Friday, November 14, 2025
Friday, November 14, 2025

ಕಮಾಲ್ ಮಾಡಿದ ಸ್ವಚ್ಛ ಕೊಡಗು

ಜಿಲ್ಲಾ ಕೇಂದ್ರ ಮಡಿಕೇರಿ ಸೇರಿದಂತೆ, ಜಿಲ್ಲೆಯಾದ್ಯಂತ ಅಂದು ಬೆಳಗ್ಗೆ 8 ಗಂಟೆಯಿಂದ ಏಕಕಾಲದಲ್ಲಿ ಪ್ರಾರಂಭವಾದ ಸ್ವಚ್ಛತಾ ಅಭಿಯಾನ ಮಧ್ಯಾಹ್ನದವರೆಗೂ ಸಾಗಿತ್ತು. ಕೂರ್ಗ್ ಹೊಟೇಲ್, ರೆಸಾರ್ಟ್ ಅಸೋಸಿಯೇಷನ್ ನೀಡಿದ್ದ ಸ್ವಚ್ಛತೆಯ ಕರೆಗೆ ಸ್ಪಂದಿಸಿದ ಸಾವಿರಾರು ಸಾರ್ವಜನಿಕರು, ನೂರಾರು ಸಂಘ ಸಂಸ್ಥೆಗಳು ರಸ್ತೆ ಬದಿಗಿಳಿದು ಸ್ವಚ್ಛತೆಯ ಕೈಂಕರ್ಯಕ್ಕೆ ಮುಂದಾದರು.

- ಅನಿಲ್ ಹೆಚ್.ಟಿ.

ಕೂರ್ಗ್ ಹೊಟೇಲ್, ರೆಸಾರ್ಟ್ ಅಸೋಸಿಯೇಷನ್‌ನಿಂದ ಆಯೋಜಿತವಾಗಿದ್ದ ಸ್ವಚ್ಛ ಕೊಡಗು - ಸುಂದರ ಕೊಡಗು ಹೆಸರಿನ ಸ್ವಚ್ಛತಾ ಅಭಿಯಾನ ಜವಾಬ್ದಾರಿಯುತ ಪ್ರವಾಸೋದ್ಯಮದ ನಿಟ್ಟಿನಲ್ಲಿ ಪ್ರವಾಸೋದ್ಯಮ ಸಂಘಟನೆಯೊಂದರ ಹೊಣೆಗಾರಿಕೆಗೆ ಸಾಕ್ಷಿಯಾಯಿತು.

ಕೊಡಗಿನ ತಲಕಾವೇರಿಯಲ್ಲಿ ಕಾವೇರಿ ಪವಿತ್ರ ತೀರ್ಥೋದ್ಭವಕ್ಕೆ ಎರಡು ದಿನಗಳಿರುವಂತೆಯೇ ಕಾವೇರಿ ತವರು ಜಿಲ್ಲೆಯಾದ್ಯಂತ ಸ್ವಚ್ಛತಾ ಕಾರ್ಯ ಹಮ್ಮಿಕೊಳ್ಳುವ ಮೂಲಕ ಕುಲದೇವಿಯ ಸ್ವಾಗತಕ್ಕೆ ಸ್ವಚ್ಛತೆಯ ಮೂಲಕ ಅಲಂಕಾರ ಕೈಗೊಳ್ಳಲಾಯಿತು.

Clean Kodagu


ಜಿಲ್ಲಾ ಕೇಂದ್ರ ಮಡಿಕೇರಿ ಸೇರಿದಂತೆ, ಜಿಲ್ಲೆಯಾದ್ಯಂತ ಅಂದು ಬೆಳಗ್ಗೆ 8 ಗಂಟೆಯಿಂದ ಏಕಕಾಲದಲ್ಲಿ ಪ್ರಾರಂಭವಾದ ಸ್ವಚ್ಛತಾ ಅಭಿಯಾನ ಮಧ್ಯಾಹ್ನದವರೆಗೂ ಸಾಗಿತ್ತು. ಕೂರ್ಗ್ ಹೊಟೇಲ್, ರೆಸಾರ್ಟ್ ಅಸೋಸಿಯೇಷನ್ ನೀಡಿದ್ದ ಸ್ವಚ್ಛತೆಯ ಕರೆಗೆ ಸ್ಪಂದಿಸಿದ ಸಾವಿರಾರು ಸಾರ್ವಜನಿಕರು, ನೂರಾರು ಸಂಘ ಸಂಸ್ಥೆಗಳು ರಸ್ತೆ ಬದಿಗಿಳಿದು ಸ್ವಚ್ಛತೆಯ ಕೈಂಕರ್ಯಕ್ಕೆ ಮುಂದಾದರು.

