Saturday, July 26, 2025
Saturday, July 26, 2025

ಆಲ್ಟಿಟ್ಯೂಡ್ ಸಿಕ್ ನೆಸ್ ನಿರ್ಲಕ್ಷ್ಯ ಬೇಡ

ಅತಿ ಎತ್ತರ ಏರಿದಂತೆಲ್ಲ ಕಾಣಿಸಿಕೊಳ್ಳುವ ಪಲ್ಮನರಿ ಎಡಿಮಾ, ಸೆರೆಬ್ರಲ್ ಎಡಿಮಾ ಕಾಯಿಲೆಗಳು, ರಕ್ತ ಹೆಪ್ಪುಗಟ್ಟಿಸಬಲ್ಲವು, ಉಸಿರಾಟವನ್ನು ಭಾರವಾಗಿಸಬಹುದು, ನರಗಳ ಮೇಲೆ ಪರಿಣಾಮ ಬೀರಬಹುದು. ಭ್ರಮೆಗಳು ಕಾಡುವಿಕೆ, ಗೊಂದಲ ಉಂಟಾಗುವಿಕೆ ಸೇರಿದಂತೆ ಪ್ರಾಣ ತೆಗೆಯುವ ಮಟ್ಟಕ್ಕೂ ಕೊಂಡೊಯ್ಯಬಹುದು.

ಹಿಮಚಾರಣದಲ್ಲಿ ಅಪಘಾತದ ಹೊರತಾಗಿ ಆಗುವ ಅವಘಡ ಅಂದರೆ ಅದು ಎಎಂಎಸ್. ಅಂದ್ರೆ ಅಕ್ಯೂಟ್ ಮೌಂಟೇನ್ ಸಿಕ್ ನೆಸ್. ತೀವ್ರ ಪರ್ವತ ಕಾಯಿಲೆ. ಇದರ ಬಗ್ಗೆ ಈಗಾಗಲೇ ಪ್ರವಾಸಿ ಪ್ರಪಂಚದ ದ್ವಿತೀಯ ಸಂಚಿಕೆಯಲ್ಲಿ ಲೇಖನವನ್ನು ಓದಿದ್ದೀರಿ. ಪ್ರವಾಸಿ ಪ್ರಪಂಚದ ವೆಬ್ ಸೈಟ್ ನಲ್ಲೂ ಆ ಲೇಖನವನ್ನು ಓದಬಹುದು. ಆದರೆ ಇಂದು ಇಲ್ಲಿ ವಿವರಿಸಲು ಹೊರಟಿರುವುದು ಇನ್ನೊಂದು ಮಾರಣಾಂತಿಕ ಅಪಾಯದ ಬಗ್ಗೆ. ತೀವ್ರ ಪರ್ವತ ಕಾಯಿಲೆಯನ್ನು ಅಕ್ಲಿಮೇಟೇಸೇಷನ್ ನಿಂದ ನಿವಾರಿಸಿಕೊಳ್ಳಬಹುದು. ಆದರೆ ಆಲ್ಟಿಟ್ಯೂಡ್ ಸಿಕ್ ನೆಸ್ ನಿಂದ ಪಾರಾಗುವುದು ಸುಲಭವಲ್ಲ. ಹವಾಮಾನಕ್ಕೆ, ಹಿಮಚಾರಣಕ್ಕೆ ಒಗ್ಗಿಕೊಳ್ಳುವುದು ಸುಲಭ, ಕೆಲವು ವ್ಯಾಯಾಮ ಮತ್ತು ಪ್ರಾಯೋಗಿಕ ಚಾರಣಗಳ ಮೂಲಕ ನಾವು ಜಾಗಕ್ಕೆ ಮತ್ತು ಚಾರಣಕ್ಕೆ ಸಿದ್ಧರಾಗಿಬಿಡಬಹುದು. ಆದರೆ ಆಲ್ಟಿಟ್ಯೂಡ್ ಸಿಕ್ ನೆಸ್ ಅದನ್ನು ಮೀರಿದ್ದು.

ಎತ್ತರ ತರುವ ಒತ್ತಡ!

