ಪ್ರಯಾಸವಲ್ಲದ ಪ್ರವಾಸ: ಪುಸ್ತಕದಲ್ಲೇ ಕೆನಡಾ ಪ್ರವಾಸ
ಪುಸ್ತಕದ ಪುಟಗಳನ್ನು ತಿರುವಿದಂತೆ ಕೆನಡಾದ ಶಿಸ್ತುಬದ್ಧ ಜೀವನ ಅನಾವರಣಗೊಳ್ಳುತ್ತದೆ. ಹಾರ್ನ್ ಶಬ್ದವಿಲ್ಲದ ರಸ್ತೆಗಳು, ಪಾದಚಾರಿಗಳೇ ರಸ್ತೆಯ 'ಬಾಸ್' ಎಂಬ ನಿಯಮ ಮತ್ತು ಪೊಲೀಸರೇ ಇಲ್ಲದಿದ್ದರೂ ತಂತ್ರಜ್ಞಾನದ ಮೂಲಕ ನಡೆಯುವ ಸಂಚಾರ ನಿಯಂತ್ರಣ, ಈ ವಿಷಯಗಳು ನಮಗೆ ಅಚ್ಚರಿ ಮೂಡಿಸುತ್ತವೆ. ವಿಶೇಷವಾಗಿ, ಮಿಸ್ಸಿಸ್ಸಾಗಾದ 'ಹ್ಯಾಝೆಲ್ ಮೆಕ್ ಕಾಲಿಯನ್ ಸೆಂಟ್ರಲ್ ಲೈಬ್ರರಿ'
- ವಿಲಿಯಂ ಮಡಿಕೇರಿ
ಮಡಿಕೇರಿಯ ಹಿರಿಯ ವೈದ್ಯರಾದ ಡಾ.ಸೂರ್ಯಕುಮಾರ್ ಅವರು ಕೇವಲ ರೋಗಿಗಳ ನಾಡಿಮಿಡಿತ ಅರಿತವರಷ್ಟೇ ಅಲ್ಲ. ಸಾಹಿತ್ಯದ ನಾಡಿಮಿಡಿತವನ್ನೂ ಅವರು ಬಲ್ಲರು. ಅವರ ಲೇಖನಿಯಿಂದ ಇತ್ತೀಚೆಗೆ ಮೂಡಿಬಂದಿರುವ ಕೃತಿ ʻಪ್ರಯಾಸವಲ್ಲದ ಪ್ರವಾಸʼ. ಇದು ಓದುಗರಿಗೆ ಮಡಿಕೇರಿಯಿಂದ ಕೆನಡಾದ ಹಿಮಪದರಗಳವರೆಗೆ ಕೈಹಿಡಿದು ಕರೆದೊಯ್ಯುವ ಒಂದು ವರ್ಚುವಲ್ ಪಯಣದ ಅನುಭವ ನೀಡುತ್ತದೆ.
ಸಾಮಾನ್ಯವಾಗಿ ಪ್ರವಾಸ ಕಥನಗಳೆಂದರೆ ಪ್ರೇಕ್ಷಣೀಯ ಸ್ಥಳಗಳ ಪಟ್ಟಿ ಎಂಬಂತಾಗಿರುತ್ತದೆ. ಆದರೆ, ಈ ಕೃತಿಯಲ್ಲಿ ಲೇಖಕರು ತಮ್ಮ ಮಗಳ ಮನೆಗೆ ನೀಡಿದ ಭೇಟಿಯನ್ನು ಎರಡು ವಿಭಿನ್ನ ಸಂಸ್ಕೃತಿಗಳ, ಭೌಗೋಳಿಕತೆಯ ಮತ್ತು ಜೀವನಶೈಲಿಗಳ ಮುಖಾಮುಖಿಯನ್ನು ಚಿತ್ರಿಸಿದ್ದಾರೆ.