ಮಡಿಕೇರಿಯಲ್ಲಿ ಶಾಸಕ ಡಾ.ಮಂಥರ್ ಗೌಡ, ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರೊಂದಿಗೆ ಅಕ್ಷರಶಃ ಚರಂಡಿಯೊಳಕ್ಕಿಳಿದು ಸ್ವಚ್ಛತಾ ಕಾರ್ಯದಲ್ಲಿ ಮಾದರಿಯಾಗಿ ತೊಡಗಿಸಿಕೊಂಡರು. ಮಡಿಕೇರಿಯಲ್ಲಿ ಈಗಾಗಲೇ ಅರ್ಧ ಮತ್ತು 1 ಲೀಟರ್ ಪ್ಲಾಸ್ಟಿಕ್ ನೀರಿನ ಬಾಟಲಿಗಳನ್ನು ನಿಷೇಧಿಸಲಾಗಿದೆ. ದಸರಾ ಸೇರಿದಂತೆ ಮಡಿಕೇರಿಯಲ್ಲಿನ ಪ್ರಮುಖ ಕಾರ್ಯಕ್ರಮಗಳಲ್ಲಿ ಹೀಗಾಗಿಯೇ ಪ್ಲಾಸ್ಟಿಕ್ ಬಾಟಲಿಗಳು ಕಳೆದ ವರ್ಷಗಳಿಗೆ ಹೋಲಿಸಿದರೆ ಹೆಚ್ಚಾಗಿ ಕಾಣಿಸುತ್ತಿಲ್ಲ. ಕಳೆದ ವರ್ಷ ದಸರಾ ಸಂದರ್ಭದಲ್ಲಿ 1 ಲಕ್ಷಕ್ಕೂ ಮೀರಿದ ಪ್ಲಾಸ್ಟಿಕ್ ಬಾಟಲಿಗಳು ದಸರಾ ಮರುದಿನ ಪೌರಕಾರ್ಮಿಕರಿಂದ ವಿಲೇವಾರಿ ಮಾಡಲ್ಪಟ್ಟಿದ್ದರೆ ಈ ವರ್ಷ ದಸರಾ ಮರುದಿನ ಕೇವಲ 5-6 ಸಾವಿರದಷ್ಟು ಬಾಟಲಿಗಳು ಮಾತ್ರ ಸಿಕ್ಕಿದ್ದವು ಎಂದು ಡಾ.ಮಂಥರ್ ಗೌಡ ಹೇಳಿದರು.

ಸ್ವಚ್ಛ ಕೊಡಗು - ಸುಂದರ ಕೊಡಗು ಹೆಸರಿನ ಸ್ವಚ್ಛತಾ ಅಭಿಯಾನ ರಾಜ್ಯದಲ್ಲಿಯೇ ಮೊದಲ ಬಾರಿಗೆ ಎಂಬಂತೆ ನಡೆಯಿತು. ಕೇಂದ್ರ ಮತ್ತು ರಾಜ್ಯಗಳು ಈವರೆಗೆ ಈ ರೀತಿ ದೇಶ ಅಥವಾ ರಾಜ್ಯವ್ಯಾಪಿ ಸ್ವಚ್ಛತಾ ಆಂದೋಲನ ಹಮ್ಮಿಕೊಂಡಿದ್ದರೂ ಇದೇ ಮೊದಲ ಬಾರಿಗೆ ಕರ್ನಾಟಕದಲ್ಲಿ ಜಿಲ್ಲೆಯಾದ್ಯಂತ ಪ್ರವಾಸೋದ್ಯಮಿಗಳ ಕರೆಗೆ ಸ್ಪಂದಿಸಿ ಜನರು ಸ್ವಚ್ಛತಾ ಆಂದೋಲನಕ್ಕೆ ಕೈಜೋಡಿಸಿದ್ದು ವಿಶೇಷವಾಗಿತ್ತು.