ಚಾರಣ ಮತ್ತು ಪರ್ವತಾರೋಹಣ ಮಾಡುವವರು ಇಂಥ ಎತ್ತರದ ಪ್ರದೇಶಗಳಿಗೆ ಸಾಗುವಾಗ ಅಥವಾ ಅಲ್ಲಿ ತಾತ್ಕಾಲಿಕವಾಗಿ ವಾಸ ಮಾಡುವಾಗ ಅಗತ್ಯವಾಗಿ ಅರ್ಥ ಮಾಡಿಕೊಳ್ಳಬೇಕಿರೋದು ಎತ್ತರದ ಒತ್ತಡವನ್ನು.

ಎತ್ತರೆತ್ತರಕ್ಕೆ ಹೋದಂತೆಲ್ಲ, ಆ ವಾತಾವರಣದ ಒತ್ತಡ ಹೆಚ್ಚಾಗುತ್ತದೆ. ಆಮ್ಲಜನಕ ಇಳಿಕೆಯಾಗುತ್ತದೆ. ನೀವು ಸಮುದ್ರ ಮಟ್ಟಕ್ಕಿಂತ ಎತ್ತರಕ್ಕೆ ಸಾಗುತ್ತಾ ಇದ್ದಂತೆ, ವಾತಾವರಣವು ತೆಳುವಾಗುತ್ತದೆ. ಇದರಿಂದಾಗಿ ಗಾಳಿಯ ಒತ್ತಡ ಕಮ್ಮಿಯಾಗುತ್ತದೆ. ಈ ಪರಿಸ್ಥಿತಿ ನಿರ್ಮಾಣ ಆಗುತ್ತಿದ್ದಂತೆ, ಆಮ್ಲಜನಕದ ಕೊರತೆ ಶುರುವಾಗಿ ಉಸಿರಾಟ ಭಾರವಾಗುತ್ತದೆ. ಕಷ್ಟಪಟ್ಟು ಉಸಿರಾಡುವಂತಾಗುತ್ತದೆ.

altitude sick

ಇಲ್ಲಿ ಒಂದು ಉದಾಹರಣೆ ಕೊಡಬಹುದು. ಸಮುದ್ರಮಟ್ಟ ಎಂದರೆ ನಮ್ಮ ಕರಾವಳಿ ಪ್ರದೇಶದಲ್ಲಿ ಒಂದು ಚಿಪ್ಸ್‌ ಪ್ಯಾಕೆಟ್‌ ತೆಗೆದುಕೊಂಡರೆ ಅದರ ದಪ್ಪ, ನಾವು ಮೇಲೇರುತ್ತಿದ್ದಂತೆಲ್ಲ ಹೆಚ್ಚಾಗುತ್ತಾ ಹೋಗುತ್ತದೆ. ಅದನ್ನು ಬೆಂಗಳೂರಿಗೆ (920ಮೀ / 3000 ಅಡಿ) ತಂದರೆ ಅದರ ದಪ್ಪ 1.5 ಸೆಂಟಿಮೀಟರ್‌ನಷ್ಟು (ಉದಾಹರಣೆಯಷ್ಟೇ, ನಿಖರವಾಗಿ ಅಲ್ಲ) ದೊಡ್ಡದಾಗಬಹುದು. ಅದನ್ನೇ 6,000 ಅಡಿಗಳಿಗೆ ತೆಗೆದುಕೊಂಡು ಹೋದಾಗ ಅದರ ದಪ್ಪ 2.5 ಸೆಮೀ ಆಗಬಹುದು. ಅದನ್ನೇ ಗೌರೀಶಂಕರದ (29,000 ಅಡಿ) ತುದಿಗೆ ತೆಗೆದುಕೊಂಡು ಹೋದಾಗ ಅದರ ದಪ್ಪ ದುಪ್ಪಟ್ಟು ಆಗಬಹುದು. ಅದಕ್ಕೆ ಕಾರಣ ಸುತ್ತಲ ವಾತಾವರಣದಿಂದ ಅದರ ಮೇಲೆ ಬೀಳಬಹುದಾದ ಒತ್ತಡ ಕಡಿಮೆ ಆಗಿರುತ್ತದೆ.