ಇದನ್ನೂ ಓದಿ: ʻಅಮೇರಿಕಾದಲ್ಲಿ ಗೊರೂರುʼ ಅಮೆರಿಕ ಪ್ರವಾಸಿಗರಿಗೆ ಅತ್ಯಾಪ್ತವಾಗುವ ಪುಸ್ತಕ
ನೋಡಿ ಕಲಿಯಬೇಕು ನಮ್ಮವರು
ಪುಸ್ತಕದ ಪುಟಗಳನ್ನು ತಿರುವಿದಂತೆ ಕೆನಡಾದ ಶಿಸ್ತುಬದ್ಧ ಜೀವನ ಅನಾವರಣಗೊಳ್ಳುತ್ತದೆ. ಹಾರ್ನ್ ಶಬ್ದವಿಲ್ಲದ ರಸ್ತೆಗಳು, ಪಾದಚಾರಿಗಳೇ ರಸ್ತೆಯ 'ಬಾಸ್' ಎಂಬ ನಿಯಮ ಮತ್ತು ಪೊಲೀಸರೇ ಇಲ್ಲದಿದ್ದರೂ ತಂತ್ರಜ್ಞಾನದ ಮೂಲಕ ನಡೆಯುವ ಸಂಚಾರ ನಿಯಂತ್ರಣ, ಈ ವಿಷಯಗಳು ನಮಗೆ ಅಚ್ಚರಿ ಮೂಡಿಸುತ್ತವೆ. ವಿಶೇಷವಾಗಿ, ಮಿಸ್ಸಿಸ್ಸಾಗಾದ 'ಹ್ಯಾಝೆಲ್ ಮೆಕ್ ಕಾಲಿಯನ್ ಸೆಂಟ್ರಲ್ ಲೈಬ್ರರಿ' ಬಗ್ಗೆ ಲೇಖಕರು ಬರೆದಿರುವ ಭಾಗ ಓದುಗರ ಕಣ್ಣು ತೆರೆಸುವಂತಿದೆ. ಯಾವುದೇ ಕಾವಲುಗಾರರು ಇಲ್ಲದಿದ್ದರೂ ಸಾರ್ವಜನಿಕರ ಪ್ರಾಮಾಣಿಕತೆಯ ಮೇಲೆ ನಡೆಯುವ ಈ ವ್ಯವಸ್ಥೆ ನಮ್ಮಲ್ಲಿನ ವ್ಯವಸ್ಥೆಗೆ ಒಂದು ಪಾಠದಂತಿದೆ.

ಮಿನಿ ಭಾರತ ಮತ್ತು ಸಾಂಸ್ಕೃತಿಕ ಸಮ್ಮಿಲನ
ಪರದೇಶದಲ್ಲಿದ್ದರೂ ಭಾರತೀಯತೆಯನ್ನು ಹುಡುಕುವ ಲೇಖಕರ ದೃಷ್ಟಿ ಕುತೂಹಲಕಾರಿಯಾಗಿದೆ. ಕೆನಡಾದ ಸೂಪರ್ ಮಾರ್ಕೆಟ್‌ಗಳಲ್ಲಿ ಸಿಗುವ ಟಾಟಾ ಟೀ, ಎಂಟಿಆರ್ ಮಸಾಲೆಗಳು ಮತ್ತು ಅಲ್ಲಿನ 'ಬಾಲಿವುಡ್ ಫೆಸ್ಟಿವಲ್' ಸಂಭ್ರಮ ವಿಷಯಗಳನ್ನು ಅವರು ಗುರುತಿಸಿದ್ದಾರೆ. ಇದು ವಲಸಿಗರಿಗೆ ಆ ದೇಶ ಹೇಗೆ ʻಮನೆಯ ಹೊರಗಿನ ಮನೆʼಯಾಗಿದೆ ಎಂಬುದನ್ನು ಸುಂದರವಾಗಿ ಕಟ್ಟಿಕೊಟ್ಟಿದೆ.