ರಸ್ತೆಗಿಳಿದ ಕೊಡಗು

ಹಿರಿಯರು, ಕಿರಿಯರು, ಮಹಿಳೆಯರು, ಯುವಕ, ಯುವತಿಯರು ಕೈಗವಸು ಧರಿಸಿಕೊಂಡು ರಸ್ತೆ ಬದಿಯಲ್ಲಿ ಅನೇಕ ದಿನಗಳಿಂದ ಬಿದ್ದಿದ್ದ ಕಸ ವಿಲೇವಾರಿ ಮಾಡಿದರು. ತೋಟದ ಬದಿಯಲ್ಲಿದ್ದ ತ್ಯಾಜ್ಯವನ್ನು ತೋಟ ಮಾಲೀಕರು ವಿಲೇವಾರಿ ಮಾಡಿದರು. ಕಾಲೇಜು ವಿದ್ಯಾರ್ಥಿಗಳು, ಎನ್ ಎಸ್ ಎಸ್, ಎನ್ ಸಿ ಸಿ ಸೇರಿದಂತೆ ನೂರಾರು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಕೊಡಗಿನ ಸ್ವಚ್ಛತೆಗೆ ನಾವಿದ್ದೇವೆ ಎಂದು ಸ್ಪಂದಿಸಿದರು.

ಕೊಡಗಿನಾದ್ಯಂತ ಇರುವ ರೆಸಾರ್ಟ್ , ಹೋಮ್ ಸ್ಟೇ, ಹೊಟೇಲ್, ರೆಸ್ಟೋರೆಂಟ್, ಅಂಗಡಿ ಮಾಲೀಕರು ಕೂಡ ತಮ್ಮ ಪರಿಸರದ ಜತೆಗೇ ತಮ್ಮ ವ್ಯಾಪ್ತಿಯಲ್ಲಿನ ರಸ್ತೆಯನ್ನು ಶುಚಿಗೊಳಿಸಿದ್ದು ಈ ಅಭಿಯಾನದ ವಿಶೇಷವಾಗಿತ್ತು.

Cleaniliness initiative at Kodagu

ಕಸ ಎಸೆದರೆ ಫೊಟೋ ಬರತ್ತೆ!

ಕೊಡಗಿನ ಪ್ರತಿಯೋರ್ವರೂ ಅಂದು ಸ್ವಚ್ಛತಾ ಆಂದೋಲನ ಕೈಗೊಂಡು ಸ್ವಚ್ಛತೆಯ ರಾಯಭಾರಿಗಳಾದರು. ಮುಂದಿನ ದಿನಗಳಲ್ಲಿ ಯಾರಾದರೂ ಕೊಡಗಿನ ಎಲ್ಲಿಯೇ ಆಗಿರಲಿ ಕಸ ಎಸೆಯುವುದು ಕಂಡುಬಂದಲ್ಲಿ ಪರಿಣಾಮ ನೆಟ್ಟಗಿರದು ಎಂಬ ಆಕ್ರೋಶದ ಸಂದೇಶವೂ ಕೇಳಿಬಂತು.

ವಿರಾಜಪೇಟೆ ಪುರಸಭೆಯ ಅಧ್ಯಕ್ಷೆ ಎಂ.ಕೆ.ದೇಚಮ್ಮ ಮತ್ತೊಂದು ಹೆಜ್ಜೆ ಮುಂದೆ ಸಾಗಿ ಯಾರಾದರೂ ಕಸ ಎಸೆಯುವುದು ಕಂಡು ಬಂದರೆ ಅಂಥವರ ಫೋಟೋ ತೆಗೆದು ಕಳುಹಿಸಿ 100 ರುಪಾಯಿ ಬಹುಮಾನ ಗೆಲ್ಲಿ ಎಂಬ ಘೋಷಣೆ ಮಾಡಿದರು. ಅಂತೆಯೇ ಕಸ ಎಸೆಯುವವರ ಫೊಟೋವನ್ನು ಪ್ರತ್ಯೇಕ ಫೇಸ್ ಬುಕ್ ಪೇಜ್‌ನಲ್ಲಿಯೂ ಪೋಸ್ಟ್ ಮಾಡಿ ಬಹುಮಾನ ಪಡೆಯಬಹುದು ಎಂಬ ವಿನೂತನ ಯೋಜನೆ ಜಾರಿಗೊಳಿಸಿದರು.

