ಟಿಪ್ಪುವಿನ ಮಂಜರಾಬಾದ್ ಕೋಟೆಯ ಗೋಡೆ ಕುಸಿತ!
ಐತಿಹಾಸಿಕ ಮಂಜರಾಬಾದ್ ಕೋಟೆ, ಮಂಜರಾಬಾದ್ ಕೋಟೆ, ಮುಂಗಾರು ಮಳೆ ಸೃಷ್ಟಿಸುವ ಅವಾಂತರಗಳ ಪಟ್ಟಿ ದೊಡ್ಡದೇ ಇದೆ. ಈ ಬಾರಿ ಹಾಸನ, ಸಕಲೇಶಪುರ ಭಾಗದಲ್ಲಿ ಭಾರಿ ಮಳೆಯಾದ ಹಿನ್ನೆಲೆಯಲ್ಲಿ ಟಿಪ್ಪು ಸುಲ್ತಾನ್ ನಿರ್ಮಿಸಿದ್ದ ಐತಿಹಾಸಿಕ ಮಂಜರಾಬಾದ್ ಕೋಟೆಯ ಒಂದು ಭಾಗ ಕುಸಿದಿದೆ.
ಹಾಸನ : ನೂರಾರು ಪ್ರವಾಸಿಗರ ಪ್ರತಿನಿತ್ಯ ಭೇಟಿ ನೀಡುವ ಸಕಲೇಶಪುರದಲ್ಲಿರುವ ಐತಿಹಾಸಿಕ ಮಂಜರಾಬಾದ್ ಕೋಟೆಯ ಒಂದು ಭಾಗ ಕುಸಿದು ಬಿದ್ದಿದೆ. ಹಾಸನ, ಸಕಲೇಶಪುರ ಭಾಗದಲ್ಲಿ ಭಾರಿ ಮಳೆಯ ಕಾರಣದಿಂದ ಈ ಅನಾಹುತ ಸಂಭವಿಸಿದ್ದು, ಕೋಟೆಯ ಒಳಭಾಗದ ಸೈನಿಕರು ವಿಶ್ರಾಂತಿ ಪಡೆಯುತ್ತಿದ್ದ ಭಾಗವೆಂದು ಹೇಳಲಾಗುವ ಪ್ರದೇಶ ನೆಲಸಮವಾಗಿದೆ.

ಪ್ರವಾಸಿಗರ ಆಕರ್ಷಣೆಯ ಕೇಂದ್ರವಾಗಿರುವ, ಐತಿಹಾಸಿಕ ಮಂಜರಾಬಾದ್ ಕೋಟೆಯನ್ನು 1792ರಲ್ಲಿ ಟಿಪ್ಪು ಸುಲ್ತಾನ್ ನಿರ್ಮಿಸಿದರು. ಪುರಾತತ್ವ ಇಲಾಖೆಯು 1956 ರಿಂದ ಕೋಟೆಯ ಸಂರಕ್ಷಣಾ ಜವಾಬ್ದಾರಿಯನ್ನು ವಹಿಸಿಕೊಂಡಿತ್ತು. ಈ ಕೋಟೆ ನಕ್ಷತ್ರಾಕಾರದಲ್ಲಿದ್ದು, ಈ ಬೃಹತ್ ಕೋಟೆಯು ಸಮುದ್ರ ಮಟ್ಟದಿಂದ 988 ಮೀಟರ್ ಎತ್ತರದಲ್ಲಿದೆ. ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕು ಕೇಂದ್ರದಿಂದ 5 ಕಿ.ಮೀ. ಅಂತರದಲ್ಲಿ ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಬರುವ ಅಡಾಣಿ ಗುಡ್ಡದ ಮೇಲೆ ಈ ಕೋಟೆ ನಿರ್ಮಾಣವಾಗಿದೆ. ಸದ್ಯ ಕೋಟೆಯ ಒಂದು ಭಾಗ ಕುಸಿದ ಹಿನ್ನೆಲೆಯಲ್ಲಿ ಪ್ರವಾಸಿಗರಿಗೆ ತಾತ್ಕಾಲಿಕವಾಗಿ ನಿಷೇಧ ಹೇರಲಾಗಿದೆ.