ಪ್ರವಾಸಿತಾಣವಾಯ್ತು ಸಿಗಂದೂರು ಸೇತುವೆ !
ಸಿಗಂದೂರು ಸೇತುವೆ ಈಗ ಪ್ರವಾಸಿಗರ ಹೊಸ ಸೆಲ್ಫಿ, ರೀಲ್ಸ್ ಪಾಯಿಂಟ್ ಆಗಿದ್ದು, ಸೇತುವೆ ಈಗಾಗಲೇ ಕರ್ನಾಟಕದಲ್ಲಿ ನೋಡಲೇಬೇಕಾದ ಪ್ರವಾಸಿ ತಾಣಗಳ ಪಟ್ಟಿಯನ್ನು ಸೇರಿದೆ.
ಹುಬ್ಬಳ್ಳಿ: ಕರ್ನಾಟಕದ ಅತೀ ಉದ್ದದ ಕೇಬಲ್ ಸೇತುವೆ ಎಂಬ ಖ್ಯಾತಿಯ ಸಿಗಂದೂರು ಸೇತುವೆ ಲೋಕಾರ್ಪಣೆಗೊಂಡು ತಿಂಗಳು ತುಂಬಿಲ್ಲ. ಆದರೆ ಸಿಗಂದೂರು ಚೌಡೇಶ್ವರಿ ದೇವಾಲಯಕ್ಕೆ ಭೇಟಿನೀಡುವ ಭಕ್ತರು ಹಾಗೂ ಸೇತುವೆ ನೋಡಲು ಆಗಮಿಸುವ ಪ್ರವಾಸಿಗರ ಸಂಖ್ಯೆಯಲ್ಲಿ ಭಾರೀ ಏರಿಕೆಯಾಗಿದೆ.

ಸಿಗಂದೂರು ಸೇತುವೆ ಈಗ ಪ್ರವಾಸಿಗರ ಹೊಸ ಸೆಲ್ಫಿ, ರೀಲ್ಸ್ ಪಾಯಿಂಟ್ ಆಗಿದ್ದು, ಸೇತುವೆ ಈಗಾಗಲೇ ಕರ್ನಾಟಕದಲ್ಲಿ ನೋಡಲೇಬೇಕಾದ ಪ್ರವಾಸಿ ತಾಣಗಳ ಪಟ್ಟಿಯನ್ನು ಸೇರಿದೆ. ವಾರಾಂತ್ಯದಲ್ಲಿ ಹಾಗೂ ರಜಾ ದಿನಗಳಲ್ಲಿ ಸಾವಿರಾರು ಪ್ರವಾಸಿಗರು ಸಿಗಂದೂರು ಕಡೆ ಬರುತ್ತಿದ್ದಾರೆ. ಈ ಹಿಂದೆ ಲಾಂಚ್ ಮೂಲಕ ದೇವಾಲಯಕ್ಕೆ ಹೋಗಬೇಕಿತ್ತು. ಆದರೆ ಈಗ ಸೇತುವೆ ಲೋಕಾರ್ಪಣೆಯಾಗಿದ್ದು, ವಾಹನದ ಮೂಲಕ ಸುಲಭವಾಗಿ ಸಾಗಿ ದೇವರ ದರ್ಶನ ಪಡೆಯಬಹುದು.
ಉತ್ತರ ಕನ್ನಡ ಜಿಲ್ಲೆ, ಗದಗ, ಹುಬ್ಬಳ್ಳಿ- ಧಾರವಾಡ ಸೇರಿದಂತೆ ವಿವಿಧ ಜಿಲ್ಲೆಗಳಿಂದ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಹಾಗೂ ಖಾಸಗಿ ಬಸ್ ಗಳು ಜೋಗ ಜಲಪಾತ ಹಾಗೂ ಸಿಗಂದೂರು, ಗೋಕಾಕ್, ಅಂಬೋಲಿ, ಬನವಾಸಿ, ದಾಂಡೇಲಿಗೆ ಹೆಚ್ಚಿನ ಪ್ರವಾಸಿ ಪ್ಯಾಕೇಜ್‌ಗಳನ್ನು ಆರಂಭಿಸಿದೆ.