ತಾವಾಯಿತು, ತಮ್ಮ ವಹಿವಾಟಾಯಿತು ಎಂಬಂತೆ ಪ್ರವಾಸೋದ್ಯಮದಲ್ಲಿಯೇ ಸಕ್ರಿಯರಾಗಿದ್ದ ಪ್ರವಾಸೋದ್ಯಮಿಗಳ ಸಂಘದ ಕರೆಗೆ ಅದೆಷ್ಟು ವ್ಯಾಪಕ ಸ್ಪಂದನ ದೊರಕಿತ್ತೆಂದರೆ, ಕೂರ್ಗ್ ಹೊಟೇಲ್, ರೆಸಾರ್ಟ್ ಅಸೋಸಿಯೇಷನ್ ಮುಂದಿನ ದಿನಗಳಲ್ಲಿಯೂ ಇಂಥ ಅನೇಕ ಕಾರ್ಯಕ್ರಮ ಹಮ್ಮಿಕೊಳ್ಳಲಿ ಎಂಬ ವ್ಯಾಪಕ ಕೂಗು ಜಿಲ್ಲೆಯಾದ್ಯಂತ ವ್ಯಕ್ತವಾಯಿತು.

200 ಟನ್ ತ್ಯಾಜ್ಯ ಸಂಗ್ರಹ!

ಕೂರ್ಗ್ ಹೊಟೇಲ್, ರೆಸಾರ್ಟ್ ಅಸೋಸಿಯೇಷನ್ ವತಿಯಿಂದ ಕೈಗೊಳ್ಳಲಾದ ಸ್ವಚ್ಛ ಕೊಡಗು - ಸುಂದರ ಕೊಡಗು ಸ್ವಚ್ಛತಾ ಅಭಿಯಾನದ ಸಂದರ್ಭ ಜಿಲ್ಲೆಯಾದ್ಯಂತ 200 ಟನ್ ತ್ಯಾಜ್ಯ ಸಂಗ್ರಹವಾಗಿದ್ದು, ಮೈಸೂರಿನ ತ್ಯಾಜ್ಯ ವಿಲೇವಾರಿ ಸಂಗ್ರಹಾಗಾರ ಸೇರಿದಂತೆ ಕೊಡಗು ಜಿಲ್ಲೆಯ ತ್ಯಾಜ್ಯ ವಿಲೇವಾರಿ ಘಟಕಗಳಿಗೆ ಇವುಗಳನ್ನು ರವಾನಿಸಲಾಗಿದೆ ಎಂದು ಅಸೋಸಿಯೇಷನ್ ಅಧ್ಯಕ್ಷ ಕುಂಡ್ಯೋಳಂಡ ದಿನೇಶ್ ಕಾರ್ಯಪ್ಪ ಮಾಹಿತಿ ನೀಡಿದರು.

ಸ್ವಚ್ಛ ಕೊಡಗು - ಸುಂದರ ಕೊಡಗು

ಸ್ವಚ್ಛ ಕೊಡಗು - ಸುಂದರ ಕೊಡಗು ಅಭಿಯಾನದಲ್ಲಿ ಜಿಲ್ಲೆಯ 30 ಸಾವಿರದಷ್ಟು ಸ್ವಚ್ಛತಾ ಕಾರ್ಯಕರ್ತರಿಗೆ 33,800 ಕೈಕವಚ ಮತ್ತು 9,200 ತ್ಯಾಜ್ಯ ಸಂಗ್ರಹಣಾ ಬ್ಯಾಗ್‌ಗಳನ್ನು ವಿತರಿಸಲಾಗಿದೆ. ಜಿಲ್ಲೆಯ 178 ಸ್ಥಳಗಳಲ್ಲಿ 330 ಕ್ಕೂ ಅಧಿಕ ಸಂಘಸಂಸ್ಥೆಗಳಿಗೆ ಸೇರಿದ ಅಂದಾಜು 30 ಸಾವಿರದಷ್ಟು ಜನರು ಸ್ವಯಂ ಪ್ರೇರಣೆಯಿಂದ ಸ್ವಚ್ಛತಾ ರಾಯಭಾರಿಗಳಾಗಿ ಜಿಲ್ಲೆಯಾದ್ಯಂತ ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಂಡಿದ್ದರು ಎಂದು ದಿನೇಶ್ ತಿಳಿಸಿದರು.

