ಉತ್ತರಾಖಂಡದ ಹೃಷಿಕೇಶದಲ್ಲಿರುವ ಗಂಗಾ ನದಿಯ ಮೇಲೆ ಅತ್ಯಾಧುನಿಕ ಬಜರಂಗ್‌ ಸೇತು ನಿರ್ಮಾಣವಾಗಿದ್ದು, ಶೀಘ್ರದಲ್ಲೇ ಲೋಕಾರ್ಪಣೆ ಆಗಲಿದೆ. ಈ ಹೊಸ ಸೇತುವೆಯು ಕೇವಲ ಸಾರಿಗೆ ಸಂಪರ್ಕವನ್ನಷ್ಟೇ ಅಲ್ಲದೆ, ಯಾತ್ರಾರ್ಥಿಗಳು ಮತ್ತು ಸಾಹಸಮಯ ಪ್ರವಾಸಿಗರಿಗೆ ಒಂದು ಅದ್ಭುತ ಪ್ರವಾಸಿ ತಾಣವಾಗಿ ಹೊರಹೊಮ್ಮಲಿದೆ.

ಹೃಷಿಕೇಶದ ಐತಿಹಾಸಿಕ ಲಕ್ಷ್ಮಣ ಜೂಲಾ ಸೇತುವೆಯು ಹಳೆಯದಾದ ಕಾರಣ ಮತ್ತು ಭದ್ರತಾ ದೃಷ್ಟಿಯಿಂದ 2022ರಲ್ಲಿ ಸಂಚಾರಕ್ಕೆ ನಿರ್ಬಂಧಿಸಲಾಗಿತ್ತು. ಅದರ ಪಕ್ಕದಲ್ಲೇ ಈಗ 'ಬಜರಂಗ್ ಸೇತು' ನಿರ್ಮಾಣವಾಗಿದೆ. ವಿಶೇಷ ಎಂದರೆ ಇದು ಏಷ್ಯಾದ ಎರಡನೆಯೆ ಅತಿ ದೊಡ್ಡ ಮತ್ತು ಭಾರತದ ಮೊದಲ ಗಾಜಿನ ನೆಲಹಾಸಿನ ಪಾದಚಾರಿ ತೂಗು ಸೇತುವೆಯಾಗಿದೆ.

ಇದನ್ನೂ ಓದಿ: ಭಾರತದಲ್ಲಿ ಗ್ರಾಮೀಣ ಪ್ರವಾಸೋದ್ಯಮದ ವಿಸ್ತರಣೆ

ಸೇತುವೆಯ ಮೇಲೆ ನಡೆಯುವಾಗ ಪಾದದ ಕೆಳಗೆ ಹರಿಯುವ ಗಂಗಾ ನದಿಯನ್ನು ಗಾಜಿನ ಮೂಲಕ ನೇರವಾಗಿ ನೋಡಬಹುದು. ಇಲ್ಲಿ ಬಳಸಲಾಗಿರುವ ಗಾಜು ಅತ್ಯಂತ ಬಲವಾಗಿದ್ದು, ಹೆಚ್ಚಿನ ಸಂಖ್ಯೆಯ ಪ್ರವಾಸಿಗರ ಭಾರವನ್ನು ತಡೆದುಕೊಳ್ಳುವ ಸಾಮರ್ಥ್ಯ ಹೊಂದಿದೆ. ಈ ಸೇತುವೆ ಸುಮಾರು 133 ಮೀಟರುದ್ದ ಇದ್ದು, 8 ಮೀಟರ್‌ ಅಗಲವಿದೆ. ಈ ಬೃಹತ್ ಯೋಜನೆಗಾಗಿ ಸರಕಾರ ಅಂದಾಜು 67 ರಿಂದ 70 ಕೋಟಿ ರುಪಾಯಿಗಳನ್ನು ವ್ಯಯಿಸುತ್ತಿದೆ.