ಮೈಸೂರು ಮೃಗಾಲಯ ಪ್ರವೇಶ ಇನ್ನು ದುಬಾರಿ
ಬನ್ನೇರುಘಟ್ಟ ಮೃಗಾಲಯದ ಟಿಕೆಟ್ ದರ ಆಗಸ್ಟ್ 1ರಿಂದ ಏರಿಕೆಯಾಗಿರುವ ಸುದ್ದಿಯ ಬೆನ್ನಲ್ಲೇ ಮೈಸೂರು ಚಾಮರಾಜೇಂದ್ರ ಮೃಗಾಲಯದ ಟಿಕೆಟ್ ದರದಲ್ಲೂ ಏರಿಕೆ ಕಂಡಿದೆ.
ಮೈಸೂರು: ಶ್ರೀ ಚಾಮರಾಜೇಂದ್ರ ಮೃಗಾಲಯ ಹಾಗೂ ಕಾರಂಜಿಕೆರೆ ಪ್ರಕೃತಿ ಉದ್ಯಾನವನ ಪ್ರವೇಶ ಶುಲ್ಕದ ದರ ಹೆಚ್ಚಳ ಮಾಡಲಾಗಿದ್ದು, ಆಗಸ್ಟ್ 1ರಿಂದಲೇ ಹೊಸ ದರ ಪರಿಷ್ಕರಣೆಗೊಳ್ಳಲಿದೆ. ಇತ್ತೀಚಿನ ದಿನಗಳಲ್ಲಿ ವಿದೇಶಿ ಮೃಗಾಲಯದಿಂದ ವಿದೇಶಿ ಪ್ರಾಣಿಗಳಾದ ಗೊರಿಲ್ಲಾ, ಜಾಗ್ವಾರ್, ಆಫ್ರಿಕಾದ ಬೇಟೆ ಚಿರತೆ, ಇತ್ಯಾದಿ ಪ್ರಾಣಿಗಳು ಮೃಗಾಲಯದ ಪ್ರಾಣಿ ಸಂಗ್ರಹಣೆಗೆ ಸೇರ್ಪಡೆಗೊಂಡಿರುವುದರಿಂದ ಈ ಎಲ್ಲಾ ಪ್ರಾಣಿಗಳ ನಿರ್ವಹಣೆ ವೆಚ್ಚ ಅಧಿಕವಾಗಿದೆ.

ಈ ನಿಟ್ಟಿನಲ್ಲಿ ಕಳೆದ 4 ವರ್ಷಗಳಿಂದಲೇ ತಟಸ್ಥವಾಗಿದ್ದ ಮೃಗಾಲಯ ಹಾಗೂ ಕಾರಂಜಿಕೆರೆಯ ಪ್ರವೇಶ ಶುಲ್ಕದ ದರಗಳನ್ನು ಶೇ 20%ರಷ್ಟು ಅಂದರೆ ವಯಸ್ಕರಿಗೆ 100 ರೂಪಾಯಿ ಇದ್ದ ಟಿಕೆಟ್ ದರ 120 ರೂಪಾಯಿಗೆ ಏರಿಕೆ ಮಾಡುವುದು ಸೂಕ್ತವೆಂಬ ಅಭಿಪ್ರಾಯವು ವ್ಯಕ್ತವಾಗಿರುವುದರಿಂದ ಕರ್ನಾಟಕ ಮೃಗಾಲಯ ಪ್ರಾಧಿಕಾರ ದರಗಳನ್ನು ಪರಿಷ್ಕರಣೆ ಮಾಡಲು ಅನುಮೋದನೆ ನೀಡಿದೆ.