ಮತ್ತೊಂದು ಉದಾಹರಣೆ ಹೇಳುವುದಾದರೆ, ಕರಾವಳಿಯಲ್ಲಿ ತಲೆಯ ಮೇಲೆ ಒಂದು ಗ್ಯಾಸ್‌ ಸಿಲಿಂಡರ್‌ನ ಭಾರದಷ್ಟು ಒತ್ತಡವಿದ್ದರೆ, ಬೆಂಗಳೂರಿನಲ್ಲಿ ಐದು ದಿನ ಬಳಸಿದ ಸಿಲಿಂಡರ್‌ನಷ್ಟು ಆಗಬಹುದು. ಗೌರೀಶಂಕರದ ಮೇಲೆ ಖಾಲಿ ಸಿಲಿಂಡರ್‌ ಹೊತ್ತಷ್ಟು ಆಗುತ್ತದೆ.

ಪರಿಣಾಮ ಭೀಕರ!

ಈ ಎತ್ತರದ ಒತ್ತಡವು ವಿವಿಧ ಅಂಶಗಳ ಮೇಲೆ ಪರಿಣಾಮ ಬೀರುತ್ತದೆ. ನಮ್ಮ ದೇಹದಲ್ಲಿ ಆಗುವ ಬದಲಾವಣೆಗಳೂ ಸಾಕಷ್ಟು ವ್ಯತ್ಯಯವನ್ನು ಉಂಟು ಮಾಡುತ್ತದೆ. ಒತ್ತಡ ಕಡಿಮೆ ಆಗುವುದರಿಂದ ನಮ್ಮ ರಕ್ತ ಸಂಚಾರದ ನಾಳಗಳು ಊದಿಕೊಂಡು ಹೃದಯ ರಕ್ತವನ್ನು ದೇಹದ ಎಲ್ಲಾ ಭಾಗಗಳಿಗೆ ಕಳಿಸುವುದಕ್ಕೆ ಹೆಚ್ಚು ಶ್ರಮಪಡಬೇಕಾಗುತ್ತದೆ. ಅದರಲ್ಲೂ ಮೆದುಳಿನ ಭಾಗಕ್ಕೆ ಬೇಕಾದಷ್ಟು ರಕ್ತ ಪರಿಚಲನೆ ಆಗುವುದಿಲ್ಲ.

ಎತ್ತರದ ಚಾರಣ ಮಾಡುವಾಗ ವಾತಾವರಣದ ಒತ್ತಡ

ಹಿಮಾಲಯದ ಎತ್ತರದ ಚಾರಣಗಳನ್ನು ಮಾಡುವಾಗಿನ ವಾತಾವರಣದ ಒತ್ತಡದ ಬಗ್ಗೆ ಒಂದು ಸ್ಥೂಲ ವಿವರಣೆ ಇದೆ:

- ಕಡಿಮೆ ಎತ್ತರ (1,500 ಮೀಟರ್/4,921 ಅಡಿಗಳವರೆಗೆ): ಒತ್ತಡವು ಹೆಚ್ಚಾಗಿರುತ್ತದೆ ಮತ್ತು ಹೆಚ್ಚಿನ ಜನರಿಗೆ ಆಮ್ಲಜನಕದ ಮಟ್ಟ ಸಾಕಾಗುತ್ತದೆ.

- ಒಂದು ಮಧ್ಯಮ ಎತ್ತರಕ್ಕೆ ಹೋಗ್ತಾ ಇದ್ದ ಹಾಗೆ (1,500-3,500 ಮೀಟರ್/4,921-11,483 ಅಡಿ): ಒತ್ತಡ ಕಡಿಮೆಯಾಗುತ್ತದೆ ಮತ್ತು ಆಮ್ಲಜನಕದ ಮಟ್ಟ ಕಡಿಮೆಯಾಗಲು ಪ್ರಾರಂಭಿಸುತ್ತದೆ. ಇಲ್ಲಿಂದ ಮೈಲ್ಡ್ ಆಲ್ಟಿಟ್ಯೂಡ್ ಸಿಕ್ ನೆಸ್ ಶುರುವಾಗಬಹುದು.

- ಹೈ ಆಲ್ಟಿಟ್ಯೂಡ್ ಅಂದರೆ (3,500-5,500 ಮೀಟರ್/11,483-18,045 ಅಡಿ):ಪ್ರದೇಶದಲ್ಲಿ ಒತ್ತಡ ಮತ್ತು ಆಮ್ಲಜನಕದ ಮಟ್ಟಗಳು ಗಮನಾರ್ಹವಾಗಿ ಕಡಿಮೆಯಾಗುತ್ತವೆ. ಇದು ಆಲ್ಟಿಟ್ಯೂಡ್ ಸಿಕ್ನೆಸ್ ಅಪಾಯವನ್ನು ಹೆಚ್ಚಿಸುತ್ತದೆ.