ಜಿಲ್ಲಾಧಿಕಾರಿ ವೆಂಕಟ್ ರಾಜಾ ಪ್ರಯತ್ನದಿಂದ ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ಸಹಕಾರ ಪಡೆದು 17 ಸಂಗ್ರಹಣ ಕೇಂದ್ರಗಳಿಂದ ಪಡೆದುಕೊಂಡ ತ್ಯಾಜ್ಯವನ್ನು ಜಿಲ್ಲೆಯ 145 ತ್ಯಾಜ್ಯ ಸಂಗ್ರಹಣಾ ಮಾರ್ಗಗಳಿಂದ ಟ್ರಕ್ ಮೂಲಕ ಪಡೆದು ಕ್ಲೀನ್ ಕೂರ್ಗ್ ಸಂಸ್ಥೆಯ ಸಹಕಾರದೊಂದಿಗೆ ಮೈಸೂರಿಗೆ ರವಾನಿಸಲಾಗಿತ್ತು ಎಂದು ದಿನೇಶ್ ಹೇಳಿದರು.

Kodagu (1)


ಇದು ಕೇವಲ 1 ದಿನಕ್ಕೆ ಸೀಮಿತವಾದ ಅಭಿಯಾನ ಆಗಬಾರದು. ಸ್ವಚ್ಛ ಪರಿಸರದ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿಯೂ ಕೂರ್ಗ್ ಹೊಟೇಲ್, ರೆಸಾರ್ಟ್ ಅಸೋಸಿಯೇಷನ್ ವಿವಿಧ ಕಾರ್ಯಯೋಜನೆ ಹಮ್ಮಿಕೊಳ್ಳಲಿದೆ. ಸ್ವಚ್ಛ ಕೊಡಗು ಸುಂದರ ಕೊಡಗು ಅಭಿಯಾನಕ್ಕೆ ಜಿಲ್ಲೆಯಾದ್ಯಂತ ನಿರೀಕ್ಷೆಗೂ ಮೀರಿದ ಸ್ಪಂದನ ದೊರಕಿದ್ದು, ಇದು ಸಮಾಧಾನ ತಂದಿದೆ ಎಂದೂ ದಿನೇಶ್ ಹೇಳಿದರು. ಕೂರ್ಗ್ ಹೊಟೇಲ್, ರೆಸಾರ್ಟ್ ಅಸೋಸಿಯೇಷನ್ ಈ ಅಭಿಯಾನದ ಮೂಲಕ ಕೊಡಗಿನಲ್ಲಿ ಜವಾಬ್ದಾರಿಯುತ ಪ್ರವಾಸೋದ್ಯಮಕ್ಕೆ ಮತ್ತಷ್ಟು ಒತ್ತು ನೀಡಿದೆ ಎಂದೂ ಅವರು ಭರವಸೆಯ ನುಡಿಯಾಡಿದರು.

ಸ್ವಚ್ಛಕೊಡಗು - ಸುಂದರ ಕೊಡಗು ಎಂಬ ಅಭಿಯಾನಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ ಕೈಗೊಂಡ ಪ್ರಚಾರಕ್ಕೆ ಜಿಲ್ಲೆಯ ಹಲವೆಡೆಗಳಿಂದ ವಿವಿಧ ಭಾಷೆಗಳಲ್ಲಿ 58 ವಿಡಿಯೋಗಳನ್ನು ನಟ-ನಟಿಯರು, ಪರಿಸರ ಪ್ರೇಮಿಗಳು, ಸಾರ್ವಜನಿಕರು, ವಿದ್ಯಾರ್ಥಿಗಳು ಕಳುಹಿಸಿದ್ದು ಕೂಡ ಕೇವಲ 3 ದಿನಗಳಲ್ಲಿಯೇ ರೂಪುಗೊಂಡ ಈ ಅಭಿಯಾನದ ಸಫಲತೆಗೆ ಕಾರಣಗಳಲ್ಲೊಂದಾಯಿತು ಎಂದು ಕೂರ್ಗ್ ಹೊಟೇಲ್, ರೆಸಾರ್ಟ್ ಅಸೋಸಿಯೇಷನ್ ಪ್ರಧಾನ ಕಾರ್ಯದರ್ಶಿ ನಾಸಿರ್ ಅಹಮ್ಮದ್ ಹೆಮ್ಮೆಯಿಂದ ಹೇಳಿಕೊಂಡರು. .

