ಇರವಿಕುಳಂ ರಾಷ್ಟ್ರೀಯ ಉದ್ಯಾನವನ ಮರು ಆರಂಭ
ಮುನ್ನಾರ್‌ಗೆ ಭೇಟಿ ನೀಡುವ ಪ್ರವಾಸಿಗರಿಗೆ ಇರವಿಕುಳಂ ರಾಷ್ಟ್ರೀಯ ಉದ್ಯಾನವನವು ಒಂದು ಪ್ರಮುಖ ಆಕರ್ಷಣೆ. ವಿಶೇಷವಾಗಿ ಅಳಿವಿನಂಚಿನಲ್ಲಿರುವ ನೀಲಗಿರಿ ತಹ್ರ್ ಮರಿಗಳನ್ನು ಹತ್ತಿರದಿಂದ ನೋಡುವ ಅವಕಾಶವಿದೆ.
ಕೇರಳದ ಮುನ್ನಾರ್‌ನಲ್ಲಿರುವ ಪ್ರಸಿದ್ಧ ಇರವಿಕುಳಂ ರಾಷ್ಟ್ರೀಯ ಉದ್ಯಾನವನವು ಮತ್ತೆ ಬಾಗಿಲು ತೆರೆದಿದೆ.
ಅಳಿವಿನಂಚಿನಲ್ಲಿರುವ 'ನೀಲಗಿರಿ ತಹ್ರ್' ಎಂಬ ಕಾಡು ಕುರಿಗಳ ಸಂತಾನೋತ್ಪತ್ತಿಯ ಅವಧಿಗಾಗಿ ಈ ಉದ್ಯಾನವನವನ್ನು ತಾತ್ಕಾಲಿಕವಾಗಿ ಮುಚ್ಚಲಾಗಿತ್ತು. ಮರಿಗಳ ಜನನ ಮತ್ತು ಅವುಗಳ ಆರೈಕೆಯ ಸಮಯದಲ್ಲಿ ಪ್ರಾಣಿಗಳಿಗೆ ಯಾವುದೇ ಅಡಚಣೆ ಉಂಟಾಗಬಾರದು ಎಂಬ ಉದ್ದೇಶದಿಂದ ಪ್ರತಿ ವರ್ಷ ಜನವರಿ ಅಥವಾ ಫೆಬ್ರವರಿಯಿಂದ ಮಾರ್ಚ್ ಅಂತ್ಯದವರೆಗೆ ಉದ್ಯಾನವನವನ್ನು ಮುಚ್ಚಲಾಗುತ್ತದೆ.
ಇದನ್ನೂ ಓದಿ: ಕೋಝಿಕೋಡ್‌ನಲ್ಲಿ ಸಮುದ್ರದ ಅಲೆ, ಕೇರಳದ ಕಲೆ ಇದೆ
ಈ ವರ್ಷದ ಸಂತಾನೋತ್ಪತ್ತಿ ಅವಧಿಯಲ್ಲಿ ಉದ್ಯಾನವನದಲ್ಲಿ ಸುಮಾರು 100ಕ್ಕೂ ಹೆಚ್ಚು ಹೊಸ ನೀಲಗಿರಿ ತಹ್ರ್ ಮರಿಗಳು ಜನಿಸಿವೆ ಎಂದು ಅಂದಾಜಿಸಲಾಗಿದೆ. ಪ್ರವಾಸಿಗರು ಈಗ ಈ ಪುಟಾಣಿ ಮರಿಗಳನ್ನು ಅವುಗಳ ತಾಯಿಯೊಂದಿಗೆ ನೋಡುವ ಅವಕಾಶವಿದೆ.
ನೀಲಗಿರಿ ತಹ್ರ್ ಪಶ್ಚಿಮ ಘಟ್ಟಗಳ ದಕ್ಷಿಣ ಭಾಗಕ್ಕೆ ಮಾತ್ರ ಸೀಮಿತವಾದ ಒಂದು ವಿಶಿಷ್ಟ ಪ್ರಾಣಿ ಪ್ರಭೇದ. ಇವುಗಳನ್ನು ಅಳಿವಿನಂಚಿನಲ್ಲಿರುವ ಪ್ರಾಣಿಗಳ ಪಟ್ಟಿಯಲ್ಲಿ ಸೇರಿಸಲಾಗಿದ್ದು, ಇರವಿಕುಲಂ ರಾಷ್ಟ್ರೀಯ ಉದ್ಯಾನವನ ಇವುಗಳ ಅತಿ ದೊಡ್ಡ ವಾಸಸ್ಥಾನ ಎನ್ನಲಾಗಿದೆ. ಇರವಿಕುಲಂ ಕೇವಲ ಪ್ರಾಣಿಗಳಿಗೆ ಮಾತ್ರವಲ್ಲ, 12 ವರ್ಷಕ್ಕೊಮ್ಮೆ ಅರಳುವ 'ನೀಲಕುರಿಂಜಿ' ಹೂವುಗಳಿಗೂ ಪ್ರಸಿದ್ಧಿ ಹೊಂದಿದೆ.