- ಅದಕ್ಕಿಂತ ಎತ್ತರ ಅಥವಾ ಅತ್ಯಂತ ಹೆಚ್ಚಿನ ಎತ್ತರ ತಲುಪಿದಾಗ (5,500 ಮೀಟರ್/18,045 ಅಡಿಗಳಿಗಿಂತ ಹೆಚ್ಚು): ಗಾಳಿಯ ಒತ್ತಡ ಪರ‍್ತಿ ಕಡಿಮೆಯಾಗಿರುತ್ತದೆ. ಮತ್ತು ಆಮ್ಲಜನಕದ ಮಟ್ಟ ಕೂಡ ಅತಿ ಅನ್ನುವಷ್ಟು ಕಡಿಮೆಯಾಗುತ್ತದೆ. ಆಗ ಆಮ್ಲಜನಕಕ್ಕೆ ಕೃತಕ ವ್ಯವಸ್ಥೆ ಇಲ್ಲದೇ ಹೋದಲ್ಲಿ ಪ್ರಾಣಕ್ಕೆ ಸಂಚಕಾರ ಬರಬಹುದು.

altitude sick 2t

ಆಲ್ಟಿಟ್ಯೂಡ್ ಸಿಕ್ ನೆಸ್ ಬಗ್ಗೆ ಒಂದಷ್ಟು ಸರಳ ವಿವರಣೆ ಇಲ್ಲಿದೆ

ಸಾಮಾನ್ಯ ಎತ್ತರದ ಸಮಸ್ಯೆಗಳು.

  1. ಇದು ಒಂದು ಮಾಮೂಲು ಎತ್ತರವನ್ನು ತಲುಪಿದಾಗ ಆಗುವ ಸಮಸ್ಯೆ. ಸೌಮ್ಯ ಎತ್ತರದ ಕಾಯಿಲೆ ಎನ್ನಲಾಗುತ್ತದೆ (Mild Altitude Sickness- MAS): ಇದರ ಪರಿಣಾಮವೆಂದರೆ, ತಲೆನೋವು, ಆಯಾಸ, ತಲೆತಿರುಗುವುದು, ವಾಕರಿಕೆ, ವಾಂತಿ
  2. ಹಾಗೆ ಇನ್ನಷ್ಟು ಎತ್ತರಕ್ಕೆ ಹೋದಂತೆ , ಪಲ್ಮನರಿ ಎಡಿಮಾ ಕಾಟ ಕೊಡುತ್ತದೆ (High Altitude Pulmonary Edema - HAPE): ಇದರಲ್ಲಿ ಕೆಮ್ಮು, ಉಸಿರಾಟದ ತೊಂದರೆ, ಎದೆ ಬಿಗಿತ ಕಂಡುಬರುತ್ತದೆ.
  3. ಅತಿ ಎತ್ತರಕ್ಕೆ ಹೋದಾಗ ಕಾಣಿಸಿಕೊಳ್ಳುವುದು ಸೆರೆಬ್ರಲ್ (High Altitude Cerebral Edema - HACE) : ತೀವ್ರ ತಲೆನೋವು, ಮನಸ್ಸಿನಲ್ಲಿ ಗೊಂದಲ, ಭ್ರಮೆಗಳು, ದೇಹದ ಸಮತೋಲನದಲ್ಲಿ ವ್ಯತ್ಯಾಸ

ತಡೆಗಟ್ಟುವಿಕೆ ಮತ್ತು ಚಿಕಿತ್ಸೆ

ಒಂದೇ ದಿನದಲ್ಲಿ 2,000 ಮೀಟರ್‌ಗಳಿಂದ 4,000 ಮೀಟರ್‌ಗಳಿಗೆ ತುಂಬ ವೇಗವಾಗಿ ಆರೋಹಣ/ ಚಾರಣ ಮಾಡುವುದರಿಂದ, ನಮ್ಮ ದೇಹವು ಹೊಂದಿಕೊಳ್ಳಲು ಸಮಯವಿರುವುದಿಲ್ಲ, ಎತ್ತರದ ಪ್ರದೇಶಗಳಲ್ಲಿ ಅನಾರೋಗ್ಯದ ಅಪಾಯವನ್ನು ಹೆಚ್ಚಿಸುತ್ತದೆ.