ಅಭಿನಂದನೆ ಸಲ್ಲಿಸಿದ ಜಿಲ್ಲಾಧಿಕಾರಿ

ಸ್ವಚ್ಛ ಕೊಡಗು - ಸುಂದರ ಕೊಡಗು ಅಭಿಯಾನ ಯಶಸ್ವಿಯಾದ ಸಂಬಂಧಿತ ಜಿಲ್ಲಾಧಿಕಾರಿ ವೆಂಕಟರಾಜ ಅವರು ಈ ಯಶಸ್ಸಿಗೆ ಕಾರಣರಾದ ಕೊಡಗಿನ ಸರ್ವ ಜನತೆಯನ್ನು ಶ್ಲಾಘಿಸಿದ್ದಾರೆ. ಇಂಥ ಅಭಿಯಾನವನ್ನು ಕೆಲವೇ ದಿನಗಳಲ್ಲಿ ಆಯೋಜಿಸಿ ಜಿಲ್ಲೆಯಲ್ಲಿ ಸ್ವಚ್ಚತೆಯ ಬಗ್ಗೆ ಅರಿವು ಮೂಡಿಸಿದ ಕೂರ್ಗ್ ಹೊಟೇಲ್, ರೆಸಾರ್ಟ್ ಅಸೋಸಿಯೇಷನ್‌ನ ಸರ್ವ ಸದಸ್ಯರ ಶ್ರಮವನ್ನೂ ಜಿಲ್ಲಾಧಿಕಾರಿ ಅಭಿನಂದಿಸಿದರು.

ಕೊಡಗಿಗೆ ಬರುವ ಪ್ರವಾಸಿಗರು ಇಲ್ಲಿ ಮಲೀನ ಮಾಡುತ್ತಾರೆ. ಕೊಡಗಿನ ಮಾಲಿನ್ಯಕ್ಕೆ ಪ್ರವಾಸಿಗರ ಕೊಡುಗೆಯೇ ಹೆಚ್ಚಾಗಿದೆ ಎಂಬ ದೂರು ಹಲವಾರು ವರ್ಷಗಳಿಂದ ಇದೆ. ಈ ಅಪವಾದ ದೂರಮಾಡಿ, ಪ್ರವಾಸಿಗರಿಗೂ ಸ್ವಚ್ಚತೆಯ ಸಂದೇಶ ನೀಡುವುದರೊಂದಿಗೆ, ಸ್ಥಳೀಯರಲ್ಲಿಯೂ ಸ್ವಚ್ಛತೆಯ ಜಾಗೃತಿ ಮೂಡಿಸುವಲ್ಲಿ ಸ್ವಚ್ಛ ಕೊಡಗು - ಸುಂದರ ಕೊಡಗು ಅಭಿಯಾನ ಅಗಾಧ ಪರಿಣಾಮ ಬೀರಿತ್ತು. ಕೂರ್ಗ್ ಹೊಟೇಲ್, ರೆಸಾರ್ಟ್ ಅಸೋಸಿಯೇಷನ್ ಸ್ವಚ್ಛ ಕೊಡಗಿನ ಸಂದೇಶದೊಂದಿಗೆ ಇಟ್ಟ ಪ್ರಥಮ ಹೆಜ್ಜೆಯೇ ಪ್ರಬಲವಾಗಿತ್ತು.

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ದೇಶ ಸುತ್ತಬೇಕಿಲ್ಲ, ಕರ್ನಾಟಕದಲ್ಲೇ ಇವೆ ಅನೇಕ ಡಾಲ್ಫಿನ್‌ ತಾಣಗಳು..

Read Previous

ದೇಶ ಸುತ್ತಬೇಕಿಲ್ಲ, ಕರ್ನಾಟಕದಲ್ಲೇ ಇವೆ ಅನೇಕ ಡಾಲ್ಫಿನ್‌ ತಾಣಗಳು..

ನೋಡಬನ್ನಿ ರಾಮನಗರ..ಇತಿಹಾಸವನ್ನು ಒಡಲಲ್ಲಿ  ಹೊತ್ತ ಬೆಟ್ಟಗಳ ತವರೂರ..

Read Next

ನೋಡಬನ್ನಿ ರಾಮನಗರ..ಇತಿಹಾಸವನ್ನು ಒಡಲಲ್ಲಿ ಹೊತ್ತ ಬೆಟ್ಟಗಳ ತವರೂರ..