದ್ಧಿ ಪಡಿಸಬೇಕು” ಎಂದು ತಿಳಿಸಿದರು. ಬಸವಣ್ಣ, ಕುವೆಂಪು ಮೊದಲಾದ ಮಹಾನ್ ಚಿಂತಕರು ಕರ್ನಾಟಕದ ಜಾಗತಿಕ ಸಾಂಸ್ಕೃತಿಕ ಪರಂಪರೆಯನ್ನು ಬಲಪಡಿಸಿದ್ದಾರೆ ಎಂಬುದನ್ನು ಇದೇ ಸಂದರ್ಭದಲ್ಲಿ ಅವರು ಸ್ಮರಿಸಿದರು.
ಹಂಪಿ, ಐಹೊಳೆ, ಕರಾವಳಿ, ಆಧ್ಯಾತ್ಮಿಕ ತಾಣಗಳು ಸೇರಿದಂತೆ ಕರ್ನಾಟಕದ ವೈವಿಧ್ಯಮಯ ಪ್ರವಾಸೋದ್ಯಮ ಸಂಪತ್ತಿನ ಮೇಲೆ ಬೆಳಕು ಚೆಲ್ಲಿದ ಅವರು, ಪ್ರವಾಸೋದ್ಯಮ ನೀತಿ 2024–29 ರ ಅಡಿಯಲ್ಲಿ ಸುಸ್ಥಿರ ಪ್ರವಾಸೋದ್ಯಮ ಬೆಳವಣಿಗೆ, ಪ್ರವಾಸಿಗರ ಸುರಕ್ಷತೆ ಹಾಗೂ ಜಿಲ್ಲಾ ಮಟ್ಟದ ಪ್ರವಾಸೋದ್ಯಮ ಅಭಿವೃದ್ಧಿಯ ಗುರಿಗಳನ್ನು ಪುನರುಚ್ಚರಿಸಿದರು.
ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಮಾತನಾಡಿ, ಕರ್ನಾಟಕ ಸರಕಾರವು ಪ್ರವಾಸೋದ್ಯಮವನ್ನು ಕೇವಲ ಆರ್ಥಿಕ ಚಟುವಟಿಕೆಯಾಗಿ ಮಾತ್ರವಲ್ಲದೆ, ಅಂತಾರಾಷ್ಟ್ರೀಯ ಸಂಬಂಧಗಳ ಬಲವರ್ಧಕವಾಗಿ ನೋಡುತ್ತಿದೆ ಎಂದು ಹೇಳಿದರು. ಗ್ಲೋಬಲ್ ಕಲ್ಚರಲ್ ಸೆಂಟರ್ ಕೇಂದ್ರವಾಗಿ ಬೆಳೆಯುತ್ತಿರುವ ಬೆಂಗಳೂರಿನಲ್ಲಿ ಬಿಸಿನೆಸ್ ಹೂಡಿಕೆಯ ಜತೆಗೆ ಪ್ರವಾಸೋದ್ಯಮವು ಸಹಜವಾಗಿ ಬೆಳೆಯುತ್ತಿದ್ದು, ಪ್ರವಾಸಕ್ಕೆ ಸಂಬಂಧಿತ ಅವಕಾಶಗಳನ್ನು ಸರಕಾರವು ಸಮರ್ಥವಾಗಿ ಬಳಸಿಕೊಳ್ಳತ್ತಿದೆ ಎಂದು ತಿಳಿಸಿದರು.