ನಾವು ಎತ್ತರದ ಪ್ರದೇಶಗಳಲ್ಲಿ ತಲೆನೋವು ಮತ್ತು ಆಯಾಸವನ್ನು ಅನುಭವಿಸಿದರೆ, ವಿಶ್ರಾಂತಿ ಮತ್ತು ಹೆಚ್ಚು ನೀರು ಕುಡಿಯುವುದು ಅತ್ಯಗತ್ಯ. ಈ ರೋಗಲಕ್ಷಣಗಳನ್ನು ನಿರ್ಲಕ್ಷ್ಯಿಸುವುದರಿಂದ ಹೆಚ್ಚು ಗಂಭೀರ ಸಮಸ್ಯೆಗಳು ಉಂಟಾಗಬಹುದು.

  1. ಬ್ರೇಕ್ ತೆಗೆದುಕೊಳ್ಳುತ್ತಾ ನಿಧಾನವಾಗಿ ಏರಿ. ಅದು ನಿಮ್ಮ ದೇಹವು ಹೊಂದಿಕೊಳ್ಳಲು ಸಹಕಾರಿಯಾಗುತ್ತದೆ.
  2. ನೀರಿನಂಶ ದೇಹದಲ್ಲಿರುವಂತೆ ಹೆಚ್ಚು ಹೆಚ್ಚು ನೀರು ಕುಡಿಯಿರಿ.
  3. ನಿಮ್ಮ ದೇಹವನ್ನು ಒಮ್ಮೆ ಕೂಲಂಕಷವಾಗಿ ಅರ್ಥಮಾಡಿಕೊಳ್ಳಿ. ನಿಮಗೆ ಯಾವುದಾದರೂ ಕಾಯಿಲೆಯ ಇತಿಹಾಸವಿದೆಯಾ ಎಂದು ನೋಡಿಕೊಳ್ಳಿ. ರೋಗಲಕ್ಷಣಗಳ ಕಡೆ ಗಮನ ಕೊಡಿ. ಆರೋಗ್ಯ ವಿಪರೀತ ಹದಗೆಡತ್ತಿದೆ ಅನಿಸಿದರೆ ಕೂಡಲೇ ಚಿಕಿತ್ಸೆ ಪಡೆದು ವಿಶ್ರಾಂತಿಗೆ ಶರಣಾಗಿ. ಮೊದಲ ಆದ್ಯತೆಯಾಗಿ ನೀವಿರುವ ಜಾಗಕ್ಕಿಂತ ಕೆಳ ಪ್ರದೇಶಕ್ಕೆ ಇಳಿಯಲು ಮುಂದಾಗಿ.

ಇಷ್ಟು ಮುನ್ನೆಚ್ಚರಿಕೆ ಮತ್ತು ತಯಾರಿ ಇದ್ದರೆ ನಿಮ್ಮ ಚಾರಣ ಸಾಹಸ ಆನಂದಮಯ ಮತ್ತು ಸುರಕ್ಷಿತವಾಗಿ ಇರಬಹುದು..

Bhagyalakshmi N

Bhagyalakshmi N

Travel blogger and adventurer passionate about exploring new cultures and sharing travel experiences.

ವ್ಹಾವ್..ವ್ಹಾವ್..ಗೋವಾ!

Read Previous

ವ್ಹಾವ್..ವ್ಹಾವ್..ಗೋವಾ!

ದೇಶ ಸುತ್ತಬೇಕಿಲ್ಲ, ಕರ್ನಾಟಕದಲ್ಲೇ ಇವೆ ಅನೇಕ ಡಾಲ್ಫಿನ್‌ ತಾಣಗಳು..

Read Next

ದೇಶ ಸುತ್ತಬೇಕಿಲ್ಲ, ಕರ್ನಾಟಕದಲ್ಲೇ ಇವೆ ಅನೇಕ ಡಾಲ್ಫಿನ್‌ ತಾಣಗಳು..