ಪ್ರಕೃತಿ ಮತ್ತು ವನ್ಯಜೀವಿಗಳ ರೋಚಕತೆ
ನಯಾಗರಾ ಜಲಪಾತದ ಬೃಹತ್ ಘರ್ಜನೆ, ಆಫ್ರಿಕನ್ ಲಯನ್ ಸಫಾರಿಯಲ್ಲಿ ಮುಕ್ತವಾಗಿ ವಿಹರಿಸುವ ಬಿಳಿ ಸಿಂಹಗಳು ಮತ್ತು ಸಮುದ್ರದಲ್ಲಿ ತಿಮಿಂಗಿಲಗಳ ಆಟದ ವರ್ಣನೆಗಳು ನಮಗೆ ಡಿಸ್ಕವರಿ ಚಾನೆಲ್ ನೋಡಿದ ಅನುಭವ ನೀಡುತ್ತವೆ. ವಿಶೇಷವಾಗಿ, ಕೆನಡಾದ ಬೇಸಗೆಯಲ್ಲಿ ರಾತ್ರಿ 9 ಗಂಟೆಯಾದರೂ ಸೂರ್ಯ ಮುಳುಗದೆ ಹಗಲಿನಂತೆಯೇ ಭಾಸವಾಗುತ್ತದೆಯಂತೆ. ಹೀಗೆ ನೈಸರ್ಗಿಕ ವಿಸ್ಮಯವನ್ನು ಲೇಖಕರು ಕಾವ್ಯಾತ್ಮಕವಾಗಿ ಕಟ್ಟಿಕೊಟ್ಟಿದ್ದಾರೆ.
ಒಟ್ಟಾರೆ, ʻಪ್ರಯಾಸವಲ್ಲದ ಪ್ರವಾಸʼ ಕೇವಲ ಕೆನಡಾದ ಕೈಪಿಡಿಯಲ್ಲ; ಅದು ಹೊಸ ನಾಡಿನ ವ್ಯವಸ್ಥೆ, ಶಿಸ್ತು ಮತ್ತು ಮನುಷ್ಯ ಸಂಬಂಧಗಳನ್ನು ಅರಿಯುವ ಒಂದು ದೃಷ್ಟಿಕೋನ. ಹೊಸ ಜಾಗಗಳನ್ನು ಅನ್ವೇಷಿಸುವ ಹಂಬಲವಿರುವ ಪ್ರತಿಯೊಬ್ಬ ಕನ್ನಡಿಗನೂ ಓದಲೇಬೇಕಾದ ಸ್ಫೂರ್ತಿದಾಯಕ ಪುಸ್ತಕ ಎನ್ನಬಹುದು. ಇಂಥ ಅದ್ಭುತ ಅನುಭವವನ್ನು ನಮಗೆ ಉಣಬಡಿಸಿದ ಡಾ. ಸೂರ್ಯಕುಮಾರ್ ಅವರಿಗೆ ಅಭಿನಂದನೆಗಳು.
ಕೃತಿಯ ವಿಶೇಷತೆಗಳು
- ಸೂಕ್ಷ್ಮ ವೀಕ್ಷಣೆ: ಭಾರತ ಮತ್ತು ತಾವು ಪ್ರವಾಸಕ್ಕೆ ಹೋದ ತಾಣದ ನಡುವಿನ ವ್ಯಾತ್ಯಾಸ ಮತ್ತು ಸಾಮ್ಯತೆಗಳನ್ನು ವಿವರಿಸಲಾಗಿದೆ.
- ಆರ್ಥಿಕ ವಿಶ್ಲೇಷಣೆ: ಕೆನಡಾದ ಹಳ್ಳಿಗರ ಜೀವನ ಮತ್ತು ಆರ್ಥಿಕತೆಯನ್ನು ಅಂಕಿ-ಅಂಶಗಳ ಸಮೇತ ವಿವರಿಸಿದ್ದಾರೆ.
- ಸರಳ ಶೈಲಿ: ಲೇಖಕರು ಓದುಗರು ಸರಳವಾಗಿ ಅರ್ಥೈಸಿಕೊಳ್ಳುವ ಶೈಲಿಯಲ್ಲಿ ವಿಷಗಳನ್ನು ಕಟ್ಟಿಕೊಟ್ಟಿದ್ದಾರೆ. ಅವರ ಬರವಣಿಗೆ ಶೈಲಿಯೂ ಸರಳವಾಗಿದ್ದು, ಓದುಗರಿಗೆ ಗೊಂದಲಗಳನ್ನು ಸೃಷ್ಟಿಸುವುದಿಲ್ಲ.
ಪುಸ್ತಕ: ಪ್ರಯಾಸವಲ್ಲದ ಪ್ರವಾಸ
ಲೇಖಕರು: ಡಾ. ಕೆ.ಬಿ.ಸೂರ್ಯಕುಮಾರ್
ಪ್ರಕಾಶಕರು: ಸಾರಿಕಾ ಪ್ರಕಾಶನ
ಬೆಲೆ: ರು. 216
ಪುಟಗಳು: 180